ಬೆಳವಾಡಿಯ ತ್ರಿಕೂಟ - ಭಾಗ ೩

ಬೆಳವಾಡಿಯ ತ್ರಿಕೂಟ - ಭಾಗ  

 ಲೇಖಕರು: ಮೈಸೂರು ಶ್ರೀನಿವಾಸ ಪುಟ್ಟಿ  

ಬೆಳವಾಡಿಯ ತ್ರಿಕೂಟ - ಭಾಗ ೧

https://horanadachilumesydney.blogspot.com/2020/09/blog-post.html

ಬೆಳವಾಡಿಯ ತ್ರಿಕೂಟ - ಭಾಗ ೨

https://horanadachilumesydney.blogspot.com/2020/10/blog-post_49.html

 

..........ಮುಂದುವರೆದ ಭಾಗ  ೩ 


 

5.ಸಭಾಮಂಟಪ

ದೇವಾಲಯದ ಪೂರ್ವಭಾಗದ ಸಭಾಮಂಟಪವು ಮೂವತ್ತೊಂಬತ್ತು ಅಂಕಣಗಳ ಭವ್ಯನಿರ್ಮಾಣ. ಸಭಾಮಂಟಪದೊಳಗೆ ನಲವತ್ತಾರು ದುಂಡಾದ ಸ್ತಂಭಗಳಿದ್ದು, ಗೋಡೆಯ ಸುತ್ತಲೂ (ಒಳಗೆ) ಕಲ್ಲಿನ ಜಗಲಿ ಇದೆ. ಜಗಲಿಯ ಮೇಲೆ ಆನೆ ಮತ್ತು ಪದಾತಿಗಳು‌ ಇವೆ. ಪ್ರತಿಯೊಂದು ಆನೆಯೂ ಹದಿನೆಂಟು ಅಂಗುಲ ಎತ್ತರವಿದೆ. ಈ ಸಭಾಮಂಟಪವು  ದೇವಾಲಯಕ್ಕೆ ಒಂದು ವಿಶೇಷ ಮೆರುಗನ್ನು ನೀಡಿದೆ. 

ಸಭಾಮಂಟಪದ ಮೇಲ್ಚಾವಣಿಯು ಸಾಮಾನ್ಯವಾಗಿದೆ. ಇದರಲ್ಲಿ ನ್ಯೆರುತ್ಯ (southwest)ದ ಎರಡನೇ ಭುವನೇಶ್ವರಿಯಲ್ಲಿ ನಾಯಕನೊಬ್ಬನು ಇತರ ಮೂವರೊಡನೆ ಕಾದಾಡುತ್ತಿರುವ ದೃಶ್ಯವಿದೆ.

ಪಶ್ಚಿಮದ್ವಾರದ ಹತ್ತಿರದ ಭುವನೇಶ್ವರಿಯಲ್ಲಿ ಗೋವುಗಳು,ನರ್ತಕರು, ಗಾಯಕರುಗಳಿಂದ ಸುತ್ತುವರಿಯಲ್ಪಟ್ಟ ವೇಣುಗೋಪಾಲನನ್ನು ಕಾಣಬಹುದು ಇಲ್ಲಿನ ಲತಾ ಪಟ್ಟಿಕೆಯಲ್ಲಿ ಶಂಖಚಕ್ರಗಳನ್ನು ಕಾಣುತ್ತೇವೆ. ಇದಕ್ಕೆ ಪೂರ್ವದ ಭುವನೇಶ್ವರಿಯಲ್ಲಿ ನಾಗಬಂಧ, ಕಾಳಿಂಗ ಮರ್ದನ,ಲತೆ ಮತ್ತು ಗೋವುಗಳಿವೆ.


6.ಗರ್ಭಗುಡಿಗಳು

 

ಈಗಾಗಲೇ ತಿಳಿಸಿರುವಂತೆ ದೇವಾಲಯದ ಪೂರ್ವಭಾಗದಲ್ಲಿ ಎರಡು ಗರ್ಭಗುಡಿಗಳಿವೆ. ಎರಡು ಗುಡಿಗಳಿಗೂ ಶುಕನಾಸಿ ಇದೆ. ಶುಕನಾಸಿದ್ವಾರದಲ್ಲಿ ದ್ವಾರಪಾಲಕರು, ಜಾಲಂದ್ರ (perforated stone screen) ಮತ್ತು ಮೇಲೆ ಗಜಲಕ್ಷ್ಮಿ ಇವೆ. ಗರ್ಭಗುಡಿಯ ದ್ವಾರವು ಹೀಗೆಯೇ ಇದೆ; ಆದರೆ ಜಾಲಂದ್ರವಿಲ್ಲ. ಗರ್ಭಗುಡಿಯೊಳಗೆ ಪದ್ಮ ಪೀಠದ ಮೇಲೆ ಅತ್ಯಂತ ಮೋಹಕವಾದ, ಏಳು ಅಡಿ ಎತ್ತರದ ತ್ರಿಭಂಗಿಯಲ್ಲಿ ನಿಂತಿರುವ ವೇಣುಗೋಪಾಲನ ವಿಗ್ರಹವಿದೆ. ಈ ವಿಗ್ರಹದ ಅಕ್ಕಪಕ್ಕದಲ್ಲಿ ದೇವಿಯರು, ಗೋವುಗಳು, ಗೋಪಿಯರು ಮತ್ತು ಋಷಿಗಳನ್ನು ಕಾಣಬಹುದು. ಮೂರ್ತಿಯ ಹಿಂದೆ ಕಲ್ಪವೃಕ್ಷವಿದ್ದು, ಅದರ ನೆರಳಿನಲ್ಲಿ ನಿಂತು ವೇಣುವಾದನ ಮಾಡುತ್ತಿರುವಂತೆ ಕಾಣುತ್ತದೆ. ಅನೇಕ ತಜ್ಞರ ಅಭಿಪ್ರಾಯದಂತೆ ಈ ವೇಣುಗೋಪಾಲ ವಿಗ್ರಹವು ನಮ್ಮ ದೇಶದಲ್ಲೇ ಅತ್ಯಂತ ಸುಂದರವಾದದ್ದು.

ಉತ್ತರದ ಗರ್ಭಗುಡಿಯ ಶುಕನಾಸಿಯು, ದಕ್ಷಿಣದ್ದರಂತೆಯೇ ಇದೆ. ಗರ್ಭಗುಡಿಯಲ್ಲಿ ಗರುಡ ಪೀಠದ ಮೇಲೆ ಉತ್ಕುಳಿಕಾಸನದಲ್ಲಿ ಕುಳಿತಿರುವ, ಆರೂವರೆ ಅಡಿ ಎತ್ತರದ ಯೋಗನರಸಿಂಹಮೂರ್ತಿಯ ವಿಗ್ರಹವಿದೆ. ನರಸಿಂಹನ ಹಿಂದಿನ ಕೈಗಳಲ್ಲಿ ಚಕ್ರ,ಶಂಖಗಳಿವೆ. ಮುಂದಿನ ಕೈಗಳು ಯೋಗಪಟ್ಟಿಯಿಂದ ಸುತ್ತಿರುವ ಮೊಣಕಾಲಿನ ಮೇಲಿದೆ. ಭವ್ಯವಾದ ಈ ಮೂರ್ತಿಗೆ ಉದ್ದವಾದ ಕಿವಿ, ತೆರೆದಬಾಯಿ, ಗುಂಡಾದ ಕಣ್ಣುಗಳಿದ್ದು, ತಲೆಯಮೇಲೆ ಕಿರೀಟವಿದೆ. ತೋರಣದಲ್ಲಿ ದಶಾವತಾರ ವಿದೆ

 

7.ಉಪ್ಪರಿಗೆ

 

ಉಪ್ಪರಿಗೆ ಅಥವಾ ಮಹಾದ್ವಾರವು‌ ಎತ್ತರವಾಗಿಯೂ, ವಿಶಾಲವಾಗಿಯೂ ಇದೆ. ಇದರ ಮೆಟ್ಟಿಲುಗಳ ಇಕ್ಕೆಲಗಳಲ್ಲಿ ಬಳಪದ ಕಲ್ಲಿನ ಆನೆಗಳಿವೆ. ಗೋಡೆಗಳ ಮೇಲೆ ಅಷ್ಟಾಗಿ ಅಲಂಕಾರಗಳಿಲ್ಲ. ಮುಂದಿನ ಮಂಟಪದ ಮೇಲ್ಚಾವಣಿ ಇಳಿಜಾರಾಗಿದೆ. ಒಳಗಿನ ಶಾಲೆ ಸುಮಾರು ಹದಿನೇಳು ಅಡಿ ಎತ್ತರವಿದೆ. ಇದರ ಮೇಲ್ಚಾವಣಿಯ ಒಂಬತ್ತು ಅಂಕಣಗಳಲ್ಲಿ ಪದ್ಮಗಳಿವೆ.

 

ಗಮನಿಸಿ

ಕೆಲವು ವಿಗ್ರಹಳ ಹೆಸರಿನ ಮುಂದೆ ಆವರಣದಲ್ಲಿ ಶಂ - ಚ - ಗ - ಪ ಎಂಬ ಸಂಕೇತಾಕ್ಷರಗನ್ನು ಬಳಸಲಾಗಿದೆ . ಅದರ ವಿಸ್ತೃತ ರೂಪ ಇಂತಿವೆ

ಶಂ - ಶಂಖ (conch);

ಚ - ಚಕ್ರ (Discus);

ಗ‌ - ಗದಾ (mace);

ಪ - ಪದ್ಮ (lotus)

ಇವು ಆ ಮೂರ್ತಿಯ ಕೈಯಲ್ಲಿರುವ ಆಯುಧಗಳು. ಆಯಾ ಮೂರ್ತಿಯ ಮುಂದೆ ನಿರ್ದೇಶಿಸಲಾಗಿರುವ ಆಯುಧಗಳು ಕ್ರಮವಾಗಿ ಬಲ ಹಿಂದಿನ ಕೈ (upper right hand), ಎಡ ಹಿಂದಿನ ಕೈ (upper left hand), ಎಡ ಮುಂದಿನ ಕೈ (lower left hand) ಮತ್ತು ಬಲ ಮುಂದಿನ ಕೈ (lower right hand) ಗಳಲ್ಲಿ ಇರುವಂತೆ ನಿರ್ದೇಶಿಸಲಾಗಿದೆ

 

ಚಿತ್ರಗಳು

ಲೇಖಕರು ಹಾಗೂ ಶ್ರೀ ಪ್ರಶಾಂತ್ ಭಾರದ್ವಾಜ್, ಅರ್ಚಕರು, ವೀರನಾರಾಯಣ ದೇವಾಲಯ, ಬೆಳವಾಡಿ.

ಗ್ರಂಥಋಣ

೧.    Mysore Archaeological Report

೨. ಡಾ. ಶ್ರೀಕಂಠ ಶಾಸ್ತ್ರಿ. ಹೊಯ್ಸಳ ವಾಸ್ತುಶಿಲ್ಪ. ಮೈಸೂರು ವಿಶ್ವವಿದ್ಯಾನಿಲಯ

 

 

ಬೆಳವಾಡಿಯಲ್ಲಿ ಸದ್ಯಕ್ಕೆ ಊಟ - ವಸತಿಗಳಿಗೆ ಅನುಕೂಲವಿಲ್ಲ. ಆದರೆ ಯಾತ್ರಿನಿವಾಸ್ ತಲೆ ಎತ್ತುತ್ತಿದ್ದು, ಮುಕ್ತಾಯದ ಹಂತದಲ್ಲಿದೆ ಬೆಳವಾಡಿಗೆ‌ ಸಮೀಪದಲ್ಲಿರುವ ಜಿಲ್ಲಾ ಕೇಂದ್ರಗಳಾದ ಚಿಕ್ಕಮಗಳೂರು ಮತ್ತು ಹಾಸನಗಳಲ್ಲಿ ಯಾವದರ್ಜೆಗೂ ಬೇಕಾಗುವಂತಹ ಹೊಟೆಲ್ ಗಳಿವೆ.


Comments

  1. wonderful article of three parts .It was alke ajourney to Belavadi. Must visit places of karnataka

    ReplyDelete
    Replies
    1. Thank you for the very kind words about my article. HOYSALA STRUCTURES are poetry in stone.

      Delete

Post a Comment