ಮೇಘಾಲೋಕ
ಹಾಸ್ಯ ಲೇಖನ - ಅಣಕು ರಾಮನಾಥ್
ಬ್ಲ್ಯಾಕ್ ಲೈವ್ಸ್ ಮ್ಯಾಟರ್!
ಆಕಾಶದತ್ತ ಗಮನ ಹರಿಸಿದಾಗಲೆಲ್ಲ ನನಗೆ ನೆನಪಾಗುವ ಸಾಲು ಇದು.
ಪೋಲಾರ್ ಬೇರ್‍ನಲ್ಲೋ, ಬ್ಯಾಸ್ಕಿನ್ ರಾಬಿನ್ಸ್‍ನಲ್ಲೋ ಕಂಡುಬರುವ ಸ್ನೋವೈಟ್ ಬಿಳುಪಿನ ವೆನಿಲಾ ಸ್ಕೂಪಿನಂತಹ ಮೋಡಗಳು ‘ನಾಟಕದ ಕಂಪನಿಯ ರಾಜನ ಪಾರ್ಟ್’ ಇದ್ದಹಾಗೆ. ನೋಡಕ್ಕೆ ಚೆನ್ನವೇ ಹೊರತು, ಕ್ರಿಕೆಟ್ ಪ್ರಿಯರ ಹೊರತಾಗಿ (ಸ್ವಿಂಗ್ ಬೋಲಿಂಗಿಗೆ ಅನುಕೂಲಕರವೆಂದು) ಮತ್ತಾರಿಗೂ ಪ್ರಯೋಜನವೇನಿಲ್ಲ. ಆದರೆ ಬೆಳ್ಳಿಯ ಚೌಕಟ್ಟಿನಲ್ಲಿ (ಎವೆರಿ ಕ್ಲೌಡ್ ಹ್ಯಾಸ್ ಎ ಸಿಲ್ವರ್ ಲೈನಿಂಗ್ ಅಂತೆ) ಕಾಂಟ್ರಾಸ್ಟ್ ಬಣ್ಣದಲ್ಲಿ ಕಂಡುಬರುವ ಕಪ್ಪನೆಯ ಮೋಡವೇ ಮೋಡ.
ಜನಪರ ಜೀವಿಗಳಿಗೆ ಸಂಕಟ ತಪ್ಪಿದ್ದಲ್ಲ ಎನ್ನುವುದಕ್ಕೆ ಮೋಡಗಳಿಗಿಂತ ಉತ್ತಮ ಉದಾಹರಣೆಗಳಿಲ್ಲ. ತನ್ನ ಪಾಡಿಗೆ ತಾನು ಓಡಾಡಿಕೊಂಡಿರುವ ಮೋಡವನ್ನು ಕಂಡು ‘ಓಡುತಿರುವ ಮೋಡಗಳೆ... ಯಾರ ತಡೆಯೂ ನಿಮಗಿಲ್ಲ; ನಿಮ್ಮ ಭಾಗ್ಯ ನಮಗಿಲ್ಲ’ ಎನ್ನುತ್ತಾ ಹೊಟ್ಟೆ ಉರಿದುಕೊಳ್ಳುವ ಮಂದಿಗೆ ನಮ್ಮಲ್ಲಿ ಕೊರತೆಯಿಲ್ಲ. ಮೋಡಗಳಿಗೂ ‘ಒನ್ ವೇ’, ‘ನೋ ಎಂಟ್ರಿ’ ಇತ್ಯಾದಿಗಳನ್ನೊಡ್ಡಿ, ‘ಕ್ಲೌಡ್ ಮೂಮೆಂಟ್ ಕಂಟ್ರೋಲ್ ಅಥಾರಿಟಿ’ ಒಂದನ್ನು ನಿರ್ಮಿಸಿ, ಆಗಾಗ್ಗೆ ಮೋಡಯ್ಯನಿಗೂ ದಂಡ ವಿಧಿಸಿದ್ದರೆ ಇಂತಹ ಪ್ರಭೃತಿಗಳಿಗೆ ಕೊಂಚ ನೆಮ್ಮದಿ ದೊರಕೀತೇನೋ.
ಮಂಜು, ಮೋಡ, ಮೇಘ, ಮುಗಿಲು ಎಂದೆಲ್ಲ ಕರೆಸಿಕೊಳ್ಳುವ ಈ ಘನಶೀತಲವಾರಿಪುಂಜವು ಒಂದು ವಿಧದಲ್ಲಿ ಸಾಹುಕಾರನ ಹದಗೆಟ್ಟ ಮಗನಂತೆ – ಸಿಕ್ಕಸಿಕ್ಕಲ್ಲಿ ಓಡಾಡಿಕೊಂಡಿರುವುದು, ಸಿಕ್ಕಸಿಕ್ಕವರಿಗೆ ಬಾಯಿಗೆ ಬಂದಂತೆ ಉಗಿಯುವುದು (ಇದೊಂದು ನನಗರ್ಥವಾಗದ ನುಡಿಗಟ್ಟು – ಬಾಯಿಗೆ ಬರದಿರುವುದನ್ನು ಉಗಿಯುವುದು ಹೇಗೆ?) ಇದರ ಜನ್ಮಜಾತ ಗುಣ. ಕೃಷ್ಣಮೂರ್ತಿಯನ್ನು ಕೃಷ್ಣ, ಕಿಟ್ಟು, ಕಿಟ್ಯಾ ಎಂದೆಲ್ಲಾ ಕರೆದರೂ ಗುಣದಲ್ಲಿ ವ್ಯತ್ಯಾಸವಿಲ್ಲ. ಆದರೆ ಮಂಜು, ಮೇಘ, ಮುಗಿಲುಗಳಿಗೆ ಮೇಲುಮೇಲಿನ ಅರ್ಥ ಒಂದೇ ಎನಿಸಿದರೂ ಕವಿಗಳು ಅವುಗಳಿಗೆ ವಿವಿಧ ಗುಣಗಳನ್ನು ಆರೋಪಿಸಿದ್ದಾರೆ. ಮೋಡಗಳು ಬಡಾವಣೆಯ ಪಾರ್ಕಿನಲ್ಲಿನ ಮಾರ್ನಿಂಗ್ ಜಾಗರ್ಸ್ ಇದ್ದಂತೆ; ಹೆಚ್ಚೆಂದರೆ ಬೆಂಗಳೂರಿನ ಸೆಂಟ್ರಲ್ ಸಿಲ್ಕ್ ಬೋರ್ಡ್ ಟ್ರಾಫಿಕ್ಕಿನಲ್ಲಿ ಸಿಲುಕಿದ ಕಾರಿನಂತೆ ನಿಧಾನವಾಗಿ ಚಲಿಸುತ್ತವಷ್ಟೆ. ಇವುಗಳಿಗೆ ಒಳ್ಳೆಯ ಹೆಸರಿಲ್ಲವೆನ್ನುವುದಕ್ಕೆ ಮಕ್ಕಳಿಗೆ ‘ಮೋಡರಾಜ್, ಮೋಡ’ ಎಂದೆಲ್ಲ ಹೆಸರಿಡದಿರುವುದೇ ಸಾಕ್ಷಿ. ಅವಕ್ಕೆಲ್ಲ ‘ಮೇಘಾ’, ‘ಮೇಘರಾಜ್’, ‘ಮೇಘನಾ’ಗಳೇ ಸೂಕ್ತ. ಇಲ್ಲಿಯೂ ಒಂದು ಸೂಕ್ಷ್ಮತೆಯ ಬಗ್ಗೆ ಸಂದೇಹವೇಳುತ್ತದೆ. ಸಂಸ್ಕೃತದಲ್ಲಿ ‘ಮೇ’ ಎಂದರೆ ನನಗೆ; ‘ಘಾ’ ಎಂದರೆ ಏಟು ಎಂಬ ಅರ್ಥಗಳಿವೆ. ಮೇಘಗಳು ಮಳೆ ಸುರಿಸುವುದು may or may not ಎಂಬ ಸಂದರ್ಭ ಬಂದಾಗ ಕೃಷಿಭೂಮಿಯು ‘ನನಗೆ ಪೆಟ್ಟು ಬಿದ್ದಂತೆಯೇ’ ಎಂದು ಆಗಸವನ್ನು ನೋಡುತ್ತಾ ಹೇಳಿದ್ದರಿಂದಲೇ ‘ಮೇಘಾ’ ಪದವು ಹುಟ್ಟಿರಬಹುದೆಂಬುದು ಒಂದು ಸಂದೇಹವಾದರೆ, ‘ಕ್ಲೌಡ್ ಬರ್ಸ್ಟ್’ ಆಗಿ ನೆರೆ ಬಂದು ಬೆಳೆದುದೆಲ್ಲ ಕೊಚ್ಚಿಹೋಗಿದ್ದರಿಂದ ಬುವಿಯು ಅಳುತ್ತಾ ‘ಮೇಘಾ – ನನಗೆಂತಹ ಹೊಡೆತವಿದು!’ ಎಂದುದರಿಂದ ಈ ಪದವು ಚಾಲ್ತಿಗೆ ಬಂದಿರಬಹುದೆಂಬುದು ಇನ್ನೊಂದು ಸಂದೇಹ. ಸರಿಯಾದ ಸಮಯಕ್ಕೆ ಸರಿಯಾದ ಸ್ಥಳದಲ್ಲಿ ಸರಿಯಾದ ಪ್ರಮಾಣದಲ್ಲಿ ಮೇಘವು ಮಳೆ ಸುರಿಸಿದರೆ ಸಸ್ಯಗಳು ಗಲಗಲನೆಂದು ಬೆಳೆಯುತ್ತಾ ‘ನಾನು ಗಲಗಲನೆಂದಿರಲು ನೀನೇ ಕಾರಣ ಮೇಘ’ ಎನ್ನುವುದೂ ಸಾಧ್ಯವೇ; ಮೇ – ನನಗೆ; ಘ – ಗಲಗಲವೆಂಬ ಸದ್ದು; ಈ ಅರ್ಥವನ್ನೂ ಕೃಷಿಯ ಖುಷಿಗೆ ಅನ್ವಯಿಸಬಹುದು.
ಮೇಘವು ಸೋಮಾರಿತನವೇ ಮೈವೆತ್ತಂತೆ ಬಾನಿನ ಪಥದಲ್ಲಿ ವಿಹರಿಸಿಕೊಂಡು ಚೆನ್ನಾಗಿಯೇ ಇತ್ತು – ಯಕ್ಷನೊಬ್ಬನ ಕಣ್ಣಿಗೆ ಬೀಳುವವರೆಗೆ! ಯಕ್ಷನು ಕಾಳಿದಾಸನ ಮನೆಯ ಬಾಗಿಲನ್ನು ತಟ್ಟಿದ; ಮೇಘಕ್ಕೆ ಗ್ರಹಚಾರ ಮೆಟ್ಟಿಕೊಂಡಿತು.
‘ಎಲೈ ಮೇಘವೆ, ನಾನು ಸೀತೆಯು ಸ್ನಾನ ಮಾಡಿದ ಕಾರಣದಿಂದ ಪುಣ್ಯಜಲವಾದ ನದಿಯಲ್ಲಿ ಮೀಯುತ್ತಾ ರಾಮಗಿರಿಯೆಂಬ ಸ್ನಿಗ್ಧಛಾಯೆಯುಳ್ಳ ಪಚ್ಚತರುಗಳುಳ್ಳ ಪ್ರದೇಶದಲ್ಲಿ ಸ್ವಸ್ಥವಾಗಿದ್ದೇನೆಂದು ನನ್ನಿನಿಯಳಿಗೆ ತಿಳಿಸು’ ಎಂದು ವಿನಂತಿರೂಪದ ಆರ್ಡರ್ ಹೊರಡಿಸಿದ ಯಕ್ಷನಿಗೆ ಕಿವಿಯಾದುದೇ ಮೇಘದ ಕಷ್ಟಗಳ ಸರಮಾಲೆಗೆ ನಾಂದಿಯಾಯಿತು.
‘ಅದೋ ಆ ಊರಿನಲ್ಲಿ ನಲ್ಲೆಯರು ನಲ್ಲನ ತೆಕ್ಕೆಯಲ್ಲಿ ಸುಖಿಸುತ್ತಿದ್ದಾರೆ. ನೀನು ಅಲ್ಲೆಲ್ಲಿಯೂ ಗುಡುಗಬೇಡ; ಜೋರಾಗಿ ಮಳೆ ಸುರಿಸಬೇಡ. ಅವರ ಪ್ರೇಮಧ್ಯಾನಕ್ಕೆ ಭಂಗ ಬರದ ರೀತಿಯಲ್ಲಿ ಮುಂದಕ್ಕೆ ಚಲಿಸು’ ಎಂದು ಈಗಿನ ಆಸ್ಪತ್ರೆಗಳ ಮುಂದೆ ಹಾಕಿರುವ ‘ಸೈಲೆಂಟ್ ಝೋನ್’ ಮಾದರಿಯ ಆದೇಶಗಳನ್ನೊಮ್ಮೆ;
‘ಅದೋ ಆ ಗುಡ್ಡದ ಮೇಲಿರುವ ಬುಡಕಟ್ಟು ಜನರು ನೃತ್ಯಗೀತೆಗಳಲ್ಲಿ ನಿರತರಾಗಿದ್ದಾರೆ. ಅವನ್ನು ನೋಡಿ ಆನಂದಿಸು. ಆದರೆ ಒಂದು ರಾತ್ರಿಗಿಂತ ಹೆಚ್ಚು ನಿಲ್ಲಬೇಡ’ ಎಂದು tour itineraryಯನ್ನೊಮ್ಮೆ;
‘ಅದೋ ನೋಡು, ಶಿವಪಾರ್ವತಿಯರು ವಾಕಿಂಗ್ ಹೊರಟಿದ್ದಾರೆ. ಅವರದು ಆರೋಹಣಪ್ರವಾಸ. ಅವರ ನಡಿಗೆಗೆ ಅನುವಾಗುವಂತೆ ನೀನು ಮಣಿಖಚಿತ ಮೆಟ್ಟಿಲುಗಳ ಆಕಾರವನ್ನು ಪಡೆದು ನೀನೇ ಮುಂದಾಗಿ ಅವರನ್ನು ಆ ಮೆಟ್ಟಿಲನ್ನು ಮೆಟ್ಟಲು ಆಹ್ವಾನಿಸು’ ಎಂಬ ಆದೇಶ ಮಗದೊಮ್ಮೆ, ಹೀಗೆ ಐವತ್ತಕ್ಕೂ ಹೆಚ್ಚು ಪದ್ಯಗಳಲ್ಲಿ ಕಾಳಿದಾಸನು ಮೇಘದ jolly tour ಅನ್ನು ದುರ್ಭರ office trip ಆಗಿ ಬದಲಿಸಿಬಿಟ್ಟ.
ಬಡಪಾಯಿ ಮೇಘವು ಯಕ್ಷನಿತ್ತ ಸಂದೇಶವನ್ನು ಯಥಾವತ್ತಾಗಿ ರಕ್ಷಿಸಿಕೊಳ್ಳಬೇಕು; ಆಕಾರವೂ ಬದಲಾಗಬೇಕು! ಮೇಘಕ್ಕೆ ಮೆದುಳೆಂಬುದೊಂದಿದ್ದು, ಅದರಲ್ಲೊಂದಿಷ್ಟು ಮೆಮೊರಿ ಚಿಪ್ಸ್ ಇದ್ದರೆ ಪರವಾಯಿಲ್ಲ; ಇಲ್ಲವಾದರೆ ಮೈಮೇಲೆ ಸಂದೇಶವನ್ನು ಬರೆದುಕೊಂಡೇ ಸಾಗಬೇಕು. ಹೀಗೆ ಸಂದೇಶಲಿಖಿತವಾದ ಮೈಯ ಆಕಾರವನ್ನು ಬದಲಿಸಿದಾಗ ಸಂದೇಶವ್ಯತ್ಯಯವಾದರೆ ಮೇಘ ಹೊಣೆಯೋ, ಯಕ್ಷ ಹೊಣೆಯೋ? ನಿಜಕ್ಕೂ ಮೇಘಕ್ಕೆ ಮನಸ್ಸೆಂಬುದೊಂದಿದ್ದರೆ ಅದು ಕಾಳಿದಾಸನಿಗೆ ‘ಮೈಂಡ್ ಯುವರ್ ಓನ್ ಬಿಸಿನೆಸ್. ಐ ವಿಲ್ ಟ್ರಾವಲ್ ವೇರ್ ಐ ವಾಂಟ್, ವೆನ್ ಐ ವಾಂಟ್! ಐ ಯಾಮ್ ನೋ ಸರ್ವೆಂಟ್ ಆಫ್ ಎನಿ ಮಾಸ್ಟರ್’ ಎಂದು ಗುಡುಗುತ್ತಿತ್ತೋ ಏನೋ!
ಕಾಳಿದಾಸನ ಮಾತನ್ನು ನಿಜವಾಗಿಯೂ ಮೇಘವು ಕೇಳಿತ್ತೆಂಬುದಕ್ಕೆ ದಾಖಲೆಯಿದ್ದರೆ ನಮ್ಮ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮಂದಿ ಸುಮ್ಮನಿರುತ್ತಿದ್ದರೆ? ‘ಹೇ ಮಿಸ್ಟರ್ ಕ್ಲೌಡ್, ಮುನಿಯಪ್ಪನ ಗದ್ದೆಯ ಭತ್ತಕ್ಕೆ ಹೆಚ್ಚು ನೀರನ್ನು ಸ್ಪ್ರಿಂಕಲಿಸು; ಪಕ್ಕದಲ್ಲಿರುವ ತಿಮ್ಮಯ್ಯನ ಕಲ್ಲಂಗಡಿಹಣ್ಣಿನ ಬೆಳೆಗೆ ಹೆಚ್ಚು ನೀರು ಬೇಕಾಗಿಲ್ಲವಾದ್ದರಿಂದ ಕ್ಷೌರಿಕನು ಗಿರಾಕಿಯ ಮುಖದ ಶೇವ್ ಮಾಡುವುದಕ್ಕೆ ಮುಂಚೆ ಮುಖಕ್ಕೆ ಸಿಂಪಡಿಸುವ ನೀರಿನಷ್ಟೇ ಪ್ರಮಾಣದ ನೀರನ್ನು ಅಲ್ಲಿ ಉದುರಿಸಿ ಮುಂದಕ್ಕೆ ಸಾಗು. ಗೋಯಿಂದಯ್ಯನ ಹೊಲದಲ್ಲಿ ಕಬ್ಬಿನ ಬೆಳೆ ಇದೆ. ನಿನ್ನೊಂದು ಮೋಡತುಕುಡಿಯನ್ನು ಇಲ್ಲಿ ಪರ್ಮನೆಂಟಾಗಿ ನಿಲ್ಲಿಸಿ ಅವಶ್ಯವಿದ್ದಾಗಲೆಲ್ಲ ಹನಿಸುತ್ತಿರು’ ಎಂದೆಲ್ಲ ಖಡಕ್ ಆದೇಶಗಳನ್ನು ಹೊರಡಿಸುತ್ತಿದ್ದುದು ನಿಶ್ಚಿತ.
ಕಾಳಿದಾಸನ ‘ಕ್ಲೌಡ್ ಮೆಸೇಜ್’ ಮುಂದೆಯೂ ಅಲ್ಲಲ್ಲಿ ಕಂಡುಬಂದಿದೆ. ಪುಟ್ಟಣ್ಣ ಕಣಗಾಲರ ಚಿತ್ರವೊಂದರಲ್ಲಿ ‘ಸಂದೇಶ; ಮೇಘಸಂದೇಶ’ ಎಂಬ ಗೀತೆಯು ಯಕ್ಷನ ಮೇಘವನ್ನು ನೆನಪಿಸಿದರೆ, ‘ಶೃಂಗಾರ ಕಾವ್ಯ’ ಚಿತ್ರದ ಗೀತೆಯೊಂದರ ಮೂಲಕ ಹಂಸಲೇಖರು ಮೇಘಕ್ಕೆ ಮತ್ತೆ ಪೋಸ್ಟ್‍ಮ್ಯಾನ್ ಡ್ಯೂಟಿಯನ್ನು ಒಪ್ಪಿಸಿದ್ದಾರೆ. ಅಂತೂ ಸೂರ್ಯಚಂದ್ರರೊಡನೆ ಹೈಲೆವೆಲ್ ಮೀಟಿಂಗ್ ನಡೆಸಿಕೊಂಡು ಹಾಯಾಗಿದ್ದ ಮೋಡವು ಕವಿಗಳ ಕೈಬಾಯಿಗೆ ಸಿಕ್ಕಿ ಮೆಸೆಂಜರ್ ಬಾಯ್ ಆಗಬೇಕಾಯಿತು!
ಮೋಡದ ಹೆಸರುಗಳಲ್ಲೆಲ್ಲ ಮೋಸ್ಟ್ ಫೇಮಸ್ ಆಗಿರುವುದೇ ಮಂಜು. ಅಸಲಿಗೆ ಅದು ಮೋಡವಲ್ಲದೆ ಮೋಡದ ಬೈಪ್ರಾಡಕ್ಟ್ ಆದರೂ ಅದರ ಜನಪ್ರಿಯತೆಗೆ ಎಣಿಯಿಲ್ಲ. ಮಂಜಿಗೆ ಕನ್ನಡದಲ್ಲೇನೋ ಮಂಜು ಎನ್ನುವುದು ಸರಿಯೇ. ಆದರೆ ಆಂಗ್ಲದಲ್ಲಿ? ಇದನ್ನು ಕರೆಯುವ ಪರಿಗೂ, ಇದು ಕೆಲವೊಮ್ಮೆ ಇರುವ ಪರಿಗೂ ಸಂಬಂಧವೇ ಇಲ್ಲ. ವೈನಿನ ಲೋಟವನ್ನು ವೈನವಾಗಿ ಏರಿಸುತ್ತಾ ಕಿಟಕಿಯಿಂದಾಚೆಗೆ ದೃಷ್ಟಿ ಹರಿಸಿ ‘ಲುಕ್ ಎಟ್ ದ ಸ್ನೋ’ ಎನ್ನುತ್ತಾರೆ. ಹೊರಹೋಗಿ ನೋಡಿದರೆ ಬಿದ್ದ ಸ್ನೋ ಪುಡಿಪುಡಿಯಾಗಿರುತ್ತದೆ. ‘ಪೇಸ್ಟಿನಂತಿರುವುದು ಸ್ನೋ; ಪುಡಿಪುಡಿಯಾಗಿರುವುದು ಪೌಡರ್. ನೆಲಕ್ಕಿಳಿದ ಪುಡಿಯನ್ನು ಪೌಡರ್ ಎನ್ನುವುದರ ಬದಲು ಸ್ನೋ ಎನ್ನುವ ಪರಮದಡ್ಡರೇ ಬ್ರಿಟಿಷರು’ ಎನ್ನುವುದು ಮೇಕಪ್ ಆರ್ಟಿಸ್ಟೊಬ್ಬನ ಖಚಿತ ಅಭಿಪ್ರಾಯ!
ಮಂಜು ವಿಸ್ಮಯಗಳ ಆಗರವೇ ಸೈ. ಇಳೆಯು ಚಳಿಯೆಂದು ನಡುಗಿದಾಗ ನಭನೆಂಬ ಪ್ರಿಯಕರನು ತನ್ನಿನಿಯಳಿಗೆ ಹೊದೆಯಲೆಂದು ನೀಡುವ ಶ‍್ವೇತವರ್ಣದ ದಪ್ಪನೆಯ ಹಚ್ಚಡವೇ ಮಂಜು ಎಂದರೆ ಹಿಮವತ್ಪರ್ವತವು ಅಹುದಹುದೆಂದೀತು. ಆದರೆ ಆ ಹಚ್ಚಡವು ಗಗನದಲ್ಲಿ ತಯಾರಾದುದಲ್ಲ; ನಭನು ನೀಡಿದ ಮೋಡದ ಎಳೆಗಳನ್ನು ದಾರವಾಗಿಸಿಕೊಂಡು ಗಾಳಿಯು ಶೈತ್ಯದ ಮಗ್ಗದಲ್ಲಿ ತಯಾರಿಸುವ ‘ಎಡಿಬಲ್’ ಚಾದರ. ಎಳೆಯ ಕೈಗಳಿಂದ ಎಳೆಯ ಮನಸ್ಸಿನಂತೆಯೇ ಸುಲಭವಾಗಿ ಮೌಲ್ಡ್ ಮಾಡಲ್ಪಡುವ ಸಾಮಗ್ರಿಯಾಗಿ ‘ಚೂರ್ಣದಿಂದ ಪೂರ್ಣದವರೆಗೆ’ ಮನುಷ್ಯನ ಆಕಾರ ತಳೆದು ಸ್ನೋಮ್ಯಾನ್ ಅನಿಸಿಕೊಳ್ಳಬಲ್ಲ ವಸ್ತು; ಕುಳಿರ್ಗಾಳಿಯಲ್ಲೂ ಕ್ರೀಡಾಸಕ್ತರಾದವರ ಹಸ್ತದಲ್ಲೇ ತಯಾರಾಗುವ ಇನ್‍ಸ್ಟೆಂಟ್ ಚೆಂಡು ಉರುಫ್ ಸ್ನೋಬಾಲ್; ಗಿರಿಪರ್ವತಗಳ ‘ಈಸಿ ಛೇರ್’ ಭಂಗಿಗೆ ತಕ್ಕಂತೆ ಹೊದಿಸಲಾಗಿರುವ, ಸ್ಕೀಯಿಂಗ್ ಆಟಗಾರರು ಹೊಕ್ಕಲು ಅನುಕೂಲವಾಗುವ ಹಾಸು; ಸೂಕ್ಷ್ಮ ಪ್ರದೇಶಗಳಲ್ಲಿ ಜೋರಾಗಿ ಕೂಗಿದರೂ ಕಂಪನಗಳಿಂದಲೇ ಜನ್ಮತಳೆದು ಶಿಖರದಿಂದ ತೀವ್ರವೇಗದಲ್ಲಿ ಉರುಳುತ್ತಾ ಸಾಗಿ ಅಪ್ಪಳಿಸುವ ಅವಲಾಂಚೆ(Avalanche)! ರೌದ್ರವೂ, ಮೋಹಕವೂ, ಕ್ರೀಡಾಸ್ಪದವೂ ಆದ ಮಂಜಿಗೆ ಮನಸೋತ ರಾಜರತ್ನಂ ಮಂಜನ್ನು ವರ್ಣಿಸಿರುವ ಪರಿಗೆ ಸಾಟಿಯುಂಟೇಂ?
ಭೂಮೀನ್ ತಬ್ಬಿದ್ ಮೋಡಿದ್ದಂಗೆ
ಬೆಳ್ಳಿ ಬಳಿದಿದ್ ರೋಡಿದ್ದಂಗೆ
ಸಾಫಾಗಳ್ಳತಿಟ್ಟಿಲ್ದಂಗೆ
ಮಡ್ಕೇರೀಲೀ ಮಂಜು...
ಮಡಗಿದ್ದಲ್ಲೇ ಮಡಗಿದ್ದಂಗೆ
ಲಂಗರ್ಬಿದ್ದಿದ್ದಡಗಿದ್ದಂಗೆ
ಸೀತಕ್ ಸಕ್ತಿ ಉಡುಗೋದಂಗೆ
ಅಳ್ಳಾಡಲ್ದು ಮಂಜು !
ಎನ್ನುತ್ತಾ ಸಾಗುವ ಪದ್ಯವನ್ನು ಮುಂದುವರಿಸುತ್ತಾ ‘ತಾಯಿ ಮೊಗೀನ್ ಎತ್ಕೊಂಡಂಗೆ; ಒಂದಕ್ಕೊಂದು ಆತ್ಕೊಂಡಂಗೆ’ ಎನ್ನುತ್ತಾರೆ ರಾಜರತ್ನಂ. ಪರಸ್ಪರ ಆತ್ಮೀಯ ಬೆಸುಗೆಗೆ ಇದಕ್ಕಿಂತಲೂ ಉತ್ತಮ ಉದಾಹರಣೆ ದುರ್ಲಭ.
ನಾರದರ ಹೈವೇ ಆದ ಮೋಡಗಳು ವಿವಿಧ ಕವಿಗಳ ಕೈಯಲ್ಲಿ ವಿವಿಧ ಪಾತ್ರಗಳನ್ನು ಪಡೆದಿವೆ. ‘ಮಾತಿಗೊಂದು ಅರ್ಥವೇಕೆ ಅರ್ಥವಿದ್ದರಷ್ಟೆ ಸಾಕೆ; ಮೋಡಗಳನು ನೋಡಿ ಕಲಿ; ಅರ್ಥ ಅಲ್ಪವೆಂದು ತಿಳಿ’ ಎನ್ನುತ್ತಾ ಕುವೆಂಪು ಮೋಡಗಳಿಗೆ ಗುರುವಿನ ಸ್ಥಾನವನ್ನು ಕಲ್ಪಿಸಿದರೆ, ವಸಂತಲಕ್ಷ್ಮೀ ಚಿತ್ರದಲ್ಲಿ ಬೆಳ್ಳಿ ಮೋಡವೆ,ಎಲ್ಲಿ ಓಡುವೆ,ನನ್ನ ಬಳಿಗೆ ನಲಿದು ಬಾ ನನ್ನ ನಲ್ಲನ,ಕಂಡು ಈ ಕ್ಷಣ,ನನ್ನ ಒಲವ ತಿಳಿಸಿ ಬಾ’ ಎನ್ನುತ್ತಾ ಮೋಡಕ್ಕೆ ಮತ್ತೆ ಅಂಚೆಯವನ ಕೆಲಸವನ್ನು ಕೊಡಮಾಡಿದ್ದಾರೆ. ಹಿಂದಿಯ ಕವಿಗಳಂತೂ ಮೋಡಗಳಿಗೆ ಕೆಲಸವನ್ನು ಹಚ್ಚುವುದರಲ್ಲಿ ನಿಸ್ಸೀಮರು. ‘ಏ ಬಾದಲ್ ಝೂಮಕೇ ಚಲ್’ ಎಂದು ಸೋಮಾರಿ ಮೋಡಕ್ಕೆ ಆತುರಪಡಿಸುವ ಇವರಿಗೆ ಕಪ್ಪುಮೋಡಗಳು ಪ್ರೇಮ ಋತುವಿನ ಆಗಮನದ ಸಂಕೇತ. ‘ಕಾಲಿ ಘಟಾ ಛಾಯಿ; ಪ್ರೇಮ್ ಋತು ಆಯಿ’ ಎನ್ನುತ್ತಾ ಪ್ರೇಮಕವನಗಳ ರಚನೆಗೆ ತೊಡಗಿಬಿಡುತ್ತಾರೆ. ಈ ಕವಿಗಳಿಗೆ ದುಃಖದ ಸನ್ನಿವೇಶದಲ್ಲಂತೂ ಮೋಡಗಳು ಇರಲೇಬೇಕು. ಪ್ರೇಮವಂಚಿತನಾದ ನಾಯಕನಿಗೆ ಕಣ್ಣೀರಿನ ಸ್ಟಾಕ್ ಕಡಿಮೆಯಾದರೆ ಅದನ್ನು ತುಂಬಿಕೊಡಲು ಮೋಡಗಳು ಇರಬೇಕು. ‘ಘಟಾವೋ ತುಮ್ಹೇ ಸಾಥ್ ದೇನಾ ಪಡೇಗಾ; ಮೈ ಫಿರ್ ಆಜ್ ಆಸೂ ಬಹಾನೇ ಚಲಾ ಹೂ’ ಎಂದು ನಾಯಕನು ಗೋಳ್ಹಾಡುವುದೇ ಇದಕ್ಕೆ ನಿದರ್ಶನ. ಮಿಸ್ಟರ್ & ಮಿಸೆಸ್ 55 ಚಿತ್ರದಲ್ಲಿ ಮಾತ್ರ ‘ಠಂಡಿ ಹವಾ ಕಾಲಿ ಘಟಾ ಆ ಹಿ ಗಯೀ ಝೂಮ್ ಕೇ’ ಎಂದು ಮೋಡಕ್ಕೆ ಯಾವುದೇ ಕೆಲಸವನ್ನು ಹಚ್ಚದೆ ಸಂತೋಷದಿಂದ, ಮೋಡವನ್ನು ಸ್ವಾಗತಿಸಿರುವುದು ಕಂಡುಬರುತ್ತದೆ.
ಇವೆಲ್ಲವೂ ಆಗಸದಲ್ಲಿ ಕಲೆಯುವ, ಅಲೆಯುವ ಮೋಡಗಳದ್ದಾಯಿತು. ತಾಂತ್ರಿಕವಾಗಿಯೂ ಮೋಡಗಳು ನಮಗೆ ಅನಿವಾರ್ಯವಾಗಿವೆ. Cloud computing, Cloud transfer, Cloud storage ಇಲ್ಲದಿದ್ದರೆ ಕಂಪ್ಯೂಟರಿಗಳು ಹ್ಯಾಂಗ್ ಆಗಿ ಹ್ಯಾಂಗ್ಹ್ಯಾಂಗೋ ಆಡ್ಯಾವು; ಮೊಬೈಲ್ ಫೋನುಗಳ ಕೆಪ್ಯಾಸಿಟಿ ತುಂಬಿ ಮುಷ್ಕರಕ್ಕೆ ಬಿದ್ದಾವು. ವರುಣನ ಫೇವರಿಟ್ ವೆಹಿಕಲ್ ಆದ ಮೋಡವು ‘in with the times’ ಆಗುವುದರ ಮೂಲಕ ಕಾಳಿದಾಸನ ಕಾಲದಿಂದ ಖಾಲಿದೋಸೆಯ ಕಾಲದವರೆಗೆ ಪ್ರಸ್ತುತವೆನಿಸಿಕೊಂಡಿದೆ. ಅಮೀಬಾದಂತೆ ಆಕಾರ ಬದಲಿಸುತ್ತಾ, ರಾಜಕಾರಣಿಗಳಂತೆ ದಿಕ್ಕು ಬದಲಿಸುತ್ತಾ, ಕನ್ನಡ ಟೆಲಿಸೀರಿಯಲ್‍ಗಳಂತೆ ಕ್ಲಿನ್ನತೆಯ ಭಂಡಾರವೇ ಆಗಿರುತ್ತಾ, ಸಮಯಕ್ಕೆ ಸರಿಯಾಗಿ ಒದಗಿಬಂದು ಎಷ್ಟೋ ಕ್ರಿಕೆಟ್ ಟೀಮುಗಳನ್ನು ಗ್ಯಾರಂಟಿ ಸೋಲಿನಿಂದ ಬಚಾವ್ ಮಾಡುತ್ತಾ, ‘ಆಷಾಢಸ್ಯ ಪ್ರಥಮ ದಿವಸೇ’ ಸಾಹಿತ್ಯಪ್ರೇಮಿಗಳಿಗೆ ತಪ್ಪದೆ ಕಾಳಿದಾಸನ ನೆನಪನ್ನು ಮಾಡಿಕೊಡುತ್ತಾ, ರಸಿಕಶಿಖಾಮಣಿಗಳ ಬೇಡಿಕೆಗೆ ಕರಗಿ ನೀರಾಗಿ ‘ಝಿಂದಗೀ ಭರ್ ನಹೀ ಭೂಲೇಗಿ ಓ ಬರಸಾತ್ ಕಿ ರಾತ್; ಏಕ್ ಅಂಜಾನ್ ಹಸೀನಾ ಸೇ ಮುಲಾಕಾತ್ ಕೀ ರಾತ್’ ಎಂದು ಹಾಡಲೋ, ‘ಬಾ ಮಳೆಯೆ ಬಾ; ಇಷ್ಟು ಬಿರುಸಾಗಿ ಬಾರದಿರು; ನನ್ನ ನಲ್ಲೆ ಬರಲಾಗದಂತೆ; ಅವಳಿಲ್ಲಿ ಬಂದೊಡನೆ ಬಿರುಸಾಗಿಬಿಡು; ಅವಳು ಹಿಂತಿರುಗಿ ಹೋಗದಂತೆ’ ಎಂದು ಪ್ರಾರ್ಥಿಸಲೋ ಪ್ರೇರಣೆ ನೀಡುವ ಮೋಡಗಳ ಜಗತ್ತು ಅನೂಹ್ಯ, ಅಪಾರ, ಅವರ್ಣನೀಯ.

Comments
Post a Comment