ಆಸರೆ ಮನೆ - 3

 ಆಸರೆ ಮನೆ - 3

ಲೇಖನ -  ದಿ||  ಶ್ರೀಮತಿ “ಸುಮಿತ್ರಾ ರಾಮಣ್ಣ


ಇಲ್ಲಿಯವರೆಗೆ ...... 

ಭಾಗ  -  1

ಭಾಗ  -  2


ಆಸರೆ ಮನೆ - 3 ...........

..........ಜಾನಕಿ  ಅಡುಗೆ ಮನೆಯಲ್ಲಿ  ಘಮಘಮಿಸುವ ಕೇಸರಿಭಾತ್,  ಆಲೂಗಡ್ಡೆ ಬೋಂಡಾ ತಯಾರಿಸಿದಳು. ಕಲ್ಯಾಣಿ ಸಣ್ಣಂಚಿನ ಹಸಿರು ಬಣ್ಣದ ಮೈಸೂರ್ ಕ್ರೇಪ್ ಸೀರೆ ಉಟ್ಟು ನೀಳ ಜಡೆಗೆ ಮಲ್ಲಿಗೆ ಕನಕಾಂಬರ ಮುಡಿದಳು. ಅವಳಿಗೆಂದೇ ರಂಗನಾಯಕಮ್ಮನವರು  ಎರಡೆಳೆ  ಮುತ್ತಿನ ಸರ, ಎರೆಡೆರಡು ಮುತ್ತು. ಹಸಿರಿನ ಬಳೆ, ಸೀರೆಗೆ ಮ್ಯಾಚ್ ಆಗುವಂತೆ ಹಸಿರು ಮುತ್ತಿನ ಓಲೆ ಉಂಗುರ ಧರಿಸಿದ್ದಳು ಅಮ್ಮನ ಅಣತಿಯಂತೆ. 

ರಾಮನಾಥನಂತು ಮಗಳನ್ನು ಕಣ್ತುಂಬ ನೋಡಿದನು. ನೋಡಿ ದಣಿಯನು ಬಿರುಜು ಹೊಗಳಿಸಿ ಹಾದಿ ತಣಿಯನು ನಿಚ್ಚಲುಚಿತವ ಮಾಡಿ ತಣಿಯನು ''

ಎಂದು ಅಮ್ಮ ಹೇಳುತ್ತಿದ್ದ ಕುಮಾರವ್ಯಾಸ   ಭಾರತದ ಪದವನ್ನು ನೆನಪಿಸಿಕೊಂಡು ಓಡಾಡಿದ. ೧೧ ಗಂಟೆಯ ಮುಂಚೆಯೇ ಬಾಗಿಲಿನ ಒಳಕ್ಕೂ ಹೊರಕ್ಕೂ ಗಂಡ ಹೆಂಡತಿ ತಡಕಾಡಿದರು. ೧೧ ಗಂಟೆಗೆ ಸರಿಯಾಗಿ ಎರಡು ಆಟೋದಲ್ಲಿ ಭಟ್ಟರ ಸಂಸಾರ, ನಿರಂಜನ, ಶ್ರೀಕಾಂತ ಬಂದಿಳಿದರು.

ಹುಡುಗನನ್ನು ನೋಡಿದ ಕೂಡಲೆ ರಾಮನಾಥನ ಮನಸ್ಸು ತುಂಬಿ ಬಂದಿತು. ಭಟ್ಟರ ಆಯ್ಕೆ ತೃಪ್ತಿ ತಂದಿತು. ಅತ್ತೆ, ಮಾವ, ಅತ್ತಿಗೆ, ನಾದಿನಿ ಯಾರೂ ಇಲ್ಲದ್ದರಿಂದ ಹುಡುಗ ಗೆಳೆಯನೊಡನೆ ಬರಬೇಕಾಯಿತು.

ಗೆಳೆಯ ನಿರಂಜನ್ ನ ಜೊತೆ ಭಟ್ಟರ ಮನೆಗೆ ಬಂದು ಅಲ್ಲಿಂದ ಎಲ್ಲರೂ ರಾಮನಾಥನ ಮನೆಗೆ ಬಂದಿದ್ದರು. ಉಭಯ ಕುಶಲೋಪರಿ ಮಾತುಕತೆಯ ನಂತರ ಬಂದವರು ಕೈಕಾಲು ತೊಳೆದು ಫಲಾಹಾರಕ್ಕೆ ಸಿದ್ಧರಾದರು. ಕಲ್ಯಾಣಿ ಓದಿದ ಹುಡುಗಿಯಾದರೂ ಸಂಕೋಚ ಸ್ವಭಾವದವಳು. ಬೆವರುವ ಕೈಗಳಿಂದ ನೀಡಿದ ಬೋಂಡದೊಡನೆ ಬೆಳ್ಳಿಯ ಬಟ್ಟಲ ಗಸಗಸೆ  ಪಾಯಸ ಇನ್ನಿಲ್ಲದ ಸೊಗಸನ್ನು ನೀಡಿತು. ಸುಬ್ಬಾಭಟ್ಟರ ಹೆಂಡತಿಯೇ ಅತ್ತೆಯ ಸ್ಥಾನದಲ್ಲಿ ನಿಂತು ಕಲ್ಯಾಣಿಯ ಕೈ ಹಿಡಿದು ಪಕ್ಕದಲ್ಲಿ ಕೂರಿಸಿಕೊಂಡು ಹುಡುಗಿಯ ನಾಚಿಕೆ ಹೋಗುವಂತೆ ಹೆಸರು, ವಿದ್ಯಾಭ್ಯಾಸ ಮುಂತಾದ ಪ್ರಶ್ನೆ ಕೇಳಿ ಶ್ರೀಕಂಠನಿಗೂ ಕಲ್ಯಾಣಿಗೂ ಮೈಚಳಿ ಬಿಡುವಂತೆ ಮಾಡಿದರು. ಕಲ್ಯಾಣಿ ತನ್ನ ಸೊಗಸಾದ ಕಂಠದಲ್ಲಿ ''ಶ್ರೀಕಾಂತ ಎನಗಿಷ್ಟು ದಯಾಮಾಡೋ ತಂದೇಕಾಂತದಲಿ ನಿನ್ನ ಭಜಿಸುವ ಸೌಭಾಗ್ಯ'' ಎಂದು ಸುಶ್ರಾವ್ಯವಾಗಿ ಹಾಡಿದಾಗ ಸುಬ್ಬಾಭಟ್ಟರು ಹಾಸ್ಯವಾಗಿ ''ಏನಮ್ಮ ಕಲ್ಯಾಣಿ ಶ್ರೀಕಾಂತನ ಜೊತೆ ಏಕಾಂತವಾಗಿ ಮಾತನಾಡಬೇಕೆನಮ್ಮ ಹೇಳು ಸಂಕೋಚ ಪಡಬೇಡ'' ಎಂದರು. ಕಲ್ಯಾಣಿ ನಾಚಿಕೆಯಿಂದ ಕತ್ತು ಬಗ್ಗಿಸಿದಳು. ಅಂತೂ ಎಲ್ಲರ ಒಪ್ಪಿಗೆ ದೊರೆತು ಕಲ್ಯಾಣಿ ಶ್ರೀಕಾಂತರ ಮಾಡುವೆ ನಿಶ್ಚಯವಾಯಿತು. ಶ್ರೀಕಾಂತನ ಕಡೆ ನಿರಂಜನನನ್ನು ಬಿಟ್ಟರೆ ಅವರ ದೂರದ ಸಂಬಂಧಿ ಒಬ್ಬರು ದೊಡ್ಡಪ್ಪ ದೊಡ್ಡಮ್ಮ ಇದ್ದರು. ಇದುವರೆಗೂ ಅವರಿಂದ ಶ್ರೀಕಾಂತನಿಗೆ ಏನೇನು ನೆರವು, ವಾತ್ಸಲ್ಯ, ಪ್ರೀತಿ, ಕರುಣೆ ಏನೇನು ಸಿಕ್ಕಿರಲಿಲ್ಲವಾದರು ಮದುವೆಗೆ ಹಿರಿಯರಾಗಿ ಅವರನ್ನು ಕರೆಯಬೇಕೆಂದು ಸುಬ್ಬಾಭಟ್ಟರೇ ಹೇಳಿದ್ದರಿಂದ ಶ್ರೀಕಾಂತನೇ ತುಮಕೂರಿಗೆ ಹೋಗಿ ಅವರನ್ನು ಆಹ್ವಾನಿಸಿ ಬರುವುದೆಂದಾಯಿತು.

ಒಟ್ಟಿನಲ್ಲಿ ಮದುವೆ ಸರಾಗವಾಗಿ ನಡೆಯಲು ಬೇಕಾದ ಎಲ್ಲ ಸಿದ್ಧತೆಯೂ ನಡೆಯಿತು. ರಾಮನಾಥನ ಒಬ್ಬಳೇ ಮಗಳು ಕಲ್ಯಾಣಿಯ ಮದುವೆ ವಿಜೃಂಭಣೆಯಿಂದ ನಡೆಯಿತು. ಸಂಪೂರ್ಣ ಸಾಲಂಕೃತಳಾಗಿ ಕಲ್ಯಾಣಿ ಶ್ರೀಕಾಂತನ ಮನೆಮನ ತುಂಬಿದಳು. ಸುಬ್ಬಾಭಟ್ಟರ ಹೆಂಡತಿ, ಶ್ರೀಕಾಂತನ ದೊಡ್ಡಮ್ಮ ಇಬ್ಬರಿಗೂ ದೊಡ್ಡ ಅಂಚಿನ ಜರಿಯ ಸೀರೆಗಳ ಉಡುಗೊರೆಯಿಂದ ಬೀಗರು ಸಂತೃಪ್ತರಾದರು. ಬುಟ್ಟಿಯ ತುಂಬಾ ತಿಂಡಿ, ಕೈತುಂಬಾ ಉಡುಗೊರೆ ಹಿಡಿದು ಶ್ರೀಕಾಂತನ ದೊಡ್ಡಮ್ಮ, ದೊಡ್ಡಪ್ಪ ಊರಹಾದಿ ಹಿಡಿದರು. ಬಾಯುಪಚಾರಕ್ಕೂ ಮದುಮಕ್ಕಳನ್ನು ಮನೆಗೆ ಕರೆಯಲಿಲ್ಲ. ಮದುವೆಗಾಗಿ ಬೆಸೆದ ಸಂಬಂಧ ಛತ್ರದಲ್ಲೇ ಮುಗಿಯಿತು. ಇದು ಕಲ್ಯಾಣಿ-ರಾಮನಾಥರಿರಲಿ ಸುಬ್ಬಾಭಟ್ಟರು, ಶ್ರೀಕಾಂತನಿಗೂ ಬೇಸರ ತಂದ ಸಂಗತಿಯಾದರೂ ಯಾರೂ ಮಾತನಾಡುವಂತಿರಲಿಲ್ಲ. ಆದರೆ ನಿಜವಾಗಿ ಎಲ್ಲರಿಗೂ ಸಂತೃಪ್ತಿಯನ್ನು ಸಂತೋಷವನ್ನು ನೀಡಿದವನು ನಿರಂಜನ ಮಾತ್ರ. ರಾಮನಾಥನ ಮನೆಗೆ ಬಂದಿದ್ದ ಹೊರೆ ನೆಂಟರೆಲ್ಲ ಹೊರಟರು. ಕೆಲವರಿಗೆ ಮದುವೆ ಸಂತೋಷವನ್ನುಂಟು ಮಾಡಿದರೂ,ಕೆಲವರ ಗೊಣಗಾಟಕ್ಕೆ ಕಾರಣವಾಗಿದ್ದು ಶ್ರೀಕಾಂತನಂತಹ ಅನಾಥ ಹುಡುಗನಿಗೆ ತನ್ನ ಒಬ್ಬಳೇ ಮಗಳು ಲಕ್ಷ್ಮೀ ಪುತ್ರಿಯನ್ನು ಕೊಟ್ಟು ಮದುವೆ ಮಾಡಿದ್ದು ಅಸಹನೆಗೆ ಕಾರಣವಾಯಿತಾದರೂ ಎಲ್ಲರೂ ಕೈತುಂಬಾ ಬೆಲೆಬಾಳುವ ಉಡುಗೊರೆಗಳನ್ನು ತಿಂಡಿತೀರ್ಥಗಳನ್ನೂ ಪ್ರಯಾಣಕ್ಕೆ ಬೇಕಾದ ಟಿಕೆಟ್ ಗಳನ್ನು ಅವರವರ ಊರಿಗೆ ಸಲ್ಲುವಂತೆ ರಾಮನಾಥ ಏರ್ಪಾಡು ಮಾಡಿದ್ದ. ಸಮಾಧಾನ, ಅಸಮಧಾನಗಳ ನೆರಳು ಬೆಳಕಿನಲ್ಲಿ ಸಂದಣಿಯಿಂದ ತುಂಬಿದ್ದ ಮನೆ ಖಾಲಿಯಾಯಿತು. ಈಗ ನಿರಂಜನ ಗಂಟುಮೂಟೆ ಕಟ್ಟಿದ. ಶ್ರೀಕಾಂತನನ್ನು ಅಣ್ಣನಂತೆ. ಭಾವಿಸಿದ್ದ ನಿರಂಜನ ಕಲ್ಯಾಣಿಯನ್ನು 'ಅತ್ತಿಗೆ' ಎಂದೇ ಕರೆಯಲಾರಂಭಿಸಿದ. ಅವನ ಪ್ರೀತಿಯನ್ನು ಕಂಡು. ಮನೆಯವರೆಲ್ಲ ಮೂಕವಿಸ್ಮಿತರಾಗಿದ್ದರು.

*******

ಕಲ್ಯಾಣಿ ಶ್ರೀಕಾಂತರ ಹೊಸ ದಾಂಪತ್ಯ ಜೀವನ ಪ್ರಾರಂಭವಾಯಿತು. ನಿರಂಜನನನ್ನು ಮಾತ್ರ ಹೋಗಗೊಡದೆ ಕಲ್ಯಾಣಿ ನಿರಂಜನನನ್ನು ತನ್ನ ತಮ್ಮನೆಂದೇ ಭಾವಿಸಿ ತಮ್ಮಲ್ಲಿಯೇ ಬಲವಂತ ಮಾಡಿ ಉಳಿಸಿಕೊಂಡಳು. ಜಾನಕಿ-ರಾಮನಾಥರೂ ಕಲ್ಯಾಣಿ, ಶ್ರೀಕಾಂತರೊಡನೆ ನಿರಂಜನನನ್ನು ತಮ್ಮ ಮಗನೆಂದೇ ಭಾವಿಸಿದರು. ಒಟ್ಟಿನಲ್ಲಿ ಕಲ್ಯಾಣಿಯ ಮದುವೆಯೊಂದಿಗೆ ಮನೆ ತುಂಬಿದಂತಾಯಿತು. ರಾಮನಾಥನಿಗಿದ್ದ ಚಿಂತೆ  ಕಳೆದು ಹಗುರವಾಯಿತು ಮನಸ್ಸು. ಜಾನಕೀ ಮಾತ್ರ ಏನೊಂದು ತಿಳಿಯದೆ ನಿಶ್ಚಿಂತಳಾಗಿ ಎಂದಿನಂತೆ ಸಂಸಾರ ಚಕ್ರದಲ್ಲಿ ಸಿಲುಕಿದಳು. ನಿರಂಜನ-ಕಲ್ಯಾಣಿಯರ ಸ್ನೇಹ ಸಂಬಂಧ ಎಷ್ಟು ಹೊಂದಿಕೆಯಾಗಿತ್ತೆಂದರೆ ಹುಟ್ಟಿನಿಂದಿರುವ ರಕ್ತ ಸಂಬಂಧವೂ ಅಷ್ಟು ಚೆನ್ನಾಗಿ ಕೂಡಿ ಬರುತ್ತಿರಲಿಲ್ಲವೇನೋ?

ನೆಮ್ಮದಿಯ ದಿನಗಳು ಹೆಚ್ಚು ದಿನ ಉಳಿಯಲಿಲ್ಲ. ಎರಡು ಆಘಾತಗಳು ಕಲ್ಯಾಣಿಯ ಜೀವನದಲ್ಲಿ ಒಟ್ಟಿಗೆ ಬಂದಂತಾಯಿತು. ರಾಮನಾಥ ಮಗಳ ಒಳ್ಳೆಯ ದಿನಗಳನ್ನು ಕಂಡು ನೆಮ್ಮದಿಯೊಂದಿಗೆ ಒಂದು ದಿನ ಹೃದಯಾಘಾತದಿಂದ ಕಣ್ಮುಚ್ಚಿದ. ಕಲ್ಯಾಣಿ-ಜಾನಕಿಯರ ಬಾಳಿನಲ್ಲಿ ಮೊದಲ ಆಘಾತವಾಯಿತು, ನಿರಂಜನ ಒಬ್ಬ ಇದ್ದುದರಿಂದ ಶ್ರೀಕಾಂತ ಹೆಂಡತಿ-ಅತ್ತೆಯನ್ನು ಕೈಲಾದಷ್ಟು ಸಮಾಧಾನಿಸಿದ.

ಆದರೆ ವಿಧಿ ಕಲ್ಯಾಣಿಯ ಬಾಳಿನಲ್ಲಿ ಚದುರಂಗದಾಟವನ್ನೇ ಹೂಡಿತ್ತು. ಶ್ರೀಕಾಂತನ ಆಫೀಸಿನಲ್ಲಿ ಅವನಿಗೆ ಬಡ್ತಿ ಕೊಟ್ಟು ಮೂರು ವರ್ಷಗಳ ಅವಧಿಗೆ ಅಮೆರಿಕಕ್ಕೆ ಕಳುಹಿಸುವ ಆಜ್ಞೆ ಮಾಡಿದರು. ಶ್ರೀಕಾಂತನಿಗೂ ಸಂತೋಷವಾದರೂ ಮುಂದಿನ ವ್ಯವಸ್ಥೆ ಹೇಗೆಂಬ ಚಿಂತೆ ಕಾಡಿತು.

ಕಲ್ಯಾಣಿಗಂತು ದಿಕ್ಕೇ ತೋಚದಂತಾಯಿತು. ತಾಯಿಯನ್ನು ಬಿಟ್ಟ ತಾನು ಗಂಡನ ಜೊತೆ ಹೋಗುವಂತಿಲ್ಲ. ನಿರಂಜನನಿಗೆ ಮದುವೆ ಆಗಬೇಕು.ತಂದೆಯ ವಿಸ್ತಾರವಾದ ಆಸ್ತಿ ವ್ಯವಹಾರ ತಕ್ಷಣ ಬಿಟ್ಟು ಹೋಗುವಂತಹುದಲ್ಲ. ಗದ್ದೆ ತೋಟ, ಬ್ಯಾಂಕ್ ನ  ಹಣಕಾಸಿನ ವ್ಯವಸ್ಥೆ ಒಂದೇ ಎರಡೇ ಏನು ಮಾಡುವುದು? ನಿರಂಜನನಿಗೂ ಇದೇ ಸಂಕಟ. ಶ್ರೀಕಾಂತ ಇಲ್ಲದ ಮೇಲೆ ತಾನು ಈ ಮನೆಯಲ್ಲಿ ಇರಬಹುದೋ ಬೇಡವೋ ಅತ್ತಿಗೆಯಂತೂ ತನ್ನ ಬಗ್ಗೆ ತುಂಬಾ ವಿಶ್ವಾಸದಿಂದಿದ್ದಾರೆ. ಅತ್ತೆಗೂ ನನ್ನನ್ನು ಕಂಡರೆ ಅಕ್ಕರೆ.ಏನು ಮಾಡುವುದೋ ಗೊತ್ತಾಗುತ್ತಿಲ್ಲ.

ಮನೆಯಲ್ಲಿ ಎಲ್ಲರಿಗೂ ಚಿಂತೆ ಕಳವಳ. ಬಯಸದೆ ಬಂದ ಭಾಗ್ಯವನ್ನು ಕೈ ಬಿಡುವಂತಿಲ್ಲ. ಕಟ್ಟಿಕೊಳ್ಳುವಂತಿಲ್ಲ. ಕಡೆಗೆ ಕಲ್ಯಾಣಿಯೇ ಧೈರ್ಯ ಮಾಡಿ ಶ್ರೀಕಂಠನಿಗೆ ಅವಕಾಶ ಕೈ ಬಿಡಬಾರದೆಂದು ಹೇಳಿ ಪ್ರಯಾಣಕ್ಕೆ ಸನ್ನದ್ಧವಾಗಲು ಹುರಿದುಂಬಿಸಿದಳು. ನಿರಂಜನನಿಗೆ ಚಿಂತೆಯಾಕೆ ಅತ್ತಿಗೆಯಾಗಿ ನಾನು ಇಲ್ಲೇ ಇರುವಾಗ ನೀನು ಧೈರ್ಯವಾಗಿರು ಎಂದು ಸಮಾಧಾನಿಸಿದಳು. ಇಲ್ಲಿನ ಎಲ್ಲ ವ್ಯವಸ್ಥೆಯನ್ನು ಒಂದೇ ನೇರ ಮಾಡಿ ತಾನು ಅಮೆರಿಕೆಗೆ ಬರುವುದಾಗಿ ಗಂಡನಿಗೆ ಭರವಸೆ ನೀಡಿ ವಿದೇಶಕ್ಕೆ  ಬೀಳ್ಕೊಟ್ಟಳು.

ಆದರೆ ಕಲ್ಯಾಣಿಯ ಬಾಳಿನಲ್ಲಿ ಆ ದಿನ ಬರಲೇ ಇಲ್ಲ. ಶ್ರೀಕಾಂತ ವಿದೇಶಕ್ಕೆ ಹೋಗಿ ಆರು ತಿಂಗಳು ಕಳೆದಿರಲಿಲ್ಲ. ರಸ್ತೆ ಅಪಘಾತವೊಂದರಲ್ಲಿ ಶ್ರೀಕಾಂತ ಜೀವ ಬಿಟ್ಟ ಸುದ್ದಿ ಆಫೀಸಿನಿಂದ ಬಂದಾಗಲೇ ಕಲ್ಯಾಣಿಯ ಸರ್ವಸ್ವವೂ ಮಣ್ಣು ಪಾಲಾಯಿತೆಂದು ತಿಳಿಯಿತು.

 ಹತಾಶಳಾಗಿ ಕೈಕಟ್ಟಿ ಕೂಡುವಂತಿರಲಿಲ್ಲ ಕಲ್ಯಾಣಿ. ಮೊದಲೇ ತಂದೆಯ ಸಾವಿನಿಂದ ಜರ್ಜರಿತಳಾಗಿರುವ ತಾಯಿ, ಗೆಳೆಯನ ಅಗಲುವಿಕೆಯಿಂದ ಏಕಾಂಗಿಯಾಗಿರುವ ನಿರಂಜನ ಇವರಿಬ್ಬರನ್ನೂ ಸಂಭಾಳಿಸಬೇಕಾಗಿರುವ ಹೊಣೆ ಕಲ್ಯಾಣಿಯದಾಗಿತ್ತು.

ಧೈರ್ಯ ತಂದುಕೊಂಡ ಕಲ್ಯಾಣಿ ತಾನೇ ಮುಂದಾಗಿ ಚಿಂತೆಯನ್ನು ಮರೆತ ಮುಖವಾಡ ಹೊದ್ದು ತಾಯಿಯನ್ನು ನಿರಂಜನನನ್ನು ಸಮಾಧಾನಿಸಿ ಶ್ರೀಕಾಂತನ ಶವವನ್ನು ತರಿಸಿಕೊಂಡು ಅಂತ್ಯ ಸಂಸ್ಕಾರಕ್ಕೆ ಬೇಕಾದ ಏರ್ಪಾಡುಗಳನ್ನೆಲ್ಲ ಸುಬ್ಬಾಭಟ್ಟರ ನೆರವಿನಿಂದಲೇ ಪೂರೈಸಿದಳು.

ಸುಬ್ಬಾಭಟ್ಟರಂತೂ ದುಃಖದಿಂದ ಸಪ್ಪಗಾದರು. ಅಂತೂ ಕಲ್ಯಾಣಿಯ ಜಾತಕದಲ್ಲಿದ್ದ ನಿರ್ಬಲ ಮಾಂಗಲ್ಯ ಯೋಗ ಕಡೆಗೂ ವಿಧಿಯಾಟದಲ್ಲಿ ತಪ್ಪಲಿಲ್ಲ. ಆದರೂ ಕಲ್ಯಾಣಿಯಂತಹ ಪ್ರಪಂಚವನ್ನೇ ಕಂಡರಿಯದಿದ್ದ ಹುಡುಗಿ ಇಂದು ಎಲ್ಲ ಅಪಘಾತಗಳಿಗೂ ಎದೆಕೊಟ್ಟು ಗಟ್ಟಿ ಹೆಂಗಸಾಗಿ ನಿಂತಳು. ಸುಬ್ಬಾಭಟ್ಟರಿಗಂತೂ ಇದೆಲ್ಲ ತಾವೇ ಮಾಡಿದ ತಪ್ಪೇನೋ ಎನಿಸಿತು. ಏನಾದರೇನು ಯಾರು ಹೊಣೆಯಾದರೇನು ಬದುಕು ನಮ್ಮಿಷ್ಟದಂತೆ ನಡೆಯುವ ಆಟವಲ್ಲ. ವಿಧಿಯ ಕೈಯೊಳಗಿನ ಚದುರಂಗದಾಟ.

ಬದುಕು ಜಟಕಾ ಬಂಡಿ ವಿಧಿಯಾದರ ಸಾಹೇಬ ।

ಕುದುರೆ ನೀನ್ ಆವ ಪೇಳ್ ದಂತೆ ಪಯಣಿಗ ।।

ಮದುವೆಗೊ  ಮಸಣಕೊ ಹೋಗೆಂದ ಕಡೆಗೋಡು ।

ಪದ ಕುಸಿಯೆ ನೆಲವಿಹುದು ಮಂಕುತಿಮ್ಮ।।

************

೧೦ ವರ್ಷಗಳು ಹೇಗೆ ಕಳೆಯಿತೋ ಏನೋ, ದಿನಗಳು, ತಿಂಗಳುಗಳು, ವರ್ಷಗಳೂ ಉರುಳಿದವು. ಕಲ್ಯಾಣಿಯ ಬಾಳಿನಲ್ಲೂ ಬಹಳಷ್ಟು ಬದಲಾವಣೆಯಾಯಿತು. ಅವಳ ಕಣ್ಣೆದುರೇ ಜಾನಕಿ, ಸುಬ್ಬಾಭಟ್ಟರು ಅವರ  ಪತ್ನಿ ಎಲ್ಲ ಒಬ್ಬೊಬ್ಬರಾಗಿ ವಿಧಿವಶರಾದರು.

ಉಳಿದವರು ಕಲ್ಯಾಣಿ, ನಿರಂಜನ ಇಬ್ಬರೇ. ೧೦ ವರ್ಷಗಳ  ಬಾಳಿನ ಏರುಪೇರು ಕಲ್ಯಾಣಿಗಿಂತ ನಿರಂಜನನನ್ನೇ ಹೆಚ್ಚು ಹಣ್ಣು ಮಾಡಿತು. ಕಲ್ಯಾಣಿಯ ಬಲವಂತಕ್ಕೂ ಸೋಲದೆ ಅವನು ಸಂಸಾರ ಜೀವನಕ್ಕೆ ಬೆನ್ನು ತಿರುಗಿಸಿ ನಿಂತ.

ಕಲ್ಯಾಣಿಯ ಮೇಲ್ಮಟ್ಟದ ಚಿಂತನೆಯಿಂದ ತಮ್ಮ ತಂದೆಯ ತೋಟದಲ್ಲಿ ಒಂದು ದೊಡ್ಡ ಮನೆ ಕಟ್ಟಿಸಿ ಉಳಿದೆಲ್ಲ ಆಸ್ತಿಗಳನ್ನು ಮಾರಿ ಹಣವನ್ನೆಲ್ಲ ಬ್ಯಾಂಕಿನ ಖಾತೆಯಲ್ಲಿಟ್ಟು ತೋಟದ ಮನೆಯಲ್ಲಿ ವೃದ್ಧಾಶ್ರಮ ಪ್ರಾರಂಭಿಸಿದಳು. ನಿರಂಜನ ಅವಳ ಬೆನ್ನೆಲುಬಾಗಿ ನಿಂತ. ಆಧುನಿಕ ವೈದ್ಯಕೀಯ ಸೌಲಭ್ಯ, ಪ್ರಾಕೃತಿಕ ಅನುಕೂಲಗಳಿಂದ ವೃದ್ಧಾಶ್ರಮ ತೆರೆಯಿತು. ಹೆಸರಿಗಷ್ಟೇ ಅದು ವೃದ್ಧಾಶ್ರಮ. ಆಸರೆಬೇಕೆಂದವರಿಗೆ ಆಸರೆಮನೆ. ವೃದ್ಧಾಶ್ರಮಕ್ಕೊಂದು ಸುಂದರ ಹೆಸರು ಕಲ್ಯಾಣಿ, ನಿರಂಜನರ ಚಿಂತನೆ ಚರ್ಚೆಯ ಫಲವಾಗಿ ''ಆಸರೆ ಮನೆ''  ಬೆಳಕು ಕಂಡಿತು. ಹೀಗೆ ಕಲ್ಯಾಣಿತ್ಯಾಗ, ನಿರಂಜನನ ಸೇವೆಯಿಂದ ''ಆಸರೆ ಮನೆ'' ಜನ್ಮ ತಾಳಿತು.

ಆಸರೆ ಮನೆ ಎಷ್ಟು ಸುಂದರ ಗೌರವಯುತವಾದ ಮರ್ಯಾದೆಯ ಜೀವನ ನೀಡಲು ನೆರವಾಯಿತು. ಇದು ''ಆಸರೆ ಮನೆ'' ಯ ಹುಟ್ಟಿನ ಕಥೆಯಾದರೆ ಅಲ್ಲಿ ಬಂದು ಬದುಕುತ್ತಿರುವವರ ಒಬ್ಬೊಬ್ಬರದೂ ಒಂದೊಂದು ಕಥೆ ಕಲ್ಯಾಣಿಯ ಮುಂದೆ ಅನಾವರಣಗೊಂಡು ಅವರ ಬದುಕು ನೆಮ್ಮದಿ ಕಂಡುಕೊಳ್ಳಲು ಕಾರಣವಾಯಿತು.

**********

ಎಷ್ಟು ಜನರೋ ಅಷ್ಟು ಕಥೆ ಅಷ್ಟು ವ್ಯಥೆ, ಹರಿದ ಜೀವನಕ್ಕೆ ಕಲ್ಯಾಣಿಯ ಕೈಯಿಂದ ಸುಂದರ ಕಸೂತಿ, ನಿರಂಜನನ ನೆರವಿನಿಂದ ತಂಪಾದ ಜೀವನ ದೊರಕಿ ವ್ಯಥೆ ಮರೆಯಿತು. ಕಥೆ ಸುಖಾಂತವಾಯಿತು.

ವೆಂಕಮ್ಮಜ್ಜಿ

ಆಶ್ರಮದ ಮೊದಲ ಸದಸ್ಯೆ ವೆಂಕಮ್ಮಜ್ಜಿ ಎಲ್ಲ ಇದ್ದು ಏನೂ ಇಲ್ಲದ ಬರಿಗೈ ಜೀವ.

ವೆಂಕಮ್ಮ ಹುಟ್ಟಿದ್ದು ಶ್ರೀಮಂತ ಜಮೀನ್ದಾರರ ಮನೆಯಲ್ಲಿಯೇ. ಕೈ ಹಿಡಿದದ್ದು ಮಧ್ಯಮ ವರ್ಗದ ಶ್ಯಾನುಭೋಗರ ಮಗನನ್ನು. ಮಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಜಮೀನ್ದಾರರು ಮಗಳಿಗೆ ಬೇಕಾದಷ್ಟು ಧನಕನಕಗಳನ್ನು ಕೊಟ್ಟು ವಿವಾಹ ಮಾಡಿದರು. ಶ್ಯಾನುಭೋಗರ ಮಗ ಶಂಕರ ವೆಂಕಮ್ಮನೊಡನೆ ಸುಖವಾಗಿಯೇ ಜೀವನ ಸಾಗಿಸಿದ. ೧೨ ವರ್ಷಗಳು ಮಕ್ಕಳಿಲ್ಲದ ಕೊರಗಿನಲ್ಲಿ ಮಾಡದ ವ್ರತನೇಮಗಳಿಲ್ಲ. ಬೇಡದ ದೇವರಿಲ್ಲ. ಹತ್ತದ ಗಿರಿಕಾನನಗಳಿಲ್ಲ. ಹೀಗಿದ್ದೂ ದಂಪತಿಗಳ ಕೊರಗು ಕಡಿಮೆಯಾಗಲಿಲ್ಲ. ಶ್ಯಾನುಭೋಗ ದಂಪತಿಗಳು ವಯಸ್ಸಾಗಿ ಮೊಮ್ಮಗನ ಮುಖ ಕಾಣದೆ ಚಿಂತೆಯಲ್ಲಿ ಇಹಲೋಕ ತ್ಯಜಿಸಿದರು. ಅತ್ತೆ ಮಾವ ಕಣ್ಮರೆಯಾಗಿ ಮತ್ತೆರಡು ವರ್ಷ ಕಳೆದ ಮೇಲೆ ವೆಂಕಮ್ಮನ ಕನಸು ಚಿಗುರೊಡೆಯಿತು. ವಂಶೋದ್ಧಾರಕನಾಗಿ ಕುಲಪುತ್ರ ಗಿರೀಶ್ ಹುಟ್ಟಿದ. ದಂಪತಿಗಳು ಮಗುವನ್ನು ನೆಲಸೋಕದಂತೆ ಅಕ್ಕರೆಯಿಂದ ಬೆಳೆಸಿದರು. ಮದುವೆಯಾಗಿ ಎಷ್ಟೋ ವರ್ಷಗಳ ನಂತರ ತಮಗೂ ಇಳಿವಯಸ್ಸು ಸಮೀಪಿಸಿದಾಗ ಗಿರೀಶ್ ಬಾಲ್ಯ ಮುಗಿಸಿ ತರುಣನಾದಾಗ ಶಂಕರ ಎರಡು ದಿನ ಬಂದ ಯಾವುದೋ ಸಣ್ಣ ಜ್ವರಕ್ಕೆ ಬಲಿಯಾಗಿ ಪ್ರಾಣ ಬಿಟ್ಟದ್ದು ಮಾತ್ರ ವೆಂಕಮ್ಮನಿಗೆ ನುಂಗಲಾರದ ತುತ್ತು. ಎದೆಗಟ್ಟಿಯಾಗಿಸಿ ಕೊಂಡು ಮಗನನ್ನು ಬೆಳೆಸಿ ಅವನಿಗೆ ಅನುಸೂಯಳೊಡನೆ ಮದುವೆ ಮಾಡಿ ತಾವು ತೃಪ್ತರಾದರು. ಸೊಸೆ ಮನೆಗೆ ಬಂದ ಮೇಲೆ ತಾವು ನಿಶ್ಚಿಂತೆಯಿಂದ ರಾಮ-ಕೃಷ್ಣ ಎಂದು ಇರಬಹುದು ಎನ್ನುವುದು ವೆಂಕಮ್ಮನ ನಿರೀಕ್ಷೆಯಾಗಿತ್ತು. ಅನುಸೂಯ ಹೆಸರಿಗೆ ತಕ್ಕವಳಲ್ಲ ಎನ್ನುವುದು ಕೆಲವೇ ದಿನಗಳಲ್ಲಿ ವೆಂಕಮ್ಮನಿಗೆ ಗೊತ್ತಾಯಿತು. ಮಗನಿಗಾಗಿ ಅವರು ಎಲ್ಲವನ್ನು ಸಹಿಸಿಕೊಳ್ಳುತ್ತ ತಮ್ಮತ್ತೆ, ಮಾವರಂತೆ ತಾವು ವಂಶೋದ್ಧಾರಕನನ್ನು ಕಾಣುವ ಏಕೈಕ ಆಸೆಯಿಂದ ಜೀವ ಹಿಡಿದುಕೊಂಡಿದ್ದರು.

ವೆಂಕಮ್ಮ ಸ್ವಭಾವತಃ ಮೃದು ಹೃದಯದ ಸಾಧು ಹೆಂಗಸು. ದೊಡ್ಡ ಮನೆತನದ ಮಗಳಾದ್ದರಿಂದ ರಕ್ತಗತವಾಗಿ ಬಂದ ದೊಡ್ಡಗುಣ ಅವರನ್ನು ಸದ್ಗುಣೆಯನ್ನಾಗಿಸಿತು. ಎಲ್ಲವನ್ನು ನಂಬುವ ಮುಗ್ಧ ಸ್ವಭಾವ ಅವರದ್ದು. ಒಂದು ದಿನ ಅನುಸೂಯ ಗಿರೀಶನೊಡನೆ ಮಾತನಾಡುತ್ತಿದ್ದ ಮಾತುಗಳು ಆಕಸ್ಮಿಕವಾಗಿ ಅವರ ಕಿವಿಗೆ ಬಿದ್ದಿತು.

''ಗಿರೀ extension ಏರಿಯಾದಲ್ಲಿ 60 40site ಇದೆಯಂತೆ. ಗೆಳತೀ ಗಿರಿಜಾ ಹೇಳಿದಳು. ಅವಳು ಒಂದು  site ಖರೀದಿಸಿದ್ದಾಳಂತೆ. ನನಗೂ ತೆಗೆದುಕೊಳ್ಳಲು ಹೇಳಿದಳು, ಬರೀ ೧೦ಲಕ್ಷ ರೂ.ಅಂತೇ ರೀ'' ಎಂದು ರಾಗವೆಳೆದಳು.

''ಅನು ಏನು ಮಾತಾಡ್ತಿ ೧೦ ಲಕ್ಷ ಏನು ಹುಡುಗಾಟ ಅಂತ ತಿಳಿದೆಯಾ, ನನ್ನ ಇಡೀ ಜೀವಮಾನದ ಉಳಿತಾಯ ಅಂದ್ರೆ ಬ್ಯಾಂಕ್ ನಲ್ಲಿ ಒಂದು ೨೫ ಸಾವಿರ ನಮ್ಮ ಮುಂದಿನ ಭವಿಷ್ಯಕ್ಕಾಗಿ ಕೂಡಿಸಿರುವುದು. ಅಷ್ಟು ಬಿಟ್ಟರೆ ಲಕ್ಷ ಎನ್ನುವುದು ನನ್ನ ಕನಸಿನಲ್ಲೂ ಕಾಣದ ಹಣ'' ಎಂದ.

''ಏನು ಗಿರೀ ಹೀಗೆ ಹೇಳ್ತಿರಿ.ಹೊಸ ಎಕ್ಸ್ ಟೆನ್ಶನ್ ನಲ್ಲಿ  ೬೦ ೪೦ರ ಸೈಟ್ ಎಂದರೆ ಹುಡುಗಾಟವೇ. ನಮ್ಮ ಪುಣ್ಯ ಅದು ಸಿಗಬೇಕಾದರೆ ಹೇಗಾದರೂ ಮಾಡಿ ಗಿರೀ''

''ಅನು ಹುಚ್ಚುಚ್ಚಾಗಿ ಆಡಬೇಡ. ಬಿಳಿಯಾನೆ ಸಹವಾಸ ನಮಗೆ ಬೇಡ. ಬಡವ ನೀ ಮಡಗಿದ ಹಾಗಿರು ಎಂದು ಕೇಳಿಲ್ಲವೇ'' ಎಂದ.

''ಯಾಕ್ರೀ ಎಲ್ಲರ ಹಾಗೆ ನಾವು ಬದುಕಬೇಡವೇ? ನಮಗೆ ಮುಂದೆ ಮಕ್ಕಳು ಮರಿ ಸಂಸಾರ ಬೆಳೆಯುವುದಿಲ್ಲವೇ , ಆಗ ಸೈಟ್ ತೆಗೆದುಕೊಳ್ತೀವಿ ಎಂದು ಯೋಚಿಸಕ್ಕಾಗತ್ಯೆ ಹೇಳಿ ಎಂದ ಅನುಸೂಯಳ ಮಾತಿಗೆ ನಿರುತ್ತರನಾದ. ಕಾದಾಗಲೇ ಕಬ್ಬಿಣ ಬಡಿಯಬೇಕೆನ್ನುವ ಅನಸೂಯ ''ಒಂದ್ಕೆಲ್ಸ ಮಾಡೋಣರೀ ಅಮ್ಮಂದು ಎರಡು ಎಕ್ರೆ ಗದ್ದೆ ಸ್ವಲ್ಪ ತೋಟ ಇದೆಯಲ್ಲ ಅದನ್ನ ಮಾರಿಬಿಟ್ಟು Site ತೊಗೊಳ್ಳೋಣ. ನಾವೇನು ನೇಗಿಲು ಹಿಡಿದು ಗದ್ದೆ ಮಾಡಕ್ಕಾಗತ್ಯೆ. ಬೇಕಾದ್ರೆ ಸೈಟ್ ನ ಅಮ್ಮನ ಹೆಸರಲ್ಲೇ ರಿಜಿಸ್ಟ್ರಿಮಾಡಿ ಬಿಟ್ಟರಾಯಿತು. ಗಿರೀಶ ನಿರುತ್ತರನಾದ. ಅವನ ಭಾವನಾತ್ಮಕವಾದ ಮನಸ್ಸು ಮಂಕುತಿಮ್ಮನ ಕಗ್ಗದ

''ಒಡೆಯದಿರು ತಳಹದಿಯ ಸರಿಪಡಿಸುವೆನೆಂದು|

ಸಡಿಲಿಸುವ ನೀಂ ಮರಳಿ ಕಟ್ಟಲರಿತವನೇಂ?।।

ಗಿಡವ ಸರಿ ಬೆಳೆಯಿಸಲು ಬಡವ ಕೀಳ್ವುದು ಸರಿಯೆ|

ದುಡುಕದಿರು ತಿದ್ದಿಕೆಗೆ -ಮಂಕುತಿಮ್ಮ||

ಎಂದು ಮೆಲುಕು ಹಾಕುತ್ತಿತ್ತು.

 ವೆಂಕಮ್ಮ ಮಗ ಸೊಸೆಯ ಮಾತನ್ನೆಲ್ಲ ಕೇಳಿಸಿಕೊಂಡರು. ಗದ್ದೆ ತೋಟ ಎಲ್ಲ ತಮಗಿನ್ಯಾಕೆ ಮಗನ ಭವಿಷ್ಯಕ್ಕಲ್ಲದೆ ಮಗಳ ಹಿತಚಿಂತನೆಯಿಂದ ಅಪ್ಪ ಒಂದಷ್ಟು ಆಸ್ತಿ ತನಗೆ ಸ್ತ್ರೀ ಧನವಾಗಿ ಕೊಟ್ಟರು. ಈಗ ಗಿರೀಶನ ಹಿತಕ್ಕೆ ತಾನು ಅದನ್ನು ಕೊಡಬೇಕು ಎಂದು ನಿರ್ಧರಿಸಿದರು.


ಭಾಗ -  4ರಲ್ಲಿ ಮುಂದುವರೆಯುವುದು..... 




Comments

  1. ಕಥೆ ಸ್ವಾರಸ್ಯಕರವಾಗಿದೆ. ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ಸಾಮಾಜಿಕ ಕಥೆಯಲ್ಲಿ ಕಗ್ಗವನ್ನು ಉದಾಹರಿತವಾಗಿ ಬಳಸಿರುವ ಬಗೆ ಚೆನ್ನಿದೆ.

    ReplyDelete

Post a Comment