ಸಿಡ್ನಿ ಕನ್ನಡ ಶಾಲೆಯ ವಾರ್ಷಿಕೋತ್ಸವ

ಸಿಡ್ನಿ ಕನ್ನಡ ಶಾಲೆಯ ವಾರ್ಷಿಕೋತ್ಸವ

 ವರದಿ - ಶ್ರೀ ದತ್ತು ಕುಲಕರ್ಣಿ

PHOTOS: https://photos.app.goo.gl/N4S7Y5hJsSHBgT8G6



ಸಿಡ್ನಿ ಕನ್ನಡ ಶಾಲೆಯ ವಾರ್ಷಿಕೋತ್ಸವ ಕಳೆದರ ವಾರ ಡಿಸೆಂಬರ್ 8ರಂದು ಸಿಡ್ನಿಯ ತುಂಗಾಬಿ ಶಾಲೆಯ ಸಭಾಂಗಣದಲ್ಲಿ ಕನ್ನಡ ಶಾಲೆಯ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ವಾರ್ಷಿಕೋತ್ಸವದ ಅಂಗವಾಗಿ ಶಾಲಾ ಮಕ್ಕಳಿಂದ ಹಾಡು ನೃತ್ಯಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಿಡ್ನಿಯ ಹೆಸರಾಂತ ಆಹಾರ ತಜ್ಞೆ  ರಾಜಿ ಜಯದೇವ್ ಮತ್ತು ಸಂಧ್ಯಾ ಭಜನಾ ಮಂಡಳಿಯ ಸ್ಥಾಪಕ ಶ್ರೀ ಅಶೋಕ್ ಕುಮಾರ್ ಅವರು ಅತಿಥಿಗಳಾಗಿ ಆಗಮಿಸಿದ್ದರು. 




ಅತಿಥಿಗಳಿಬ್ಬರು ತಮ್ಮ ಭಾಷಣದಲ್ಲಿ ಮಕ್ಕಳಿಗೆ ಕಿವಿಮಾತು ಹೇಳುತ್ತಾ ಮಕ್ಕಳು ಕನ್ನಡ ಕಲಿಕೆಯಲ್ಲಿ ತೋರಿಸುತ್ತಿರುವ ಆಸಕ್ತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಹಾಗೆಯೆ ಪ್ರಾಂಶುಪಾಲರಾದ ಶ್ರೀ ನಾರಾಯಣ ಕನಕಪುರ ಮತ್ತು ಶ್ರೀಮತಿ ರಾಜಿಯವರ ನಿಸ್ವಾರ್ಥ ಸೇವೆಯನ್ನು ಹಾಗೂ ಇನ್ನುಳಿದ ಶಿಕ್ಷಕರ ಸೇವಾ ಮನೋಭಾವನೆಯನ್ನು ಕೊಂಡಾಡಿದರು. ನಂತರ ಅತಿಥಿಗಳು ಶಾಲೆಯ ಉತ್ತಮ ಮಕ್ಕಳಿಗೆ ಬಹುಮಾನ ವಿತರಣೆಯನ್ನು ಮಾಡಿದರು. ಆಮೇಲೆ ಎಲ್ಲರೂ ಕಾತರದಿಂದ ಕಾಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾದವು. ಮೊದಲಿಗೆ ಆರ್ನಾ ಕುಲಕರ್ಣಿ ಕನ್ನಡ ನಾಡು ಚಂದ ಕನ್ನಡ ಭಾಷೆ ಅಂದ ಎನ್ನುವ ಸುಮಧುರ ಹಾಡನ್ನು ಹೇಳಿದಳು. ಅಂತರ ಸ್ಮಯಾ ಮತ್ತು ಮನಸ್ವಿ ಶಿಶು ಗೀತೆಗಳು ಹಾಡಿ ರಂಜಿಸಿದರು. 

ಮುಂದೆ ರಾಜ್ವಿಕಾ ತಾಯಿ ಶಾರದೆ ಲೋಕ ಪೂಜಿತೆ ಎನ್ನುವ ಭಕ್ತಿಗೀತೆಯನ್ನು ಕರೋಕೆ ಯಲ್ಲಿ ಹಾಡಿದಳು. ನಂತರ ಆತ್ಮಿಕಾ ಹೇಳಿದ ಮತ್ತೊಂದು ಶಾರದೆಯ ಮೇಲಿನ ಹಾಡು ಹೇ ಶಾರದೆ ಕೂಡ ಕರೋಕೆಯಲ್ಲಿ ಚೆನ್ನಾಗಿ ಮೂಡಿ ಬಂತು. ಆರವಿ ಹಾಡಿದ ಗುಡಿಯಲ್ಲಿರುವ ಶಿಲೆಗಳೆಲ್ಲ ಬಹಳ ಸುಶ್ರಾವ್ಯವಾಗಿತ್ತು. ಅಷ್ಟೇ ಅಲ್ಲ ನಂತರ ಆದ್ವಿಕ್ ಅಂಗಡಿ ತಬಲ ನುಡಿಸುತ್ತಾ ನಾಲಿಗೆಯಲಿ ನಲಿಯುವದು’ ಎನ್ನುವ ಭಕ್ತಿಗೀತೆಯನ್ನು ಬಹಳ ಚೆನ್ನಾಗಿ ಪ್ರಸ್ತುತಪಡಿಸಿದನು. ಇಂಪನ ಹಾಡಿದ ಅಕ್ಕಮಹಾದೇವಿಯ ವಚನ ಬಹಳ ಮುದ್ದಾಗಿತ್ತು. 

ನಂತರ ಪುಟಾಣಿ ಮಕ್ಕಳು ತಮ್ಮ ಭಾಷಣ ಕಲೆಯನ್ನು ತೋರಿಸಿದರು. ಯಶ್ ರವಿ ಕನ್ನಡ ಮತ್ತು ಕರ್ನಾಟಕದ ಬಗ್ಗೆ ಮಾತನಾಡಿದರೆ ವಿರಾಜ್ ನಮ್ಮ ಕನ್ನಡ ಶಾಲೆಯ ಬಗ್ಗೆ ಆಕರ್ಷಕವಾಗಿ ಮಾತನಾಡಿದನು. ಇದಾದ ನಂತರ ದೃತಿ ಕುಲಕರ್ಣಿ ಮತ್ತು ಆರೋಹಿ ದೀಕ್ಷಿತ್ ನೀರು ಉಳಿಸಿ ಮಣ್ಣು ಉಳಿಸಿ ಎನ್ನುವ ಸಂದೇಶವನ್ನ ತಮ್ಮ ನೃತ್ಯದ ಮೂಲಕ ಬಹಳ ಸುಂದರವಾಗಿ ತೋರಿಸಿದರು. ಹಾಗೆಯೇ ಲಕ್ಷ, ಚಾರ್ವಿ, ಶನಯ, ವಿನಾಯಕ, ಹೊನಲ್, ಮತ್ತು ಅವನಿ ಹಾಡು ಸಂತೋಷಕ್ಕೆ, ಮುಂತಾದ ಹಾಡುಗಳಿಗೆ ಅಮೋಘ ನೃತ್ಯ ಮಾಡಿ ಎಲ್ಲರಿಂದ ಚಪ್ಪಾಳೆ ಕಟ್ಟಿಸಿಕೊಂಡರು. ಇವರ ಈ ಕಣ್ಮನ ಸೆಳೆದ ಪ್ರದರ್ಶನಕ್ಕೆ ಒನ್ಸ್ ಮೋರ್ ಕೋರಿಕೆಯೂ ಬಂದಿತು. ನಂತರ ಕುಶಾಗ್ರ ಹಾಡಿದ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಕರೋಕೆಯಲ್ಲಿ ಸುಂದರವಾಗಿ ಮೂಡಿ ಬಂತು. ಲಕ್ಷ ಕುಗೇರಿ ಕೀಬೋರ್ಡ್ ವಾದನ ಎಲ್ಲಾ ಪ್ರೇಕ್ಷಕರ ಮನಸಳೆಯಿತು. ಆಮೇಲೆ ಮುದ್ದು ಬಾಲಕಿ ಆಧ್ಯ ಲಂಕಾ ಗುಮ್ಮನ ಕರೆಯದಿರೆ ಹಾಡಿಗೆ ನೃತ್ಯ ಮಾಡಿದಳು. ಸಮುದ್ಯತಾ ಕುಲಕರ್ಣಿ ಏಕಪಾತ್ರಾಭಿನಯವನ್ನು ಮಾಡಿ ತನ್ನಲ್ಲಿರುವ ಹೊಸ ಪ್ರತಿಭೆಯನ್ನು ತೋರಿಸಿದಳು. ನಂತರ ಅಣ್ಣ ತಂಗಿಯರಾದ ಜಯಂತ್ ಮತ್ತು ಶ್ರೇಯಾ ಮುಗ್ಧ ಹಾಸ್ಯ ತುಂಬಿದ ಒಂದು ಕಿರು ಪ್ರಸ್ತುತಿಯೊಂದಿಗೆ ಜನರನ್ನ ನಗಿಸಿದರು. 

ಮೈರಾ, ಮನಸ್ವಿ ಮತ್ತು ಧೃವರಾಜ್ ಮಾಡಿದ ಅಡವಿ ದೇವಿಯ ಕಾಡು ಜನಗಳ ಹಾಡು ನೃತ್ಯ ರೂಪದಲ್ಲಿ ಮೂಡಿಬಂದು ಕಾಡು -ಪ್ರಕೃತಿ ಗಳ ಮಹತ್ವದ ಸಂದೇಶವನ್ನು ಸಾರಿತು. ಹಾಗೆಯೇ ಅದಿತಿ ಮತ್ತು ಯಶಸ್ವಿ ಕನ್ನಡವೇ ನಮ್ಮಮ್ಮ ಹಾಡಿಗೆ ನೃತ್ಯ ಮಾಡಿ ಎಲ್ಲರನ್ನೂ ರಂಜಿಸಿದರು. ಇದಾದ ನಂತರ ಸ್ವರ ‘ಚಂದ್ರಚೂಡ ಶಿವ’ ಹಾಡಿಗೆ ತನ್ನ ವಯಸ್ಸಿಗೂ ಮೀರಿದ ಪ್ರಬುದ್ಧ ಭರತನಾಟ್ಯದ ಪ್ರದರ್ಶನವನ್ನು ಮಾಡಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದಳು ನಂತರ ನಮ್ಮ ಸಿಡ್ನಿಯ ದೈತ್ಯ ಬಾಲ ಪ್ರತಿಭೆ ಶಿವಾಂಗ ತನ್ನ ತಂದೆಯೊಡನೆ ಟುವ್ವಿ ಟುವ್ವಿ ಹಾಡನ್ನು ಹಾಡಿ ಎಲ್ಲರನ್ನ ಸಂಭ್ರಮಿಸುವಂತೆ ಮಾಡಿದನು. ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂತು. 

ಕೊನೆಗೆ ಶಾಲೆಯ ಎಲ್ಲಾ 120 ಮಕ್ಕಳು ಸೇರಿ ನಾಲ್ಕು ಶಿಶು ಗೀತೆಗಳನ್ನು ಹಾಡಿ ಸಮೂಹದಲ್ಲಿ ಸಂಭ್ರಮಿಸಿದರು. ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿಯರಾದ ಶ್ರೀಮತಿ ಶಿಲ್ಪಶ್ರೀ ಮತ್ತು ರಚನಾ ಅವರು ಬಹಳ ಚೆನ್ನಾಗಿ ನಡೆಸಿಕೊಟ್ಟರು. ಒಟ್ಟಿನಲ್ಲಿ ಈ ಕಾರ್ಯಕ್ರಮ ಶಾಲೆಯ ಮಕ್ಕಳಿಗೆ ಹಾಗೂ ಪಾಲಕರಿಗೆ ಬಹಳ ಮುದ ಕೊಟ್ಟಿತು. 

Comments