ದೇವರ ಮೇಲೆ ಅಪಾರ ನಂಬಿಕೆ ಇದ್ದರೆ ಎಂಥ ಸಮಸ್ಯೆಗಳಿದ್ದರೂ ಪರಿಹಾರ
ಲೇಖನ - ಜೆ. ಎಸ್. ಗಾಂಜೇಕರ, ಪ್ರಾoಶುಪಾಲರು, ಕುಮಟಾ (ಉ. ಕನ್ನಡ )
ದಿನೇಶ ಹಾಗೂ ಆತನ ಮಡದಿ ಸುಮತಿ 8 ಅಂತಸ್ತಿನ ಅಪಾರ್ಟ್ ಮೆoಟಿನ ಒಂದು ಪ್ಲಾಟ್ ನಲ್ಲಿ ವಾಸವಾಗಿದ್ದರು. ಅವರಿಗೆ ಒಬ್ಬನೇ ಒಬ್ಬ ಮಗನಿದ್ದ. ಆತನ ಹೆಸರು ಗೋಪಾಲ. ಆತನನ್ನು ಪ್ರೀತಿಯಿಂದ ಗೋಪಿಯೆಂದು ಕರೆಯುತ್ತಿದ್ದರು.
ಆತ ಪಿ.ಯು.ಸಿ. ಓದುತ್ತಿದ್ದ ಜಾಣ ವಿದ್ಯಾರ್ಥಿ.ಆದರೆ ಆತನಿಗೆ ದೇವರ ಬಗ್ಗೆ ಭಕ್ತಿಯಾಗಲಿ ,ಯಾವ ಸ್ವಾಮಿ ಮೇಲೆ ಗೌರವ, ಆದರ ಇರಲಿಲ್ಲ.
ಆದರೆ ಆತನ ತಂದೆ-ತಾಯಿ, ದೇವರ ಬಗ್ಗೆ ಸ್ವಾಮಿಗಳ ಬಗ್ಗೆ ಅಪಾರ ಭಕ್ತಿ ಇಟ್ಟುಕೊಂಡಿದ್ದರು. ದಿನಾಲು ಭಜನೆ, ಪೂಜೆ ಮಾಡುತ್ತಿದ್ದರು.ಗೋಪಿಗೆ ಅದರಲ್ಲಿ ಆಸಕ್ತಿ ಇರಲಿಲ್ಲ.ಇದನ್ನು ಗಮನಿಸಿದ ತಂದೆ ದಿನೇಶ ಆಗಾಗ ಮಗನಿಗೆ ಬುದ್ಧಿವಾದ ಮಾಡುತ್ತಿದ್ದ. ತಾಯಿ ಸುಮತಿ ಹಿತವಚನ ನುಡಿತ್ತಿದ್ದಳು. ಆದರೂ ಗೋಪಿ ಕೇಳುತ್ತಿರಲಿಲ್ಲ.ಈ ಬಗ್ಗೆ ತಂದೆ ಮಗನ ಜತೆ ವಾದ-ವಿವಾದ ನಡೆಯುತಿತ್ತು.
ಗೋಪಿ ಯಾವಾಗಲೂ ಹೇಳುತ್ತಿದ್ದ "ಪೂಜೆ, ಭಜನೆ ಮಾಡುವುದು ವೇಸ್ಟ್ ಆಫ್ ಟೈಮ್ " ಎಂದು. ತಂದೆ-ತಾಯಿಯವರು ಆತನಿಗೆ ಭಜನೆ,ಪೂಜೆ ಮಾಡೆಂದು ಒತ್ತಾಯ ಮಾಡುತ್ತಿರಲಿಲ್ಲ.
ಒಮ್ಮೆ, ಅವರ ಊರಲ್ಲಿ ಅವರ ಸಮಾಜದ ಸ್ವಾಮಿಯವರ ಪ್ರವಚನ ನಡೆಯಿತು. ಪ್ರವಚನದ ವಿಷಯ "ದೇವರ ಮೇಲೆ ಅಪಾರ ನಂಬಿಕೆ ಇದ್ದರೆ ಎಂಥ ಸಮಸ್ಯೆಗಳೂ ಪರಿಹಾರ ವಾಗುವುದು ".
ಆ ಪ್ರವಚನಕ್ಕೆ ದಿನೇಶ, ಸುಮತಿ ಹಾಗೂ ಗೋಪಿ ಹೋಗಿದ್ದರು. ಪ್ರವಚನ ಮುಗಿಯಲು ರಾತ್ರಿ 11ಘಂಟೆಯಾಯಿತು. ಮರಳಿ ಮನೆಗೆ ಹೋಗುವ ಪೂರ್ವದಲ್ಲಿ ದಿನೇಶ ಹಾಗೂ ಸುಮತಿ ಸ್ವಾಮಿಗಳ ಪಾದ ಮುಟ್ಟಿ ನಮಸ್ಕರಿಸಿದರು. ಆದರೆ ಗೋಪಿ ಮಾತ್ರ ದೂರದಿಂದಲೇ ನಮಸ್ಕರಿಸಿದ. ಇದರಿಂದ ತಂದೆ-ತಾಯಿಯವರಿಗೆ ಖೇದವೆನಿಸಿತು , ಮಗನು ಸ್ವಾಮಿಗಳ ಪಾದ ಸ್ಪರ್ಶಮಾಡದೇ ನಮಸ್ಕರಿಸಿದಕ್ಕೆ . ಇದನ್ನು ಗಮನಿಸಿದ ಸ್ವಾಮಿಗಳು" ಪರವಾಗಿಲ್ಲ" ಅಂದರು. ಸ್ವಾಮಿಗಳ ಪ್ರವಚನ ಮುಗಿಸಿ ಸ್ವಾಮಿಗಳು , ಉಳಿದುಕೊಳ್ಳುವ ಹೊಟೆಲಿಗೆ ದಿನೇಶರ ಕಾರಲ್ಲಿ ಹೊರಡುವದಾಗಿ ಹೇಳಿ ಮಾರ್ಗದ ಮಧ್ಯದಲ್ಲಿರುವ ದಿನೇಶರ ಮನೆಗೆ ಭೇಟ್ಟಿ ನೀಡುವದಾಗಿ ತಿಳಿಸಿದರು. ಇದನ್ನು ಕೇಳಿ ದಿನೇಶ ಹಾಗೂ ಸುಮತಿಯವರಿಗೆ ತುಂಬಾ ಸಂತೋಷವಾಯಿತು.
ಸ್ವಾಮಿಜಿಯವರನ್ನು ಹಾಗೂ ಅವರ ಶಿಷ್ಯರನ್ನು ತಮ್ಮ ಕಾರಿನಲ್ಲಿ, ಜೊತೆಗೆ ಮಡದಿ ಮಗನನ್ನು ಮನೆಗೆ ಕರೆದುಕೊಂಡು ಬಂದರು.
ದೇವರೇ ತಮ್ಮ ಮನೆಗೆ ಬಂದಿದ್ದಾರೆಂದು ಸಂತಸಪಟ್ಟರು. ಸ್ವಾಮೀಜಿ ಹಾಗೂ ಅವರ ಜೊತೆ ಬಂದ ಶಿಷ್ಯರನ್ನು ದೇವರ ಕೋಣೆಯಲ್ಲಿ ವಿಶ್ರಮಿಸಲು ಹೇಳಿದರು.
ತನ್ನ ತಂದೆ- ತಾಯಿಯವರು ಸ್ವಾಮಿಗೆ ಹೆಚ್ಚಿನ ಗೌರವ ಕೊಡುತ್ತಾರಲ್ಲವೆಂದು ಮನಸ್ಸಿನಲ್ಲೇ ಬೇಸರಪಟ್ಟ .
ದಿನೇಶ ಹಾಗು ಸುಮತಿಯವರ ಸಂತಸ ಬಹಳ ಹೊತ್ತು ಇರಲಿಲ್ಲ. ಯಾಕಂದರೆ ಸ್ವಾಮಿಯವರನ್ನು ಸತ್ಕರಿಸಲು, ಉಪಹಾರ ನೀಡಲು ಹಣ್ಣು- ಹಂಪಲ ಮನೆಯಲ್ಲಿ ಇರಲಿಲ್ಲ. ಸ್ವಾಮೀಜಿ ಯವರು ಮನೆಗೆ ಬಂದರೆ ಅವರಿಗೆ ಹಣ್ಣು -ಹಂಪಲ ಕೊಟ್ಟು ಸತ್ಕರಿಸುವುದು ವಾಡಿಕೆ.
ಆದರೆ, ಸ್ವಾಮಿಯವರನ್ನು ಸತ್ಕರಿಸಲು, ಉಪಹಾರ ನೀಡಲು ಹಣ್ಣು-ಹಂಪಲ ಮನೆಯಲ್ಲಿ ಇಲ್ಲವೆಂದು ಸುಮತಿ ಹೇಳಿದಾಗ ಸ್ವಾಮಿಜೀಯವರನ್ನು ಹೇಗೆ ಸತ್ಕರಿಸಬೇಕೆಂದು ತೊಚಲಿಲ್ಲ. ಅಂಗಡಿಯಿಂದ ತರಿಸುವಾ ಅಂದರೆ ಅಂಗಡಿಗಳೆಲ್ಲಾ ಮುಚ್ಚಿರುತ್ತೆ. ಯಾಕಂದರೆ ತಡರಾತ್ರಿ ಯಾಗಿತ್ತು. ಏನು ಮಾಡಬೇಕೆಂಬುದು ತೋಚದೆ ದಿನೇಶ ಹಾಗೂ ಸುಮತಿ ಚಡಪಡಿಸಿದರು.
ಗೋಪಿ ವಿಚಾರ ಮಾಡಿದ ಸ್ವಾಮೀಜಿ ಯವರು ಈ ಸಮಸ್ಯೆಯನ್ನು ಹೇಗೆ ಪರಿಹರಿಸುವರೆಂದು.
ದಿನೇಶ ಹಾಗೂ ಸುಮತಿ, ದೇವರಲ್ಲಿ ಮೊರೆಯಿಟ್ಟರು.
ಅಷ್ಟೊತ್ತಿಗೆ ಹೊರಗಿನಿಂದ ಬಾಗಿಲು ಬಡೆದ ಶಬ್ದ ಕೇಳಿಸಿತು.
ದಿನೇಶ ಮಗನನ್ನು ಕರೆದು "ಗೋಪಿ, ಯಾರು ಬಂದಿದ್ದಾರೆ ನೋಡು "ಎಂದು ಹೇಳಿದರು. ಆಗ ಗೋಪಿ ಬಾಗಿಲು ತೆರೆದು ನೋಡಿದರೆ ಪಕ್ಕದ ಮನೆಯ ಹುಡುಗ ರವಿ, ಕೈಯಲ್ಲಿ ಅಗಲವಾದ ಪಾತ್ರೆಯಲ್ಲಿ ಹೂವು, ಹಣ್ಣು ಹಂಪಲ, ಸತ್ಯನಾರಾಯಣ ಪೂಜೆಯ ಪ್ರಸಾದ ಇತ್ತು. ರವಿ ಹೇಳಿದ " ಅಂಕಲ್, ಇವತ್ತು ಸಾಯಂಕಾಲ ನಮ್ಮ ಮನೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಇತ್ತು. ನಿಮ್ಮನ್ನು ಕರೆಯಲು ಬಂದಿದ್ದೆ. ನಿಮ್ಮ ಮನೆಗೆ ಬೀಗ ಹಾಕಿತ್ತು. ಪಕ್ಕದ ಮನೆಗೆ ಕೇಳಿದಾಗ ನೀವೆಲ್ಲರೂ ಪ್ರವಚನ ಕೇಳಲು ಹೋಗಿದ್ದಾರೆಂದು ಹೇಳಿದರು. ನನ್ನ ಅಮ್ಮನಿಗೆ ನೀವು ಈಗ ಬಂದದ್ದು ಗೊತ್ತಾಯಿತು. ಈ ಪ್ರಸಾದ ನಿಮಗೆ ಕೊಟ್ಟು ಬರಲು ಹೇಳಿದರು. ತಕ್ಕೊಳ್ಳಿ ಅಂಕಲ್ "ಎಂದು ಹರಿವಾಣ ಕೊಟ್ಟ.
ಗೋಪಿ ಆಶ್ಚರ್ಯ ಚಕಿತನಾದ. ರವಿಗೆ ಧನ್ಯವಾದಗಳು ಎಂದು ಹೇಳಲು ಮರೆಯಲಿಲ್ಲ.
ಆ ಹರಿವಾಣವನ್ನು ಒಳಗೆ ತೆಗೆದು ಕೊಂಡು ಹೋಗಿ ತಾಯಿಯ ಕೈ ಯಲ್ಲಿ ಕೊಟ್ಟ.
,ದಿನೇಶ ಹಾಗೂ ಸುಮತಿ ಆಶ್ಚರ್ಯ ಪಟ್ಟರು. ಯಾರು ಕೊಟ್ಟರು ಎಂದು ಕೇಳಿದಾಗ "ಪಕ್ಕದ ಮನೆಯ ರವಿ ಕೊಟ್ಟ ಅಮ್ಮಾ, ಸಾಯಂಕಾಲ ಅವರ ಮನೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಇತ್ತಂತೆ. ನಾವು ಇಲ್ಲವೆಂದು ಈಗ ಪ್ರಸಾದ ಕೊಟ್ಟು ಹೋದ. " ಎಂದ ಗೋಪಿ. ದೇವರು ತಮ್ಮ ಸಮಸ್ಯೆಯನ್ನು ಬಗೆಹರಿಸಿದನೆಂದು ದಿನೇಶ, ಸುಮತಿ ಸಂತೋಷ ಪಟ್ಟರು.
ಇದೆಲ್ಲವೂ ಕ್ಷಣಾರ್ಧದಲ್ಲಿ ಜರುಗಿತು.
ಈ ಘಟನೆ ಯಿಂದ ಗೋಪಿ ಮೇಲೆ ತುಂಬಾ ಪರಿಣಾಮ ಬೀರಿತು.
ತರುವಾಯ, ದಿನೇಶ ಹಾಗೂ ಸುಮತಿ ಆ ಪ್ರಸಾದದ ಹರಿವಾಣವನ್ನು ನೀಡಿ ಸ್ವಾಮಿಜೀಯವರ ಪಾದ ಸ್ಪರ್ಶಿಸಿ ನಮಸ್ಕರಿಸಿದರು. ಅದೇ ಸಮಯ ಗೋಪಿ ಸ್ವಾಮಿಜೀಯವರ ಪಾದ ಸ್ಪರ್ಶಿಸಿ ನಮಸ್ಕರಿಸಿದ. ದಿನೇಶ ಹಾಗೂ ಸುಮತಿಗೆ ಆಶ್ಚರ್ಯವೂ ಆಯಿತು, ಸಂತೋಷವೂ ಆಯಿತು.
ಆಗ ಸ್ವಾಮೀಜಿ ಯವರು "ದಿನೇಶ ರವರೇ, ಇದು ಶ್ರೀ ಸತ್ಯನಾರಾಯಣನ ಪೂಜೆಯ ಪ್ರಸಾದದಂತಿದೆ "ಎಂದರು. ಆಗ ಸುಮತಿ , " ಹೌದು, ಸ್ವಾಮೀಜಿಗಳೇ , ನಿಜ ಹೇಳಬೇಕೆಂದರೆ ಮನೆಯಲ್ಲಿ ತಮ್ಮನ್ನು ಸತ್ಕರಿಸಲು ಹಣ್ಣು -ಹಂಪಲುಗಳಿರಲಿಲ್ಲ. ಏನು ಮಾಡಬೇಕೆಂಬುದು ತೋಚದೆ ದೇವರಲ್ಲಿ ಮೊರೆಯಿಟ್ಟೆವು. " ಎಂದು ಸತ್ಯ ಸಂಗತಿ ಹೇಳಿ ಜರುಗಿದ ಘಟನೆಯನ್ನು ವಿವರಿಸಿದರು.
ಆಗ ಸ್ವಾಮಿಜೀ, "ನೋಡಿದಿರಾ, ಭಗವಂತನನ್ನು ನಂಬಿದರೆ ಎಂದೂ ಆತ ಕೈ ಬಿಡಲಾರ. ದೇವರ ಮೇಲೆ ಅಪಾರ ಭಕ್ತಿ, ಶ್ರುದ್ಧೆ, ನಂಬಿಕೆ ಇಟ್ಟರೆ , ನಮ್ಮ ಎಲ್ಲಾ ಸಮಸ್ಯೆಯನ್ನು ಬಗೆಹರಿಸಬಲ್ಲ. ಇದು ಪರಮಾತ್ಮನ ಪವಾಡವೇ ಸರಿ " ! ಎಂದು ವಿವರಿಸಿ ಆಶೀರ್ವಚನ ನೀಡುತ್ತಿರುವಾಗ ಗೋಪಿ ಸ್ವಾಮಿ ಯವರನ್ನು ಕುರಿತು "ಸ್ವಾಮಿಗಳೇ, ನನ್ನದೊಂದು ಪ್ರಶ್ನೆ "ಎಂದು ವಿನಯ ಪೂರ್ವಕವಾಗಿ ಕೇಳಿದಾಗ ಸ್ವಾಮೀಜಿಯವರು " ಕಂದಾ,
ಏನೇ ಪ್ರಶ್ನೆ ಇದ್ದರೂ ಕೇಳು " ಎಂದು ಮಮತೆಯಿಂದ ಕೇಳಿದರು. ಆಗ ಗೋಪಿ "ಪೂಜ್ಯರೇ, ಕೇವಲ ಭಜನೆ, ಧ್ಯಾನ ದಿಂದ ಪರೀಕ್ಷೆಯಲ್ಲಿ ಪಾಸಾಗುತ್ತಿದ್ದರೆ, ಅಭ್ಯಾಸ ಮಾಡುವ ಪ್ರಮೇಯವೇ ಇರುತ್ತಿರಲಿಲ್ಲ ಅಲ್ಲವೇ ಗುರುಗಳೇ? ಎಂದು ಕೇಳಿದಾಗ ತಂದೆ ದಿನೇಶ "ಗೋಪಿ, ಹಾಗೆಲ್ಲಾ ಕೇಳಬಾರದು ಸ್ವಾಮಿಜೀ ಯವರ ಹತ್ತಿರ " ಎಂದು ಹೇಳಿದಾಗ ಸ್ವಾಮೀಜಿ ಯವರು , "ದಿನೇಶರೇ, ಕೇಳಿಬಿಡಿ ಪರವಾಗಿಲ್ಲ" ಎಂದು ಹೇಳಿ " ಮಗು ಗೋಪಿ, ಒಳ್ಳೇ ಪ್ರಶ್ನೆ ಕೇಳಿದ್ದೀಯಾ. ನಿನ್ನ ಪ್ರಶ್ನೆಗೆ ಉತ್ತವಾಗಿ ಒಂದು ಘಟನೆ ಯನ್ನು ಹೇಳಲು ಬಯಸುವೆ. ಸರಿಯಾಗಿ ಕೇಳು " ಎಂದು ಹೇಳಿ ಘಟನೆಯನ್ನು ಸ್ವಾಮಿ ಗಳು ವಿವರಿಸಲಾರಂಭಿಸಿದರು.
ಒಮ್ಮೆ ಒಂದು ಹಳ್ಳಿಯಲ್ಲಿ ಒಬ್ಬ ನೇಕಾರನಿದ್ದ. ಆತ ದೈವ ಭಕ್ತನಾಗಿದ್ದ. ಪ್ರತಿದಿನ ದೇವರ ಪೂಜೆ ಮಾಡುತ್ತಿದ್ದ. ಆತ ಪೂಜೆ ಮಾಡದ ಹೊರತು ಒಂದು ಹನಿ ನೀರು ಕುಡಿಯುತ್ತಿರಲಿಲ್ಲ. ಆ ಊರಿಗೆ ಆತ ಪರಮ ಭಕ್ತ ಎನಿಸಿಕೊಂಡಿದ್ದ.
ಒಂದು ಸಲ ಆ ಹಳ್ಳಿಯ ನದಿಗೆ ಮಹಾಪುರ ಬಂತು. ಆಗ ಅಲ್ಲಿಯ ಪಂಚಾಯತ ಮುಖಂಡ " ಮಹಾ ಜನಗಳೇ, ನೀರಿನ ಮಟ್ಟ ಏರುತ್ತಿದೆ ನಿಮಗಾಗಿ ದೋಣಿ ಕಳುಹಿಸಲಾಗಿದೆ. ನೀವೆಲ್ಲರೂ ಹತ್ತಿ ಊರದ ಎತ್ತರ ಪ್ರದೇಶಕ್ಕೆ ಹೋಗಿರಿ. " ಎಂದು ಡಂಗುರ ಸಾರಿಸಿದ. ಆಗ ಕೆಲವರು ದೋಣಿ ಹತ್ತಿದರು . ಹತ್ತುವಾಗ ಜನರು ಆ ನೇಕಾರ ಭಕ್ತ ನಿಗೂ ದೋಣಿ ಹತ್ತಲು ಹೇಳಿದರು. ಆತ ಹೇಳಿದ "ದೇವರು ನನ್ನನ್ನು ಕಾಪಾಡುತ್ತಾನೆ "ಎಂದ.
ಸ್ವಲ್ಪ ಸಮಯದ ಬಳಿಕ ನೀರಿನ ಮಟ್ಟ ಏರಲು ಆರಂಭಿಸಿತು. ಅಲ್ಲಿಯ ಜನರನ್ನು ರಕ್ಷಿಸಲು ಬೊಟ್ ಕಳುಹಿಸಲಾಯಿತು. ಆಗ ಕೆಲವು ಜನರು ಹತ್ತಿದರು. ಆಗ ಅಲ್ಲಿಯ ಜನರು ಆ ಭಕ್ತನಿಗೆ ಬೊಟ್ ಹತ್ತಲು ಕೇಳಿಕೊಂಡರು. ಆಗಲೂ ಆತ ಹೇಳಿದ ದೇವರು ಕಾಪಾಡುತ್ತಾನೆಂದು.
ನೀರಿನ ಮಟ್ಟ ಏರುತ್ತಲೇ ಹೋಯಿತು. ಆಗ ಉಳಿದ ಜನರನ್ನು ರಕ್ಷಿಸಲು ಹೆಲಿಕೇಪ್ಟರ್ ಕಳುಹಿಸಲಾಯಿತು. ಆಗ ನೇಕಾರ ಭಕ್ತ , ತನ್ನ ಮನೆಯ ಮಾಡಿನ ಮೇಲೆ ಹತ್ತು ನಿಂತ. ಆಗ ಅಲ್ಲಿಯ ಜನ ಭಕ್ತ ನಿಗೆ "ಊರು ಮುಳುಗುವುದು. ಕೂಡಲೇ ಹೆಲಿಕೇಪ್ಟರ್ ಹತ್ತು " ಎಂದು ಬೇಡಿಕೊಂಡರು. ಆದರೂ ಹತ್ತಲೇಇಲ್ಲ. ಆತ ಹೇಳಿದ ದೇವರು ತನ್ನನ್ನು ಕಾಪಾಡುತ್ತಾನೆಂದು.
ಸ್ವಲ್ಪ ಹೊತ್ತಿನಲ್ಲಿ ಊರಿಗೆ ಊರೇ ಮುಳುಗಡೆಯಾಯಿತು.
ಆ ಭಕ್ತನೂ ನೀರಿನಲ್ಲಿ ಮುಳುಗಿ ಸತ್ತೇಹೋದ.
ಆತನ ಜೀವ ದೇವ ಲೋಕಕ್ಕೆ ಹೋದಾಗ ಕೇಳಿತು, " ದೇವರೇ , ನಿನ್ನನ್ನು ನಂಬಿ ನಾ ಸತ್ತೆನಲ್ಲ. ನನ್ನನ್ನು ಕಾಪಾಡಬೇಕಿತ್ತಲ್ಲ " ಎಂದು ದೂರಿದ.
ಆಗ ದೇವರು " ಮೂರ್ಖಾ, ನಿನ್ನ ರಕ್ಷಣೆಗಾಗಿ ದೋಣಿ ಕಳುಹಿಸಿದೆ, ಬೊಟ್ ಕಳುಹಿಸಿದೆ ಕೊನೆಗೆ ಹೆಲಿಕೇಪ್ಟರ್ ಕಳುಹಿಸಿದೆ. ನೀನು ಯಾವುದರಲ್ಲಿಯೂ ಹತ್ತಿ ಜೀವ ಕಾಪಾಡಿಕೊಳ್ಳಲಿಲ್ಲ. ಇದು ನಿನ್ನ ತಪ್ಪು " ಎಂದನು.
ಹೀಗೆ ಸ್ವಾಮಿಗಳು ಹೇಳುತ್ತಾ , ಕಂದಾ, ಒಂದು ಎತ್ತಿನ ಗಾಡಿಯು ರಸ್ತೆ ಯ ಮೇಲೆ ಹೋಗುತ್ತಿರುವಾಗ ಒಂದು ಚಕ್ರ ಕೆಸರಲ್ಲಿ ಸಿಲುಕಿದರೆ, ಅದನ್ನು ಎತ್ತಲಿಕ್ಕೆ ಪ್ರಯತ್ನ ಪಡದಿದ್ದರೆ ಆ ಚಕ್ರ ಮೇಲೆ ಬರಲು ಸಾಧ್ಯವೇ? ಇಲ್ಲಾ ಅಲ್ಲವೇ? ಅದನ್ನು ಎತ್ತಲು ನಮ್ಮ ಪ್ರಯತ್ನವೂ ಬೇಕು.
ನಮ್ಮ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಹೇಳಿದ್ದಾನೆ "ಕರ್ಮಣ್ಯೇ ವಾಧಿಕಾರಸ್ತೇ /ಮಾ ಫಲೇಷು ಕದಾಚನ // ಅಂದರೆ ಫಲಾಪೇಕ್ಷೆ ಇಲ್ಲದೇ ಕರ್ಮವನ್ನು ಮಾಡುತ್ತಿರು. ನಿನ್ನ ಕರ್ತವ್ಯವನ್ನು ನೀನು ಮಾಡಲೇಬೇಕು. ಅಭ್ಯಾಸವೆಂಬ ಕರ್ತವ್ಯ ವನ್ನು ಮಾಡದೇ ಹೇಗೆ ಪರೀಕ್ಷೆ ಯಲ್ಲಿ ಪಾಸಾಗುವಿ? ನಿನ್ನ ಪರಿಶ್ರಮ, ಪ್ರಯತ್ನ ಬೇಕೇ ಬೇಕು. " ಎಂದು ಹಿತವಚನ ನೀಡಿದರು.
"ಸ್ವಾಮೀಜಿ, ಇನ್ನೊಂದು ಪ್ರಶ್ನೆ ಕೇಳಬಹುದೇ " ಎಂದು ಗೋಪಿ ಕೇಳಿದ. ಆಗ ಸ್ವಾಮೀಜಿ ಯವರು " ನಿಸಂಕೋಚವಾಗಿ ಕೇಳು ಕಂದಾ "ಎಂದು ಹೇಳಿದರು.
"ಸ್ವಾಮಿಗಳೇ, ನಿಜವಾದ ಭಕ್ತ ಹೇಗಿರಬೇಕು? ಎಂದು ಗೋಪಿ ಕೇಳಿದ?
ಆಗ ಸ್ವಾಮಿಗಳು ಇದರ ಬಗ್ಗೆ ನಿನಗೊಂದು ಕಥೆ ಹೇಳುವೆ ಕೇಳು
-ಒಬ್ಬ ೠಷಿ ಕೆಲವು ಶಿಷ್ಯರೊಂದಿಗೆ ವಾಸವಾಗಿದ್ದರು. ಅವರಲ್ಲಿ ರಾಮು ಶಿಷ್ಯನನ್ನು ಗುರುಗಳು ತುಂಬಾ ಪ್ರೀತಿಸುತ್ತಿದ್ದರು. ಯಾಕಂದರೆ ಆತ ಸೌಮ್ಯನು, ಜಾಣನೂ ಪ್ರಾಮಾಣಿಕನೂ ಆಗಿದ್ದನು. ಇತರ ಶಿಷ್ಯರು ಆತನನ್ನು ದ್ವೇಷಿಸುತಿದ್ದರು,ಪೀಡಿಸುತ್ತಿದ್ದರು. ಆದಾಗ್ಯೂ ರಾಮು ತನ್ನ ಗೆಳೆಯರನ್ನು ಗೌರವಿಸುತ್ತಿದ್ದ.
ಒಮ್ಮೆ, ಇತರ ಎಲ್ಲಾ ಶಿಷ್ಯರು ಗುರು ಬಳಿಗೆ ಹೋಗಿ "ಗುರುಗಳೇ, ತಾವು ರಾಮುನನ್ನು ತುಂಬಾ ಪ್ರೀತಿಸುತ್ತಿರಲ್ಲ ಏಕೆ? " ಎಂದು ಕೇಳಿದರು.
ಆಗ ಗುರುಗಳು" ಮಕ್ಕಳೇ, ನಿಮಗೆಲ್ಲರಿಗೂ ನಾಳೆ ಪರೀಕ್ಷೆ ಮಾಡುತ್ತೇನೆ. ಅದರಲ್ಲಿ ಯಾರು ಗೆಲ್ಲುತ್ತಾರೋ ಅವರನ್ನು ತುಂಬಾ ಪ್ರೀತಿಸುತ್ತೇನೆ"ಎಂದರು.
ಮರುದಿನ ಎಲ್ಲಾ ಶಿಷ್ಯರು ಗುರುಗಳ ಬಳಿ ಬಂದರು. ಆಗ ಗುರುಗಳು"ಮಕ್ಕಳೇ, ನಿಮಗೆಲ್ಲರಿಗೂ ಒಂದೊಂದು ಹೊಲಸಾದ ತಾಮ್ರದ ತಂಬಿಗೆಯನ್ನು ಕೊಡುತ್ತೇನೆ.ಅದನ್ನು ಸ್ವಚ್ಛವಾಗಿ ತೊಳೆದು ಮರುದಿನ ತನ್ನಿರಿ. ಯಾರ ತಂಬಿಗೆ ಅತೀ ಸ್ವಚ್ಛವಾಗಿದೆಯೋ ಅವರನ್ನು ಪ್ರೀತಿಸುತ್ತೇನೆ"ಎಂದು ಹೇಳಿ ಪ್ರತಿಯೊಬ್ಬರಿಗೂ ಒಂದೊಂದು ತಾಮ್ರದ ತಂಬಿಗೆಯನ್ನು ಕೊಟ್ಟರು.ರಾಮುನಿಗೂ ಸಹ ಹೊಲಸಾದ ತಂಬಿಗೆ ಕೊಟ್ಟರು. ಎಲ್ಲರೂ ತಮ್ಮ ತಮ್ಮ ತಂಬಿಗೆಯನ್ನು ತೆಗೆದುಕೊಂಡು ತಮ್ಮ ಕೋಣೆಗೆ ಹೋದರು. ತಮ್ಮ ತಂಬಿಗೆಗೆ ಹೊಳಪು ಬರಲೆಂದು ಹುಣಸೆ ಹಣ್ಣು ಉಪಯೋಗಿಸಿ ಚನ್ನಾಗಿ ತಿಕ್ಕಿ ಫಳ ಫಳ ಹೊಳೆಯುವಂತೆ ಮಾಡಿದರು.
ಮರುದಿನ ಗುರುಗಳು ಹೇಳಿದಂತೆ ಎಲ್ಲರೂ ತಮ್ಮ ತಮ್ಮ ತಂಬಿಗೆ ತೆಗೆದುಕೊಂಡು ಸಾಲಾಗಿ ನಿಂತರು.ರಾಮುವಿನ ತಂಬಿಗೆ ಅಷ್ಟಾಗಿ ಹೊಳಪಿನಿಂದ ಕಾಣುತ್ತಿರಲಿಲ್ಲ. ಇದನ್ನು ನೋಡಿ ಇತರ ಗೆಳೆಯರು ರಾಮುವಿಗೆ ಗೇಲಿ ಮಾಡಿದರು. ಸ್ವಲ್ಪ ಸಮಯದ ನಂತರ ಗುರುಗಳು ಬಂದು ಒಂದೊಂದಾಗಿ ಪ್ರತಿಯೊಬ್ಬರ ತಂಬಿಗೆ ಸೂಕ್ಶ್ಹ್ಮವಾಗಿ ಪರೀಕ್ಷಿಸಿದರು. ಎಲ್ಲರಿಗೂ ಕಾತುರ ಗುರುಗಳು ತನ್ನ ತಂಬಿಗೆ ಮೆಚ್ಚುತ್ತಾರೆಂದು. ಕೊನೆಯಲ್ಲಿ ರಾಮುವಿನ ತಂಬಿಗೆ ಪರೀಕ್ಷಿ ಸಿದರು. ಕಡೆಗೆ ಗುರುಗಳು" ರಾಮುವಿನ ತಂಬಿಗೆ ಸ್ವಚ್ಛ್ ಇದೆ" ಎಂದರು." ಅದು ಹೇಗೆ ಗುರುಗಳೇ?" ಎಂದು ಉಳಿದ ಶಿಷ್ಯರು ಕೇಳಿದರು . ಆಗ ಗುರುಗಳು ಹೇಳಿದರು " ಮಕ್ಕಳೇ, ರಾಮುವಿನ ತಂಬಿಗೆಯನ್ನು ಸೂಕ್ಷ್ಮವಾಗಿ ಗಮನಿಸಿ . ಆತನ ತಂಬಿಗೆಯ ಒಳ ಭಾಗ ನಿಮಗೆಲ್ಲರಿಗಿಂತ ಸ್ವಚ್ಛ ವಾಗಿದೆ." ಎಂದು ಹೇಳಿ ರಾಮುವಿನ ತಂಬಿಗೆಯನ್ನು ಎಲ್ಲರಿಗೆ ತೋರಿಸಿದರು ಮತ್ತು ಹೇಳಿದರು"ನಾವು ಹಾಲನ್ನಾಗಲಿ ನೀರನ್ನಾಗಲಿ ತಂಬಿಗೆಯ ಒಳಗೆ ಹಾಕಿ ಕುಡಿಯುತ್ತೇವೆ. ಒಳ ಭಾಗವು ಸ್ವಚ್ಛ ಇದ್ದರೆ ಮಾತ್ರ ಕುಡಿಯಲು ಶುದ್ಧವಾದ,ಸ್ವಚ್ಛವಾದ ಹಾಲು/ನೀರು ದೊರಕುವುದು. ಎಲ್ಲರೂ ಶುದ್ಧ ಹಾಗು ಸ್ವಚ್ಛವಾದುದ್ದನ್ನೇ ಬಯಸುತ್ತಾರೆ. ಕೇವಲ ಹೊರಗೆ ಸ್ವಚ್ಛ ಇದ್ದರೆ ಸಾಲದು, ಒಳಗೂ ಶುದ್ಧ, ಸ್ವಚ್ಛವಾಗಿರಬೇಕು. ಆಗ ಎಲ್ಲರಿಗೂ ಇಷ್ಟ. ಅದರಂತೆ ರಾಮುವಿನ ಅಂತರಂಗ ಪರಿಶುದ್ಧವಾಗಿದೆ. ಅದಕ್ಕಾಗಿ ನಾನು ರಾಮುನಿಗೆ ಹೆಚ್ಚು ಪ್ರೀತಿಸುತ್ತೇನೆ " ಎಂದು ಹೇಳಿದರು. ಉಳಿದ ಶಿಷ್ಯರಿಗೆ ನಿಜ ಎನಿಸಿತು. ಅಂದಿನಿಂದ ಎಲ್ಲರೂ ರಾಮುನಿಗೆ ಪ್ರೀತಿಸಲು ತೊಡಗಿಸಿದರು.
ಆದುದರಿಂದ ಗೋಪಿ , ಯಾರ ಅಂತರಂಗ ಪರಿಶುದ್ಧ ವಾಗಿರುತ್ತೋ ಆತನೇ ಪರಮ ಭಕ್ತ " ಎಂದು ಸ್ವಾಮೀಜಿ ಯವರು ಹೇಳಿದರು.
ಗೋಪಿಗೆ ಸತ್ಯ ಅನಿಸಿತು.
ಅದಕ್ಕಾಗಿ, ಮಗು , ಆಧ್ಯಾತ್ಮ ಜ್ಞಾನ ಅರಿಯಲು ಮೊದಲು ದೇವರಲ್ಲಿ ಅಚಲವಾದ ನಂಬಿಕೆ ಇರಲಿ. ದೇವರು ಆಗಾಗ ನೀಡುವ ಸದಾವಕಾಶದ ಸದುಪಯೋಗ ಮಾಡಿಕೊ.
ತಂದೆ - ತಾಯಿಯವರ ಆಣತಿಯಂತೆ ನಡೆದುಕೊ.
ಭಗವಂತ ನಿನಗೆ ಒಳ್ಳೇದು ಮಾಡಲಿ. " ಎಂದು ಸ್ವಾಮಿ ಗಳು ಹಿತವಚನ ನೀಡಿ ಆಶೀರ್ವಾದ ಮಾಡಿದರು.
ನಂತರ ಸ್ವಾಮಿಗಳು, ದಿನೇಶರಿಗೂ ಸುಮತಿಗೂ ಗೋಪಿಗೂ ಶುಭ ಕೋರಿದರು.
ತದನಂತರ ದಿನೇಶ , ಸ್ವಾಮಿ ಯವರನ್ನೂ ಶಿಷ್ಯರನ್ನು ಅವರು ತಂಗಿದ್ದ ಹೋಟೆಲ್ ಗೆ ಕಾರಿನಲ್ಲಿ ಬಿಟ್ಟು ಬಂದರು.
ಗೋಪಿಗೆ ಸತ್ಯ ಅನಿಸಿತು.
ಈ ಘಟನೆಯಿಂದ ಗೋಪಿ ಮೇಲೆ ತುಂಬಾ ಪರಿಣಾಮ ಬೀರಿತು. ದೇವರ ಅನುಗ್ರಹ , ಕೃಪೆ ಪಡೆಯಬೇಕಾದರೆ ಆತನ ಆರಾಧನೆ, ಆತನ ಮೇಲೆ ನಂಬಿಕೆ ಅಗತ್ಯ ವೆಂದು ಅರಿತ. ಎಂಥದ್ದೇ ಪರಿಸ್ಥಿತಿ ಬಂದರೂ ದೇವರು ಒಂದಿಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಾನೆಂದು ದೃಡವಾಗಿ ನಂಬಿದ.
ಪರಿಶ್ರಮ, ಪ್ರಯತ್ನ ದ ಹೊರತು ಯಾವ ಫಲವೂ ದೊರೆಯುವುದಿಲ್ಲವೆಂದು ಅರಿತ.
ಅಂದಿನಿಂದ ಗೋಪಿ ದಿನನಿತ್ಯ ದೇವರ ಪೂಜೆ, ಭಜನೆ ತಪ್ಪದೇ ಮಾಡಲು ಆರಂಭಿಸಿದ. ನಿಷ್ಠೆಯಿಂದ ಅಭ್ಯಾಸ ಮಾಡಲು ಆರಂಭಿಸಿದ.
ತಂದೆ ತಾಯಿಯವವರಿಗೆ ಖುಷಿ ಆಯಿತು.
-----

Comments
Post a Comment