ಬೆಳವಾಡಿಯ ತ್ರಿಕೂಟ - ಭಾಗ ೧

ಬೆಳವಾಡಿಯ ತ್ರಿಕೂಟ - ಭಾಗ ೧

ಲೇಖಕರು: ಮೈಸೂರು ಶ್ರೀನಿವಾಸ ಪುಟ್ಟಿ


                                          ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಗ್ರಾಮವು ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಿಂದ ಬಾಣಸಂದ್ರ ರಸ್ತೆಯಲ್ಲಿ 30 ಕಿ.ಮೀ. ದೂರದಲ್ಲಿದೆ. ಮಹಾಭಾರತದ ಕಾಲದಲ್ಲಿ ಏಕಚಕ್ರನಗರವೆಂದು ಪ್ರಸಿದ್ಧವಾಗಿತ್ತೆಂದು  ಹೇಳಲ್ಪಡುವ ಈ ಗ್ರಾಮವು ಹಾಸನದಿಂದ 42 ಕಿ. ಮೀ. ಮತ್ತು ಬಾಣಾವರದಿಂದ 30 ಕಿ.ಮೀ. ದೂರದಲ್ಲಿದೆ. ಈ ಗ್ರಾಮದಲ್ಲಿ ಅತ್ಯಂತ ವಿಶಿಷ್ಟವಾದ ಹೊಯ್ಸಳ ತ್ರಿಕೂಟವೊಂದಿದ್ದು, ಇದರ ದಕ್ಷಿಣ ಗರ್ಭಗುಡಿಯಲ್ಲಿ ವೇಣುಗೋಪಾಲ, ಪಶ್ಚಿಮ ಗರ್ಭಗುಡಿಯಲ್ಲಿ ವೀರನಾರಾಯಣ ಮತ್ತು ಉತ್ತರದ ಗರ್ಭಗುಡಿಯಲ್ಲಿ ಯೋಗನರಸಿಂಹರ ವಿಗ್ರಹಗಳಿವೆ. ಪೂರ್ವಾಭಿಮುಖವಾಗಿರುವ ಈ ದೇವಾಲಯವು ವೀರನಾರಾಯಣ ದೇವಾಲಯವೆಂದೇ ಪ್ರಸಿದ್ಧವಾಗಿದೆ.

ಈ ದೇವಾಲಯದ ನಿರ್ಮಾಣ ಯಾವಾಗ ಆಯಿತೆಂದು ನಿಖರವಾಗಿ ತಿಳಿದಿಲ್ಲವಾದರೂ, ಶಾಲಿವಾಹನ ಶಕ 1128 (ಕ್ರಿ.ಶ. 1206) ಕ್ಕೆ ಮುಂಚಿತವಾಗಿ ಆಗಿರುವುದಕ್ಕೆ ಶಾಸನದ ಆಧಾರವಿದೆ. ಈ ದೇವಾಲಯವು ತ್ರಿಕೂಟವೆಂದು ಪರಿಗಣಿಸಲ್ಪಟ್ಟಿದ್ದರೂ, ಇದರ ಪಶ್ಚಿಮ ಭಾಗ ಮೊದಲು ನಿರ್ಮಾಣವಾಗಿ, ಸ್ವಲ್ಪ ಕಾಲದ ನಂತರ ಪೂರ್ವಭಾಗದ ದೇವಾಲಯಗಳನ್ನು ಸೇರಿಸಿದಂತೆ ಕಾಣುತ್ತದೆ.

ದೇವಾಲಯ ಸಮುಚ್ಛಯದ ಪೂರ್ವ ಭಾಗ 

ವೀರನಾರಾಯಣ ದೇವಾಲಯ

 ಹೊಯ್ಸಳ ಶೈಲಿಯ ಬಹಳಷ್ಟು ತ್ರಿಕೂಟಗಳು ಜಗತಿಯೊಂದರ ಮೇಲೆ ನಿರ್ಮಾಣವಾಗಿರುತ್ತದೆಯಾದರೂ, ಪ್ರಸ್ತುತ ಅಧ್ಯಯನಕ್ಕೆ ತೆಗೆದುಕೊಂಡಿರುವ ದೇವಾಲಯಕ್ಕೆ ಜಗತಿ ಇರುವುದಿಲ್ಲ. ಗರ್ಭಗುಡಿ, ಶುಕನಾಸಿ, ನವರಂಗ, ಮುಖ ಮಂಟಪಗಳನ್ನು ಹೊಂದಿರುವ ಈ ಸನ್ನಿಧಿಯು ಅಲಂಕಾರ ರಹಿತವೆಂದೇ ಹೇಳಬಹುದು. ಆದರೆ ಇದರ ವಿಮಾನಗೋಪುರ ಅತ್ಯಂತ ಸುಂದರವಾಗಿ ನಿರ್ಮಿಸಲ್ಪಟ್ಟಿದೆ.

ಪಶ್ಚಿಮಭಾಗದ ಈ ದೇವಾಲಯದ ಪೀಠಿಕೆ (basement) ಯಲ್ಲಿ ಆರು ಪಟ್ಟಿಕೆಗಳಿವೆ. ಇದರ  ಮೇಲ್ಚಾವಣಿಯ  ಬೋದಿಗೆಗಳು ಮಣಿ ಸಾಲುಗಳಿಂದ ಅಲಂಕೃತವಾಗಿದ್ದು, ಕೈಪಿಡಿಗೋಡೆ (parapet) ಮಕರ ತೋರಣಗಳನ್ನು ಹೊಂದಿದೆ. 


ವೀರನಾರಾಯಣನ  ಗರ್ಭಗುಡಿಯ ಮೇಲಿರುವ ಬಳಪದಕಲ್ಲಿನ ವಿಮಾನವು ಮೂರು ಅಂತಸ್ತಿನದಾಗಿದ್ದು, ತುದಿಯಲ್ಲಿ  ದೊಡ್ಡ ಕಳಶವನ್ನು ಹೊಂದಿದೆ. ಅತ್ಯಂತ ಸುಂದರವಾಗಿರುವ ಈ ಶಿಖರಕ್ಕೆ ನಾಲ್ಕು ಮುಖಗಳಿದ್ದು, ನಾಲ್ಕರಲ್ಲೂ ವಿಷ್ಣುವಿನ ವಿವಿಧ ರೂಪಗಳಿವೆ.

ಶಿಖರದ ಪೂರ್ವ ಮುಖದಲ್ಲಿ ಇತ್ತೆಂದು ಹೇಳಲಾಗುವ ಸಳವಿಗ್ರಹವು ಈಗ ಮಾಯವಾಗಿದೆ . ಈ ಭಾಗದ ಕೀರ್ತಿಮುಖದ ಕೆಳಗೆ ಸ್ಥಾನಕ ಜನಾರ್ದನನ ವಿಗ್ರಹವನ್ನು ಕಾಣಬಹುದು; ಇದೇ ಶಿಖರದ ದಕ್ಷಿಣ ಮುಖದಲ್ಲಿ ಕಾಳಿಂಗಮರ್ದನ ಮತ್ತು ವೇಣುಗೋಪಾಲ, ಪಶ್ಚಿಮ ಮುಖದಲ್ಲಿ ಸ್ಥಾನಕ ಮಾಧವ ಮತ್ತು ತ್ರಿವಿಕ್ರಮ ಮತ್ತು ಉತ್ತರ‌ ಮುಖದಲ್ಲಿ ಹನುಮಂತ, ಗೋವಿಂದ, ದಾಮೋದರ ಮತ್ತು ಗೋವರ್ಧನಧಾರಿ ಕೃಷ್ಣನನ್ನು ಕಾಣಬಹುದು. ಈ ಶಿಖರದಲ್ಲಿ ಅಲ್ಲಲ್ಲಿ ಯಕ್ಷ - ಯಕ್ಷಿಯರ ಶಿಲ್ಪಗಳೂ ಇವೆ.


ವೀರನಾರಾಯಣ ಸ್ವಾಮಿ ದೇವಾಲಯದ ನವರಂಗದ ದ್ವಾರದಲ್ಲಿ ಕೆಳಗೆ ದ್ವಾರಪಾಲಕರು ಮತ್ತು ಮೇಲೆ ಗಜಲಕ್ಷ್ಮಿಇವೆ. ನವರಂಗದಲ್ಲಿ ಇತರ ದೇವಸ್ಥಾನಗಳಲ್ಲಿ ಇರುವಂತೆ ಗೂಡುಗಳಿಲ್ಲ; ಆದರೆ ಸ್ತಂಭಗಳಿವೆ. ಈ ಭಾಗಕ್ಕೆ ಎರಡು ಚಾವಣಿಗಳಿದ್ದು , ಈ ಚಾವಣಿಗಳ ನಡುವಿನ ಅಂತರದಲ್ಲಿ ಹಿಂದೆ  ಭಂಡಾರವನ್ನಿಟ್ಟು ರಕ್ಷಿಸುತ್ತಿದ್ದರು ಎಂದು ತಿಳಿದು ಬಂದಿದೆ. ನವರಂಗವು ಒಂಬತ್ತು ಭುವನೇಶ್ವರಿಗಳನ್ನು ಹೊಂದಿದ್ದು, ಮಧ್ಯದ ಭುವನೇಶ್ವರಿಯು ಅತ್ಯಂತ ಆಕರ್ಷಕವಾಗಿದೆ. ಈ ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕರು, ಸಿಂಹ, ಸಳ ವಿಗ್ರಹಗಳನ್ನೂ ಮತ್ತು ಮಧ್ಯದಲ್ಲಿ ಕರ್ಣಿಕೆ (pendant) ಯನ್ನು ಕಾಣಬಹುದು.

ಶುಕನಾಸಿಗೆ ಹೊಂದಿಕೊಂಡಿರುವ ಗರ್ಭಗುಡಿಯಲ್ಲಿ ಗರುಡಪೀಠದ ಮೇಲೆ ಸ್ಥಾನಕ ವೀರನಾರಾಯಣನ ಭವ್ಯವಾದ ವಿಗ್ರಹವಿದೆ. ಪೀಠವನ್ನು ಹೊರತುಪಡಿಸಿ ಸುಮಾರು ಆರೂವರೆಅಡಿ‌ ಎತ್ತರವಿರುವ  ವೀರನಾರಾಯಣ ಮೂರ್ತಿಗೆ ನಾಲ್ಕು ಕೈಗಳಿವೆ. ಈ ವಿಗ್ರಹದ ಮೇಲಿನ ಕೈಗಳಲ್ಲಿ ಪದ್ಮ(ಬಲ), ಗದೆ (ಎಡ) ಇದೆ. ಕೆಳಗಡೆಯ ಎಡಗೈ ವೀರಮುದ್ರೆಯಲ್ಲಿಯೂ, ಮತ್ತು ಬಲಗೈ ವ್ಯಾಘ್ರಹಸ್ತದ ಮುದ್ರೆಯಲ್ಲಿಯೂ ಇದೆ. ಮೂರ್ತಿಯ ಪ್ರಭಾವಳಿಯಲ್ಲಿ ದಶಾವತಾರದ ಶಿಲ್ಪಗಳನ್ನೂ , ಮತ್ತು ಇಕ್ಕೆಲಗಳಲ್ಲಿ ಅಮೃತ ಕಳಶ ಹಾಗೂ ಪದ್ಮವನ್ನು ಹಿಡಿದಿರುವ ಶ್ರೀದೇವಿ - ಭೂದೇವಿಯರನ್ನು ಕಾಣಬಹುದು. 

ಮುಖಮಂಟಪದ ಗೋಡೆಯು ಐದು ಪಟ್ಟಿಕೆಗಳನ್ನು ಹೊಂದಿದ್ದು, ನಾಲ್ಕು ಮತ್ತು ಐದನೆಯ ಪೆಟ್ಟಿಕೆಗಳ ನಡುವೆ ಅರೆಗಂಬ ಹಾಗೂ ಪುಷ್ಪಗಳಿವೆ. ಮಂಟಪದಲ್ಲಿ  22 ಕಂಬಗಳಿದ್ದು, ಇವುಗಳಲ್ಲಿ 20 ಕಂಬಗಳು ದುಂಡಾಗಿಯೂ ಮತ್ತು ಪೂರ್ವದಲ್ಲಿರುವ ಎರಡು ಕಂಬಗಳು 32 ಕೋನಗಳ ನಕ್ಷತ್ರಾಕಾರವನ್ನು ಹೊಂದಿವೆ. ಇಲ್ಲಿನ ಮಧ್ಯದ ಭುವನೇಶ್ವರಿಯಲ್ಲಿ ಅರ್ಕ ಪುಷ್ಪದ ತ್ರಿದಳ ಚಿಹ್ನೆ ಇದೆ. ವೀರನಾರಾಯಣನ ಸನ್ನಿಧಿಯು ಪಶ್ಚಿಮ ಭಾಗದಲ್ಲಿದ್ದು , ದೇವಾಲಯದ ಪೂರ್ವಭಾಗಕ್ಕೆ ನೇರವಾದ ಸಂಪರ್ಕವಿದೆ.



Comments

  1. Can`t wait to read the series of your articles. Lots of details information.Pictures are beautiful.

    ReplyDelete
  2. ನಾಡಿನ ಅಪರೂಪದ, ಸುಂದರ ದೇವಾಲಯಗಳನ್ನು ಪರಿಚಯಿಸುವ ಮೂಲಕ, ಅವುಗಳನ್ನು ಹೋಗಿ ನೋಡುವ ಕುತೂಹಲ ಮೂಡಿಸುತ್ತಿದ್ದೀರಿ.
    ನಿಮ್ಮ ನಿರೂಪಣೆ ಹಾಗೂ ವರ್ಣನೆಯನ್ನು ಓದುತ್ತಿದ್ದರೆ ಮಾರ್ಗದರ್ಶಿಯೋರ್ವರ ಜೊತೆಗೆ ನಾವೂ ಸಹ ದೇವಾಲಯದ ಆವರಣದಲ್ಲಿ ನಡೆದಾಡಿದ ಅನುಭವವಾಗುತ್ತದೆ.

    ReplyDelete

Post a Comment