ನುಗ್ಗೇಹಳ್ಳಿ ದೇವಾಲಯ


ಲಕ್ಷ್ಮೀ ನರಸಿಂಹ ದೇವಾಲಯ, ನುಗ್ಗೀಹಳ್ಳಿ
ಲೇಖನ - ಮೈಸೂರು ಆರ್ ಶ್ರೀನಿವಾಸ ಪುಟ್ಟಿ
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೀಹಳ್ಳಿ - ಈಗ ಅದು ನುಗ್ಗೇಹಳ್ಳಿ ಎಂದು ಕರೆಯಲ್ಪಡುತ್ತಿದೆ - ತಾಲೂಕು ಕೇಂದ್ರದಿಂದ ತಿಪಟೂರು ರಸ್ತೆಯಲ್ಲಿ, ಸುಮಾರು ೨೦ ಕಿ.ಮೀ. ದೂರದಲ್ಲಿದೆ. ಶಾಸನಗಳ ಪ್ರಕಾರ ಹೊಯ್ಸಳ ಸೋಮೇಶ್ವರನ ದಂಡನಾಯಕನಾದ ಬೊಮ್ಮಣ್ಣ ನೆಂಬುವನು ನುಗ್ಗಿಹಳ್ಳಿಯನ್ನು ಒಂದು ಅಗ್ರಹಾರವನ್ನಾಗಿ ಮಾಡಿ, ಸೋಮನಾಥಪುರವೆಂಬ ಹೆಸರನ್ನಿಟ್ಟು ಅಲ್ಲಿ ಕೇಶವ ಮತ್ತು ಸದಾಶಿವ ದೇವಾಲಯಗಳನ್ನು ಕಟ್ಟಿಸಿದನು. 

ನುಗ್ಗೇಹಳ್ಳಿಯ ಲಕ್ಷ್ಮೀ ನರಸಿಂಹ ದೇವಾಲಯದ ವಿಹಂಗಮ ನೋಟ
ಲಕ್ಷ್ಮೀ ನರಸಿಂಹ ದೇವಾಲಯವೆಂದೇ ಪ್ರಸಿದ್ಧವಾಗಿರುವ ಈ ದೇವಾಲಯವು ಒಂದು ತ್ರಿಕೂಟ   ಅಂದರೆ ಮೂರು ಗರ್ಭಗುಡಿಗಳಿರುವ ದೇವಾಲಯ (three-celled temple). ಈ ದೇವಾಲಯದ ಪಶ್ಚಿಮದಲ್ಲಿ ಕೇಶವ, ದಕ್ಷಿಣದಲ್ಲಿ ವೇಣುಗೋಪಾಲ, ಮತ್ತು ಉತ್ತರದಲ್ಲಿ ಲಕ್ಷ್ಮೀನರಸಿಂಹರ  ವಿಗ್ರಹಗಳಿವೆ. ಈ ದೇವತಾ ಮೂರ್ತಿಗಳ ಪ್ರತಿಷ್ಠಾಪನೆಯಾದದ್ದು ಶಕ ವರ್ಷ ೧೧೬೮, ಪರಾಭವ ಸಂವತ್ಸರದ ಚೈತ್ರ ಶುದ್ಧ ಪಂಚಮಿ, ಬುಧವಾರದಂದು (ಕ್ರಿಸ್ತ ಶಕ ೧೨೪೬ ಮಾರ್ಚ್ ೨೩, ಶುಕ್ರವಾರ). ಅಂದರೆ ಈ ದೇವಾಲಯದ ನಿರ್ಮಾಣವಾಗಿ ೭೭೫ ವರ್ಷಗಳು ಸಂದಿವೆ. ಈ ದೇವಾಲಯದ ಮುಖ ಮಂಟಪದ ಮುಂದಿನ ಭಾಗಗಳನ್ನು ಕೆಲವು ಶತಮಾನಗಳ ಹಿಂದೆ ಸೇರಿಸಲಾಯಿತು. ಅಂತೆಯೇ ದಕ್ಷಿಣ ಮತ್ತು ಉತ್ತರ ಗರ್ಭಗುಡಿಗಳ ಮೇಲಿನ  ಇಟ್ಟಿಗೆ ಗೋಪುರಗಳನ್ನು ಕಳೆದ ಶತಮಾನದಲ್ಲಿ  ಸೇರಿಸಲಾಗಿದೆ. ಪ್ರಸ್ತುತ ಲೇಖನವು ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಭಾಗಗಳಿಗೆ ಮಾತ್ರ ಸೀಮಿತವಾಗಿದೆ.

ಸುಮಾರು ೨೩೦ ಅಡಿ ಉದ್ದ ಮತ್ತು ೧೪೨ ಅಡಿ ಅಗಲದ ಅಂಗಳದ ಮಧ್ಯ ಭಾಗದಲ್ಲಿ ನಾಲ್ಕು ಅಡಿ ಎತ್ತರದ ಜಗತಿಯ ಮೇಲೆ ದೇವಾಲಯವು ನಿರ್ಮಾಣವಾಗಿದೆ. ಜಗತಿಯು ದೇವಸ್ಥಾನದ ಮುಂಚಾಚು - ಹಿಂಚಾಚುಗಳನ್ನು ಅನುಸರಿಸಿರುವುದರಿಂದ ನಕ್ಷತ್ರಾಕಾರವನ್ನು ಹೊಂದಿದೆ. ಈ ಜಗತಿಯು ದೇವಾಲಯದ ಪ್ರದಕ್ಷಿಣಪಥವೂ ಹೌದು.

ಸರ್ವಾಲಂಕೃತವಾದ ಈ ದೇವಾಲಯದ ಗೋಡೆಗಳಲ್ಲಿ ಅಸಂಖ್ಯ ಶಿಲ್ಪಗಳಿವೆ. ಈ ಶಿಲ್ಪಗಳನ್ನು ಸುಲಭವಾಗಿ ಗುರುತಿಸುವ ಸಲುವಾಗಿ ದೇವಸ್ಥಾನದ ಹೊರಗೋಡೆಯನ್ನು ಕೆಳಭಾಗ (ಅಧಿಷ್ಠಾನ), ಮಧ್ಯಭಾಗ, ಮತ್ತು ಮೇಲ್ಭಾಗಗಳಾಗಿ ವಿಂಗಡಿಸಿಕೊಳ್ಳಲಾಗಿದೆ. ಅಧಿಷ್ಠಾನ ಮತ್ತು ಮಧ್ಯದ ಭಾಗಗಳಿಗೆ ೧೯ ಮುಖಗಳಿವೆ. ಈಗ ದೇವಾಲಯದ ಜಗತಿಯ ಮೇಲೆ ಪ್ರದಕ್ಷಿಣಾಕಾರವಾಗಿ ಮುಂದುವರೆದರೆ ಕಾಣಬಹುದಾದ ಶಿಲ್ಪಗಳು ಇಂತಿವೆ:

ಅಧಿಷ್ಠಾನ (Basement) ಅಥವಾ ಹೊರಗೋಡೆಯ ಕೆಳಭಾಗ


ಅಧಿಷ್ಠಾನದ ಪಾರ್ಶ್ವ  ನೋಟ

ಅಧಿಷ್ಠಾನದಲ್ಲಿ ಆರು ಪಟ್ಟಿಕೆಗಳಿವೆ. ಅತ್ಯಂತ ಕೆಳಗಿನ ಪಟ್ಟಿಕೆಯಲ್ಲಿ ಆನೆಗಳಿದ್ದು, ಅವುಗಳಲ್ಲಿ ಕೆಲವುದರ ಮೇಲೆ ಮಾವುತರನ್ನೂ ಕಾಣಬಹುದು. ವಿವಿಧ ಭಂಗಿಗಳಲ್ಲಿ ಆನೆಗಳನ್ನು ಚಿತ್ರಿಸಲಾಗಿದ್ದು, ಇದರಲ್ಲಿ ಕೆಲವಕ್ಕೆ ಅಂಗರಕ್ಷೆಗಳಿವೆ. ಆನೆ ಸಾಲಿನ ಮೇಲೆ ಅಶ್ವಸ್ಯೆನ್ಯವನ್ನು ಕಾಣುತ್ತೇವೆ. ಮೂರನೆಯದು ಲತಾ ಪಟ್ಟಿಕೆ. ನಾಲ್ಕನೆಯದು ಪೌರಾಣಿಕ ಕಥೆಗಳ ಸಾಲು, ಐದನೆಯದು ಮಕರಗಳ ಹಾಗೂ ಆರನೆಯದು ಹಂಸಗಳ ಸಾಲು. ಈ ಆರು ಪಟ್ಟಿಕೆಗಳಲ್ಲಿ ವಿಶೇಷವಾದದ್ದು ಪೌರಾಣಿಕ ಪಟ್ಟಿಕೆ. ಇದರಲ್ಲಿ ಭಾಗವತದ ಕತೆಯನ್ನು ಚಿತ್ರಿಸಲಾಗಿದೆ. ಈ ಪಟ್ಟಿಕೆಯಲ್ಲಿ ಕಂಡುಬರುವ ಶಿಲ್ಪಗಳು ಇಂತಿವೆ:
ಮುಖಸಂಖ್ಯೆ
ಶಿಲ್ಪಗಳ ವಿವರ
(ಅ) ಶಕಟ ಗೋಪರು ಕೃಷ್ಣನಿಗೆ ಬೆಣ್ಣೆ ಮೊಸರು ಕೊಡುತ್ತಿರುವುದು
(ಆ) ಯಶೋದೆಗೆ ಕೃಷ್ಣನಿಂದ ವಿಶ್ವರೂಪ ದರ್ಶನ
(ಇ) ಯಶೋದೆ ಕೃಷ್ಣನನ್ನು ದಂಡಿಸುತ್ತಿರುವುದು
(ಅ) ಇಂದ್ರ ಮತ್ತು ದಿಕ್ಪಾಲಕರೊಡನೆ ಗೋಪರ ಯುದ್ಧ
(ಅ) ರಾಜನೊಬ್ಬನು ಕೃಷ್ಣನಿಗೆ ನಮಸ್ಕರಿಸುತ್ತಿರುವುದು
(ಆ) ತೊಟ್ಟಿಲಿನಲ್ಲಿ ಕೃಷ್ಣ
(ಇ) ಪೂತನೀ ಸಂಹಾರ
(ಈ) ಶಕಟಾಸುರ ಸಂಹಾರ
(ಅ) ನವನೀತ ಕೃಷ್ಣ ಮತ್ತು ಬೆಕ್ಕು
(ಆ) ಬೆಣ್ಣೆ ಕದಿಯುತ್ತಿರುವ ಕೃಷ್ಣ
(ಇ) ಗೋಪಿಯರಿಂದ ಕೃಷ್ಣನಿಗೆ ಶಿಕ್ಷೆ
(ಅ) ಗಾಡಿಗಳಿಂದ ಮತ್ತು ಮನುಷ್ಯರು ಹೊತ್ತ ಅಡ್ಡೆಗಳ ಮಡಕೆಗಳಿಂದ ಬೆಣ್ಣೆ ಕದಿಯುತ್ತಿರುವ ಕೃಷ್ಣ
(ಆ) ಗೋವುಗಳು
(ಇ) ರಾಧಾ ಮತ್ತು ಗೋಪರೊಡನೆ ಕ್ರೀಡೆ
ದಕ್ಷಿಣದ ಗೂಡು:
(ಅ) ಕಾಳಿಂಗ ಮರ್ದನ
(ಆ) ಗೋಪರ ನೃತ್ಯ
(ಅ) ಗೋವರ್ಧನಧಾರಿ
(ಆ) ಇಂದ್ರನ ಶರಣಾಗತಿ
೧೦
 ಪಶ್ಚಿಮದ ಗೂಡು:
(ಅ) ಕೃಷ್ಣನ ವೇಣುಗಾನ
(ಆ) ಗೋಪಿಯರ ನೃತ್ಯ
೧೧
(ಅ) ಗೋಪಿಯರಿಗೆ ಕೃಷ್ಣನ ಉಪದೇಶ
(ಆ) ರಾಸಕ್ರೀಡೆ
(ಇ) ಇಬ್ಬರು ಗೋಪಿಯರ ನಡುವೆ ಕೃಷ್ಣ ಇರುವ ಕೆಲವು ಮೂರ್ತಿಗಳು
(ಈ) ಗೋಪೀ ವಸ್ತ್ರಾಪಹರಣ
೧೨
(ಅ) ಧೇನುಕಾಸುರ ವಧೆ
(ಆ) ಗಾರ್ಧಭಾಸುರನೊಡನೆ ಕಾಳಗ
(ಇ) ಕೃಷ್ಣನ ಮೆರವಣಿಗೆ
೧೩
(ಅ) ಕೃಷ್ಣನಿಂದ ಅಸುರನೊಬ್ಬನ ಸಂಹಾರ
(ಆ) ಕೃಷ್ಣ ಮತ್ತು ಬಲರಾಮರ ಮೆರವಣಿಗೆ
೧೪
(ಅ) ಯಶೋದೆ - ಕೃಷ್ಣ
(ಆ) ಕೃಷ್ಣ-ಬಲರಾಮರು ಕರುವಿನೊಡನೆ ಆಡುತ್ತಿರುವುದು
(ಇ) ಹಾಲು ಕರೆಯುತ್ತಿರುವುದು
(ಈ) ಬೆಣ್ಣೆ ಬೇಡುತ್ತಿರುವ ಕೃಷ್ಣ
(ಉ) ಅಕ್ರೂರನು ಕೃಷ್ಣ- ಬಲರಾಮರೊಡನೆ ಬಂಡಿಯಲ್ಲಿ ಮಥುರೆಗೆ ‌ಹೊರಟಿರುವುದು
೧೫
(ಅ) ಯಮುನೆಯಲ್ಲಿ ಕೃಷ್ಣನಿಂದ ಅಕ್ರೂರನಿಗೆ ವಿಶ್ವರೂಪ ದರ್ಶನ 
(ಆ) ಮಥುರೆಗೆ ತಲುಪಿದ ರಥ
೧೬
(ಅ) ಕೃಷ್ಣ ಕುಬ್ಜೆಯರ ಭೇಟಿ
(ಆ) ಮಂಟಪದಲ್ಲಿ ಆಯುಧಪೂಜೆ
(ಇ) ಕೃಷ್ಣನಿಂದ ಅಸುರರ ಸಂಹಾರ
(ಈ) ಕೃಷ್ಣನ ಆಗಮನದ ಸುದ್ದಿಯನ್ನು ಕಂಸನಿಗೆ ತಿಳಿಸುತ್ತಿರುವುದು
೧೮
(ಅ) ತನ್ನ ಮಲ್ಲರ ಸಂಹಾರದ ಸುದ್ದಿ ತಿಳಿದು ಕಂಸ ಆಶ್ಚರ್ಯ ವ್ಯಕ್ತಪಡಿಸುತ್ತಿರುವುದು

 

ದಕ್ಷಿಣದ ಗೂಡು (ಮುಖ ಸಂಖ್ಯೆ ೮)
ಲೇಖನ 
ನುಗ್ಗೇಹಳ್ಳಿ ದೇವಾಲಯ ಭಾಗ ೨ ರಲ್ಲಿ ಮುಂದುವರೆಯುವದು......

Comments

  1. ಇಷ್ಟೊಂದು ತರಹ ಕಲೆಯಿದೆ ಎಂದು ಯಾರಾದರೂ ವರ್ಣಿಸಿದ ಹೊರತೂ ಗೊತ್ತಗಲ್ಲ. ಕಲೆ ಅತ್ಯಧ್ಬುತ.

    ReplyDelete
  2. ಲೇಖನ ಓದಿದ ನಂತರ ನುಗ್ಗೇಹಳ್ಳಿಗೆ ಭೇಟಿ ನೀಡಲೇ ಬೇಕು, ಕೇವಲ ಒಂದು ಎರಡು ತಾಸು ಗೈಡ್ ಜೊತೆ ನೋಡದೆ ಪೂರ್ತಿ ತಮ್ಮ ಲೇಖನ ಕೈಯಲ್ಲಿ ಹಿಡಿದು ದಿನ ಕಳೆದು ಮತ್ತಷ್ಟು ತಿಳಿಯುವ ಆಸಕ್ತಿ ಮೂಡಿಸಿದ್ದೀರಿ. ವಿವರವಾದ ವಿಶ್ಲೇಷಣೆ

    ReplyDelete
  3. Excellent write up and this is now must visit on next my visit to MatruBhoomi :)

    ReplyDelete

Post a Comment