ಬೆಳವಾಡಿಯ ತ್ರಿಕೂಟ - ಭಾಗ ೨

ಬೆಳವಾಡಿಯ ತ್ರಿಕೂಟ - ಭಾಗ  ೨

 ಲೇಖಕರು: ಮೈಸೂರು ಶ್ರೀನಿವಾಸ ಪುಟ್ಟಿ 

 ದೇವಾಲಯದ ವಿಶೇಷತೆ
ವೀರನಾರಾಯಣನ ವಿಗ್ರಹ ಪೂರ್ವಾಭಿಮುಖವಾಗಿದೆ. ದೇವಾಲಯದ ಪ್ರವೇಶದ್ವಾರದಿಂದ ಈ ಸನ್ನಿಧಿಗೆ ಏಳು ದ್ವಾರಗಳಿವೆ. ಪ್ರತಿವರ್ಷ ಮಾರ್ಚ್ 23 ರಂದು ಸಂಭವಿಸುವ ವಿಷುವತ್,(equinox) ದಿನದಂದು, ಬೆಳಗ್ಗೆ ಸೂರ್ಯ ಉದಯಿಸಿದಾಗ ಅವನ ಮೊದಲ ಕಿರಣಗಳು ಈ ಸಪ್ತದ್ವಾರಗಳನ್ನೂ ದಾಟಿ, ವೀರನಾರಾಯಣನ ಮೂರ್ತಿಯನ್ನು ಬೆಳಗುತ್ತದೆ!  




ದೇವಾಲಯ ಸಮುಚ್ಛಯದ ಪೂರ್ವ ಭಾಗ
ವೀರನಾರಾಯಣ ದೇವಾಲಯವೆಂದೇ ಪ್ರಸಿದ್ಧ ವಾಗಿರುವ ಈ ತ್ರಿಕೂಟವನ್ನು ಪ್ರವೇಶಿಸಿದರೆ ನಮಗೆ ಎದುರಾಗುವುದೇ ದೇವಾಲಯದ ಪೂರ್ವಭಾಗ. ವೀರನಾರಾಯಣ ದೇವಾಲಯದ ನಂತರ, ಅದರ‌ ಮುಂಭಾಗದಲ್ಲಿ ಈ ದೇವಾಲಯವನ್ನು ನಿರ್ಮಿಸಿದ್ದರಿಂದ, ಎರಡು ಭಾಗಗಳ ನಡುವೆ ಒಂದು ಸಂಪರ್ಕವನ್ನು ನಿರ್ಮಿಸಲಾಯಿತು. ದೇವಾಲಯ ಸಮುಚ್ಛಯದ ಪೂರ್ವಭಾಗದಲ್ಲಿ ಎರಡು ಸನ್ನಿಧಿಗಳಿವೆ: ದಕ್ಷಿಣದಲ್ಲಿ ವೇಣುಗೋಪಾಲ ಮತ್ತು ಉತ್ತರದಲ್ಲಿ ಯೋಗನರಸಿಂಹ. ದೇವಾಲಯದ ಈ ಭಾಗವನ್ನು ಅತ್ಯಂತ ವಿಶಿಷ್ಟವಾಗಿ ನಿರ್ಮಿಸಲಾಗಿದೆ. ದೇವಾಲಯದ ಪೂರ್ವಭಾಗವನ್ನು ಕೆಳಗೆ ಹೆಸರಿಸಿರುವ ಏಳುಭಾಗಗಳಾಗಿ ವಿಂಗಡಿಸಿ ನೋಡುವುದು ಸೂಕ್ತ: 

1. ಅಧಿಷ್ಠಾನ ಅಥವಾ ಪೀಠಿಕೆ (Basement); 
2. ಹೊರಗೋಡೆ ಅಥವಾ ಭಿತ್ತಿ; 
3. ಬೋದಿಗೆಗಳು ಮತ್ತು ಕೈಪಿಡಿಗೋಡೆ (eaves and parapet);  
4. ವಿಮಾನ ಅಥವಾ ಶಿಖರ; 
5. ಸಭಾಮಂಟಪ (a large pavilion); 
6. ಗರ್ಭಗುಡಿಗಳು; ಮತ್ತು 
7. ಉಪ್ಪರಿಗೆ 
 
1.ಅಧಿಷ್ಠಾನ ಅಥವಾ ಪೀಠಿಕೆ
 ದೇವಾಲಯದ ಪೀಠಿಕೆಯಲ್ಲಿ ಎರಡು ಭಾಗಗಳಿದ್ದು, ಸಭಾಮಂಟಪಕ್ಕೆ ಅಂಟಿಕೊಂಡಿರುವ ಭಾಗದಲ್ಲಿ ನಾಲ್ಕು ಮತ್ತು ಗರ್ಭಗುಡಿಯ ಭಾಗದಲ್ಲಿ ಆರು ಚಿತ್ರಪಟ್ಟಿಕೆಗಳಿವೆ. ಮಂಟಪದ ನಾಲ್ಕು ಪಟ್ಟಿಕೆಗಳಲ್ಲಿ ಶಿಖರಗಳನ್ನು ಮತ್ತು ಸಿಂಹ, ಸಳ, ಯಕ್ಷ - ಯಕ್ಷಿಯರನ್ನು ಕಾಣಬಹುದು. ಇವುಗಳ ಮೇಲೆ ಬಾಗಿರುವ ಕಟಾಂಜನದಲ್ಲಿ (in the slanted railing), ಕಂಬಗಳ ನಡುವೆ, ಆಗ್ನೇಯದಿಂದ (from southeast) ಮುಂದುವರೆದರೆ ಕೆಳಗೆ ಹೆಸರಿಸುವ ಶಿಲ್ಪಗಳನ್ನು ಕಾಣಬಹುದು
 
೧. ನಾಗರಾಜನೊಡನೆ ಕಾದಾಡುತ್ತಿರುವ ಭೀಮ
೨. ಬಲರಾಮ ( ಇದರ ಮುಂಭಾಗದಲ್ಲಿ ಸ್ತ್ರೀ ವಿಗ್ರಹವೊಂದಿದ್ದು, ಆ ಸ್ತ್ರೀಯ ಹಿಂದೆ ಒಂದು ಪುರುಷ ವಿಗ್ರಹವನ್ನೂ ಕಾಣಬಹುದು.ಇದು ಸುಭದ್ರೆಯನ್ನು ಅಪಹರಿಸಿದ ಅರ್ಜುನನನ್ನು ಬಲರಾಮ ಅಟ್ಟಿಕೊಂಡು ಬರುತ್ತಿರುವ ಚಿತ್ರ ಎಂದು ತಜ್ಞರು ಊಹಿಸಿದ್ದಾರೆ).
೩. ಗೋವು, ಗೋಪಾಲರ ನಡುವೆ ವೇಣುಗೋಪಾಲ.
೪. ತನ್ನ ತಾಯಿಯ ಶಿರಚ್ಛೇದನ ಮಾಡುತ್ತಿರುವ ಪರಶುರಾಮ
೫. ಕೃಷ್ಣನಿಂದ ಧೇನುಕಾಸುರ ವಧೆ
೬. ಕೃಷ್ಣ ನಿಂದ ಹಯಾಸುರ ವಧೆ
೭. ಗೋವರ್ಧನಧಾರಿ ಕೃಷ್ಣ
೮. ಕಾಳಿಂಗಮರ್ದನ
೯. ಎರಡು ಕಪಿಗಳು ಕಾದಾಡುತ್ತಿರುವುದ
೧೦. ಮೋಹಿನಿ ಭಸ್ಮಾಸುರ
೧೧. ಸಂಗೀತ ಮತ್ತು ನೃತ್ಯಗಾರರು.

ಮಂಟಪದ ಉತ್ತರ ಕಟಾಂಜನದಲ್ಲಿ ಶಿಲ್ಪಗಳಿಲ್ಲ.
 
2. ಹೊರಗೋಡೆ ಅಥವಾ ಭಿತ್ತಿ 
 
ಪೂರ್ವ ಭಾಗದಲ್ಲಿನ ಎರಡೂ ಗರ್ಭಗುಡಿಗಳ ಹೊರಗೋಡೆಯನ್ನು ಕಾರ್ನೀಸಿನಿಂದ (cornice) ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಗೋಡೆಯ ಮೇಲ್ಭಾಗದಲ್ಲಿ ಒಂದು ಅಥವಾ ಎರಡು ಅರೆಗಂಬ (pilaster) ಗಳ ನಡುವೆ ಸಣ್ಣಗೋಪುರಗಳನ್ನು ಕಾಣಬಹುದು. ಗೋಡೆಯ ಕೆಳಭಾಗದಲ್ಲಿ ಲತಾತೋರಣಗಳ ಕೆಳಗೆ ಸುಮಾರು ಎರಡೂವರೆ ಅಡಿ ಎತ್ತರದ ವಿಗ್ರಹಗಳಿವೆ. ಇವುಗಳ ಪೀಠದ ಮೇಲೆ ಪುಷ್ಪಲತೆಗಳಿವೆ. ಈ ಮೂರ್ತಿಗಳ ಸಾಲಿನಲ್ಲಿ ಅಲ್ಲೊಂದು ಇಲ್ಲೊಂದು ಬುದ್ಧನ ವಿಗ್ರಹ ಕಾಣುವುದು ಗಮನಾರ್ಹ.
 
ವೇಣುಗೋಪಾಲ ಗುಡಿಯ ಗೋಡೆಯ ಮೇಲೆ ಪೂರ್ವದಿಂದ ಪ್ರದಕ್ಷಿಣಾ ಕಾರವಾಗಿ ಮುಂದುವರೆದರೆ ಕಾಣುವ ವಿಗ್ರಹಗಳು ಇಂತಿವೆ :
 
ಪೂರ್ವ ಮುಖ : 
 
೧. ಹರಿಹರ
೨. ಗರುಡ
೩. ನಾರಾಯಣ (ಪ - ಗ - ಚ - ಶಂ)
 
೪. ಕೇಶವ (ಶಂ - ಚ - ಗ - ಪ)
೫. ಕೈನಲ್ಲಿ ದಂಡ ಮತ್ತು ಕಮಂಡಲು ಹಿಡಿದಿರುವ ವಾಮನ ; ಪಕ್ಕದಲ್ಲಿ ಪರಿಚಾರಿಕೆ
೬. ಇಬ್ಬರು ದೇವಿಯರು ಮತ್ತು ನಾಲ್ವರು ಪರಿಚಾರಿಕೆಯರ ನಡುವೆ ಸ್ಥಾನಕ ವಿಷ್ಣು (ಪ - ಶಂ - ಚ - ಗ)
 ೭. ಉಷ್ಣೀಷರಹಿತ, ಧ್ಯಾನಾಸಕ್ತ ಆಸೀನ ಬುದ್ಧ.
೮. ವೇಣುಗೋಪಾಲ
 
ದಕ್ಷಿಣ ಮುಖ : 
Add caption

 
೯. ಕಾಳಿಂಗಮರ್ದನ
೧೦. ಗರುಡ
೧೧. ಇಬ್ಬರು ದೇವಿಯರು ಮತ್ತು ನಾಲ್ವರು ಚಾಮರಧಾರಿಣಿಯರ ನಡುವೆ ಸ್ಥಾನಕ ಪುರುಷೋತ್ತಮ (ಪ - ಶಂ - ಗ - ಚ) 
೧೨. ಸ್ಥಾನಕ ನರಸಿಂಹ (ಪ - ಗ- ಶಂ - ಚ) 
೧೩. ಸ್ಥಾನಕ ಶ್ರೀಧರ (ಚ - ಗ - ಶಂ - ಪ)

ಪಶ್ಚಿಮ ಮುಖ:
 
೧೪. ನಾರಾಯಣ (ಪ - ಗ - ಚ - ಶಂ)
೧೫. ಅರ್ಜುನ - ಮತ್ಸ್ಯ ಯಂತ್ರ 
೧೬. ಗೋವರ್ಧನಧಾರಿ ಕೃಷ್ಣ - ಅಕ್ಕಪಕ್ಕದಲ್ಲಿ ಇಬ್ಬರು ದೇವಿಯರು ಮತ್ತು ಚಾಮರಧಾರಿಣಿಯರು.
 
೧೭. ಪರಶುರಾಮ
೧೮. ಗೋವಿಂದ (ಗ - ಪ - ಶಂ - ಚ) 
೧೯. ಹಲಾಯುಧ 
೨೦. ಚತುರ್ಭುಜ ಲಕ್ಷ್ಮೀ (ಪ - ಚ - ಶಂ - ಫಲ) 
೨೧. ದ್ವಿಭುಜ ಶ್ರೀರಾಮ
೨೨. ಧರಣೀವರಾಹ (ಅಪೂರ್ಣ) 
 
ಯೋಗನರಸಿಂಹ ಸನ್ನಿಧಿಯ ಹೊರಗೋಡೆ / ಭಿತ್ತಿ
 
ಯೋಗನರಸಿಂಹ ಸನ್ನಿಧಿಯು ಉತ್ತರ ಭಾಗದಲ್ಲಿದೆ. ಈ ಸನ್ನಿಧಿಯ ವಾಯವ್ಯದಿಂದ (northwest) ಪ್ರಾರಂಭಮಾಡಿ ಪ್ರದಕ್ಷಿಣಾಕಾರವಾಗಿ ಮುಂದುವರೆದರೆ ಗುರುತಿಸಬಹುದಾದ ಮೂರ್ತಿಗಳೆಂದರೆ :
 
ಪಶ್ಚಿಮ ಮುಖ:
 
೨೩. ಅಂಜಲಿ ಹಸ್ತನಾದ ರಾಜ (ಇದು ಪ್ರಹ್ಲಾದ ನಿರಬಹುದೆಂದು ತಜ್ಞರು ಊಹಿಸುತ್ತಾರೆ)
೨೪. ಇಬ್ಬರು ಚಾಮರಧಾರಿಣಿಯರ ನಡುವೆ ಯೋಗನರಸಿಂಹ.
೨೫. ಇಬ್ಬರು ದೇವಿಯರ ನಡುವೆ ವಾಮನ (ಚ - ಗ - ಪ - ಶಂ) 
೨೬. ಹಲಾಯುಧ
೨೭. ಗರುಡ
೨೮. ಇಬ್ಬರು ದೇವಿಯರು ಮತ್ತು ಇಬ್ಬರು ಚಾಮರಧಾರಿಣಿಯರ ನಡುವೆ ಪ್ರದ್ಯುಮ್ನ (ಚ - ಗ - ಪ – ಶಂ)
೨೯. ಗರುಡ
೩೦. ಶ್ರೀರಾಮ
೩೧. ಸ್ಥಾನಕ ಕೃಷ್ಣ ( ಗ - ಪ - ಚ - ಶಂ ) ; ಎಡಗಡೆಯಲ್ಲಿ ದೇವಿ.
 
ಉತ್ತರ ಮುಖ: 
 
೩೨. ಲಕ್ಷ್ಮಿಯೊಡನೆ ಕೇಶವ ( ಶಂ - ಚ - ಗ - ಪ )
೩೩. ಕನ್ನಡಿ ಹಿಡಿದಿರುವ ಮೋಹಿನಿ; ಪಕ್ಕದಲ್ಲಿ ಚಾಮರಧಾರಿಣಿ
೩೪. ಇಬ್ಬರು ದೇವಿಯರು ಹಾಗೂ ಇಬ್ಬರು ಚಾಮರಧಾರಿಣಿಯರ ನಡುವೆ ಪ್ರದ್ಯುಮ್ನ
೩೫. ಸ್ಥಾನಕ ನರಸಿಂಹ ; ಪಕ್ಕದಲ್ಲಿ ಇಬ್ಬರು ದೇವಿಯರು ಮತ್ತು ಒಬ್ಬ ಚಾಮರಧಾರಿಣಿ 
 
ಪೂರ್ವ ಮುಖ:
 
೩೬. ಭಗ್ನವಾಗಿರುವ ವಿಷ್ಣುವಿನ ಮೂರ್ತಿಯ ಪಕ್ಕದಲ್ಲಿ ದೇವಿ.
೩೭. ಪರಿಚಾರಿಕೆಯ ಪಕ್ಕದಲ್ಲಿ ಪರಶುರಾಮ
೩೮. ಕತ್ತಿ ಮತ್ತು ಗುರಾಣಿ (sword and shield) ಹಿಡಿದಿರುವ ದ್ವಿಭುಜ ಕಲ್ಕಿ ; ಪಕ್ಕದಲ್ಲಿ ಗರುಡ
೩೯. ಧರಣೀವರಾಹ ಪಕ್ಕದಲ್ಲಿ ದೇವಿ.
೪೦. ವಾದ್ಯ (ಡವಣೆ, ರುದ್ರವೀಣೆ, ತಾಳ, ಮೃದಂಗಗಳು) ಸಂಗೀತಕ್ಕೆ ಕಾಳಿಂಗನ ಮೇಲೆ ನರ್ತಿಸುತ್ತಿರುವ ಕೃಷ್ಣ - ಕಾಳಿಂಗಮರ್ದನ.
 
3.ಬೋದಿಗೆಗಳು ಮತ್ತು ಕೈಪಿಡಿ ಗೋಡೆ (Eaves and parapet) 
 
ಮೇಲ್ಚಾವಣಿಯ ಬೋದಿಗೆಗಳು ಮಣಿ ಸಾಲುಗಳಿಂದ ಅಲಂಕೃತವಾಗಿದೆ. ಸಭಾ ಮಂಟಪದ ಬೋದಿಗೆಗಳು ಎರಡು ಭಾಗವಾಗಿ, ಕೆಳಭಾಗದಲ್ಲಿ ತೊಲೆಗಳನ್ನು ಹೊಂದಿವೆ. ದೇವಾಲಯದ ಸುತ್ತಲೂ ಇರುವ ಕೈಪಿಡಿ ಗೋಡೆಯ ಮೇಲೆ ಶಿಖರಗಳು, ಸಳ, ಸಿಂಹಗಳು, ಯಕ್ಷರು, ಮಕರಗಳು ಮತ್ತು ವಿಷ್ಣುವಿನ ವಿವಿಧ ರೂಪಗಳನ್ನು ಕಾಣಬಹುದು. ಈ ವಿಗ್ರಹಗಳಲ್ಲಿ ಮುಖ್ಯವಾದವು ಇಂತಿವೆ :
 
ಪೂರ್ವದ್ವಾರದ ಮೇಲೆ: 
ಸೀತಾ, ಲಕ್ಷ್ಮಣ ಸ‌ಹಿತನಾದ ಶ್ರೀರಾಮ ಮತ್ತು ಕಪಿಗಳು.
ಕೆಳಗೆ ಸಿಂಹಗಳೊಡನೆ ಹೋರಾಡುತ್ತಿರುವ ಸಳ 
 
ಆಗ್ನೇಯ (southeast) ಮೂಲೆ:
ಕಾಳಿಂಗ ಮರ್ದನ ಮತ್ತು ವೇಣುಗೋಪಾಲ
 
ಸಭಾಮಂಟಪದ ನ್ಯೆರುತ್ಯ (southwest):
ಇಬ್ಬರು ಯೋಧರು.
 
ನವರಂಗದ ದಕ್ಷಿಣ:
ಲಕ್ಷ್ಮೀನಾರಾಯಣ ಮತ್ತು ಮೋಹಿನೀ
 
ನವರಂಗದ ಉತ್ತರ: 
ಯೋಗನರಸಿಂಹ
 
ಮುಖಮಂಟಪದ ಉತ್ತರ: ಹಲಾಯುಧ
 
ಸಭಾಮಂಟಪದ ಆಗ್ನೇಯ:
ಹನುಮಂತ, ಬುದ್ಧ, ಕಲ್ಕಿ; ಮತ್ತು ಸುವರ್ಣ ಮೃಗವನ್ನು ಸಂಹರಿಸುತ್ತಿರುವ ಶ್ರೀರಾಮ
 
4.ವಿಮಾನ ಅಥವಾ ಶಿಖರ
 
ಪಶ್ಚಿಮ ಭಾಗದ ಗರ್ಭಗುಡಿಯ ಮೇಲಿರುವಂತೆಯೇ, ದಕ್ಷಿಣ ಮತ್ತು ಉತ್ತರಭಾಗದ ಗರ್ಭಗುಡಿಗಳ ಮೇಲೂ ಶಿಖರವಿದೆ. ಅತ್ಯಂತ ಭವ್ಯವಾದ ರಚನೆಗಳಾದ ಈ ಶಿಖರಗಳು ಮೂರು ಅಂತಸ್ತಿನರಚನೆಗಳಾಗಿದ್ದು ಉಪಶಿಖರ (turrets) ಗಳನ್ನು ಹೊಂದಿವೆ; ಕೀರ್ತಿಮುಖಗಳೂ ಇವೆ. ಈ ಶಿಖರಗಳ ಮೇಲೆ ಅನೇಕ ವಿಗ್ರಹಗಳನ್ನು ಕಾಣಬಹುದು. ಈ ವಿಗ್ರಹಗಳಲ್ಲಿ ಗಮನಾರ್ಹವಾದುವೆಂದರೆ :
ದಕ್ಷಿಣ ಶಿಖರ: 
ಲಕ್ಷ್ಮೀನರಸಿಂಹ, ಯೋಗನರಸಿಂಹ, ಉಗ್ರನರಸಿಂಹ ಮತ್ತು ಬುದ್ಧ. ಶಿಖರಗಳ ಮುಂಚಾಚಿನ ಫಲಕಗಳಲ್ಲಿ ವಿಷ್ಣುವಿನ ವಿಗ್ರಹವನ್ನು ಕಾಣಬಹುದು.

ಲೇಖನ ಭಾಗ ೩ ರಲ್ಲಿ  ಮುಂದುವರೆಯುವುದು .......

Comments