ಆಸರೆಮನೆ - 1

ಆಸರೆಮನೆ - 1

ಲೇಖಕರ  ಪರಿಚಯ



ದಿ||  ಶ್ರೀಮತಿಸುಮಿತ್ರಾ ರಾಮಣ್ಣ

ಶ್ರೀಮತಿ ಸುಮಿತ್ರಾ ರಾಮಣ್ಣ 


ಇವರು ವೃತ್ತಿಯಿಂದ ಗೃಹಿಣಿ, ಪ್ರವೃತ್ತಿ ಸಾಹಿತ್ಯವ್ಯವಸಾಯ ಹಾಗು ಕಲಾಭಿರುಚಿಯ ಹವ್ಯಾಸ. ಸಂಗೀತ ಪ್ರೇಮಿ ಹಾಗು ಸ್ವತಃ ವೀಣಾ ಪ್ರವೀಣೆ. ಸುಶ್ರಾವ್ಯ ಹಾಡುಗಾರಿಕೆಯ ರೂಢಿಸಿಕೊಂಡವರು
ಬಾಲ್ಯದಿಂದಲೇ ಪುಸ್ತಕಗಳ ಓದಿ ಅರ್ಥೈಸಿಕೊಳ್ಳುವ ಸದಭಿರುಚಿಯ ಬೆಳೆಸಿಕೊಂಡ ಇವರು ದ್ವಿ-ಪದವೀಧರೆ. ಚಿಕ್ಕವಯಸ್ಸಿನಿಂದಲೇ ಬರವಣಿಗೆಯ ಹವ್ಯಾಸವ ರೂಢಿಸಿಕೊಂಡಿರುವ ಇವರು ನೂರಾರು ಕಥೆ,ಕವನಗಳು, ಲೇಖನಗಳು ಹಾಗು ವಿಮರ್ಶೆಗಳನ್ನು ಬರೆದು ಪ್ರಶಂಸಾರ್ಹರಾಗಿರುತ್ತಾರೆ.
ಅದಲ್ಲದೆಪ್ರದೀಪವಾರಪತ್ರಿಕೆಯ ಪ್ರಧಾನ ಸಂಪಾದಕರಾಗಿ ಹತ್ತು ಹಲವು ಪ್ರಶಂಸಾಪತ್ರಗಳನ್ನು, ಅನೇಕಾನೇಕ ಪ್ರಬಂಧ ಸ್ಪರ್ಧೆಗಳಲ್ಲಿ ಬಹುಮಾನಿತರು ಹಾಗು ರಾಜ್ಯಮಟ್ಟದ ರಾಮಾಯಣ ಪ್ರಬಂಧಕ್ಕೆ ಅಂದಿನ ರಾಜ್ಯಪಾಲೆಯಿಂದ ಪುರಸ್ಕೃತರು. ಕನ್ನಡ ಸಾಹಿತ್ಯ ಪರಿಷತ್ತಿನವರಮಹಿಳಾವರ್ಷದಲ್ಲಿ ನಡೆಸಿದ ಕಥಾ ಸ್ಪರ್ಧೆಯಲ್ಲಿ ಬಹುಮಾನಿತರು. ಕರ್ನಾಟಕ ರಾಜ್ಯ ಸರ್ಕಾರ ನಡೆಸಿದ ಯುವಜನ ಪ್ರತಿಭಾ ಸ್ಪರ್ಧೆಯಲ್ಲಿ ಪ್ರಕಟಿತ ವರದಕ್ಷಿಣೆ ಪ್ರಬಂಧ ಲೇಖನವು ಬಹುಮಾನಿತವಾಗಿದೆ. ಇದಲ್ಲದೆ ಮಂಗಳ ಕಲಾಸಾಹಿತ್ಯ ವೇದಿಕೆಯ ಅಧ್ಯಕ್ಷೆಯಾಗಿಯೂ ಸೇವೆಸಲ್ಲಿಸಿರುತ್ತಾರೆ.
ಇವರ ಲೇಖನ ಮತ್ತು ಕಥೆಗಳು ತರಂಗ, ಸುಧಾ, ಜನಪ್ರಗತಿ, ಮಲ್ಲಿಗೆ ಗೋಕುಲ, ಕನ್ನಡ ಪ್ರಭ, ಪ್ರಜಾವಾಣಿ, ಕರ್ಮವೀರ, ಮೈಸೂರುಮಿತ್ರ ಮುಂತಾದ ಕರ್ನಾಟಕದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಗೊಂಡು ಎಷ್ಟೋ ಜನರಿಗೆ ಹೊಸ ಸ್ಫೂರ್ತಿ, ಮಾರ್ಗದರ್ಶನ, ಬೆಳಕ ನೀಡಿವೆ.
ಹೆಣ್ಣು ಸಮಾಜದ ಕಣ್ಣು” “ಗುಚ್ಛಹಾಗುಪುಸ್ತಕದ ಮನೆಕೃತಿಗಳು ಪ್ರಕಟಿತಗೊಂಡಿದ್ದು ಇವರದ್ವಂದ್ವಮತ್ತುಪೀಠ ತ್ಯಾಗಕಥೆಗಳು ವಿದೇಶಿ ಕನ್ನಡಿಗರ ಮನಸೂರೆಗೊಂಡಿದ್ದು ಅವರೆಲ್ಲರ ಪ್ರಶಂಸೆಗೆ ಪಾತ್ರವಾಗಿವೆ.



-1-

ಕಲ್ಯಾಣಿ ಓದುತ್ತಿದ್ದ ಪುಸ್ತಕವನ್ನು ಪಕ್ಕಕ್ಕಿಟ್ಟು ಕನ್ನಡಕವನ್ನು ತೆಗೆದು ಪುಸ್ತಕದ ಮೇಲಿಟ್ಟು ಒಮ್ಮೆ ದೀರ್ಘವಾದ ಉಸಿರೆಳೆದುಕೊಂಡರು. ಹಾಗೆಯೇ ಮೆಲ್ಲಗೆ ಹಿಂದಕ್ಕೊರಗಿ ಸ್ವಲ್ಪ ವಿಶ್ರಮಿಸಲು ನಿರ್ಧರಿಸಿ ಕಣ್ಣುಮುಚ್ಚಿದರು. ಕಣ್ಣು ಮುಚ್ಚಿತ್ತಾದರೂ ಮನಸ್ಸಿನ ಬಾಗಿಲು ತೆರೆದುಕೊಂಡು ಮುಚ್ಚಿದ ಬಾಗಿಲ ಹಿಂದಿನ ಜೀವನಗಾಥೆಯನ್ನೇ ಸುರುಳಿ ಸುರುಳಿಯಾಗಿ ಬಿಚ್ಚತೊಡಗಿತು. ನೆನಪು ಬೇಡವೆಂದರೆ ಬಿಡುವಂತಹುದೆ? ದೇಹಕ್ಕಂಟಿದ ಚರ್ಮದಂತೆ, ಶರೀರಕ್ಕಂಟಿದ ನೆರಳಿನಂತೆ ಬಿಟ್ಟೆನೆಂದರು, ಬಿಡದ ಮಾಯೆ.
ಕಲ್ಯಾಣಿಗೆ ಈಗ 60 ವರ್ಷದ ವೃದ್ಧಾಪ್ಯದ ಕೋಟೆಯೊಳಗೆ ಕಾಲಿಡುತ್ತಿರುವವಳಾದರೂ ಅವಳಿಗೊಂದು ಬಾಲ್ಯ, ಯೌವ್ವನ, ಮಧ್ಯ ವಯಸ್ಸು, ಶಾಲಾ, ಕಾಲೇಜುದಿನ, ವಿವಾಹ ಜೀವನ, ತಾಯ್ತನ ಎಲ್ಲ ಇದ್ದದ್ದಂತೂ ಸುಳ್ಳಲ್ಲ. ಈಗ ಇರುವುದು ಆಸರೆಯ ಮನೆಯಲ್ಲಾದರೂ ಅದು ತನ್ನ ಆಸರೆಗೆ ಮಾತ್ರವಲ್ಲ, ತನ್ನಂತಹ ಜೀವನದಲ್ಲಿ ನೊಂದ, ಬೇಸರಗೊಂಡ, ಎಲ್ಲಾ ಇದ್ದು ಬರಿಗೈ ಆದ ಒಂಟಿಯಾದ ಸೋದರಿಯರಿಗೆಂದೇ ಪ್ರಾರಂಭಿಸಿದಳಾದರೂ ನೋವು ಜೀವನದಲ್ಲಿ ಬರೀ ಹೆಂಗಸರಿಗೆ ಮಾತ್ರವಲ್ಲವಷ್ಟೇ, ಹಾಗಾಗಿ ಆಸರೆಯ ಮನೆಯ ಆಸರೆಯನ್ನು ಬಯಸಿ ಬಂದ ನಾಲ್ಕಾರು ಸೋದರರಿಗೂ ನೆರವನ್ನು ನೀಡಲೇಬೇಕಾಯಿತು.
ಆಸರೆ ಮನೆ ಹೆಸರೇ ಹೇಳುವಂತೆ ಆಸರೆಯನ್ನೂ, ಆಶ್ರಯವನ್ನೂ, ರಕ್ಷಣೆಯನ್ನೂ ನೀಡುವ ಮನೆಯೇ ಹೌದು. ಆಸರೆ ಮನೆ ಪ್ರಾರಂಭವಾದ 15 ವರ್ಷಗಳಲ್ಲಿ ಕಂಡುಂಡ ಏಳುಬೀಳು ನೋವುಗಳು ಕಲ್ಯಾಣಿಯ ಗಟ್ಟಿತನದಿಂದ ಮಾತ್ರ ಧೃಡತೆಪಡೆದು ಆಸರೆ ಮನೆಯ ಗೋಡೆಗಳು ಗಟ್ಟಿಯಾದವು, ಕಲ್ಯಾಣಿಯ ಮನಸ್ಸಿನಂತೆ. ಯಾವ ಆಮಿಷಕ್ಕೂ ಒಳಗಾಗದೆ ಕಲ್ಯಾಣಿ ಕಂಡದ್ದು ಬರೀ ತಾಯಿನೆಲದ ಪ್ರೀತಿಯನ್ನು ಮಾತ್ರ.
ಹಾಗೆಂದ ಮಾತ್ರಕ್ಕೆ ಕಲ್ಯಾಣಿಗೆ ಬದುಕಿನಲ್ಲಿ ಯಾವ ಕನಸೂ ಇರಲಿಲ್ಲವೇ? ಅವಳೂ ಆಶೆ ಕಟ್ಟಿಕೊಂಡು ಬೆಳೆದವಳಲ್ಲವೇ? ಜೀವನವನ್ನು ಹಸಿರಾಗಿಸಿಕೊಂಡು ಹೂವು ಹಣ್ಣುಗಳನ್ನು ಪಡೆಯಬೇಕೆಂದು ಬಯಸಿದವಳಲ್ಲವೇ ಎಂದರೆ ಯಾಕಿಲ್ಲ? ಅವಳು ಕಂಡಷ್ಟು ಕನಸನ್ನು, ಅವಳು ಬೆಳೆಸಿಕೊಂಡಷ್ಟು ಜೀವನ ಪ್ರೀತಿಯನ್ನು ಬಹುಶಃ ಅವಳ ಓರಿಗೆಯವರ್ಯಾರೂ ಬಯಸಿದವರೇ ಅಲ್ಲ. ಅಂತಹ ಆಸೆ, ಬದುಕಿನ ಬಗೆಗಿನ ಪ್ರೀತಿ ಅವಳಲ್ಲಿ ಮೇರೆಮೀರಿದಷ್ಟು. ಹಾಗೆಂದರೆ ಈಗಿಲ್ಲವೇ? ಖಂಡಿತಾ ಇದೆ. ಆದರೆ ಪ್ರೀತಿ ಕನಸುಗಳೆಲ್ಲ ಈಗ ಪಕ್ವತೆಪಡೆದು ತಾವು ಸಾಗುವ ದಾರಿಯನ್ನು ನಿಚ್ಚಳವಾಗಿ ಕಂಡುಕೊಂಡಿವೆ. ಕನಸಿನ ಪಕ್ವತೆಯ ಪರಿಣಾಮವೇ ಆಸರೆ ಮನೆಯಾಗಿ ರೂಪುಗೊಂಡಿದ್ದು.
ಎಳೆಯ ಕನಸುಗಳು ಬಣ್ಣ ಕಳೆದುಕೊಂಡು ಸೋತುಬಟ್ಟೆಯಾದಾಗ ಕಂಡ ಬಲಿತ ಕನಸುಗಳು ಗಟ್ಟಿಯಾಗಿ, ಧೃಡವಾದ ರಂಗಾಗಿ ರೂಪುಗೊಂಡಿದ್ದು ಆಸರೆ ಮನೆಯಾಗಿ, ನಾಲ್ಕಾರು ಜನ ನೊಂದವರ ಕಣ್ಣೀರನ್ನು ಒರೆಸಿ ಸಾಂತ್ವನ ಹೇಳುವ ಆಸರೆಯ ಮನೆ ಕಲ್ಯಾಣಿಯ ಹೆಮ್ಮೆಯ ಮನೆ. ರಂಗು ಯಾವಾಗಲೂ ಮಾಸದ ಗಟ್ಟಿ ಬಣ್ಣದ ಮನೆ. ಆಸರೆ ಗೋಡೆಗಳಿಗೆ ಯಾವ ಎಮಿಲ್ಷನ್ ಬಣ್ಣವು ಬೇಡ, ಯಾವ ಎಣ್ಣೆಯ ರಂಗೂ ಬೇಡ, ಆಸರೆ ಮನೆಯು ಕಲ್ಯಾಣಿ ಬಳಿದ ಕನಸಿನ ಬಣ್ಣದಿಂದ ಶೃಂಗಾರಗೊಂಡ ಮನೆ. ಅದು ಅಲ್ಲಿನ ಎಲ್ಲ ಸದಸ್ಯರ ಕನಸಿಗೂ ಕೈಯಾಗಿಗಟ್ಟಿಕೊಂಡು ರಂಗು ಕಳೆದ ಆಸರೆಯ ತಾಣ, ನೆಮ್ಮದಿಯ ತಾಣ ಆಸರೆ ಮನೆ. ಕಲ್ಯಾಣಿಯ ತಪಸ್ಸಿನ ಮನೆ, ಕನಸಿನ ಸಾಕಾರ ಮೂರ್ತರೂಪ ಪಡೆದ ಮನೆ.


ಇಷ್ಟಾದರೂ ಕಲ್ಯಾಣಿಗೆ ತಾನು ಏನು? ತನ್ನ ಗುರಿ ಏನು? ಎನ್ನುವ ನಿಚ್ಚಳ ಸತ್ಯ ಗೊತ್ತಾಗಿದ್ದು ಜೀವನದ 50 ಸಂವತ್ಸರಗಳನ್ನು ಕಳೆದುಕೊಂಡ ಮೇಲೆ. life start after fifty ಎನ್ನುವ ವಿದೇಶಿ ತತ್ವ ಅವಳಿಗೆ ಬದುಕನ್ನು ಪುನಃ ಕಟ್ಟಿಕೊಳ್ಳಲು ನೆರವಾಗಿತ್ತು. ವಿದೇಶಗಳಲ್ಲಿ ಹೆಂಗಸಿನ ಜೀವನ 50 ನಂತರ ಹೊಸ ವಸಂತವಾಗಿ ಪ್ರಾರಂಭವಾದರೆ ಇಲ್ಲಿ ಇಂಡಿಯಾದಲ್ಲಿ 50 ನಂತರ ಹೆಂಗಸಿಗೆ ಜೀವನ ಮುಚ್ಚಿದ ಬಾಗಿಲು. ಜೀವನ ಸಪ್ಪೆಸಾರ. ಬಾಕಿ ಏನೂ ಉಳಿದಿಲ್ಲ ಎನ್ನುವಂತೆ ಸಾಗಬೇಕು. ಆದರೆ ಕಲ್ಯಾಣಿಗಾದರೋ ಅದು ಸತ್ಯವಲ್ಲ ಜೀವನದ ನವಧಾರೆ, ಯಾವಾಗ ಬೇಕಾದರೂ ಪ್ರಾರಂಭವಾಗಬಹುದು ಎನಿಸಿದ್ದು 50 ನಂತರವೇ. ಸಪ್ಪೆಯಾದ 50   ಹಿಂದಿನ ಬದುಕು ಸಾರ ಪೂರ್ಣವಾಗಿದ್ದು 50 ನಂತರ. ಅದೂ ಇನ್ನೊಂದು ಆಶ್ಚರ್ಯಕರವಾದ ಸಂಗತಿ ಎಂದರೆ 70 ವಿಜಯಮ್ಮನ ಪ್ರೋತ್ಸಾಹ ಬೆಂಬಲದಿಂದ ಎಂದರೆ ತಪ್ಪಾಗಲಾರದು.
ಕಲ್ಯಾಣಿಯ ಮುಚ್ಚಿದ ಕಣ್ಣಿನ ಹಿಂದಿನ ಪರದೆಯ ಮೇಲೆ ಮೂಡಿದ ಚಿತ್ರ ಅವಳ ಬಾಲ್ಯ.

***********

ಜುಳು ಜುಳು ಹರಿಯುವ ಕಾವೇರಿಯ ತಟದಲ್ಲಿ ರಂಗನಾಥನ ದಿವ್ಯ ಸಾನಿಧ್ಯವಿರುವ ಶ್ರೀರಂಗಪಟ್ಟಣದ ಅಗ್ರಹಾರದ ಬೀದಿಯಲ್ಲಿ ಕಲ್ಯಾಣಿಯ ತಂದೆ - ತಾಯಿ ರಾಮನಾಥ- ಜಾನಕಿಯರದು ಅಚ್ಚುಕಟ್ಟಾದ ಸಂಸಾರ.
ವೆಚ್ಚಕ್ಕೆ ಹೊನ್ನು, ಬೆಚ್ಚನೆಯ ಮನೆ, ಇಚ್ಛೆಯನ್ನರಿತು ನಡೆವ ಸತಿ ಜಾನಕಿಯನ್ನು ಹೊಂದಿದ್ದು ರಾಮನಾಥ ಸ್ವರ್ಗಕ್ಕೆ ಕಿಚ್ಚು ಹಚ್ಚಿ ನಡೆಯಲಿಲ್ಲ. ಸ್ವರ್ಗದ ಬೆಳಕಿನಲ್ಲೂ ವಿನಯವಂತನಾಗಿ ಹೆಸರಾಂತ ವಕೀಲನಾಗಿ ಬದುಕಿನ ಸಕಲ ಸೌಖ್ಯಗಳನ್ನು ಅನುಭವಿಸುತ್ತ ನಾಲ್ಕಾರು ಜನರಿಗೂ ಬೇಕಾದವನಾಗಿ ನೆಮ್ಮದಿಯ ಬದುಕು ಕಂಡವನು. ಜಾನಕಿ ರಾಮನಾಥನ ಮನಮೆಚ್ಚಿದ ಮಡದಿ ಮಾತ್ರವಲ್ಲ, ಅತ್ತೆ ರಂಗನಾಯಕಮ್ಮನಿಗೆ ಒಲವಿನ ಸೊಸೆ. ಮನೆಯ ಅನ್ನಪೂರ್ಣೆ, ಸಿರಿದೇವಿಯಾಗಿದ್ದವಳು.
ಕೊರತೆಯೇ ಇಲ್ಲದ ಬಾಳು ಪೂರ್ಣವಾಗುವುದಾದರೂ ಹೇಗೆ? ಮಲಗಿದ್ದ ರಂಗನಾಥನಿಗೆ ಉರುಳುರುಳಿ ಬೇಡಿ ಕಾಡಿದರೂ ಮನೆಯಲ್ಲಿ ಮಗುವಿನ ತೊದಲ್ನುಡಿ, ಹೆಜ್ಜೆಯ ಶಬ್ಧ ಕೇಳದಾದಾಗ ಕಂಗೆಟ್ಟ ದಂಪತಿಗಳು ಬೇಡದ ದೇವರಿಲ್ಲ, ಕೈ ಮುಗಿಯದ ಕಲ್ಲಿಲ್ಲ. ಬದುಕಿನ ಎಲ್ಲ ಸುಖಗಳು ಸ್ವರ್ಗದ ಬದಲು ನರಕದ ಕಡೆಗೆ ಕೈ ಹಿಡಿದು ಸಾಗಿತೇನೋ ಎನ್ನುವಷ್ಟರಲ್ಲಿ ಮಲಗಿದ್ದ ರಂಗನಾಥ ಒಮ್ಮೆ ಸಣ್ಣಗೆ ಮೆಲ್ಲಗೆ ಕಣ್ಬಿಟ್ಟ ಮತ್ತೆ ನಿದ್ದೆ ಹೋದ.


ರಂಗನಾಥನ ಒಂದು ಕಿರುನೋಟ ಜಾನಕಿಯ ಬಾಳಿನಲಿ ಬೆಳಕನ್ನು ಕಲ್ಯಾಣವನ್ನು ಉಂಟುಮಾಡಿತು. ಕಲ್ಯಾಣಿ ಜಾನಕಿಯ ಒಡಲಿನಲ್ಲಿ ಸೇರಿದಾಗ ರಾಮನಾಥ-ಜಾನಕಿಯರ ಸಡಗರ ಸಂಭ್ರಮದ ತೊಟ್ಟಿಲಿನಲ್ಲಿ ಕಲ್ಯಾಣಿ ರಾಣಿಯಾಗಿ ಬೆಳೆದಳು. ಬಾಲ್ಯವೆಲ್ಲ ಹೂಗಳ ಹಾಸಿಗೆಯಾಗಿತ್ತು. ಮಗು ಶ್ರೀರಂಗಪಟ್ಟಣದ ಶಾಲೆಯನ್ನು ಮುಗಿಸಿ ಮೈಸೂರಿನ ಕಾಲೇಜು ಮೆಟ್ಟಿಲೇರುವ ದಿನ ಬಂದಾಗ ಜಾನಕಿ ರಾಮನಾಥರಿಗೆ ಸಡಗರದೊಂದಿಗೆ ಸಂಕಟ ಸಹ. ಮಗಳು ಕಾಲೇಜಿಗೆ ಬಂದಳು ದೊಡ್ಡ ವಿದ್ಯಾವಂತೆಯಾಗಿ ತಮ್ಮ ಕನಸನ್ನು ನನಸು ಮಾಡುತ್ತಾಳೆ ಎನ್ನುವ ಹಿಗ್ಗು- ಅದರ ಜೊತೆ ಜೊತೆಯಲ್ಲೇ ಮಗಳು ದೊಡ್ಡವಳಾಗುತ್ತಿದ್ದಾಳೆ, ಪರರಮನೆಯ ಬೆಳಕಾಗಿ ಹೊರಟು ಹೋಗುತ್ತಾಳೆ ಎನ್ನುವ ಸಂಕಟ. ಏನಾದರೇನು ಕಾಲಚಕ್ರ ನಿಲ್ಲುವುದಿಲ್ಲ. ಸಾಗುತ್ತಲೇ ಇರುತ್ತದೆ. ಕಲ್ಯಾಣಿ ಕಾಲೇಜು ಸೇರಿದಳು. ನಿತ್ಯ ಪಟ್ಟಣದಿಂದ ಮೈಸೂರಿಗೆ ರೈಲು ಪ್ರಯಾಣ, ರಾಮನಾಥ ಪ್ರಸಿದ್ಧ ಹಣವಂತ ವಕೀಲನಾದರೂ ಕಷ್ಟ-ಸುಖದ ಅನುಭವದಿಂದ ಮಗಳು ದೊಡ್ಡವಳಾಗಬೇಕು. ಜೀವನಾನುಭವದ ಪಾಠ ಅವಳಿಗೆ ಬೆಂಗಾವಲಾಗಿ ನಿಲ್ಲಬೇಕು ಎನ್ನುವದೇ ಜಾನಕಿ-ರಾಮನಾಥರ ಆಶಯ. ಕಲ್ಯಾಣಿ ನೋಡಲು ಚೆಲುವೆ, ಹೆಸರಿಗೆ ತಕ್ಕಂತೆ ಗುಣವಂತೆ. ಬೆಳದಿಂಗಳ ಬಣ್ಣ, ನೀಳ ಜಡೆ, ಬಟ್ಟಲು ಕಂಗಳು, ಎತ್ತರದ ನಿಲುವು ಅಷ್ಟು ಮಾತ್ರವಲ್ಲ ಕರುಣಾಮಯಿ. ಜಂಭ, ದರ್ಪ, ಶ್ರೀಮತಿಕೆಯ ಅಹಂಕಾರ ಯಾವದೂ ಹತ್ತಿರಕ್ಕೂ ಸುಳಿಯದ ಸುಶೀಲೆ. ರೂಪದಲ್ಲಿ ಚೆಲುವೆ, ಗುಣದಲ್ಲಿ ಸುಗುಣಾ. ಪಿಯುಸಿ ಪದವಿ ಪರೀಕ್ಷೆಗಳೆಲ್ಲ ಅವಳ ಬುದ್ದಿವಂತಿಕೆಯಿಂದ ಅಂಗೈಯಲ್ಲಿ ಕುಳಿತು ಮುಂಗೈಯಲ್ಲಿ ನಲಿದು ಕಲ್ಯಾಣಿಗೆ ಪದವಿಯನ್ನು ತಂದುಕೊಟ್ಟವು. ಮಧ್ಯೆ ಸಂಗೀತದಲ್ಲಿ ಅಜ್ಜಿ ರಂಗನಾಯಕಮ್ಮನಿಗಿದ್ದ ಪಾಂಡಿತ್ಯ ಇವಳಿಗೆ ಧಾರೆಯಾಗಿ ಹರಿದುಬಂತು. ಶೃಂಗೇರಿಯ ಶಾರದಾಂಬೆಯೇ ಇವಳ ಕಂಠಸ್ಥಳಾಗಿದ್ದಾಳೋ ಎಂಬಂತೆ ರಾಗ ಸರಾಗವಾಗಿ, ಸುಲಲಿತವಾಗಿ, ಶ್ರುತಿಯಾಗಿ, ಲಯವಾಗಿ ಹರಿದು ಬಂದಿತು. ಕಲ್ಯಾಣಿ ಸಂಗೀತದಲ್ಲೂ ಪ್ರೌಢಿಮೆ ಸಾಧಿಸಿದಳು.
ಕಣ್ಣುಕುಕ್ಕುವಂತಹುದಲ್ಲ ಕಣ್ಣುತಣಿಸುವ ರೂಪ, ವಿದ್ಯೆ, ಕಿವಿಗಿಂಪುಗೊಳಿಸುವ ಸಂಗೀತ ಸುಧೆ, ಎಲ್ಲಕ್ಕೂ ಕಳಶವಿಟ್ಟಂತೆ ವಿನಯವಂತೆ, ಸದ್ಗುಣ ಮೂರು ಮುಪ್ಪರಿಗೊಂಡು ಕಲ್ಯಾಣಿ ಮಾಮರಕ್ಕೆ ಹಬ್ಬಿದ ಮಲ್ಲಿಗೆ ಬಳ್ಳಿಯಂತೆ, ಕೊಂಡ ಮಾವಿನ ಮರಕ್ಕೆ ಹಬ್ಬಿದ ಮಲ್ಲಿಗೆ ಬಳ್ಳಿಯಾಗಿಯೇ ಸುಗಂಧಭರಿತಳಾದಳು. ತಿಂದುಣ್ಣಲು ಕೊರತೆಯಿಲ್ಲದ ತವರಿನಲ್ಲಿ, ಮಲ್ಲಿಗೆಯ ಸುಗಂಧ ನೆಂಟರಿಷ್ಟರ ಮನವನ್ನು ಆಕರ್ಷಿಸಿತು. ಬೆಳೆದ ಹೆಣ್ಣು ಮಗಳಿದ್ದ ಮೇಲೆ ಸಂಬಂಧ ಕೇಳಿ ಬರುವ ಬಂಧುಗಳು ಹೆಚ್ಚಾಗಿದ್ದು ಸಹಜವಾಗಿತ್ತು.
ರಂಗನಾಯಕಮ್ಮನವರಿಗೂ ಮೊಮ್ಮಗಳ ಮಾಡುವೆ ಚಿಂತೆ ಪ್ರಾರಂಭವಾಗಿತ್ತು. ಮಗನಿಗೆ ಒತ್ತಾಯ ಹೇರಲು ಪ್ರಾರಂಭಿಸಿದರು.
"
ಮಗು ರಾಮು ಕಲ್ಯಾಣಿಗೂ ಮದುವೆ ವಯಸ್ಸು ಬಂದಾಯಿತು. ಪೆಟ್ಟಿಗೆಯಿಂದ ಜಾತಕ ಈಚೆ ತೆಗೆಯಪ್ಪ. ಜಾತಕ ಸರಿಯೊಂದುವಂತಹ ಗಂಡು ಬಂದರೆ ಶುಭಕಾರ್ಯ ನಡೆಸಿಬಿಡೋಣ".
"
ಅಮ್ಮ ಕಲ್ಯಾಣಿ ಇನ್ನು ಮಗು, ಇಷ್ಟು ಬೇಗ ಮಾಡುವೆ ಯೋಚನೆ ಏಕಮ್ಮ, ನಾಕು ದಿನ ನಮ್ಮ ಮನೆಯಲ್ಲಿ ಹಾಯಾಗಿರಲಿ ಬಿಡು ಅವಸರ ಯಾಕೆ".
"
ಹೌದತ್ತೆ ಕಲ್ಯಾಣಿ ಇನ್ನು ನಿನ್ನೆ ಮೊನ್ನೆಯಷ್ಟೇ ಕಾಲೇಜಿನ ಜಂಜಾಟ ಮುಗಿಸಿದ್ದಾಳೆ. ಮದುವೆಗ್ಯಾಕೆ ಆತ್ರ. ಮಗು ಮನೆಯಿಂದ ಹೊರಟಮೇಲೆ ಹೀಗೆ ನಮ್ಮಲ್ಲಿ ಸ್ವತಂತ್ರವಾಗಿ ಇರಲು ಸಾಧ್ಯವೇ ಹೇಳಿ".
"
ಚೆನ್ನಾಯ್ತು ಕಣೆ ಜಾನಕಿ, ಅವನಂತೂ ಗಂಡಸು, ಸಂಸಾರದ ಒಳಗು ಹೊರಗೂ ಗೊತ್ತಾಗಲ್ಲ ಅಂದ್ರೆ ನಿನಗೂ ಗೊತ್ತಾಗಲ್ವೆ.  ಯೌವ್ವನ ಬಂದಾಗ ಕತ್ತೆ ಮರೀನು ಚೆಂದ ಅಂತ ಕೇಳಿಲ್ವೆ? ಈಗ ಕಲ್ಯಾಣಿ ಚೆನ್ನಾಗಿದ್ದಾಳೆ. ವಯಸ್ಸು ಬೆಳೀತಾ ಹಾಗೆ ಇರ್ತಾಳ್ಯೇ? ಮಗು ಮಗು ಅಂತ ಗಂಡ ಹೆಂಡತಿ ಇಬ್ಬರೂ ಲಾಲಸ್ತೀರಿ ಸರಿ, ಮಗೂಗೆ ಈಗ ಮಗು ಆಗೋ ವಯಸ್ಸು ಬಂದಿದೆ ಅಂತ ಮರೀಬೇಡಿ, ನಾನು ಕೈಕಾಲು ಗಟ್ಟಿಯಾಗಿರುವಾಗ ಕಲ್ಯಾಣಿ ತಲೆಮೇಲೆ ನಾಲ್ಕು ಅಕ್ಷತೆ ಕಾಳು ಹಾಕಿ ಕಣ್ಮುಚ್ಚಿಕೊಳ್ತೇನೆ ಅಷ್ಟೇ ನನಗಿರೋ ಆಸೆ. ನನಗೆ ತಾನೇ ಇನ್ನೇನು ಬೇಕು ಹೇಳು. ಇಷ್ಟರ ಮೇಲೆ ನಿಮ್ಮಿಷ್ಟ" ಎಂದು ರಂಗನಾಯಕಮ್ಮ ಮಾತುಮುಗಿಸಿ ಜಪಮಣಿ ಹಿಡಿದರು..........................

ಮುಂದುವರೆಯುವುದು............  




Comments

  1. Very nice narration. good start of the episode

    ReplyDelete
  2. ಹಿರಿಯರ ಲೇಖನ ಓದುವುದೇ ಸೊಗಸು. ಬಹಳ ಸೊಗಸಾಗಿದೆ ಮುಂದಕ್ಕೆ ಓದುವ ಕಾತರವಿದೆ.

    ReplyDelete

Post a Comment