ಪ್ರೊಫೆಸರ್ ಜಿ. ವೆಂಕಟಸುಬ್ಬಯ್ಯ -2

 ಪ್ರೊಫೆಸರ್ ಜಿವೆಂಕಟಸುಬ್ಬಯ್ಯ  

ನಿಶ್ಶಬ್ದವಾಗಿ ಕನ್ನಡದ ಕನಸು ಕಂಡ ಜೀವಿ .... ಭಾಗ ೧ 

  ಲೇಖನ   - ಜಿ ವಿ ಅರುಣ 


ಭಾಗ  -  1

ಮುಂದುವರೆದ  ಭಾಗ  -  2 .........

............ಬೇರು ನೀರುಂಡಾಗ...:

   ಇದರ ಮುಂದುವರಿದ ಭಾಗವಾಗಿ ಪ್ರೊ|| ಜಿ. ವಿ. ಅವರು ಹೈಸ್ಕೂಲುಗಳಲ್ಲಿ ಈ ರೀತಿಯ ಕ್ರಮ ಬೇಕಾಗುತ್ತದೆ ಎಂದು ಅರಿತರು. ಆಗ ಬಿಎಡ್ ತರಗತಿಗಳಲ್ಲಿ ಕನ್ನಡದ ಬೋಧನೆಯ ಕ್ರಮವನ್ನು ಕಲಿಯಲು ಅವಕಾಶವಿರಲಿಲ್ಲ. ಅದಕ್ಕೆ ಇಂಗ್ಲಿಷ್ ಬೋಧನಾ ಕ್ರಮವನ್ನು ಐಚ್ಛಿಕವಾಗಿ ತೆಗೆದುಕೊಳ್ಳುತ್ತಿದ್ದರು. ಆಗ ಶಿಕ್ಷಣ ವಿಭಾಗದ ಡೀನ್ ಆಗಿದ್ದ ಡಾ|| ತೀರ್ಥ ಅವರೊಡನೆ ಮಾತನಾಡಿ, ಬಿ ಎಡ್ ಕಾಲೇಜುಗಳಲ್ಲಿ ಮೆಥಡಾಲಜಿ ಆ‌ಫ್ ಟೀಚಿಂಗ್ ಕನ್ನಡವನ್ನು ಸೇರಿಸುವಂತೆ ಕೇಳಿಕೊಂಡರು. ಅವರಿಬ್ಬರೂ ಸೇರಿ ಅದಕ್ಕೆ ಬೇಕಾದ ಪಠ್ಯಕ್ರಮವನ್ನು ರೂಪಿಸಿದರು. ಡಾ|| ತೀರ್ಥ ಅವರ ಕೋರಿಕೆಯ ಮೇರೆಗೆ ರಾಷ್ಟ್ರೀಯ ವಿದ್ಯಾಲಯ ಅಧ್ಯಾಪಕರ ಕಾಲೇಜು ಹಾಗೂ ಬಿಇಎಸ್ ಅಧ್ಯಾಪಕರ ಕಾಲೇಜುಗಳಲ್ಲಿ ಹಲವು ವರ್ಷಗಳ ಕಾಲ, ಬಿ ಟಿ ಪದವಿ ಪಡೆದಿದ್ದ ನಮ್ಮ ತಂದೆಯವರೇ ಮೆಥಡಾಲಜಿ ಆ‌ಫ್ ಟೀಚಿಂಗ್ ಕನ್ನಡವನ್ನು ಸಂದರ್ಶಕ ಪ್ರಾಧ್ಯಾಪಕರಾಗಿ ಬೋಧನೆ ಮಾಡಿದರು. ಇವರ ಕೈಕೆಳಗೆ ತಯಾರಾಗಿ, ಎಂಎಡ್ ಮಾಡಿ, ಪಿಎಚ್‌ಡಿ ಪದವಿಯನ್ನು ಪಡೆದವರು ಆ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇರುವವರೆಗೂ ಇದು ಮುಂದುವರೆಯಿತು.

+++++++

ಹೊಸ ಸ್ಥಳದ ಚರಿತ್ರೆಯ ಮಹತ್ವ.

    ನಾವು ಚಿಕ್ಕವರಿದ್ದಾಗ ನಮ್ಮನ್ನು ಸಮಯ ಸಿಕ್ಕಾಗಲೆಲ್ಲ, ನಮ್ಮ ತಂದೆ-ತಾಯಿಯರು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಉತ್ತರ, ದಕ್ಷಿಣ ಭಾರತಗಳಲ್ಲಿ, ಕರ್ನಾಟಕದ ಅನೇಕ ಕಡೆ ಪ್ರವಾಸ ಹೋಗಿದ್ದೇವೆ. ನಾವು ಪ್ರಯಾಣ ಮಾಡುತ್ತಿದ್ದಾಗ ಮುಂದೆ ಹೋಗುತ್ತಿದ್ದ ಸ್ಥಳದ ಬಗ್ಗೆ ಚರಿತ್ರೆಯನ್ನು ಕತೆಯ ರೀತಿ ವಿವರವಾಗಿ ನಮಗೆ ಹೇಳುತ್ತಿದ್ದರು.

    ನಾನು ವಿಶೇಷ ತರಬೇತಿಗಾಗಿ ರಷ್ಯಾ ದೇಶಕ್ಕೆ ಹೊರಟಾಗ, ಅಲ್ಲಿನ ಚರಿತ್ರೆಯನ್ನು ಓದುವಂತೆ ತಿಳಿಸಿದ್ದರು. ನಾನು ಅದನ್ನು ಓದಿದೆ. ಅನಂತರ ಆ ದೇಶದ ಚರಿತ್ರೆಯನ್ನು, ಮಹಾಯುದ್ಧಗಳಿಂದ ರಷ್ಯಾದ ಮೇಲೆ ಆದ ಪರಿಣಾಮಗಳನ್ನು, ಕಮ್ಯುನಿಸಂ ಬೆಳೆದ ಬಗೆಯನ್ನು ತಿಳಿಸಿದರು. ಅಲ್ಲದೆ ಆಗ ಗೊರ್ಬಚೇವ್ ಆಡಳಿತದಲ್ಲಿ ಜಾರಿಗೆ ಬರುತ್ತಿದ್ದ ಗ್ಲಾಸ್ನಾಸ್ಟ್, ಪೆರಿಸ್ಟ್ರೋಯಿಕ ಬಗ್ಗೆ ತಿಳಿಸಿದಾಗ, ಅವರು ಓದುವ ವೃತ್ತಪತ್ರಿಕೆಗಳನ್ನೇ ನಾನು ಪ್ರತಿದಿನ ಓದಿದ್ದರೂ, ಅವರು ಗ್ರಹಿಸಿರುವಷ್ಟು ವಿಚಾರದ - ಪ್ರಪಂಚದ ಆಗುಹೋಗುಗಳ ವಿಚಾರದ ಒಂದು ಅಂಶವನ್ನು ನಾನು ಗ್ರಹಿಸಿರಲಿಲ್ಲ ಎಂಬುದರ ಅರಿವಾಗಿತ್ತು. 

   ಅವರ ಈ ಮಾರ್ಗದರ್ಶನದಿಂದಾಗಿ, ನನ್ನ ತಾಂತ್ರಿಕ ತರಬೇತಿಯ ಜೊತೆಗೆ ಸಾಂಸ್ಕೃತಿಕವಾಗಿ ಆ ದೇಶದ ಹಿರಿಮೆಯನ್ನು ಅರ್ಥಮಾಡಿಕೊಳ್ಳಲು, ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಲು ಸಾಧ್ಯವಾಯಿತು.

+++++++

ಅಧ್ಯಾಪಕನ ಚಿಕಿತ್ಸಕ ದೃಷ್ಟಿ.

    ಅವರು ಸುತ್ತಮುತ್ತಲು ನಡೆಯುತ್ತಿದ್ದ ಘಟನೆಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಒಮ್ಮೆ ತಿರುಮಲೆಯಲ್ಲಿ ಬೇಸಿಗೆಯ ಮಟಮಟ ಮಧ್ಯಾಹ್ನ, ನಮಗೆ ಅನತಿ ದೂರದಲ್ಲಿ ಅಳುತ್ತಿದ್ದ ಪುಟ್ಟ ಮಗುವನ್ನು ಎತ್ತಿಕೊಂಡು ಕಿರಿಯ ವಯಸ್ಸಿನ ಮಹಿಳೆ ನಿಂತಿದ್ದಳು. ಅವಳ ಪಕ್ಕದಲ್ಲಿ ಅವಳ ಗಂಡ ಇಬ್ಬರನ್ನೂ ಬೈಯುತ್ತಾ ನಿಂತಿದ್ದ. ಮಗು ಬಿಕ್ಕಿ ಬಿಕ್ಕಿ ಅಳಲು ತೊಡಗಿತು. ಅವನು ಅಳು ನಿಲ್ಲಿಸು ಎಂದು ಮಗುವಿಗೆ ಹೊಡೆದ. ಅವನಿಂದ ಮಗುವನ್ನು ಕಾಪಾಡಲು ತಿರುಗಿದ್ದರಿಂದ ಎರಡನೆಯ ಏಟನ್ನು ತಾಯಿ ಪಡೆಯ ಬೇಕಾಯಿತು.

  ಮಗು ಈ ಆಘಾತದಿಂದ ಉಸಿರುಗಟ್ಟಿ ಅಳತೊಡಗಿತು. ಅವನು ಮತ್ತೆ ಅದಕ್ಕೆ ಹೊಡೆಯಲು ಕೈ ಎತ್ತಿದಾಗ ನಮ್ಮ ತಂದೆ ಮುನ್ನುಗ್ಗಿ ಅವನನ್ನು ತಡೆದರು. ಇವರ ಕೋಪ ನೋಡಿ ಅವನು ಸ್ವಲ್ಪ ತಣ್ಣಗಾದ. ತಾಯಿಗೆ ಮಗುವಿಗೆ ಹಾಕಿದ್ದ ಫ್ರಾಕ್ ತೆಗೆಯಲು ಹೇಳಿದರು. ಅವಳು ಅಲ್ಲೇ ಕುಳಿತು, ಬಿಗಿಯಾಗಿದ್ದ ಶಾಕಿಂಗ್ ಪಿಂಕ್ ಬಣ್ಣದ ನೈಲಾನ್ ಬಟ್ಟೆಯನ್ನು ಬಿಚ್ಚಿದಳು. ಗಾಳಿ ಮೈಗೆ ಸೊಕುತ್ತಿದ್ದಂತೆ, ಒಂದೇ ಕ್ಷಣದಲ್ಲಿ ಅಳು ನಿಲ್ಲಿಸಿದ ಮಗು, ಏನೂ ಆಗಿಲ್ಲವೆಂಬಂತೆ ಕೇಕೆ ಹಾಕಿ ನಗತೊಡಗಿತು. ಮಗುವಿನ ತಾಯಿ ದೇವಸ್ಥಾನದ ಕಡೆಗೆ ಕೈಮಾಡಿ ನಮ್ಮ ತಂದೆಯವರ ಕಾಲಿಗೆ ನಮಸ್ಕಾರ ಮಾಡಿದಳು. ಮಗುವಿಗೆ ಹತ್ತಿಯ ಬಟ್ಟೆಯ ಅಳ್ಳಕವಾದ ಫ್ರಾಕ್ ಹಾಕಲು ಮಗುವಿನ ತಂದೆಗೆ ತಿಳಿಸಿದರು. 

++++++

   ನನ್ನ ತುಂಟತನಕ್ಕೆ ಸಿಕ್ಕಿದ ಅಮೂಲ್ಯ ಬಹುಮಾನ:

   ನಾನು ಸಣ್ಣವನಿದ್ದಾಗ ಬಹಳ ತುಂಟತನ ಮಾಡುತ್ತಿದ್ದೆ. ಅದಕ್ಕೆ ರಜೆಯ ದಿನಗಳಲ್ಲಿ ನಮ್ಮ ತಂದೆಯವರು ಹೊರಗೆ ಹೊರಟರೆ, "ಇವನನ್ನು ಕರೆದುಕೊಂಡು ಹೋಗಿ" ಎಂದು ನಮ್ಮ ತಾಯಿಯವರು ನನ್ನನ್ನು ಅವರ ಜೊತೆ ಕಳುಹಿಸುತ್ತಿದ್ದರು, ಅಲ್ಲ ಸಾಗಹಾಕುತ್ತಿದ್ದರು! ಅವರ ಸೈಕಲ್ ಮೇಲೆ, ಮುಂದೆ, ನನಗಾಗಿ ಸಣ್ಣ ಪೀಠವೊಂದನ್ನು ಹಾಕಿಸಿದ್ದರು. ಹೀಗೆ ಅವರೊಡನೆ ಹೋದಾಗ ಅನೇಕ ಹಿರಿಯ ಸಾಹಿತಿಗಳನ್ನು ಹತ್ತಿರದಿಂದ ನೋಡುವ, ಅವರಿಂದ ತಲೆ ನೇವರಿಸಿಕೊಂಡು ಆಶೀರ್ವಾದ ಪಡೆಯುವ ಪುಣ್ಯ ನನ್ನ ತುಂಟುತನದ ದೆಸೆಯಿಂದ ನನಗೆ ಪ್ರಾಪ್ತವಾಗಿತ್ತು. ಅಂದು ಪಡೆದ ಅವರೆಲ್ಲರ ಆಶೀರ್ವಾದದ ಜೊತೆಗೆ ನನ್ನ ತಂದೆ-ತಾಯಿಯರ ಆಶೀರ್ವಾದವು ಸೇರಿರುವುದರಿಂದ, ನನಗೆ ನಿಮ್ಮಂಥ ಸಜ್ಜನರ, ಸನ್ಮಿತ್ರರ ಜೊತೆ ಇರಲು ಸಾಧ್ಯವಾಗಿದೆ ಎಂದು ನಾನು ಭಾವಿಸುತ್ತೇನೆ.

 

Comments

  1. ಜೀವಿ ಎಷ್ಟು ಸೂಕ್ಷ್ಮ ಗ್ರಾಹಿಗಳೆನ್ನುವ ಅಪೂರ್ವ ನಿದರ್ಶನಗಳು ತಮ್ಮ ಲೇಖನಗಳಿಂದ ದಕ್ಕುತ್ತಿವೆ.

    ಹಾರ್ದಿಕ ಧನ್ಯವಾದಗಳು ಸರ್.

    ReplyDelete
  2. Very nice of you sharing these golden moments

    ReplyDelete

Post a Comment