ಸಿಡ್ನಿ ಕನ್ನಡ ಶಾಲೆ ಕಾರ್ಯಕ್ರಮ

ಸಿಡ್ನಿ ಕನ್ನಡ ಶಾಲೆ ಕಾರ್ಯಕ್ರಮ

ಸಿಡ್ನಿ ಕನ್ನಡ ಶಾಲೆಯಿಂದ ಅದ್ದೂರಿ ದಸರಾ ರಾಜ್ಯೋತ್ಸವ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮ

 >>PHOTOS<<



ಕಳೆದ ನವಂಬರ್ 18 ಶನಿವಾರದಂದು ಸಿಡ್ನಿ ಕನ್ನಡ ಶಾಲೆಯ ವತಿಯಿಂದ ದಸರಾ ರಾಜ್ಯೋತ್ಸವ ಮತ್ತು ವಾರ್ಷಿಕೋತ್ಸವವನ್ನು ಅತಿ ಸಡಗರದಿಂದ ಆಚರಿಸಲಾಯಿತು. ವ್ಯಾಟಲ್ ಗ್ರೂವ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಸಂಜೆ 5:00 ಗಂಟೆಯಿಂದ  ರಾತ್ರಿ 10:00ರ ವರೆಗೆ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ವಿವಿಧ ರೀತಿಯ ನೃತ್ಯ ಹಾಡು ಗಳ ಮೂಲಕ ಮನೋರಂಜನೆಯ ಮಹಾಪೂರವನ್ನೇ ಹರಿಸಿದರು. ಎಂದಿನಂತೆ ಈ ವರ್ಷವೂ ದಸರಾ ಗೊಂಬೆಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಮಕ್ಕಳು ಈ ಗೊಂಬೆಗಳನ್ನೆಲ್ಲಾ ನೋಡುತ್ತಾ ಪಾಲಕರಿಂದ            ನಮ್ಮ ಹಬ್ಬ ಹರಿ ದಿನಗಳು ಮತ್ತು ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳುತ್ತಾ ಇರುವುದು ಕಂಡುಬಂದಿತು.

ಹಾಗೆಯೇ ಈ ವರ್ಷದ ಅತಿ ವಿಶೇಷ ಎಂಬಂತೆ ಸಭಾಂಗಣದ ಹೊರಭಾಗದಲ್ಲಿ ದೊಡ್ಡ ಗಾತ್ರದ ಆನೆ ಮತ್ತು ಅದರ ಮೇಲೆ ಅಂಬಾರಿಯನ್ನ ಮಾಡಿ ನಿಲ್ಲಿಸಲಾಗಿತ್ತು ಇದು ನಮ್ಮ ಮೈಸೂರು ದಸರಾದ ಜಂಬೂಸವಾರಿಯನ್ನು ನೆನಪಿಗೆ ತರುತ್ತಿತ್ತು. ಎಲ್ಲರೂ ಇದರ ಮುಂದೆ ತಮ್ಮ ಸೆಲ್ಫಿ ತೆಗೆದುಕೊಂಡು ಆನಂದಿಸಿದರು.

ಕಾರ್ಯಕ್ರಮವನ್ನು ಹಿರಿಯರು ದೀಪ ಬೆಳಗಿಸುವುದರ ಮೂಲಕ ಮತ್ತು ಕನ್ನಡದ ಸುಪ್ರಸಿದ್ಧ ನಾಡಗೀತೆ ಡಿ ಎಸ್ ಕರ್ಕಿ ಅವರ ಹಚ್ಚೇವು ಕನ್ನಡದ ದೀಪ ಈ ಹಾಡಿನ ಮೂಲಕ ಪ್ರಾರಂಭಿಸಲಾಯಿತು ಹಾಡನ್ನು ಪ್ರಸ್ತುತಪಡಿಸಿದವರು ಹರ್ಷಿತ ಮತ್ತು ಅಕ್ಷತಾ. ಆಮೇಲೆ ಅಕ್ಷಜ ಮತ್ತು ಶಿವಾಂಗ ಅವರಿಂದ  ಎರಡು ಗಣೇಶನ ಹಾಡುಗಳು ಚೆನ್ನಾಗಿ ಮೂಡಿ ಬಂದವು. ಆಮೇಲೆ ಭಾರ್ಗವ್ ಮತ್ತು ಮನೀಶ್ ಅವರು ಹಿಂದೆ ಸ್ವಾತಂತ್ರ್ಯ ಪೂರ್ವ ಮೈಸೂರು ಸಂಸ್ಥಾನದ ನಾಡಗೀತೆ ಆಗಿದ್ಧಂತಹ ಕಾಯೋ ಶ್ರೀ ಗೌರಿ ಇದನ್ನು ರಾಗಬದ್ಧವಾಗಿ ಪ್ರಸ್ತುತಪಡಿಸಿದರು. ಆಮೇಲೆ  ಆದ್ಯ  ಅಕ್ಕ ಕೆಳವ್ವ ಎಂಬ ವಚನವನ್ನು, ಆತ್ಮಿಕ  ಸುಳ್ಳು ನಮ್ಮಲ್ಲಿಲ್ಲವಯ್ಯ ಎಂಬ ದಾಸ ಪದವನ್ನು, ಸನ್ನತಿ ಮತ್ತು ಧನ್ವಿ ಅವರು ಕ್ರಮವಾಗಿ ಸೋಜುಗದ ಸುಜು ಮಲ್ಲಿಗೆ ಮತ್ತು ಚೆಲುವೆ ಯಾರೊಎನ್ನುವ ಜಾನಪದ ಗೀತೆಗಳನ್ನು ಹಾಡಿ ಮನರಂಜಿಸಿದರು.

ಆಮೇಲೆ ಈ ವರ್ಷದ ವಿಶೇಷ ಕಾರ್ಯಕ್ರಮ ವಾದಂತಹ ಕವಿ ನಮನ  ಮೂಡಿ ಬಂತು. ಕನ್ನಡದ ಪ್ರಸಿದ್ಧ ಕವಿ ಮತ್ತು ದಕ್ಷ ಆಡಳಿತಗಾರ ಆಗಿದ್ದಂತಹ ಸಿದ್ದಯ್ಯ ಪುರಾಣಿಕ್ ಅವರನ್ನು ನೆನಪಿಸಿಕೊಂಡು ಅವರಿಗೆ ಈ ಕಾರ್ಯಕ್ರಮದಲ್ಲಿ ನಮನವನ್ನು ಸಲ್ಲಿಸಲಾಯಿತು. ಕುಮಾರಿ ಸಮನ್ವಿತ ಸಿದ್ದಯ್ಯ ಪುರಾಣಿಕ್ ಅವರ ಬಗ್ಗೆ ವಿವರಗಳನ್ನು ಓದಿದರೆ ಎಲ್ಲ ಮಕ್ಕಳು ಸೇರಿ ಅಜ್ಜನ ಕೋಲಿದು ಎನ್ನುವ ಶಿಶು ಗೀತೆಯನ್ನು ಸುಮಧುರವಾಗಿ ಹಾಡಿದರು. ಹೀಗೆ ಪ್ರತಿ ವರ್ಷ ಶಾಲಾ ಕಾರ್ಯಕ್ರಮದಲ್ಲಿ ಕನ್ನಡ ಕವಿಗಳಿಗೆ ಅದರಲ್ಲೂ ಶಿಶು ಗೀತೆಗಳು ಬರೆದ ಕವಿಗಳಿಗೆ ನಮನ ಸಲ್ಲಿಸುವುದು ಬಹಳ ಔಚಿತ್ಯವಾದದ್ದು ಮತ್ತು  ಸ್ತುತ್ಯಾರ್ಯವಾದುದು.

ಆಮೇಲೆ ಅದ್ಯ ಹೆಬ್ಬಾರ್ ಅವಳಿಂದ ,’ಪುಟಾಣಿ ನೀಲಿ ಹಕ್ಕಿ, ಆರವಿ ಇವಳಿಂದ ಬಿಳಿ ಮೋಡ ಕರಿ ಮೋಡ ಆದ್ಯ ಕನ್ನಳ್ಳಿ ಇವಳಿಂದ ಅ ಆ ಇ ಈ ಕನ್ನಡದ…’ ಮತ್ತು ಕುಶಾಲ ಇವನಿಂದ ನಿಸಾರ್ ಅಹ್ಮದವರ ಜೋಗದ ಸಿರಿ ಬೆಳಕಿನಲ್ಲಿ ಹಾಡುಗಳು ಮೂಡಿಬಂದವು. ಆದ್ಯ ಶ್ರೀಕಾಂತ್ ಹೇಳಿದ ಗುಬ್ಬಿ ಕಥೆಯೂ ಬಹಳ ಮುದ್ದಾಗಿತ್ತು.

ಆಮೇಲೆ ಕಾವೇರಿ ತೀರದಲ್ಲಿ ಎನ್ನುವ ಸಮೂಹ ನೃತ್ಯದ ಮೂಲಕ ಚಿಣ್ಣರು ಎಲ್ಲಾ ಸಭಿಕರನ್ನು ನಮ್ಮ ನಾಡಿನ ಕಾಡಿಗೆ ಕರೆದುಕೊಂಡು ಹೋಗಿ ಮನರಂಜಿಸಿದರು.

 ಇದ ನಂತರ ಸುಮನ  ಮತ್ತು ಈಶಾನ ಹಾಡಿದ ಚನ್ನವೀರ ಕಣವಿ ಅವರ ಹೂವು ಅರಳುವವು ಮತ್ತು ಶ್ರೇಯ ಮತ್ತು ಶರಣ್ಯ ಹಾಡಿದ ಬಿ ಆರ್ ಲಕ್ಷ್ಮಣ್ ರಾವ್ ಅವರ ಅಮ್ಮ ನಿನ್ನ ಎದೆಯಾಳದಲ್ಲಿ ಎನ್ನುವ ಭಾವಗೀತೆಗಳು ಚೆನ್ನಾಗಿ ಮೂಡಿ ಬಂದವು.

ನಂತರ ಇಂಪನ ಮತ್ತು ಖುಷಿ ಮಾಡಿದ ಹ್ಯಾಂಡ್ಸ್ ಅಪ್ ಡಾನ್ಸ್ ಹೊಸತನದಿಂದ ಕೂಡಿತ್ತು. ಆಮೇಲೆ ಅನೇಕ ಮತ್ತು ಅದ್ವಿಕ ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡನ್ನು ಮತ್ತು ಅವನಿ ಪದಕಿ ಕರುನಾಡ ತಾಯಿ ಹಾಡನ್ನು ಕರೋಕೆಯೊಂದಿಗೆ ಸುಶ್ರಾವ್ಯವಾಗಿ ಹಾಡಿದರು. ಶ್ರೇಯಸ್ ಭಟ್ ನಾವಾಡುವ ನುಡಿಯೇ ಕೊಳಲಿನಲ್ಲಿ ನುಡಿಸಿದನು.

ಆಮೇಲೆ ಮೂಡಿ ಬಂದಂತಹ ಸಮೂಹ ನೃತ್ಯ ಅಡವಿ ದೇವಿಯ ಇದರಲ್ಲಿ ಬಹಳ ಮಕ್ಕಳು  ಭಾಗವಹಿಸಿದ್ದು ಬಹಳ ಚೆನ್ನಾಗಿತ್ತು.

ನಂತರ ನಮ್ಮ ಕನ್ನಡ ಭಾಷೆಯ ಮೇಲಿನ ಪ್ರೇಮವನ್ನು ಬಿಂಬಿಸುವ ಹಾಡುಗಳಾದ  ಕನ್ನಡವೆಂದರೆ ನಮ್ಮ ಉಸಿರು ಇದನ್ನು ಅಗ್ನೇಯ ಅವ್ಯತಾ ಮತ್ತು ಅಥರ್ವ ಅವರೂ, ವಿಶ್ವ ವಿನೂತನ ಪದ್ಯವನ್ನು ವೈಭವ್ ಬಹಳ ಚೆನ್ನಾಗಿ ಹಾಡಿದರು.

ಹಾಗೆಯೇ ಕನ್ನಡದ ಸಾರ್ವಕಾಲಿಕ ಸುಮಧುರ ಗೀತೆ ನಾವಾಡುವ ನುಡಿಯೇ ಸನ್ನತಿ ಮತ್ತು ಸಾಯಿ ಅವರ ಅಪ್ಪ-ಮಗಳು ಧ್ವನಿಯಲ್ಲಿ ಬಹಳ ಇಂಪಾಗಿ ಮೂಡಿಬಂದಿತು.

ಹಾಗೆಯೇ ಇಂಪನ ಮಾಡಿದ ಮೊನೊ ಆಕ್ಟಿಂಗ್ ಬಹಳ ಚೆನ್ನಾಗಿತ್ತು.

ನಂತರ ಸಮನ್ವಿತ ಹಾಡಿದ ಕರೋಕೆ ಹಾಡು ನೆಸರ ನೋಡು ಸುಮಧುರವಾಗಿತ್ತು.

ಹಾಗೆ ಆದ್ವಿಕ ಮಾಡಿದ ಚಿಕ್ಕಿ ಗೊಂಬೆ ನೃತ್ಯ ಚೆನ್ನಾಗಿತ್ತು.

ನಂತರ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಅತ್ಯುತ್ತಮ ವಿದ್ಯಾರ್ಥಿಗಳಿಗಾಗಿ ಬಹುಮಾನ ವಿತರಣೆಯನ್ನು ಮಾಡಲಾಯಿತು.

ಭಾರತದಿಂದ ಬಂದಂತಹ ಹಿರಿಯರಾದ ಡಾ.ನರಸಾಪೂರ ಇವರು ಬಹುಮಾನವನ್ನು ವಿತರಿಸಿದರು ಹಾಗೆಯೇ ಶಾಲಾ ಶಿಕ್ಷಕರಿಗೆ ನೆನಪಿನ ಕಾಣಿಕೆಯನ್ನು ಕೊಡಲಾಯಿತು.

ನಂತರ ಮೂಡಿಬಂದ 3 ಸಮೂಹ ನೃತ್ಯಗಳು ತಮ್ಮ ವಿಶೇಷ ನೃತ್ಯ ಸಂಯೋಜನೆಯಿಂದಾಗಿ ಗಮನ ಸೆಳೆದವು. ತುಂಗಾಬಿ ಶಾಲೆಯವರು ಮಾಡಿದ ಮೈಸೂರು ರಾಜ್ಯದ ದೊರೆಯೇ ಮತ್ತು ವ್ಯಾಟಲ್ ಗ್ರೂವ ಶಾಲೆ ಮಕ್ಕಳು ಮಾಡಿದ ಘಲ್ಲು ಘಲ್ಲೆನುತಾ ಮತ್ತು ಹಳೆ ವಿದ್ಯಾರ್ಥಿಗಳು ಪ್ರಸ್ತುತಪಡಿಸಿಸಿದ ಜೈ ಭಜರಂಗಿ ನಯನ ಮನೋಹರವಾಗಿದ್ದವು.

 ಕೊನೆಗೆ ನುರಿತ ಹಾಡುಗಾರರಾದ ಪ್ರಮೋದ್ ಅವರ ಯಾರೆ ನೀನು ರೋಜಾ ಹೂವೆ ಮತ್ತು ದೀಪಕ್ ಅವರ ಈ ಭೂಮಿ ಬಣ್ಣದ ಬುಗುರಿ ಚೆನ್ನಾಗಿ ಮೂಡಿ ಬಂದವು.

ಒಟ್ಟಿನಲ್ಲಿ ಸಿಡ್ನಿ ಕನ್ನಡ ಶಾಲೆ ಇಷ್ಟು ಅದ್ದೂರಿಯಾಗಿ ದಸರಾ ಮತ್ತು ರಾಜ್ಯೋತ್ಸವ ಗಳನ್ನು ಆಚರಿಸಿದ್ದು ವಿಶಿಷ್ಟವಾಗಿತ್ತು ಅದಕ್ಕಾಗಿ ಕನ್ನಡ ಶಾಲೆಗೆ ಧನ್ಯವಾದಗಳು.

 ವರದಿ

 ದತ್ತು ಕುಲಕರ್ಣಿ ಸಿಡ್ನಿ

Comments