ಪ್ರೊಫೆಸರ್ ಜಿ. ವೆಂಕಟಸುಬ್ಬಯ್ಯ - ಭಾಗ ೧

ಪ್ರೊಫೆಸರ್ ಜಿ. ವೆಂಕಟಸುಬ್ಬಯ್ಯ  

ನಿಶ್ಶಬ್ದವಾಗಿ ಕನ್ನಡದ ಕನಸು ಕಂಡ ಜೀವಿ .... ಭಾಗ ೧ 

  ಲೇಖನ   - ಜಿ ವಿ ಅರುಣ

 ಪ್ರೊಫೆಸರ್ ಜಿ. ವೆಂಕಟಸುಬ್ಬಯ್ಯ ಅವರು ಇಂದು ನಮ್ಮೊಡನೆ ಇಲ್ಲ. ಆದರೆ ಅವರ ನುಡಿಗಳಿಂದ, ಅರ್ಥ ತಿಳಿಸಿರುವ ಶಬ್ದಗಳಿಂದ, ಕೃತಿಗಳಿಂದ ಎಂದೆಂದೂ ನಮ್ಮೊಡನೆ ಇರುತ್ತಾರೆ. 

  ಈ ಸಂದರ್ಭದಲ್ಲಿ, ನಮ್ಮ ತಂದೆಯವರನ್ನು ಕುರಿತ

 ಅಸಮಗ್ರವಾದ, ಮನಸ್ಸಿನಲ್ಲಿ ಲಹರಿಯಂತೆ ಹರಿದ ಕೆಲವು ಭಾವನೆಗಳನ್ನು, ಘಟನೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. 

ಇಗೋ ಕನ್ನಡದ ಕೆಲವು ಪ್ರಸಂಗಗಳು.

1)   

    ಒಮ್ಮೆ ಇಗೋ ಕನ್ನಡದ ಹಸ್ತಪ್ರತಿಯನ್ನು ನೋಡುತ್ತಿದ್ದೆ. (ಇಗೋ ಕನ್ನಡದ ಎಲ್ಲ ಹಸ್ತಪ್ರತಿಗಳನ್ನು - ಅದು ಪ್ರಜಾವಾಣಿಗೆ ಹೋಗುವ ಮೊದಲು ನಾನು ಓದಿದ್ದೇನೆ ಎಂಬ ಹೆಮ್ಮೆ ನನಗಿದೆ). ‘ಪಿತ್ರಾರ್ಜಿತ’ ಎಂಬ ಪದಕ್ಕೆ ಅರ್ಥ ವಿವರಣೆ ಅಲ್ಲಿತ್ತು. ‘ಸ್ವಯಾರ್ಜಿತ’ದ ಬಗ್ಗೆ ಅಲ್ಲೇ ಸೇರಿಸಿ ಎಂದು ಕೇಳಿದೆ. ಅವರು 'ಇಲ್ಲ' ಎಂದರು.

    ನಾನು ಪಟ್ಟು ಹಿಡಿದೆ- ‘ಪಿತ್ರಾರ್ಜಿತ’ದ ಬಗ್ಗೆ ತಿಳಿಯಲು ಉತ್ಸುಕನಾಗಿರುವವನಿಗೆ ‘ಸ್ವಯಾರ್ಜಿತ’ವೂ ಬೇಕಾಗುತ್ತದೆ ಎಂದು ನನ್ನ ವಾದ.

‘ಅವರು ಕೇಳಿರುವುದೇನು?’

‘ಪಿತ್ರಾರ್ಜಿತ’

‘ಅದಕ್ಕೆ ಮಾತ್ರ ನಾನು ಉತ್ತರ ಕೊಡಬೇಕು ಅಷ್ಟೆ’

‘ಸರಿ, ನನಗೆ ಸ್ವಯಾರ್ಜಿತ ಬೇಕು’

‘ನಿನಗೆ ಬೇಕಾದರೆ ಪ್ರಜಾವಾಣಿಗೆ ಬರೆದು ಕೇಳು; ಆಮೇಲೆ ನೋಡೋಣ .....’

    ಹೀಗೆ ಸಾಗಿತ್ತು ವಾದ ಪ್ರತಿವಾದ! ನಮ್ಮಿಬ್ಬರದೂ ಗಟ್ಟಿ ಧ್ವನಿ, ಇದರಲ್ಲಿ ನಾನು ಅವರಿಗೆ ಸರಿಸಾಟಿಯಾದ ಮಗ! ಮುಂದಿನ ಕೊಠಡಿಯಲ್ಲಿ ಇಬ್ಬರೂ ಏರಿದ ಧ್ವನಿಯಲ್ಲಿ ಮಾತನಾಡುತ್ತಿದ್ದಾಗ ಮನೆಗೆ ಪರಿಚಯದವರು ಬಂದದ್ದು ನಮಗೆ ಗೊತ್ತಾಗಲೇ ಇಲ್ಲ! ಅವರು ನನ್ನ ತಾಯಿಯ ಹತ್ತಿರ ‘ಮಗ ಏನೋ ಆಸ್ತಿ ವಿಚಾರ ಗಲಾಟೆ ಮಾಡ್ತಾ ಇದ್ದ ಹಾಗಿದೆ?!’ ಎಂದು ಕೇಳಿದ್ದಾರೆ. ನನ್ನ ತಾಯಿ ‘ಓ! ಅದಾ! ಅದು ಪ್ರತಿ ದಿನ ಇದ್ದದ್ದೆ! ತಾಳಿ ಬಂದೆ’ ಎಂದು ನಮ್ಮ ಬಳಿ ಬಂದು ‘ಸ್ವಲ್ಪ ಮೆತ್ತಗೆ ಮಾತಾಡಿಕೊಳ್ಳಬಾರದೆ! ಬಂದವರು ಏನು ತಿಳ್ಕೊಬೇಕು’ ಎಂದು ಗದರಿದಾಗಲೇ ನಮಗೆ ಎಚ್ಚರ. ಆಚೆ ನಗುತ್ತಾ ಬಂದ ಮೂವರನ್ನೂ ನೋಡಿ ಬಂದಿದ್ದವರಿಗೆ ಆಶ್ಚರ್ಯ. ಏನಾಗುತ್ತಿತ್ತು ಎಂದು ತಿಳಿದ ಮೇಲೆ ಅವರಿಗೆ ಸ್ವಲ್ಪ ನಿರಾಸೆಯಾಗಿತ್ತು ಅಂತ ನನ್ನ ಗುಮಾನಿ!

2)

ಒಮ್ಮೆ ‘ಸ್ವಾಮಿದೇವನೆ ಲೋಕ ಪಾಲನೆ ...’ ಎಂಬ ಪ್ರಾರ್ಥನಾ ಪದ್ಯವನ್ನು ಬರೆದವರು ಯಾರು? ಎಂಬ ಪ್ರಶ್ನೆಗೆ ವಿವರಗಳನ್ನು ನೀಡಿ, ಅದು ಅರಮನೆಯ ವಿದ್ವಾಂಸರಾಗಿದ್ದ ಅಯ್ಯಾ ಶಾಸ್ತ್ರಿಗಳ ರಚನೆ ಎಂದು ತಿಳಿಸಿದ್ದರು. ಇದನ್ನು ಓದಿದ ಮಾಜಿ ಎಂ.ಎಲ್.ಎ. ಒಬ್ಬರು ಶಿವಮೊಗ್ಗದಿಂದ ಕಾಗದ ಬರೆದು - ನೀವು ಮೈಸೂರು ಅರಮನೆಯ ಒಬ್ಬರು ವಿದ್ವಾಂಸರ ಹೆಸರನ್ನು ಮಾತ್ರ ಹೇಳಿದ್ದೀರಿ. ಅದೇ ಕಾಲದಲ್ಲಿ ಮತ್ತೊಬ್ಬ ವಿದ್ವಾಂಸರಾದ ಬಸಪ್ಪ ಶಾಸ್ತ್ರಿಗಳ ಬಗ್ಗೆ ಯಾಕೆ ಹೇಳಿಲ್ಲ? ಅವರ ಬಗ್ಗೆ ಬೇಕಾದರೆ ನಾನು ವಿವರಗಳನ್ನು ಕಳುಹಿಸುತ್ತೇನೆ - ಎಂದು ಬರೆದಿದ್ದರು. ಬಸಪ್ಪ ಶಾಸ್ತ್ರಿಗಳ ಬಗ್ಗೆ ನಮೂದಿಸಿಲ್ಲದ್ದಕ್ಕೆ ಆಕ್ಷೇಪವನ್ನೂ ಮಾಡಿದ್ದರು.

   ತಂದೆಯವರು ಅವರಿಗೆ ಉತ್ತರಿಸಿದರು; ಅದರ ಸಾರಾಂಶ ಇಷ್ಟು: ‘ಬಸಪ್ಪ ಶಾಸ್ತ್ರಿಗಳು ಅರಮನೆಯ ವಿದ್ವಾಂಸರು, ಅವರ ಕನ್ನಡ ಶಾಕುಂತಲ ನಾಟಕಂ, ಮೈಸೂರ ಅರಸರ ಕಾಲದಲ್ಲಿ ಕಾರ್ಯಕ್ರಮಗಳ ಕೊನೆಗೆ ಶಾಂತಿ ಪಾಠವಾಗಿ ಹಾಡುತ್ತಿದ್ದ ಅವರು ರಚಿಸಿದ್ದ ‘ಕಾಯೌ ಶ್ರೀ ಗೌರಿ ...’ ಇವುಗಳ ಬಗ್ಗೆ ನಾನು ತಿಳಿದುಕೊಂಡಿದ್ದೇನೆ, ಅವರ ಗ್ರಂಥಗಳನ್ನು ಓದಿ ಸಂತೋಷಪಟ್ಟಿದ್ದೇನೆ. 

   'ನಾನು ಅಧ್ಯಾಪಕನಾಗಿ ಅರಿತುಕೊಂಡಿರುವುದು ಇಷ್ಟು; ಆಸಕ್ತ ವಿದ್ಯಾರ್ಥಿಗಳಿಗೆ ಅವರಿಗೆ ಬೇಕಾದುದನ್ನು ತಿಳಿಸಿದರೆ ಮಾತ್ರ ಅದು ಅವರ ಮನದಲ್ಲಿ ಬೇರೂರುತ್ತದೆ. ನನಗೆ ಗೊತ್ತು ಎಂದು ಎಲ್ಲ ವಿಚಾರಗಳನ್ನು ತಿಳಿಸುತ್ತಾ ಹೋದರೆ, ಅವರಲ್ಲಿ ಆಸಕ್ತಿ ಕುಂದಿ ಯಾವುದನ್ನೂ ಗ್ರಹಿಸದ ಸ್ಥಿತಿಗೆ ಅವರು ಬಂದು ಬಿಡುತ್ತಾರೆ. ಅಧ್ಯಾಪಕನಾಗಿ ಅವರ ಆಸಕ್ತಿಯನ್ನು ಕೆರಳಿಸುವ ಕಾರ್ಯವನ್ನು ನಾನು ಮಾಡುತ್ತಿದ್ದೇನೆ. ‘ಸ್ವಾಮಿ ದೇವನೆ ...’ ಬಗ್ಗೆ ಬಂದ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇನೆ. ಮುಂದೆ ಆಸಕ್ತರು ‘ಬಸಪ್ಪ ಶಾಸ್ತ್ರಿಗಳ ಬಗ್ಗೆಯೋ ಕಾಯೌ ಶ್ರೀ ಗೌರಿ ... ಬಗ್ಗೆಯೋ ಪ್ರಶ್ನೆ ಕೇಳಿದರೆ ತಕ್ಷಣ ಉತ್ತರಿಸುತ್ತೇನೆ. ಮತ್ತೊಂದು ವಿಚಾರ- ‘ಕಾಯೌ ಶ್ರೀ ಗೌರಿ, ಕರುಣಾಲಹರಿ .....’ ಎಂಬ ಹಾಡನ್ನು ‘ಇಂಗ್ಲಿಷ್ ಟ್ಯೂನ್’ ಗೆ ಹೊಂದಿಸಿ ನಮ್ಮ ಅಂದಿನ ಸಂಗೀತಗಾರರು ಹಾಡುತ್ತಿದ್ದರು!'

   ಇದಕ್ಕೆ ಅವರು ಕಾಗದ ಬರೆದು ‘ನೀವು ಅನುಸರಿಸುತ್ತಿರುವ ಮಾರ್ಗವನ್ನು ತಿಳಿಸಿದ್ದೀರಿ. ಅದನ್ನು ಓದಿ ನನಗೆ ಬಹಳ ಆನಂದವಾಯಿತು. ಅದೇ ಸರಿಯಾದ ಮಾರ್ಗ ಎನ್ನುವುದರಲ್ಲಿ ಎರಡು ಮಾತಿಲ್ಲ ... ನನಗೆ ‘ಇಂಗ್ಲಿಷ್ ಟ್ಯೂನ್’ ವಿಚಾರ ಹೊಸದು. ತಿಳಿಸಿದ್ದಕ್ಕೆ ಧನ್ಯವಾದಗಳು’ ಎಂದು .

++++++

ನಿಶ್ಶಬ್ದವಾಗಿ ನಡೆದ ದೂರಗಾಮಿ ಕನ್ನಡದ ಕ್ರಾಂತಿ :

   ಪದವಿ ಪೂರ್ವ ಶಿಕ್ಷಣದಲ್ಲಿ ಕನ್ನಡ ಭಾಷೆಯ ಬದಲು ಹೆಚ್ಚಾಗಿ ಸಂಸ್ಕೃತದ ಕಡೆಗೆ ವಿದ್ಯಾರ್ಥಿಗಳು ಒಲಿಯುತ್ತಿರುವುದು ಗಮನಿಸಿದರು. ಅದಕ್ಕೆ ಕಾರಣಗಳನ್ನು ವಸ್ತುನಿಷ್ಠವಾಗಿ ಅಧ್ಯಯನ ಮಾಡಿದರು. ಸುಮಾರು 1964 - 1968ರ ಸಮಯದಲ್ಲಿ ಪದವಿಪೂರ್ವ ತರಗತಿಗೆ ಕನ್ನಡದ ಹೊಸಪಠ್ಯ ಸಿದ್ಧವಾಗಿತ್ತು. ಆ ಸಮಿತಿಯ ಮುಖ್ಯಸ್ಥರಾಗಿ ಪ್ರೊ|| ಜಿ. ವಿ. ಅವರು ಕನ್ನಡವನ್ನು ಕಲಿಸುವ ಹೊಸ ಮಾರ್ಗಸೂಚಿಯನ್ನು, ಪರೀಕ್ಷಾ ಕ್ರಮದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಿ ಶಿಕ್ಷಣ ಇಲಾಖೆಯ ಒಪ್ಪಿಗೆಯನ್ನು ಪಡೆದರು. ಕನ್ನಡದ ಅಧ್ಯಾಪಕರುಗಳಿಗೆ ಹೊಸ ಕ್ರಮದ ಬಗ್ಗೆ ಗೋಷ್ಠಿಗಳನ್ನು ನಡೆಸಿ ತಿಳಿವಳಿಕೆಯನ್ನು ಕೊಟ್ಟರು. ಅರ್ಧವಾರ್ಷಿಕ ಪರೀಕ್ಷೆಗಳಿಗೆ, ಟೆಸ್ಟ್‌ಗಳಿಗೆ ಹೊಸ ಮಾದರಿಯ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಮಾಡಿ ಕಳುಹಿಸಿಕೊಟ್ಟರು.

    ಅಲ್ಲಿಯವರೆಗೆ ಕನ್ನಡದ ಪ್ರಶ್ನೆ ಪತ್ರಿಕೆಗಳಲ್ಲಿ ಬಹುಶಃ 10 - 12 ಅಂಕಗಳ, 4 - 5 ಪುಟಗಳಿಗೆ ಕಡಿಮೆ ಇಲ್ಲದ ಉತ್ತರವನ್ನು ನಿರೀಕ್ಷಿಸುವ ಹಲವು ಪ್ರಶ್ನೆಗಳು ಇರುತ್ತಿದ್ದವು. "ಕುಮಾರವ್ಯಾಸನು ಕರ್ಣನ ಪಾತ್ರವನ್ನು ಹೇಗೆ ಚಿತ್ರಿಸಿದ್ದಾನೆ?" ಎನ್ನುವ ರೀತಿ. ನೀವು ಏನೇ ಬರೆದರು 7 - 8 ಅಂಕಗಳಿಗಿಂತ ಹೆಚ್ಚು ಬರುತ್ತಿರಲಿಲ್ಲ. 4 ಅಥವಾ 5 ಅಂಕಗಳು ಸಾಮಾನ್ಯ! ಹೀಗಾಗಿ ಕನ್ನಡದಲ್ಲಿ ಹೆಚ್ಚು ಎಂದರೆ 75 ರಿಂದ 80 ಅಂಕಗಳು ಬರುತ್ತಿದ್ದವು.    

    ತಂದೆಯವರು ತಯಾರಿಸಿದ ಹೊಸ ಕ್ರಮದಂತೆ 1, 2, 3 ಮತ್ತು 4 ಅಂಕಗಳ ಹೆಚ್ಚು ಪ್ರಶ್ನೆಗಳು ಇರುವ ಪ್ರಶ್ನೆಪತ್ರಿಕೆ ಆ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಜಾರಿಗೆ ಬಂತು. ಮೌಲ್ಯಮಾಪನ ಮಾಡುವಾಗ ಪರೀಕ್ಷಕರು ಹೌಹಾರಿದರು! 80, 85, 90, 95 ಅಂಕಗಳು ಬಂದಾಗ ಮುಖ್ಯಪರೀಕ್ಷಕರಾದ ಜಿವಿ ಅವರನ್ನು ಸಂಪರ್ಕಿಸಿದರು. ಅವರ ಮೌಲ್ಯಮಾಪನ ಸರಿಯಾಗಿದೆ ಎಂದು ಖಚಿತಪಡಿಸಿ, ತಮ್ಮ ಯೋಜನೆ ಫಲಪ್ರದವಾಗುತ್ತಿರುವುದು ಕಂಡು ಸಂತೋಷಗೊಂಡರು. ಆದರೂ ಹಲವು ಅಧ್ಯಾಪಕರು, ಹಳೆಯ ಮೌಲ್ಯಮಾಪನದ ಚಾಳಿಯಿಂದ ಹೊರಬರಲಾಗಿರಲಿಲ್ಲ. ಅವರ ಮೌಲ್ಯಮಾಪನ ಪರಿಶೀಲಿಸಿದಾಗ, ಒಂದು ಅಂಕದ ಪ್ರಶ್ನೆಗೆ ಅರ್ಧ ಅಂಕ ಕೊಟ್ಟಿರುವುದು ಕಂಡುಬಂತು. ಉದಾಹರಣೆಗೆ "ಉರಗಪತಾಕ ಎಂದರೆ ಯಾರು?" ಎಂಬ ಪ್ರಶ್ನೆಗೆ "ದುರ್ಯೋಧನ" ಎಂಬ ಉತ್ತರಕ್ಕೆ ಅರ್ಧ ಅಂಕ. 

    ಅವರನ್ನು ಪ್ರೊ|| ಜಿ. ವಿ. ಅವರು ಕೇಳಿದರು "ಒಂದು ಅಂಕ ಬರಬೇಕಾದರೆ ಏನು ಉತ್ತರ ಬರೆಯಬೇಕು?"

    ಅವರು "ಉತ್ತರವೇನೊ ಸರಿಯಾಗಿದೆ. ಆದರೆ ಪೂರ್ತಿ ಅಂಕ ಹೇಗೆ ಕೊಡುವುದು? ಇಲ್ಲಿಯವರೆಗೆ ಯಾರಿಗೂ ಕೊಟ್ಟಿಲ್ಲ!" ಅವರುಗಳಿಗೆ ಹೊಸ ಕ್ರಮದ ಬಗ್ಗೆ ಮತ್ತೆ ತಿಳಿಸಿ ಕೊಡಬೇಕಾಯಿತು.

   ಕನ್ನಡದ ಪ್ರಶ್ನೆಪತ್ರಿಕೆಗಳ ಕೊನೆಗೆ ಒಂದು ಜನಪ್ರಿಯ ಗಾದೆಯನ್ನು ಕೊಟ್ಟು ಅದರ ಅರ್ಥವನ್ನು ವಿವರಿಸುವಂತೆ ಕೇಳಲಾಗುತ್ತಿತ್ತು. ತರಗತಿಗಳಲ್ಲಿ ಹಲವು ಗಾದೆಗಳನ್ನು ಕುರಿತು ಅಧ್ಯಾಪಕರು ವಿದ್ಯಾರ್ಥಿಗಳಿಗೆ ತಿಳಿಸಬೇಕಾಗಿತ್ತು. ಆದರೆ ಅದಕ್ಕೆ ಗಮನ ಕೊಡದೆ, ಅನೇಕ ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಬಜಾರ್ ನೋಟ್ಸ್‌ಗಳನ್ನು ಕೊಂಡು ಓದಿ ಪರೀಕ್ಷೆಗೆ ಸಿದ್ಧರಾಗುತ್ತಿದ್ದರು.  

ಅಂಥವರು ಗಾದೆಗಳನ್ನು ಕುರಿತು ಬರೆಯುತ್ತಿದ್ದುದು ಹೆಚ್ಚುಕಡಿಮೆ ಒಂದೇ ರೀತಿ ಇರುತ್ತಿದ್ದವು "

    ಇಂಥ ಬರಹಗಳನ್ನು ತಪ್ಪಿಸಿ, ವಿದ್ಯಾರ್ಥಿಗಳು ಸರಿಯಾಗಿ ಯೋಚಿಸಿ ಉತ್ತರಿಸಲು ಆ ಬಾರಿಯ ಪ್ರಶ್ನೆ ಈ ರೀತಿ ಇತ್ತು: 'ಗಾದೆ ವೇದಕ್ಕೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ, ಗಾದೆ ಎಂಬುದು ಅಜ್ಞಾತ ಕವಿಯ ಅಮರವಾಣಿ, ಮುಂತಾಗಿ ಬರೆಯದೆ, ಕೆಳಗೆ ಕೊಟ್ಟಿರುವ ಗಾದೆಯ ಅರ್ಥವನ್ನು ಐದು-ಆರು ವಾಕ್ಯಗಳಲ್ಲಿ ವಿವರಿಸಿ. ಇದರಿಂದ ನಿಜವಾದ ಬುದ್ಧಿವಂತ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ಪಡೆಯಲು ಸಾಧ್ಯವಾಯಿತು. ಪ್ರೊ|| ಜಿ. ವಿ. ಅವರ ಇಂಥ ಕ್ರಮಗಳ ದೂರಗಾಮಿತ್ವವನ್ನು ನೀವೇ ಯೋಚಿಸಿ. 

    ಪಿಯುಸಿ ಫಲಿತಾಂಶ ಬಂದ ದಿನ ಬೆಳಗ್ಗೆ ಅಷ್ಟು ಹೊತ್ತಿಗೆ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ|| ಎಚ್. ನರಸಿಂಹಯ್ಯನವರಿಂದ ದೂರವಾಣಿ ಕರೆ. "ಏನು ಜಾದು ಮಾಡಿದಿರಿ ವೆಂಕಟಸುಬ್ಬಯ್ಯನವರೇ! ಮೊದಲ 10 ಸ್ಥಾನಗಳನ್ನು ಹಂಚಿಕೊಂಡಿರುವ 16 ಜನರಲ್ಲಿ 9 ವಿದ್ಯಾರ್ಥಿಗಳ ದ್ವಿತೀಯ ಭಾಷೆ ಕನ್ನಡ! ಕನ್ನಡದ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕಗಳು ಬಂದದ್ದರಿಂದ ತಮ್ಮ ರ‍್ಯಾಂಕ್ ಹೋಯಿತು ಎಂದು ಸಂಸ್ಕೃತ ಹುಡುಗರು ಗೋಳಾಡುತ್ತಿದ್ದಾರೆ" ಎಂದಿದ್ದರು.

   ಮುಂದಿನ ವರ್ಷ ಕಾಲೇಜುಗಳಲ್ಲಿ ದ್ವಿತೀಯ ಭಾಷೆ ಕನ್ನಡದ ತರಗತಿಗಳು ಹೆಚ್ಚಾದವು! ನಿಶ್ಶಬ್ದವಾಗಿ ನಡೆದ ಆ ಕನ್ನಡದ ಕ್ರಾಂತಿಗೆ ಜಯವಾಗಿತ್ತು.





Comments

  1. ಪ್ರೊಫೆ಼ಸರ್ ವೆಂಕಟಸುಬ್ಬಯ್ಯ ನವರನ್ನು ಕುರಿತ ಕೆಲವು ನೆನಪುಗಳನ್ನು ಹಂಚಿಕೊಂಡ ಅವರ ಪುತ್ರ ಶ್ರೀ ಅರುಣರವರಿಗೆ ಧನ್ಯವಾದಗಳು🙏🙏

    ReplyDelete
  2. ಕನ್ನಡದ ಹೆಮ್ಮೆಯ ಜೀ ವಿ ಯವರ ನೆನಪನ್ನು ನಮ್ಮೊಡನೆ ಹಂಚಿಕೊಳ್ಳ ಹೊರಟಿರುವ ಶ್ರೀ ಅರುಣ್ ರವರಿಗೆ ಅನಂತ ಧನ್ಯವಾದಗಳು. ಹತ್ತಿರದಿಂದ ಕಂಡವರ ನುಡಿಗಳಲ್ಲಿ ಜೀವಿ ಯವರ ಬಗ್ಗೆ ತಿಳಿದುಕೊಳ್ಳುವುದು ನಮ್ಮ ಅದೃಷ್ಟ.

    ReplyDelete
  3. ತಂದೆ ಮಕ್ಕಳ ಬೌಧಿಕ ಸರಸ ಸಂಭಾಷಣೆ ಕೇಳಿ ತುಂಬಾ ಸಂತೋಷವಾಯಿತು!!
    ಪ್ರೊ. ಜಿ. ವಿ. ಅವರು ಭೌತಿಕವಾಗಿ ನಮ್ಮೊಡನೆ ಇಲ್ಲದಿದ್ದರೂ, ಅವರ ಬಗೆಗಿನ ಅನೇಕ ರಸಮಯ ವಿಷಯಗಳನ್ನು ನಮ್ಮೊಡನೆ ಹಂಚಿಕೊಂಡ ಶ್ರೀ ಅರುಣ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು!!

    ReplyDelete
  4. ವೆಂಕಟ ಸುಬ್ಬಯ್ಯನವರ ಬಗ್ಗೆ ಹೇಗಾದರೂ ಯಾರಾದರೂ ಲೇಖಕರ ಲೇಖನ ಕೇಳಬೇಕು ಎನ್ನುವ ಕನಸು ಇಷ್ಟು ದೊಡ್ಡದಾಗಿ ನಮಗೆ ಆ ಭುವನೇಶ್ವರಿ ಕರುಣಿಸುತ್ತಾಳೆ ಎಂದು ಎಣಿಸಿರಲಿಲ್ಲ. ಸ್ವತಃ ಅವರ ಪುತ್ರರೇ ಆದ ತಮ್ಮ ಲೇಖನ ಮನಮುಟ್ಟುವಂತಿದೆ. ಓದುಗರನ್ನು ನಿಮ್ಮ ಮನೆಗೇ ಕರೆದೊಯ್ದಂತಿದೆ. "ದುರ್ಯೋಧನ" ಎಂಬ ಉತ್ತರಕ್ಕೆ ಅರ್ಧ ಅಂಕ ಇಂತಹ ಸೂಕ್ಷ್ಮತೆಗಳ ಬಗ್ಗೆ ಅದೆಷ್ಟು ಆದ್ಯತೆ ಗಮನವಿಟ್ಟಿದ್ದರು ಗಣ್ಯರು? ಇಂತಹ ಎಲ್ಲಾ ವಿಚಾರಗಳೂ ಮನಮುಟ್ಟುವಂತಿದೆ. ಅಪ್ಪ ಮಗನ ಸಂಭಾಷಣೆ ಸ್ವಾರಸ್ಯ ಮತ್ತು ಸಂತೋಷಕರವಾಗಿದೆ.

    ReplyDelete
  5. ಅಪೂರ್ವ ದಾಖಲೆಗಳ ಹೃದಯಸ್ಪರ್ಶಿ ಬರೆಹ. ಹಾರ್ದಿಕ ಧನ್ಯವಾದಗಳು ಸರ್.

    ReplyDelete

Post a Comment