ಸಿಡ್ನಿ ಕನ್ನಡ ಶಾಲೆಯಿಂದ ದಸರಾ ಕಾರ್ಯಕ್ರಮ
ವರದಿ - ದತ್ತು ಕುಲಕರ್ಣಿ, ಸಿಡ್ನಿ.
ಇದೆ ಕಳೆದ ಅಕ್ಟೋಬರ್ 24ರಂದು ಸಿಡ್ನಿ ಕನ್ನಡ ಶಾಲೆಯ ವತಿಯಿಂದ ಸಡಗರದ ದಸರಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇಲ್ಲಿಯ ವ್ಯಾಟಲ್ ಗ್ರೂವ್ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಶಾಲೆಯ ಮಕ್ಕಳು ಮತ್ತು ಪೋಷಕರು ತಮ್ಮ ಹಾಡು ಮತ್ತು ನೃತ್ಯಗಳ ಮೂಲಕ ಮನೋರಂಜನೆಯ ಮಹಾಪೂರವನ್ನು ಹರಿಸಿದರು.
ಕಾರ್ಯಕ್ರಮವನ್ನು ಅಂದುಕೊಂಡಂತೆ ಸರಿಯಾಗಿ ಐದು ಮೂವತ್ತು ಗಂಟೆಗೆ ದೀಪ ಬೆಳಗುವುದರೊಂದಿಗೆ ಪ್ರಾರಂಭಿಸಲಾಯಿತು. ಭಾರತದಿಂದ ಬಂದ ಶಾಲಾ ಮಕ್ಕಳ ಅಜ್ಜ- ಅಜ್ಜಿಯರು ದೀಪ ಬೆಳಗಿಸಿ ಈ ಸುಂದರ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು.
ಸಭಾಂಗಣದ ಬಲಭಾಗದಲ್ಲಿ ದಸರಾ ಗೊಂಬೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಮಕ್ಕಳಷ್ಟೆ ಅಲ್ಲದೆ ಅವರೊಂದಿಗೆ ಪಾಲಕರು ಕೂಡ ಕುತೂಹಲದಿಂದ ಗೊಂಬೆಗಳನ್ನು ನೋಡಿ ಆನಂದಿಸಿದರು.
ಮೊದಲಿಗೆ ಶಾಲೆಯ ಶಿಕ್ಷಕರಾದ ವಾಸುದೇವ ಕುಲಕರ್ಣಿ ಅವರು ತಮ್ಮ ಸ್ವಾಗತ ಭಾಷಣದಲ್ಲಿ ದಸರಾ ಹಬ್ಬದ ಮಹತ್ವ ಮತ್ತು ಅದನ್ನು ಇಲ್ಲಿಯ ಮಕ್ಕಳು ಆಚರಿಸುವ ಔಚಿತ್ಯದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದರು.
ಆಮೇಲೆ ಸ್ವರಾ ಪಾಟೀಲ ಅವಳಿಂದ ಭರತನಾಟ್ಯ ನೃತ್ಯ ತುಂಬಾ ಸುಂದರವಾಗಿ ಮೂಡಿಬಂದು ಮಕ್ಕಳ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ನಂತರ ಆರವಿ ವೇಲನಾಡು ಕರೋಕೆ ಹಾಡನ್ನು ಸುಶ್ರಾವ್ಯವಾಗಿ ಹೇಳಿದಳು.
ನಂತರ ವಾಟಲಗ್ರೂವ್ ಮತ್ತು ತುಂಗಾಬಿ ಎರಡು ಶಾಲೆಗಳ ಮಕ್ಕಳು ಸೇರಿ ‘ಅಜ್ಜನ ಕೋಲಿದು’ ಎಂಬ ಚಿನ್ನರ ಹಾಡನ್ನು ಒಕ್ಕೊರಲುನಿಂದ ಹಾಡಿದರು. ತುಂಬಿ ತುಳುಕುತ್ತಿದ್ದ ವೇದಿಕೆಯಿಂದ ಮೂಡಿ ಬಂದ ಮಕ್ಕಳ ಧ್ವನಿ ತುಂಬಾ ಮುದ್ದಾಗಿ ಕೇಳಿಸುತ್ತಿತ್ತು
ಇದರ ನಂತರ ವಿರಾಜ್ ಹಾವೋಜಿ ಆಕರ್ಷಕ ಶೈಲಿಯಲ್ಲಿ ಎಚ್ಎಸ್ ವೆಂಕಟೇಶಮೂರ್ತಿ ಅವರ ‘ರೆಕ್ಕೆ ಇದ್ದರೆ ಸಾಕೆ’ ಎನ್ನುವ ಹಾಡನ್ನು ಹಾಡಿ ನೆರೆದಿದ್ದ ಎಲ್ಲರೂ ತಲೆದೂಗುವಂತೆ ಮಾಡಿದನು.
ನಂತರ ತುಂಗಾಬಿ ಶಾಲೆಯ ಸುಮಾರು 15 ಚಿಕ್ಕ ಮಕ್ಕಳು ‘ಇನ್ನೂ ಏಕೆ ನಿದ್ದೆ’ ಎನ್ನುವ ಹಾಡಿಗೆ ಬಹಳ ಮುದ್ದಾಗಿ ಡಾನ್ಸ್ ಮಾಡಿದರು. ಹಾಗೆ ನಂತರ ಮೂಡಿ ಬಂದ ವಾಟಲಗ್ರೂವ್ ಶಾಲೆಯ ಮಕ್ಕಳ ಸಮೂಹ ನೃತ್ಯ ಬಹಳ ಭರ್ಜರಿಯಾಗಿ ಮೂಡಿ ಬಂತು.
ಆಮೇಲೆ ಅವನಿ ಪಡಕಿ ‘ಟಿಕ್ ಟಿಕ್ ಬರುತಿದೆ ಕಾಲ’ ಸಿನಿಮಾ ಹಾಡನ್ನು ಕರೋಕೆ ಶೈಲಿಯಲ್ಲಿ ಚೆನ್ನಾಗಿ ಪ್ರಸ್ತುತಪಡಿಸಿದಳು. ಹಾಗೆಯೆ ಆದ್ವಿಕ್ ಹೆಗಡೆ ಹಾಡಿದ ‘ಮಾಯಾವಿ’ ಹಾಡು ಬಹಳ ಸೊಗಸಾಗಿ ಮೂಡಿ ಬಂತು.
ಆಮೇಲೆ ತುಂಗಾಬಿ ಶಾಲೆಯ ಮಕ್ಕಳಿಂದ ನಾಲ್ಕು ಸಮೂಹ ನೃತ್ಯಗಳು ಮೂಡಿಬಂದು ನೆರೆದಿದ್ದ ಪ್ರೇಕ್ಷಕರ ಕಣ್ಮನ ಸೆಳೆದವು.ಹಾಗೆಯೇ ಅರ್ಹತಾ ಕನ್ನಡ ನಾಡಿನ ಬಗ್ಗೆ ಭಾಷಣ ಮಾಡಿ ಎಲ್ಲರನ್ನ ಬೆರಗುಗೊಳಿಸಿದಳು. ನಂತರ ಸುರೇಶ್ ಪೂಂಜಾ ಮಿಲನ ಸಿನಿಮಾದ ‘ಮಳೆ ನಿಂತು ಹೋದ ಮೇಲೆ’ ಹಾಡನ್ನು ಹಾಡಿದನು.ಇದರ ನಂತರ ಶಿವಾಂಗ್ ಎಂದಿನಂತೆ ತನ್ನ ಅತ್ಯಾಕರ್ಷಕ ಶೈಲಿಯಲ್ಲಿ ಕಾಂತಾರ ಸಿನಿಮಾದ ‘ಎಚ್ಚರ’ ಎನ್ನುವ ಹಾಡನ್ನು ಹಾಡಿ ನೆರೆದಿದ್ದ ಎಲ್ಲರನ್ನು ರಂಜಿಸಿದನು.
ಇದಾದ ನಂತರ ಪಾಲಕರು ಮತ್ತು ಹಿರಿಯರು ಹಾಡುಗಳನ್ನು ಹಾಡಿ ಮನರಂಜಿಸಿದರು.
ದೀಪಕ ಕುಮಾರ್ ಅವರು ‘ಆರಾಧಿಸುವೆ ಮದನಾರಿ’ ಹಾಡಿದರೆ ಕುಮಾರಿ ದೇವಿಕಾ ಪ್ರಮೋದ್ ‘ಗಿರ ಗಿರ’ ಹಾಡನ್ನು ಉತ್ಕೃಷ್ಟವಾಗಿ ಹೇಳಿದಳು. ನಂತರ ಅರ್ಚನಾ ಮತ್ತು ಪ್ರಮೋದ್ ಅವರು ಸುಮಧುರ ಕನ್ನಡ ಹಾಡುಗಳು ಮೆಡ್ಲೇ ಪ್ರಸ್ತುತ ಪಡಿಸಿದರು ಅವರಿಗೆ ದೇವಿಕಾ ಪ್ರಮೋದ್ ಕೀಬೋರ್ಡ್ ನಲ್ಲಿ ಸಹಾಯ ಮಾಡಿದಳು.
ಕಾರ್ಯಕ್ರಮವನ್ನು ಕನ್ನಡ ಶಾಲೆಯ ಶಿಕ್ಷಕಿಯರಾದ ಶಿಲ್ಪಶ್ರೀ ಮತ್ತು ಅಕ್ಷತಾ ಅವರು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದರು.
ಒಟ್ಟಿನಲ್ಲಿ ದಸರಾ ಕಾರ್ಯಕ್ರಮ ಚೆನ್ನಾಗಿ ಮೂಡಿಬಂದು ಇದನ್ನು ಆಯೋಜಿಸಿದ ಕನ್ನಡ ಶಾಲೆಯ ಶ್ರೀ ನಾರಾಯಣ ಕನಕಪುರ, ರಾಜಿ ನಾರಾಯಣ ಮತ್ತು ಅವರ ತಂಡದ ಇತರರಿಗೆ ಎಲ್ಲರೂ ಧನ್ಯವಾದ ಹೇಳಿದರು.
Uttama karyakrama 👍🏻
ReplyDelete