ಸಕ್ಕರೆ, ಬೆಲ್ಲ, ಜೇನುತುಪ್ಪ
ಯಾರು ಹಿತವರು ನಿನಗೆ ಈ ಮೂವರೊಳಗೆ?
ಆರೋಗ್ಯ ಲೇಖನ - ರಾಜೇಶ್ವರಿ ಜಯದೇವ್
ಎರಡು ವರ್ಷಗಳ ಹಿಂದೆ ನಾನು ಬೆಂಗಳೂರಿಗೆ ಹೋಗಿದ್ದಾಗ ಒಂದು ಶಾಪಿಂಗ್ ಮಾಲ್ ಗೆ ಹೋಗಿದ್ದೆ. ಅಲ್ಲಿ ಬೇಕರಿ ತಿನಿಸುಗಳಿದ್ದ ಅಂಗಡಿಯಲ್ಲಿ ಉಂಡೆಗಳ ಮುಂದೆ ಸಕ್ಕರೆ ರಹಿತ (sugar free) ಅಂತ ಬರೆದಿದ್ದ ಲೇಬಲ್ ಕಣ್ಣಿಗೆ ಬಿತ್ತು. ಅರೆ, ಸಕ್ಕರೇ ಇಲ್ಲದೆ ಉಂಡೆ ಹೇಗೆ ಮಾಡ್ತಾರಪ್ಪಾ? ಅನ್ನುಸ್ತು. ಅಲ್ಲದೆ ಕೃತಕ ಸಿಹಿಕಾರಕಗಳನ್ನ (artificial sweetners) ಉಪಯೋಗಿಸಿದ್ರೆ ಉಂಡೆಗೆ ಆ ಬಾಯಿರುಚಿ (mouthfulness) ಇರೋದಿಲ್ಲಾ. ಅಲ್ಲೇ ಒಬ್ಬಳು ಮಾರಾಟಗಾರ್ತಿ (sales girl) ನಿಂತಿದ್ದಳು. ಸುಮಾರು 25 ವರ್ಷದ ಹುಡುಗಿ. “ಸಕ್ಕರೆ ಇಲ್ಲದೆ ಉಂಡೆ ಹೇಗಮ್ಮಾ ಮಾಡಿದಾರೆ. Artificial sweetners ಏನಾದ್ರೂ ಹಾಕಿದಾರಾ”? ಅಂತ ಕೇಳಿದೆ. ಅದಕ್ಕೆ ಅವಳು “ಇಲ್ಲ ಮೇಡಂ, ನಾವಿಲ್ಲಿ ಉಪಯೋಗಿಸೋದೆಲ್ಲಾ ನ್ಯಾಚುರಲ್. ಈ ಉಂಡೆಗಳು ಬೆಲ್ಲ ಹಾಕಿದ್ದು. ಸಕ್ಕರೆಗಿಂತ ಬೆಲ್ಲ ಒಳ್ಳೇದು, ಅಲ್ವಾ ಮೇಡಂ“? ಅಂದ್ಲು. ಇಲ್ಲಿ ಕೆಲವರು ಸಕ್ಕರೆಗಿಂತ ಬೆಲ್ಲ ಒಳ್ಳೇದು, ಯಾಕೆಂದ್ರೆ ಬೆಲ್ಲದಲ್ಲಿ ಐರನ್ (iron) ಇರುತ್ತೆ, ಮೆಗ್ನೀಷಿಯಂ (Magnesium) ಇರುತ್ತೆ ಅಂತಾರೆ. ಇನ್ನು ಕೆಲವರು ಸಕ್ಕರೆ ಮತ್ತು ಬೆಲ್ಲಕ್ಕಿಂತ ಜೇನುತುಪ್ಪ ಒಳ್ಳೇದು, ಯಾಕೆಂದ್ರೆ ಅದಕ್ಕೆ ಔಷಧೀಯ ಗುಣಗಳಿವೆ (medicinal properties) ಅಂತಾರೆ.
ಇದು ನಿಜವೇ?
ಯಾರು ಹಿತವರು ನಿನಗೆ ಈ ಮೂವರೊಳಗೆ? ಸಕ್ಕರೆಯೋ, ಬೆಲ್ಲವೋ, ಜೇನುತುಪ್ಪವೋ?
ಈ ಮೂರೂ ಪಿಷ್ಠಪದಾರ್ಥಗಳು (carbohydrates), ಅಕ್ಕಿ, ಗೋಧಿ, ರಾಗಿಯ ಹಾಗೆ.
ಅಕ್ಕಿ, ಗೋಧಿ, ರಾಗಿ, ಇವುಗಳನ್ನು ಅಗತ್ಯಕ್ಕಿಂತ ಜಾಸ್ತಿ ತಿಂದರೆ ರಕ್ತದ ಸಕ್ಕರೆಯ ಪ್ರಮಾಣ (blood sugar levels) ಜಾಸ್ತಿ ಆಗುತ್ತೆ ಅಂತ ಎಲ್ಲರಿಗೂ ಗೊತ್ತು. ಹಾಗೆ ಸಕ್ಕರೆ, ಬೆಲ್ಲ ಮತ್ತು ಜೇನುತುಪ್ಪ ಕೂಡ ಅಗತ್ಯಕ್ಕಿಂತ ಜಾಸ್ತಿ ತಿಂದರೆ ರಕ್ತದ ಸಕ್ಕರೆಯ ಪ್ರಮಾಣ (blood sugar levels) ಜಾಸ್ತಿ ಆಗುತ್ತೆ. ಹಾಗಾಗಿ ಡಯಾಬಿಟಿಸ್ ಇರೋರಿಗೆ ಸಕ್ಕರೆಗಿಂತ ಬೆಲ್ಲ ಒಳ್ಳೇದು, ಜೇನುತುಪ್ಪ ಒಳ್ಳೇದು ಅನ್ನೋದಿಕ್ಕೆ ಯಾವ ವೈಜ್ಞಾನಿಕ ಪುರಾವೇನೂ (scientific evidence) ಇಲ್ಲ.
ಈಗ ಕ್ಯಾಲೋರಿಗಳ ವಿಷಯಕ್ಕೆ ಬಂದ್ರೆ -
ಒಂದು ಗ್ರಾಂ ಅಕ್ಕಿ, ಗೋಧಿ ಮತ್ತು ರಾಗಿಯಲ್ಲಿ ನಾಲ್ಕು ಕ್ಯಾಲೋರಿಗಳಿರುತ್ತವೆ. ಹಾಗೆ, ಒಂದು ಗ್ರಾಂ ಸಕ್ಕರೆ ಮತ್ತು ಬೆಲ್ಲದಲ್ಲಿ 4 ಕ್ಯಾಲೋರಿಗಳು, ಒಂದು ಗ್ರಾಂ ಜೇನುತುಪ್ಪದಲ್ಲಿ 3 ಕ್ಯಾಲೋರಿಗಳು ಇರುತ್ತವೆ. ಯಾಕೆಂದರೆ ಜೇನುತುಪ್ಪದಲ್ಲಿ 15% ನೀರಿನ ಅಂಶ ಇರುತ್ತದೆ.
ಈಗ ಗ್ಲೈಸಿಮಿಕ್ ಇಂಡೆಕ್ಸ್ (glycemic index) ವಿಷಯಕ್ಕೆ ಬರೋಣ -
● ಸಕ್ಕರೆಯ ಗ್ಲೈಸಿಮಿಕ್ ಇಂಡೆಕ್ಸ್ ಸರಿಸುಮಾರು 65 (medium GI) .
● ಬೆಲ್ಲದ ಗ್ಲೈಸಿಮಿಕ್ ಇಂಡೆಕ್ಸ್ - ಸರಿಸುಮಾರು 75 (high GI). ಆಶ್ಚರ್ಯ ವಾಗುತ್ತಲ್ವಾ? ನನಗೂ ಕೂಡಾ ಆಶ್ಚರ್ಯವಾಯ್ತು. ಅದಕ್ಕೆ ಸುಮಾರು 6-7 ವೆಬ್ಸೈಟ್ ನಲ್ಲಿ ಪರಿಶೀಲಿಸಿದ್ದೀನಿ. ಭಾರತದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಅವರು ನಡೆಸಿದ ಅಧ್ಯಯನದ ಪ್ರಕಾರ ಬೆಲ್ಲದ ಗ್ಲೈಸಿಮಿಕ್ ಇಂಡೆಕ್ಸ್ - 70-80.
● ಜೇನುತುಪ್ಪದ ಗ್ಲೈಸಿಮಿಕ್ ಇಂಡೆಕ್ಸ್ ಸುಮಾರು 60, medium GI .
ಸಕ್ಕರೆ high glycemic index, ಬೆಲ್ಲ ಮತ್ತು ಜೇನುತುಪ್ಪ low glycemic index ಅಂತ ಕೆಲವರು ಮಾತಾಡೋದು ಕೇಳಿದೀನಿ. ಅದು ಸರಿಯಲ್ಲ.
ನಾವು, ಡಯಟೀಷಿಯನ್ ಗಳು ಸಕ್ಕರೆ, ಬೆಲ್ಲ ಮತ್ತು ಜೇನುತುಪ್ಪ ಇವುಗಳ ಗ್ಲೈಸಿಮಿಕ್ ಇಂಡೆಕ್ಸ್ ಬಗ್ಗೆ ಚಿಂತೆ ಮಾಡೋದಿಲ್ಲ. ಯಾಕೆಂದ್ರೆ, 6 ಟೀಸ್ಪೂನಿನಷ್ಟು ಸಕ್ಕರೆ, ಬೆಲ್ಲ ಅಥವಾ ಜೇನುತುಪ್ಪನಾ ನೀವು ಒಂದೇ ಸಲ ತಿನ್ನೋದಿಲ್ಲವಲ್ಲಾ ಅದಕ್ಕೆ. ಈಗ, ಬೇಸನ್ ಉಂಡೆ ಮಾಡಿದ್ರೆ, ಕಡ್ಲೆಹಿಟ್ಟಿನ ಗ್ಲೈಸಿಮಿಕ್ ಇಂಡೆಕ್ಸ್ ಎಷ್ಟು, ಕಡ್ಲೇಕಾಯಿ ಚಿಕ್ಕಿ ಮಾಡಿದ್ರೆ, ಕಡ್ಲೆಕಾಯಿಯ ಗ್ಲೈಸಿಮಿಕ್ ಇಂಡೆಕ್ಸ್ ಎಷ್ಟು, ಚಿರೋಟಿ ಮೇಲೆ ಜಾನ್ಸಿ ಸಕ್ರೆನೋ ಅಥವಾ low GI ಸಕ್ರೆನೋ ಉದುರಿಸಿದ್ರೆ, ಚಿರೋಟಿ ಮಾಡಲು ಉಪಯೋಗಿಸಿದ ಮೈದಾಹಿಟ್ಟಿನ ಗ್ಲೈಸಿಮಿಕ್ ಇಂಡೆಕ್ಸ್ ಎಷ್ಟು ಅನ್ನೋದು ಮುಖ್ಯವಾಗುತ್ತೆ. ಅದಕ್ಕಿಂತ ಅತಿ ಮುಖ್ಯವಾದದ್ದು ಈ ಸಿಹಿತಿಂಡಿಗಳನ್ನ ನಾವು ಎಷ್ಟು ತಿಂತೀವಿ ಅನ್ನೋದು.
ಈಗ ವಿಟಮಿನ್ಸ್ ಮತ್ತು ಮಿನರಲ್ಸ್ ವಿಷಯಕ್ಕೆ ಬಂದ್ರೆ - ಸಕ್ಕರೆಯಲ್ಲಿ ಯಾವ ವಿಟಮಿನ್ಸ್ ಅಥವಾ ಮಿನರಲ್ಸ್ ಇರೋದಿಲ್ಲ.
ಬೆಲ್ಲದಲ್ಲಿ ಹೆಚ್ಚು ಐರನ್ (iron), ಮೆಗ್ನೀಷಿಯಂ (magnesium ) ಮುಂತಾದ ಮಿನರಲ್ಸ್ ಗಳು ಇರುತ್ತವೆ ಅಂತ ಅನೇಕರು ಹೇಳುವುದನ್ನು ಕೇಳಿದ್ದೇನೆ. ಅದು ನಿಜ. ಕೇವಲ 4 ಟೀಸ್ಪೂನ್ ಬೆಲ್ಲದಲ್ಲಿ 2.2 ಮಿಲಿಗ್ರಾಮ್ ಐರನ್,16 ಮಿಲಿಗ್ರಾಮ್ ಮೆಗ್ನೀಷಿಯಂ ಇರುತ್ತೆ. ಇರುತ್ತೆ ಅಂದ ಮಾತ್ರಕ್ಕೆ ಅದು ನಮ್ಮ ದೇಹಕ್ಕೆ ದೊರಕುತ್ತದೆ ಅಂತ ಭಾವಿಸಬೇಡಿ. ಸಸ್ಯಾಹಾರದಲ್ಲಿರುವ ಕಬ್ಬಿಣದ (iron) ಅಂಶವನ್ನು ನಮ್ಮದೇಹ ಸಮರ್ಪಕವಾಗಿ ಹೀರಿಕೊಳ್ಳುವುದಿಲ್ಲ. ಕಾಫಿ ಮತ್ತು ಟೀ ಸೇವನೆ ಕಬ್ಬಿಣದ ಹೀರುವಿಕೆಯನ್ನು ತಡೆಗಟ್ಟುತ್ತದೆ. ನೀವು ಬೆಲ್ಲ ಕಾಫಿ ಅಥವಾ ಟೀ ಸೇವಿಸಿದರೆ ಬೆಲ್ಲದಲ್ಲಿರುವ ಕಬ್ಬಿಣದ ಅಂಶ ನಮಗೆ ದೊರಕುವುದಿಲ್ಲ. ಇನ್ನು ಮೆಗ್ನೀಷಿಯಂ ಕೊರತೆ ಬಲು ಅಪರೂಪ. ಅದರ ಬಗ್ಗೆ ನಾವು ಚಿಂತೆ ಮಾಡಬೇಕಾಗಿಲ್ಲ.
ಜೇನುತುಪ್ಪದಲ್ಲಿ ಹಲವಾರು ಆ್ಯಂಟಿಆಕ್ಸಿಡೆಂಟ್ಸ್, ವಿಟಮಿನ್ಸ್ ಮತ್ತು ಮಿನರಲ್ಸ್ ಗಳಿವೆ. ಆದರೆ ಅತ್ಯಂತ ಕಡಿಮೆ ಪ್ರಮಾಣದಲ್ಲಿವೆ. ದಿನಕ್ಕೆ ಎರಡೂ ಮೂರೋ ಟೀಸ್ಪೂನ್ ಜೇನುತುಪ್ಪ ಸೇವಿಸಿದರೆ ಏನೂ ಪ್ರಯೋಜನವಿಲ್ಲ. ಕನಿಷ್ಠ 20 ಟೀಸ್ಪೂನ್ ಜೇನುತುಪ್ಪ ಸೇವಿಸಿದರೆ ಸಾಕಷ್ಟು ಆ್ಯಂಟಿಆಕ್ಸಿಡೆಂಟ್ಸ್, ವಿಟಮಿನ್ಸ್ ಮತ್ತು ಮಿನರಲ್ಸ್ ನಮಗೆ ದೊರಕಬಹುದು. ಆದರೆ ನೆನಪಿಡಿ, 20 ಟೀಸ್ಪೂನ್ ಜೇನುತುಪ್ಪದಲ್ಲಿ ಸುಮಾರು 300 ಕ್ಯಾಲೋರಿಗಳಿರುತ್ತವೆ.
ಈಗ ನೀವೇ ಹೇಳಿ? ಯಾರು ಹಿತವರು ನಿಮಗೆ ಈ ಮೂವರೊಳಗೆ? ಸಕ್ಕರೆಯೋ, ಬೆಲ್ಲವೋ, ಜೇನುತುಪ್ಪವೋ? ಈ ಮೂವರೂ ಒಂದೇ? ಏನೂ ವ್ಯತ್ಯಾಸವಿಲ್ಲ. ನಿಮಗೆ ಯಾವುದು ಇಷ್ಟವೋ ಅದನ್ನು ಬಳಸಿ. ಕಾಫೀ, ಟೀ ಮತ್ತಿತರ ಪಾನೀಯಗಳಿಗೆ ಒಂದು ಟೀಸ್ಪೂನ್ ಸಕ್ಕರೆ, ಬೆಲ್ಲ ಅಥವಾ ಜೇನುತುಪ್ಪ ಹಾಕುವುದರಿಂದ ಏನೂ ತೊಂದರೆಯಾಗಲಾರದು. ಕೃತಕ ಸಿಹಿಕಾರಕಗಳನ್ನು (artificial sweeteners) ಬಳಸುವುದರಿಂದ ದೇಹಕ್ಕೆ ಹಾನಿಯಾಗುತ್ತದೆ. ಸಿಹಿ ತಿಂಡಿಗಳನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಸೇವಿಸಿ.
*****
ರಾಜೇಶ್ವರಿ ಅವರು sydney university ಯಲ್ಲಿ nutrition and dietetics ನಲ್ಲಿ postgraduate diploma ಮಾಡಿದ್ದಾರೆ. ಸುಮಾರು ೨೫ ವರ್ಷ ಸಿಡ್ನಿಯ ಅನೇಕ hospital ಗಳಲ್ಲಿ ಕೆಲಸ ಮಾಡಿದ್ದಾರೆ.

Comments
Post a Comment