ಎಂಥಾ ಶ್ರೀಮಂತನಂತಾನೋ

ಎಂಥಾ ಶ್ರೀಮಂತನಂತಾನೋ, ಶ್ರೀಕಾಂತೆಯ ಕಾಂತ ಎಂಥಾ ಶ್ರೀಮಂತನಂತಾನೋ

ಲೇಖನ- ಶ್ರೀ ಬೇಳೂರು ರಾಮಮೂರ್ತಿ 



==================================================

ವಿಜಯದಾಸರ ಈ ಕೃ ತಿ ಕೇಳುವುದಕ್ಕೆ ಎಷ್ಟು ಸೊಗಸೋ ಅಷ್ಟೇ ಅರ್ಥಗರ್ಭಿತವಾಗಿದೆ. ಹಾಡು ಕೇಳಿದ ತಕ್ಷಣ ಅದರ ಸಂಪೂರ್ಣ ಅರ್ಥ ಆಗುವುದಿಲ್ಲ. ಇಗೋ ಇಲ್ಲಿದೆ ಹಾಡಿನ ಪದಗಳ ಅರ್ಥ ಮತ್ತು ತಾತ್ಪರ್ಯ

*****************************


ಲಕ್ಷ್ಮೀ  ದೇವಿಯ ಪತಿಯಾದ (ಶ್ರೀಕಾಂತ) ಈ ಪರಮಾತ್ಮನು ಅನಂತವಾದ ಶ್ರೀಮಂತಿಕೆಯನ್ನು ಹೊಂದಿದ್ದಾನೆ. ಈತನ ವೈಭವಕ್ಕೆ ಕೊನೆಯೇ ಇಲ್ಲ ಈ ಹಾಡಿನಲ್ಲಿ ವಿಜಯದಾಸರು ಪರಮಾತ್ಮನನ್ನು ಅನಂತ ಶ್ರೀಮಂತ ಎಂದು ಕರೆದಿದ್ದಾರೆ. ಇಲ್ಲಿ ಶ್ರೀಮಂತಿಕೆ ಎಂದರೆ ಹಣವಲ್ಲ ಬದಲಿಗೆ, ಸಕಲ ಜಗತ್ತಿನ ಒಡೆತನ ಮತ್ತು ಅಪಾರವಾದ ದಿವ್ಯಗುಣಗಳ ಸಂಪತ್ತು ಹೊಂದಿರುವವನು. ಬ್ರಹ್ಮ ರುದ್ರಾದಿ ದೇವತೆಗಳಿಗೂ ಅತೀತನಾದ, ಗಂಗೆಗೆ ಜನ್ಮವಿತ್ತ, ಶರಣಾಗತ ರಕ್ಷಕನಾದ ಶ್ರೀನಿವಾಸನ ಮುಂದೆ ಬೇರೊಬ್ಬ ಒಡೆಯನಿಲ್ಲ ಎನ್ನುವ ಅರ್ಥವನ್ನು ದಾಸರು ಪ್ರತಿಪಾದಿಸಿದ್ದಾರೆ. ಕಡೆಗೆ ಈ ಇಡೀ ವಿಶ್ವವನ್ನೇ ತನ್ನ ಕುಕ್ಷಿಯಲ್ಲಿಟ್ಟುಕೊಂಡಿರು ಆ ಕೃಪಾಂಬುಧಿ ವೆಂಕಟೇಶನೇ ನಮ್ಮನ್ನು ಸಲಹುವ ಕುಟುಂಬಿ ಎಂದು ಅವರು ಶರಣಾಗಿದ್ದಾರೆ. 

ಚರಣ 1 

ಬೊಮ್ಮನು ಹೆಮ್ಮಗ ಮೊಮ್ಮಮೃಢರಿ ಮೊಮ್ಮಗ ಶಣ್ಮಶಿರಮ್ಮ 

ಪರಮ್ಮ ಅಮ್ಮರಸಮ್ಮೋಹ ನಿಮ್ಮಣುಗಮ್ಮರು ನಮ್ಮ ಪರಮ್ಮ ಮಹಿಮ್ಮ 


ಸಾರಾಂಶ - ಬ್ರಹ್ಮದೇವನು ಈತನ ಮಗ ( ನಾಭಿಕಮಲದಿಂದ ಹುಟ್ಟಿದವನು ) ಶಿವನು ಈತನ ಮೊಮ್ಮಗ, ಮನ್ಮಥ, ಷಣ್ಮುಖ ಮುಂತಾದ ಸಕಲ ದೇವತೆಗಳೂ ಈತನ ವಂಶಕ್ಕೆ ಅಥವಾ ಅಧೀನಕ್ಕೆ ಸೇರಿದವರು. ಇಂತಹ ದೇವತೆಗಳೇ ನಿನ್ನ ಅನುಗ್ರಹಕ್ಕೆ ಕಾಯುತ್ತಿರುವಾಗ ನಿನ್ನ ಮಹಿಮೆಯನ್ನು ವರ್ಣಿಸಲು ಅಸಾಧ್ಯ 


ಬೊಮ್ಮನು ಹೆಮ್ಮಗ – ಚತುರ್ಮುಖ ಬ್ರಹ್ಮ ಇವನ ಹಿರಿಯ ಮಗ, ಸೃಷ್ಟಿಯಾದಿಯಲ್ಲಿ ಪರಮಾತ್ಮನ ಕಮಲನಾಭದಿಂದ ಹೊರಹೊಮ್ಮಿದ ಚೊಚ್ಚಲ ಮಗ, ಹಿರಿಯಚೇತನರಲ್ಲಿ ಹಿರಿಯನಾದ ಬ್ರಹ್ಮ 

ಮೊಮ್ಮಮೃಢ - ಬ್ರಹ್ಮನ ಮಗನಾಗಿ ರುದ್ರನ ಹುಟ್ಟು, ಅದಕ್ಕೆ ರುದ್ರನ ಅಜ್ಜ ಹರಿ, ರುದ್ರ ಹರಿಯ ಮೊಮ್ಮಗ, 

ಮರಿಮೊಮ್ಮಗಶಣ್ಯಶಿರ – ರುದ್ರನ ಮಗನಾದ ಷಣ್ಮುಖ ( ಷಟ್ ಶಿರ ) ಮೊಮ್ಮಗನ ಮಗ, ಮರಿಮೊಮ್ಮಗ 

ಪರಮ್ಮ - ಪರಮ, ಉತೃ಼಼ಷ್ಟನಾದವನು

ಅಮ್ಮರಸಮ್ಮೋಹ – ಅಮರ ಸಮೂಹ, ಶಬ್ದ ಮತ್ತು ಆಡುಭಾಷೆಗನುಗುಣವಾಗಿ ಅಮ್ಮರಸಮ್ಮೋಹ ಎಂ ದಿದ್ದಾರೆ

ನಿಮ್ಮಣಗಮ್ಮರು – ಈ ಅಕ್ಷರಸಮೂಹವು ನಿನ್ನ ಅಣುಗರು ( ಸೇವಕರು ) 

ಅಮ್ಮರು – ಎನ್ನುವರು , ಅಂಥವನಾದ ನಿನಗೆ

ನಮ್ಮೋ ಪರಮ್ಮೋ ಮಹಮ್ಮ - ನಮ್ಮೆಲ್ಲರ ಪರಮ ಮಹಿಮನಾದವನಿಗೆ3 ನಮೋ ನಮ: 


ಚರಣ 2 – ( ಗಂಗೆಯ ಉಗಮ ಮತ್ತು ಮಂಗಳಕರ ರೂಪ )


ಅಂಬರುಹಂಗಳ ಅಂಗನಂತಗತ ಮಂಗಳಪಾಂಗ ವಿಶ್ವಂಗಳ ಮಂಗಳ

ಸಿಂಗರದಂಗುಟ ಸಂಗದ ಗಂಗಜ ಕಂಗಳಘಂಗಳ ಹಿಂಗಿಪಳಾಂಗಾ ||


ಕಮಲದಂತಹ ಸುಂದರ ಅವಯವಗಳನ್ನು ಹೊಂದಿರುವವನೇ, ನಿನ್ನ ದಿವ್ಯದೃಷ್ಟಿಯೇ ( ಅಪಾಂಗ ) ಈ ವಿಶ್ವಕ್ಕೆ ಮಂಗಳವನ್ನು ಉಂಟುಮಾಡುತ್ತದೆ. ನಿನ್ನ ಪಾದದ ಹೆಬ್ಬೆರಳಿನಿಂದ ಹುಟ್ಟಿದ ಗಂಗೆಯು ನಮ್ಮ ಕಣ್ಣಿನ ಮತ್ತು ಮನಸಿನ ಸಕಲ ಪಾಪಗಳನ್ನೂ (ಅಘ) ದೂರ ಮಾಡುತ್ತಾಳೆ. ಅಂತಹ ಪವಿತ್ರ ಮೂರ್ತಿ ನೀನು 



ಅಂಬು + ರುಹ - ನೀರಿನಲ್ಲಿರುವ ಗಿಡ 

ಅಂಗ – ಕಮಲದ ಅಂಗ, ಶರೀರ, ಕಮಲದಲ್ಲಿ ಬಂದAಥಾ ಶರೀರ, ಅಂದರೆ ಬ್ರಹ್ಮ, ಅಂಗ – ದೇಹ 

 ಒಟ್ಟಿನಲ್ಲಿ ಬ್ರಹ್ಮಾಂಡ

ಅನಂತಗತ – ಇಂತಹ ಬ್ರಹ್ಮಾಂಡಗಳು ಅನಂತಗತ, ಅಂದರೆ ಅಸಂಖ್ಯಾಕವಾಗಿರುಗ ಬ್ರಹ್ಮಾಂಡಕ್ಕೆ

 ಮಂಗಳಾಪಾಂಗ  – ಮಂಗಳ ಸ್ವರೂಪಿಯಾದ ಹರಿಯ ಅಂಗ

ವಿಶ್ವಂಗಳ ಮಂಗಳ - ಸೃಷ್ಟಿಸಿದ ವಿಶ್ವಕ್ಕೆ ಮಂಗಳವನ್ನೀಯಲೋಸುಗ

ಸಿಂಗರದಂಗುಟ - ಶೃಂಗಾರವಾದ ಅಂಗುಟ – ಉಂಗುಟ, ಅಂದರೆ ಶ್ರೀಹರಿಯ ಪಾದದ ಅಂಗುಟಾಗ್ರವು ಶ್ರೀಹರಿಯ \

 ಸ್ವರೂಪವೇ ಆಗಿದೆ

ಸಂಗದ - ಅದರ ಸಂಗದ – ಅಂದರೆ ಸ್ಪರ್ಶದಿಂದ

ಗಂಗಜ – ಗಂಗಾ ನದಿಯು ಹುಟ್ಟಿತು 

ಕಂಗಳಘಂಗಳ – ಗಂಗೆಯ ದೃಷ್ಟಿಯು ಇಹದಲ್ಲಿ ಭಕ್ತರ ಅಘ ( ಪಾಪಗಳನ್ನು ) 

ಹಿಂಗಿಪಳಾಂಗ- ಇಂಗಿಸುವವಳಾಗಿರುವಳು 


ಚರಣ 3 ( ಉನ್ನತ ಸ್ಥಿತಿ )


ಪನ್ನಗಪನ್ನ ಶಯನ್ನ ಮಹೋನ್ನತ ಪನ್ನಗವರವಾಹನ್ನ ರತುನ್ನ 

ಭವಾನ್ನ ಸುಖೋನ್ನತ ರನ್ನಗ ರನ್ನಿಜ ನಿನ್ನೆದುರಿನ್ನ್ಯಾರೆನ್ನೊಡೆಯನ್ನೆ


ಆದಿಶೇಷನ ಮೇಲೆ ಮಲಗುವವನೇ ( ಪನ್ನಗಶಯನ ) ಗರುಡ ವಾಹನನೇ, ಅತ್ಯಂತ ಉನ್ನತನಾದವನೇ, ಸಂಸಾರದ ಸುಖಕ್ಕಿಂತ ಮಿಗಿಲಾದ ಅಧ್ಯಾತ್ಮಿಕ ಆನಂದವನ್ನು ನೀಡುವ ರತ್ನದಂತಹ ಅರಸ ನೀನು. ನಿನ್ನ ಎದುರು ನಿಂತು ನಾನೇ ಒಡೆಯ ಎನ್ನಲು ಈ ಜಗತ್ತಿನಲ್ಲಿ ಇನ್ಯಾರಿದ್ದಾರೆ, ನೀನೇ ಏಕೈಕ ಸಾರ್ವಭೌಮ


ಪನ್ನಗಪನ್ನಶಯನ್ನ - ಸರ್ಪವನ್ನು ಹಾಸಿಗೆ ಮಾಡಿಕೊಂಡವ

ಮಹೋನ್ನತ ಪನ್ನಗವರವಾಹನ್ನ – ಮಗತ್ತರವಾದ 

ಪನ್ನಗವರ – ಸರ್ಪಕ್ಕಿಕಂತ ಶ್ರೇಷ್ಠವಾದ ಗುರಡವಾಹನ

ರತುನ್ನ – ಗುಣಗಳ ರಾಶಿ, ರತ್ನ 

ಭವಾನ್ನ ಸುಖೋನ್ನತ - ಭವವೆಂಬ ಸಾಗರಕ್ಕೆ ಉನ್ನತವಾದ ಸುಖವೀವ

ರನ್ನಗ, ರನ್ನಿಜ – ವಿಶೇಷವಾದ ರತ್ನ, - ಕಾಂತಿಯನ್ನು ಕೊಡುವ ರನ್ನಗ, ಅಂಧಕಾರವನ್ನು ಕಳೆಯುವ ಕಾಂತಿ ರನ್ನಿಜ

ಇಂಥಾ ನೀನಿರುವಾಗ ಇನ್ಯಾರು ಒಡೆಯನಾಗಲು ಸಾಧ್ಯ


ಚರಣ 4 ( ಶರಣಾಗತಿ )


ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ ಬಲ್ಲಿದ ಖುಲ್ಲರದಲ್ಲಣನಲ್ಲದೆ 

ಹುಲ್ಲುದು ನನ್ನೊಳವಲ್ಲ ನಿನ್ನಲ್ಲದೆ ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ 


ಮೋಕ್ಷ ಮಾರ್ಗವನ್ನು ಬಲ್ಲ ಜ್ಞಾನಿಗಳಿಗೆ ನೀನು ಪ್ರಿಯನಾದವನು ಮತ್ತು ಭಕ್ತರಿಗೆ ಸುಲಭವಾಗಿ ಒಲಿಯುವವನು. ದುಷ್ಟರನ್ನು ಶಿಕ್ಷಿಸುವವನು ನೀನು. ನಿನಗಿಂತ ಬೇರೆ ಯಾರೂ ನನ್ನನ್ನು ರಕ್ಷಿಸಲಾರರು. ನನ್ನ ಪ್ರತಿ ಮಾತೂ ಪ್ರತಿ ಉಸಿರೂ ನಿನ್ನ ಪ್ರೇರಣೆಯಿಲ್ಲದೇ ನಡೆಯದು. 


ಬಲ್ಲ ಕೈವಲ್ಯಜ್ಞರ ವಲ್ಲಭ – ಜ್ಞಾನಿಗಳ, ಮೋಕ್ಷಕ್ಕೆ ಅರ್ಹರಾದವರ ವಲ್ಲಭ, ದೊರೆಯಾದ ಹರಿ 

ಸುಲ್ಲಭ - ಹರಿಯ ಅರಿತವರಿಗೆ ಸುಲಭ 

ಬಲ್ಲಿದ - ವರಿಷ್ಟ ಹರಿಯು, 

ಖುಲ್ಲರ ದಲ್ಲಣನಲ್ಲದೆ – ದೈತ್ಯರ ( ತನ್ಮೂಲಕ ಸಾಧನೆಗೆ ಶತೃಗಳಾದ ಅರಿಷಡ್ವರ್ಗಗಳನ್ನೂ ಕೂಡಾ ) ಎದೆಯನ್ನು 

ನಡುಗಿಸುವ ಸಾಹಸಿ ಒಬ್ಬನೇ ಧೈರ್ಯವಂತ ಜಗದಲಿ

ಹುಲ್ಲದು ನಿನ್ನೊಳವಲ್ಲ ನಿನ್ನಲ್ಲದೆ ಇನ್ನಿಲ್ಲ – ಆ ಧೈರ್ಯವು ಹರಿಗಲ್ಲದೆ ಹುಲು ಜೀವಿಗೆ ಆಗುತ್ತದೆಯೇ 


ಚರಣ 5 

ಅಂಬರದುಂಬಿಗೆ ತುಂಬೆವಿಶ್ವಂಬಸುರದಿಂಬಿಲಿ ನಿಂಬಿಟ್ಟುಕೊಂಬಕೃಪಾಂಬುಧಿ
ಇಂಬಕದಂಬಕಬಿಂಬ ಪ್ರಸನ್ವೇಂಕಟನಂಬಿದ ಬಿಂಬನಿವನೆಂಬ ಕುಟುಂಬಿ ||

ಆಕಾಶದಂತೆಯೇ ವಿಶಾಲವಾದ ಈ ಬ್ರಹ್ಮಾಂಡವನ್ನೇ ತನ್ನಲ್ಲಿ ಅಡಗಿಸಿಕೊಂಡಿರುವ ಕೃಪಾಸಾಗರ ನೀನು. ನಿನ್ನ ಭಕ್ತರನ್ನು ನಿನ್ನವರೇ ಎಂದು ತಿಳಿದು ಕಾಪಾಡುವ ಕುಟುಂಬಿ ನೀನು. ಅಂತಹ ಪ್ರಸನ್ನ ವೇಂಕಟೇಶನನ್ನು ನಂಬಿದವರಿಗೆ ಎಂದಿಗೂ ಭಯವಿಲ್ಲ. 

  

ಪ್ರಳಯಕಾಲದಲ್ಲಿನ ಹರಿ ಮಹಿಮೆಯನ್ನು ಇಲ್ಲಿ ಹೇಳಿದ್ದಾರೆ. 

ಅಂಬರದುಂಬಿಗೆತುಂಬೆ – ಇಡೀ ವಿಶ್ವವು ( ಅಂಬರವನ್ನು ವಿಶ್ವಕ್ಕೆ ಹೋಲಿಸಿ ) 

ತುಂಬಿತುಂಬೆ- ಪ್ರಳಯಜಲಧಿಯಲ್ಲಿ ತುಂಬಿ ತುಳುಕಾಡಿದಾಗ

ವಿಶ್ವಮ್ – ಈ ಬ್ರಹ್ಮಾಂಡವನ್ನು 

ಬಸುರದಿ - ಹರಿಯ ಗರ್ಭದಲ್ಲಿ 

ಇಂಬ – ಆಶ್ರಯ, 

ಕದಂಬಕ - ಸಮೂಹ, ಸಕಲ ಜೀವಕ್ಕೆ ಆಶ್ರಯದಾತನಾಗಿ

ಬಿಂಬ - ಬಿಂಬಸ್ವರೂಪಿಯಾಗಿ ಇರುವ 

ಪ್ರಸನ್ನವೇಂಕಟನಂಬಿದ - ಪ್ರಸನ್ನ ವೇಂಕಟೇಶ್ವರನನ್ನು ನಂಬಿದವರಿಗೆ 

ಬಿಂಬನಿವನೆಂಬ - ಬಿಂಬಸ್ವರೂಪಿಯಾಗಿರುವ ಅಂದರೆ ಶ್ರದ್ಧೆಯಿಂದ ನಂಬಿದವರಿಗೆ ಬಿಂಬಸ್ವರೂಪಿಯಾಗಿ 

ಬಿಂಬನಿವ – ಅಂದರೆ ಅತ್ಯಂತ ಸಮೀಪವಾಗಿರುವ ಭಕ್ತರಿಗೆ

ಕುಟುಂಬಿ - ವಿಶ್ವಕುಟುಂಬಿಯಾಗಿ 

ಅಪರೋಕ್ಷ ಜ್ಞಾನವನ್ನು ಕೊಟ್ಟು ಕಾಪಾಡುವನು ಎಂದು ಅರ್ಥ


Comments