ತಾರತಮ್ಯ ನೀತಿ ನಿಷೇಧಿಸಿ ಸರ್ವ ಸಮಾನತೆಯ ಹಕ್ಕನ್ನು ಸಂವಿಧಾನ
ಸಾರಿದ್ದರೂ ಪಾಲಿಸದ ಸಮಾಜಕ್ಕೆ ಮದ್ದೇನು ?
ಲೇಖಕರು : ಎಂ ಆರ್ ವೆಂಕಟರಾಮಯ್ಯ
ಧರ್ಮ ಜನಾಂಗ ಜಾತಿ ಲಿಂಗ ಜನ್ಮ ಸ್ಥಳ ಆಧಾರದ ಮೇಲೆ ಯಾವುದೇ ವ್ಯಕ್ತಿ ವ್ಯಕ್ತಿಗಳ ನಡುವೆ ಯಾವುದೇ ಕಾರಣಕ್ಕಾಗಲಿ ವ್ಯತ್ಯಾಸ ಮಾಡಿದರೆ ಇಂತಹಾ ಪ್ರಕ್ರಿಯೆಯನ್ನು ತಾರತಮ್ಯ ಎಂದು ಕರೆಯಲಾಗುತ್ತದೆ. ಎಂತಹುದೇ ತಾರತಮ್ಯ ಮಾಡುವ ಕ್ರಿಯೆಯೆಯನ್ನು ಭಾರತಧ ಸಂವಿಧಾನ ನಿಷೇಧಿಸಿದೆ. ಮತ್ತು ಎಲ್ಲರಿಗೂ ಸಮಾನತೆಯ ಹಕ್ಕನ್ನು (Right to Equality) ನೀಡಿದೆ.
• ಮುಟ್ಟಲಾಗದಿರುವಿಕೆಯ ವಿರುದ್ಧ ಹಕ್ಕು: - ಸಂವಿಧಾನದ ವಿಧಿ 17 "ಅಸ್ಪೃಶ್ಯತೆ"ಯನ್ನು ರದ್ದುಗೊಳಿಸುತ್ತದೆ ಮತ್ತು ಯಾವುದೇ ರೂಪದಲ್ಲಿ ಅದರ ಆಚರಣೆಯನ್ನು ನಿಷೇಧಿಸುತ್ತದೆ. ಈ ನಿಷೇಧಿತ "ಅಸ್ಪೃಶ್ಯತೆ" ಯನ್ನು ಯಾವುದೇ ರೂಪದಲ್ಲಿ ಆಚರಿಸಬಾರದು ಎಂದು ಘೋಷಿಸಿದೆ. ಹಾಗೆ ಆಚರಿಸಿದರೆ, ಅದನ್ನು ಕಾನೂನಿನ ಪ್ರಕಾರ ಶಿಕ್ಷರ್ಹ ಅಪರಾಧ ವೆಂದು ಪರಿಗಣಿಸಲಾಗಿದೆ ಎಂದಿದೆ ಸಂವಿಧಾನ.
ಭಾರತದ ಮಾನವ ಹಕ್ಕುಗಳ ಸಂರಕ್ಷಣಾ ಕಾಯಿದೆ, 1993 (Protection of Human Rights Act, 1993) ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನುಗಳಲ್ಲೂ ತಾರತಮ್ಯದ ವಿರುದ್ಧ ಪ್ರಮುಖ ನಿಬಂಧನೆಗಳನ್ನು ಅಳವಡಿಸ ಲಾಗಿದೆ. ಈ ಕಾಯಿದೆಯ ಸೆಕ್ಷನ್ 2(1)(ಜ) ರ ಅಡಿಯಲ್ಲಿ, "ಮಾನವ ಹಕ್ಕುಗಳು" ಎಂದರೆ ಭಾರತದ ಸಂವಿಧಾನದಿಂದ ಖಾತರಿಪಡಿಸಲಾದ ಅಥವಾ ಅಂತರ ರಾಷ್ಟ್ರೀಯ ಒಪ್ಪಂದಗಳಲ್ಲಿ ಅಡಕವಾಗಿರುವ ಮತ್ತು ಭಾರತದ ನ್ಯಾಯಾಲಯ ಗಳಿಂದ ಜಾರಿಗೊಳಿಸಬಹುದಾದ ಜೀವನ, ಸ್ವಾತಂತ್ರ್ಯ, ಸಮಾನತೆ ಮತ್ತು ಘನತೆಗೆ ಸಂಬಂಧಿಸಿದ ಹಕ್ಕುಗಳಾಗಿವೆ. ಇಲ್ಲಿ 'ಸಮಾನತೆ' (Equality) ಎಂಬುದು ನೇರವಾಗಿ ತಾರತಮ್ಯದ ವಿರೋಧವನ್ನು ಒಳಗೊಂಡಿರುತ್ತದೆ.
ಜೀವನ ಸ್ವಾತಂತ್ರ್ಯ ಎಂದರೆ ಕೇವಲ ಬದುಕುಳಿಯುವುದಲ್ಲ: ಸುಪ್ರೀಂ ಕೋರ್ಟ್ ತನ್ನ ಹಲವು ಐತಿಹಾಸಿಕ ತೀರ್ಪುಗಳಲ್ಲಿ (ಉದಾಹರಣೆಗೆ ಪ್ರಸಿದ್ಧ ಮೇನಕಾ ಗಾಂಧಿ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣ) ಸ್ಪಷ್ಟಪಡಿಸಿರುವಂತೆ, "ಜೀವಿಸುವ ಹಕ್ಕು" ಎಂದರೆ ಕೇವಲ ಮೃಗಗಳಂತೆ ಉಸಿರಾಡುತ್ತಾ ಬದುಕುಳಿಯುವುದಲ್ಲ. ಅದು ಮಾನವೀಯ ಮೌಲ್ಯಗಳು, ಸ್ವಾಭಿಮಾನ ಮತ್ತು ಗೌರವದೊಂದಿಗೆ ಬದುಕುವ ಹಕ್ಕನ್ನು ಒಳಗೊಂಡಿದೆ.
ಇದುವರೆಗೂ ಉಲ್ಲೇಖಿಸಿರುವ ಭಾರತದ ಸಂವಿಧಾನದ ಕೆಲವು ಅನುಚ್ಛೇದದ ಅಂಶಗಳು ಮತ್ತು ಭಾರತದ ಮಾನವ ಹಕ್ಕುಗಳ ಸಂರಕ್ಷಣಾ ಕಾಯಿದೆ, 1993 (Protection of Human Rights Act, 1993) ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನುಗಳ ಸಾರಾಂಶವೇನೆಂದರೆ ರಾಜ್ಯದಲ್ಲಿ ಯಾವುದೇ ಪ್ರಜೆ ವ್ಯಕ್ತಿ ವ್ಯಕ್ತಿಗಳ ನಡುವೆ ಎಂತಹುದೇ ವಿಷಯದಲ್ಲೂ ಎಂತಹುದೇ ಕಾರಣಕ್ಕೂ “ತಾರತಮ್ಯ” ಮಾಡುವ ಹಾಗಿಲ್ಲ, ಎಲ್ಲರೂ ಎಲ್ಲದರಲ್ಲೂ ಸಮಾನರು ಎಂದು ಪರಿಗಣಿಸಬೇಕು,
ಯಾರ ಬಗ್ಗೆಯಾದರೂ ಎಂತಹುದೇ ಕಾರಣಕ್ಕೆ ತಾರತಮ್ಯ ನೀತಿ ಅನುಸರಿಸುವುದೋ ಭಾರತದ ಮಾನವ ಹಕ್ಕುಗಳ ಸಂರಕ್ಷಣಾ ಕಾಯಿದೆ, 1993 (Protection of Human Rights Act, 1993) ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಗಳಂತೆ ಸಮಾನತೆ ತೋರದೆ ಅಸಮಾನತೆ ತೋರಿದರೆೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ.
ಸುಪ್ರೀಂ ಕರ್ಟ್ ತೀರ್ಪಿನಂತೆ ಜೀವಿಸುವ ಹಕ್ಕು" ಎಂದರೆ ಪ್ರತಿ ಮಾನವನೂ ಮಾನವೀಯ ಮೌಲ್ಯಗಳು, ಸ್ವಾಭಿಮಾನ ಮತ್ತು ಗೌರವದೊಂದಿಗೆ ಬದುಕುವ ಹಕ್ಕನ್ನು ಹೊಂದಿದ್ದಾನೆ.
ಪ್ರತಿ ಪ್ರಜೆಯ ಹಕ್ಕುಗಳ ರಕ್ಷಣೆಗೆ ಇಷ್ಟೆಲ್ಲಾ ಕಟ್ಟುನಿಟ್ಟಾದ ಕಾನೂನುಗಳನ್ನು ಭಾರತ ಸಂವಿಧಾನ, ಭಾರತ ಮಾನವ ಹಕ್ಕುಗಳ ಆಯೋಗ ರಚಿಸಿದ್ದರೂ ನಮ್ಮ ಸಮಾಜದಲ್ಲಿನ ಕೆಲವರು, ಇಂದೂ ತಮ್ಮ ಸಹವರ್ತಿ ಪ್ರಜೆಗಳ ಬಗ್ಗೆ ತಾರತಮ್ಯ ನೀತಿ, ಅನುಸರಿಸುತ್ತಿರುವ, ಸಮಾನತೆಯ ತತ್ವ ಉಲ್ಲಂಘಿಸಿ, ಸಮಾನರನ್ನು ಅಸಮಾನರೆಂದು ಪರಿಗಣಿಸಿ ಅವಮಾನ ಪಡಿಸುತ್ತಿರುವುದು ಬಹಿರಂಗವಾಗಿ ಎದ್ದುಕಾಣುತ್ತಿದೆ, ಇದಕ್ಕೆ ಉದಾಹರಣೆಯಾಗಿ ತಿಳಿಸಬಹುದಾದ ಪ್ರಸಂಗಗಳು ಎಂದರೆ ಪತ್ನಿ ಕಳೆದುಕೊಂಡ ಪುರುಷ, ಪತಿ ಕಳೆದುಕೊಂಡ ಸ್ತ್ರೀ ಇವರು ವಿಧುರ\ವಿಧವೆ, ಮನೆಗಳೊಳಗೋ ಚೌಲ್ಟಿç ಸಾರ್ವಜನಿಕ ವೇದಿಕೆಗಳು, ಇತ್ಯಾದಿಗಳಲ್ಲಿ ನಡೆಯಬಹುದಾದ ಕಾರ್ಯಗಳಿಗೆ ಇವರು ಅಹ್ವಾನಿತರಾಗಿದ್ದರೂ ಅಲ್ಲಿದ್ದ ಕಿರಿಯರು ಹಿರಿಯರಿಗೆ ನಮಸ್ಕಾರ ಮಾಡಬೇಕಾದ ಸಂದರ್ಭಗಳು, ಹಾಜರಾದವರಿಗೆ ಮಂಗಳ ದ್ರವ್ಯಗಳ ವಿತರಣೆ ಮಾಡುವ ಸಮಯ, ವ್ರತ ಪೂಜೆ ಮುಗಿಸಿದಾಗ ನೀಡಬಹುದಾದ ಬಾಗಿನ, ದಾನ ಇತ್ಯಾದಿಗಳ ಸಮಯ ಸನ್ನಿಹಿತವಾದಾಗ, ಪತಿ ಕಳೆದುಕೊಂಡ ಮಹಿಳೆಯರು, ಪತ್ನಿ ಕಳೆದುಕೊಂಡ ಪುರುಷರನ್ನು ನಮನ, ಬಾಗಿನ, ದಾನ ಇತ್ಯಾದಿ ಪಡೆಯಲು ಅನರ್ಹರು ಎಂದು ಪರಿಗಣಿಸಿ ಇವರನ್ನು ದೂರವಿಡುವ, ತನ್ಮೂಲಕ ಇವರನ್ನು ಅಸಮಾನರೆಂದು, ತಾರತಮ್ಯಕ್ಕೆ ಗುರಿಪಡಿಸಿ, ಇವರ ಗೌರವ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿರುವ, ಅಮಾನವೀಯವಾಗಿ ವರ್ತಿಸುತ್ತಿರುವ ಮಹನೀಯರ ಈ ದುಷ್ಟ ಪದ್ಧತಿಯನ್ನು ಅಲ್ಲಿ ಹಾಜರಿರುವ ಯಾವ ವ್ಯಕ್ತಿಯೂ ಖಂಡಿಸದಿರುವುದು ಧೇಶದ ಸಂವಿಧಾನ ಮಾನವ ಹಕ್ಕುಗಳ ಆಯೋಗಕ್ಕೆ ಎಸಗುತ್ತಿರುವ ದ್ರೋಹ ಅಪಚಾರವಲ್ಲವೇ !
ಇವರ ವರ್ತನೆಯ ಅರ್ಥ ಬಹುಶಃ ಪತ್ನಿ ಜೀವಂತವಾಗಿದ್ದರೆ ಈಕೆಯಿಂದ ಈತನಿಗೆ ಗೌರವ, ಪತಿ ಬದುಕಿದ್ದರೆ ಈತನಿಂದ ಈಕೆಗೆ ಗೌರವ ಸಿಗುತ್ತದೆ ಎಂಬುದು ಇವರ ಅರಿವು, ತಿವಳಿಕೆಯೇ ? ಇವರ ಈ ಅರಿವು ಸರಿಯೇ ! ಗೌರವ ಎಂಬುದು ಒಬ್ಬರಿಂದೊಬ್ಬರಿಗೆ ವರ್ಗಾವಣೆಯಾಗುವಂತಹುದೆ ? ಈ ಅರ್ಥೈಸುವಿಕೆ ಸರಿಯೇ ? ಒಬ್ಬರಿಗೊಬ್ಬರು ಗೌರವ ನೀಡಬೇಕಾದ್ದು ಏಕೆ ಎಂದರೆ ಈಕೆ, ಈತ ಪ್ರಾಥಮಿಕವಾಗಿ ಈ ದೇಶದ ನಾಗರಿಕ, ಗೌರವ ಸ್ವಾಭಿಮಾನದಿಂದ ಬದುಕುವ ಅರ್ಹತೆಯನ್ನು ಪಡೆದಿದ್ದಾನೆ (ಸು ಕೋ ತೀರ್ಪಿನ ಅನುಸಾರ)ವಯಸ್ಸಾದವ, ಸಭ್ಯತೆ ಸಂಸ್ಕೃತಿ ಇದೆ, ಎಂಬ ಕಾರಣಕ್ಕಲ್ಲವೆ ?
ಇದೆಲ್ಲಾ ತಿಳಿಯದೆ ಪರರ ಗೌರವ ಸ್ದವಾಭಿಮಾನಕ್ಕೆ ಧಕ್ಕೆ ತರುವಂತಹಾ ವರ್ತನೆ ತೋರಿದರೆ ಇದು ಸಂವಿಧಾನ ಮಾನವ ಹಕ್ಕುಗಳ ಆಯೋಗದ ಕಾನೂನುಗಳ ಉಲ್ಲಂಘನೆ ಮಾಡಿದಂತಾಗಿ ಇವರು ಏಕೆ ಶಿಕ್ಷಾರ್ಹರಾಗಬಾರದು ಇಂತಹಾ ದುಷ್ಟ ವರ್ತನೆಗೆ ಕಾರಣರಾದವರನ್ನು ಹೆಚ್ಚು ಹೆಚ್ಚು ಸಹೃದಯಿ ಸಾರ್ವಜನಿ ಕರು, ನಾಗರಿಕರು ಕಂಡ ಕಂಡಲ್ಲೇ ಖಂಡಾತುಂಡವಾಗಿ ಖಂಡಿಸುತ್ತಾ ಬಂದರೆ ಇಂತಹಾ ದುಷ್ಟರ ಕಾಲ ಕ್ರಮೇಣ ಕಡಿಮೆಯಾಗಬಹುದಾದ ಸಂಭವವಿರುತ್ತದೆ.
ಈ ಕ್ರಮವೂ ನಿರೀಕ್ಷಿತ ಪರಿಣಾಮ ನೀಡದಿದ್ದಲ್ಲಿ ಇವರ ಅಪರಾಧವನ್ನು ಕಾನೂನಿನ ಕೈಗೆ ಒಪ್ಪಿಸುವ ಸಕ್ರಮಕ್ಕೋ ಅಥವಾ ಈ ಬಗ್ಗೆ ವರದಿಯನ್ನು ಕಾನೂನು ಪ್ರಾಧಿಕಾರಗಳಿಗೆ ನೀಡಲು ಯಾರಾದರೂ ಮಹನೀಯರು ಮುಂದಾದರೆ ನಂತರದಲ್ಲಾದರೂ ಈ ಅಮಾನುಷ ವರ್ತನೆ ಕಾಲ ಕ್ರಮೇಣ ಕಡಿಮೆಯಾಗಬಹುದಲ್ಲವೆ ! ಇಂತಹಾ ಅಕಾರ್ಯಗಳು ಕಡಿಮೆಯಾಗಲು ಸಹಾಯಕ ರಾಗಬೇಕಾದ್ದು ಸಾರ್ವಜನಿಕ ಹಿತಾಸಕ್ತಿ ರಕ್ಷಿಸಬೇಕಾದ ಸಮಾಜ\ಸಾರ್ವಜನಿಕರು\ ಪತ್ರಿಕೆ ವಿದ್ಯುನ್ ಮಾನ ಮಾಧ್ಯಮಗಳಲ್ಲವೇ !
ಇದುವರೆಗೆ ಉಲ್ಲೇಖಿಸಿದ ಅಂಶಗಳ ಹಿನ್ನೆಲೆಯಲ್ಲಿ ಪ್ರಸಕ್ತ ವಿಷಯದ ಬಗ್ಗೆ ಓದುಗ ಮಹಾಶಯರು ತಮ್ಮ ಅಮೂಲ್ಯ ಅನಿಸಿಕೆ ಅಭಿಪ್ರಾಯ ಭಾವನೆಗಳನ್ನು ಈ ಪತ್ರಿಕೆಯಲ್ಲೇ ಶೀಘ್ರವಾಗಿ ಹಂಚಿಕೊಂಡರೆ ಮಾನವ ಹಕ್ಕುಗಳ ರಕ್ಷಣೆಯಾದಂತಾಗಿ ಸಜ್ಜನ ನಾಗರಿಕರ ದುಃಖಭರಿತ ಕಣ್ಣೀರನ್ನು ಒರಸಿ ಅವರಿಗೆ ನ್ಯಾಯ ಕೊಡಿಸಿದ ಪುಣ್ಯ ಸಮಾಜದ ಈ ಸತ್ಪುರುಷರಿಗೆ ದೊರಕಿ ದಂತಾಗಿ ವಿಷಯವನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಾಧ್ಯವಾಗಬಹುದಾಗಿದೆ.

Comments
Post a Comment