ಹೀಗೊಂದು ಶ್ಲೋಕ ನಿರ್ವಚನ
ಕರ್ಕೋಟಕಸ್ಯ ನಾಗಸ್ಯ ದಮಯಂನ್ತ್ಯಾ ನಲಸ್ಯ
ಚ
ಋತುಪರ್ಣಸ್ಯ ರಾಜರ್ಷೇಃ ಕೀರ್ತನಂ ಕಲಿನಾಶನಮ್
||
ಎಂದರು ವ್ಯಾಸರು. ಋಷಿವಾಕ್ಯಕೆ ಸೋಲುಂಟೆ?
ಇಂದಿಗೂ ಕರ್ಕೋಟಕ, ನಾಗ, ದಮಯಂತಿ, ನಳ, ಋತುಪರ್ಣರನ್ನು ನೆನೆಯುವುದರಿಂದಲೇ ಒಳಿತಾಗುತ್ತಿದೆ.
ಕರ್ಕೋಟಕವೆಂದ ಕೂಡಲೆ ಅಯೋಧ್ಯೆಯ ನೆನಪಾಗುತ್ತದೆ.
ಇಪ್ಪತ್ತೆಂಟು ವರ್ಷಗಳ ಕಾಲ ಕೋರ್ಟಿನ ಕಟೆಕಟೆಯಲ್ಲಿ ಸಿಲುಕಿದ್ದ ರಾಮಮಂದಿರದ ವಿವಾದವನ್ನು ಬಗೆಹರಿಸಿ,
ಬಾಲರಾಮನ ಗೃಹಪ್ರವೇಶಕ್ಕೆ ಅಣಿಯಾಗಿಸಿದ್ದು ಕರ್ಕೋಟಕರೇ. ‘ಕರ್ರನೆಯ ಕೋಟಂ ಧರಿಸಿದಾತನ್ ಕರ್ಕೋಟನ್.
‘ಕಸ್ಯ?’ ಎಂದರೆ ‘ಯಾರ’ ಎಂಬ ಪ್ರಶ್ನೆಯೂ, ‘ಕರಿ ಕೋಟಿನವ’ ಎಂಬುದು ಅದಕ್ಕೆ ಉತ್ತರವೂ ಆಗಿ ‘ಕರ್ಕೋಟಕಸ್ಯ’
ಎಂಬ ಪ್ರಶ್ನೋತ್ತರ ರೂಪದಲ್ಲಿ ಇಲ್ಲಿ ಮೂಡಿದೆ ಎಂದು ಪದಬ್ರಹ್ಮ ತಿಕ್ಲಣ್ಣಾಚಾರ್ಯರು ನುಡಿದಿದ್ದಾರೆ.
‘ಕರ್ ಕೋಟಕ ಎಂಬ ಪದವೇ ಸಂಸ್ಕೃತದ್ದಲ್ಲ,
ಅದು ಹಿಂದಿಯ ಪದ. ಕರ್ ಎಂದರೆ ಮಾಡು; ಕೋಟ ಎಂದರೆ ನಕಲಿ(ಖೋಟಾ) ಎಂಬುದರ ಅಪಭ್ರಂಶ. ಅಸಲಿಯಲ್ಲದ ವಸ್ತುಗಳನ್ನು
ತಯಾರಿಸುವವರೆಲ್ಲರೂ ‘ಕರ್ ಕೋಟ’ಕರೇ. ಕಂಪ್ಯೂಟರಿಗೆ ಸಂಬಂಧಿಸಿದ ವರ್ಡ್, ಆಂಟಿವೈರಸ್ ಮೊದಲಾದವುಗಳ
ಅಸಲಿ ಮಾಲು ದುಬಾರಿಯಾದ್ದರಿಂದ ಅವುಗಳ ಡೂಪ್ಲಿಕೇಟ್ ತಯಾರಿಸುವವರೆಲ್ಲ ‘ಕರ್ ಕೋಟಕ’ರೇ. ಇವರಿಲ್ಲದೆ
ಮನೆಮನೆಗಳ ಕಂಪ್ಯೂಟರಿನ ಕೆಲಸ ಸಾಗದು’ ಎಂದನೊಬ್ಬ ಗಣಕಕುತಂತ್ರಿ.
‘ಗ.ಕು. ನಿಜ ಹೇಳಿದ್ದಾರೆ. ಅಸಲಿ ಚಿನ್ನದ
ಬೆಲೆ ಗಗನಕ್ಕೇರಿರುವುದರಿಂದ ‘none gram gold’ ಆಭರಣಗಳನ್ನು ಚಿನ್ನದ ತಲೆಯ ಮೇಲೆ ಹೊಡೆದಂತಹ ಫಳಫಳದಲ್ಲಿ
ಸಿದ್ಧಗೊಳಿಸುವ ‘ಕರ್ ಕೋಟಾ’ ಸ್ಲೋಗನ್ನಿನ ಪಡೆಯನ್ನು ಕುರಿತು ಅನೇಕ ಮಹಿಳಾಮಣಿಗಳು ‘ನಿಮ್ಮಿಂದಲೆ
ನಿಮ್ಮಿಂದಲೆ ಕನಸೆಲ್ಲ ಶುರುವಾಗಿದೆ’ ಎಂದು ಹಾಡುತ್ತಿದ್ದಾರೆ’ ಎಂದ ‘ಕರ್ ನಾಟಕ್ ಜ್ಯೂಯಲರ್ಸ್’ನ
ನಕ್ಲೇಶಪ್ಪ.
‘ಕಲಿಯುಗದಲ್ಲಿ ಕಲಿಯುವುದಕ್ಕೇ ಆದ್ಯತೆ.
ಕಲಿಯುವ ವಿಷಯದಲ್ಲಿ ಎಲ್ಲರೂ ಕಲಿಗಳು ಆಗಿರುವುದಿಲ್ಲ. ಕೆಲವರಂತೂ ‘ಕಲಿ’(ಮೊಗ್ಗು)ಯಂತೆಯೇ ಇರುತ್ತಾರೆಯೇ
ವಿನಾ ಅರಳುವುದೇ ಇಲ್ಲ. ಇಂತಹವರಿಗೆಂದೇ ಪ್ರಶ್ನೆಗಳನ್ನು ಲೀಕ್ ಮಾಡಲಾಯಿತು. ಲೀಕ್ ಎಂದರೆ ತೇವ ಇರಬೇಕು.
ತೇವ ಇದ್ದಲ್ಲಿ ಜಿರಳೆಗಳೂ ಇರಬೇಕು. ಆದರೆ ಜಿರಳೆಗಳ ತಂಡವೇ ಲೀಕೇಜ್ ವಿರುದ್ಧ ಹೋರಾಡಿದ್ದು ಕಲಿಧರ್ಮವೇ
ಸೈ. ಈ ಜಿರಳೆಗಳು ಅಸಲಿ ಜಿರಳೆಗಳಲ್ಲದೆ ನರಜಿರಳೆಗಳಾಗಿರುವುದೇ ಈ ಗೊಂದಲಕ್ಕೆ ಕಾರಣ. ಲೀಕೇಜ್‍ಗೆ
ಜೈ, ನರಜಿರಳೆಗೆ ಧಿಕ್ಕಾರ’ ಎಂದ ‘ಕಾಗಜ್ ಕೇ ಫೂಲ್’ ಪಕ್ಷದ ಲೀಕೇಶ.
‘ನಾಗ ಎಂದರೆ ‘ಹಾವಿನಂತಹ’ ಎಂದರ್ಥ.
ನಮ್ಮ ಹಳ್ಳಿಗಳ ರಸ್ತೆಗಳೆಲ್ಲ ಹಾವು ಸಾಗುವಂತೆ ಸುತ್ತಿಕೊಂಡು ಹೋಗುವ ರಸ್ತೆಗಳೇ. ನಗರಗಳಲ್ಲಿ ರಸ್ತೆಗಳು
ನೇರವಾಗಿದ್ದರೂ ನೇರ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಹೋದಾಗಲೇ ಪಡ್ಡೆಬೈಕಿಗರಿಗೆ, ಬಿಎಂಟಿಸಿ ಬಸ್ಸುಗಳಿಗೆ,
ಫುಲ್ ಟೈಟ್ ಆದ ‘ಮದ್ಯ’ಮ ವರ್ಗದವರಿಗೆ ಸಂತೋಷವಾಗುವುದು. ತತ್ಕಾರಣವೇ ‘ನಾಗಸ್ಯ ಕೀರ್ತನಂ’ ಎಂದು ವ್ಯಾಸರು
ಹೇಳಿರುವುದು’ ಎಂದ ವಿಶೇಷಣ್ಣ.
‘ನಾಗ ಎಂದರೆ ತಿಮಿಂಗಿಲ ಎಂಬ ಅರ್ಥವಿದೆ.
ನಮ್ಮಲ್ಲಿ ‘ಕಲಬೆರಕೆ ತಿಮಿಂಗಿಲ’, ‘ಪಕ್ಷ ತಿಮಿಂಗಿಲ’, ‘ಖೋಟಾ ತಿಮಿಂಗಿಲ’, ‘ಘಾಟ್ ಸೆಕ್ಷನ್ ತಿಮಿಂಗಿಲ’
ಮುಂತಾದ ತಿಮಿಂಗಿಲಗಳಿವೆ. ‘ತಿಮಿಂಗಿಲಂ ನಮಸ್ತುಭ್ಯಂ ವರದೇ ಕ್ರೂರರೂಪಿಣಿ; ಲುಂಟನಾರಂಭಂ ಕರಿಷ್ಯಾಮಿ;
ಸಿದ್ಧಿರ್ಭವತು ಮೇ ಸದಾ’ ಎಂಬುದೇ ತಿಮಿಂಗಿಲಗಳ ಚೇಲಾಗಳ ಪ್ರಾರ್ಥನೆ. ಲುಂಟನ ಎಂದರೆ ಲೂಟಿಗೈಯುವುದು
ಎಂದರ್ಥ. ‘ಪಕ್ಷ ತಿಮಿಂಗಿಲ’ದ ನಿರ್ದೇಶನದ ಮೇರೆಗೆ ಮಿಕ್ಕೆಲ್ಲ ತಿಮಿಂಗಿಲಗಳು, ಚೇಲಾಗಳು ನಡೆದುಕೊಳ್ಳುವುದು.
ಇವೆಲ್ಲವನ್ನೂ ಮುಂಚೆಯೇ ಕಂಡುಕೊಂಡುದರಿಂದಲೇ ವ್ಯಾಸರು ‘ನಾಗಸ್ಯ...’ ಎಂದಿರುವುದು’ ಎಂದ ಕೊಳಕುಮಂಡಲಾಗ್ರೇಸರ.
‘Lol. Idk how you can miss
the true meaning. ನಾಗ ಮೀನ್ಸ್ ಕ್ಲೌಡ್, ಕ್ಲೌಡ್ ಈಸ G.O.A.T. now’ ಎಂದನೊಬ್ಬ ಜೆನ್ ಝೀ.
‘ಲಾಲ್ ಅಂದರೆ ಲಾಫಿಂಗ್ ಔಟ್ ಲೌಡ್ ಅಂತ
ಗೊತ್ತು. ಆದರೆ ನಾಗ ಎಂದರೆ ಗೋಟ್ ಎಂದು ಅರ್ಥವೆ? ಮೇಕೆ, ಕುರಿಗಳನ್ನು ನಾಗ ಎನ್ನುವರೆ?’ ಪ್ರಶ್ನಿಸಿದ
ಬ್ಲೂಮರ್ ಜನರೇಷನಿಗ.
‘This ain’t it man! ಓಹ್! ಸಾರಿ.
ಯೂ ಆರ್ ನಾಟ್ ಎ ಜೆನ್ ಝೀ. ಗೋಟ್ ಅಂದ್ರೆ ‘ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಅಂತ. ನಾಗ, ಮೀನಿಂಗ್ ಕ್ಲೌಡ್.
ಎಲ್ಲ ಕಾಲಕ್ಕಿಂತಲೂ ಗ್ರೇಟ್ ಅನ್ನೋದೇ ನನ್ನ ಮೀನಿಂಗು. ನನ್ನ ಡೇಟಾ, ವರ್ಕ್, ಫ್ಯೂಚರ್ ಎಲ್ಲ ಇರೋದೇ
ಕ್ಲೌಡ್ ಕಂಪ್ಯೂಟಿಂಗ್, ಕ್ಲೌಡ್ ಸ್ಟೋರಿಂಗ್, ಕ್ಲೌಡ್ ರಿಟ್ರೀವಲ್‍ಗಳಲ್ಲಿ. ವ್ಯಾಸ ಹಿಟ್ಸ್ ಡಿಫರೆಂಟ್.
ಓಹ್! ನಿಮಗೆ ಅರ್ಥವಾಗಿಲ್ಲ. ಹಾಗೆಂದರೆ ‘ವ್ಯಾಸರು ವಿಶಿಷ್ಟ ವ್ಯಕ್ತಿ’ ಅಂತ ಅರ್ಥ. ಓಲ್ಡೆಸ್ಟ್ ಡೇಸಲ್ಲೇ
ಅವರಿಗೆ ಕ್ಲೌಡ್ ಈಸ್ ಗೋಟ್ ಅಂತ ಗೊತ್ತಿತ್ತು’ ಎಂದ ಝೀಷನ್.
‘ನಾಗ ಎಂದರೆ ಸೂರ್ಯ. ಕಲಿಯುಗವೆಂದರೆ
ಸೋಲಾರ್ ಯುಗ. ಮುಂದಿನ ದಿನಗಳಲ್ಲಿ ವೆಹಿಕಲ್ಸ್, ಹೌಸಸ್, ಬಿಸಿನೆಸ್ ಎಲ್ಲಕ್ಕೂ ಸೋಲಾರ್ ಪವರ್ರೇ ಆಧಾರವಾಗತ್ತೆ
ಅನ್ನೋದು ವ್ಯಾಸರಿಗೆ ಆಗಲೇ ಗೊತ್ತಿತ್ತು. ಆದ್ದರಿಂದಲೇ ‘ನಾಗಸ್ಯ...’ ಅಂತ ಬರ್ದಿರೋದು’ ಎಂದ ನಾಗಸೂರ್ಯ.
‘ಸಂಸ್ಕೃತದ ಶಬ್ದಗಳಲ್ಲಿ ‘ಭವತಿ ಭವತಃ
ಭವಂತಿ’ ಎಂಬ ಲಟ್ ಲಕಾರಕ್ಕೆ ಅನುಗುಣವಾಗಿ ದಮಯತಿ ದಮಯತಃ ದಮಯಂತಿ ಎಂಬ ರೂಪವು ಮೂಡುತ್ತದೆ. ದಮಯಂತಿ
ಎನ್ನುವುದು ‘ದಮಯತಿ’ ಎನ್ನುವುದರ ಬಹುವಚನ ರೂಪ. ದಮಯತಿ ಎಂದರೆ ಒಬ್ಬನು ದಬ್ಬಾಳಿಕೆ ನಡೆಸುತ್ತಾನೆ,
ಕೆಳತಳ್ಳುತ್ತಾನೆ ಎಂದರ್ಥ. ದಮಯತಃ ಎಂದರೆ ಇಬ್ಬರು ದಬ್ಬಾಳಿಕೆ ನಡೆಸುತ್ತಾರೆ ಎಂದರ್ಥ. ದಮಯಂತಿ ಎಂದರೆ
ಒಂದು ಇಡೀ ಗುಂಪು ಅಥವಾ ಪಕ್ಷವೇ ದಮನಕಾರ್ಯದಲ್ಲಿ ತೊಡಗುತ್ತದೆ ಎಂದರ್ಥ. ಈಗಿನ ದೊಡ್ಡ ದೊಡ್ಡ ಕಂಪನಿಗಳೆಲ್ಲ
ಅತಿ ಹೆಚ್ಚು ಕೆಲಸ ಮಾಡಿಸಿಕೊಂಡು, ಇದ್ದಕ್ಕಿದ್ದಂತೆ ಪಿಂಕ್ ಸ್ಲಿಪ್ ಕೊಟ್ಟು ಹೊರನಡೆಯಲು ಹೇಳುವಂತಹ
‘ಮಾಡು ಅಥವಾ ನಡಿ’ ಸಂಸ್ಥೆಗಳೇ. ‘ದಬ್ಬಾಳಿಕೆಯೇ ಆಳಿಕೆ. ಕೆಳಗಿನವರ ಅಹವಾಲಿಗಿಲ್ಲ ಆಲಿಕೆ’ ಎಂಬುದೇ
ಇಂದಿನ ಧರ್ಮ. ಇದನ್ನು ಅಂದೇ ವ್ಯಾಸರು ಕಂಡುಕೊಂಡಿದ್ದರು’ ಎಂದ ದಮನ್ ಸಿಂಗ್.
‘ದಮಯಂತಿ, ನಳರ ಕಥೆಯಲ್ಲಿ ನಳನು ದಮಯಂತಿಯ
ಅರ್ಧ ಸೀರೆಯನ್ನು ಹರಿದು ಉಟ್ಟುಕೊಂಡು ಹೋಗುತ್ತಾನೆ. ಆ ಕಾಲದಲ್ಲಿಯೂ ಅವನ ಈ ಡ್ರೆಸಿಂಗ್ ಸೆನ್ಸನ್ನು
ಕಂಡವರಾರೂ ‘see ರೇ!’ ಎಂದು ಹೀಗಳೆಯಲಿಲ್ಲ. ‘Anything other than the essential is a
waste’ ಎಂಬುದು ಡ್ರೆಸ್ ವಿಚಾರದಲ್ಲಿ ಆ ಕಾಲದಲ್ಲಿಯೇ ಚಾಲ್ತಿಯಲ್ಲಿತ್ತೆಂದು ಇದರಿಂದ ತಿಳಿದುಬರುತ್ತದೆ.
Half a saree is nothing but a ಲುಂಗಿ. ಲುಂಗಿಯ ಹುಟ್ಟು ದಕ್ಷಿಣ ಏಷ್ಯಾದಲ್ಲಿ ಆದದ್ದೆಂದು ಇತಿಹಾಸಕಾರರು
ಹೇಳುವುದರಿಂದ ನಳನು ಸೀರೆಯನ್ನು ಹರಿದುಕೊಂಡಾಗ ತಮಿಳುನಾಡಿನ ಅಥವಾ ಕೇರಳದ ಕಾಡುಗಳಲ್ಲಿ ಇದ್ದನೆಂದು
ಊಹಿಸಬಹುದು. ಇಂದಿಗೂ ಬೇಸಿಗೆಗೆ ಅತ್ಯುತ್ತಮ ಡ್ರೆಸ್ ಆದ ಲುಂಗಿಯನ್ನು ಕಂಡುಹಿಡಿದುದರಿಂದಲೇ ನಳನನ್ನು
ನೆನೆಯಬೇಕೆಂದೂ, ನಳನು ಸೀರೆಯನ್ನು ಹರಿದುಕೊಂಡರೂ ಎಚ್ಚರಗೊಳ್ಳದೆ ಲುಂಗಿಯ ಆವಿಷ್ಕಾರಕ್ಕೆ ಪರೋಕ್ಷ
ಕಾರಣಳಾದ ದಮಯಂತಿಯನ್ನು ನೆನೆಯಬೇಕೆಂಬುದು ವ್ಯಾಸರ ಆಶಯ ಆಗಿದ್ದೀತೋ ಇಲ್ಲವೋ, ಆದರೆ ಆ ಸನ್ನಿವೇಶದ
ಬಗ್ಗೆ ಟಿಪ್ಪಣಿ ಬರೆದ ಮೊದ್ದುಗುಂಟೆ ಬುರುಡಯ್ಯನವರು ಅಂತೆಯೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ’ ಎಂದ
ಇತಿಹಾಸ್ಯಕಾರ ಬುಲ್ಡೇರಾಯ,
“ನಳ ಜೂಜಿಗೆ ಹೆಸರಾದವನು; ಕುದುರೆ ಓಡಿಸುವುದರಲ್ಲಿಯೂ
ಪರಿಣತ. ಹಾರ್ಸ್ ರೇಸಿಂಗ್, ಕೆಸಿನೋಗಳಲ್ಲಿದ ಯುಗವನ್ನು ಕಲಿಯುಗ ಎಂದು ಕರೆಯಲು ಸಾಧ್ಯವೇ ಇಲ್ಲ. ಈ
ಎರಡೂ ಕಲ್ಯಾಣಗುಣಗಳಲ್ಲಿ ಮುಳುಗಿರುವ ಮಂದಿ ನಳನನ್ನು ನೆನೆಯಬೇಕೆಂಬುದು ಸೂಕ್ತವೇ. ಲಾಸ್ ವೇಗಸ್‍ನ
ಕೆಸಿನೋಗಳಿಂದ ಹಿಡಿದು ಭಾರತದ ಗಲ್ಲಿಗಲ್ಲಿಗಳಲ್ಲಿ ನಡೆಯುವ ಮಟ್ಕಾದವರೆಗೆ ಎಲ್ಲೆಡೆಯೂ ನಳಪ್ರಾರ್ಥನೆ,
ನಳಕೀರ್ತನೆ ನಡೆಯಬೇಕೆಂದು ವ್ಯಾಸರು ನುಡಿದಿದ್ದರೆ? ಮಹಾ ಜ್ಞಾನಿಗಳು ಏನೇನನ್ನು ಮುಂಗಾಣುವರೋ ಹೇಳುವುದು
ಕಷ್ಟ’ ಎಂದ ಲಾಂಗೂಲದಾಸ್ ದಾಳಯ್ಯ.
‘ಋತುಪರ್ಣ ಎಂದರೆ ಕಾಲಕಾಲಕ್ಕೆ ಬಿಡುವಂತಹ
ಎಲೆಗಳು ಎಂದರ್ಥ. ವಸಂತದಲ್ಲಿ ಮಾವಿನ ಎಲೆ, ಫಾಲ್ಗುಣದಲ್ಲಿ ಬಿಲ್ವ ಪತ್ರೆ, ಶ್ರಾವಣದಲ್ಲಿ ತುಳಸಿ
ಎಲೆಗಳು ಅವಶ್ಯವೆನಿಸಿದರೆ ವರ್ಷದ ಎಲ್ಲ ಋತುಗಳಲ್ಲಿಯೂ ಬೇಕಾದ ಎರಡು ಎಲೆಗಳಿವೆ – ಬಾಳೆ ಎಲೆ ಮತ್ತು
ಇಸ್ಪೀಟ್ ಎಲೆ. ಇಸ್ಪೀಟ್ ಎಲೆಯನ್ನು ಬಳಸಿ, ಗೆದ್ದರೆ ಹಬ್ಬ ಆಚರಿಸಲು; ಸೋತು ಪ್ರಾಣ ಕಳೆದುಕೊಂಡರೆ
ಶ್ರಾದ್ಧ ಆಚರಿಸಲು; ಈ ಎರಡೂ ಸಂದರ್ಭಗಳಲ್ಲಿಯೂ ಬಾಳೆಯೆಲೆಯು ಉಪಯೋಗಕ್ಕೆ ಬರುತ್ತದೆ. ಆಯಾ ಋತುವಿನಿಂದ
ಹಿಡಿದು ಸರ್ವ ಋತುಗಳಲ್ಲೂ ಬಳಸತಕ್ಕ ಎಲೆಗಳನ್ನು ಹಾಡಿ ಹೊಗಳುವುದು ಅವಶ್ಯವೆನ್ನುವುದೇ ಈ ಶ್ಲೋಕದ
ಅರ್ಥ’ ಎಂದು ಕುಜ್ಞಾನ್ ಪರ್ಣೇಶ.


Comments
Post a Comment