ನುಗ್ಗೇಹಳ್ಳಿ ದೇವಾಲಯ - 2

ನುಗ್ಗೇಹಳ್ಳಿ ದೇವಾಲಯ - 2
ಲೇಖನ - ಮೈಸೂರು ಆರ್ ಶ್ರೀನಿವಾಸ ಪುಟ್ಟಿ

ಅಧಿಷ್ಠಾನದ ಮೇಲಿನ ಗೊಡೆಯಲ್ಲಿನ ವಿಗ್ರಹಗಳು
      ದೇವಾಲಯದ, ಅಧಿಷ್ಠಾನದ ಮೇಲಿನ ಗೊಡೆಯಲ್ಲಿ ಅತ್ಯಂತ ಸುಂದರವಾದ ದೇವತಾ ವಿಗ್ರಹಗಳನ್ನು ಕಾಣಬಹುದು. ಈ ವಿಗ್ರಹಗಳು 3 ಅಡಿ 3 ಅಂಗುಲ ಎತ್ತರವಿದೆ. ಇವುಗಳು ಪೀಠವೊಂದರ ಮೇಲಿದ್ದು, ಅವುಗಳ ಶಿರದ ಮೇಲ್ಬಾಗದಲ್ಲಿ ತೋರಣವನ್ನು ಕಾಣಬಹುದು. ಪೀಠಗಳ ಮೇಲೆ ಪದ್ಮ, ಗರುಡ, ಸಿಂಹ, ಕೀರ್ತಿಮುಖ ಮುಂತಾದವುಗಳನ್ನು ಸುಂದರವಾಗಿ ಕೆತ್ತಲಾಗಿದೆ. ಈ ತೋರಣಗಳಲ್ಲಿ ವ್ಯೆವಿಧ್ಯತೆಯನ್ನು ಕಾಣಬಹುದು. ಈ ವಿಗ್ರಹಗಳಲ್ಲಿ ವಿಷ್ಣುವಿನ 24 ರೂಪಗಳನ್ನೂ- ಅವನ್ನು ಚತುರ್ವಿಂಶತಿ ಮೂರ್ತಿಗಳೆಂದು ಕರೆಯುತ್ತಾರೆ - ಕಾಣಬಹುದು. ಚತುರ್ವಿಂಶತಿ ಮೂರ್ತಿಗಳ ಕೆಳಗೆ ಆ ಮೂರ್ತಿ ಯಾವುದೆಂದು ಸಹಾ ತಿಳಿಸಲಾಗಿದೆ. ದೇವಾಲಯದ ದಕ್ಷಿಣ ಗೋಡೆಯ ವಿಗ್ರಹಗಳನ್ನು ನಂದಿಯ ಬೈಚೋಜ ಮತ್ತು ಉತ್ತರದ ಗೋಡೆಯ ವಿಗ್ರಹಗಳನ್ನು  ಮಲ್ಲಿತಮ್ಮ ರಚಿಸಿದ್ದಾರೆ. ಹಲವಾರು ವಿಗ್ರಹಗಳ ಕೆಳಗೆ ಈ ಶಿಲ್ಪಿಗಳು ತಮ್ಮ ಹೆಸರನ್ನು ಕೆತ್ತಿದ್ದಾರೆ.ದೇವಾಲಯದ ಜಗತಿಯ ಮೇಲೆ ಪ್ರದಕ್ಷಿಣಾಕಾರವಾಗಿ  ಮುಂದುವರೆದರೆ ಈ ಕೆಳಕಂಡ ಮೂರ್ತಿಗಳನ್ನು ಗುರುತಿಸಬಹುದು:



ಮುಖಸಂಖ್ಯೆ
ಶಿಲ್ಪಗಳ ವಿವರ
(ಅ) ಕಲ್ಪವೃಕ್ಷ 
(ಆ) ಮೋಹಿನೀ
(ಇ) ದಕ್ಷಿಣಾ   ಮೂರ್ತಿ 
(ಈ) ಕೇಶವ
(ಅ) ಸ್ಥಾನಕ (Standing) ಬ್ರಹ್ಮ
(ಆ) ನಾರಾಯಣ
(ಇ) ಚಾಮರಧಾರಿಣಿ
(ಈ) ಕುಲಾವಿ, ನಿಲುವಂಗಿ ಮತ್ತು ಪಾದುಕೆಗಳನ್ನು ಧರಿಸಿರುವ ದಕ್ಷಿಣಾ ಮೂರ್ತಿ
(ಅ) ಡೋಲೋತ್ಸವ: ಎರಡು ಗಿಡಗಳ ಮಧ್ಯೆ ತೊಲೆಗೆ ಉಯ್ಯಾಲೆಯನ್ನು ಹಾಕಿ ಕೃಷ್ಣ ಮತ್ತು ದೇವಿ ಉಯ್ಯಾಲೆಯಾಡುತ್ತಿರುವ ಶಿಲ್ಪವಿದು. ಈ ಮರಗಳಲ್ಲಿ ಹಣ್ಣಿನ ಗೊಂಚಲು ತೂಗಾಡುತ್ತಿರುವುದನ್ನೂ, ತೋರಣದಲ್ಲಿ ಕಪಿಗಳನ್ನೂ ಚಿತ್ರಿಸಲಾಗಿದೆ
(ಆ) ರತಿ - ಮನ್ಮಥ
(ಇ) ಅಶ್ವಮುಖದ ಸಂಗೀತಗಾರ
(ಈ) ಮಾಧವ
(ಉ) ಲಕ್ಷ್ಮೀ
(ಊ) ಅಷ್ಟಭುಜ ತಾಂಡವ ಗಣೇಶ
(ಅ) ಅನಂತಾಸನದಲ್ಲಿ ಕುಳಿತಿರುವ ಅಮರನಾರಾಯಣ ಅಥವಾ ಪರವಾಸುದೇವ (ಈ ಮೂರ್ತಿಯ ಕೆಳಗೆ ಗರುಡ, ಪ್ರಹ್ಲಾದ, ಮತ್ತು ಎಡಗಡೆ ಚಾಮರಧಾರಿಣಿಯನ್ನು ಕಾಣಬಹುದು.‌ ಮೂರ್ತಿಯ ಪೀಠದಲ್ಲಿ “ಶ್ರೀ ಆದಿಮೂರ್ತಿ ದೇವರನು ನಂದಿಯ ಬೈಚೋಜ ಮಾಡಿದ ಕಂಡಿರೇ” ಎಂಬ ಒಕ್ಕಣೆ ಇದೆ )
(ಆ) ಗೋವಿಂದ-ದೇವಿ
(ಇ) ಯೋಗನರಸಿಂಹ 
(ಈ) ವಿಷ್ಣು
(ಉ) ಸುಖಾಸನದಲ್ಲಿ ಕುಳಿತಿರುವ ವರದರಾಜ (ಕೆಳಗೆ ಅಲ್ಲಾಳ ಪೆರುಮಾಳ್ ಎಂಬ ಬರವಣಿಗೆ ಯನ್ನು ಕಾಣಬಹುದು)
(ಅ) ಹರಿಹರ
(ಆ) ಮಧುಸೂದನ-ದೇವಿ
(ಇ) ತ್ರಿವಿಕ್ರಮ
(ಈ) ಬಲಿಚಕ್ರವರ್ತಿಯಿಂದ ದಾನ ಸ್ವೀಕರಿಸುತ್ತಿರುವ ವಾಮನ, ಪಕ್ಕದಲ್ಲಿ ಶುಕ್ರ
(ಅ) ನಾಗಕನ್ಯೆಯೊಂದಿಗೆ ತ್ರಿವಿಕ್ರಮ
(ಆ) ಬೇತಾಳದೊಂದಿಗೆ ಭೈರವ
(ಇ) ಎಲುಬುಕಂಡುಬರುವ ದುರ್ಗೆ
(ಈ) ವಾಮನ 
(ಉ) ಶ್ರೀಧರ
(ಊ) ಹಣ್ಣಿಗಾಗಿ ಕಾದಾಡುತ್ತಿರುವ ಎರಡು ಕಪಿಗಳು
(ಅ) ಗೋವರ್ಧನಧಾರಿ (ತೋರಣದಲ್ಲಿ ಕಪಿಗಳು, ಎಡದಲ್ಲಿ ತನ್ನ ಕಿವಿಯ ಓಲೆಯನ್ನು ನೋಡುತ್ತಿರುವ ಯುವತಿ. ಕೆಳಗೆ, “ರೂವಾರಿ ಗಿರಿ ವಜ್ರದಂಡವಿರಿದ ಪ್ರಸಾದಿ ಮಸ್ತಕ ಶೂಲ ರೂವಾರಿ ನಂದಿಯ ಬೈಚೋಜ ಮಾಡಿದ ರೂವಾರ ಶ್ರೀ ಶ್ರೀ ಶ್ರೀ” ಎಂಬ ಶಾಸನ)
(ಆ) ಉಗ್ರನರಸಿಂಹ ( ಎಡದಲ್ಲಿ ಗರುಡ, ಬಲದಲ್ಲಿ, ಲಕ್ಷ್ಮೀ ಮತ್ತು ಕೆಳಗೆ ಪ್ರಹ್ಲಾದ)
(ಇ) ಹೃಷೀಕೇಶ
ದಕ್ಷಿಣದ ಗೂಡು (Niche):
(ಅ) ಆಸೀನ (Sitting) ವರಾಹ
(ಆ) ಗೂಡಿನೊಳಗೆ ದುರ್ಗೆ
(ಇ) ಆಸೀನ ನರಸಿಂಹ
(ಅ) ಪದ್ಮನಾಭ
(ಆ) ವೇಣುಗೋಪಾಲ
(ಇ) ಅರುಣನು ಓಡಿಸುತ್ತಿರುವ ಸಪ್ತಾಶ್ವಗಳಿಂದ ಎಳೆಯಲ್ಪಟ್ಟ ರಥದಲ್ಲಿ ಸೂರ್ಯ( ಅಕ್ಕಪಕ್ಕಗಳಲ್ಲಿ ಛಾಯಾದೇವಿಯರು)
(ಈ) ದಾಮೋದರ
೧೦
ಪಶ್ಚಿಮದ ಗೂಡು:
(ಅ) ದೇವಿಯರೊಂದಿಗೆ ಆಸೀನ ನಾರಾಯಣ
(ಆ) ಗೂಡಿನ ಒಳಗೆ ಹರಿಹರ
(ಇ) ಆಸೀನ ದೇವಿಯರು
(ಈ) ಲಕ್ಷ್ಮೀ ಮತ್ತು ಸರಸ್ವತೀ
೧೧
(ಅ) ಸಂಕರ್ಷಣ
(ಆ) ಐರಾವತದ ಮೇಲೆ ಇಂದ್ರ ಮತ್ತು ಶಚೀ (ಮಲ್ಲಿತಮ್ಮನ ರಚನೆ)
(ಇ) ಗರುಡನ ಮೇಲೆ ಕೃಷ್ಣ ಮತ್ತು ಸತ್ಯಭಾಮಾ (ಗರುಡನ ಎಡಗ್ಯೆನಲ್ಲಿ ಪಾರಿಜಾತದ ಕೊಂಬೆ)
(ಈ) ವಾಸುದೇವ
೧೨
ಉತ್ತರದ  ಗೂಡು:
(ಅ) ಯೋಗನಾರಾಯಣ (ಎಡದಲ್ಲಿ ಲಕ್ಷ್ಮೀ, ಬಲದಲ್ಲಿ ಭೂಮಿ)
(ಆ) ಗೂಡಿನ ಒಳಗೆ ಆಸಿನ ಶಾರದೆ
(ಇ) ಹಯಗ್ರೀವ (ಎಡದಲ್ಲಿ ಸರಸ್ವತೀ, ಬಲದಲ್ಲಿ ಗಣೇಶ)
೧೩
(ಅ) ಪ್ರದ್ಯುಮ್ನ
(ಆ) ಧರಣೀ- ವರಾಹ
(ಇ) ವೇಣುಗೋಪಾಲ
(ಈ) ಗರುಡ
೧೪
(ಅ) ಅನಿರುದ್ಧ (ಪಕ್ಕದಲ್ಲಿ ತನ್ನ ಎರಡು ಕೈಗಳಿಂದಲೂ ಜಡೆಯನ್ನು ಹಿಡಿದು ನರ್ತಿಸುತ್ತಿರುವ ಉಷಾ)
(ಆ) ಹಲಾಯುಧ
(ಇ) ಪುರುಷೋತ್ತಮ
(ಈ) ಅಷ್ಟಭುಜ ನೃತ್ಯ ಲಕ್ಷ್ಮೀ
(ಉ) ಮಹಿಷಾಸುರಮರ್ದಿನಿ (ಮಲ್ಲಿತಮ್ಮನ ರಚನೆ; ಕನ್ನಡದಲ್ಲಿ “ದುರ್ಗಿ” ಎಂದು ಬರೆಯಲಾಗಿದೆ)
(ಊ) ಸರ್ಪ ಹಿಡಿದು ನರ್ತಿಸುತ್ತಿರುವ ಮೊಹಿನೀ 
(ಋ) ಅಧೋಕ್ಷಜ
೧೫
(ಅ) ನಾಗಿನಿಯರ ಮಧ್ಯದಲ್ಲಿ ಕಾಳಿಂಗ ಮರ್ದನ
(ಆ) ನರಸಿಂಹ
(ಇ) ದ್ರೌಪದೀ ಸ್ವಯಂವರ. ಮೇಲೆ ಮತ್ಸ್ಯ ಯಂತ್ರ ಮತ್ತು ಕೆಳಗೆ ತೈಲ ಪಾತ್ರೆ. ಬಿಲ್ಲು ಹಿಡಿದಿರುವ ಅರ್ಜುನ ಮತ್ತು ಹೂಮಾಲೆ ಹಿಡಿದಿರುವ ದ್ರೌಪದೀ
೧೬
(ಅ) ಸಮಭಂಗದಲ್ಲಿ ನಿಂತ ದೇವಿ (ಬಲದಲ್ಲಿ ದಕ್ಷಿಣಾ ಮೂರ್ತಿ)
(ಆ) ಮೋಹಿನೀ
(ಇ) ಕಪಿ
(ಈ) ಅಚ್ಯುತ
(ಉ) ಪರಶುರಾಮ
(ಊ) ಆಸೀನ ಲಕ್ಷ್ಮೀ ನಾರಾಯಣ
(ಋ) ಜನಾರ್ದನ
(ಎ) ತಾಯಿ - ಮಗು
(ಏ) ಅಷ್ಟಭುಜ ನೃತ್ಯ ಸರಸ್ವತೀ
೧೭
(ಅ) ಅಸುರನೊಬ್ಬನ ಮೇಲೆ ಅಷ್ಟಭುಜ ಹಯಗ್ರೀವ 
(ಆ) ಉಪೇಂದ್ರ
(ಇ) ಕೋದಂಡರಾಮ (ಬಲಭಾಗದಲ್ಲಿ ಲಕ್ಷ್ಮಣ ಮತ್ತು ಹನುಮಂತ ಮತ್ತು ಎಡದಲ್ಲಿ ಸೀತೆ)
೧೮
(ಅ) ಹರಿ
(ಆ) ಪದ್ಮಾಸನದಲ್ಲಿ ದ್ವಿಭುಜ  ವಿಷ್ಣು (ತೋರಣದಲ್ಲಿ ದಶಾವತಾರ, ಪೀಠದಲ್ಲಿ ಗರುಡ. ಮಲ್ಲಿತಮ್ಮನ ರಚನೆ)
೧೯
(ಅ) ಕೃಷ್ಣ 
(ಆ) ಕಾಮಧೇನು
(ಇ) ಇಬ್ಬರು ದೇವಿಯರು - ಕೆಳಗೆ ಐದು ಪಟ್ಟಿಕೆಗಳು (ಗಜ, ಅಶ್ವ, ನಾಗ, ಕಳಶ ಮತ್ತು ಗೋಪುರಗಳನ್ನು ಕೆತ್ತಲಾಗಿದೆ). ಅಪೂರ್ವವಾದ ಫಲಕ

ಈ ದೊಡ್ಡ  ವಿಗ್ರಹಗಳ ಮೇಲೆ ಮೇಲ್ಚಾವಣಿಯ ಬೋದಿಗೆಗಳು ಕೀರ್ತಿಮುಖಗಳಿಂದ ಅಲಂಕೃತವಾಗಿವೆ. ಇದರ ಮೇಲೆ ಗೋಪುರಗಳಲ್ಲಿ ಸಣ್ಣ ವಿಗ್ರಹಗಳಿವೆ. ಇವುಗಳಲ್ಲಿ ಮುಖ್ಯವಾದುವೆಂದರೆ ಸೂರ್ಯ-ಛಾಯಾ (ಮುಖ ೪), ನೃತ್ಯ - ಲಕ್ಷ್ಮೀ (ಮುಖ ೭), ವಿಷ್ಣುವಿನ ದಶಾವತಾರಗಳು ಮತ್ತು ಸಮುದ್ರ ಮಥನ (ಮುಖ ೧೧ ರಿಂದ ೧೫), ಅನಂತಶಯನ (ಮುಖ  ೧೬). ಈ   ವಿಗ್ರಹಗಳ‌ ಮೇಲೆ ಶಿಖರಗಳ ಸಾಲು.‌ ಮೇಲ್ಫಾವಣೆಯ ಬೋದಿಗೆಯ ಮೇಲೆ ಕೀರ್ತಿಮುಖ, ಸಿಂಹ, ಕಪಿ, ಹಂಸಗಳು. ಬೋದಿಗೆಯ ನಂತರ ನಾಲ್ಕು ಅಡಿ ಎತ್ತರದ ಕೈಪಿಡಿ ಗೋಡೆ (Parapet).  ಕೈಪಿಡಿ ಗೋಡೆಯ ಅರೆಗಂಬಗಳ (Pilaster) ಮೇಲೆ ಯಕ್ಷರು ಮತ್ತು ವಿಷ್ಣುವಿನ ಸ್ಥಾನಕರೂಪಗಳು.

ಮಧ್ಯದ ಗರ್ಭಗುಡಿಯ ಮೇಲೆ ಮೂರು ಅಂತಸ್ತಿನ ಬಳಪದ ಕಲ್ಲಿನ ಶಿಖರವಿದೆ. ಶುಕನಾಸಿಯ ಮೇಲೆ ಚಾಚಿರುವ ಈ ಶಿಖರದ ಭಾಗದಲ್ಲಿ ಕೀರ್ತಿಮುಖ ಮತ್ತು ಗರುಡ ಇವೆ. ದಕ್ಷಿಣ ಮತ್ತು ಉತ್ತರದ ಗರ್ಭಗುಡಿಗಳ  ಮೇಲೆ, ದೇವಾಲಯ ನಿರ್ಮಾಣವಾದ ಕೆಲವಾರು ಶತಮಾನಗಳ ನಂತರ ನಿರ್ಮಿಸಲಾಗಿರುವ, ಈ ದೇವಾಲಯ ಶೈಲಿಗೆ ಹೊಂದದ ಗಾರೆ ಗೋಪುರಗಳನ್ನು ಕಾಣಬಹುದು. 

ದೇವಾಲಯದ ಮುಖಮಂಟಪ ಹೊಯ್ಸಳರ ಕಾಲದ್ದು. ಇಲ್ಲಿ ನಾಲ್ಕು ದುಂಡಾದ ಕಂಬಗಳಿವೆ.  ನವರಂಗದ ದ್ವಾರದ ಮೇಲೆ ಸರಸ್ವತಿಯು ವೀಣೆ ನುಡಿಸುತ್ತಿರುವ ಅಪರೂಪದ ಶಿಲ್ಪವಿದೆ. ನವರಂಗದ ಪಶ್ಚಿಮ ಗೋಡೆಯ ಬಳಿ ಗಣೇಶ ಹಾಗೂ ಮಹಿಷಾಸುರಮರ್ದಿನಿಯ ವಿಗ್ರಹಗಳಿವೆ. ನವರಂಗದಲ್ಲಿ ಒಂಬತ್ತು ಭುವನೇಶ್ವರಿಗಳಿದ್ದು ಪ್ರತಿಯೊಂದರಲ್ಲೂ ಬೇರೆಬೇರೆ ರೇಖಾಚಿತ್ರಗಳಿವೆ. ಮುಖ ಮಂಟಪದಿಂದ ಪ್ರದಕ್ಷಿಣಾಕಾರವಾಗಿ ಮುಂದುವರೆದಾಗ ಕಾಣುವ ೫ ಮತ್ತು ೮ ನೆಯ ಭುವನೇಶ್ವರಿಗಳಲ್ಲಿ ಯಕ್ಷರು ಮತ್ತು ಅಷ್ಟದಿಕ್ಪಾಲಕರಿದ್ದಾರೆ. ಮಧ್ಯದ (ಅಂದರೆ ೯ ನೆಯ) ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲಕರು, ಸಿಂಹಗಳ ಸಾಲು, ಮತ್ತು ವೃತ್ತ ಪಟ್ಟಿಕೆಗಳು (Circular rafters) ಇವೆ.
ಶುಕನಾಸಿರಹಿತ ದಕ್ಷಿಣಗರ್ಭ ಗುಡಿಯ ದ್ವಾರದ ಮೇಲೆ ಅಮರನಾರಾಯಣನ  ಸುಂದರ ವಿಗ್ರಹವಿದೆ. ಒಳಗೆ ಗರುಡ ಪೀಠದ ಮೇಲೆ ವೇಣುಗೋಪಾಲನ ಸುಂದರ ವಿಗ್ರಹವಿದೆ. ಈ ಗರ್ಭಗುಡಿಯ ಮೇಲ್ಚಾವಣಿಯಲ್ಲಿ ಪದ್ಮವನ್ನು  ಕೆತ್ತಲಾಗಿದೆ.

ಉತ್ತರದ ಗರ್ಭಗುಡಿಗೂ ಶುಕನಾಸಿ ಇಲ್ಲ. ಇದರ ದ್ವಾರದ ಮೇಲೆ ಲಕ್ಷ್ಮೀ ನರಸಿಂಹ ಮತ್ತು ಈ ವಿಗ್ರಹದ ಮೇಲೆ ಮಕರಗಳ ಮಧ್ಯದಲ್ಲಿ ಯೋಗಾನರಸಿಂಹ ವಿಗ್ರಹಗಳನ್ನು ಕಾಣಬಹುದು. ಒಳಗೆ ಗರುಡ ಪೀಠದ ಮೇಲೆ ಲಕ್ಷ್ಮೀ ನರಸಿಂಹ ವಿಗ್ರಹವಿದೆ. ಈ ದೇವಾಲಯದ ಮುಖ್ಯ ಗರ್ಭಗುಡಿ ಪಶ್ಚಿಮ ಭಾಗದಲ್ಲಿದ್ದು ಶುಕನಾಸಿಯನ್ನು ಹೊಂದಿದೆ. ಶುಕನಾಸಿದ್ವಾರದ ಮೇಲೆ ಲಕ್ಷ್ಮೀ ಮತ್ತು ಅದರ ಮೇಲೆ ಎರಡು ಹಂಸಗಳು ನಡುವೆ ಒಂದು ವಿಗ್ರಹವನ್ನು ಕಾಣಬಹುದು. ಗರ್ಭಗುಡಿಯ ದ್ವಾರದ ಮೇಲೆ ಲಕ್ಷ್ಮೀ ನಾರಾಯಣ ಮತ್ತು ಕೇಶವನ ವಿಗ್ರಹಗಳಿವೆ. ಒಳಗೆ ಗರುಡ ಪೀಠದ ಮೇಲೆ ನಾಲ್ಕೂವರೆ ಅಡಿ ಎತ್ತರದ ಕೇಶವನ ಮೂರ್ತಿ ಇದೆ.ಮೂರೂ ಗರ್ಭಗುಡಿಗಳ ವಿಗ್ರಹಗಳ ಪ್ರಭಾವಳಿಯ ಮೇಲೆ ದಶಾವತಾರದ ಕೆತ್ತನೆಗಳಿವೆ. ಸುಂದರವಾದ ಈ ತ್ರಿಕೂಟಕ್ಕೆ ಪೂರ್ವದಲ್ಲಿ ಮಾತ್ರ ಪ್ರವೇಶದ್ವಾರವಿದೆ. ಈ ದೇವಾಲಯವನ್ನು ಸುಮಾರಾಗಿ ನೋಡಬೇಕಾದಲ್ಲಿ ಒಂದು ದಿನವನ್ನು ಮೀಸಲಿಡುವುದು ಸೂಕ್ತ. ನುಗ್ಗೇಹಳ್ಳಿಯ ಈ ದೇವಾಲಯಕ್ಕೆ ಹೋಗಲಿಚ್ಛಿಸುವವರು ಊಟ-ತಿಂಡಿಗಳನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು. ಸಮಯದ ಅವಕಾಶವಾದಲ್ಲಿ ಈ ದೇವಾಲಯದಿಂದ ಸುಮಾರು ಅರ್ಧ ಕಿಲೋ ಮೀಟರ್ ದೂರದಲ್ಲಿರುವ ಮತ್ತೊಂದು ಹೊಯ್ಸಳ ನಿರ್ಮಾಣ ಸದಾಶಿವ ದೇವಾಲಯಕ್ಕೂ ಭೇಟಿ ನೀಡಬಹುದು.

ಸೂಚನೆ:
೧. ಕೇಶವಾದಿ ಚತುರ್ವಿಂಶತಿ ಮೂರ್ತಿಗಳ ಹೆಸರುಗಳನ್ನು ಕೆಂಪು ಅಕ್ಷರದಲ್ಲಿ ನಮೂದಿಸಲಾಗಿದೆ
೨. ಹೆಚ್ಚಿನ ವಿವರ ಮತ್ತು ಚಿತ್ರಗಳಿಗಾಗಿ ಲೇಖಕರ ಬ್ಲಾಗ್  http://lakshminarasimhatemple-nuggehalli.blogspot.com/   ಗೆ  ಭೇಟಿ ನೀಡಬಹುದು.

Comments

  1. ಶ್ರೀನಿವಾಸ್ ಸಾರ್ ನುಗ್ಗೇಹಳ್ಳಿ ದೇವಾಲಯದ ಬಗ್ಗೆ ತಮ್ಮ ಲೇಖನ ತುಂಬಾ ಸೊಗಸಾಗಿದೆ. ಪಟ್ಟಿ ಮಾಡಿ ಅದೆಷ್ಟು ಸಂಗ್ರಹ ಮಾಡಿದ್ದೀರಿ ವಿಷಯಗಳನ್ನು. ಎಲ್ಲರೊಡನೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ನಮಗೆ ನಮ್ಮೂರಿಗೆ ಬಂದಾಗ ಈ ದೇವಾಲಯಕ್ಕೆ ಹೋಗಿ ನೋಡಲೇಬೇಕು ಎನ್ನುವ ಕುತೂಹಲ ಆಸಕ್ತಿ ಮೂಡಿಸಿದೆ ತಮ್ಮ ಲೇಖನದ ಎರಡೂ ಭಾಗಗಳು

    ReplyDelete
  2. Thank you for detailed information & wonderful photos. After reading felt like want to visit these places

    ReplyDelete

Post a Comment