ಅತಿಥಿ ದೇವೋಭವ
ಲೇಖನ - ಬೇಲೂರು ರಾಮಮೂರ್ತಿ
ಸಾಮಾನ್ಯವಾಗಿ ನಮ್ಮಲ್ಲಿ ವಯಸ್ಸಾಗುತ್ತಾ ಬಂದ ಹಾಗೆ ವ್ಯಕ್ತಿ ಮಾಗಿ ಅವನ ನಡವಳಿಕೆಗಳೂ ಸುಧಾರಣೆಗೊಳ್ಳುತ್ತವೆ ಎನ್ನುವ ಮಾತಿದೆ. ಇದು ಇತ್ತೀಚೆಗೆ ಸೋಮುಗೂ ಅನ್ವಯವಾಗುತ್ತಿದೆ. ಅವನನ್ನು ಎಷ್ಟೋ ಜನ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಯಾರಾದರೂ ಸೋಮು ವಿಚಾರ ಮಾತಾಡಿದರೆ ಓ ಸೋಮುನಾ, ಬಿಡಿ ಅಂತ ಅಂದುಬಿಡುತ್ತಾರೆ. ಸೋಮು ಯಾವ ಕೆಲಸವನ್ನೂ ಸರಿಯಾಗಿ ಮಾಡುವುದಿಲ್ಲ, ಸಮಯಕ್ಕೆ ಸರಿಯಾಗಿ ಏನನ್ನೂ ಹೇಳುವುದಿಲ್ಲ ಅನ್ನುವಂತಹ ಮಾತುಗಳೆಲ್ಲಾ ಸೋಮು ವಿಚಾರದಲ್ಲಿ ಅಲ್ಲಲ್ಲಿ ಕೇಳಿಬರುತ್ತಿರುತ್ತವೆ. ಆದರೆ ಸೋಮು ನಾನು ಯಾರಿಗೂ ದ್ರೋಹ ಮಾಡಿಲ್ಲ, ವಂಚನೆ ಮಾಡಿಲ್ಲ, ಯಾರನ್ನೂ ಸುಮ್ಮಸುಮ್ಮನೆ ದೂಷಿಸಿಲ್ಲ ಎನ್ನುವ ಸಮಾಧಾನದಿಂದ ಜೀವನ ಮಾಡುತ್ತಿದ್ದಾನೆ. ಇತ್ತೀಚೆಗೆ ಅವನಿಂದ ನಡೆದ ಒಂದು ಘಟನೆ ಎಲ್ಲರೂ ಅವನನ್ನು ಹೊಗಳುವಂತೆ ಮಾಡಿದೆ.
ನಡೆದಿದ್ದು ಇಷ್ಟೆ. ಒಂದು ದಿನ ಅವನು ಆಫೀಸಿಗೆ ಹೋಗುವಾಗ ದಾರಿಯಲ್ಲಿ ಹಿರಿಯ ದಂಪತಿಗಳು ಯಾರನ್ನೋ ಹುಡುಕುವಂತಿತ್ತು. ಸೋಮು ಕುತೂಹಲದಿಂದ ಅವರ ಕಡೆ ನೋಡಿದ. ದಾರಿಯಲ್ಲಿ ಹೋಗುತ್ತಿದ್ದವರನ್ನು ಏನೋ ಕೇಳಬೇಕೆಂದುಕೊಳ್ಳೋರು, ಅಷ್ಟರಲ್ಲಿ ಏನೋ ಹಿಂಜರಿಕೆ. ಇದನ್ನು ಕಂಡ ಸೋಮು ಪಾಪ ಹಿರಿಯರಿಗೆ ಏನೋ ಸಹಾಯ ಬೇಕಾಗಿರಬಹುದು ಅಂತ ಅವರ ಹತ್ತಿರ ಹೋಗಿ ಯಾರನ್ನು ಹುಡುಕುತ್ತಿದ್ದೀರ, ನಿಮಗೆ ಏನು ಬೇಕಾಗಿತ್ತು ಅಂತ ಕೇಳಿದ. ಹಿರಿಯ ಯಜಮಾನರು ಇಲ್ಲಿ ನನ್ನ ಸ್ನೇಹಿತರು ಪರಶುರಾಮ್ ಅವರ ಮನೆ ಹುಡುಕುತ್ತಿದ್ದೀನಿ. ಅವರು ಇರುವುದು ಬಾಲಾಜಿ ಬಡಾವಣೆಯಲ್ಲಿ ಅಂದರು. ಸೋಮು ನಿಮ್ಮ ಹತ್ರ ಅವರ ವಿಳಾಸ ಇದೆಯಾ ಅಂತ ಕೇಳಿದ. ಹಿರಿಯರು ಚೀಟಿ ತೆಗೆದು ತೋರಿಸಿದರು. ಸೋಮು ವಿಳಾಸವನ್ನು ಎರಡೆರಡು ಬಾರಿ ನೋಡಿಕೊಂಡು ಹಿರಿಯರನ್ನು ನೀವು ಈ ವಿಳಾಸಕ್ಕೆ ಹೋಗಬೇಕೇ ಅಂತ ಕೇಳಿದ. ಹೌದು ಅಂದರು. ಸೋಮು ಇದು ಈ ಊರಿನ ವಿಳಾಸವಲ್ಲ, ತುಮಕೂರಿನದು. ಇದರಲ್ಲಿ ಬರೆದಿರೋ ಹೆಸರು ಪರಶುರಾಮ್ ನಿಮ್ಮ ಸಂಬಂಧಿಯಾ, ಸ್ನೇಹಿತರಾ ಅಂತ ಕೇಳಿದ. ಹೌದು ಪರಶುರಾಮ್ ನನಗೆ ದೂರದ ಸಂಬಂಧ . ಅವರ ಮನೆಗೆ ಹೇಗೆ ಹೋಗಬೇಕು ಅಂತ ತಿಳಿಸಿದರೆ ನಾವು ಹೋಗುತ್ತೇವೆ ಅಂದರು. ಸೋಮು ಅವರಿಗೆ ಅಯ್ಯೋ ಸ್ವಾಮಿ ಇದು ತುಮಕೂರಲ್ಲ, ನೀವು ಅಪ್ಪಿತಪ್ಪಿ ಈ ಊರಿನಲ್ಲಿ ಇಳಿದುಬಿಟ್ಟಿದ್ದೀರ, ಇದು ತುಮಕೂರಿನ ವಿಳಾಸ, ನಿಮ್ಮ ಸಂಬಂಧಿ ಪರಶುರಾಮ್ ಈ ಊರಲ್ಲಿದ್ದಾರೋ ಇಲ್ಲಾ ತುಮಕೂರಿನಲ್ಲಿದ್ದಾರೋ ಅಂತ ಇನ್ನೊಮ್ಮೆ ಕೇಳಿದ. ಹಿರಿಯರು ಪರಶುರಾಮ್ ತುಮಕೂರಿನಲ್ಲಿ ಇರುವುದು ಅಂದರು. ಪಾಪ ಹಿರಿಯ ದಂಪತಿಗಳ ಅವಸ್ಥೆ ಕಂಡು ಸೋಮು ತುಂಬಾ ನೊಂದುಕೊಂಡ. ಹಿರಿಯ ದಂಪತಿಗಳು ತುಮಕೂರು ಬಸ್ಸು ಹತ್ತಿದ್ದೇನೋ ಸರಿ. ಆದರೆ ಈ ಊರಿನಲ್ಲಿ ಬಸ್ಸು ಕಾಫಿಗೆ ಅಂತ ನಿಲ್ಲಿಸಿದಾಗ ಇದೇ ತುಮಕೂರು ಅಂದುಕೊಂಡು ಇಳಿದುಬಿಟ್ಟಿದ್ದಾರೆ. ವಿಳಾಸ ಕೇಳೋಣ ಅಂತ ಸ್ವಲ್ಪ ದೂರ ನಡೆದಿದ್ದಾರೆ. ಅಷ್ಟರಲ್ಲಿ ತುಮಕೂರು ಬಸ್ಸು ಹೊರಟುಹೋಗಿದೆ. ಇಷ್ಟು ನಡೆದಿರುವ ಸಂಗತಿ ಎಂದು ಸೋಮುಗೆ ಅರ್ಥವಾಯಿತು. ಎದುರಿಗೆ ಕಂಡ ಹೋಟೆಲಿಗೆ ದಂಪತಿಗಳನ್ನು ಕರೆದುಕೊಂಡು ಹೋಗಿ ಏನಾದರೂ ತಿಂಡಿ ತಗೋತೀರ ಅಂತ ಕೇಳಿದಾಗ ಆಕೆ ನಾನು ಮಸಾಲೆ ದೋಸೆ ತಿಂದು ತುಂಬಾ ದಿನವಾಯಿತು ಅಂದರು.
ಸೋಮು ಅವರಿಬ್ಬರಿಗೂ ಮಸಾಲೆ ದೋಸೆ ಆರ್ಡರ್ ಮಾಡಿ ಅವರ ವಿವರಗಳನ್ನು ಕೇಳಿದ. ನೀವು ಯಾವ ಊರಿನವರು, ತುಮಕೂರಿಗೆ ಹೋಗೋರು ಇಲ್ಲಿ ಯಾಕೆ ಇಳಿದಿರಿ ಅಂತ ಕೇಳಿದ. ಅದಕ್ಕೆ ಆಕೆ ನಮ್ಮದು ಜಾಲಮಂಗಲ ಅಂತ. ಅಲ್ಲಿಂದ ತುಮಕೂರಿಗೆ ನೇರ ಬಸ್ಸಿದೆ. ನಾವು ಬಸ್ ಹತ್ತಿ ಕೂತು ಟಿಕೆಟ್ ತಗೊಂಡೆವು. ಕಂಡಕ್ಟರ್ ಇಲ್ಲಿ ಇಳಿಸಿ ಹೊರಟುಹೋದ ಅಂದರು. ಏನೋ ವ್ಯತ್ಯಾಸವಾಗಿದೆ ಅಂದುಕೊಂಡು ಸೋಮು ಚೀಟಿಯಲ್ಲಿದ್ದ ಫೋನ್ ನಂಬರಿಗೆ ಕರೆ ಮಾಡಿ ಪರಶುರಾಮ್ ಜೊತೆ ಮಾತಾಡಿ ಇರುವ ಸಂಗತಿಯನ್ನು ತಿಳಿಸಿದ. ಅದಕ್ಕೆ ಪರಶುರಾಮ್ ಅವರು ಅಯ್ಯೋ ಅವರು ನನ್ನ ಕಸಿನ್ ಚಂದ್ರಣ್ಣ, ರುದ್ರಮ್ಮ ದಂಪತಿಗಳು. ಅಲ್ಯಾಕೆ ಬಂದಿದಾರೆ ನೀವು ಯಾರು ಅಂತ ಎಲ್ಲ ವಿಚಾರಿಸಿಕೊಂಡು ಚಂದ್ರಣ್ಣನ ಜೊತೆಯೂ ಮಾತಾಡಿದರು. ನಂತರ ದಯಮಾಡಿ ಅವರನ್ನು ನನ್ನ ಮನೆಗೆ ಕರೆದುಕೊಂಡು ಬಂದು ಬಿಟ್ಟರೆ ಸಂತೋಷ. ಚಂದ್ರಣ್ಣನಿಗೆ ಈಚೆಗೆ ಸ್ವಲ್ಪ ಮರೆವು ರ‍್ತಿದೆ. ಅಲ್ಲಿಂದ ಇನ್ನೆಲ್ಲೋ ಹೋಗಿಬಿಟ್ಟರೆ ಏನು ಮಾಡೋದು. ಎಲ್ಲ ಕಡೆಯೂ ನಿಮ್ಮಂತಹವರು ಇರಬೇಕಲ್ಲ ಅಂದರು. ದೋಸೆ ತಿಂದು ಕಾಫಿ ಕುಡಿದಾದ ಮೇಲೆ ಸೋಮು ಆ ದಂಪತಿಗಳನ್ನು ತನ್ನ ಮನೆಗೆ ಕರೆದುಕೊಂಡು ಹೋದ. ಸೋಮಿಗೆ ಪರಿಚಯ ಮಾಡಿಕೊಟ್ಟು ಸೋಮಿ ಅಡುಗೆ ಮಾಡು, ಅವರಿಬ್ಬರೂ ಊಟ ಮಾಡಿ ಸ್ವಲ್ಪ ವಿಶ್ರಾಂತಿ ಪಡೆದು ಆಮೇಲೆ ತುಮಕೂರಿಗೆ ಹೋಗಲಿ ಅಂದ. ಸೋಮಿ ಮೊದಲು ಅವರಿಬ್ಬರಿಗೂ ನಮಸ್ಕಾರ ಮಾಡಿ ಕೂತಿರಿ, ಅಡುಗೆ ಮಾಡಿಬಿಡ್ತೀನಿ ಅಂದಳು. ಸೋಮು ಆಫೀಸಿಗೆ ಫೋನ್ ಮಾಡಿ ಏನೋ ಸಬೂಬು ಹೇಳಿ ರಜ ಪಡೆದ. ಹಿರಿಯ ದಂಪತಿಗಳು ಹಾಗೇ ನಿದ್ದೆಗೆ ಜಾರಿದ್ದರು. ಅವರಿಗೆ ಆತಂಕ ಇದ್ದಂತಿರಲಿಲ್ಲ.
ಸೋಮು ಅಡುಗೆ ಮನೆಗೆ ಹೋಗಿ ಸೋಮಿಗೆ ಸಹಾಯ ಮಾಡುತ್ತಾ ನಡೆದಿದ್ದೆಲ್ಲವನ್ನೂ ವಿವರಿಸಿದ. ಸೋಮಿಗೂ ಅಯ್ಯೋ ಅನಿಸಿತು. ರೀ ನಮ್ಮ ಸೋದರಮಾವನ ಸಂಬಂಧಿ ಒಬ್ಬರಿಗೂ ಹೀಗೇ ಸ್ವಲ್ಪ ಮರೆವು ಇತ್ತು. ಅವರು ಒಂದು ದಿನ ಹೊರಗೆ ಹೋದವರು ಮತ್ತೆ ಹಿಂದಿರುಗಿ ಬರಲೇ ಇಲ್ಲ ಕಣ್ರೀ. ನನಗಂತೂ ಮರೆವು ಇರೋರನ್ನು ಕಂಡರೆ ನಿಜಕ್ಕೂ ಕಣ್ಣೀರು ಬರುತ್ತೆ ಅಂದಳು. ಸೋಮು ನೋಡು ಅವರಿಬ್ಬರೂ ಊಟ ಮಾಡಿದ ಮೇಲೆ ನಾವು ಒಂದು ಟ್ರಿಪ್ ಹೋಗೋಣ್ವಾ ಅಂತ ಕೇಳಿದ. ಸೋಮಿ ಅಚ್ಚರಿಯಿಂದ ಈಗ್ಯಾವ ಟ್ರಿಪ್ ರೀ ಅಂತ ಕೇಳಿದಳು. ಏನಿಲ್ಲ ಹೀಗೆ ಹೋಗೋದು, ಹಾಗೆ ಬಂದುಬಿಡೋದು, ತುಮಕೂರಿಗೆ ಹೋಗಿ ಈ ದಂಪತಿಗಳನ್ನು ಅವರ ಸಂಬಂಧಿಗಳ ಮನೆಗೆ ಬಿಟ್ಟು ಬರೋದು. ಅವರಿಬ್ಬರನ್ನೇ ಕಳಿಸಿದರೆ ಅವರು ಹುಷಾರಾಗಿ ಹೋಗ್ತಾರೆ ಅನ್ನೋ ನಂಬಿಕೆ ಇಲ್ಲ. ನಾವು ಯಾವಾಗಲೂ ಹಿರಿಯರ ಬಗೆಗೆ ಅನುಕಂಪ, ಪ್ರೀತಿ, ಸಹಾಯ ಮಾಡೋ ಪ್ರವೃತ್ತಿ ಎಲ್ಲ ಬೆಳೆಸಿಕೊಂಡಿರಬೇಕು, ಏಕಂದ್ರೆ ನಮಗೂ ವಯಸ್ಸಾಗುತ್ತಲ್ವಾ ಅಂದ. ಸೋಮಿ ಖುಷಿಯಿಂದ ಈ ವಿಚಾರದಲ್ಲಿ ನೀವು ಹೇಗೆ ಹೇಳ್ತೀರೋ ಹಾಗೆ ಅಂದಳು.
ಹಿರಿಯ ದಂಪತಿಗಳು ಊಟ ಮಾಡುತ್ತಾ, ಅವರಿಗೆ ಇಬ್ಬರು ಮಕ್ಕಳು, ಒಬ್ಬಳು ಅಮೆರಿಕಾದಲ್ಲಿ ಗಂಡನ ಜೊತೆ ಇದ್ದಾಳೆ, ಇನ್ನೊಬ್ಬ ಮಗ ದೆಹಲಿಯಲ್ಲಿದ್ದಾನೆ. ಇಬ್ಬರೂ ದಿನಾ ಫೋನ್ ಮಾಡುತ್ತಿರುತ್ತಾರೆ. ಮಗ ಆರಾರು ತಿಂಗಳಿಗೆ ಬಂದು ಹೋಗುತ್ತಿರುತ್ತಾನೆ ಅಂತೆಲ್ಲ ಹೇಳಿದರು. ಆಗಲೇ ಮಗನ ಫೋನ್ ಬಂದು ಚಂದ್ರಣ್ಣ ಮಗನ ಜೊತೆ ಮಾತಾಡಿ ನಂತರ ಸೋಮುಗೆ ಫೋನ್ ಕೊಟ್ಟು ನನ್ನ ಮಗ ನಿಮ್ಮ ಜೊತೆ ಮಾತಾಡಬೇಕಂತೆ ಅಂದರು. ಸೋಮು ಜೊತೆ ಮಾತಾಡಿದ ಚಂದ್ರಣ್ಣನ ಮಗ ಸೋಮುನ ಹೊಗಳಿದ್ದೂ ಹೊಗಳಿದ್ದೇ. ಸೋಮು ನೀವೇನೂ ಯೋಚನೆ ಮಾಡಬೇಡಿ ಸರ್ ಅವರು ನನಗೂ ತಂದೆ ತಾಯಿ ಸಮಾನ, ನಾನು ಜೋಪಾನವಾಗಿ ಅವರನ್ನು ಪರಶುರಾಮ್ ಅವರ ಮನೆಗೆ ಬಿಟ್ಟು ಬರ‍್ತೀನಿ ಅಂದ. ಅಷ್ಟೊತ್ತಿಗೆ ಪರಶುರಾಮ್ ಸೋಮು ನಂಬರಿಗೆ ಫೋನ್ ಮಾಡಿ ಚಂದ್ರಣ್ಣನ ಬಗೆಗೆ ವಿಚಾರಿಸಿಕೊಂಡರು. ನೀವೇನೂ ಯೋಚನೆ ಮಾಡಬೇಡಿ ಸರ್, ನಾನೇ ಅವರನ್ನು ನಿಮ್ಮ ಮನೆಗೆ ಕರೆದುಕೊಂಡು ಬರ‍್ತೀನಿ ಅಂದ.
ಊಟವಾದ ಮೇಲೆ ಹಿರಿಯ ದಂಪತಿಗಳು ವಿಶ್ರಾಂತಿ ತೆಗೆದುಕೊಂಡರು. ರುದ್ರಮ್ಮ ಸೋಮಿಯನ್ನು ಯಾವ ಊರು, ಏನು, ಎತ್ತ ಅಂತ ಎಲ್ಲ ವಿಚಾರಿಸಿಕೊಂಡು ನೀವು ದಂಪತಿಗಳು ನಮ್ಮ ಮನೆಗೆ ಬರಬೇಕು ಅಂತ ಆಹ್ವಾನಿಸಿದರು. ಹೊರಡುವ ಮುನ್ನ ಕಾಫಿ ಆಯಿತು. ಚಂದ್ರಣ್ಣ ನಮಗೆ ತುಮಕೂರಿಗೆ ಹೋಗುವ ಬಸ್ ಹತ್ತಿಸಿಬಿಡಿ ನಾವು ಹೋಗಿರ‍್ತೀವಿ ಅಂದರು. ಆಗ ಸೋಮು ನನಗೂ ತುಮಕೂರಿನಲ್ಲಿ ಸ್ವಲ್ಪ ಕೆಲಸ ಇದೆ. ನಾನು ನಾಳೆ ಹೋಗುವ ಕಾರ್ಯಕ್ರಮ ಇತ್ತು. ಆದರೆ ಇವತ್ತೇ ನಿಮ್ಮ ಜೊತೆ ರ‍್ತೀನಿ ಅಂದ.
ಕಾರು ಬುಕ್ ಮಾಡಿಕೊಂಡು ದಂಪತಿಗಳನ್ನು ಕೂರಿಸಿಕೊಂಡು ತುಮಕೂರಿಗೆ ಹೋಗಿ ಪರಶುರಾಮ್ ಅವರ ಮನೆಗೆ ತಲುಪಿಸಿದ. ಪರಶುರಾಮ್ ಇವರೆಲ್ಲಾ ಬರುವುದನ್ನೇ ಕಾಯುತ್ತಿದ್ದರು. ಸೋಮುನ ನೋಡಿ ನೀವು ತುಂಬಾ ಗ್ರೇಟ್ ಸರ್, ಈಗಿನ ಕಾಲದಲ್ಲಿ ಹೀಗೆ ಸಹಾಯ ಮಾಡೋರು ಯಾರಿದ್ದಾರೆ. ಅದರಲ್ಲೂ ವೃದ್ಧರು ಅಂದರೆ ಯಾರಿಗೂ ಬೇಡವಾಗಿರುವ ದಿನಗಳಲ್ಲಿ ನಿಮ್ಮಂಥವರು ಬಹಳ ಅಪರೂಪ ಅಂದರು. ಸೋಮು ಅವರಿಗೆ ನಮಸ್ಕರಿಸಿ ಇದು ಸಾಮಾನ್ಯವಾಗಿ ಎಲ್ಲರೂ ಮಾಡುವಂಥ ಕೆಲಸ, ಮತ್ತು ಮಾಡಬೇಕಾದ ಕೆಲಸ ಆದರೆ ಈ ದಿನಗಳಲ್ಲಿ ಬಹಳ ಅಪರೂಪ ಅಂದ.
ಚಂದ್ರಣ್ಣ ಮತ್ತು ರುದ್ರಮ್ಮ ಇವರುಗಳಿಂದ ಬೀಳ್ಕೊಂಡು ಸೋಮು ಸೋಮಿ ಅಲ್ಲಿಂದ ಹೊರಟರು. ಸೋಮಿ ರೀ ಇವತ್ತು ನನಗೆ ಹೃದಯ ತುಂಬಿಬಂದಿದೆ ಕಣ್ರಿ ಅಂದಳು. ಸೋಮು ನನಗೂ ಅಂದ. ಚಂದ್ರಣ್ಣ ದಂಪತಿಗಳ, ಅವರ ಮಗನ, ಪರಶುರಾಮ್ ಅವರ ಮೊಬೈಲ್ ಸಂಖ್ಯೆಗಳನ್ನು ತೆಗೆದುಕೊಂಡಿಡು ಆಗಾಗ ಅವರ ಸಂಪರ್ಕದಲ್ಲಿರೋಣ ಅಂದುಕೊಂಡ.
ರೀ ತುಮಕೂರಿಗೆ ಬಂದು ಒಂದು ಕೆಲಸ ಮಾಡದೇ ಹೋದರೆ ಏನು ಪ್ರಯೋಜನ ಅಂದಳು. ಸೋಮು ಅಚ್ಚರಿಯಿಂದ ಏನು ಕೆಲಸವೇ ಅಂತ ಕೇಳಿದ. ಅದಕ್ಕೆ ಸೋಮು ಹೊರಗೆ ಕೈ ತೋರಿದಳು. ಅಲ್ಲಿ ಸುಮತಿ ತಟ್ಟೆ ಇಡ್ಲಿ ಹೋಟೆಲ್ ಅಂತ ಬೋರ್ಡ್ ಇತ್ತು. ಸೋಮು ಕಿರುನಗೆಯಿಂದ ಸುಮತಿ ತಟ್ಟೆ ಇಡ್ಲಿ ಆಮೇಲೆ ಹೋಗೋಣ ಅಂದು ನಕ್ಕ ಸೋಮು ಡ್ರೈವರಿಗೆ ಕಾರು ನಿಲ್ಲಿಸಲು ಹೇಳಿದ. ಹೋಟೆಲಿಗೆ ಹೋಗುವಾಗ ಸೋಮು ದಿನಾ ಮನೇಲಿ ನಾನು ಆಫೀಸಿಗೆ ಹೊರಡುವಾಗ ತಿಂಡಿಗೆ ನೀನು ತಟ್ಟೆ ಇಡ್ಲಿ ತಟ್ಟೆ ಇಡ್ಲಿ ಅಂತ ಕಾಯ್ತನೇ ರ‍್ತೀನಿ. ಆದರೆ ಇಲ್ಲಿ ತಟ್ಟೆನೂ ಇಟ್ಟು ಅದರ ಮೇಲೆ ಇಡ್ಲಿನೂ ಇಟ್ಟು ನಮ್ಮನ್ನು ಕರೀತಿದಾರೆ ಅಂದು ನಕ್ಕ ಸೋಮು. ಸೋಮಿ ನಕ್ಕು ಸುಮ್ನೆ ನಡೀರಿ ಅಂದಳು. ತಟ್ಟೆ ಇಡ್ಲಿ ಬಾರಿಸುವ ಸಂಭ್ರಮದಲ್ಲಿ ಸೋಮು ಸೋಮಿ ಇಬ್ಬರೂ ಹೋಟೆಲಿಗೆ ಎಂಟ್ರಿ ಕೊಟ್ಟರು.

Comments
Post a Comment