ಆಸರೆ ಮನೆ - 4

 ಆಸರೆ ಮನೆ - 4

ಲೇಖನ -  ದಿ||  ಶ್ರೀಮತಿ “ಸುಮಿತ್ರಾ ರಾಮಣ್ಣ 


ಇಲ್ಲಿಯವರೆಗೆ ...... 

ಭಾಗ  -  1

ಭಾಗ  -  2

ಭಾಗ  -  3


ಆಸರೆ ಮನೆ - 4 .....

...........ಬೆಳಗಾಯಿತು. ಸೊಸೆ ಎಂದಿನಂತೆ ಇರದೆ ಬಹಳ ಲವಲವಿಕೆಯಿಂದ ಎದ್ದು ಬಾಗಿಲು ಸಾರಿಸಿ ರಂಗವಲ್ಲಿ ಹಾಕಿ ನೀರೊಲೆ ಉರಿ ಮಾಡಿ ಘಮಘಮ ಎನ್ನುವಂತೆ ಅಡುಗೆ ಮನೆಯಲ್ಲಿ ಕಾಫಿ ಡಿಕಾಕ್ಷನ್ ಇಳಿಸಿದ್ದಳು.

ವೆಂಕಮ್ಮನವರಿಗಿದ್ದ ಒಂದೇ ದೌರ್ಬಲ್ಯವೆಂದರೆ ಸ್ನಾನಕ್ಕೆ ಮೊದಲು ಒಂದು ಲೋಟ ಗಟ್ಟಿ ಬಿಸಿ ಕಾಫಿ ಕುಡಿಯುವುದು. ಇದು ತೌರಿನಿಂದ ಬಂದ ಅಭ್ಯಾಸ. ವೆಂಕಮ್ಮನ ಅತ್ತೆ ಸಹ ಸೊಸೆಗೆ ಕಾಫಿ ಕೊಟ್ಟೇ ಸ್ನಾನಕ್ಕೆ ಕಳುಹಿಸುತ್ತಿದ್ದರು. ಆದರೆ ತಮಗೆ ಸೊಸೆ ಬಂದ ಮೇಲೆ ಕಾಫಿ ವೇಳೆ ದಿನವೂ ಬದಲಾಗುತ್ತಿತ್ತು. ಆದ್ರೆ ಈ ದಿನ ಬೆಳಿಗ್ಗೆ ಕಣ್ಣು ಬಿಡುವ ವೇಳೆಗಾಗಲೇ ಕಾಫಿ ಪರಿಮಳ ಮನೆಯೆಲ್ಲ ವ್ಯಾಪಿಸಿತ್ತು.

ವೆಂಕಮ್ಮ ಬಚ್ಚಲು ಮನೆಯಲ್ಲಿ ಮುಖ ತೊಳೆದು ಒಲೆಯ ಸೌದೆಯನ್ನು ಸರಿಮಾಡಿ ಹೊರ ಬಂದು ಹಜಾರದ ಕುರ್ಚಿಯ ಮೇಲೆ ಕುಳಿತು ಎದುರಿಗೆ ಕಾಣುತ್ತಿದ್ದ ಗಂಡನ ಪಟಕ್ಕೆ ಕೈಮುಗಿದರು. ಅನುಸೂಯ ನಗು ಮುಖದಿಂದ ಬಿಸಿಬಿಸಿ ಕಾಫಿ ಲೋಟ ತಂದು ಅತ್ತೆಯ ಕೈಗಿಟ್ಟಳು. ''ಅನು ಏನಮ್ಮ ಇದು ಇಷ್ಟು ಬೇಗ ಕಾಫಿ ತಯಾರಾಗಿದೆ. ಎಲ್ಲಿಗಾದರು ಹೊರಟಿದ್ದೀಯಾ?'' ಎಂದರು.   

''ಇಲ್ಲ ಅತ್ತೆ ಬೇಗ ಎಚ್ಚರವಾಯಿತು. ಅದಕ್ಕೆ ಕಾಫಿ ಮಾಡಿದೆ. ನಿಮಗೆ ಇವತ್ತಾದ್ರು ಬೇಗ ಕಾಫಿ ಕೊಡೋಣ ಅಂತ''.

ಗಿರೀಶ ರೂಮಿನಿಂದ ಹೊರ ಬಂದವನು ಹೆಂಡತಿಯ ನಟನೆಯನ್ನು ಆಶ್ಚರ್ಯದಿಂದ ನೋಡಿದ.

ಸಹಿಸು ಕೆಲ ನೋವುಗಳ, ವಹಿಸು ಕೆಲ ಭಾರಗಳ ಮನವೇ ಎಂದುಕೊಂಡ. ಅನುಸೂಯ ಗಂಡನಿಗೂ ಕಾಫಿ ತಂದಿತ್ತು ಮಾತಾಡಲು ಕಣ್ಸನ್ನೆ ಮಾಡಿದಳು. ಗಿರೀಶ ವಿಧಿಯಿಲ್ಲದೆ ''ಅಮ್ಮ ನಿನ್ನ ಸೊಸೆ ಎಲ್ಲೋ ಸೈಟ್ ನೋಡಿದ್ದಳಂತೆ. ಅದಕ್ಕೆ ೧೦ಲಕ್ಷ ರೂ.ನಂತೆ ನನ್ನ ಹತ್ತಿರ ಅಷ್ಟು ಹಣ ಎಲ್ಲಿದೆಯಮ್ಮ ನಿನಗೆ ಗೊತ್ತಲ್ಲ'' ಎಂದ.

ವೆಂಕಮ್ಮ ಏನೂ ಅರಿಯದವರಂತೆ

''ಈ ಮನೆ ಏನಾಗಿದ್ಯೋ ಮಗು. ನಿನ್ನ ತಾತನ ತಂದೆ ಕಟ್ಟಿಸಿದ್ದು. ಪೂರ್ವಜರ ಆಸ್ತಿ,ಇನ್ಯಾಕೋ ಬೇರೆ Site ಮನೆ'' ಎಂದರು. ಅನುಸೂಯ ಮಧ್ಯ ಬಾಯಿ ಹಾಕಿ ಹಾಗಲ್ಲ ಅತ್ತೆ ಇದು ತುಂಬಾ ಹಳೆಯ ಮನೆ. ಹೊಸ ಎಕ್ಸ್ ಟೆನ್ಷನ್ ನಲ್ಲಿ ಮನೆಕಟ್ಟಿಕೊಂಡರೆ ನಮಗೂ ಒಂದು ಅಂತಸ್ತು ಬರುತ್ತೆ. ನಮಗೆ ಬೇಕಾದ ಹಾಗೆ ಕಟ್ಟಿಸಿಕೊಳ್ಳಬಹುದು ಅತ್ತೆ''

''ಆದರೆ ಗಿರೀ ಹತ್ತಿರ ದುಡ್ಡಿಲ್ಲವೆಂತಲ್ಲ ಅನು''

''ಅದಲ್ಲ ಅತ್ತೆ ಅದೂ ...ಅದೂ....''

''ಏನಮ್ಮ ಸಂಕೋಚ ಯಾಕೆ ಹೇಳು. ಏನಿದೆ ನಿನ್ನ ಮನಸ್ಸಲ್ಲಿ ಅಂತ''

''ನೀವು ಏನೂ ತಿಳ್ಕೊಳ್ಳೋದಿಲ್ಲ ಅಂದ್ರೆ ಒಂದ್ಮಾತು ಅತ್ತೆ''

''ಹೇಳು ಅನು ನಾನು ಯಾಕೆ ತಿಳ್ಕೊಳ್ಲಿ''

''ಅದು ನಿಮ್ಮ ಹೆಸ್ರಲ್ಲಿ ಗದ್ದೆ ಸ್ವಲ್ಪ ತೋಟ ಇದ್ಯಲ್ಲ ಅದನ್ನ ಮಾರಿಬಿಟ್ಟು ಸೈಟ್ ತೆಗೊಂಡ್ರೆ ಹೇಗೆ ಅಂತ. ಅಲ್ವೇನ್ರಿ'' ಎಂದು ಗಂಡನ ಮುಖ ನೋಡಿದಳು. ಗಿರಿ ಏನೂ ಮಾತನಾಡಲಾರದೆ ತಾಯಿ-ಹೆಂಡತಿಯ ಮುಖ ಬಿಟ್ಟು ಬಿಟ್ಟು ನೋಡಿದ. ವೆಂಕಮ್ಮನಿಗೆ ಮಗನ ಸ್ಥಿತಿ ನೋಡಿ ಕರುಣೆ ಉಕ್ಕಿ ಬಂತು. ಹೆತ್ತ ಕರುಳು ಕರಗಿ ''ಆಗ್ಲಿ ಕಣೋ ಗಿರಿ ಆ ಗದ್ದೆ ತೋಟ ಇದ್ರೂ ಮುಂದೆ ನಿಂಗೆ ಆಗ್ತಿತ್ತು ಬಿಡು. ಮಾರಿಬಿಟ್ಟು ಸೈಟೋ ಗೀಟೋ ಏನೋ   ಒಂದು ಮಾಡ್ಕೊಳ್ಳಿ ನಾನು ರುಜು ಹಾಕುತ್ತೇನೆ'' ಎಂದರು ನಿರ್ವಿಕಾರವಾಗಿ. ಅನುಸೂಯ ಮೊರದ ಅಗಲ ಹಿಗ್ಗಿನ ಮುಖ ಮಾಡಿಕೊಂಡು ''ಅತ್ತೇ ಸೈಟ್ ನ ನಿಮ್ಮ ಹೆಸರಿಗೆ ಮಾಡ್ಕೊಳ್ಳಿ'' ಎಂದಳು. ವೆಂಕಮ್ಮ ನಗುತ್ತ ''ಹುಚ್ಚಿ ಹೆಸರು ಗಿಸರು ನಂಗೇನು ಬೇಡ, ನಿಂಗೆ ಗಿರೀಶಂಗಲ್ಲದೆ ಇನ್ಯಾರಿಗೆ ಇವೆಲ್ಲ, ಸುಮ್ನಿರು ಸಾಕು ಕೇಳ್ದೋರು ನಗ್ತಾರೆ ಅಷ್ಟೆ'' ಎಂದು ಹೇಳಿ ಸ್ನಾನಕ್ಕೆ ಹೊರಟರು.

ಅನುಸೂಯಳಿಗೆ ಸಂತೋಷವೇ ಸಂತೋಷ. ಗಿರೀಶ ಮಾತ್ರ ಪೆಚ್ಚಾಗಿದ್ದ. ವೆಂಕಮ್ಮನಿಗೆ ಆವತ್ತು ರಾಜೋಪಚಾರವೇ.

ಮುಂದೆ ಒಂದೇ ವಾರದಲ್ಲಿ ಜಮೀನು ಮಾಡುತ್ತಿದ್ದ ದ್ಯಾವಣ್ಣನೇ ಜಮೀನು ರಿಜಿಸ್ಟ್ರಿ ಮಾಡಿಸಿಕೊಂಡು ೧೦ ಲಕ್ಷ ಎಣಿಸಿ ಬಿಟ್ಟ. ಕೋಟಿ ರೂ. ಬೆಲೆ ಬಾಳುವ ಆಸ್ತಿ ಪಡೆದು ತಾಲೂಕು ಕಚೇರಿಯಲ್ಲಿ ದ್ಯಾವಣ್ಣ ವೆಂಕಮ್ಮನಿಗೆ ನಮಸ್ಕರಿಸಿ,''ತಾಯಿ ನೀನು ತುಂಬಾ ದೊಡ್ಡವಳಮ್ಮ ನಿನ್ನ ಹೆಸರು ಹೇಳಿ ನನ್ನ ಮಕ್ಕಳು-ಮರಿ ಬದುಕಿಕೊಳ್ತವೆ'' ಎಂದ.

ಮುಂದೆ ಒಂದು ತಿಂಗಳೊಳಗೆ ಅನುಸೂಯಳ ಹೆಸರಿನಲ್ಲಿ ಸೈಟ್ ರಿಜಿಸ್ಟರ್ ಆಗಿ ದಾಖಲೆ ಪತ್ರ ಕೈಗೆ ಬಂದ  ಮೇಲೆ ಯಥಾಪ್ರಕಾರ ವೆಂಕಮ್ಮನ ದಿನಚರಿ ಆಯಿತು.

ಅನುಸೂಯಳ ಒತ್ತಾಯದಿಂದ ಗಿರೀಶ ಆಫೀಸಿನಲ್ಲಿ ಸಾಲ ತೆಗೆದು ಮನೆ ಕಟ್ಟಲು ಪ್ರಾರಂಭಿಸಿದ. ಅದೊಂದು ವೆಂಕಮ್ಮನ ಗಮನಕ್ಕೆ ಬರಲೇ ಇಲ್ಲ. ಮನೆ ಕೊನೆಯ ಹಂತ ತಲುಪಿರುವಾಗ ಹಣದ ಮುಗ್ಗಟ್ಟು ಪ್ರಾರಂಭವಾಯಿತು. ಗಂಡ- ಹೆಂಡತಿಯರಿಬ್ಬರಿಗೂ ದಿಕ್ಕೇ ತೋಚಲಿಲ್ಲ. ಅಷ್ಟರಲ್ಲಿ ವೆಂಕಮ್ಮನ ಬಹುದಿನದ ಬಯಕೆಯಂತೆ ಅನುಸೂಯ ಚೊಚ್ಚಲ ಗರ್ಭಿಣಿಯಾದಳು. ವೆಂಕಮ್ಮನ ಸಡಗರಕ್ಕೆ ಪಾರವೇ ಇಲ್ಲ. ತಾವೇ ಅಡುಗೆ ಮನೆ ಉಸ್ತುವಾರಿ ವಹಿಸಿಕೊಂಡು ದಿನಕ್ಕೊಂದು ಬಗೆ ಅಡುಗೆ ತಿಂಡಿ ಮಾಡಿ ಸೊಸೆಯ ಬಯಕೆ ತೀರಿಸಿದರು. ಅದ್ದೂರಿಯಾಗಿ ಸೀಮಂತ ಮಾಡಿದರು. ಸೀಮಂತ ದಿನ ತಮ್ಮ ಹತ್ತಿರ ಇದ್ದ ತಮ್ಮ ತೌರಿನ ಆಭರಣಗಳನ್ನೆಲ್ಲ ಟ್ರಂಕಿನಿಂದ ತೆಗೆದು ಸೊಸೆಗೆ ತೊಡಿಸಿದರು. ಒಂದೇ ಎರಡೇ ಡಾಬು, ನಾಗ ಮುರಿಗೆ, ವಂಕಿ, ಜಡೆಬಿಲ್ಲೆ, ನಾಗರು ಅಡ್ಡಿಕೆ, ಚಳತುಂಬು, ತೋಳಬಂದಿ, ಮುಕುರ ಮೂಗುತಿ, ಪವನಿನ ಸರ, ಚಂದ್ರಹಾರ, ಜೋಮಾಲೆಸರ, ಕೆನ್ನೆಸರಪಣಿ, ಕಡಗ, ಹರಳು ಮುತ್ತಿನ ಬಳೆ, ಮುತ್ತಿನ ಕಂಠಿ ಹಾರ, ಕಾಸಿನ ಸರ, ಕಾಲಂದುಗೆ, ಗೆಜ್ಜೆ, ಚಂದ್ರಸೂರ್ಯ, ಬೈತಲೆಬೊಟ್ಟು ಅತ್ತೆಯ ಆಭರಣಗಳನ್ನೆಲ್ಲ ನೋಡಿ ಅನುಸೂಯ ದಿಘ್ಮೂಢಳಾದಳು. ಸೊಸೆಯ ಹಿಗ್ಗಿನ ಮುಖ ನೋಡಿ ವೆಂಕಮ್ಮನಿಗೂ ಹಿಗ್ಗು. ಗಿರೀಶ ಅಪೂರ್ಣವಾಗಿದ್ದ ಮನೆಯ ಚಿಂತೆಯಿಂದ ಪೆಚ್ಚಾಗಿದ್ದ.

ಆದರೇನು ಅನುಸೂಯಳ ದುರಾಸೆಗೆ ಮಿತಿಯಿಲ್ಲ. ಸೀಮಂತ ಕಾರ್ಯಕ್ರಮ ಮುಗಿದ ನಂತರ ಒಡವೆಗಳೆಲ್ಲ ಅನುಸೂಯಳ ಪೆಟ್ಟಿಗೆಗೆ ಸೇರಿತು. ವೆಂಕಮ್ಮ ಮಾತ್ರ ''ಏನೋ ಬಸುರಿ ಹುಡುಗಿ ಆಸೆ ಪಡುತ್ತಾಳೆ. ಇಟ್ಟುಕೊಳ್ಳಲಿ ನಾನೇನು ಅದನ್ನು ಹಾಕಿಕೊಳ್ಳಬೇಕಾಗಿತ್ತೆ'' ಎಂದು ಸಮಾಧಾನ ಪಟ್ಟುಕೊಂಡರು. ಅದರಲ್ಲಿ ಅರ್ಧ ಪಾಲು ಒಡವೆ ಸದ್ದಿಲ್ಲದೆ ಬ್ಯಾಂಕ್ ಪಾಲಾಗಿ ಬಂದ  ಹಣದಿಂದ ಮನೆ ಪೂರ್ತಿಯಾಗಿ ಗೃಹಪ್ರವೇಶಕ್ಕೆ ಸಿದ್ಧವಾಗುವ ವೇಳೆಗೆ ಅನುಸೂಯ ಗಂಡು ಮಗುವಿಗೆ ಜನ್ಮವಿತ್ತು ತನ್ನ ಹಿರಿಮೆಗೆ ಇನ್ನೊಂದು ಗರಿಯನ್ನು ಸಿಕ್ಕಿಸಿಕೊಂಡಳು.

ವೆಂಕಮ್ಮ ಮೊಮ್ಮಗನ ಲಾಲನೆ, ಪಾಲನೆಯಿಂದ ತೃಪ್ತರಾದರು. ಅನುಸೂಯನ ಬಾಣಂತನ ಮುಗಿದು ಮಗು ಮಗುಚಿಕೊಂಡು ಮುಂದೆ ಹೋಗುವ ಹಾಗಾದ ಮೇಲೆ ಅನುಸೂಯ ಎದ್ದು ಓಡಾಡುತ್ತ ಗಂಡನಿಗೆ ಗೃಹಪ್ರವೇಶದ ಸಿದ್ಧತೆ ಮಾಡಿಕೊಳ್ಳಲು ವರಾತ ಹಚ್ಚಿದಳು. ಅನುಸೂಯಳ ಮನಸ್ಸಿನಲ್ಲಿ ಬೇರೊಂದು ಪ್ಲಾನ್ ಸಿದ್ಧವಾಗುತ್ತಿತ್ತು. ವೆಂಕಮ್ಮನಿಗೆ ಮಗನ ಮನೆಯ ಬಗ್ಗೆ ಏನೇನು ಗೊತ್ತಿರಲಿಲ್ಲ. ತಾನಿದ್ದ ಪೂರ್ವದ ಮನೆ ಮೊದಲೇ ಮಾರಾಟವಾಗಿರುವ ಬಗ್ಗೆಯೂ ಗೊತ್ತಿಲ್ಲ. ಅದು ಗಿರೀಶನ ಹೆಸರಲ್ಲಿ ಇತ್ತು.

ಗಿರೀಶ ತಾಯಿಗೆ ಹೇಳಬೇಕೆಂದಾಗ ಕೊನೆಯಲ್ಲಿ ಹೇಳಿ ವೆಂಕಮ್ಮನಿಗೆ ಆಶ್ಚರ್ಯ ಉಂಟು ಮಾಡಬೇಕೆಂದು ಹೇಳಿ ಅನುಸೂಯ ಗಿರೀಶನ ಬಾಯಿ ಮುಚ್ಚಿಸಿದ್ದಳು.

ತಾಯಿಯ ಹರಕೆ ತನ್ನ ಮನೆಗೆ ಬೇಕೆಂಬುದೇ ಗಿರೀಶನ ಇಚ್ಛೆ ಗೃಹಪ್ರವೇಶದೊಡನೆ ಪುಟ್ಟನ ನಾಮಕರಣ ಎಂದಾಗಿತ್ತು.

ಹರಸುವುದೇನ ನೀಂ? ವರವದೇನೆಂದವೆಂ।

ಸರಿಯೆಂದು ತೋರುವುದು ನಾಳೆ ಸರಿಯಿಹುದೇ?

ನಿರುಕಿಸುವುದೆಂತು ಚಿರಕಾಲ ಡೊಳ್ಳಿತಾನಿಂದು| ಅರಿವ ದೈವವೇ ಹೊರಗೆ-ಮಂಕುತಿಮ್ಮ||  

ಲಾರಿಗೆ ಹೇಳಿ ಸಾಮಾನು ಪ್ಯಾಕ್ ಮಾಡಲು ಏರ್ಪಾಡು ಮಾಡಿದ್ದ ಅನುಸೂಯ ಒಂದು ದಿನ ಗಂಡನಿಗೆ ಪುಟ್ಟನನ್ನು ನೋಡಿಕೊಳ್ಳಲು ಹೇಳಿ ''ಅತ್ತೆಗೆ ಗೃಹಪ್ರವೇಶಕ್ಕೆ ಸೀರೆ ತರುತ್ತೇನೆ, ಅತ್ತೆಯನ್ನು ಕರೆದುಕೊಂಡು ಹೋಗುತ್ತೇನೆ . ಮಗು ಮೇಲೆ ನಿಗಾ ಇಟ್ಟುಕೊಂಡು ಲಾರಿಗೆ ಸಾಮಾನು ಹಾಕಿಸಿ, ಬೇಗ ಬರುತ್ತೇನೆ'' ಎಂದಳು.

''ಅತ್ತೆ ನನ್ನ ಜೊತೆ ಬನ್ನಿ, ಸ್ವಲ್ಪ ಹೊರಗೆ ಹೋಗಿ ಬರೋಣ'' ಎಂದು ಹೇಳಿ ವೆಂಕಮ್ಮನಿಗೆ ಗೊತ್ತಾಗದಂತೆ  ಅವರ ಎರಡು ಸೀರೆಯನ್ನು ಚೀಲಕ್ಕೆ ಹಾಕಿಕೊಂಡು ಹೊರಟಳು. ಅತ್ತೆಯನ್ನು ಊರಿನಿಂದ ದೂರ ಇರುವ ಆಸರೆಯ ಮನೆ ಬಳಿ ಆಟೋದಲ್ಲಿ ಕರೆದು ತಂದು ಬಿಟ್ಟು ಜಗುಲಿಯ ಮೇಲೆ ಕೂರಿಸಿ,''ಅತ್ತೆ ಇಲ್ಲೇ ಕೂತಿರಿ ಈಗ ಬರುತ್ತೇನೆ'' ಎಂದು ಹೇಳಿ ಹೋದವಳು ಎರಡು ಗಂಟೆ ಕಾಲವಾದರು ಬರಲಿಲ್ಲ. ವೆಂಕಮ್ಮನಿಗೆ ಗಾಬರಿಯಾಯ್ತು. ಅಷ್ಟರಲ್ಲಿ ಹೊರಬಂದ ಕಲ್ಯಾಣಿ ವೆಂಕಮ್ಮನನ್ನು ಪಕ್ಕದಲ್ಲಿ ಅವರ ಹತ್ತಿರ ಇದ್ದ ಚೀಲವನ್ನು ಕಂಡು ''ಯಾರಮ್ಮ ನೀವು'' ಎಂದಳು.

ವೆಂಕಮ್ಮ ಕಕ್ಕಾಬಿಕ್ಕಿಯಾಗಿ ಸೊಸೆ ತನ್ನನ್ನು ಇಲ್ಲಿ ಕೂರಿಸಿ ಹೋದ ವಿಷಯವನ್ನು ಗಾಬರಿಯಿಂದ ಹೇಳಿದರು. ಆಸರೆಯ ಮನೆಯ ಯಜಮಾನಿಗೆ ಸ್ವಲ್ಪ ಸ್ವಲ್ಪ ವಿಷಯ ಅರಿವಾಯಿತು. ವೆಂಕಮ್ಮನಿಗಂತೂ ಪಾಪ ಮಗ ಸೊಸೆ ಮನೆಕಟ್ಟಿಸಿರುವ ವಿಷಯ ಗೊತ್ತೇ ಇಲ್ಲ. ಜೊತೆಗೆ ಗಿರೀಶ ಯಾವ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬುದು ಗೊತ್ತಿಲ್ಲ.

ಒಂದು ವಾರ ಕಳೆಯುವಷ್ಟರಲ್ಲಿ ವೆಂಕಮ್ಮನ ಪೂರ್ಣ ಕಥೆ ಕಲ್ಯಾಣಿಗೆ ಗೊತ್ತಾಯಿತು. ಆಸರೆಯ ಮನೆಗೊಬ್ಬ ಪ್ರಥಮ ಸದಸ್ಯೆ ಖಾಯಂ ಆಗಿದ್ದು ಹೀಗೆ.

ಅನುಸೂಯ ಮನೆಗೆ ಬಂದು ಸೇರಿದಾಗ ಸಂಜೆ ಆರು ಗಂಟೆ. ಪುಟ್ಟ ತೊಟ್ಟಿಲಿನಲ್ಲಿ ಹಾಯಾಗಿ ಮಲಗಿದ್ದ. ಸಾಮಾನುಗಳೆಲ್ಲ ಪ್ಯಾಕ್ ಆಗಿ ಲಾರಿಯೇರಿತ್ತು.

ಗಿರೀಶ ಗಾಬರಿಯಾಗಿ ''ಅನು ಅಮ್ಮ ಎಲ್ಲೇ?'' ಎಂದ. ''

''ನೋಡ್ರಿ ಅಮ್ಮನ ಸ್ನೇಹಿತೆ ಯಾರೋ ಬಟ್ಟೆಯ ಅಂಗಡಿಯಲ್ಲಿ ಸಿಕ್ಕಿದ್ದರು. ಅವರೆಲ್ಲ ನಾಳೆ ಕಾಶೀಯಾತ್ರೆಗೆ ಹೊರಟ್ಟಿದ್ದಾರಂತೆ, ಒಂದೇ ಸೀಟು ಖಾಲಿ ಇದೆ ಬನ್ನಿ ವೆಂಕಮ್ಮ ಎಂದರು. ನಾನು ಎಷ್ಟು ಬೇಡ ಎಂದರು ಕೇಳದೆ ಅಮ್ಮ ಹೊರಟೇಬಿಟ್ಟರು.''. ಎಂದಳು. ''ಅನು ಸುಳ್ಳು ಹೇಳ್ಬೇಡ, ಅಮ್ಮನ ಕೈಲಿ ದುಡ್ಡೇಲ್ಲಿತ್ತೇ?'' ಎಂದು ಇಲ್ಲದ ಗಟ್ಟಿತನದಲ್ಲಿ ಕೇಳಿದ.

''ನಾನು ಸೀರೆ ತೆಗೆಯಲು ದುಡ್ಡು ತೆಗೆದುಕೊಂಡು ಹೋಗಿದ್ದೆನಲ್ಲ ಅದನ್ನು ಕೊಟ್ಟೆ. ಜೊತೆಗೆ ಶೆಟ್ಟರ ಅಂಗಡಿಯಲ್ಲಿ ನಾಲ್ಕು ನೂಲಿನ ಸೀರೆಯನ್ನು ತೆಗೆದುಕೊಟ್ಟೇರಿ. ಅವರ ಸ್ನೇಹಿತೆ ನನ್ನದೇ ಎರಡು ರವಿಕೆ ಕೊಡುತ್ತೇನೆ ಬನ್ನಿ'' ಎಂದು ಕರೆದುಕೊಂಡು ಹೋದರು. ಬರೀ  ಎರಡು ತಿಂಗಳ ಪ್ರವಾಸ ಮಾತ್ರ ಅಂತೇರಿ'' ಎಂದು ಬಹಳ ನಯವಾಗಿ ಹೇಳಿದಳು. ಗಿರೀಶನಿಗೆ ಏನೋ ಅನುಮಾನ ಅಮ್ಮನಿಗೆ ವಿಳಾಸ ಇಲ್ಲವಲ್ಲ ಹೇಗೆ ಬರುತ್ತಾಳೆ?'' ಎಂದ. ''ನಾನೇ ಹೊಸ ಮನೆ ವಿಳಾಸ ಬರೆದು ಕೊಟ್ಟೇರಿ'' ಎಂದು ಪ್ರಾಮಾಣಿಕತೆ ಮಾತಿನಲ್ಲಿ ಸುರಿಸುತ್ತ ಹೇಳಿದಳು.

ಗಿರೀಶ ನಿಜವಿರಬಹುದೆಂದು ತಿಳಿದರೂ ಅವನಿಗೇನೋ ಅನುಮಾನ. ಆದರೆ ಆಸರೆಯ ಮನೆಯ ಸುಳಿವು ಗಿರೀಶನಿಗೆ ತಿಳಿಯುವುದಿಲ್ಲ ಎನ್ನುವ ಧೈರ್ಯ ಅನುಸೂಯನಿಗೆ.

 ಹೀಗೆ ಸ್ವಂತ ಸೊಸೆಯಿಂದಲೇ ಮೋಸ ಹೋಗಿ ನಿರಾಧಾರ ಪರಂಜ್ಯೋತಿಯಾಗಿ ಎಲ್ಲ ಇದ್ದ ವೆಂಕಮ್ಮ ಏನೂ ಇಲ್ಲದಂತೆ ಕಲ್ಯಾಣಿಯ ಆಸರೆಗೆ ಬಂದು ಸೇರಿದರು. ಆದರೂ ಅವರ ಮನಸ್ಸಿನಲ್ಲಿ ಇದ್ದದ್ದು ಒಂದೇ ಕೊರಗು. ಪುಟ್ಟನಿಗೆ ಅಂತ ತಮ್ಮ ಟ್ರಂಕಿನಲ್ಲಿ ಹಳೆಯ ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಚಿನ್ನದ ಸರ, ಉಡಿದಾರ, ಉಂಗುರ, ಕಾಲ್ಗೆಜ್ಜೆ, ಚೈನು, ಕಡಗಗಳನ್ನು ತಾವು ಪುಟ್ಟನಿಗೆ ತಮ್ಮ ಕೈಯಾರೆ ಕೊಡಲಿಲ್ಲವೆಂಬ ಚಿಂತೆ ಅವರನ್ನು ಸದಾ ಕಾಡುತ್ತಿತ್ತು.

ಕಲ್ಯಾಣಿ, ನಿರಂಜನ ಅವರನ್ನು ಎಡಬಿಡದೆ ಸಂತೈಸಿದ್ದೊಂದೇ ಅಲ್ಲ ಅಡುಗೆ ಮನೆ ಉಸ್ತುವಾರಿ ವೆಂಕಮ್ಮನಿಗೆ ವಹಿಸಿ ಅವರಿಗೆ ಯೋಚನೆ ಮಾಡಲು ಅವಕಾಶ ಇಲ್ಲದಂತೆ ಮಾಡಿದರು.

*********

ಮೂರ್ತಿ ದಂಪತಿಗಳು

ಆಸರೆಯ ಮನೆಗೆ ಬರುವವರೆಲ್ಲ ನೊಂದು ಬೆಂದವರು ಮಾತ್ರವಲ್ಲ. ಜೀವನದಲ್ಲಿ ಎಲ್ಲ ಸುಖ ಸಂತೋಷಗಳನ್ನು ಅನುಭವಿಸಿ ಉಲ್ಲಸಿತರಾಗಿ ಆನಂದಾನುಭವಿಗಳಾಗಿ ತಮ್ಮ ಆನಂದವನ್ನು ಬೇರೆಯವರೊಡನೆ ಹಂಚಿಕೊಂಡು ಅನುಭವಿಸಲು ಬಂದವರು ವಿಜಯಮ್ಮ ನಾರಾಯಣ ಮೂರ್ತಿ ದಂಪತಿಗಳು.

ಸಿಂಧ್ರಿಯ ದೊಡ್ಡ ಕಾರ್ಖಾನೆಯಲ್ಲಿ ಎಂಜನಿಯರಾಗಿ ಸೇವೆ ಸಲ್ಲಿಸಿ ಜೀವನದಲ್ಲಿ ಸಾಕಷ್ಟು ಸಿಹಿಕಹಿ ಉಂಡವರು ನಾರಾಯಣ ಮೂರ್ತಿಗಳು. ಅವರಿಗೆ ತಕ್ಕ ಮಡದಿ ವಿಜಯಮ್ಮ. ಮಕ್ಕಳಿಲ್ಲದ ಚಿಂತೆ ದಂಪತಿಗಳಿಬ್ಬರಿಗೂ ಇದ್ದರೂ ಅದನ್ನೇ ದೊಡ್ಡ ಸಮಸ್ಯೆಯಾಗಿ ಮಾಡಿಕೊಂಡಿರಲಿಲ್ಲ. ಇರುವವರೆಗೂ ತಾವು ಸುಖವಾಗಿ ಇರಬೇಕು. ಅದರಂತೆ ಸಾತ್ವಿಕವಾಗಿ ದೇವರು ಅಧ್ಯಾತ್ಮ ಹಿರಿಯರು ಗುರುಗಳು ಎನ್ನುವ ಭಕ್ತಿಭಾವ ತುಂಬಿ ನಗುನಗುತ್ತ ಬಾಳುವ ಸದ್ಗುಣಿಗಳು. ಸ್ವಂತ ಊರಿನಲ್ಲಿ ಪೂರ್ವದಿಂದ ಬಂದಿದ್ದ ಒಂದು ಮನೆ ಅವರಿಗಿತ್ತು. ಮೂರ್ತಿಗಳಿಗೂ ನಾಲ್ಕು ಜನ ತಮ್ಮಂದಿರು. ವಿಜಯನಿಗೂ ಒಬ್ಬ ಅಣ್ಣ ಮೂರು ಜನ ಅಕ್ಕ ತಂಗಿಯರಿದ್ದರು. ಎಲ್ಲರೊಡನೆ ಒಂದೇ ರೀತಿಯ ಸೌಹಾರ್ದ ಭಾಂಧವ್ಯ ಬೆಳೆಸಿಕೊಂಡಿದ್ದರು. ಉಳಿಸಿಕೊಂಡಿದ್ದರು. ದಂಪತಿಗಳಲ್ಲಿ ಇದ್ದ ಅನ್ಯೋನ್ಯತೆಯನ್ನು ಕಂಡವರು ಸಂತೋಷಪಡುವಂತಿತ್ತು.

''ವಿಜೂ ಇನ್ನೇನು ನನಗೆ ರಿಟೈರ್ಡ್ ಆಗುವ ಸಮಯ ಹತ್ತಿರ ಬರುತ್ತಿದೆ. ಮುಂದೇನು ಮಾಡೋಣ''

ವಿಜಯ ಯಾವಾಗಲೂ ಗಂಡನನ್ನು ಮೂರ್ತಿ ಎಂದೇ ಕರೆದು ಅಭ್ಯಾಸ.

''ಅದಕ್ಕೇನು ಚಿಂತೆ ಮೂರ್ತಿ, ನಮ್ಮೂರಿಗೆ ಹೋಗುವುದು. ಅಲ್ಲಿ ಇರಕ್ಕೆ ಮನೆಯಿದೆ. ನಮ್ಮವರೆಲ್ಲ ಹತ್ತಿರದಲ್ಲೇ ಇದ್ದಾರೆ. ಹಾಯಾಗಿ ಎಲ್ಲರ ಮನೆಗೂ ಓಡಾಡಿಕೊಂಡು ನೆಮ್ಮದಿಯಾಗಿರುವುದು''.

 ''ಹಾಗಂತಿಯ ವಿಜೂ, ಹಾಗಾದರೆ ಊರಿನ ಮನೆಯನ್ನು ಕೊಂಚ ಈಗಿನ ಕಾಲಕ್ಕೆ ತಕ್ಕ ಹಾಗೆ ನಮಗೆ ಬೇಕಾದಂತೆ ರಿಪೇರಿ, ಬದಲಾವಣೆ ಮಾಡಿಕೊಳ್ಳೋಣ''

''ಅದು ಬೇಕೇ ಬೇಕು ಮೂರ್ತಿ, ಯೋಚನೆ ಮಾಡೋಣ''

''ವಿಜೂ ನಾವಂತು ಅಲ್ಲೇ ಹೋಗಿ ಇದ್ದು ರಿಪೇರಿ ಮಾಡಿಸಲು ಸಾಧ್ಯವಿಲ್ಲ. ಯಾರಾದರು ಕಂಟ್ರ್ಯಾಕ್ಟರ್ ನ ಕಂಡು ಮಾತಾಡಿ ಅವನ ಕೈಗೆ ಒಪ್ಪಿಸಿ ಬಿಡೋಣ ಏನಂತಿ''

''ಹಾಗೆ ಮಾಡೋಣ. ಯಾರನ್ನಾದರೂ ನಿಮ್ಮ ಸ್ನೇಹಿತರ ಹತ್ತಿರ ವಿಚಾರಿಸಿ ನಿರ್ಧರಿಸಿ'' ಎಂದಳು ವಿಜಯ. ಮೂರ್ತಿಗಳು ಯೋಚಿಸಿ ಅಳೆದು ಸುರಿದು ವಿಜಯನ ಅಣ್ಣ ಸುಬ್ಬಣ್ಣ ಹೇಗಿದ್ದರೂ ಸಿವಿಲ್ ಎಂಜನಿಯರ್, ಅವನಿಗೆ ಹೇಳಿ ಮನೆ ರಿಪೇರಿ ಮಾಡಿಸೋಣ ಎಂದು ನಿರ್ಧರಿಸಿದರು.

ಆ ಬಗ್ಗೆ ಮಾತಾಡಲು ೧೫ ದಿನ ರಜಾ ಪಡೆದು ಊರ ಕಡೆಗೆ ಹೋಗುವುದೆಂದು ನಿರ್ಧರಿಸಿ ಆಫೀಸಿನಲ್ಲಿ ರಜಾ ದೊರಕಿಸಿಕೊಂಡು ರೈಲ್ವೆ ರಿಸರ್ವೇಷನ್ ಮಾಡಿಸಿಕೊಂಡು ನಂತರ ವಿಜಯನಿಗೆ ಹೇಳಿದರು.

''ಏನು ಮೂರ್ತಿ ಇಷ್ಟೆಲ್ಲ ಸಿದ್ಧತೆ ಮಾಡಿಕೊಂಡು ನನಗೆ ತಿಳಿಸುವುದಾ?'' ಎಂದಳು.

''ಏನಾಯಿತೀಗ ಬಟ್ಟೆ pack ಮಾಡಿಕೋ ನಾಡಿದ್ದೇ  ಹೊರಡಬೇಕು''. ಎಂದರು.


ಭಾಗ -  5 ರಲ್ಲಿ ಮುಂದುವರೆಯುವುದು............

Comments