ನಾಗಗಳ ವಿಶೇಷತೆಗಳು
ಲೇಖನ - ಶ್ರೀ ಬೇಲೂರು ರಾಮಮೂರ್ತಿ
ಶಿವ ಪಾರ್ವತಿಗೆ ಸರ್ಪಗಳ ಬಗೆಗೆ ಮತ್ತು ನಾಗಪಂಚಮಿ ಆಚರಣೆ ಬಗೆಗೆ ಒಂದು ಕಥೆ ಹೇಳುತ್ತಾನೆ. ಒಂದು ಸಾರಿ ಒಬ್ಬ ರೈತ ತನ್ನ ನೇಗಿಲಿನಿಂದ ದೊಡ್ಡ ಮರದ ಪಕ್ಕದ ಹೊಲ ಉಳುತ್ತಿರುವಾಗ ಅವನ ನೇಗಿಲಿಗೆ ಹಾವಿನ ಮರಿಯೊಂದು ಸಿಕ್ಕಿಕೊಂಡು ಸತ್ತುಹೋಗುತ್ತದೆ. ತಾಯಿ ಸರ್ಪ ರೋಷದಿಂದ ರೈತನ ಇಡೀ ಕುಟುಂಬವನ್ನು ಕಚ್ಚಿ ಸಾಯಿಸಿ ಸೇಡು ತೀರಿಸಿಕೊಳ್ಳುತ್ತದೆ. ಇಷ್ಟಾದರೂ ಅದಕ್ಕೆ ರೋಷ ಕಡಿಮೆಯಾಗದೇ ಪಕ್ಕದ ಊರಿನಲ್ಲಿ ವಾಸವಾಗಿದ್ದ ರೈತನ ಮಗಳನ್ನೂ ಕಚ್ಚಿ ಸಾಯಿಸಲೆಂದು ಬರುತ್ತದೆ. ಅದೇ ಸಂದರ್ಭದಲ್ಲಿ ರೈತನ ಮಗಳು ಮನೆಯ ಮುಂದೆ ನಾಗಪೂಜೆ ಮಾಡುತ್ತಿರುತ್ತಾಳೆ. ಇದರಿಂದ ಸಂತಸಗೊAಡ ಸರ್ಪ ರೈತನ ಮಗಳನ್ನು ಕಚ್ಚದೇ ವಾಪಸಾಗುತ್ತದೆ. ಅಲ್ಲಿಂದ ಮೊದಲ್ಗೊಂಡು ಸನಾತನ ಸಂಪ್ರದಾಯದಲ್ಲಿ ನಾಗಪೂಜೆ ಅಸ್ತಿತ್ವಕ್ಕೆ ಬಂತು ಎನ್ನಲಾಗಿದೆ.
ಭವಿಷ್ಯೋತ್ತರ ಪುರಾಣದಲ್ಲಿ ನಾಗ ಪಂಚಮಿ ವ್ರತದ ಆಚರಣೆ ಮತ್ತು ಅಷ್ಟನಾಗಗಳ ಮಹತ್ವವನ್ನು ತಿಳಿಸಲಾಗಿದೆ. ಶ್ರಾವಣ ಮಾಸದ ಶುಕ್ಲ ಪಂಚಮಿಯಂದು ನಾಗದೇವತೆಗಳನ್ನು ಪೂಜಿಸುವುದರಿಂದ ಭಯ ನಿವಾರಣೆಯಾಗಿ ಸಕಲ ಜೀವಿಗಳಿಗೆ ಅಭಯ ಸಿಗುತ್ತದೆ ಎಂದು ಈ ಪುರಾಣ ತಿಳಿಸುತ್ತದೆ.
ಅಭಯ ಮಂತ್ರ ಪಠಣ ಮಾಡಿಕೊಂಡು ಪ್ರಮುಖ ಅಷ್ಟನಾಗಗಳ ಸ್ಮರಣೆಯನ್ನು ಮಾಡುವುದು ನಾಗಪಂಚಮಿ ವಿಶೇಷತೆ.
ವಾಸುಕಿಸ್ತಕ್ಷಕಶ್ಚೆöÊವ ಕಾಲಿಯೋ ಮಣಿಭದ್ರಕ:
ಐರಾವತೋ ಧೃತರಾಷ್ಟ: ಕಾರ್ಕೋಟಕಧನಂಜಯೌ
ಏತೇ ಪ್ರಯಚ್ಛಂತ್ಯಭಯ ಪ್ರಾಣಿನಾಂ ಪ್ರಾಣಜೀವಿನಾಮ್ ಅಂದರೆ
ಮಹಾ ಶಕ್ತಿಶಾಲಿಗಳಾದ ವಾಸುಕಿ, ತಕ್ಷಕ, ಕಾಲಿಯ, ಮಣಿಭದ್ರ, ಐರಾವತ, ಧೃತರಾಷ್ಟç, ಕಾರ್ಕೋಟಕ ಮತ್ತು ಧನಂಜಯ ಎಂಬ ಈ ಎಂಟು ಪ್ರಮುಖ ನಾಗದೇವತೆಗಳು ( ಅಷ್ಟನಾಗರು) ಈ ಜಗತ್ತಿನಲ್ಲಿ ಜೀವಿಸುತ್ತಿರುವ ಸಮಸ್ತ ಪ್ರಾಣಿಗಳಿಗೆ ಮತ್ತು ಮನುಕುಲಕ್ಕೆ ಸರ್ಪಭಯದಿಂದ ಮುಕ್ತಿಯನ್ನು ನೀಡಿ ಸದಾ ಅಭಯ ಮತ್ತು ರಕ್ಷಣೆಯನ್ನು ಕರುಣಿಸಲಿ.
ನಾಗಪೂಜೆ ಭಾರತದ ಪ್ರಾಚೀನ ಸಂಪ್ರದಾಯ. ಗಣಪತಿಯ ಹೊಟ್ಟೆಯ ಪಟ್ಟಿಯಾಗಿ, ಶಿವನ ಆಭರಣವಾಗಿ, ವಿಷ್ಣುವಿನ ಹಾಸಿಗೆಯಾಗಿ, ಕುಂಡಲಿನೀ ಶಕ್ತಿಯ ಪ್ರತೀಕವಾಗಿ, ತ್ರಿಪುರ ಸಂಹಾರ ಕಾಲದಲ್ಲಿ ಮೇರುವೆಂಬ ಬಿಲ್ಲಿನ ಹೆದೆಯಾಗಿ, ಸಮುದ್ರಮಥನದ ಕಾಲದಲ್ಲಿ ಪರ್ವತವೆಂಬ ಕಡಗೋಲಿಗೆ ಹಗ್ಗವಾಗಿ, ದುರ್ಯೋಧನನ ಧ್ವಜಚಿನ್ಹೆಯಾಗಿ, ಭೂಮಿಯನ್ನು ಹೊತ್ತ ಆದಿಶೇಷನಾಗಿ, ಪಾರ್ಶ್ವನಾಥ ತೀರ್ಥಂಕರನ ಶೀರೋಲಾಂಛನವಾಗಿ, ಲಕ್ಷö್ಮಣ, ಬಲರಾಮ, ಸುಬ್ರಮಣ್ಯ ಸ್ವಾಮಿಯ ಅನನ್ಯ ಸ್ವರೂಪವಾಗಿರುವ ನಾಗ ಹಿಂದೂಗಳ ಪವಿತ್ರ ದೇವರಾಗಿದ್ದಾನೆ.
ನಾಗಪಂಚಮಿಯ ದಿನ ನಾಗಗಳನ್ನು ಪೂಜಿಸುವಾಗ ಭೂಮಿಯಲ್ಲಿ, ಅಂತರಿಕ್ಷದಲ್ಲಿ, ದೇವಲೋಕದಲ್ಲಿ, ಸೂರ್ಯರಶ್ಮಿಯ ಜೊತೆಗೆ, ಕೊಳಗಳಲ್ಲಿ, ಕೆರೆಗಳಲ್ಲಿ, ಮತ್ತು ಸರೋವರಗಳಲ್ಲಿ ವಾಸಿಸುತ್ತಿರುವ ಎಲ್ಲ ಸರ್ಪಗಳೇ ನಮ್ಮ ಭಕ್ತಿಪೂರ್ವಕ ಪೂಜೆ, ನೈವೇದ್ಯವನ್ನು ಸ್ವೀಕರಿಸಿ ನಮ್ಮಿಂದ ನೀವು ಸಂತೃಪ್ತರಾಗಿ ನಮಗೆ ನಿಮ್ಮಿಂದ ಯಾವ ರೀತಿಯ ಭಯವೂ, ತೊಂದರೆಯೂ ಇಲ್ಲದಂತೆ ಅನುಗ್ರಹಿಸಿ ಎಂದು ಬೇಡಿಕೊಳ್ಳಬೇಕು.
ಮಹಾರಾಷ್ಟçದ ಸಾಂಗ್ಲಿ ಜಿಲ್ಲೆಯ ಬತ್ತೀಸ ಶಿರಾಳ ಗ್ರಾಮದಲ್ಲಿ ನಾಗರ ಪಂಚಮಿ ದಿನ ಜೀವಂತ ನಾಗರ ಹಾವುಗಳನ್ನು ಪೂಜಿಸುತ್ತಾರೆ. ಸರ್ಪ ಕುಂಡಲಿನಿ ಶಕ್ತಿಯ ಸಂಕೇತ. ಸರ್ಪದ ಮಂಡಲಾಕಾರವು ಪೂರ್ಣವೃತ್ತ ಅಥವಾ ಶೂನ್ಯ. ಈ ಪೂರ್ಣದಲ್ಲಿ ಪೂರ್ಣವನ್ನು ಕಳೆದರೆ ಶೇಷವೂ ಪೂರ್ಣ. ಈ ಶೇಷನೇ ಆದಿಶೇಷನೆಂದು ಹೇಳುತ್ತಾರೆ. ಆದ್ದರಿಂದ ಅನಂತನೆಂಬ ಪೂರ್ಣವೃತ್ತದಲ್ಲಿ ಶೇಷಶಾಯಿ ವಿಷ್ಣು ಇರುವನು. ಅನಂತನೇ ಶ್ರೇಷ್ಠ. ಶೇಷನೇ ಅನಂತ. ಶೂನ್ಯವು ಕೇವಲ ಶೂನ್ಯವಲ್ಲ, ಅದರ ಮಧ್ಯೆ ಸಚ್ಚಿದಾನಂದ ಸ್ವರೂಪದ ಕುಂಡಲಿನೀ ಶಕ್ತಿಯಿಂದಾವೃತವಾದ ವಿಭು ಇರುವನು ಎಂಬ ದಿವ್ಯ ಬೋಧನೆಯನ್ನು ನಾಗಪೂಜೆ ತಿಳಿಸುತ್ತದೆ.
ಸರ್ಪಗಳಲ್ಲಿಯೂ ಮನುಷ್ಯರಂತೆ ಅವುಗಳ ವಾಸಸ್ಥಾನ ಮತ್ತು ಗುಣಗಳ ಆಧಾರದ ಮೇಲೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂದು ವಿಂಗಡನೆ ಮಾಡಲಾಗಿದೆ. ಭವಿಷ್ಯೋತ್ತರ ಪುರಾಣದ ಬ್ರಾಹ್ಮಪರ್ವದ 36 ರಿಂದ 38ನೇ ಅಧ್ಯಾಯಗಳಲ್ಲಿ ಹಾವುಗಳಲ್ಲಿರುವ ಪ್ರಬೇಧಗಳನ್ನು ಹೀಗೆ ಗುರುತಿಸಿದ್ದಾರೆ. ಅನಂತ, ಕುಲೀಕ ಬ್ರಾಹ್ಮಣ, ಶಂಖಪಾಲ, ವಾಸುಕಿ ಕ್ಷತ್ರಿಯ, ಮಹಾಪದ್ಮ, ತಕ್ಷಕ ಕ್ಷತ್ರಿಯ, ಮತ್ತು ಪದ್ಮ ಕಾರ್ಕೋಟಕ ಇವು ಶೂದ್ರ ಜಾತಿಯವು ಎಂದು ವಿದ್ವಾಂಸರು ಗುರುತಿಸುತ್ತಾರೆ.
ಬ್ರಾಹ್ಮಣ ಸರ್ಪಗಳು ನದಿ, ಕೆರೆ, ಭಾವಿ, ಬೆಟ್ಟ ಹಾಗೂ ಯಜ್ಞ ನಡೆಯುವ ಪವಿತ್ರ ಸ್ಥಳಗಳಲ್ಲಿ ವಾಸಿಸುತ್ತವೆ. ಕ್ಷತ್ರಿಯ ಸರ್ಪಗಳು ಉದ್ಯಾನವನಗಳು, ರಾಜಮನೆತನದ ಆವರಣ ಮತ್ತು ಸ್ವಚ್ಛವಾದ ನಗರಗಳ ಪ್ರವೇಶದ್ವಾರದಲ್ಲಿ ಕಾಣಿಸಿಕೊಳ್ಳುತ್ತವೆ. ವೈಶ್ಯಸರ್ಪಗಳು ಗೋಶಾಲೆಗಳು, ಒಣಗಿದ ಹುಲ್ಲಿನ ರಾಶಿ ಮತ್ತು ಮರಗಳ ಮೇಲೆ ವಾಸಿಸುತ್ತವೆ. ಕಡೆಯದಾಗಿ ಶೂದ್ರಸರ್ಪಗಳು ಕಸದ ಬಿಲಗಳು ಮತ್ತು ಕೊಳಕು ಪ್ರದೇಶಗಳಲ್ಲಿ ವಾಸಿಸುತ್ತವೆ. ಒಟ್ಟು 64 ವಿಧದ ಹಾವುಗಳಲ್ಲಿ 28 ಮಾತ್ರ ನಮ್ಮ ಕಣ್ಣಿಗೆ ಕಾಣಿಸುತ್ತವೆ. ಹಾವಿನ ಹಲ್ಲುಗಳಲ್ಲಿ ಯಾವಾಗಲೂ ವಿಷವಿರುವುದಿಲ್ಲ. ಆದರೆ ಅದರ ಬಲಗಣ್ಣಿನ ಬಳಿ ಇರುವ ಗ್ರಂಥಿಯಲ್ಲಿ ವಿಷವಿರುತ್ತದೆ. ಹಾವು ಕೋಪಗೊಂಡರೆ ವಿಷ ಹಾವಿನ ಮೆದುಳನ್ನು ತಲುಪಿ ಅಲ್ಲಿಂದ ಅದು ಅಪಧಮನಿಗಳನ್ನು ಮತ್ತು ನರಗಳನ್ನು ತಲುಪಿ, ನರಗಳಿಂದ ಹಲ್ಲುಗಳಿಗೆ ತಲುಪುತ್ತದೆ.
ಆಹಾರ ಪದ್ದತಿಯಲ್ಲಿ ಬ್ರಾಹ್ಮಣ ಹಾವುಗಳು ದಿನದ ಮೊದಲ ಭಾಗದಲ್ಲಿ, ಕ್ಷತ್ರಿಯ ಹಾವುಗಳು ಮಧ್ಯಾನ್ಹ, ವೈಶ್ಯ ಹಾವುಗಳು ಮಧ್ಯಾನ್ಹದ ನಂತರ ಮತ್ತು ಶೂದ್ರ ಹಾವುಗಳು ಸಂಜೆ ಆಹಾರ ಹುಡುಕಿಕೊಂಡು ಹೋಗುತ್ತವೆ. ಇವುಗಳ ಆಹಾರ ಕ್ರಮವೂ ವಿಶೇಷ. ಬ್ರಾಹ್ಮಣ ಹಾವಿನ ಆಹಾರ ಮುಖ್ಯವಾಗಿ ಹೂವುಗಳು ಇಲ್ಲದಿದ್ದರೆ ಗಾಳಿಯನ್ನು ಅವಲಂಬಿಸಿ ಒಂದೆರಡು ದಿನ ಬದುಕಬಲ್ಲದು. ಕ್ಷತ್ರಿಯ ಹಾವಿನ ಮುಖ್ಯ ಆಹಾರ ಇಲಿ, ವೈಶ್ಯ ಹಾವಿನ ಪ್ರಮುಖ ಆಹಾರ ಕಪ್ಪೆ, ಆದರೆ ಶೂದ್ರ ಹಾವುಗಳು ಸರ್ವಭಕ್ಷಕ ಎಂದು ಗುರುತಿಸಿದ್ದಾರೆ.
ಭವಿಷ್ಯಪುರಾಣದ ಬ್ರಹ್ಮಪರ್ವದಲ್ಲಿ ಯಾವ ರೀತಿಯ ಹಾವುಗಳು ಹೇಗೆ ಕಚ್ಚುತ್ತವೆ ಮತ್ತು ಅದಕ್ಕೆ ಯಾವ ಚಿಕಿತ್ಸೆ ಸೂಕ್ತ ಎನ್ನುವುದನ್ನು ವಿವರಿಸಲಾಗಿದೆ. ಸಾಮಾನ್ಯವಾಗಿ ಮನುಷ್ಯರಂತೆ 100 ವರ್ಷ ಆಯಸ್ಸು ಎನ್ನುವಂತೆ ಹಾವುಗಳಿಗೆ 120 ವರ್ಷ ಎನ್ನುತ್ತಾರೆ.
ಕೃಪೆ : ಬೋಧಿವೃಕ್ಷ (ಆಧಾರ; ಭವಿಷ್ಯೋತ್ತರ ಪುರಾಣ )

Comments
Post a Comment