ಗುರುವಂದನೆ

ಗುರುವಂದನೆ
ವರದಿ -  ಶೀಲಾ. ಜಿ
                                              

                                          ಇಂದೇಕೋ ಆ ಹಾಡು ಬಹಳ ಕಾಡುತ್ತಿದೆ. ಬಹುಶಃ ಆಯಾ ದಿನದ ಸಂದರ್ಭಕ್ಕೆ ತಕ್ಕನಾಗಿ ಮನಸೂ ಕೂಡ ಹಾಡುಗಳಲ್ಲಿ ಹುಡುಕುತ್ತಾ ಹೋಗುತ್ತವೇನೋ.  ಎಷ್ಟೋ ವರ್ಷಗಳ ಹಿಂದೆ ರತ್ನಮಾಲ ಪ್ರಕಾಶ್ ಅವರ ಧ್ವನಿಯಲ್ಲಿ ಕೇಳಿದ ಹಾಡು...

ಏನೀ ಮಹಾನಂದವೇ .. ಓ ಭಾಮಿನಿ
ಏನೀ ಸಂಭ್ರಮದಂದವೇ ಬಲು ಚೆನ್ನವೇ
ಏನೀ ವೃತಾಮೋದ ಏನೀ ಮುರಜನಾದ
ಏನೀ ಜೀವೋನ್ಮಾದ ಏನೀ ವಿನೋದ ||ಏನೀ ಮಹಾನಂದವೇ||

                                ಶಾಲೆಯ ಗುರುವಂದನೆ !! ಆಹಾ! ಗುರು ಶಿಷ್ಯ ಪರಂಪರೆಯಲ್ಲಿ ಈ ಅನುಬಂಧ ಅಡಗಿದೆ ಅಂತ ಇವತ್ತೇ ತಿಳಿದಿದ್ದು.  ತಂದೆ, ತಾಯಿ, ಅಕ್ಕ, ತಂಗಿ, ಅಣ್ಣ ತಮ್ಮಂದಿರ ಸಂಬಂಧದಲ್ಲಿ ಕಾಣುವಂತಹ ಅಥವಾ ಅದಕ್ಕೂ ಮಿಗಿಲಾದ ಅನುಭವ! ನಾವೆಲ್ಲ ಗುರುವಂದನೆಗಾಗಿ ಸೇರಿದ್ದೆವು.  ಅಂದು ಸ್ಕರ್ಟ್ ತೊಡುತ್ತಿದ್ದ ಹುಡುಗಿಯರೆಲ್ಲ ಇಂದು ಸೀರೆ, ಚಡ್ಡಿ ತೊಡುತ್ತಿದ್ದ ಹುಡುಗರೆಲ್ಲ ಗಡ್ಡ ಮೀಸೆ ಬಿಟ್ಟ ಜವಾಬ್ದಾರಿ ಹೊತ್ತ ಗಂಡಸರು ಶೇರ್ವಾನಿ, ಜುಬ್ಬ ತೊಟ್ಟು ಗುರುವಂದನೆಯ ಸರಸ್ವತಿ ಪೂಜೆಯಲ್ಲಿ ತೊಡಗಿದ್ದರು.

                                  ವೇದಿಕೆಯ ಮೇಲೆ ಮೆಟ್ಟಿಲುಗಳಾಗಿ ಜೋಡಿಸಿದ್ದ ಮಣೆಯ ಮೇಲೆ ಅಚ್ಚುಕಟ್ಟಾದ ಬಿಳಿ ಹಾಸು, ಹೊಳೆವ ಜರತಾರಿ ಶಾಲು ಮಧ್ಯಧಲ್ಲಿ.... ಅದರ ಮೇಲೆ ಉಚ್ಛ ಪೀಠದಲ್ಲಿ ಶಾರದೆಯ ಭಾವಚಿತ್ರ, ಕೆಳಗೆ ಸ್ವಾಮಿ ವಿವೇಕಾನಂದರ ಭಾವಚಿತ್ರ. ಅಂದು ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ನಮನವನ್ನು ಸಲ್ಲಿಸಲೂ ಕೂಡ ತಯಾರಿ ನಡೆದಿತ್ತು.   ಅಂದವಾಗಿ ಹೂ ಹಾರಗಳಿಂದ ಗುಲಾಬಿಗಳಿಂದ ಅಲಂಕೃತಗೊಂಡಿತ್ತು.  ಶೀಲ, ವಿದ್ಯಾಲಕ್ಷ್ಮಿ, ಅಶ್ವಿನಿ ಜೋಶಿ ಸೇರಿ ಅಂದವಾದ ರಂಗು ರಂಗಾದ ರಂಗೋಲಿ ಬಿಡಿಸಿದ್ದರು.  ಪ್ರಸನ್ನ ಅರವಿಂದ ಸಕಲ ಪೂಜಾ ಸಾಮಗ್ರಿಗಳನ್ನು ಒದಗಿಸಿದ್ದರು.  ಹೆಣ್ಣು ಮಕ್ಕಳೆಲ್ಲರೂ ಸೇರಿ ಚುಮು ಚುಮು ಚಳಿಯ ಭಾನುವಾರದ ನಿದ್ದೆಯನ್ನು ಮರೆತು ಪೂಜೆಯಲ್ಲಿ ತೊಡಗಿದ್ದರು.  ಪರಿಮಳಯುಕ್ತವಾದ ಅಗರಬತ್ತಿಯ ಘಮಲು ಸಭಾಂಗಣಕ್ಕೆಲ್ಲ ಹರಡಿ ಗುರುವಂದನೆಯ ಕಾರ್ಯಕ್ರಮಕ್ಕೆ ಮೆರುಗು ಜೊತೆಗೆ ಭಕ್ತಿ ಭಾವವನ್ನು, ಭಾವನೆ ಕಾತರಗಳನ್ನೂ ಹೆಚ್ಚಿಸಿತು.  ಹೆಣ್ಣುಮಕ್ಕಳ ಗುಂಪು ಸೇರಿ ರಾಜಮ್ಮ ಟೀಚರ್ ಪ್ರಾಥಮಿಕ ಶಾಲೆಯಲ್ಲಿ ಕಲಿಸಿದ ಹಾಡು ಗಂ ಗಣಪತೇ, ಶೃಂಗೇರಿ ನಾಯಕಿ ಹಾಡನ್ನು ಹಾಡುತ್ತಾ ಪೂಜೆ ಮಾಡಿದರು.  ಗಣೇಶನ ಹಾಗೂ ಸರಸ್ವತಿಯ ವಿಗ್ರಹಗಳಿಗೂ ಪೂಜೆ, ಮಂಗಳಾರತಿ ಸಮರ್ಪಿಸಿದೆವು. ಲಗುಬಗೆಯಿಂದ ಉಧ್ಘಾಟನಾ ದೀಪದ ಸುತ್ತ ರಂಗೋಲಿಯನ್ನೂ ಹಾಕಿದ್ದೆವು.  ಪ್ರಸನ್ನ ಶ್ರೀನಿಧಿ, ಸುಬ್ಬು, ಅರವಿಂದ ಅದಾಗಲೇ ದೀಪದ ಕಂಬಕ್ಕೆ ಹೂವು ಸುತ್ತಿ ಅಲಂಕರಿಸಿದ್ದರು.  ವೇದಿಕೆಗೆ ಹಾಗೂ ಭಾಷಣಾ ಕಟ್ಟೆ ಕೂಡ ಹೂವಿನಿಂದ ಅಲಂಕೃತಗೊಂಡಿತ್ತು.  ರಾತ್ರಿಯೆಲ್ಲಾ ಕಷ್ಟಪಟ್ಟು ಪ್ರೊಜೆಕ್ಟರ್, ಬ್ಯಾನರ್, ಮ್ಯೂಸಿಕ್ ಸಿಸ್ಟಮ್, ಎಲ್ಲ ಹವಣಿಸಿದ್ದರು.  ಅಬ್ಬಾ ಹುಡುಗು ಹುಡುಗಾಗಿದ್ದ ಈ ಹುಡುಗರೆಲ್ಲ ಅದಾವಾಗ ಈ ಪರಿಯಲ್ಲಿ ಜವಾಬ್ದಾರಿಯನ್ನು ತಗೊಂಡರು. ಎದುರುಗೊಳ್ಳಲಿರುವ ಗುರುಗಳಿಗೆ ಸ್ನೇಹಿತರಿಗೆ ಖುದ್ದಾಗಿ ತಾವೇ ಕುರ್ಚಿಗಳನ್ನು ಸಾಲಾಗಿ ಜೋಡಿಸಿದರು.  ಊಟ ತಿಂಡಿ ಕಾಫಿಗಳ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ಸಿದ್ಧಪಡಿಸಿದ್ದರು.


                                                           ನಾವೆಲ್ಲ ಸರಸ್ವತಿ ಪೂಜೆಯನ್ನು ಕೈಗೊಳ್ಳುತ್ತಿರುವಾಗಲೇ ನಮ್ಮ ರಾಜಮ್ಮ ಟೀಚರ್ ಸಭಾಂಗಣವನ್ನು ಪ್ರವೇಶಿಸಿದರು. ಓಃ ! ಮಿಸ್ ೨೭ ಅಲ್ಲಲ್ಲ ೩೦ ವರ್ಷದ ನಂತರ!!! ನಿಮ್ಮನ್ನು ನೆನೆಯದ ದಿನವೇ ಇಲ್ಲ ನೀವು ಹೇಳಿಕೊಟ್ಟ ಹಾಡನ್ನು ಗುನುಗದ ದಿನವೇ ಇಲ್ಲ ಎಂದು ಭಾವುಕರಾಗಿ ನಮಸ್ಕರಿಸಿ ಕಾಲ ಬಳಿಯಲ್ಲೆ ಕುಳಿತೆವು. ನಮ್ಮೆಲ್ಲರ ಕಣ್ಣಂಚಲ್ಲಿ ನೀರಾಡಿತು. ಆಗಲೆ ಬೇರೆಲ್ಲ ಸಹಪಾಟಿಗಳು ಬರಲಾರಂಭಿಸಿದರು... ಕಣ್ಣೊರೆಸಿಕೊಂಡೆವು. 
                                                         ಮತ್ತೊಮ್ಮೆ ಒಳಹೊರಗೆ ದಾರಿ ಸವೆಸಿದೆವು.  ಮೀನಾಕ್ಷಿ ಮಿಸ್ ಬಂದಂತೆ ಎಲ್ಲರು ಓಡಿದೆವು.  ಕಾಲಿಗೆ ನಮಸ್ಕರಿಸಿ ಸ್ವಾಗತಿಸಿದೆವು.  ಮತ್ತೆ.... ನಮ್ಮ ಜಲಜಾಕ್ಷಿ ಮಿಸ್, ಅಬ್ಬಾ ಹೇಗಿದ್ರೋ ಹಾಗೇ ಇದ್ದಾರೆ.  ಅವರೆಲ್ಲರನ್ನು ನೋಡಿ ಆದ ಸಂತೋಷ ಆಷ್ಟಿಷ್ಟಲ್ಲ.  ಆಮೇಲೆ ಕಾರಿನಿಂದ ಇಳಿಯುತ್ತಿರುವವರಾರು??? ಅಯ್ಯೋ ಲಲಿತಮ್ಮ ಮಿಸ್ ಬನ್ನಿ ಮಿಸ್, ಬನ್ನಿ ಮಿಸ್, ಎಲ್ಲ ವಿದ್ಯಾರ್ಥಿಗಳೂ ಸಂತೋಷದ ನಗು. ಏ ಕೈ ಹಿಡ್ಕೊಳ್ರೋ.... ಅಂದೆ... ಏ.. ಕೈಯ್ಯಿ ಗಿಯ್ಯಿ ಬೇಡ ಅಂದ್ರು! ವಾವ್, ಶಿ ಇಸ್ ೮೫! ನಾನಂದೆ ವಾವ್ ಲಲಿತಮ್ಮ ಮಿಸ್ ರಾಕ್ಸ್.....

                                               ಸಭಾಂಗಣ ಪ್ರವೇಶಿಸಿದೊಡನೆ ಆ ಟೀಚರ್ ಗಳು ಪರಸ್ಪರ ಭೇಟಿ ಮಾಡಿ ಬಹಳ ವರ್ಷಗಳೇ ಕಳೆದಿದ್ದವು.  ಆವರ ಭೇಟಿ, ಆಲಿಂಗನ, ಅಪ್ಪುಗೆ, ಬೆನ್ನು ಸವರುವಿಕೆ ಆನಂದ ಭಾಷ್ಪ ಒಬ್ಬರನ್ನೊಬ್ಬರು ನೋಡಿ ಆನಂದಿಸುವ ಪರಿ ನಮ್ಮೆಲ್ಲ ವಿಧ್ಯಾರ್ಥಿ ವೃಂದವನ್ನು ಭಾವುಕರನ್ನಾಗಿಸಿತು.   ಅಮೇಲೆ ಮಂಗಳೂರಿನಿಂದ ಗುರುವಂದನೆ ಕಾರ್ಯಕ್ರಮಕ್ಕಾಗಿ ಬಂದ ಲೀಲಾವತಿ ಉಚ್ಚಿಲ್ ಮೇಡಮ್....ಒಂದು ಇಡೀ ರಾತ್ರಿ ಪ್ರಯಾಣ ನಮಗಾಗಿ! ಧನ್ಯರು.  ಮತ್ತೆ ನಾಗಮಣಿ ಮೇಡಮ್, ನಿರ್ಮಲ ಮಿಸ್ ಕೂಡ ಬಂದರು. ನಿರ್ಮಲ ಮಿಸ್ ನನಗೆ ಜಾಸ್ತಿ ಹೊತ್ತು ಕೂಡಲು ಶಕ್ತಿ ಇಲ್ಲ ಎಂದಿದ್ದವರು ನಮ್ಮ ಗುರುವಂದನೆ ಕಾರ್ಯಕ್ರಮ ಪೂರ್ಣಗೊಳ್ಳುವವರೆಗೆ ಕುಳಿತಿದ್ದಿದ್ದು ನಮ್ಮ ಪ್ರೀತಿಗೆ ಕಟ್ಟು ಬಿದ್ದು.

                                         
                                   ಪ್ರೌಢಶಾಲೆಯ ಗುರುಗಳು, ಎಮ್.ಆರ್.ಉಷಾ ಮ್ಯಾಂ (ಎಮ್.ಆರ್.ಯು) ಬಂಧರು ಎಲ್ಲರು ಅವರನ್ನು ಸ್ವಾಗತಿಸಿದರು.  ಪಿ.ವಾಸಂತಿ ರಾವ್ (ಪಿ.ವಿ.ಆರ್) ಮೇಡಮ್ ಬಂದರು ಅವರು ಸಭಾಂಗಣವನ್ನು ತಲುಪಲು ಸುಮಾರು ೧೫ ನಿಮಿಷ ಹಿಡಿಯಿತು.  ಅಲ್ಲಲ್ಲೇ ಅಡ್ಡಗಟ್ಟುತ್ತಿದ್ದ ವಿದ್ಯಾರ್ಥಿ ಸಮೂಹ...ಹೆಚ್.ಜಿ.ನಾಗರಾಜ್ ಸರ್ (ಹೆಚ್.ಜಿ.ಎನ್) ಬಂದರು, ಬಿ.ಎಲ್.ಮೀರಾ ಮೇಡಮ್ (ಬಿ.ಎಲ್.ಎಮ್) ಬಂದರು, ಕೆ.ಎಲ್.ಜ್ಞಾನಪ್ರಸಾದ್ ಸರ್ ಕೂಡ (ಕೆ.ಎಲ್.ಜಿ) ಬಂದರಂತೆ... ಸಿ.ಎಸ್.ವಾಸುದೇವ ರಾವ್ ಸರ್ (ಸಿ.ಎಸ್.ವಿ.) ಕೂಡ ಹೀಗೆ ಆಶ್ಚರ್ಯ ಸಂತೋಷ ಮಿಶ್ರಿತ ಧ್ವನಿಗಳು. ಬಿ.ಜಯರಾಮ್ ಸರ್ (ಬಿ.ಜೆ.ಆರ್), ಪಿ.ಜಿ.ಧ್ವಾರಕಾನಾಥ್ ಸರ್ (ಪಿ.ಜಿ.ಡಿ. ಸರ್) ಎಲ್ಲರೂ ಬಂದ ನಂತರ ಈಗ ಏನು ಮಾಡೋಣ ಅನ್ನೋ ಹೊತ್ತಿಗೆ ಹೆಚ್. ಕೆ.ಕುಮಾರ್ (ಹೆಚ್.ಕೆ.ಕೆ) ಸರ್ ಜೋರಾಗಿ ವಿಸಿಲ್ ಊದಿ ನಮ್ಮನ್ನು ಎಚ್ಚರಗೊಳಿಸಿ, comeon boys and girls standup in the line ಅಂದರು.. stand at ease,attention, take one arm distance ಅಂದ ತಕ್ಷಣ ಎಲ್ಲರೂ ಪುಳಕಿತರಾಗಿ ಹಳೆಯ ನೆನಪುಗಳು ಗರಿ ಕೆದರಿ ನಗಲಾರಂಭಿಸಿದರು. ಹಳೇ ಪದ್ಧತಿ ಪ್ರಕಾರ ಪಿ.ಜಿ.ಡಿ. ಒಂದು ಕಡೆ ಹಾಗೆ ೩ ಸೀನಿಯರ್ ಮೇಷ್ಟ್ರುಗಳು ಇನ್ನೊಂದು ಕಡೆ ನಿಂತರು.  ಪ್ರೇಯರ್ ಮುಗಿದ ತಕ್ಷಣgirls right about turn, make a single line ಅಂದರು. ಸಾಲಾಗಿ ಮತ್ತೆ ಸಭಾಂಗಣ ಸೇರಿದೆವು.   ತಲೆ ಎತ್ತಿ ನೋಡಿದೆ. ಮೇಲೆ ಮೂರನೆ ಅಂತಸ್ಥಿನಲ್ಲಿ ಫೋಟೊಗ್ರಾಫರ್ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದ.  ಹೀಗೆ ಅಲ್ಲವೆ ನಮಗೆ ಗೊತ್ತಿಲ್ಲದೆ ದೇವರೊಬ್ಬ ನಾವು ಮಾಡುವ ಕಾರ್ಯಗಳನ್ನೆಲ್ಲ ನಮಗರಿವಿಲ್ಲದೆ ಲೆಕ್ಕವಿಡುತ್ತಿದ್ದಾನೆ ಎನ್ನುವುದು ಅನ್ನಿಸಿತು ಆ ಕ್ಷಣಕ್ಕೆ.


ಅಂದಿನ ದಿನದ ಪ್ರಮುಖ ಘಟ್ಟ ನಡೆಯಬೇಕಿತ್ತು. ಸಹಪಾಠಿಗಳ ಎರಡು ತಿಂಗಳ ಸತತ ವಾಟ್ಸಾಪ್ ಸಂಭಾಷಣೆಯ ನಂತರ ಸುಂದರವಾದ ಸ್ಮರಣಿಕೆ ಫಲಕವನ್ನು ಅಣಿಗೊಳಿಸಿದ್ದರು.  ಸುಬ್ಬು, ಶ್ರೀನಿಧಿಯ ಅವಿರತ ಶ್ರಮದಿಂದಾಗಿ ಸ್ಮರಣಿಕೆಗಳು ಹಾಗೂ ಪಿ ಪಿ ಟಿ ಸ್ಲೈಡ್ಸ್ ಬಹಳ ಸುಂದರವಾಗಿ ತಯಾರಾಗಿದ್ದವು.  ಆಹ್ವಾನ ಪತ್ರಿಕೆಯಿಂದ ಹಿಡಿದು ಊಟದ ವ್ಯವಸ್ಥೆಯವರೆಗೂ ಎಲ್ಲವನ್ನು ಆರ್ಗನೈಸಿಂಗ್ ಕಮಿಟಿ ವಾಟ್ಸಾಪ್ ನಲ್ಲಿ ಹಗಲು ರಾತ್ರಿಯೆನ್ನದೆ ಸಂಭಾಷಿಸಿ ತೀರ್ಮಾನಿಸಿದ್ದರು.  ಹಾರ, ಶಾಲು, ಸ್ಮರಣಿಕೆಗಳನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟುಕೊಂಡಿದ್ದರು.  ನಂತರ ಕಾರ್ಯಕ್ರಮಕ್ಕೆ ಮುನ್ನುಡಿಯನ್ನು ಹೇಳಿ ಗುರು ನಮನದ ಮಹತ್ವ ಹಾಗೂ ಅವಶ್ಯಕತೆಯನ್ನು ತಿಳಿಸಿ ಸ್ವಾಗತ ಭಾಷಣಕ್ಕೆ ಅನುವು ಮಾಡಿಕೊಡಲಾಯಿತು.  ಪ್ರಾಥಮಿಕ ಶಾಲೆಯ ಗುರುಗಳನ್ನು ಶುಭ (ಶಾಲೆಯ ದಿನಗಳಲ್ಲಿ ಕಡ್ಡಿ ಶುಭಾ ಎಂಧು ಹೆಸರಾಗಿದ್ದವಳು) ಸ್ವಾಗತಿಸಿದಳು.  ಪ್ರೌಢಶಾಲೆಯ ಗುರುಗಳನ್ನು ಸುಚಿಥಾ ಸ್ವಾಗತಿಸಿದಳು. ಒಬ್ಬೊಬ್ಬ ಗುರುಗಳ ವಿಶಿಷ್ಟ ಗುಣವಾಚಕಗಳನ್ನು ಹೇಳುತ್ತಾ ಸ್ವಾಗತಿಸಿದಾಗಲೆಲ್ಲ ಕರತಾಡನ ಮುಗಿಲು ಮುಟ್ಟಿತ್ತು.  ವಿಧ್ಯಾರ್ಥಿಗಳೆಲ್ಲ ರೋಮಾಂಚನಗೊಂಡು ಎದ್ದು ನಿಂತು ಹರ್ಷಿಸಿದರು.  ಹಿರಿಯ ಗುರುಗಳಾದ ಪಿಜಿದಿ ಸರ್, ಲಲಿತಮ್ಮ ಮೇಡಮ್, ಎಮ್.ಆರ್.ಯು. ಮೇಡಮ್, ನಿರ್ಮಲ ಮಿಸ್, ಸಿಎಸ್ವಿ ಅವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಯಾವ ಕೆಲಸಕ್ಕಾದರು ಸೈ ಎಂದು ನಿಲ್ಲುವ ನಮ್ಮ ಸಹಪಾಠಿ ಅರವಿಂದ ನಾಯಕ್ ಹಾಗೂ ಡಾ. ಲೋಕೇಶ್ ಪ್ರಾರ್ಥನೆಯನ್ನು ನಡೆಸಿಕೊಟ್ಟರು.  ಅಷ್ಟು ಹೊತ್ತಿಗೆ ಸುಬ್ಬು PPTಯನ್ನು ಬಿಳೀ ಪರದೆ ಮೇಲೆ ಪ್ರದರ್ಶಿಸಲು ಅನುವು ಮಾಡಿ ಕುಳಿತಿದ್ದ.

                                            ಜೀವನದ ಪಯಣದಲ್ಲಿ ಹಿಂತಿರುಗಿ ನೋಡಿದಾಗ ಹಲವಾರು ಗಳಿಕೆಗಳು ಉಳಿಕೆಗಳು ನೆನಪಾಗುತ್ತವೆ. ಕಾರ್ಯಕ್ರಮದ ಆರಂಭದಲ್ಲಿ ಈ ಪಯಣದಲ್ಲಿ ನಮ್ಮನ್ನು ಅಗಲಿದ ಹಲವಾರು ಪ್ರಾಥಮಿಕ ಶಾಲೆಯ ಹಾಗೂ ಪ್ರೌಢಶಾಲೆಯ ಗುರು ಮಹೋದಯರನ್ನು ನೆನೆಸಿ ಸರ್ವಶಕ್ತನು ಅವರೆಲ್ಲರ ಆತ್ಮಕ್ಕೆ ಶಾಂತಿ ನೀಡುವಂತೆ ಸಭಿಕರೆಲ್ಲರೂ ಒಂದು ನಿಮಿಷ ಮೌನಾಚರಣೆ ಸಲ್ಲಿಸಿದರು.

                                                ನಮ್ಮ ಶಾಲೆಯ ಹಲವಾರು ವಿದ್ಯಾರ್ಥಿಗಳು ವಿದೇಶದಲ್ಲಿ ನೆಲೆಸಿದ್ದಾರೆ ಅವರ ಜೀವನವನ್ನು ಕಂಡು ಕೊಂಡಿದ್ದಾರೆ.  ವಿಪರ್ಯಾಸವೆಂದರೆ ಅತಿ ಪ್ರತಿಭಾನ್ವಿತರೆಲ್ಲ ವಿದೇಶದ ಪಾಲಾಗಿದ್ದಾರೆ.  ಆದರೂ ನಮ್ಮ ವಿದ್ಯಾರ್ಥಿಗಳು / ಸಹಪಾಠಿಗಳು ಎಲ್ಲಿದ್ದರೂ ವಿದ್ಯಾ ವರ್ಧಕ ಸಂಘದ ಹೆಸರನ್ನು ಎಲ್ಲೆಡೆಯೂ ವಿಖ್ಯಾತಗೊಳಿಸುವುದರಲ್ಲಿ ಅನುಮಾನವಿಲ್ಲ ಅನ್ನಿಸಿತು.  ವಿದೇಶದಲ್ಲಿ ನೆಲೆಸಿದ ಐದಾರು ಜನ ವಿಧಾರ್ಥಿಗಳು ಗುರುವಂದನೆ ಕಾರ್ಯಕ್ರಮಕ್ಕೆ ಅಭಿನಂದನೆ ಸಲ್ಲಿಸಿದ ದೃಶ್ಯಾವಳಿಯನ್ನು ರವಾನಿಸಿದ್ದರು. ಆ ದೃಶ್ಯದ ತುಣುಕುಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.  ಈ ವಿಡಿಯೋ ಮೂಲಕ ಕಾರ್ಯಕ್ರಮಕ್ಕೆ ಶ್ರಮಿಸಿದ ಎಲ್ಲರಿಗು ಧನ್ಯವಾದ ತಲುಪಿಸುವ ಜೊತೆಗೆ, ಶಾಲೆ ಕಲಿಸಿದ ಪಾಠ, ಶಿಸ್ತು ಎಲ್ಲವನ್ನು ಕೃತಜ್ಞತಾಭಾವದಿಂದ ನೆನೆಸಿದರು.  ಅಚ್ಚು ಮೆಚ್ಚಿನ ಗುರುಗಳಿಗೆ ವಂದನೆಗಳನ್ನು ಸಲ್ಲಿಸಿದರು. ನಮ್ಮ ಸಹಪಾಠಿಗಳು ದೂರ ಉಳಿದುದಕ್ಕೆ ಗುರುವಂದನೆಯಿಂದ ವಂಚಿತರಾಗದಂತೆ ಎಫ್.ಬಿ. ಲೈವ್ ವಿಡಿಯೋ, ಫೋಟೋಗಳನ್ನು ನಿರಂತರವಾಗಿ ರವಾನಿಸುತ್ತಿದ್ದರು.  ಸಾಧ್ಯವಾದಷ್ಟು ಸಮುದ್ರದಾಚೆಗಿನ ನಮ್ಮ ಶಾಲೆಯ ಮಿಡಿತಗಳನ್ನು ಒಂದುಗೂಡಿಸುವ ಪ್ರಯತ್ನದಲ್ಲಿ ಭಾಗಶ: ಕಾರ್ಯಕ್ರಮದ ಆಯೋಜಕರೆಲ್ಲ ಯಶಸ್ವಿಯಾದರು ಎಂದೇ ಹೇಳಬೇಕು.

ನಮ್ಮ ಕಾರ್ಯಕ್ರಮದ ಮುಖ್ಯ ಅಂಗವಾದ ಗುರುವಂದನೆ ಮೊದಲಿಗೆ... ಲಲಿತಮ್ಮ ಟೀಚರ್ ಅವರಿಂದ ಪ್ರಾರಂಭಗೊಂಡಿತ್ತು.  ನಮಗೊಂದು ಅಚ್ಚರಿ ಕಾದಿತ್ತು. ಗೌರವಾರ್ಪಣೆ ಸ್ವೀಕರಿಸುವ ಮುನ್ನ ಲಲಿತಮ್ಮ ಮಿಸ್, ರಾಜಮ್ಮ ಮಿಸ್ ಇಬ್ಬರೂ ಸೇರಿ "ಸೊಬಗಿನ ಸೆರೆಮನೆಯಾಗಿಹೆ ಇಂಧು ಚೆಲುವೆ ಸರಸ್ವತಿಯೇ" ಹಾಡನ್ನು ಸುಶ್ರಾವ್ಯವಾಗಿ ಹಾಡಿದರು. ಒಬ್ಬರು ೮೦ ವರ್ಷದ ಶಾಂತಿ ಮುಗಿಸಿದವರು, ಇನ್ನೊಬ್ಬರು ಅದನ್ನೂ ದಾಟಿ ೮೫ ಹರೆಯದ ಟೀಚರ್ ಗಳ ಜೀವನೋತ್ಸಾಹ ದಂಗಾಗಿಸಿತು. ಶೃತಿ ಆಪ್ ನನ್ನು ಸಿದ್ಧಪಡಿಸಿ ಸ...ಪ...ಸ... ಗುನುಗಿ ಹಾಡಿ ನಿರೂಪಿಸಿದ ನಮ್ಮ ಟೀಚರ್ಗಳನ್ನು ನೋಡಿ ಮೂಕವಿಸ್ಮಿತರಾದೆವು. ಶೃತಿ, ತಾಳದಲ್ಲಿ ಕೊಂಕಿಲ್ಲ ಧ್ವನಿಯಲ್ಲಿ ನಡುಕವಿಲ್ಲ.... ಇಂದಿಗೂ ಎಂದೆಂದಿಗೂ ಮಾದರಿಯಾಗಬಲ್ಲ ಟೀಚರ್ಸ್ ಇವರೇ ಅಲ್ಲವೇ ಎನಿಸಿಬಿಟ್ಟಿತ್ತು.

                                                               ಲಲಿತಮ್ಮ ಮಿಸ್, ರಾಜಮ್ಮ ಮಿಸ್, ಮೀನಾಕ್ಷಿ ಮಿಸ್, ನಿರ್ಮಲ ಮಿಸ್, ಜಲಜಾಕ್ಷಿ ಮಿಸ್, ನಾಗಮಣಿ ಮಿಸ್, ಲೀಲಾವತಿ ಮಿಸ್ ಹೀಗೆ ಗೌರವಾರ್ಪಣೆಯನ್ನು ಸ್ವೀಕರಿಸಿದರು. ಭಾವುಕರಾಗಿದ್ದರು, ಆಶೀರ್ವದಿಸಿ ಹಿತವಚನಗಳನ್ನು, ನೀಡಿ ಕಥೆಗಳನ್ನೂ ಹೇಳಿದರು.  ಆನಂತರ ಪ್ರೌಢಶಾಲೆಯಿಂದ, ಸಿ.ಎಸ್.ವಿ. ಸರ್, ಎಮ್.ಆರ್.ಯು.ಮ್ಯಾಂ , ಕೆ.ಎಲ್.ಜಿ.ಸರ್, ಪಿ.ವಿ.ಆರ್ ಮ್ಯಾಂ, ಬಿ.ಜೆ .ಆರ್. ಸರ್, ಹೆಚ್.ಕೆ.ಕೆ ಸರ್ ಕೊನೆಯದಾಗಿ ಪಿಜಿಡಿ ಸರ್ ಅವರನ್ನು ಗೌರವಿಸಿದೆವು. ಸಿ.ಎಸ್.ವಿ, "ಆನೆ" ಸಿಗಲಿ ಅಂದರು, ಅಂದರೆ ಗಾಬರಿ ಆಗಬೇಡಿ ಸಾಕೋದು ಹೇಗೆ ಅಂತ..."ಆರೋಗ್ಯ", "ನೆಮ್ಮದಿ" ಇದು ಸಿಕ್ಕರೆ ನಿಜ ಆನೆ ಬೇಕಾದರೂ ಸಾಕಬಹುದು. ಎಮ್.ಆರ್.ಯು ಹಾಡು ಹೇಳಿದರು, ಕೆ.ಎಲ್.ಜಿ ಹಿತವಚನ ನುಡಿದರು, ಪಿ.ವಿ.ಆರ್ ಕೂಡ ಸಂತೋಷ ಪಟ್ಟರು, ಬಿ.ಜೆ. ಆರ್ ಮತಾಡಿ  ನಮ್ಮನ್ನ ನಗಿಸಿದರು.... ಎಷ್ಟೇ ಆದ್ರೂ ಕಲಾವಿದನಲ್ಲವೇ... ಹೆಚ್.ಕೆ.ಕೆ ತುಂಬ ಸಂತೋಷ ಪಟ್ಟಿದ್ದಕ್ಕೆ ಸಾಕ್ಷಿ ಅವರ ಸ್ಟೇಟಸ್ ಹಾಗೂ ಫೇಸ್ ಬುಕ್ ಫೋಟೋಗಳು.  ಕೊನೆಯದಾಗಿ ಪಿಜಿಡಿ ಸರ್ ಗೌರವಾರ್ಪಣೆ ಸ್ವೀಕರಿಸಿ, ಶಾಲೆ ನಡೆದು ಬಂಧ ದಾರಿ ನೆನೆಸಿದರು, ನಮ್ಮ ಶಾಲೆಯ ಮಕ್ಕಳು ಬೆಳೆದಿರುವ ಪರಿ ನೋಡಿ ಸಂತೋಷಿಸಿದರು ಅಭಿನಂದಿಸಿದರು. ಅದೇ ಮಾತಿನ ಬಿಗು ಇಂದಿಗೂ ಚಾಲ್ತಿಯಲ್ಲಿದೆ.  ಎದುರಿಗೆ ನಿಂತರೆ ಯಾವ ಡಾಕ್ಟರ್, ಲಾಯರ್ ಆಗಿದ್ದರೂ ವಿಧ್ಯಾರ್ಥಿಗಳಿಗೆ ಕಾಲು ನಡುಗುವುದರಲ್ಲಿ ಸಂದೇಹವಿಲ್ಲ. ಆ ಕಟ್ಟು ನಿಟ್ಟು ಮಾತು, ನೇರ ದಿಟ್ಟ ನಿರಂತರ ಅನ್ನೋ ಹಾಗೆ ದ್ವಾರಕಾನಾಥ್ ಸರ್ ಗೆ ಸರಿಸಾಟಿಯಿಲ್ಲ.   ಇದರೊಂದಿಗೆ ಕಾರ್ಯಕ್ರಮದ ಉತ್ತಮ ನಿರೂಪಣೆಗಾಗಿ ಶೀಲ ಪುಷ್ಪಗುಚ್ಛವನ್ನು ಪಿಜಿಡಿ ಅವರ ಹಸ್ತದಿಂದ ಪಡೆದು ಜೀವನ ಪಾವನವೆಂದು ಧನ್ಯತಾ ಭಾವದಲ್ಲಿ ತೇಲಾಡುತ್ತಿದ್ದಳು.

                                                          ಗುರುಗಳೆಲ್ಲರೂ ಸಹಪಾಟಿಗಳೊಂದಿಗೆ ಬೆರೆತು ನಕ್ಕು ನಲಿದು ಅವರ ಜೀವನದ ಹಾದಿಗಳನ್ನು ವಿಚಾರಿಸುತ್ತಾ ಕೆಲ ಕಾಲ ಕಳೆದರು.  ನಂತರ ರುಚಿಕಟ್ಟಾದ ಭೋಜನವನ್ನು ಎಲ್ಲರೂ ಸವಿದರು. ಶಾಲೆಯ ಆವರಣದಲ್ಲೇ ಪಾರ್ಥಸಾರಥಿ ಸಭಾಂಗಣದಲ್ಲಿ ಗುರುವಂದನೆ ಮುಗಿಸಿ ಪಕ್ಕದ ವೇದಿಕೆಯಲ್ಲಿ ಎಲ್ಲರೂ ಭೋಜನ ಸವಿದು ನೆನಪುಗಳನ್ನು ಮೆಲುಕು ಹಾಕುತ್ತಾ ಮುನ್ನಡೆದರು. ಎಫ್.ಬಿ. ವಾಟ್ಸ್ ಆಪ್ಗಳು ಭಾವಚಿತ್ರದಿಂದ ತುಂಬಿತ್ತು. ಕಾರಣಾಂತರಗಳಿಂದ ಬರಲಾಗದ ಗುರುಗಳ ಗೌರವಾರ್ಪಣೆಯನ್ನು ಮನೆಗೇ ತಲುಪಿಸಲು ಸಿದ್ಧತೆಗಳು ನಡೆಯುತ್ತಿತ್ತು. 

ಎಲ್ಲರೂ ನಿರ್ಗಮನ....
ನಮ್ಮ ಶಾಲೆ.....
ಸವಿ ಸವಿ ನೆನಪು ಸಾವಿರ ನೆನಪು.....
ನಮ್ಮ ಸಹಪಾಠಿಗಳಾದ, ಸುಬ್ರಹ್ಮಣ್ಯ, ರಾಜೀವ, ಅರವಿಂದ ನಾಯಕ್, ಪ್ರಸನ್ನ ನಮ್ಮ ಅಚ್ಚುಮೆಚ್ಚಿನ ಗುರುಗಳಾದ ಎನ್. ಸತ್ಯಪ್ರಕಾಶ್ (ಎನ್.ಎಸ್.ಪಿ) ಸರ್, ಹಾಗೂ ಆರ್. ಲಕ್ಷ್ಮೀನಾರಾಯಣ ಸರ್ (ಆರ್.ಎಲ್.ಎನ್), ಕೆ. ನಾಗರಥ್ನ ಮ್ಯಾಂ (ಕೆ.ಎನ್.), ಕೆ.ವಿ.ನಾಗರಾಜ್ ಸರ್ (ಕೆ.ವಿ.ಎನ್) ಅವರ ನಿವಾಸಕ್ಕೆ ಗೌರವಾರ್ಪಣೆಯನ್ನು ಕೊಂಡೊಯ್ದು ತಲುಪಿಸಿ ಆಶೀರ್ವಾದವನ್ನು ಪಡೆದರು. 

For more photos please click on this link https://youtu.be/RKTgyR8NeYs


Comments

  1. ತುಂಬಾ ಚೆನ್ನಾಗಿದೆ ಬರಹ ಶೀಲಾ....

    ReplyDelete
  2. ತುಂಬಾ ಚೆನ್ನಾಗಿ ಮೂಡಿ ಬಂದ ಬರಹ , ಶೀಲಾ ಬಹುಮುಖ ಪ್ರತಿಭೆ - ಉಮೇಶ್

    ReplyDelete
  3. ನಿಜಕ್ಕೂ ಒಂದು ಅನುಕರಣೀಯ ಹಾಗೂ ಶ್ಲಾಘನೀಯ ಕಾರ್ಯಕ್ರಮ. ಅಷ್ಟೇ ಶ್ಲಾಘನೀಯ ನಿರೂಪಣೆ. ಓದುತ್ತಿದ್ದಂತೆ ನನ್ನ ಮನಸ್ಸೂ ಸಹ ನನ್ನ ಶಾಲಾ ದಿನಗಳಿಗೆ ಹಿಂದೋಡಿತ್ತು. ನಮ್ಮ ಇಂದಿನ ಏಳಿಗೆಗೆ ಕಾರಣೀಭೂತರಾದ ಆ ಗುರುವೃಂದಕ್ಕೆ ಎಷ್ಟು ವಂದಿಸಿದರೂ ಸಾಲದು.

    ReplyDelete
  4. This comment has been removed by the author.

    ReplyDelete
  5. ಇದೊಂದು ಚೆಂದದ ವರದಿ. ಹೃದಯ ಸ್ಪರ್ಶಿಸುವ ಭಾವನೆಗಳು,ಸನ್ನಿವೇಶಗಳು. ಓದಿದವರಿಗೆಲ್ಲರಿಗೂ ತಮ್ಮ ಗುರುಗಳ ನೆನೆಪು ತರುತ್ತದೆ. ಸಾಧ್ಯವಾದರೆ ಭೇಟಿ ಅಥವಾ ಸನ್ಮಾನ ಮಾಡುವ ಹಂಬಲ ತರುತ್ತದೆ. ಧನ್ಯವಾದಗಳು ಶ್ರೀಮತಿ ಶೀಲಾ ಜಿ

    ReplyDelete
  6. ಬಹಳ ಚೆನ್ನಾಗಿ ವರ್ಣಿಸಲಾಗಿದೆ ಗುರುವಿನ ಮೇಲಿನ ಗೌರವ. ಅಭಿನಂದನೆಗಳು.

    ReplyDelete

Post a Comment