ಠೊಣಪನೋರ್ವನಿಹನು ಪಕ್ಕ;ಇರುಕು ಪ್ಲೇನ್‌ನ ಸೀಟಿನಲ್ಲಿ…

 ಠೊಣಪನೋರ್ವನಿಹನು ಪಕ್ಕ, ಇರುಕು ಪ್ಲೇನ್‌ನ ಸೀಟಿನಲ್ಲಿ…

ಹಾಸ್ಯ ಲೇಖನ - ಅಣಕು ರಾಮನಾಥ್ 



ಠೊಣಪನೋರ್ವನಿಹನು ಪಕ್ಕ; ಇರುಕು ಪ್ಲೇನ್‌ನ ಸೀಟಿನಲ್ಲಿ… “ವಿಂಡೋ ಸೀಟ್‌ ಇರಲಿ” ಎಂದಳು ಮಡದಿ. ಆ ಹೇಳಿಕೆಯೊಂದಿಗೆ ನನಗೆ ʼ ಅಪ್ಪಚ್ಚಿʼ ಸೀಟ್‌ ಖಾತ್ರಿಯಾಯಿತು. “ಪಾಸಿಟಿವ್‌ ಆಟಿಟ್ಯೂಡ್‌ ಇರಬೇಕು. ನಿಮ್ಮ ಪಕ್ಕದ ಸೀಟಿನಲ್ಲಿ ಸುಂದರಿಯೊಬ್ಬಳು ಕುಳಿತುಕೊಳ್ಳುವ ಸಾಧ್ಯತೆಯೂ ಇದೆಯಲ್ಲವೆ?” ಎಂದ ಗೆಳೆಯ. ಮಡದಿಯೊಡನೆ ಪ್ರಯಾಣ ಮಾಡುವಾಗ ಆ ಪಕ್ಕದಲ್ಲಿ ಸುಂದರಿ ಕುಳಿತರೆ “ಆರು ಹಿತವರು ನಿನಗೆ; ಈ ಈರ್ವರೊಳಗೆ” ಎಂದು ನಿರ್ಧರಿಸುವಷ್ಟರಲ್ಲಿ ಪ್ರಯಾಣವೇ ಮುಗಿದುಹೋಗಿರುತ್ತದೆ. ಅಲ್ಲದೆ, “ವಿಂಡೋ ಬಿ ಡ್ಯಾಮ್ಡ್; ಕಿಟಕಿಯ ಸೀಟ್‌ ಅವಳಿಗೆ; ನಾವಿಬ್ಬರೂ ಅಕ್ಕಪಕ್ಕ” ಎಂದೋ, “ವಿಂಡೋಗೂ, ಲೇಡಿಗೂ ಹೋಲಿಸಿದರೆ ವಿಂಡೋ ಈಸ್‌ ದ ಲೆಸ್ಸರ್‌ ಆಫ್‌ ಟೂ ಈವಿಲ್ಸ್” ಎಂದೋ ಧೋರಣೆ ತಳೆದು ಮಡದಿಯು ನನ್ನನ್ನು ತನ್ನ ಪಕ್ಕದ ಸೀಟಿಗೆ ರವಾನಿಸಿ ನನ್ನನ್ನು ʼ ಪಾರ್ಶ್ವನಾಥʼನನ್ನಾಗಿಸುವುದು ನಿಶ್ಚಿತ. “ವಯಸ್ಸಿನಲ್ಲೇ ದೊರಕದ ಲಲನಾಕರ್ಷಣ ಭಾಗ್ಯ ಈಗೆಲ್ಲಿ ದೊರೆತೀತು ಇವರಿಗೆ? ಬೈ ಮಿಸ್ಟೇಕ್‌ ಇವರನ್ನು ಒಪ್ಪಿಬಿಟ್ಟೆ ಅಷ್ಟೆ. ಇವರು ಬಂದ ದಿನವೇ ನನ್ನ ಜಾತಕದಲ್ಲಿ ಗುರುವು ತನ್ನ ಮನೆಯನ್ನು ಎರಡು ಮನೆಗಳಾಚೆಗೆ ವರ್ಗಾಯಿಸಿ ಶನಿಯ ಮನೆಯನ್ನು ಸೇರಿದ್ದನಂತೆ” ಎಂದು ಖಾರಾಬಾತ್‌ (ಬಾತೆಂದರೆ‌ ಹಿಂದಿಯೊಳ್ ಮಾತಲ್ತೇ!) ಉದುರಿಸಿದಳು ಮಡದಿ. ಗೆಳೆಯನೂ ಅವಳ ಮಾತಿಗೆ ಮೆಚ್ಚಿ ಅಹುದಹುದೆಂದ. ನಿರ್ಧರಿತ ದಿನದಂದು, ನಿರ್ಧರಿತ ಸಮಯದಲ್ಲಿ, ಏರ್‌ ಪೋರ್ಟ್‌ ತಲುಪಿ ವಿಮಾನವನ್ನೇರಿದೆವು. ಕಿಟಕಿಯ ಪಕ್ಕ ಮಡದಿ, ಅವಳ ಪಕ್ಕದ ಅಪ್ಪಚ್ಚಿ ಸೀಟಿನಲ್ಲಿ ನಾನು ಆಸೀನರಾದೆವು. ವಿಮಾನ ಹೊರಡಲು ಇಪ್ಪತ್ತು ನಿಮಿಷಗಳಿದ್ದು ಓಣ್ಯಾಸನವು (Aisle Seat) ಇನ್ನೂ ಖಾಲಿಯಿದ್ದು, “ಈ ಸೀಟು ಖಾಲಿಯೇ ಇದ್ದರೆ ಬುಲ್‌ ಟೆಂಪಲ್‌ ರಸ್ತೆಯ ದೊಡ್ಡ ಗಣೇಶನಿಗೆ ಪುಟ್ಟ ತೆಂಗಿನಕಾಯಿ ಒಡೆಸುವೆ” ಎಂದು ಹರಕೆ ಹೊತ್ತೆ. ಎರಡೆಂದರೆ ಎರಡೇ ನಿಮಿಷಗಳಲ್ಲೀ ಗಣೇಶನಿಗೆ ಪುಟ್ಟ ತೆಂಗಿನಕಾಯಿಯ ಆಫರ್‌ ಇಷ್ಟವಾಗಲಿಲ್ಲವೆಂದು ತಿಳಿದುಬಂದಿತು. ಗಣೇಶನ ಹೊಟ್ಟೆಯು ಸ್ಲಿಮ್‌ ಎನ್ನಿಸುವ ಮಟ್ಟದ ಗುಡಾಣೋದರನೊಬ್ಬನು ಸೀಟಿನತ್ತ ಧಾವಿಸಿದ. ಅಪ್ಪಚ್ಚಿಯಾಗದಿರು ಮೈಹಿಡಿಯಾಗಿಸಿರು ಡುಮ್ಮ ಬರುವನು ಪಕ್ಕ ಜರುಗು ಎಡಕ್ಕೆ ಜೋ…ಕೆ; ಜೋ ಜೋ ಜೋ ಜೋ…ಕೆ ಎಂದು ನನ್ನ ಮನಸ್ಸು ಒಳಗೊಳಗೇ ಚೀರಿತು. ಕಿಟಕಿಯತ್ತ ವಾಲಿ ಹೊರನೋಟವನ್ನು ಆಸ್ವಾದಿಸುತ್ತಿದ್ದ ಮಡದಿಯ ವಾಲುಭಂಗಿಗೆ ಸಮಾನಾಂತರ ರೇಖೆಯಲ್ಲಿ ನನ್ನ ಮೈಯನ್ನೂ ಬಾಗಿಸಿ ಡುಮ್ಮನಿಗೆ ಜಾಗ ಮಾಡಿಕೊಟ್ಟೆ. ಹಿಂದೊಮ್ಮೆ ವಿಶ್ವವೊಂದೇ ಇತ್ತು; ದೇಶಗಳಿರಲಿಲ್ಲ. ಗಡಿ ಎಂಬ ಕಲ್ಪನೆಯೇ ಇರದಿದ್ದ, ನಿಜಕ್ಕೂ ವಸುಧೈವ ಕುಟುಂಬಕಂ ಆಗಿದ್ದ ಕಾಲವೊಂದಿತ್ತು. ಡುಮ್ಮನು ಅದೇ ಕಾಲದಲ್ಲಿ ಹುಟ್ಟಿದವನ ಇತ್ತೀಚಿನ ಪೀಳಿಗೆಗೆ ಸೇರಿದವನೆಂದು ತಾನು ಕುಳಿತ ಕೂಡಲೆ ನಮ್ಮಿಬ್ಬರ ಸೀಟಿನ ನಡುವೆ ಇದ್ದ ಹ್ಯಾಂಡ್‌ ರೆಸ್ಟನ್ನು ತೆಗೆಯುವುದರ ಮೂಲಕ ಸಾಬೀತು ಪಡಿಸಿದ. ಒಂದಾನೊಂದು ಕಾಲದಲ್ಲಿ ಶೆಟ್ಟರಲ್ಲಿ ʼಮೀದಿ ಮಾದೇ, ಮಾದೀ ಮಾದೇʼ ಎಂಬ ಧೋರಣೆಯಿತ್ತು, ಕ್ರಮೇಣ ಆ ಧೋರಣೆ ಮಾಯವಾಯಿತು ಎನ್ನುತ್ತಾರೆ. ಈ ಠೊಣಪನಲ್ಲಿ ಆ ಧೋರಣೆ ಢಾಳಾಗಿತ್ತು. ತತ್ಕಾರಣ ತನ್ನ ಸೀಟೂ ತನ್ನದೇ, ನನ್ನ ಅರ್ಧ ಸೀಟೂ ತನ್ನದೇ ಎಂದು ಆಕ್ರಮಣಪ್ರಕಾರೇಣ ಸಿದ್ಧಪಡಿಸಿದ. ನನ್ನ ಸ್ಥಾನವನ್ನು ಆಕ್ರಮಿಸಿದವನ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿ ಗಗನಸಖಿಯರು ಗಮನ ಸೆಳೆಯಲು ಯತ್ನಿಸಿದೆ. ರೂಪದರ್ಶಿಯರಾಗಲು ಲಾಯಕ್ಕಾದ ಈ ಸಖಿಯರು ʼರೂಪದಲ್ಲಿ ಏಂಜಲ್; ಎತ್ತಬೇಕವರಿವರ ಎಂಜಲ್‌ʼ. ಮದ್ಯಸ್ಥರು(ಮದ್ಯಪ್ರಿಯರು), ರಸಾನುಭವಿಗಳು (ಜ್ಯೂಸ್‌ ಆಸ್ವಾದಿಸುವವರು), ಶೋಕಾಹಾರಿಗಳು (ಶೋಕಿಗಾಗಿ ತಿನ್ನುವವರು), ಮೃಗಸಂಖ್ಯಾನಿಯಂತ್ರಕರು (ಪ್ರಾಣಿಗಳನ್ನು ತಿನ್ನುವುದರ ಮೂಲಕ ಅವುಗಳ ಸಂಖ್ಯೆಯನ್ನು ನಿಯಂತ್ರಿಸುವವರು) ಮೊದಲಾದವರ ಸೇವೆಯಲ್ಲಿ ನಿರತರಾಗಿದ್ದ ಗಗನಸಖಿಯರಿಗೆ ಠೊಣಪನ ಪಕ್ಕದಿಂದ ಕೈ ಆಡಿಸುತ್ತಿದ್ದ ನಾನು ಕಾಣಲೇಯಿಲ್ಲ ಎನಿಸುತ್ತದೆ. ಮೇಲಿದ್ದ ಲೈಟನ್ನು ಆನ್‌ ಮಾಡಿ ಗಮನ ಸೆಳೆದೆ. ಗಗನಸಖಿಯು ಗಗನಸಖನೊಬ್ಬನ ಗಮನ ಸೆಳೆದು ನನ್ನತ್ತ ಛೂ ಬಿಟ್ಟಳು. “ಕ್ಷಮಿಸಿ. ಒಮ್ಮೆ ನೀಡಿದ ಸೀಟನ್ನು ಬದಲಿಸಲು ಸಾಧ್ಯವಿಲ್ಲ” ಎಂದನಾ ʼತೊಟ್ಟ ಬಾಣವನ್ನು ತೊಡುವುದಿಲ್ಲʼ ಎಂದವನ ಇಂದಿನ ಪೀಳಿಗೆಗೆ ಸೇರಿದ ಕರ್ಣ ಬ್ರ್ಯಾಂಡ್‌ ಗಗನಸಖ. ಬಾಲ್ಯದಲ್ಲಿ ಕೋನಾಕಾರದ ಪೊಟ್ಟಣಗಳಲ್ಲಿ ಅಂಗಡಿಯವನು ಕಟ್ಟಿಕೊಟ್ಟ ಸಾಮಾನುಗಳನ್ನು ಡಬ್ಬಗಳಲ್ಲಿ ತುಂಬಿಸುವಾಗ ಒಂದು ಮಟ್ಟವಾದಮೇಲೆ ಡಬ್ಬವನ್ನು ಅಲುಗಿಸಿ ಇನ್ನಷ್ಟು ತುಂಬಿಸುವ ಕ್ರಮವಿತ್ತು. ಅಂತೆಯೇ ಧಡಿಯನು ತನ್ನ ದೇಹವನ್ನು ಒಂದೂವರೆ ಸೀಟ್‌ ಅಗಲ, ಮುಂದಿನ ಸೀಟಿನವರೆಗಿನ ಉದ್ದದಲ್ಲಿ ತುಂಬಿ ತುಂಬಿ ಸೇರಿಸಲು ಅಲುಅಲುಅಲುಗಾಡಿದ. ವಿಮಾನದಲ್ಲಿ ಸಣ್ಣ ಕಂಪನ ಉಂಟಾಯಿತು. ನಾನು ಕೆಲವು ಮಿಲಿಮೀಟರ್‌ ಜರುಗಿ ಡಬ್ಬದಲ್ಲಿ ಸಾಮಾನು ತುಂಬಲು… ಕ್ಷಮಿಸಿ… ಸೀಟಿನಲ್ಲಿ ಠೊಣಪನು ತುಂಬಿಕೊಳ್ಳಲು, ಅನುವಾದೆ. ವಿಮಾನವು ಮೇಲೇರಿತು. ಠೊಣಪನು ನಿದ್ರೆಗೆ ಜಾರಿದ. ಜಾರಿದಾಗ ಲೀನಿಂಗ್‌ ಟವರ್‌ ಆದ. ನನ್ನ ಎಡಭುಜವು ಅವನ ಭುಜಬಲದ… ಅಲ್ಲ… ಬಲಭುಜದ ಆಕ್ರಮಣಕ್ಕೊಳಗಾಗಿ ಒದ್ದೆಯಾದ ಹಪ್ಪಳದಂತೆ ಸಪಾಟಾಗಬೇಕಾಗಿತ್ತು. ಭುಜದಲ್ಲಿ ಮೂಳೆ ಇರುವುದರಿಂದ ಪೂರ್ಣ ಅಪ್ಪಚ್ಚಿಯಾಗದೆ ಉಳಿದುಕೊಂಡಿತು. “ನೀವೂ ಆಕಡೆಗೆ ಒತ್ತಿಕೊಳ್ರೀ!” ಆದೇಶಿಸಿದಳು ಮಡದಿ. ಎಡಭುಜದ ಮೂಳೆಯಿಂದ ಠೊಣಪನ ಬಲಭುಜಕ್ಕೆ ತಿವಿದೆ. ಕುಂಭಕರ್ಣನಿಗೆ ತ್ರಿಶೂಲದಿಂದ ತಿವಿದಾಗ ಆದಷ್ಟೇ ಪರಿಣಾಮವಾಯಿತು. ಹೆಚ್ಚು ಬಲಪ್ರಯೋಗ (ಎಡಭುಜದ ಮೂಳೆಯಿಂದ ತಿವಿಯುವುದು ಬಲಪ್ರಯೋಗವೋ, ಎಡಪ್ರಯೋಗವೋ? ಕಮ್ಯೂನಿಸ್ಟರೇ ಉತ್ತರಿಸಬೇಕು) ಮಾಡಿದರೆ ಮೂಳೆಯು ಡಿಸ್‌ಲೊಕೇಟ್‌ ಆಗುವ ಸಾಧ್ಯತೆ ಇದ್ದುದರಿಂದ ʼದಟ್‌ ವಿಚ್‌ ಕೆನ್‌ ನಾಟ್‌ ಬಿ ಕ್ಯೂರ್ಡ್‌, ಮಸ್ಟ್‌ ಬಿ ಎಂಡ್ಯೂರ್ಡ್‌ʼ ಎಂಬ ಸೂತ್ರಕ್ಕೆ ಬದ್ಧನಾದೆ. ಠೊಣಪನು ಮತ್ತೊಮ್ಮೆ ಡಬ್ಬದಂತೆ ಅಲುಗಾಡಿದ. ನನ್ನ ಎಡಭುಜವು ಬಂಧನಮುಕ್ತವಾಯಿತು. ಕೊಂಚ ಓಣಿಯತ್ತ ವಾಲಿದ ಠೊಣಪನು ತನ್ನ ಮೊಗವನ್ನು ನನ್ನ ಕಿವಿಯತ್ತ ತಿರುಗಿಸಿದ. ಪಾಠಕ ಮಹಾಶಯಾ! ಮುಂದಿನದನ್ನೆಂತು ವರ್ಣಿಪುದೋ! ಮಿಲ್ಲಿನ ಗರಗಸ ಕಿರುಗುಡುವಂತೆ ಕಲ್ಲಿನ ಸ್ಫೋಟವು ಗುಡುಗುಡುವಂತೆ ಸೊಲ್ಲಲೆ ರಕ್ಕಸ ಬೆದರಿಸುವಂತೆ ಝಿಲ್ಲನೆ ಹೃದಯವ ನಡುಗಿಸುವಂದದಿ ಠೊಣಪ ಹೊರಡಿಸಿದ ಗೊರಕೆಯನು; ಕಿವಿಯದ ಪರವಶವಾಗುತ ಆಲಿಸಿತು ಎಂದು ಹೇಳಿದರೆ ಆ ಗೊರಕೆಯ ಬಗ್ಗೆ ಏನೇನೂ ಹೇಳಿದಂತಾಗಲಿಲ್ಲ. ಎಣಿಸಲಾಗದಷ್ಟು ಮೆಗಾ ಹರ್ಟ್ಸ್‌ ವೇಗದಲ್ಲಿ ಹರ್ಟ್‌ ಮಾಡಲೆಂದೇ ಹೊರಟ ಸದ್ದಿಗೆ ನನ್ನ ಕಿವಿಯ ತಮಟೆಯು ತೀರ್ವವಾಗಿ ಸ್ಪಂದಿಸಿತು; ತಮಟೆಯ ಸುತ್ತಲಿನ ನರಗಳು ತಮ್ಮ ಪ್ರತಿಭಟನೆಯನ್ನು ನೋವಿನ ಮೂಲಕ ತೋರಿದವು. ಗೊರಕಿಸುವವರ ಭಂಗಿ ಬದಲಾದರೆ ಗೊರಕೆಯು ಸೈಲೆಂಟ್‌ ಮೋಡ್‌ಗೆ ಹೋಗುವುದೆಂಬ ಥಿಯರಿಯನ್ನು ಪ್ರಯೋಗಿಸಲು ನಿರ್ಧರಿಸಿ ಠೊಣಪನ ಪಕ್ಕೆಗೆ ತಿವಿದೆ. ಕಚಗುಳಿ ಇಟ್ಟಂತಾಗಿ ಠೊಣಪನು ನಿದ್ರೆಯಲ್ಲಿಯೇ ನಕ್ಕ. ಗೊರಕೆ ಮುಂದುವರಿಯಿತು. ಈ ಬಾರಿ ಮೊಗವು ಕಿವಿಗೆ ಮತ್ತೂ ಹತ್ತಿರವಾಯಿತು. ಇವೆಲ್ಲವನ್ನೂ ಗಮನಿಸುತ್ತಿದ್ದ ಗಗನಸಖಿಯು ನನ್ನ ಸಹಾಯಕ್ಕೆ ಬರಲು ನಿರ್ಧರಿಸಿದಳು. ತಿಂಡಿಯ ತಟ್ಟೆಯೊಂದನ್ನು ಹಿಡಿದು ಬಂದು, ʼಯುವರ್‌ ಬ್ರೇಕ್‌ಫಾಸ್ಟ್‌ ಸರ್‌ʼ ಎಂದು ಇನಿದನಿಯಲ್ಲಿ ನುಡಿದಳು. ಝೋಮು ಹಿಡಿದ ಕಾಲಿಗೆ ಇರುವೆ ಕಚ್ಚಿದರೆ ತಿಳಿದೀತೆ? ಇನಿದನಿಯು ಗೊರಕೆಯನ್ನು ಮೀರೀತೆ? ಆ ದನಿ-ಗೊರಕೆ ಜೋಡಿಯು ವೆಸ್ಟ್ರನ್‌ ಮ್ಯೂಸಿಕ್ಕಿನ ಅಬ್ಬರದಲ್ಲಿ ಸಿಲುಕಿದ ಕರ್ನಾಟಕ ಸಂಗೀತದಂತಾಯಿತು. ಡಬ್ಬ ಕಟ್ಟುವುದನ್ನೇ ಹಿನ್ನೆಲೆ ಸಂಗೀತವೆಂದು ನಂಬಿದನವ ಕೈಗೆ ʼವಂದೇ ಮಾತರಂʼ ಗೀತೆಯನ್ನು ಕೊಟ್ಟು ಕುಲಗೆಡಿಸಿದಂತಾಯಿತು. ಗಗನಸಖನೊಬ್ಬ ಧಾವಿಸಿ, ಠೊಣಪನ ಕಿವಿಗೆ ತುಟಿಯಿರಿಸಿ ಗಬ್ಬರ್‌ ಸಿಂಗ್‌ನಂತೆ ಅಬ್ಬರಿಸಿದ. ಠೊಣಪ ಕದಲಿದ. ತಿಂಡಿಯನ್ನು ಕಂಡ. ಮುಂದಿನ ಸೀಟಿನಲ್ಲಿದ್ದ ಟ್ರೇಯನ್ನು ಸಮತಟ್ಟಾಗಿಸಲು ಯತ್ನಿಸಿದ. ಪ್ಯಾರಾಬೋಲಾದ ಆಕಾರದ ಹೊಟ್ಟೆಯ ಒತ್ತಡಕ್ಕೊಳಗಾಗಿ ಟ್ರೇ ನಲವತ್ತೈದು ಡಿಗ್ರಿ ಕೋನದಲ್ಲಿ ನಿಂತಿತು. ಟ್ರೇಯನ್ನು ಯಥಾಸ್ಥಿತಿಗಿರಿಸಿ ಹೊಟ್ಟೆಯನ್ನೇ ಟ್ರೇಯಾಗಿ ಪರಿವರ್ತಿಸಿಕೊಂಡು ತನ್ನ ಬ್ರೇಕ್‌ಫಾಸ್ಟ್‌ ಮುಗಿಸಿದ. ಕೂಲೆಂಟ್‌ ಕಡಿಮೆಯಿದ್ದರೆ ಕಾರ್‌ ಹೀಟ್‌ ಆಗಿ ಆಕ್ಸಿಲರೇಟರ್‌ ಕೊಟ್ಟರೂ ಮುಂದೆ ಸಾಗದು. ಕೂಲೆಂಟನ್ನು ಹಾಕಿದ ಕೂಡಲೆ ಎಂದಿನ ವೇಗವನ್ನು ಪಡೆಯುವುದು. ಡುಮ್ಮನಿಗೂ ತಿಂಡಿಯು ಕಾರಿಗೆ ಕೂಲೆಂಟ್‌ ಉಂಟಾಗಿಸುವ ಪರಿಣಾಮವನ್ನೇ ಉಂಟಾಗಿಸಿತು. ಅವನ ಗೊರಕೆಯ ಆರೋಹಣವು ಬ್ರೆಜಿಲ್‌ನ ಗಾಯಕಿ ಜಾರ್ಜಿಯಾ ಬ್ರೌನ್‌ಳ ಜಿ-೧೦ ಮಟ್ಟಕ್ಕೂ ಅವರೋಹಣವು ಕಂಪನಮಾತ್ರದಿಂದ ಗುರುತಿಸಲಾಗುವ, ಅಮೆರಿಕದ ಬ್ಯಾಸ್‌ ಗಾಯನ ತಂಡವು ತಲುಪಿದ ಜಿ-೭; ೦,೧೮೯ ಹರ್ಟ್ಸ್‌ ಮಟ್ಟವನ್ನೂ, ತಲುಪುತ್ತಿತ್ತು. ಪುಣ್ಯವಶಾತ್‌ ಠೊಣಪನ ವದನವು ನನ್ನ ಕಿವಿಯ ತಮಟೆಯಿಂದ ದೂರವಿತ್ತು. ನಾಲ್ಕು ಗಂಟೆಗಳ ಭಾರತ-ಮಲೇಷ್ಯಾ ಪ್ರಯಾಣವನ್ನು ಮುಗಿಸಿ ಲೌಂಜಿನಲ್ಲಿದ್ದೇನೆ. ಎಡಭುಜಕ್ಕೆ ಅಯೋಡೆಕ್ಸ್‌ ಹಚ್ಚಿದ್ದೇನೆ. ಕಿವಿಯಲ್ಲಿ ಹುಳು ಹೊಕ್ಕಾಗ ನಾಯಿಗಳು ಕಿವಿಯನ್ನು ಕೊಡವಿಕೊಳ್ಳುವಂತೆ ಕೊಡವಿಕೊಳ್ಳಲು ಯತ್ನಿಸುತ್ತಿದ್ದೇನೆ. ಕಿವಿಯ ತಮಟೆಯು ʼಕೇಳೆನೋ ಗೊರ್ಕೆ ತಾಳೆನೋ; ಚಂಡಮಾರುತದಂಥ ಮೇಳವಿಲ್ಲದ ಸದ್ದು ಕೇಳೆನೋ ನಾ ತಾಳೆನೋʼ ಎಂದು ಗೋಗರೆಯುತ್ತಿದೆ. ಮುಂದೆ ಮೆಲ್ಬೋರ್ನ್‌ಗೆ ಎಂಟು ಗಂಟೆಗಳ ಪ್ರಯಾಣ. ಪಕ್ಕದ ಸೀಟಿಗೆ ಅದಾರು ಬರುವನೋ! ಮೆಲ್ಬೋರ್ನನ್ನು ಒಂದೇ ಪೀಸಿನಲ್ಲಿ ತಲುಪುವೆನೋ ಅಥವಾ ಸೂಟ್‌ಗಳಂತೆ ತ್ರೀ ಪೀಸ್‌ ಆಗುವೆನೋ!

Comments