ಮಹಾಭಾಗರಾದ ಅಷ್ಟವಸುಗಳು

ಮಹಾಭಾಗರಾದ ಅಷ್ಟವಸುಗಳು 

ಲೇಖನ - ಬೇಲೂರು ರಾಮಮೂರ್ತಿ



ಇಕ್ಷ್ವಾಕು ವಂಶದ ರಾಜ ಮಹಾಭಿಷ. ದೇವತೆಗಳ ಬ್ರಹ್ಮೋಪಾಸನೆಯಲ್ಲಿ ಭಾಗವಹಿಸಿದ್ದ. ಗಂಗಾದೇವಿ ಅಲ್ಲಿಗೆ ಬಂದಾಗ ಬೀಸಿದ ಬಿರುಗಾಳಿಗೆ ಅವಳು ವಿವಸ್ತçಳಾದಳು. ಎಲ್ಲ ದೇವತೆಗಳು ತಲೆ ತಗ್ಗಿಸಿ ಕೂತಿದ್ದರೂ ಮಹಾಭಿಷ ಮಾತ್ರ ವಿವಸ್ತçಳಾದ ಗಂಗೆಯನ್ನು ರೆಪ್ಪೆಯಾಡಿಸದೇ ನೋಡಿದ. ಆಗ ಬ್ರಹ್ಮ ಬಹಳ ಕೋಪದಿಂದ ಸಕಲಕಾಮನೆಗಳನ್ನೂ ಪರಿತ್ಯಜಿಸಿದ ಪುಣ್ಯಲೋಕ ಇದು. ಗಂಗೆಯನ್ನು ನೋಡಿ ಕಾಮನೆಯನ್ನು ಕೆರಳಿಸಿಕೊಂಡ ನೀನು ಇಲ್ಲಿರಲು ಯೋಗ್ಯನಲ್ಲ. ನೀನು ಮರ್ತ್ಯಲೋಕದಲ್ಲಿ ಜನಿಸಿ ನಿನ್ನ ಕಾಮನೆಗಳನ್ನು ಪೂರೈಸಿಕೊಂಡು ಹಿಂದಿರುಗು. ಗಂಗೆಗೆ ನೀನು ಮಾಡಿದ ಈ ಅಪರಾಧಕ್ಕಾಗಿ ಭೂಲೋಕದಲ್ಲಿ ಅವಳು ನಿನಗೆ ಬೇಡದ ಕೆಲಸಗಳನ್ನು ಮಾಡುತ್ತಿದ್ದರೂ ಕಾಮಾಭಿಭೂತನಾದ ನೀನು ಅವುಗಳನ್ನು ಸಹಿಸಿಕೊಳ್ಳಲೇಬೇಕು. ಅವಳ ಕಾರ್ಯಕ್ಕೆ ಅಡ್ಡಿಪಡಿಸಿದಾಗ ನಿನಗೆ ಮುಕ್ತಿ ಎಂದ. 

ಬ್ರಹ್ಮನ ಶಾಪವನ್ನು ಕೇಳಿಸಿಕೊಂಡ ಗಂಗೆಯೂ ಮಹಾಭಿಷನನ್ನೇ ಧ್ಯಾನಿಸುತ್ತಾ ಭೂಲೋಕಕ್ಕೆ ಹೊರಟಳು. ತನ್ನನ್ನು ಹಿಂಬಾಲಿಸುತ್ತಿದ್ದ ಸ್ವರ್ಗವಾಸಿಗಳಾದ ವಸುಗಳನ್ನು ನೋಡಿ ಏನಾದರೂ ಸಮಸ್ಯೆಯಾ ಎಂದು ಕೇಳಿದಳು. ಅದಕ್ಕೆ ವಸುಗಳಲ್ಲೊಬ್ಬನಾದ ಪೃಥು ನಾವು ಕಾಡಿನಲ್ಲಿ ವಿಹಾರ ಮಾಡುತ್ತಿದ್ದೆವು. ಆಗ ಅಲ್ಲಿ ಸಂಧ್ಯೋಪಾಸನೆಯನ್ನು ಮಾಡುತ್ತಿದ್ದ ವಸಿಷ್ಠರ ಹೋಮಧೇನುವನ್ನು ಕದ್ದೆವು. ಅದಕ್ಕಾಗಿ ಮಹರ್ಷಿಗಳು ನಮಗೆ ಯೋನಿಜರಾಗಿ ಎಂದು ಶಾಪ ಕೊಟ್ಟರು. ಹೀಗಾಗಿ ನಾವು ಭೂಮಿಯಲ್ಲಿ ಮನುಜರಾಗಿ ಜನ್ಮ ತಾಳಲೇಬೇಕಾಗಿದೆ. ಆದರೆ ಭೂಮಿಯಲ್ಲಿ ನಮಗೆ ಯಾವ ಮಾನವ ಸ್ತಿçÃಯರ ಗರ್ಭವನ್ನು ಪ್ರವೇಶಿಸಲೂ ಇಷ್ಟವಿಲ್ಲ. ಅದಕ್ಕೆ ನೀನೇ ಮನುಷ್ಯಳಾಗಿ ಭೂಮಿಯಲ್ಲಿ ಅವತರಿಸಿ ನಮ್ಮ ತಾಯಿಯಾಗು ಎಂದು ಬೇಡಿದರು. ಸ್ವಲ್ಪ ಯೋಚಿಸಿದ ಗಂಗೆ ಆಗಬಹುದು, ಆದರೆ ನನಗೆ ಗರ್ಭದಾನ ಮಾಡುವ ಒಬ್ಬ ಮಹಾಪುರುಷನ ಅಗತ್ಯವಿದೆ. ಭೂಲೋಕದಲ್ಲಿ ನಿಮ್ಮ ತಂದೆಯೆನಿಸಿಕೊಳ್ಳಲು ಅರ್ಹತೆಯುಳ್ಳ ವ್ಯಕ್ತಿ ಯಾರಿದ್ದಾರೆ ಎಂದು ಕೇಳಿದಳು. ಅದಕ್ಕೆ ಮತ್ತೊಬ್ಬ ವಸು ನಾವು ಇದನ್ನು ಆಗಲೇ ಯೋಚಿಸಿದ್ದೇವೆ. ಪ್ರತೀಪ ಮಹಾರಾಜನಿಗೆ ಶಾಂತನುವೆಂಬ  ಲೋಕವಿಖ್ಯಾತನಾದ ಮಗ ಹುಟ್ಟುವನು. ಭೂಲೋಕದಲ್ಲಿ ಅವನೇ ನಮ್ಮ ತಂದೆಯಾಗಲು ಅರ್ಹ ಎಂದ. ಗಂಗೆಗೆ ಬ್ರಹ್ಮಲೋಕದಲ್ಲಿ ನಾನು ವಿವಸ್ತçಳಾಗಿದ್ದುದನ್ನು ನೋಡಿದ ಮಹಾಭಿಷನೇ ಶಾಂತನುವಾಗಿ ಹುಟ್ಟುವನೆಂದು ತಿಳಿಯಿತು. ಹೀಗಾಗಿ ಗಂಗೆ ವಸುಗಳ ಮಾತಿಗೆ ಸಮ್ಮಸಿಸಿದಳು. ನಂತರ ಮತ್ತೊಬ್ಬ ವಸು ಗಂಗಾದೇವಿಯೇ ನೀನು ನಮ್ಮ ಮತ್ತೊಂದು ಪ್ರಾರ್ಥನೆಯನ್ನೂ ನಡೆಸಿಕೊಡಬೇಕು. ನಾವು ವಸಿಷ್ಠರ ಶಾಪದ ಫಲವನ್ನು ಅನಿವಾರ್ಯವಾಗಿ ಅನುಭವಿಸಬೇಕಾಗಿದೆ. ಆದರೆ ನಾವು ಅವರ ಶಾಪದನ್ವಯ ಭೂಲೋಕದಲ್ಲಿ ಹುಟ್ಟಲು ಒಪ್ಪಿದ್ದೇವೆಯೇ ಹೊರತು ಭೂಮಿಯಲ್ಲಿಯೇ ದೀರ್ಘಕಾಲ ಉಳಿಯುವ ಇಚ್ಛೆಯಿಲ್ಲ. ಅದಕ್ಕೆ ನಾವು ಒಬ್ಬೊಬ್ಬರಾಗಿ ನಿನ್ನಲ್ಲಿ ಹುಟ್ಟುತ್ತಿರುವಂತೆಯೇ ನೀನು ನಮ್ಮನ್ನು ನೀರಿನಲ್ಲಿ ಬಿಟ್ಟುಬಿಡಬೇಕು. ಇದರಿಂದಾಗಿ ನಾವು ಯೋನಿಜರಾದಂತೆಯೂ ಆಗುತ್ತದೆ ಮತ್ತು ವಸಿಷ್ಠರ ಶಾಪವನ್ನು ಅನುಭವಿಸಿದಂತೆಯೂ ಆಗುತ್ತದೆ ಎಂದರು. ನಂತರ ಗಂಗೆ ನೀವು ಹೇಳಿದಂತೆಯೇ ಮಾಡುತ್ತೇವೆ, ಆದರೆ ಸತ್ಪುತ್ರರಾಗಬೇಕೆನ್ನುವ ಕಾಮನೆಯಿಂದಲೇ ಸ್ತಿçÃಪುರುಷರ ಸಮಾಗಮವಾಗುವುದರಿಂದ ಮತ್ತು ಶಾಂತನುವಿನೊAದಿಗಿನ ನನ್ನ ಸಮಾಗಮ ವ್ಯರ್ಥವಾಗದಂತೆ ನನ್ನ ಮತ್ತು ಶಾಂತನುವಿನ ಸಮಾಗಮದ ಫಲವಾಗಿ ನಿಮ್ಮಲ್ಲಿ ಒಬ್ಬನಾದರೂ ಉಳಿಯಲೇಬೇಕು ಎಂದಳು. ಇನ್ನೊಬ್ಬ ವಸು, ಆಗಲಿ ಗಂಗಾಮಾತೆ, ನಮ್ಮ ಎಂಟೂ ಜನರ ಶಕ್ತಿಯ ಒಂದAಶವನ್ನು. ನಿಮ್ಮಲ್ಲಿ ಯಾರು ಉಳಿಯುತ್ತೀರ ಎನ್ನುವುದನ್ನು ನೀವೇ ನಿರ್ಧರಿಸಿ ಎಂದಳು. ಆಗ ಮತ್ತೊಬ್ಬ ವಸು ನಾವು ಏಳು ವಸುಗಳು ನಮ್ಮ ಶಕ್ತಿಯನ್ನು ಒಟ್ಟಾಗಿ ಕೂಡಿಸಿ ಶಾಂತನುವಿನ ಒಬ್ಬ ಮಗ ನಿನ್ನಲ್ಲಿ ಹುಟ್ಟುವಂತೆ ಮಾಡುತ್ತೇವೆ. ಅಷ್ಟೇ ಅಲ್ಲ ಅವನು ಚಿರಕಾಲ ಭೂಮಿಯಲ್ಲಿ ಉಳಿದು, ಶಾಂತನುವಿಗೆ ಬಹಳ ಇಷ್ಟವಾಗುವುದರ ಜೊತೆಗೆ ಅವನ ಆಜ್ಞಾರಾಧಕನೂ ಆಗಿರುತ್ತಾನೆ. ಭೂಲೋಕದಲ್ಲಿರುವಾಗ ಅವನು ವೀರ್ಯವಂತನಾದರೂ ಅಪುತ್ರವಂತನಾಗಿಯೇ ಇದ್ದು ಅವಸಾನವನ್ನು ಹೊಂದುತ್ತಾನೆ. ಇದಕ್ಕೆ ನಿನ್ನ ಸಮ್ಮತಿಯಿದೆ ಎಂದುಕೊAಡಿದ್ದೇವೆ ಎಂದು ಹೇಳಿದರು. 

ಇತ್ತ ಕುರುವಂಶದ ರಾಜನಾದ ಪ್ರತೀಪ ಜಪಮಾಡುತ್ತಾ ಕೂತಿದ್ದಾಗ ಭೂಮಿಗೆ ಇಳಿದುಬಂದ ಗಂಗೆ ನೇರವಾಗಿ ಅವನ ಬಲತೊಡೆಯ ಮೇಲೆ ಕೂತು ನೀನು ನನ್ನನ್ನು ಮದುವೆಯಾಗು ಎಂದು ಕೇಳಿದಳು. ಅದಕ್ಕೆ ಪ್ರತೀಪ ನಾವು ಕ್ಷತ್ರಿಯರನ್ನು ಬಿಟ್ಟು ಬೇರೆಯವರನ್ನು ಮದುವೆಯಾಗುವಂತಿಲ್ಲ. ಜೊತೆಗೆ ಹೆಣ್ಣುಮಕ್ಕಳು ಮತ್ತು ಸೊಸೆಯರು ಮಾತ್ರ ಗಂಡಸಿನ ಬಲ ತೊಡೆಯ ಮೇಲೆ ಕುಳಿತುಕೊಳ್ಳಲು ಅರ್ಹರಾಗಿರುತ್ತಾರೆ. ಬಲತೊಡೆಯು ಅವರಿಗಾಗಿ ಮೀಸಲಾಗಿರುತ್ತದೆ. ಎಡಭಾಗದ ತೊಡೆ ಕಾಮಿನಿಯರಿಗೆ ಮತ್ತು ಪತ್ನಿಗೆ ಮೀಸಲು. ನೀನು ನನ್ನ ಬಲತೊಡೆಯ ಮೇಲೆ ಕುಳಿತುಕೊಂಡಿದ್ದರಿAದ ನಾನು ನಿನ್ನ ವರಿಸಲು ಆಗುವುದಿಲ್ಲ. ಆದರೆ ನೀನು ನನ್ನ ಸೊಸೆಯಾಗಬಹುದು ಎಂದ. ಆಗ ಗಂಗೆ ಆಗಲಿ ಮಹಾರಾಜ, ನಾನು ನಿನ್ನ ಸೊಸೆಯಾಗಲು ಅಡ್ಡಿಯಿಲ್ಲ. ಆದರೆ ನಮ್ಮ ದಾಂಪತ್ಯದ ಸಮಯದಲ್ಲಿ ನಾನು ನಿನ್ನ ಮಗನ ಜೊತೆಯಿರುವಷ್ಟೂ ಕಾಲ ನಾನು ಅನುಸರಿಸುವ ನಿಯಮಗಳನ್ನು ಇಷ್ಟವಿರಲಿ ಇಲ್ಲದಿರಲೀ ಅವನೂ ಅವುಗಳನ್ನು ಒಪ್ಪಿಕೊಂಡಿರಲೇಬೇಕೇ ಹೊರತು ವಿವೇಚಿಸಲು ವಿಮರ್ಶಿಸಲು ಹೋಗಬಾರದು. ನನ್ನ ಸಂಬಂಧದಿಂದಾಗಿ ನಿನ್ನ ಮಗ ಪ್ರಿಯನಾದ, ಪುಣ್ಯಾತ್ಮನಾದ ಪುತ್ರನನ್ನು ಹೊಂದಿ ನಂತರ ಸ್ವರ್ಗ ಸೇರುವನು ಎಂದಳು. ಅಲ್ಲಿಯವರೆವಿಗೂ ಪ್ರತೀಪನಿಗೆ ಮಕ್ಕಳೇ ಆಗಿರಲಿಲ್ಲ. ಅದು ಅವನಿಗೆ ನೆನಪೂ ಇರಲಿಲ್ಲ. ನಂತರ ಪ್ರತೀಪ ಮಾಡಿದ ತಪಸ್ಸಿನಿಂದಾಗಿ ಪುತ್ರ ಭಾಗ್ಯ ದೊರೆಯಿತು. ಬ್ರಹ್ಮನ ಶಾಪದಿಂದಾಗಿ ಮಹಾಭಿಷನೇ ಪ್ರತೀಪನ ಪುತ್ರನಾಗಿ ಜನಿಸಿದ. ವಂಶವು ಶಾಂತವಾಗುವುದರಲ್ಲಿದ್ದಾಗ ಹುಟ್ಟಿದ್ದರಿಂದ ಮತ್ತು ತಂದೆ ತಪಸ್ಸಿನಲ್ಲಿ ನಿರತನಾಗಿದ್ದು ಶಾಂತವಾಗಿರುವಾಗ ಹುಟ್ಟಿದ್ದರಿಂದ ಅವನಿಗೆ ಶಾಂತನು ಎಂದು ಹೆಸರಿಟ್ಟರು. ದೊಡ್ಡವನಾದ ಶಾಂತನುಗೆ ಪಟ್ಟಾಭಿಷೇಕ ಮಾಡಿದ ಪ್ರತೀಪ ಮಗನನ್ನು ಕರೆದು ಮಗು ಶಾಂತನು, ಹಲವಾರು ವರ್ಷಗಳ ಹಿಂದೆ ಶ್ರೇಷ್ಠಳಾದ ಸ್ತಿçಯೊಬ್ಬಳು ನಿನ್ನ ಶ್ರೇಯಸ್ಸಿಗಾಗಿ ನನ್ನಲ್ಲಿಗೆ ಬಂದಿದ್ದಳು. ದೇವಕನ್ಯೆಯಾದ ಅವಳು ನಿನ್ನನ್ನು ಸಂಧಿಸಿ ಪ್ರಾರ್ಥಿಸಿದರೆ ನೀನು ಅವಳನ್ನು ವರಿಸು. ಅವಳು ಯಾರು, ಅವಳ ಕುಲಗೋತ್ರಗಳೇನು ಎನ್ನುವುದನ್ನು ಕೇಳಬೇಡ. ನಿನಗಿಷ್ಟವಾದ ಕೆಲಸಗಳನ್ನೇ ಆಗಲಿ ಇಷ್ಟವಿರದ ಕೆಲಸಗಳನ್ನೇ ಮಾಡಲಿ ನೀನು ಅವಳನ್ನು ಪ್ರೆಶ್ನಿಸಬೇಡ ಎಂದು ಹೇಳಿ ಪ್ರತೀಪ ವಾನಪ್ರಸ್ಥಕ್ಕೆ ಹೋದ. 

ವೀರಶೂರನಾಗಿದ್ದ ಶಾಂತನು ಒಮ್ಮೆ ಗಂಗಾತೀರದಲ್ಲಿ ವಿಹರಿಸುತ್ತಿದ್ದಾಗ ಅವನ ಕಣ್ಣಿಗೆ ಹುಣ್ಣಿಮೆಯ ಬೆಳಕಂತಿದ್ದ ಕಂಡ ಗಂಗೆಗೆ ಶಾಂತನು ತನ್ನ ಪ್ರೇಮವನ್ನು ನಿವೇದಿಸಿಕೊಂಡಾಗ ಗಂಗೆ ಕೆಲವು ಷರತ್ತುಗಳನ್ನು ಹೇಳಿದಳು. ಗಂಗೆಯ ಪ್ರೇಮದಲ್ಲಿ ಮೂಕನಾಗಿದ್ದ ಶಾಂತನು ಗಂಗೆ ಹೇಳಿದ್ದಕ್ಕೆಲ್ಲ ಒಪ್ಪಿಗೆ ಕೊಟ್ಟು ಅವಳನ್ನು ಮದುವೆಯಾದ. ಮಧುರವಾಗಿದ್ದ ಅವರ ಸುದೀರ್ಘ ದಾಂಪತ್ಯದ ಫಲವಾಗಿ ಎಂಟು ಮಕ್ಕಳು ಹುಟ್ಟಿದರು. ಆದರೆ ಒಂದೊAದು ಮಗು ಹುಟ್ಟಿದಾಗಲೂ ಗಂಗೆ ತ್ವಾಂ ಪ್ರೀಣಾಮ್ಯಹಂ (ನಾನು ನಿನ್ನನ್ನು ಸುಪ್ರೀತನನ್ನಾಗಿ ಮಾಡುತ್ತಿದ್ದೇನೆ) ಎಂದು ಮಗುವನ್ನು ಪ್ರವಾಹದಲ್ಲಿ ಹಾಕುತ್ತಿದ್ದಳು. ಏಳು ಮಕ್ಕಳನ್ನೂ ಗಂಗೆ ನೀರಿಗೆ ಹಾಕುವಾಗಲೂ ಶಾಂತನು ಸಂಕಟವಾಗುತ್ತಿದ್ದರೂ ಅವರ ನಡುವೆ ಆದ ಒಪ್ಪಂದದಿAದಾಗಿ ಗಂಗೆಯನ್ನು ತಡೆಯಲಾಗಲಿಲ್ಲ. ಆದರೆ ಎಂಟನೇ ಮಗುವನ್ನೂ ಗಂಗೆ ನೀರಿಗೆ ಹಾಕುವುದರಲ್ಲಿದ್ದಾಗ ಶಾಂತನು ತಡೆಯಲಾರದೇ ಮಗುವನ್ನೇಕೆ ಕೊಲ್ಲುತ್ತಿದ್ದೀಯ ನಿಲ್ಲಿಸು ಎಂದು ಅವಳನ್ನು ತಡೆದ. ಕೂಡಲೇ ಅವರ ನಡುವಿನ ಒಪ್ಪಂದ ಮುರಿಯಿತು. ನಾನು ಗಂಗೆ, ಜಹ್ನು ಮಹರ್ಷಿಯ ಮಗಳು ಜಾಹ್ನವಿ. ದೇವಕಾರ್ಯದ ಸಿದ್ಧಿಗಾಗಿ ಇಷ್ಟು ದಿನ ನಾನು ನಿನ್ನಲ್ಲಿದ್ದೆ. ನಾನು ನೀರಿಗೆ ಹಾಕಿದ ಏಳು ಮಕ್ಕಳೂ ಮತ್ತು ಈ ಎಂಟನೆಯ ಮಗುವೂ ಶಾಪಗ್ರಸ್ಥರಾಗಿದ್ದ ಮಹಾಭಾಗರಾದ ಅಷ್ಟವಸುಗಳು. ಅಂತಹ ಮಹಾಭಾಗರಿಗೆ ತಂದೆಯಾಗುವ ಅರ್ಹತೆ ನಿನ್ನ ಬಿಟ್ಟರೆ ಭೂಲೋಕದಲ್ಲಿ ಮತ್ತೊಬ್ಬರಿಗಿಲ್ಲ. ಅವರ ತಾಯಿಯಾಗುವ ಅರ್ಹತೆ ನನ್ನ ಹೊರತು ಇನ್ಯಾರಿಗೂ ಇಲ್ಲ್ಲ. ಇಲ್ಲಿಗೆ ನನ್ನ ಕರ್ತವ್ಯ ಮುಗಿದಿದೆ. ನಾನು ಹೋಗಿಬರುತ್ತೇನೆ. ಆ ಏಳು ಜನ ವಸುಗಳ ತೇಜಸ್ಸನ್ನೂ ಒಳಗೊಂಡಿರುವ ಈ ಎಂಟನೆಯ ಮಗುವನ್ನು ರಕ್ಷಿಸು. ನಮ್ಮಿಬ್ಬರ ಸಮಾಗಮ ವ್ಯರ್ಥವಾಗಬಾರದೆಂದು ದೀರ್ಘಾಯುಷ್ಯನಾದ ಪುತ್ರನೊಬ್ಬ ಜನಿಸಲಿ ಎಂದು ವಸುಗಳಲ್ಲಿ ಕೇಳಿಕೊಂಡಿದ್ದೆ. ಹೀಗಾಗಿ ಈ ಮಗುವನ್ನು ರಕ್ಷಿಸು. ಇವನು ದೀರ್ಘಕಾಲ ಪೃಥ್ವಿಯಲ್ಲಿ ಜೀವಿಸಿರುವನು ಎಂದು ಗಂಗೆ ಅದೃಶ್ಯಳಾದಳು. ಆ ಎಂಟನೆಯ ವಸು ರೂಪದ ಮಗುವೇ ದೇವವ್ರತನೆಂದೂ ಮುಂದೆ ಭೀಷ್ಮನೆಂದೂ ಹೆಸರಾಗಿ ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾಯಿತು. 

ಕೃಪೆ - ಬೋಧಿವೃಕ್ಷ ( ಆಧಾರ : ಮಹಾಭಾರತ ಆದಿಪರ್ವ ) 


ಸರ್ಪಗಳ ಅಧಿಪತಿ ತಕ್ಷಕ 

ಪುರಾಣಗಳ ಪ್ರಕಾರ ಆ ಕಾಲದಲಿದ್ದ ಎಂಟು ಜಾತಿಯ ಹಾವುಗಳಲ್ಲಿ ತಕ್ಷಕ ಎನ್ನುವುದೊಂದು ಪಂಗಡ. ಇದಕ್ಕೆ ಅಧಿಪತಿ ತಕ್ಷಕ. ಕಶ್ಯಪ ಮತ್ತು ಕದುರು ದಂಪತಿಗಳ ಮಗ. ಶೇಷನಾಗ್, ವಾಸುಕಿ, ತಕ್ಷಕ ಅಣ್ಣತಮ್ಮಂದಿರು. ವಿಷ್ಣುವಿನಿಂದಾಗಿ ನಾಗಲೋಕಕ್ಕೆ ಅಧಿಪತಿಯಾಗಿದ್ದ ವಾಸುಕಿ ಶಿವನ ಸೇವೆಗೆ ಹೋದ ನಂತರ ತಕ್ಷಕ ನಾಗಲೋಕಕ್ಕೆ ಅಧಿಪತಿಯಾದ. ಹಾವುಗಳ ರಾಜನಾದ. ಇಂದ್ರಪ್ರಸ್ಥ ರಾಜಧಾನಿಗೆ ಪಾಂಡವರಿಗೆ ಖಾಂಡವವನ ಹಿಡಿಸಿತು. ಅಗ್ನಿಯ ಮುಖಾಂತರ ಖಾಂಡವವನ ದಹನಕ್ಕೆ ಮುಂದಾದರು. ತನ್ನ ಸ್ನೇಹಿತ ತಕ್ಷಕನ ಪರಿವಾರವಿರುವ ಖಾಂಡವವನವನ್ನು ಇಂದ್ರ ರಕ್ಷಿಸುತ್ತ್ತಿದ್ದ. ಅಗ್ನಿ ಒಂದು ದಿನ ಬ್ರಾಹ್ಮಣನ ವೇಷದಲ್ಲಿ ಕೃಷ್ಣಾರ್ಜುನರ ಬಳಿ ಬಂದು ನಾನು ಅಗ್ನಿ, ನನ್ನ ದೊಡ್ಡ ಹೊಟ್ಟೆಯ ಹಸಿವಿಗೆ ಖಾಂಡವವನವನ್ನು ದಹಿಸಬೇಕು. ಆದರೆ ಖಾಂಡವವನದಲ್ಲಿ ವಾಸಿಸುತ್ತಿರುವ ತನ್ನ ಸ್ನೇಹಿತ ತಕ್ಷನ ಪರಿವಾರವನ್ನು ರಕ್ಷಿಸಲು ಇಂದ್ರ ಇದಕ್ಕೆ ಅಡ್ಡಿಯಾಗಿದ್ದಾನೆ ಎಂದ. ಆಗ ಕೃಷ್ಣಾರ್ಜುನರು ಖಾಂಡವವನಕ್ಕೆ ಬಿಗಿ ಕಾವಲಾಗಿ ಅಗ್ನಿಗೆ ನೀನು ಎಷ್ಟು ಬೇಕಾದರೂ ತಿನ್ನು ಎಂದರು. ಆಗ ತಕ್ಷಕ ಕುರುಕ್ಷೇತ್ರದಲ್ಲಿದ್ದ. ಅಗ್ನಿಯ ಭಕ್ಷಣೆ ಆರಂಭವಾದಾಗ ಇಂದ್ರ ಮಳೆ ಸುರಿಸಿದ. ಅರ್ಜುನ ತನ್ನ ಬಾಣಗಳಿಂದ ಚಪ್ಪರವನ್ನೇ ಕಟ್ಟಿ ರಕ್ಷಣೆ ಮಾಡಿದ್ದರಿಂದ ಅಗ್ನಿ ಖಾಂಡವವನವನ್ನು ಕಬಳಿಸಿದ. ಅಲ್ಲಿದ್ದ ತಕ್ಷಕನ ತಾಯಿ ಸತ್ತಳು, ತಮ್ಮ ವಿಶ್ವಸೇನ ತಪ್ಪಿಸಿಕೊಂಡ. ಅಸಂಖ್ಯಾತ ಹಾವುಗಳೊಂದಿಗೆ ಬಹಳಷ್ಟು ಪ್ರಾಣಿಗಳೂ ಸತ್ತವು. ತಕ್ಷಕನಿಗೆ ಮಗ ವಿಶ್ವಸೇನನಿಂದ ವಿಚಾರಗಳು ತಿಳಿದು ತನ್ನ ತಾಯಿಯ ಸಾವಿಗೆ, ತನ್ನ ವಂಶದ ಅನೇಕ ಕುಡಿಗಳ ಸಾವಿಗೆ ಕಾರಣನಾದ ಅರ್ಜುನನ ಮೇಲೆ ಸೇಡು ತೀರಿಸಿಕೊಳ್ಳುತ್ತೀನೆಂದು ಪಣತೊಟ್ಟಿದ್ದವನಿಗೆ ಎಷ್ಟೋ ವರ್ಷಗಳ ನಂತರ ಅವಕಾಶ ಸಿಕ್ಕಿತು. 

ಒಮ್ಮೆ ಅರ್ಜುನನ ಮಗ, ಇಂದ್ರನ ಮೊಮ್ಮಗ ಪರೀಕ್ಷಿತ ರಾಜ ಕಾಡಿನಲ್ಲಿ ಬೇಟೆಯಾಡಿ ಆಯಾಸವಾದಾಗ ಕಂಡ ಆಶ್ರಮದತ್ತ ಹೊರಟ. ತಪಸ್ಸಿನಲ್ಲಿದ್ದ ಋಷಿಗೆ ನನಗೆ ಬಾಯಾರಿಕೆಯಾಗಿದೆ ನೀರು ಬೇಕು ಎಂದ. ಆದರೆ ತಪಸ್ಸಿನಲ್ಲಿದ್ದು ಬಾಹ್ಯ ಪ್ರಪಂಚದ ಅರಿವಿಲ್ಲದಿದ್ದ ಶಮೀಕ ಋಷಿಗಳು ಪ್ರತಿಕ್ರಿಯಿಸಲಿಲ್ಲ. ರಾಜನನ್ನು ಧಿಕ್ಕರಿಸಿದ ಈ ಋಷಿಯ ತಪೋಭಂಗವಾಗಲಿ ಎಂದು ಕೋಪಗೊಂಡ ಪರೀಕಿತ ಅಲ್ಲಿ ಸತ್ತು ಬಿದ್ದಿದ್ದ ಹಾವನ್ನು ತೆಗೆದು ಶಮೀಕರ ಕುತ್ತಿಗೆಗೆ ಹಾಕಿ ಹೊರಟುಹೋದ. ಸ್ನೇಹಿತರಿಂದ ವಿಷಯ ತಿಳಿದ ಶಮೀಕರ ಮಗ ಶೃಂಗಿ ಸಿಟ್ಟಿನಿಂದ ನನ್ನ ತಂದೆಗೆ ಅವಮಾನ ಮಾಡಿರುವವನು ಏಳು ದಿನಗಳೊಳಗಾಗಿ ತಕ್ಷಕನಿಂದ ಕಚ್ಚಿಸಿಕೊಂಡು ಸಾಯಲಿ ಎಂದು ಶಪಿಸಿದ. ಭಾಗವತ ಸಾರವನ್ನು ಕೇಳಿ ಪುನೀತನಾಗಿದ್ದ ಪರೀಕ್ಷಿತನಿಗೆ ಶುಕ್ರಾಚಾರ್ಯರು ಶಮೀಕ ಋಷಿಗಳ ಮಗ ಶೃಂಗಿಯ ಶಾಪದ ವಿಚಾರ ತಿಳಿಸಿ ನಿನ್ನ ಅಂತ್ಯ ಸಮೀಪಿಸುತ್ತಿದೆ. ಸಾವು ಶರೀರಕ್ಕೇ ಹೊರತು ಆತ್ಮಕ್ಕಲ್ಲವೆಂದು ಧೈರ್ಯ ಹೇಳಿದರು. ಶಾಪದ ವಿಚಾರ ತಿಳಿದರೂ ಪರೀಕ್ಷಿತ ಇದು ತನ್ನ ಒಳ್ಳೆಯದಕ್ಕೇ ಎಂದುಕೊAಡ. 

ಶೃಂಗಿಯ ಆದೇಶದಂತೆ ತಕ್ಷಕ ಪರೀಕ್ಷಿತನನ್ನು ಸಾಯಿಸಲು ಹೊರಟ. ದಾರಿಯಲ್ಲಿ ಕಂಡ ಬ್ರಾಹ್ಮಣನನ್ನು ಮಾತಾಡಿಸಿದಾಗ ಎದುರಿಗಿರುವವನು ತಕ್ಷಕ ಎನ್ನುವುದನ್ನು ತಿಳಿಯದೇ ಬ್ರಾಹ್ಮಣ ಇವತ್ತು ತಕ್ಷಕನಿಂದ ಸಾಯಲಿರುವ ಪರೀಕ್ಷಿತನನ್ನು ಬದುಕಿಸಲು ಹೋಗುತ್ತಿದ್ದೇನೆಂದ. ತಕ್ಷಕ ಕಾರ್ಕೋಟಕ ವಿಷ ತುಂಬಿರುವ ತಕ್ಷಕ ಕಚ್ಚಿದವರನ್ನು ಬದುಕಿಸಲು ಸಾಧ್ಯವಿಲ್ಲ ಅಂದ. ಅದಕ್ಕೆ ಬ್ರಾಹ್ಮಣ ವಿಷಪ್ರಾಶನವಾದ ವ್ಯಕ್ತಿಯಾಗಲೀ, ಸುಟ್ಟು ಬೂದಿಯಾದ ಮರವಾಗಲೀ ನಾನು ಬದುಕಿಸುತ್ತೀನಿ ಎಂದ. ತಕ್ಷಕ ತನ್ನ ಹಲ್ಲಿನಿಂದ ಒಂದು ಮರವನ್ನು ಕಚ್ಚಿದ ತಕ್ಷಣ ಅದು ಸುಟ್ಟು ಬೂದಿಯಯಿತು. ಈ ಮರವನ್ನು ಮೊದಲಿದ್ದಂತೆ ಮಾಡು ಎಂದ ತಕ್ಷಕ. ನಂತರ ಬ್ರಾಹ್ಮ್ಮಣ ಭಕ್ತಿಯಿಂದ ಮಂತ್ರಪಠಣ ಮಾಡಿ ತೀರ್ಥ ಪ್ರೋಕ್ಷಣೆ ಮಾಡಿದ ಮೇಲೆ ಮರದ ಬೂದಿಯೆಲ್ಲವೂ ಮೇಲಕ್ಕೆದ್ದು ಅಲ್ಲಿ ಮೊದಲಿದ್ದ ಮರ ಕಂಡಿತು. ಆಗ ತಕ್ಷಕ ಬ್ರಾಹ್ಮಣನನ್ನು ನಿನ್ನ ಶಕ್ತಿ ಅದ್ಭುತವಾಗಿದೆ. ಅದರೆ ಇವತ್ತು ಪರೀಕ್ಷಿತ ತನ್ನ ಕರ್ಮಾನುಸಾರ ಮತ್ತು ಮುನಿಕುಮಾರನ ಶಾಪದಿಂದಾಗಿ ಸಾಯಬೇಕೆಂಬ ವಿಧಿಯಿದೆ. ಅದಕ್ಕೇ ನಾನು ನೀಡುವ ಹೆಚ್ಚಿನ ದ್ರವ್ಯವನ್ನು ತೆಗೆದುಕೊಂಡು ಹಿಂದಕ್ಕೆ ಹೋಗು ಎಂದ. ಬ್ರಾಹ್ಮಣ ತಕ್ಷಕನ ಮಾತಿನಂತೆ ನಡೆದುಕೊಂಡ. 

ನಂತರ ತಕ್ಷಕ ಪರೀಕ್ಷಿತನನ್ನು ಸಮೀಪಿಸುವಷ್ಟರಲ್ಲಿ ಪರೀಕ್ಷಿತ ತನ್ನ ಹೃದಯಕಮಲದಲ್ಲಿ ಶ್ರೀಮನ್ನಾರಾಯಣನನ್ನು ಸ್ಮರಿಸುತ್ತಾ ಧ್ಯಾನಸಮಾಧಿಗೆ ಹೋಗಿದ್ದ. ಕೆಲವೇ ಕ್ಷಣಗಳಲ್ಲಿ ಅವನಿಗೆ ದ್ಯಾನಯೋಗ ಒಲಿದು ಮುಕ್ತಾವಸ್ಥೆಗೆ ತಲುಪಿದ್ದ. ನಂತರ ತಕ್ಷಕ ಪರೀಕ್ಷಿತನನ್ನು ಕಚ್ಚಿದ ತಕ್ಷಣ ಪರೀಕ್ಷಿತನ ಶರೀರ ಭಸ್ಮವಾಯಿತು. 

ಪರೀಕ್ಷಿತನ ಮಗ ಜನಮೇಜಯ ತಂದೆಯ ಸ್ಥಿತಿಗೆ ಮರುಗಿ ತಮ್ಮಂದಿರ ಜೊತೆ ಅಂತ್ಯಕ್ರಿಯೆಗಳನ್ನು ನಡೆಸಿದ. ಅಂದು ನೆರೆದಿದ್ದ ಸಹಸ್ರಾರು ಋಷಿಗಳ ಎದುರಿಗೆ ಗಟ್ಟಿಯಾಗಿ ತನ್ನ ತಂದೆಯನ್ನು ಕಚ್ಚಿ ಸಾಯಿಸಿದ ತಕ್ಷಕನ ವಂಶವನ್ನೇ ನಿರ್ನಾಮ ಮಾಡುತ್ತೇನೆಂದು ಸಂಕಲ್ಪಿಸಿ ಸರ್ಪಯಾಗ ಪ್ರಾರಂಭಿಸಿದ. ಸಹಸ್ರಾರು ಬ್ರಾಹ್ಮಣರು ಜನಮೇಜಯನ ಸರ್ಪಯಾಗದಲ್ಲಿ ಭಾಗವಹಿಸಿದರು. ಸರ್ಪಯಾಗದಲ್ಲಿ ಬ್ರಾಹ್ಮಣರು ಮಂತ್ರಪೂರ್ವಕವಾಗಿ ಸರ್ಪಗಳನ್ನು ಆಹ್ವಾನಿಸಿ ಸ್ವಾಹಾ ಎಂದಾಕ್ಷಣ ಬೇರೆ ಬೇರೆ ದಿಕ್ಕುಗಳಿಂದ ಸರ್ಪಗಳೆಲ್ಲಾ ಸ್ವಯಂಪ್ರೇರಿತವಾಗಿ ರಾಶಿರಾಶಿಯಾಗಿ ಹೋಮಕುಂಡಕ್ಕೆ ಬೀಳುತ್ತಿದ್ದವು. ಜನಮೇಜಯ ತಕ್ಷಕನನ್ನು ನಿರೀಕ್ಷಿಸುತ್ತಿದ್ದ. ಬೇಕಾದಷ್ಟು ಸರ್ಪಗಳು ಬಂದು ಸಾವನ್ನಪ್ಪಿದ್ದರೂ ತಕ್ಷಕ ಬರಲಿಲ್ಲ. ಸರ್ಪಯಾಗದ ಭೀತಿಯಿಂದ ತಕ್ಷಕ ಇಂದ್ರನನ್ನು ಬೇಡಿದ. ನಂತರ ಜನಮೇಜಯ ಸಿಟ್ಟಿನಿಂದ ಇಂದ್ರನ ಸಮೇತ ತಕ್ಷಕನನ್ನು ಹೋಮಕುಂಡಕ್ಕೆ ಆಹ್ವಾನಿಸಿ ಎಂದ. ತಕ್ಷಣ ಬ್ರಾಹ್ಮಣರು ಸಹೇಂದ್ರಾಯ ತಕ್ಷಕಾಯ ಸ್ವಾಹ ಎಂದರು. ಇಂದ್ರನ ಸಿಂಹಾಸನ ಅಲ್ಲಾಡಿತು. ಇಂದ್ರ ಬೃಹಸ್ಪತ್ಯಾಚಾರ್ಯರ ಮೊರೆಹೋದ. ಆಗ ಬೃಹಸ್ಪತ್ಯಾಚಾರ್ಯರು ಜನಮೇಜಯನಲ್ಲಿಗೆ ಬಂದು ಜನಮೇಜಯ, ಯಾಗವನ್ನು ನಿಲ್ಲಿಸು. ತಕ್ಷಕ ಅಮೃತ ಕುಡಿದಿರುವುದರಿಂದ ಅವನು ಜರಾಮರಣರಹಿತನಾಗಿದ್ದಾನೆ. ಎಲ್ಲರಿಗೂ ಮರಣ ಅವರವರ ಕರ್ಮಫಲದಿಂದ ದೊರೆಯುತ್ತದೆ. ನಿನ್ನ ತಂದೆ ಧ್ಯಾನಾಸಕ್ತನಾಗಿದ್ದ ಮುನಿಯ ಕೊರಳಿಗೆ ಸತ್ತ ಹಾವನ್ನು ಹಾಕಿದ್ದು ತಪ್ಪು. ಇವೆಲ್ಲಕ್ಕೂ ಭಗವಂತನ ಮಾಯೆಯೇ ಕಾರಣ. ನಿನ್ನ ಅಚಾತುರ್ಯದಿಂದಾಗಿ ಬಹಳಷ್ಟು ಹಾವುಗಳು ಪ್ರಾಣ ಕಳೆದುಕೊಂಡವು. ಇನ್ನಾದರೂ ಸರ್ಪಯಾಗವನ್ನು ನಿಲ್ಲಿಸು ಎಂದಾಗ ಜನಮೇಜಯ ದೇವಗುರುಗಳ ಆಣತಿಯಂತೆ ನಡೆದುಕೊಂಡ. ಅಲ್ಲಿಗೆ ತಕ್ಷಕನಿಗೆ ನಿರಾಳವಾಯಿತು. 

ಕೃಪೆ : ಬೋಧಿವೃಕ್ಷ

====================================================

ಮಹಾಭಾರತದಲ್ಲಿ ರಾಜಧರ್ಮ 

ಒಂದು ರಾಜ್ಯದ ದೊರೆ ಎಂದಾಕ್ಷಣ ಅವನು ತನಗೆ ಬೇಕಾದ ಹಾಗೆ ಕೆಲಸ ಮಾಡುವುದು ತಪ್ಪು. ಅವನಿಗೂ ರಾಜಧರ್ಮ ಎನ್ನುವುದು ಇರುತ್ತದೆ. ಆ ಧರ್ಮದ ಪರಿಧಿಯಲ್ಲೇ ಅವನು ರಾಜ್ಯಭಾರ ಮಾಡಬೇಕು. ಅದು ನ್ಯಾಯಸಮ್ಮತವಾದದ್ದು. ಈ ವಿಚಾರವಾಗಿ ಮಹಾಭಾರತದ ಸಭಾಪರ್ವದಲ್ಲಿ ಬಹಳ ಉತ್ತಮವಾದ ಸಂದೇಶ ಇದೆ. ದ್ರೌಪದಿಯ ವಸ್ತಾçಪಹರಣ ಸಂದರ್ಭದಲ್ಲಿ ದ್ರೌಪದಿ ಪರಿಪರಿಯಾಗಿ ಬೇಡಿಕೊಂಡರೂ ಭೀಷ್ಮರಾದಿಯಾಗಿ ಅವಳ ಐವರು ಗಂಡAದಿರೂ ಸಹ ಮೌನವಾಗಿದ್ದರು. ಅವಳ ಸಮಸ್ಯೆಗೆ ಉತ್ತರ ಕೊಟ್ಟವನು ಕೃಷ್ಣ ಒಬ್ಬನೇ. 

ಇದನ್ನು ಕಂಡ ವಿದುರ ಸಭಾಸದರನ್ನು ಕುರಿತು ಎಲೈ ಮಹನೀಯರುಗಳೇ ದ್ರೌಪದಿಯು ತನಗೆ ಒದಗಿದ ಸಂಕಷ್ಟದ ಪರಿಸ್ಥಿತಿಯಲ್ಲಿ ನಿಮ್ಮನ್ನೆಲ್ಲ ಪ್ರೆಶ್ನಿಸುತ್ತಿದ್ದಾಳೆ. ಎಲ್ಲರೂ ಇದ್ದರೂ ಅವಳ ಪಾಲಿಗೆ ಯಾರೂ ಇಲ್ಲದ ಅನಾಥೆಯಂತೆ ರೋಧಿಸುತ್ತಿದ್ದಾಳೆ. ಅವಳು ಹೆಣ್ಣು. ಅವಳ ಇಂತಹ ಅಸಹಾಯಕ ಪರಿಸ್ಥಿತಿಯನ್ನು ಕಂಡೂ ನೀವುಗಳು ಬಾಯಿ ಬಿಡಲಿಲ್ಲ ಎಂದರೆ ಅದೊಂದು ಅಚ್ಚರಿಯೇ ಸರಿ. ಈ ಸಮಯದಲ್ಲಿ ನೀವುಗಳು ಅವಳ ಪ್ರೆಶ್ನೆಗೆ ಉತ್ತರಿಸದೇ ಹೋದರೆ ಧರ್ಮನಾಶವೇ ಆಗಿಹೋಗುತ್ತದೆ. ಯಾರೇ ಆಗಲಿ ತನ್ನ ಸಮಸ್ಯೆಯನ್ನು ಕುರಿತು ಪ್ರೆಶ್ನಿಸುತ್ತಿರುವಾಗ ಸಭಾಸದರು ಕಾಮ ಕ್ರೋದಾಧಿಗಳನ್ನು ದೂರಮಾಡಿ ನಿಷ್ಪಕ್ಷಪಾತವಾಗಿ ಉತ್ತರಿಸಲೇಬೇಕಾಗುತ್ತದೆ. ಧರ್ಮ ಏನು ಎನ್ನುವುದು ತಿಳಿದಿದ್ದರೂ ಹೀಗೆ ಮೌನವಹಿಸುತ್ತಿರುವುದು ಧರ್ಮಕ್ಕೆ ವಿರುದ್ದವಾಗಿ ನಡೆದುಕೊಂಡAತೆಯೇ ಸರಿ. ಹಾಗೆ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಸುಳ್ಳು ಹೇಳುವುದರಿಂದ ಯಾವ ಪಾಪ ಬರುವುದೋ ಅದೇ ಪಾಪ ಬರುತ್ತದೆ. ನೀವೆಲ್ಲರೂ ಕ್ರಿಯಾಶೀಲರಾಗಿ ಸಕಾಲದಲ್ಲಿ ಸಮೋಚಿತವಾದ ಮಾತುಗಳನ್ನು ಆಡಲಿ ಎನ್ನುವುದು ನನ್ನ ಆಗ್ರಹ. ನಿಮ್ಮನ್ನು ಪ್ರಚೋದಿಸಲು ಒಂದು ಕಥೆ ಹೇಳುತ್ತೇನೆ ಕೇಳಿ.

ದೈತ್ಯರ ಅಧಿಪತಿಯಾಗಿದ್ದವನು ಪ್ರಹ್ಲಾದ ಎಂಬ ರಾಜ. ಅವನ ಮಗ ವಿರೋಚನ. ಮದುವೆಯ ವಿಚಾರದಲ್ಲಿ ವಿರೋಚನನಿಗೂ ಅಂಗಿರಸನ ಪುತ್ರನಾದ ಸುಧನ್ವನಿಗೂ ಪರಸ್ಪರ ವಿವಾದ ಉಂಟಾಯಿತು. ಅವರಿಬ್ಬರಲ್ಲಿ ವಿದ್ಯೆಯಲ್ಲಿಯೂ ಪರಾಕ್ರಮದಲ್ಲಿಯೂ ನಾನು ಹೆಚ್ಚು ಎಂದು ಪರಸ್ಪರ ವಾದಗಳು ನಡೆದವು. ಅಂತಿಮ ತೀರ್ಮಾನಕ್ಕೆ ಅವರಿಬ್ಬರೂ ಪಣಕ್ಕೆ ತಮ್ಮ ಪ್ರಾಣವನ್ನೇ ಒತ್ತೆಯಿಟ್ಟರು. ಅಂದರೆ ವಿರೋಚನ ಶ್ರೇಷ್ಠನೆಂದು ತೀರ್ಪು ಬಂದರೆ ಸುಧನ್ವ ಪ್ರಾಣ ಬಿಡಬೇಕು. ಸುಧನ್ವ ಶ್ರೇಷ್ಠ ಎನ್ನುವ ತೀರ್ಪು ಬಂದರೆ ವಿರೋಚನ ಪ್ರಾಣಬಿಡಬೇಕು. ಇದನ್ನು ಯಾರು ಇತ್ಯರ್ಥ ಮಾಡುವರೆಂದು ಗೊಂದಲ ಉಂಟಾಗಿ ಕಡೆಗೆ ವಿರೋಚನನ ತಂದೆ ಪ್ರಹ್ಲಾದನ ಬಳಿಗೇ ಬಂದರು. ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠರು ಎನ್ನುವುದನ್ನು ಎಲ್ಲಾ ಪ್ರಾಕಾರಗಳಿಂದಲೂ ವಿಚಾರ ಮಾಡಿ ನೀನು ತೀರ್ಮಾನಿಸಿ ಹೇಳಬೇಕು. ಇದರಲ್ಲಿ ಸುಳ್ಳು ಹೇಳಬಾರದು ಎಂದರು. ಪ್ರಹ್ಲಾದನಿಗೆ ಕೊಂಚ ಭಯವಾಗಿ ಸುಧನ್ವನ ಕಡೆಗೆ ನೋಡಿದನು. ಆಗ ಅವನು ಪ್ರಹ್ಲಾದನನ್ನು ಕುರಿತು ದೈತ್ಯೇಶ್ವರನೇ, ನೀನು ಸುಳ್ಳು ಹೇಳಿದರೂ ಅಥವಾ ಉತ್ತರಿಸದೇ ಸುಮ್ಮನೇ ಕೂತಿದ್ದರೂ ಇಂದ್ರನು ನಿನ್ನ ತಲೆಯನ್ನು ವಜ್ರಾಯುಧದಿಂದ ನೂರು ಹೋಳುಗಳನ್ನಾಗಿ ಮಾಡುವನು. ಅದರಿಂದಾಗಿ ನ್ಯಾಯಸಮ್ಮತವಾದುದನ್ನೇ ಹೇಳು ಎಂದ. ಪ್ರಹ್ಲಾದನಿಗೆ ಈಗ ನಾನು ಮಗನ ಪರವಾಗಿ ಮಾತಾಡಬೇಕೇ, ಇಲ್ಲಾ ವಿರೋಚನನ ಪರವಾಗಿ ಮಾತಾಡಿ ಮಗನಿಗೆ ದ್ರೋಹ ಮಾಡಬೇಕೇ ಎನ್ನುವುದು ಗೊಂದಲವಾಗಿ ತನಗೆ ಇದು ಎಟುಕದ ಸಮಸ್ಯೆ ಎಂದು ಇದಕ್ಕೆ ಸಲಹೆ ಕೇಳಲು ಕಶ್ಯಪರ ಬಳಿಗೆ ಹೋದ. ಪ್ರಹ್ಲಾದನಿಂದ ಅವನ ಸಮಸ್ಯೆಯನ್ನು ತಿಳಿದುಕೊಂಡ ಕಶ್ಯಪರು ಹೇಳಿದ ರಾಜಧರ್ಮ ಸೂಕ್ಷö್ಮಗಳು ಹೀಗಿವೆ.

ಪ್ರಹ್ಲಾದ, ಒಬ್ಬ ವ್ಯಕ್ತಿ ಪ್ರೆಶ್ನೆಗೆ ಉತ್ತರ ಏನೆಂದು ತಿಳಿದಿದ್ದರೂ ಕೋಪದಿಂದಲಾಗಲೀ, ಭಯದಿಂದಲಾಗಲೀ, ದುರಾಸೆಯಿಂದಲಾಗಲೀ ಉತ್ತರಿಸದೇ ಮೌನವಾಗಿದ್ದರೆ ಅಂತಹವನು ಒಂದು ಸಹಸ್ರ ವರುಣಪಾಶಗಳಿಂದ ಬಂಧಿಸಲ್ಪ್ಪಡುತ್ತಾನೆ. ಪ್ರತ್ಯಕ್ಷದರ್ಶಿಯಾಗಿದ್ದರೂ ಸಾಕ್ಷಿ ಹೇಳಲು ಕರೆತಂದಾಗ ಚಂಚಲಚಿತ್ತನಾಗಿ ಎರಡು ಪಕ್ಷಗಳಿಗೂ ಹೊಂದಿಕೊಳ್ಳುವAತೆ ಸಂಶಯಾಸ್ಪದವಾಗಿ ಸಾಕ್ಷö್ಯ ಹೇಳಿದರೆ ಅವನಿಗೂ ಇದೇ ಗತಿಯಾಗುತ್ತದೆ. ಸಭೆಯಲ್ಲಿ ಧರ್ಮವನ್ನು ಅಧರ್ಮವೆಂಬ ಕತ್ತಿ ಇರಿಯುತ್ತಿದ್ದರೂ ಆ ಭಯವನ್ನು ಹತ್ತಿಕ್ಕಿ ಧರ್ಮವನ್ನು ರಕ್ಷಿಸುವುದು ಸಭಾಸದರ ಕರ್ತವ್ಯ. ಎಲ್ಲಕ್ಕಿಂತ ಸಭೆಯ ಅಧ್ಯಕ್ಷನಾದವನ ಮತ್ತು ಹಿರಿಯನ ಕರ್ತವ್ಯ. ಹಾಗಿಲ್ಲದಿದ್ದರೆ ಪಾಪದ ಫಲವನ್ನು ಅನುಭವಿಸಿಯೇ ತೀರಬೇಕು. ಒಂದು ಅಧರ್ಮ ಕ್ರಿಯೆಯು ನಡೆದಾಗ ಅದರ ಕತೃವನ್ನು ಸಭೆಯಲ್ಲಿ ಸಭಾಸದರು ಖಂಡಿಸದೇ ಮೌನವಾಗಿದ್ದರೆ ಆ ಪಾಪದ ಅರ್ಧ ಭಾಗ ಸಭಾಧ್ಯಕ್ಷನಿಗೂ, ಕಾಲುಭಾಗವು ಕರ್ತೃಗಳಿಗೂ, ಉಳಿದ ಕಾಲು ಬಾಗವು ಸಭಾಸದರಿಗೂ ಸೇರುತ್ತದೆ. ಧರ್ಮದ ವಿಷಯವಾಗಿ ಪ್ರೆಶ್ನೆ ಕೇಳಿದಾಗ ಧರ್ಮಕ್ಕೆ ವಿರೋಧವಾಗಿ ಉತ್ತರಿಸಿದರೆ ( ಸುಳ್ಳು ಹೇಳಿದರೆ ) ಅವರೂ ಮತ್ತು ಅವರ ಹಿಂದಿನ ಏಳು ತಲೆಮಾರಿನವರೂ ಮತ್ತು ಮುಂದಿನ ಏಳು ತಲೆಮಾರಿನವರೂ ಅವರು ಮಾಡಿದ ಯಾವುದೇ ಪುಣ್ಯಫಲವನ್ನು ಅನುಭವಿಸಲು ಯೋಗ್ಯರಾಗಿರುವುದಿಲ್ಲ. ಬಹಳ ಮುಖ್ಯವಾಗಿ ಯಾರೇ ಸಾಕ್ಷಿಯಾಗಬೇಕಾದರೆ ಅವನು ಪ್ರತ್ಯಕ್ಷದರ್ಶಿಯಾಗಿರಬೇಕು. ಯಾರೋ ಹೇಳಿಕೊಟ್ಟಿದ್ದನ್ನು ಹೇಳುವುದಲ್ಲ. ಸತ್ಯಾಂಶ ಏನೆಂಬುದನ್ನು ತಿಳಿದಿರಬೇಕು. ಅಂತಹ ಸಾಕ್ಷಿ ಸತ್ಯವನ್ನೇ ಹೇಳಬೇಕು. ಮೌನವಾಗಿರಲೂ ಬಾರದು, ಅಸತ್ಯವನ್ನು ನುಡಿಯಲೂ ಬಾರದು. ಸತ್ಯವಾದ ಸಾಕ್ಷö್ಯ ಹೇಳುವವನು ತನ್ನ ಧರ್ಮಾಥಗಳನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಸತ್ಯವಾದ ಸಾಕ್ಷö್ಯವನ್ನು ಹೇಳುವವನು ಎಂದಿಗೂ ಯಾರಿಗೂ ಭಯಪಡಬಾರದು. 

ಕಶ್ಯಪರಿಂದ ಈ ಮಾತುಗಳನ್ನು ಕೇಳಿಕೊಂಡು ಬಂದ ಪ್ರಹ್ಲಾದ ತನ್ನ ಮಗನನ್ನು ಕುರಿತು ಮಗೂ ವಿರೋಚನ, ಅಂಗೀರಸರು ನನಗಿಂತಲೂ ಶ್ರೇಷ್ಠರು, ಅಂತೆಯೇ ಅವರ ಮಗನಾದ ಸುಧನ್ವನು ನಿನಗಿಂತಲೂ ಶ್ರೇಷ್ಠನು. ಸುಧನ್ವನ ತಾಯಿಯೂ ನಿನ್ನ ತಾಯಿಗಿಂತಲೂ ಶ್ರೇಷ್ಠಳು. ಆದ್ದರಿಂದ ಸುಧನ್ವನು ಈಗ ನಿನ್ನ ಪ್ರಾಣಗಳಿಗೆ ಒಡೆಯನಾಗಿದ್ದಾನೆ ಎಂದ. ಅಲ್ಲಿಗೆ ವಿರೋಚನ ಮತ್ತು ಸುಧನ್ವರ ಒಪ್ಪಂದದAತೆ ಈಗ ವಿರೋಚನ ಪ್ರಾಣ ಕಳೆದುಕೊಳ್ಳಬೇಕು. ಈ ವಿಚಾರ ತಿಳಿದಿದ್ದೂ ಪ್ರಹ್ಲಾದ ಸತ್ಯವನ್ನು ನುಡಿದ. ಇದರಿಂದ ಬಹಳ ಸಂತುಷ್ಟನಾದ ಸುಧನ್ವ ತನ್ನ ಮತ್ತು ವಿರೋಚನನ ನಡುವೆ ಆದ ಒಪ್ಪಂದವನ್ನು ಮರೆತು ಪ್ರಹ್ಲಾದ ನಿನ್ನ ಮಗ ವಿರೋಚನ ಎನ್ನುವುದು ಅರಿವಿದ್ದರೂ, ನೀನು ಪುತ್ರಪ್ರೇಮವೆಂಬ ವ್ಯಾಮೋಹಕ್ಕೆ ವಶನಾಗದೇ ಧರ್ಮದ ಪಕ್ಷವನ್ನು ವಹಿಸಿ ಉತ್ತರ ಕೊಟ್ಟಿದ್ದೀಯ. ಇದರಿಂದ ನನಗೆ ಬಹಳ ಸಂತೋಷವಾಗಿದೆ. ಈಗ ನನಗೆ ನಿನ್ನ ಮಗ ವಿರೋಚನನ ಪ್ರಾಣ ನನಗೆ ಬೇಡ. ಬದಲಿಗೆ ಅವನಿಗೆ ಸ್ವತಂತ್ರವಾಗಿ ನೂರು ವರ್ಷ ಬದುಕುವ ಅನುಜ್ಞೆ ಕೊಡುತ್ತಿದ್ದೇನೆ ಎಂದ. 

ಈ ಕಥೆ ಹೇಳಿದ ವಿದುರ ಎಲೈ ಸಭಾಸದರೇ, ಈ ಇತಿಹಾಸವನ್ನು ಕೇಳಿದ ಮೇಲಾದರೂ ನೀವು ಮೌನದಿಂದ ಹೊರಬಂದು ದ್ರೌಪದಿಯ ಪ್ರೆಶ್ನೆಗಳಿಗೆ ಧರ್ಮವಿಹಿತವಾದ ರೀತಿಯಲ್ಲಿ ಹೇಗೆ ಉತ್ತರ ಕೊಡಬೇಕೆಂಬುದನ್ನು ಸಮಾಲೋಚಿಸಿ. ಸಭಾಧರ್ಮವನ್ನು ಪಾಲಿಸಿ. ನಿಮ್ಮ ನಡವಳಿಕೆಯಿಂದ ಇನ್ನಿತರ ಸಭಾಸದರಿಗೂ ಗೌರವ ಬರುವಂತಿರಬೇಕೇ ಹೊರತು ನಿಮ್ಮಂತೆಯೇ ಅವರುಗಳೂ ತಲೆತಗ್ಗಿಸಿ ಕೂರುವಂತಾಗಬಾರದು ಎಂದು ನುಡಿದ. ಇಷ್ಟು ಹೇಳಿದರೂ ಯಾರೊಬ್ಬರೂ ಅಂದರೆ ಭಿಷ್ಮರಾದಿಯಾಗಿ, ಧೃತರಾಷ್ಟçನಾದಿಯಾಗಿ ಯಾರೊಬ್ಬರೂ ಬಾಯಿ ಬಿಡಲಿಲ್ಲ. ಆದರೆ ಕರ್ಣನೊಬ್ಬ ವಿಹಿತವಲ್ಲದ ಮಾತನ್ನು ನುಡಿದ. ಅದೆಂದರೆ ದುಶ್ಶಾಸನ ನೀನು ಈಗಿಂದೀಗಲೇ ದ್ರೌಪದಿಯನ್ನು ಅಂತ:ಪುರಕ್ಕೆ ಸೆಳೆದುಕೊಂಡು ಹೋಗು. 

ದ್ರೌಪದಿಯ ಆರ್ತನಾದ ಮನಸಿಗೆ ಆಘಾತ ಉಂಟುಮಾಡುತ್ತಿದ್ದರೂ ಯಾರೊಬ್ಬರೂ ತಗ್ಗಿಸಿದ ತಲೆಯನ್ನು ಎತ್ತದೇ ಬಾಯಿಗೆ ಹೊಲಿಗೆ ಹಾಕಿಸಿಕೊಂಡವರಂತೆ ಕೂತಿರುವಾಗ ಅಂತಿಮವಾಗಿ ಭೀಷ್ಮರು ಮಾತಾಡಿದರು. ರಾಜಧರ್ಮ ಬಹಳ ಸೂಕ್ಷö್ಮವಾದುದು. ಕೆಲವು ಸಮಯಗಳಲ್ಲಿ ಮಹಾತ್ಮರಾದ, ವಿಶೇಷಜ್ಞರಾದ ಜ್ಞಾನಿಗಳಿಂದಲೂ ಧರ್ಮದ ವಿಷಯದಲ್ಲಿ ಇದಮಿತ್ಥಂ ಅಂದರೆ ಇದು ಹೀಗೇ ಎಂದು ತೀರ್ಮಾನ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಲೋಕದಲ್ಲಿ ಬಲಿಷ್ಠನಾದವನು ಹೇಳುವುದೇ ನ್ಯಾಯವೆಂದು ಸರ್ವರಿಂದಲೂ ಮಾನ್ಯಮಾಡಲ್ಪಡುತ್ತದೆ. ದುರ್ಬಲನಾದವನು ಧರ್ಮಸೂಕ್ಷö್ಮವನ್ನು ಅರಿತು ಸತ್ಯಾಂಶವನ್ನು ಹೇಳಿದರೂ ಅದನ್ನು ಇತರರು ಮಾನ್ಯ ಮಾಡುವುದಿಲ್ಲ. ಇಂದು ಇಂದಿನ ವ್ಯವಹಾರವಾಗಿದೆ. ಹೀಗಾಗಿ ಕರ್ಣ, ದುರ್ಯೋಧನರು ಏನು ಹೇಳುತ್ತಾರೋ ಅದೇ ಸತ್ಯ ಎನಿಸುತ್ತಿದೆ. ಆದರೆ ಸತ್ಯಧರ್ಮಗಳಿಗೆ ಅನುಗುಣವಾಗಿ ನೀನು ಸಹನೆಯಿಂದ ವರ್ತಿಸುತ್ತಿರುವುದು ನಿನ್ನ ಘನತೆಗೆ ತಕ್ಕದ್ದಾಗಿದೆ. ಒಂದು ಮಾತ್ರ ಅಂತಿಮವಾಗಿ ನಾನು ಹೇಳುತ್ತೇನೆ. ವಯೋವೃದ್ಧರಾದವರು ಮತ್ತು ಜ್ಞಾನವೃದ್ಧರಾದ ದ್ರೋಣಾದಿಗಳೂ ಮೃತ್ಯಪ್ರಾಯರಾಗಿ ತಲೆ ತಗ್ಗಿಸಿ ಕೂತಿದ್ದಾರೆ. ಇಂಥವರಿಂದ ನೀನು ಉತ್ತರವನ್ನು ನಿರೀಕ್ಷಿಸುವುದು ತಪ್ಪು. ಆದರೆ ಇಷ್ಟು ಮಾತ್ರ ನಿಶ್ಚಯ. ಕುರುರಾಜರು ದಿನದಿನಕ್ಕೂ ಲೋಭಮೋಹಪರವಶರಾಗುತ್ತಿದ್ದಾರೆ. ಅವರ ಅಂತ್ಯ ಸಮೀಪಿಸುತ್ತಿದೆ ಎಂದು ಹೇಳಬಹುದು. 

ಸತ್ಯಂ ಬ್ರೂಯಾತ್, ಪ್ರಿಯಂ ಬ್ರೂಯಾತ್, ನಬ್ರೂಯಾತ್ ಸತ್ಯಮಪ್ರಿಯಂ ಎನ್ನುವ ಮಾತು ಇದೆ. ಆದರೆ ಸಭಾಸದರು, ರಾಜ್ಯದ ಚುಕ್ಕಾಣಿ ಹಿಡಿದವರು ತಮಗೆ ತಿಳಿದಿರುವ ಸತ್ಯವನ್ನು ಮರೆಮಾಚದೇ ನಡೆದುಕೊಳ್ಳುವುದು, ಪ್ರಹ್ಲಾದನಂತೆ ನಿರ್ಧಾರ ತೆಗೆದುಕೊಳ್ಳಬೇಕಾದಾಗ ಪುತ್ರಪ್ರೇಮವನ್ನು ಬಿಟ್ಟು ವರ್ತಿಸುವುದು ಬಹಳ ಮುಖ್ಯ. ಇದು ಇಂದಿನ ರಾಜಕಾರಿಣಿಗಳಿಗೆ, ಸಾರ್ವಜನಿಕರಿಗೂ ಅನ್ವಯವಾಗುತ್ತದೆ. 

ಕೃಪೆ : ಬೋಧಿವೃಕ್ಷ

Comments