ಮಿಂಚು ತಲೆಯ ಸುಂದರಿ

ಮಿಂಚು ತಲೆಯ ಸುಂದರಿ

ಹಾಸ್ಯ ಲೇಖನ - ಅಣಕು ರಾಮನಾಥ್ 



‘ಗುಣದಲ್ಲಿ ಕೀಳ್ಯಾವುದೋ ಹುಚ್ಚಪ್ಪ; ಕುಲದಲ್ಲಿ ಮೇಲ್ಯಾವುದೋ’ ಎಂದು ಹಾಡಿ ಕುಪ್ಪಳಿಸುವವರೂ ಕೀಳುಜಾತಿಯವರು ಕೈಹಿಡಿಯಲು ಬಂದಾಗ ದೂರ ಸರಿಯುವುದನ್ನು ಕಂಡಿದ್ದೇವೆ. ಅಂದಹಾಗೆ, ಇಂದಿನ ಕಾಲದಲ್ಲಿ ಮೇಲ್ ಜಾತಿ ಎಂದರೆ ಪೋಸ್ಟ್ ಆಫೀಸ್‍ನವರು ಹಾಗೂ ಇಮೇಲ್ ಬಹಳ ಬಳಸುವವರು ಎಂದು ಅರ್ಥವೂ, ಕೀಳುಜಾತಿಯವರು ಎಂದರೆ ‘ಓಟಿಪಿ ಪ್ಲೀಸ್’ ಎಂದು ಕೇಳಿ, ಅರಿಯದೆ ನೀಡಿಬಿಟ್ಟರೆ ಅಕೌಂಟಿನಲ್ಲಿರುವ ಹಣವನ್ನೆಲ್ಲಾ ಸ್ವಾಹಾ ಮಾಡಿಬಿಡುವ ಖೂಳರು ಎಂಬ ಅರ್ಥವಂತೆ.

ಸೆರಗು ಸರಿಯಿತು ಹುಕ್ಕು ಮುರಿಯಿತು

ಸರಿದುಹೋಗಿದೆ ಸಮಯವು

Hurryಯಲಿರುವೆನು ನೆರವು ದೊರೆವುದೆ

ಮೊರೆಯನಾಲಿಸೈ ಬಂಧುವೆ

ಎಂದು ತರುಣಿಯು ಆರ್ತಧ್ವನಿಯನ್ನು ಹೊರಡಿಸಿದರೆ ಕೂಡಲೆ ಕಷ್ಟಕ್ಕೆ ಒದಗಿಬರುವವಳು ಇವಳೇ. ಸೆರಗು ಬ್ಲೌಸಿಗಂಟುವಂತೆ, ಹುಕ್ಕಿಲ್ಲದಿದ್ದರೂ ಗ್ಯಾಪ್ ಮೂಡದಂತೆ ಜತನದಿಂದ ತರುಣಿಯ ಸಂಕಟವನ್ನು ಹೋಗಲಾಡಿಸಲು ಜೊತೆಗಾತಿಯಾಗುವ ಇವಳದು ನಿಜಕ್ಕೂ ‘ಪರೋಪಕಾರಾರ್ಥಂ ಇದಂ ಶರೀರಂ!”

“ಮೇಲುಕೀಳೆನ್ನದೆ ಎಲ್ಲರೊಡನೆಯೂ ಬೆರೆಯುವುದು ಬಹಳ ಕಷ್ಟ” ಎಂದರೆ ಇವಳು ಒಪ್ಪುವುದೇ ಇಲ್ಲ. “ನನ್ನನ್ನು ನೋಡಿ ಕಲಿತುಕೊಳ್ಳಿ” ಎನ್ನುತ್ತಾಳೆ. ಸುಂದರವಾದ ಟರ್ಬನ್ ತೊಟ್ಟು ಸಪೂರವಾದ ದೇಹವನ್ನು ಬಳುಕಿಸುತ್ತಾ ಎಲ್ಲರ ಕೈಗೊಂಬೆಯಾಗಿ ಥಳಥಳಿಸುವ ಇವಳು ಎಲ್ಲೆಡೆಯೂ ಕಾಣಿಸಿಕೊಳ್ಳುತ್ತಾಳೆ, ಮನ ಸೆಳೆಯುತ್ತಾಳೆ, ಬೆರಳುಗಳ ತುದಿಗೆ ಎಟುಕುತ್ತಾಳೆ; ಕೊಂಚ ಮೈಮರೆತು ಕಾಲಿಗೆ ಕೈಹಾಕಿದರೆ ಸರಿಯಾಗಿ ಚುರುಕು ಮುಟ್ಟಿಸುವ ಧೀರೆ ಇವಳು. ಥಳಥಳ ಶರೀರದ ಇವಳು ಮನೆಗೋ ಕಚೇರಿಗೋ ಬರುವಾಗ ಗುಂಪುಗುಂಪಾಗಿಯೇ ಬರುತ್ತಾಳೆ. ಇವಳ ಗುಂಪಿನವರೆಲ್ಲರೂ ಇವಳಷ್ಟೇ ಥಳಥಳಿಸುವರು; ಇವಳಷ್ಟೇ ಚುರುಕಾದವರು; ಇವಳಷ್ಟೇ ಕೆಲಸದಲ್ಲಿ ಸಕ್ಷಮರು. ಇವಳಂತೆಯೇ ಕಾಣುವ ಆವಳಿಜವಳಿಗಳು.

ಯಾರಿವಳು? ಯಾವುದೀ like bodied group? ಈ ಸುಂದರಿಯನ್ನು ನಮಗೂ ಕಾಣಿಸಿರಿ ಎನ್ನುತ್ತಿರುವಿರೇನು? ಅವಳು ನಿಮ್ಮಲ್ಲಿಯೂ ಇದ್ದಾಳೆ. ಕೊಂಚ ನಿಮ್ಮ ಟೇಬಲ್ಲಿನ ಡ್ರಾಯರ್‍ ಎಳೆದು ನೋಡಿರಿ; ಜೋಡಿಸಲ್ಪಟ್ಟ ಕಾಗದಗಳ ಎಡಮೇಲ್ತುದಿಯಲ್ಲಿ ಇವಳು ಕುಳಿತಿರುತ್ತಾಳೆ. “ಒಗ್ಗಟ್ಟಿನಲ್ಲಿ ಬಲವಿದೆ” ಎಂದು ಭಾಷಣ ಮಾಡುವ ಸಾವಿರಾರು ಮಂದಿ ಒಗ್ಗಟ್ಟಾಗಿಸುವಲ್ಲಿ ಸೋಲುತ್ತಾರೆ. ಇವಳು ಕಡುಮೌನಿ. ಇವಳು ಬಿದ್ದರೂ ಸದ್ದಾಗದು. ಆದರೆ ಇವಳಷ್ಟು ಸೊಗಸಾಗಿ ಒಗ್ಗಟ್ಟು ಮೂಡಿಸುವುದು ವಿರಳ. “ಹೆಣ್ಣಿನಿಂದಲೇ ರಾಮಾಯಣ; ಅವಳಿಂದಲೇ ಮಹಾಭಾರತ. ಹೆಣ್ಣಿನಿಂದ ವಿಭಜನೆ ಎಂದಿರುವಾಗ ಇದಾವಳು ಎಲ್ಲರೊಡನೊಂದಾಗಿ ಎಲ್ಲರಿಗೂ ಗೋಂದಾಗುವವಳು?” ಎಂದು ಕೇಳಿದಿರೆ?

          ಗುಂಡುಸೂಜಿ ಸ್ವಾಮಿ! ಸುಮಾರು ಮೂವತ್ತು ಲಕ್ಷ ವರ್ಷಗಳ ಹಿಂದೆ ಈ ಸುಂದರಿಯ ಪೂರ್ವಜರು ಬುವಿಯಲ್ಲಿ ಅವತರಿಸಿದ್ದಂತೆ. ಇವಳ ಮೊದಮೊದಲ ಪೂರ್ವಜರು (ಪೂರ್ವಜೆಯರು – poor ವಜೆಯರು ಹೌದು! ಈ ಸುಂದರಿಯರ ವಜೆ(ವಜ್ಜೆ) ಎಂದಿಗೂ ಮಿಲಿಗ್ರಾಂಗಳ ಲೆಕ್ಕದಲ್ಲೇ!) ಮುಳ್ಳುಶರೀರಿಗಳೂ, ಮೂಳೆಶರೀರಿಗಳೂ ಆಗಿದ್ದವರು. ಮಧ್ಯಮಾನವರು (ಆದಿಮಾನವನಿಗೆ ಬಟ್ಟೆ ಇರಲಿಲ್ಲವಲ್ಲ!) ಪರ್ಣಾಂಬರಿಗಳು, ಚರ್ಮಾಂಬರಿಗಳು, ಗರಿಕಾಂಬರಿಗಳು ಆಗಿದ್ದ ಕಾಲದಲ್ಲಿ ಅವರ ವಸ್ತ್ರಗಳು ಜಾರದಂತೆ ಇರಿಸುತ್ತಿದ್ದ ಸುಂದರಿಯರು ಈ ಕಂಟಕಶರೀರಿಯರು ಹಾಗೂ ಅಸ್ಥಿತನುಗಳೇ. ಮುಂದುವರಿದಂತೆ ಇವರ ತನುಸತ್ವವು ಬದಲಾಗಿ ಮರದ ಸೂಜಿಗಳಾಗಿ ಬದಲಾದುದು. ದ್ರೌಪದಿಯ ಸೀರೆಗಳು ಒಂದರ ಹಿಂದೊಂದು ಗೂಡ್ಸ್ ಟ್ರೈನಿನ ಬೋಗಿಗಳಂತೆ ಸಾಲಾಗಿ ಬರುವುದರ ಹಿಂದೆ ಈ ‘ಪಿನ್’ಗಳೂ ‘ಪೆದ್ದ’ ಕೆಲಸವನ್ನೇ ಮಾಡಿದ್ದಾವು. (ತೆಲುಗಿನಲ್ಲಿ ಪಿನ್(ನ್ನ) ಎಂದರೆ ಚಿಕ್ಕ; ಪೆದ್ದ ಎಂದರೆ ದೊಡ್ಡ, ಹಿರಿದಾದ). ಪ್ರಾಯಶಃ ಅಂದಿನ ಗುಂಡುಸೂಜಿಗಳು ಮುಳ್ಳಿನವೇ ಆಗಿದ್ದಾವು. ದುಶ್ಶಾಸನನು ಸೀರೆಗಳನ್ನು ಸೆಳೆಯುವಾಗ ಈ ಗುಂಡುಸೂಜಿಗಳು ಅವನ ಬೆರಳುಗಳನ್ನು ಚುಚ್ಚಿ ಚುಚ್ಚಿ ರಕ್ತವನ್ನು ಬಸಿದುದರ ಪರಿಣಾಮವಾಗಿ ಅವನು ಸುಸ್ತಾಗಿ ಸೆಳೆಯುವಿಕೆಯನ್ನು ನಿಲ್ಲಿಸಿದನೆಂದೂ ಈಗಿನ ‘ಅನೇಮಿಯಾ ಸ್ಪೆಷಲಿಸ್ಟ್ಸ್ ಅಸೋಸಿಯೇಷನ್’ ರಿಸರ್ಚ್ ಪೇಪರೊಂದನ್ನು ಮಂಡಿಸಿದರೂ ಅಚ್ಚರಿಯಿಲ್ಲ.   

          ಪ್ರತಿ ಯುಗದಲ್ಲಿಯೂ ಆ ಯುಗವನ್ನು ಬಣ್ಣಿಸುವ ಜನಪದರು ಕಂಚಿನ ಯುಗವು ಆರಂಭವಾಗುತ್ತಿದ್ದಂತೆಯೇ

          ಕಂಚುಗಾರನ ಬೀದಿ ಕೆಂಚು ಮಣ್ಣಿನ ಹಾದಿ

              ಕಂಚಿನ ಕೊಡವ ತರಹೋಗಿ |  ಆ ಕೆರೆಯಲ್ಲಿ

              ಮಿಂಚುತಲಿ ಬಂದಳಮ್ಮ ತಂಗಿ |

ಎಂದು ಹಾಡತೊಡಗಿದುದು ಗುಂಡುಸೂಜಿಯ ಬಗ್ಗೆಯೇ ಇರಬೇಕು. ಕಂಚುಗಾರನ ಹಾದಿಯು ಮಣ್ಣಿನ ಹಾದಿಯಾದುದರಿಂದ, ತರುಣಿಯುಟ್ಟ ಸೀರೆಯ ಅಂಚು ಮಣ್ಣಾದೀತೆಂದು ಕೊಂಚ ಮೇಲಕ್ಕೆ ಮಾಡಿಕೊಳ್ಳಲೆಂದು ಕಂಚುಗಾರನೇ ಪುಟ್ಟ ಕಂಚಿನ ಸೂಜಿಯನ್ನು ಕೊಟ್ಟಿದ್ದಾನು. ಆ ‘ತಲೆಯುಳ್ಳ ಸೂಜಿ’ಯೇ ‘ಮಿಂಚುತಲಿ(ಉತ್ತರಕರ್ನಾಟಕದವರಲ್ಲಿ ‘ತಲೆ’ ಪದವು ‘ತಲಿ’ ಆಗುವುದಲ್ಲ!) ಬಂದವಳು ಈ ಗುಂಡುಸೂಜಿಯೇ ಎಂದು ಬಲ್ಲ(?) ಜನಪದಿಗಳು ತಿಳಿಸಿದ್ದಾರೆ.

          ನಾನು ಗಮನಿಸಿದಂತೆ ಪ್ರಪಂಚದಲ್ಲಿ ಅತಿ ಹೆಚ್ಚು ಬಟ್ಟೆಗಳನ್ನು ತೊಡುತ್ತಿದ್ದವರು ರೋಮನ್ನರು. ಜೂಲಿಯಸ್ ಸೀಸರ್‍ ತೊಡುತ್ತಿದ್ದ ಮೇಲುಡುಪಿಗೆ ಥಾನುಗಟ್ಟಲೆ ಬಟ್ಟೆ ಬೇಕಾಗುತ್ತಿತ್ತೇನೋ. ಗುಂಡಿಗಳು ಇನ್ನೂ ಪ್ರಪಂಚಕ್ಕೆ ಕಾಲಿರಿಸಿರದ ಕಾಲದಲ್ಲಿ ಜನರು ‘ಮಾನಧನ’ರಾಗಲು ನೆರವಾದುದೇ ಈ ಬಳುಕುಸುಂದರಿಯರು. ‘ತಲೆಯಿಲ್ಲದ ಜನಗಳು ಬಟ್ಟೆ ಸುತ್ಕೊಂಡು ನಿಲ್ತಾರೆ. ನಮ್ಮ ತಲೆ ಉಪಯೋಗಿಸಿ ನಾವು ಅವರ ತಲೆ ಕಾಯ್ಬೇಕು’ ಎಂದು ಅಂದಿನ ಗುಂಡುಸೂಜಿಗಳು ಪರಸ್ಪರ ಮಾತನಾಡಿಕೊಳ್ಳುತ್ತಿದ್ದವಂತೆ. ಗುಂಡುಸೂಜಿಯ ತಲೆಗಳೇ ಸೂಜಿಗೆ ಸಿಕ್ಕದವು ಜಾರಿಹೋಗದಂತೆ ಕಾಪಾಡುವದಲ್ಲವೇ!

ಕಾಲವು ಎಷ್ಟೇ ಕೆಟ್ಟದಾಗಿದ್ದರೂ ‘ಒಂದು ಗುಂಡುಸೂಜಿ ಕೊಡಿ’ ಎನ್ನುವಷ್ಟರ ಮಟ್ಟಕ್ಕೆ ಇದರ ಬೆಲೆ ಏರಿಲ್ಲ. ಬೆಲೆ ಏರದಿದ್ದರೂ ಇದರ ಬೆಲೆಯೇನೂ ಕಡಿಮೆಯಾಗಿಲ್ಲ. ಅಗಲವಾದ ರಂಧ್ರಭರಿತ ಹಾಳೆಯಲ್ಲಿ ಕವಾಯತಿನಲ್ಲಿ ನಿಂತ ಶಿಸ್ತಿನ ಸಿಪಾಯಿಗಳಂತೆ ವಿವಿಧ ಸಾಲುಗಳಲ್ಲಿ ಪಕ್ಕಪಕ್ಕ ಜೋಡಿಸಲಾದ ಗುಂಡುಸೂಜಿಗಳನ್ನು ನೋಡುವುದೇ ಒಂದು ಸೊಬಗು. ಒಂದೊಂದು ಗುಂಡುಸೂಜಿಯೂ ಒಂದೊಂದು ಝಾನ್ಸಿ ರಾಣಿಯಂತೆ, ಜಯಲಲಿತಾಳಂತೆ ಗುಂಪುಗಳನ್ನು (ಕಾಗದದ್ದು, ಸಣ್ಣ ಬಟ್ಟೆಗಳದ್ದು) ಹಿಡಿದಿಟ್ಟುಕೊಳ್ಳುವುದರಲ್ಲಿ ಬಹಳವೇ sharp acumen ಮತ್ತು ability. ಒಂದು ವಿಧದಲ್ಲಿ ಗುಂಡುಸೂಜಿಯು ಇವರೆಲ್ಲರಿಗಿಂತಲೂ ಹೆಚ್ಚು. ಅನೇಕ ಸೆರಗುಗಳನ್ನು ಹಿಡಿದಿಡುವ, ರಂಧ್ರಗಳನ್ನು ಮುಚ್ಚಿ ಮಾನ ಕಾಪಾಡುವ ಇವಳು ಎಂದಿಗೂ ಸ್ಯಾಂಡ್ರೋ ಬಾಟಿಸೆಲಿಯು ಚಿತ್ರಿಸಿದ ವೀನಸ್‍ಳಂತೆ ಎಂದಿಗೂ ನಿರ್ವಸ್ತ್ರಳೇ. ಗತಕಾಲದ ಸ್ತ್ರೀಯರು ಎಲೆಗಳಿಂದ ತಮ್ಮ ಮಾನವನ್ನು ಮುಚ್ಚಿಕೊಂಡಂತೆ ಇವಳೂ ಕಾಗದಗಳ ಕಡತವನ್ನೇ ವಸ್ತ್ರವಾಗಿಸಿಕೊಂಡೋ, ಪುಟ್ಟ ಬಟ್ಟೆಗಳ ಕಟ್ಟುಗಳನ್ನೇ ವಸ್ತ್ರವಾಗಿಸಿಕೊಂಡೋ, ತಲೆ ಮತ್ತು ಕಾಲು ಮಾತ್ರ ಹೊರಗಾಣುವ ಮಟ್ಟಕ್ಕೆ ‘ಪತ್ರಾಂಬರಿ’ ಅಥವಾ ವಸ್ತ್ರಾಂಬರಿ ಆಗುತ್ತಾಳೆ. ‘ಪಿನ್ ಶೀಟ್‍’ನ ಗುಂಪಿನಿಂದ ಹೊರಬಂದು ಒಂಟಿಯಾದ ಇವಳು ಕ್ಯಾಲೆಂಡರುಗಳಿಗೆ ಚುಚ್ಚಲ್ಪಟ್ಟು ಪಿನ್ ಅಪ್ ಗರ್ಲ್ ಆಗಿಯೂ ಶೋಭಿಸುತ್ತಾಳೆ.

ಸ್ತ್ರೀಸಂಗದಲ್ಲಿ ವಿಜೃಂಭಿಸುವ ಇವಳು ಪುರುಷರ ವಸ್ತ್ರಕ್ಷೇತ್ರಕ್ಕೂ ಲಗ್ಗೆಯಿಟ್ಟಿದ್ದಾಳೆ. ಬೆಲೆಬಾಳುವ ಅಂಗಿಗಳಿಗೆ ಪ್ಲಾಸ್ಟಿಕ್ ಪಿನ್‍ಗಳನ್ನು ಅಳವಡಿಸುವ ಉತ್ಪಾದಕರು ಬೆಲೆ ಕಡಿಮೆಯಿರುವ ಅಂಗಿಗಳು ಮಡತೆ ಕಳೆದುಕೊಳ್ಳದೆ, ಇರಿಸಿದಂತೆ ಇರಲು, ಗುಂಡುಸೂಜಿಗಳ ನೆರವನ್ನು ಪಡೆಯುತ್ತಾರೆ. ಸಾಮಾನ್ಯವಾಗಿ ‘ಒಂದು ಶರ್ಟ್ ಕೊಂಡರೆ ಹತ್ತು ಗುಂಡುಸೂಜಿಗಳು ಉಚಿತ’ ಎಂಬ ಅಲಿಖಿತ ನಿಯಮವೇ ಇದೆ. ಕೆಲವು ಮದುವೆಗಳಲ್ಲಿ ವಧೂವರರ ವಸ್ತ್ರಗಳನ್ನು ಗಂಟು ಹಾಕಿ ಅವರಿಬ್ಬರೂ ಒಟ್ಟಿಗೆ ಸಪ್ತಪದಿ ತುಳಿಯಲು ಅನುವು ಮಾಡಿಕೊಡುವ ಸಂಪ್ರದಾಯವಿದೆ. ಗುಂಡುಸೂಜಿಯೂ ಬ್ಯಾಂಕುಗಳಲ್ಲಿ ಚಲನ್ನೆಂಬ ವರನು ಚೆಕ್ ಎಂಬ ವಧುವಿನೊಡನೆ ಹೆಜ್ಜೆ ಇಡಲು ಅನುವಾಗಿಸುವ ಗಂಟೇ. ಸ್ಟಿಕ್ಕಿಂಗ್ ಪೇಪರ್‍ಗಳು ಚಾಲ್ತಿಗೆ ಬಂದು ಗುಂಡುಸೂಜಿಗಳ ಕಾರ್ಯಕ್ಷೇತ್ರವು ಕೊಂಚವೇ ಕುಗ್ಗಿದೆಯೆನಿಸಿದರೂ, ಅನೇಕ ಬಾರಿ ಬಳಕೆಗೆ ಬರುವ ಗುಣವು ಕಾಗದಕ್ಕೆ ಇಲ್ಲವಾದ್ದರಿಂದ ಗುಂಡುಸೂಜಿಯದು ಆಬಾಧಿತ ಸಾಮ್ರಾಜ್ಯವೇ ಆಗಿದೆ.

ಸೂಜಿಗೂ, ಗುಂಡುಸೂಜಿಗೂ ಕೊಂಚವೇ ವ್ಯತ್ಯಾಸ. ಸೂಜಿ ಹಳೆಯ ಕಾಲದ ಹೆಣ್ಣಿನಂತೆ; ಜೋಡಿಯಾದ ದಾರವು ಇರುವವರೆಗೆ ಅದರೊಡನೆಯೇ ಜೀವನ. ಗುಂಡುಸೂಜಿ ಮಾಡ್ರನ್ ಬೆಡಗಿ. ಒಂದು ಗುಂಪಿನಿಂದ ಇನ್ನೊಂದು ಗುಂಪಿಗೆ, ಒಂದು ಕ್ಯಾಲೆಂಡರಿಂದ ಇನ್ನೊಂದು ಕ್ಯಾಲೆಂಡರಿಗೆ ನಿರ್ಮಮತೆಯಿಂದ ಸರಿದಾಡುವ ಇವಳು ‘ಲಿವಿಂಗ್ ಟುಗೆದರ್’ ಪ್ರಯೋಗವನ್ನು ಜಾರಿಗೊಳಿಸಿದ ಮೊದಲ ಚೆಲುವೆ. ಎಲೆಜಬೆತ್ ಟೈಲರ್‍ಳಂತೆ ನವ ವಿವಾಹಿತಳೂ ಆಗಬಲ್ಲ ಇವಳು ಇಲ್ಲದ ಕಾರಣ ಆಕಾಶವಾಣಿಯಲ್ಲಿ ಗೊಂದಲವೇ ಏರ್ಪಟ್ಟಿತ್ತು. ಪಿನ್ ಮಾಡದ ಹಾಳೆಗಳಿಂದ ಡೈಲಾಗ್ ಓದುತ್ತಿದ್ದ ಕಲಾವಿದೆ ಶ್ರೀಮತಿ ಯಮುನಾ ಮೂರ್ತಿಯವರ ಕೈಯಿಂದ ಹಾಳೆಗಳು ಜಾರಿ, ಅಸ್ತವ್ಯಸ್ತವಾಗಿ ಹರಡಿಕೊಂಡು, ಮುಂದಿನ ಡೈಲಾಗ್ ಏನೆಂದು ತಿಳಿಯದೆ, ಹಾಳೆಗಳನ್ನು ಮತ್ತೆ ಸರಿಯಾಗಿ ಜೋಡಿಸಿಕೊಳ್ಳುವವರೆಗೆ ಅವರ ಪಾತ್ರಧಾರಿಯು ನುಡಿದಿದ್ದ ‘ನಿಮ್ಮ ಮಗ ಕಾಣಿಸುತ್ತಿಲ್ಲ’ ಎಂಬ ಡೈಲಾಗಿಗೆ ಉತ್ತರವಾಗಿ, ‘ಅಯ್ಯೋ! ವಿಧಿಯೇ! ಭಗವಂತಾ! ಏನು ಮಾಡಿಬಿಟ್ಟೆಯಪ್ಪಾ!’ ಎಂಬ ಸ್ಕ್ರಿಪ್ಟಿನಲ್ಲಿಲ್ಲದ ಡೈಲಾಗುಗಳನ್ನು ಹೇಳುತ್ತಾ ಸನ್ನಿವೇಶವನ್ನು ನಿಭಾಯಿಸಿದ್ದಾಗಿತ್ತು.

ಕಣ್ಣಿಲ್ಲದೆಯೂ ತಲೆಯಿದ್ದರೆ ಸುಲಭವಾಗಿ ಜೀವನ ಸಾಗಿಸಬಹುದು, ಕಾಲು ಹಿಡಿಯಬಂದವರಿಗೆ ಚುರುಕು ಮುಟ್ಟಿಸುವುದು ಅನಿವಾರ್ಯ, ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಬೆಂಡಾದರೂ ಮತ್ತೆ ನೆರವು ಪಡೆದು ಜೀವನವನ್ನು ನೇರವಾಗಿಸಿಕೊಳ್ಳಬಹುದು, ಆಧುನಿಕ ಜಗತ್ತಿನಲ್ಲಿ ಥಳಕುಬಳುಕು ಮುಖ್ಯ ಎಂಬ ಪಾಠಗಳನ್ನೆಲ್ಲ ತನ್ನ ಇರುವಿಕೆ, ಬಾಳ್ವಿಕೆಯಿಂದಲೇ ತೋರ್ಪಡಿಸುವ ಗುಂಡುಸೂಜಿ ಎನ್ನಾತ್ಮದ ಗುರು ಕಾಣ.

Comments