ಹೊಯ್ಸಳ ದೇವಾಲಯಗಳು - ಭಾಗ ೨


ಹೊಯ್ಸಳ ದೇವಾಲಯಗಳು - ಭಾಗ ೨
ಲೇಖನ - ಶ್ರೀಯುತ  ಶ್ರೀನಿವಾಸ ಪುಟ್ಟಿ,   ಮೈಸೂರು



ಹೊಯ್ಸಳ ದೇವಸ್ಥಾನಗಳ ವಿಂಗಡಣೆ
ದೇವಾಲಯದೊಳಗಿನ ಗರ್ಭಗುಡಿಗಳ ಸಂಖ್ಯೆಯನ್ನು ಆಧರಿಸಿ ಹೊಯ್ಸಳ ದೇವಾಲಯಗಳನ್ನು ಐದು ರೀತಿ ವಿಂಗಡಿಸಬಹುದು. ಅವೆಂದರೆ:
೧. ಏಕಕೂಟಳು - ಇದರಲ್ಲಿ ಒಂದು ಗರ್ಭಗುಡಿ ಮಾತ್ರ ಇರುತ್ತದೆ. ತಿಪಟೂರು ಬಳಿಯ ಅರಳಗುಪ್ಪೆ ಹಾಗೂ ಹುಲ್ಲೇಕೆರೆಗಳಲ್ಲಿ ಇಂತಹ ದೇವಾಲಯಗಳನ್ನು ಕಾಣಬಹುದು.
ಏಕಕೂಟ - ಅರಸೀಕೆರೆ ಶಿವಾಲಯ
೨. ದ್ವಿಕೂಟಗಳು - ಎರಡು ಗರ್ಭಗುಡಿಗಳಿರುವ ದೇವಾಲಯಕ್ಕೆ ದ್ವಿಕೂಟ ಎಂದು ಹೆಸರು. ವಿಶ್ವ ವಿಖ್ಯಾತ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ಒಂದು ದ್ವಿಕೂಟ.
೩. ತ್ರಿಕೂಟಗಳು - ಒಂದೇ ದೇವಾಲಯದೊಳಗೆ ಮೂರು ಗರ್ಭಗುಡಿಗಳಿದ್ದರೆ, ತ್ರಿಕೂಟವಾಗುತ್ತದೆ. ಇದರಲ್ಲಿನ ಪ್ರಧಾನ ದೇವತೆ ಪೂರ್ವಾಭಿಮುಖವಾಗಿದ್ದು, ಉಳಿದೆರಡು ಮೂರ್ತಿಗಳು ದಕ್ಷಿಣ ಮತ್ತು ಉತ್ತರದಲ್ಲಿನ ಗರ್ಭಗುಡಿಯಲ್ಲಿ ಇರುತ್ತವೆ. ಮೂರೂ ಗರ್ಭಗುಡಿಗಳು ಸೇರಿ ಒಂದು ನವರಂಗವಿರುತ್ತದೆ. ಅತ್ಯಂತ ಸುಂದರ ರಚನೆಗಳಾದ ಇವು ವಿಷ್ಣು ದೇವಾಲಯಗಳು. ಸೋಮನಾಥಪುರ, ಹೊಸಹೊಳಲು, ಹಾರ್ನ ಹಳ್ಳಿ, ಜಾವಗಲ್, ಬೆಳವಾಡಿ ಇವುಗಳು ತ್ರಿಕೂಟ ವಿರುವ ಕೆಲವು ಸ್ಥಳಗಳು.
೪. ಚತುಷ್ಕೂಟ-ನಾಲ್ಕು ಗರ್ಭಗುಡಿಗಳುಳ್ಳ  ದೇವಾಲಯಕ್ಕೆ ಚತುಷ್ಕೂಟವೆನ್ನುತ್ತಾರೆ. ಹಾಸನ ಜಿಲ್ಲೆಯ ದೊಡ್ಡ ಗದ್ದವಳ್ಳಿಯಲ್ಲಿರುವ ಮಹಾಲಕ್ಷ್ಮೀ ದೇವಾಲಯ ಚತುಷ್ಕೂಟದ ಏಕೈಕ  ಉದಾಹರಣೆ .
ಚತುಷ್ಕೂಟ - ದೊಡ್ಡ ಗಡ್ಡವಳ್ಳಿ












೫. ಪಂಚಕೂಟಗಳು - ಐದು ಗರ್ಭಗುಡಿಗಳಿರುವ ದೇವಾಲಯಕ್ಕೆ ಪಂಚಕೂಟವೆಂದು ಹೆಸರು. ಮಂಡ್ಯ ಜಿಲ್ಲೆಯ, ಗೋವಿಂದನ ಹಳ್ಳಿಯಲ್ಲಿರುವ ಪಂಚಲಿಂಗೇಶ್ವರ ದೇವಾಲಯ, ಪಂಚಕೂಟಕ್ಕೆ ಒಂದು ಉದಾಹರಣೆ. 
ಪಂಚಕೂಟ - ಗೋವಿಂದನಹಳ್ಳಿ


ಹೊಯ್ಸಳ ದೇವಾಲಯಗಳ ವರ್ಗೀಕರಣ
ಹೊಯ್ಸಳರ ಆಳ್ವಿಕೆಯ ಸುಮಾರು ೩೫೦ ವರ್ಷಗಳಲ್ಲಿ, ಅವರ ಆಳ್ವಿಕೆಯ ಪ್ರದೇಶದಲ್ಲಿ, ವರ್ಷದಲ್ಲಿ ಸರಾಸರಿ ಐದು ದೇವಾಲಯಗಳು ಹೊಯ್ಸಳ ಶೈಲಿಯಲ್ಲಿ ನಿರ್ಮಾಣವಾದವು ಎಂದು ತಿಳಿದು ಬಂದಿದೆ. ಆದರೆ ಈ ವರೆಗೆ ಈ ಶೈಲಿಯ ೪೩೫ ದೇವಾಲಯಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ಸುಮಾರು ೧೦೦ ದೇವಾಲಯಗಳು ಮಾತ್ರ ಸಾಕಷ್ಟು ಸುಸ್ಥಿತಿಯಲ್ಲಿದ್ದು ಅವುಗಳನ್ನು ನೋಡಬಹುದಾಗಿದೆ. ಉಳಿದಿಕೊಂಡಿರುವ ಈ ದೇವಾಲಯಗಳು ಕೆಳಗೆ ತಿಳಿಸಿರುವ  ಯಾವುದದರೊಂದು  ವರ್ಗಕ್ಕೆ  ಸೇರುತ್ತದೆ.
. ಶಕ್ತಿ ದೇವಾಲಯಗಳು
ಸ್ತ್ರೀ ದೇವತೆಗಳಿಗೆ ಸಂಬಂಧಿಸಿದ ಈ ದೇವಾಲಯಗಳನ್ನು ಹಾಸನ ಜಿಲ್ಲೆಯ ದೊಡ್ಡ ಗದ್ದವಳ್ಳಿ ಮತ್ತು ಉಂಡಿಗನಾಳು (ಉಂಡಿಗೇನ ಹಾಳ) ಎಂಬಲ್ಲಿ ಕಾಣಬಹುದು.
೨. ಶಿವಾಲಯಗಳು
ಅರಸೀಕೆರೆ, ಅಮೃತಾಪುರ, ಹಳೇಬೀಡು, ಕೋರವಂಗಲ, ಬಸರಾಳು ಮತ್ತು ಗೋವಿಂದನ ಹಳ್ಳಿ  ಅಲ್ಲಿನ ಶಿವಾಲಯಗಳಿಗೆ ಪ್ರಸಿದ್ಧವಾಗಿವೆ.
೩. ವಿಷ್ಣು ದೇವಾಲಯಗಳು
ಅರಳಗುಪ್ಪೆ, ನುಗ್ಗೇಹಳ್ಳಿ, ಹಾರ್ನ ಹಳ್ಳಿ , ಬೆಳವಾಡಿ, ಬೇಲೂರು, ಸೋಮನಾಥಪುರ, ಹೊಸಹೊಳಲು, ಹುಲ್ಲೇಕೆರೆ, ಭದ್ರಾವತಿ ಇವುಗಳು ವಿಷ್ಣು ದೇವಾಲಯವನ್ನು ಹೊಂದಿರುವ ಕೆಲವು ಸ್ಥಳಗಳು.
. ಅವಳಿ ಅಥವಾ ಜೋಡಿ ದೇವಾಲಯಗಳು
ಒಂದೇ ಸ್ಥಳದಲ್ಲಿ, ಒಂದರ ಪಕ್ಕ ಒಂದು ಇರುವ ಹಾಗೂ ಅದರಲ್ಲಿ ಒಂದು ವಿಷ್ಣುವಿಗೂ ಮತ್ತೊಂದು ಈಶ್ವರನಿಗೂ ಮುಡಿಪಾದ ದೇವಾಲಯಗಳು ಇವು. ಹಾಸನ ಜಿಲ್ಲೆಯ ಮೊಸಳೆ (ಚೆನ್ನಕೇಶವ ಮತ್ತು ನಾಗೇಶ್ವರ) ಮತ್ತು ಚಿಕ್ಕಮಗಳೂರು ಜಿಲ್ಲೆಯ ಮರಳೆ ( ಕೇಶವ ಮತ್ತು ಸಿದ್ಧೇಶ್ವರ) ಗಳಲ್ಲಿ ಅವಳಿ ದೇವಾಲಯಗಳಿವೆ.
೫. ಜೈನ ಮಂದಿರಗಳು
ಹಾಸನ ಜಿಲ್ಲೆಯ ಶ್ರವಣ ಬೆಳ್ಗೊಳ ಹಾಗೂ ಮಂಡ್ಯ ಜಿಲ್ಲೆಯ ಕಂಬದ ಹಳ್ಳಿಯಲ್ಲಿ ಜಿನ ಮಂದಿರಗಳನ್ನು ಕಾಣಬಹುದು.
ಮುಂದಿನ ಲೇಖನಗಳಲ್ಲಿ ಈ ಎಲ್ಲ ರೀತಿಯ ಒಂದೊಂದು ದೇವಾಲಯಗಳ ಪರಿಚಯ ಮಾಡಕೊಡಲು ಪ್ರಯತ್ನಿಸಲಾಗುವುದು.

Comments

  1. Excellent details Shrinivas Sir looking at the photos and reading both of your articles feel like visiting those we missed out. Specially that Shivalaya at Arasikere and Panchakoota at Govingana haLLi

    ReplyDelete

Post a Comment