ಹೀಗೊಂದು ಮಸಾಲೆಪುರಿ ಆರ್ಡರ್ ಪ್ರಕರಣವು
ಹಾಸ್ಯ ಲೇಖನ - ಅಣಕು ರಾಮನಾಥ್
ನಿಮ್ಮಂತೆಯೇ ನಾನೂ ‘ಒಂದು ಪ್ಲೇಟ್ ಮಸಾಲಾ
ಪುರಿ’ ಎಂದೆ ಅಷ್ಟೆ.
‘ಸ್ವೀಟಾ, ಖಾರಾನಾ?’
‘ಖಾರ ಇರಲಿ.’
‘ಮೆಣಸಿನ ಖಾರವೋ, ಮೆಣಸಿನಕಾಯಿಯ ಖಾರವೋ?’
‘ಮೆಣಸಿನಕಾಯಿಯದು.’
‘ಹಸಿಮೆಣಸಿನಕಾಯಿಯದೋ, ಒಣಮೆಣಸಿನಕಾಯಿಯದೋ?’
ಒಂದು ಬದಲಾವಣೆ ಇರಲೆಂದು ‘ಒಣಮೆಣಸಿನಕಾಯಿಯದು’
ಎಂದೆ.
‘ಗುಂಟೂರಿನದೋ, ಬ್ಯಾಡಗಿಯದೋ?’
‘ಬ್ಯಾಡಗಿ.’
‘ತೊಟ್ಟು ಬಿಡಿಸಿರುವುದೋ, ತೊಟ್ಟು ಇರುವುದೋ?’
‘ಏನು ವ್ಯತ್ಯಾಸ?’
‘ತೊಟ್ಟಿನ ಸಮೇತ ಇದ್ದರೆ ತಿನ್ನುವಾಗ
ಗಂಟಲಿನಲ್ಲಿ ಸಿಕ್ಕಿಕೊಳ್ಳಬಹುದು.’
‘ತೊಟ್ಟಿಲ್ಲದ್ದು.’
‘ಜಜ್ಜಿದ್ದೋ, ಹೆಚ್ಚಿದ್ದೋ?’
‘ಏನು ವ್ಯತ್ಯಾಸ?’
‘ಹೆಚ್ಚಿದ್ದು ಹೆಚ್ಚಾದರೆ ಪಕ್ಕ ಇಡಬಹುದು.
ಜಜ್ಜಿದ್ದು ತಿಂದೇ ಅನುಭವಿಸಬೇಕಾದದ್ದು.’
‘ಹಚ್ಚಿದ್ದು.’
‘ಹಚ್ಚಿದ್ದನ್ನು ಹುರಿದು ಕೊಡಲೋ, ಹಸಿಯಾಗಿ
ಕೊಡಲೋ?’
ನನಗೆ ಆ ಮಾಣಿಯನ್ನು ಹುರಿದುಬಿಡುವಷ್ಟು
ಕೋಪ ಉಕ್ಕಿತು. ‘ಸ್ವಂತ ತೀರ್ಮಾನ ತೆಗೆದುಕೊಳ್ಳಲು ಆಗದೇನು?’ ಎಂದು ಗುಡುಗಿದೆ.
‘ನಮ್ಮಿಷ್ಟದಂತೆ ಕೊಡಲು ಇದು ರೋಡ್ ಸೈಡ್
ಚ್ಯಾಟ್ ಸ್ಟಾಲ್ ಅಲ್ಲ ಸಾರ್. ಫೈವ್ ಸ್ಟಾರ್ ಹೊಟೇಲ್’ ಎಂದು ಎದೆಯುಬ್ಬಿಸಿದ. ಅವನು ತೊಟ್ಟಿದ್ದ ಸೂಟ್
ನನ್ನ ಮದುವೆಯ ಸೂಟ್‍ಗಿಂತ ಸುಪೀರಿಯರ್ ಕ್ವಾಲಿಟಿಯದಾಗಿತ್ತು. ಅವನ ಅಂಗಿಯ ಬಿಳುಪು ನಿರ್ಮಾ ಜಾಹೀರಾತಿನಿಂದ
ಎತ್ತಿ ತಂದಂತಿತ್ತು. ಬಂದ ಗಿರಾಕಿಗಳೆಡೆಗೆ ಅವನು ಹರಿಸುತ್ತಿದ್ದ ನೋಟವು ಮೈಲಿಗೆಯನ್ನು ಕಂಡ ಮಡಿವಂತರ
ನೋಟದಷ್ಟೇ ತೀವ್ರವಾಗಿತ್ತು.
‘ಒಣಮೆಣಸಿನ ಬಾಬ್ತೇ ಬೇಡ. ಹಸಿಮೆಣಸಿನಕಾಯಿ
ಹಾಕು’ ಎಂದೆ.
‘ಚಿಕ್ಕಬಳ್ಳಾಪುರದ್ದೋ, ವಿಯಟ್ನಾಂದೋ?’
ವಿಯಟ್ನಾಂ ಮೆಣಸಿನಕಾಯಿಯನ್ನು ಒಮ್ಮೆ
ಆರಿಸಿಕೊಂಡಿದ್ದೆ. ಒಂದು ಪಾವು ರವೆಯ ಉಪ್ಪಿಟ್ಟಿಗೆ ಹದಿನೈದು ಮೆಣಸಿನಕಾಯಿಗಳೆಂದು ಬಾಲ್ಯದಲ್ಲಿ ನನ್ನ
ಅಮ್ಮ ಹೇಳಿಕೊಟ್ಟಿದ್ದುದನ್ನು ಅನ್ವಯಿಸಿದ್ದೆ. ಕರುನಾಡಿನ ಮಾಮೂಲಿ ‘ಅಹಿಂಸಾವಾದಿ’ ಅಲ್ಪಖಾರಿಯ ಲೆಕ್ಕದಲ್ಲಿ
ವಿಯಟ್ನಾಮಿಯನ್ನು ಹಾಕಿದ್ದು ತಪ್ಪಾಯಿತೆಂದು ಮೊದಲ ತುತ್ತಿನಲ್ಲೇ ತಿಳಿಯಿತು. ಆ ಖಾರದ ಉಗ್ರತೆಗೆ
‘ಕಿವಿ ಮೂಗುಗಳಿಂದ ಹೊಗೆ ಹೊರಟಿತು’ ಎಂದು ಕಂಡ ಮೂಲಗಳು ತಿಳಿಸಿದವು. ವಿದೇಶದಲ್ಲಿ ಅಷ್ಟು ಮೆಣಸಿನಕಾಯಿಗಳನ್ನು
ಬಳಸಿ ಅಡುಗೆ ಮಾಡಿ, ಹಾಗೆ ದೇಹದಿಂದ ಹೊಗೆ ಹೊರಟರೆ ಫೈರ್ ಅಲಾರ್ಮ್ ಮೊಳಗುವುದೋ ಏನೋ.
‘ಸ್ವದೇಶಿ ಮೆಣಸಿನಕಾಯಿಗೆ ಜೈ. ಸ್ಥಳೀಯ
ರೈತರಿಗೆ ಜಯವಾಗಲಿ’ ಎಂದೆ. ಮಿರುಗುಸೂಟಿನವ ಸಮ್ಮತಿಸೂಚಕ ತಲೆಯಾಡಿಸಿ, ‘ಉದ್ದದ್ದೋ, ಗಿಡ್ಡದ್ದೋ?’
ಎಂದ.
‘ಉದ್ದ ಮೆಣಸಿನಕಾಯಿಯನ್ನು ಸಕ್ಕರೆಯ
ಬದಲಿಗೆ ಬಳಸಬಹುದು ಎನಿಸುತ್ತದೆ’ ಎಂದಿದ್ದ ನನ್ನ ಆಂಧ್ರದ ಗೆಳೆಯ. ಚೋಟುದ್ದ ಮೆಣಸಿನಕಾಯಿಯ ಖಾರದ
ಮುಂದೆ ಉದ್ದ ಮೆಣಸಿನಕಾಯಿಯದು ವೈಭವ್ ಸೂರ್ಯವಂಶಿಯ ಬ್ಯಾಟಿಂಗಿನ ಮುಂದೆ ಮದಮದ್ ಸಿರಾಜನ ಬ್ಯಾಟಿಂಗಿನಷ್ಟೇ
ಸಪ್ಪೆ.
‘ಚೋಟ್ಮೆಣ್ಸಿನ್ಕಾಯಿ’ ಎಂದೆ.
‘ಗುಡ್ ಚಾಯ್ಸ್’ ಎಂದ ನಿರ್ಮಾಂಗಿ,
‘ಹೆಚ್ಚಿದ್ದೋ, ಚಚ್ಚಿದ್ದೋ?’
ನನಗೆ ಅವನ ಪ್ರಶ್ನೆಯ ವಿಧ ಇಷ್ಟವಾಯಿತು.
ಬೇರೆಯವರಾದರೆ ‘ಕಟ್ ಮಾಡಿದ್ದೋ, smash ಮಾಡಿದ್ದೋ?’ ಎನ್ನುತ್ತಿದ್ದರು. ಬಡಪಾಯಿಗಳಿಗೆ Mash ಮತ್ತು
Smash ಪದಗಳ ಅರ್ಥವ್ಯತ್ಯಾಸವೂ ತಿಳಿದಿರುವುದಿಲ್ಲ. ‘ಆಲೂಗಡ್ಡೆಯನ್ನು smash ಮಾಡಿ’ ಎನ್ನುವ ಟಿವಿ
ರಸಪ್ರವೀಣೆಯರ ನುಡಿಯನ್ನು ಕೇಳಿದಾಗಲೆಲ್ಲ ಆಲೂಗಡ್ಡೆಯನ್ನು ತೆಗೆದುಕೊಂಡು ಅವರ ತಲೆಯ ಮೇಲೆಯೇ ಅಪ್ಪಳಿಸಬೇಕೆನಿಸಿದೆ.
ಮ್ಯಾಷ್ ಮಾಡುವುದು ಎಂದರೆ ಗೆಡ್ಡೆಗಳನ್ನು ಒತ್ತಿ, ಹಿಸುಕಿ ಪೇಸ್ಟ್ ಮಟ್ಟಕ್ಕೆ ಮಾಡಿಕೊಳ್ಳುವುದು,
ಸ್ಮ್ಯಾಷ್ ಮಾಡುವುದು ಎಂದರೆ ಭಾರವಾದ ವಸ್ತುವಿನಿಂದ ಜಜ್ಜಿ ಪುಡಿಪುಡಿ ಮಾಡುವುದು ಎಂದು ಈ ಮೊದ್ದುಗಿಣಿಗಳಿಗೆ
ಅರ್ಥ ಮಾಡಿಸುವುದೂ ಕಷ್ಟವೇ.
‘ಮಸಾಲೆಪುರಿಗೆ ಹಸಿರು ಬಟಾಣಿಯೋ, ಬಿಳಿ
ಬಟಾಣಿಯೋ?’
ಬಿಳಿ ಬಟಾಣಿ ಎಂದರೆ ಕಾಬೂಲ್ ಕಡಲೆ ಅಥವಾ
ಚೆನ್ನಾ. ಚೆನ್ನಾ ನನ್ನ ನಾಲಿಗೆಗೆ ಚೆನ್ನ ಎನಿಸಿಲ್ಲ. ‘ಹಸಿರು ಕಡಲೆ’ ಎಂದೆ.
‘ಪೌಡರ್ ಕಟ್ಟಿದ ಹಸಿರು ಬಟಾಣಿಯೋ, ಸಹಜವಾಗಿ
ಹಸಿರಾಗಿರುವುದೋ?’
‘ಫೈವ್ ಸ್ಟಾರ್ ಹೊಟೇಲಿನಲ್ಲಿ ಒಣಗಿದ
ಬಟಾಣಿಗೆ ಬಣ್ಣ ಕಟ್ಟಿ ಬಳಸುವರೇನು? ನಿಮ್ಮಲ್ಲೂ ಕಲಬೆರಕೆಯೆ?’
‘ಇಲ್ಲ. ಆಪ್ಷನ್ ಕೊಟ್ಟೆನಷ್ಟೆ. ಪೌಡರ್
ಕಟ್ಟಿದ್ದನ್ನು ನೀವು ಕೇಳಿದ್ದಿದ್ದರೆ ‘ವಿ ಆರ್ ಸಾರಿ ಸರ್. ವಿ ಡು ನಾಟ್ ಪ್ರೊವೈಡ್ ಸಚ್ ಲೋ ಕ್ವಾಲಿಟಿ
ಸ್ಟಫ್’ ಎನ್ನುತ್ತಿದ್ದೆ. ನಿಮ್ಮ ಆಯ್ಕೆ ಸೂಕ್ತವಾಗಿದೆ. ಅಭಿನಂದನೆಗಳು. ಬಟಾಣಿ ಪೂರ್ಣವಾಗಿ ಬೇಯಲೋ,
ಅರ್ಧ ಬೇಯಲೋ?’
‘ಹಾಫ್ ಬೇಕ್ಡ್’ ಎಂದೆ. ಪೂರ್ಣವಾಗಿ
ಬೆಂದರೆ ಸತ್ವಹೀನವಾಗುವುದೆಂಬ ಅಭಿಪ್ರಾಯವು ವೈರಲ್ ಆಗಿದೆಯಲ್ಲ!
‘ಮೆಣಸಿನಕಾಯಿ ಆಯಿತು, ಬಟಾಣಿ ಆಯಿತು.
ಈರುಳ್ಳಿ ಬೇಕೋ ಅಥವಾ ಜೈನ್ ಮಸಾಲೆಪುರಿಯೋ?’
ಈರುಳ್ಳಿಯನ್ನು ಹೆಚ್ಚುವಾಗ ಕಂಡಾಗ ನನಗೆ
ಕಣ್ಣಲ್ಲಿ ನೀರು; ಅದರ ರುಚಿಯನ್ನು ನೆನೆದಾಗ ನಾಲಿಗೆಯಲ್ಲಿ ನೀರು. ಈರುಳ್ಳಿಯ ಮಧ್ಯಭಾಗದ ‘ಘಾಟ್ ಸೆಕ್ಷನ್’
ನನಗೆ ಬಹಳ ಇಷ್ಟ. ಆ ಘಾಟು ಕಣ್ಣಲ್ಲಿ ನೀರು ಬರಿಸುವಷ್ಟಿದ್ದರೆ ಮತ್ತೂ ಇಷ್ಟ.
‘ಸೆಮಿ ಜೈನ್. ಬೆಳ್ಳುಳ್ಳಿ ಬೇಡ, ಈರುಳ್ಳಿ
ಇರಲಿ.’
‘ನಾವು ಬಳಸುವ ಪೇಸ್ಟಿನಲ್ಲಿ ಬೆಳ್ಳುಳ್ಳಿ
ಇರತ್ತೆ.’
‘ಪೇಸ್ಟ್ ಬಳಸುವುದನ್ನು ಹೇಳಬೇಡಿ. ತಿಳಿಯದೆ
ಮಾಡಿದ ಪಾಪ ಪಾಪವಲ್ಲ’ ಎಂದೆ.
‘ಬೆಳ್ಳುಳ್ಳಿ ತಿನ್ನುವುದು ಪಾಪವೇನು?’
‘ತಿಂದವರು ಬಾಯಿ ಬಿಟ್ಟಾಗ ಅವರಿಂದ ಹೊರಡುವ
ಬಾಯ್ವಾಸನೆಗೆ ಹತ್ತಿರ ಸುಳಿದವರನ್ನು ಕಂಡು ‘ಅಯ್ಯೋ ಪಾಪ!’ ಎನಿಸುವುದಲ್ಲ, ಆ ವಿಧದಲ್ಲಿ ಪಾಪ!’
‘ಈರುಳ್ಳಿಯ ವಾಸನೆ ಶ್ರೀಗಂಧದಂತಿರುವುದೇ?
ಓಹ್! ಕ್ಷಮಿಸಿ. ಮಾಣಿಗಳು ಗಿರಾಕಿಗಳೊಡನೆ ವಾದ ಮಾಡುವಂತಿಲ್ಲ. ಮ್ಯಾನೇಜರ್‍ಗೆ ಹೇಳಬೇಡಿ ಪ್ಲೀಸ್!’
ಗೋಗರೆದ ಗರಿಸೂಟಿನವ. ಮಾಣಿಯಾದರೇನು, ಸಾಫ್ಟ್‍ವೇರಿಯಾದರೇನು, ಜಾಬ್ ಇನ್‍ಸೆಕ್ಯುರಿಟಿ ಜಾತ್ಯತೀತ,
ಉದ್ಯೋಗಾತೀತ.
‘ಈರುಳ್ಳಿ ಯಾವುದಿರಲಿ? ಬಿಳಿಯದೋ, ಕೆಂಪಾದುದೋ?’
‘ಬಿಳಿ ಈರುಳ್ಳಿ?’
‘ಹೂಂ. ಫಾರಿನ್ ಪ್ರಾಡಕ್ಟ್.’
ನೆನಪಾಯಿತು. ಮೆಲ್ಬೋರ್ನಿನ ತರಕಾರಿ
ಅಂಗಡಿಯಲ್ಲಿ ಬಿಳಿ, ಅರೆಬಿಳಿ, ಒರಟುಕೆಂಪು, ನುಣುಪುಕೆಂಪು ವಿಧದ ಈರುಳ್ಳಿಗಳನ್ನು ಕಂಡಿದ್ದೆ. ನಮ್ಮ
ಕರ್ನಾಟಕದ ಈರುಳ್ಳಿಗಳ ರುಚಿಯ ಮುಂದೆ ಆ ನಾಲ್ಕನ್ನೂ ನಿವಾಳಿಸಿ ಎಸೆಯಬೇಕಾಗಿತ್ತು.
‘ನಮ್ಮದೇ, ಅಸಲಿ ಕರ್ನಾಟಕದ್ದೇ, ಈರುಳ್ಳಿಯನ್ನು
ಬಳಸಿರಿ. ರೆಡ್ ಈಸ್ ಬ್ಯೂಟಿಫುಲ್’ ಎಂದೆ.
‘ವೆರಿ ಟ್ರೂ ಸರ್’ ಎಂದ ಅವನು ಹೊಟೇಲ್
ಲೇಬರ್ ಯೂನಿಯನ್ನಿನ ಸದಸ್ಯನೆಂದು ನಂತರ ತಿಳಿಯಿತು. ಕಮ್ಯುನಿಷ್ಟರಿಗೆ ಕೆಂಪು ಪ್ರಿಯವೇ.
‘ಈರುಳ್ಳಿ ದೊಡ್ಡ ಗಾತ್ರದ್ದೋ, ಬಳ್ಳಾರಿ
ಈರುಳ್ಳಿಯೋ?’
‘ಹೆಚ್ಚಿ ಕೊಡುವಿರಲ್ಲ, ತರಿದ ಈರುಳ್ಳಿಯ
ಒರಿಜಿನಲ್ ಗಾತ್ರ ಯಾವುದಿದ್ದರೂ ಒಂದೇ!’
‘ಫೈವ್ ಸ್ಟಾರ್ ಹೊಟೇಲ್ಸ್ ಆರ್ ಸ್ಪೆಸಿಫಿಕ್
ಸರ್. ಪ್ರತಿಯೊಂದನ್ನೂ ವಿವರಿಸಿ, ಅರ್ಥಗೊಳಿಸಿಯೇ ಆರ್ಡರ್ ಪಡೆಯಬೇಕೆಂದು ಆರ್ಡರ್ ಆಗಿದೆ.’
‘ಬಳ್ಳಾರಿ ಬೇಡ. ಮಾಮೂಲಿ ಸೈಜಿನದು.’
‘ನಿಮಗೆ ಮಸಾಲೆಪುರಿಯನ್ನು ಕೊಡುವುದಕ್ಕೆ
ಮುಂಚೆಯೂ ಒಂದು ಪ್ಲೇಟಿನಲ್ಲಿ ಈರುಳ್ಳಿ, ಸೌತೆಕಾಯಿಗಳನ್ನು ಕೊಡುತ್ತೇವೆ. ಅದು ನಮ್ಮ ಹೊಟೇಲಿನ ಪದ್ಧತಿ.
ಆ ಈರುಳ್ಳಿಯನ್ನು ಶಂಖದಂತೆ ಹೆಚ್ಚಬೇಕೋ, ಚಕ್ರದಂತೆ ಹೆಚ್ಚಬೇಕೋ?’
‘ಏನು ವ್ಯತ್ಯಾಸ?’
‘ನೀವು ಪ್ರಗತಿಶೀಲರಾದರೆ ಚಕ್ರವನ್ನು
ಆಯ್ಕೆ ಮಾಡಿ. ಯಾರು ಏನೇ ಮಾಡಿದರೂ ವಿರೋಧ ವ್ಯಕ್ತಪಡಿಸುವ ವ್ಯಕ್ತಿತ್ವದವರಾದರೆ ಶಂಖ ಹೊಡೆದುಕೊಳ್ಳುವುದನ್ನು
ಪ್ರತಿಪಾದಿಸಲು ಶಂಖವನ್ನು ಆಯ್ಕೆ ಮಾಡಿ.’
ಮಿರುಗುಬೂಟಿನವ ಹೀಗೆಯೇ ಕೊತ್ತಂಬರಿ
(ನಾಟಿಯೋ, ಫಾರಮ್ಮೋ), ಉಪ್ಪು (ರಾಕ್ ಸಾಲ್ಟೋ, ಸೀ ಸಾಲ್ಟೋ; ಕಲ್ಲುಪ್ಪೋ, ಪುಡಿಯುಪ್ಪೋ), ಹುಳಿ
(ನಿಂಬೆಯದೋ, ಹುಣಿಸೆಯದೋ; ಗಜನಿಂಬೆಯದೋ, ಪುಟ್ಟನಿಂಬೆಯದೋ) ಮೊದಲಾದ ವಿವರಗಳನ್ನು ಪಡೆಯುವ ಹೊತ್ತಿಗೆ
ನನಗೆ ಸಾಕುಸಾಕಾಗಿತ್ತು.
ಕಡೆಗೂ ಆರ್ಡರ್ ಪಡೆದ ಮಾಣಿ ‘ಷೆಫ್ಸ್
ಪ್ಯಾಲೇಸ್’ನತ್ತ ನಡೆದ. ರುಚಿರುಚಿಯಾದ ಮಸಾಲೆಪುರಿಯ ಕನಸು ಕಾಣುತ್ತಾ ನಾನು ಮೆತ್ತನೆಯ ಸೀಟಿಗೆ ಒರಗಿದೆ.
ಅರ್ಧಗಂಟೆಯ ನಂತರ ಮಾಣಿ ಅನೇಕ ಪುಟ್ಟ
ಪ್ಲೇಟುಗಳನ್ನು ದೊಡ್ಡ ತಟ್ಟೆಯಲ್ಲಿ ಹಿಡಿದು ತಂದ. ಚೋಟ್ಮೆಣ್ಸಿನ್ಕಾಯಿ, ಪುಟ್ಟನಿಂಬೆ, ನಾಟಿ ಕೊತ್ತಂಬರಿ,
ಬೆಂದ ಬಟಾಣಿ ಮೊದಲಾದ ಐಟಂಗಳನ್ನು ಹೊತ್ತ ಪ್ಲೇಟುಗಳು ನನ್ನ ಮೇಜಿನಷ್ಟು ಉದ್ದಗಲಕ್ಕೂ ಹರಡಿ ಕುಳಿತವು.
‘ನಿಮಗೆ ಬೇಕಾದ ಪ್ರಮಾಣದಲ್ಲಿ ಮಿಕ್ಸ್
ಮಾಡಿಕೊಳ್ಳಿ ಸಾರ್. ಹ್ಯಾಪಿ ಈಟಿಂಗ್’ ಎನ್ನುತ್ತಾ ಮರೆಯಾದ ಮಾಣಿ.

Comments
Post a Comment