ನಾಟಕ - ಸೀಬಿ ಸಾಫ್ಟ್‌ವೇರ್ ತೇರು

 ನಾಟಕ - ಸೀಬಿ ಸಾಫ್ಟ್‌ವೇರ್ ತೇರು

- ಸಿಡ್ನಿ ಸುಧೀರ್



ಹಿನ್ನೆಲೆ: ತುಮಕೂರು ಜಿಲ್ಲೆಯ ಸೀಬಿ ನರಸಿಂಹ ಸ್ವಾಮಿ ದೇವಸ್ಥಾನ. ಬೇಸಿಗೆಯ ಬಿಸಿಲು (ಏಪ್ರಿಲ್/ಮೇ). ವಾರ್ಷಿಕ ತೇರಿನ ಸಂಭ್ರಮ. ತುಮಕೂರಿನ ಒಂದು ಕುಟುಂಬದವರು ನಡೆಸುವ ಅನ್ನದ ಸಮಾರಾಧನೆ. ಅವರ ಹಿರಿ ಮಗ ಕೆಲಸಕ್ಕೆ ಅಂತ ವಿದೇಶಕ್ಕೆ ಹೋದವನು, ಐದು ವರ್ಷದ ನಂತರ ರಥೋತ್ಸವಕ್ಕೆ ಬರುತ್ತಾನೆ.


ಪಾತ್ರಗಳು:

ತುಮಕೂರು ಕುಟುಂಬ (ಸಮಾರಾಧನೆ ಆಯೋಜಕರು):

ಕ್ಲೌಡ್ ಕುಮಾರ         : ಬೆಂಗಳೂರಿನ ಐಟಿ ಉದ್ಯೋಗಿ, ಎಲ್ಲದಕ್ಕೂ ಸಾಫ್ಟ್‌ವೇರ್ ಲೆಕ್ಕ ಹಾಕುವವನು.

ಕಪಿನಿಪತಿ ರಾಯರು   : ಕುಮಾರ ತಂದೆ, ಸಂಪ್ರದಾಯಬದ್ಧ ಹಿರಿಯರು.

ಕೃಷ್ಣ ರಾವ್              : ಕುಮಾರ ಮಾವ, ಅಡುಗೆ ಮನೆಯ ಯಜಮಾನ (ಹಲಸಿನಕಾಯಿ ಹುಳಿ ಸ್ಪೆಷಲಿಸ್ಟ್).

ಮೋಹನ್               : ಕುಮಾರ ಸೋದರ ಸಂಬಂಧಿ, ತುಮಕೂರಿನಲ್ಲೇ ಇರುವ ಚುರುಕು ಹುಡುಗಿ.

ಗೋದಾವರಿ             : ಕುಮಾರ ತಾಯಿ.

ಕುಮುದ ಮತ್ತು ಮಣಿ  : ಗೋದಾವರಿ ಅತ್ತಿಗೆ ಮತ್ತು ಗೋದಾವರಿ ನಾದಿನಿ.


ಸೀಬಿ ಸ್ಥಳೀಯ ತಂಡ:

ಶಾನುಭೋಗರು.                             : ಊರಿನ ಲೆಕ್ಕಿಗರು.

ಅರ್ಚಕ ಗಣೇಶ್ ಮತ್ತು ಗೋಪಾಲಯ್ಯ : ದೇವಸ್ಥಾನದ ಪೂಜಾ ಕಾರ್ಯದವರು.

ಕೆಂಚೇಗೌಡ ಮತ್ತು ರಂಗಯ್ಯ.             : ಸ್ಥಳೀಯ ವ್ಯವಸ್ಥಾಪಕರು.


ದೃಶ್ಯ ೧: ಬೆಳಿಗ್ಗೆ ೧೦:೩೦ - ಸಿದ್ಧತೆ ಮತ್ತು ಸಾಫ್ಟ್‌ವೇರ್ ಲೆಕ್ಕಾಚಾರ

(ದೊಡ್ಡ ಪಾತ್ರೆಗಳಲ್ಲಿ ಹಲಸಿನಕಾಯಿ ಹುಳಿ ಕುದಿಯುತ್ತಿದೆ. ಘಮಘಮಿಸುವ ವಾಸನೆ. ಕೃಷ್ಣ ರಾವ್ ದೊಡ್ಡ ಸೌಟು ಹಿಡಿದು ಅಡುಗೆಯವರಿಗೆ ಸೂಚನೆ ಕೊಡುತ್ತಿದ್ದಾರೆ. ಶಾನುಭೋಗರು ಮತ್ತು ಅರ್ಚಕ ಗಣೇಶ್ ಪ್ರವೇಶಿಸುತ್ತಾರೆ.)

ಶಾನುಭೋಗರು: "ಕೃಷ್ಣ ರಾಯರೇ, ಈ ಸರಿ ಬಿಸಿಲು ಜಗ್ಗ್ ಇದೆ. ಜನ ಕೂಡ ಸಾಲುಗಟ್ಟಿ ಬರ್ತಾರೆ ಅನ್ಸುತ್ತೆ. ತಯಾರಿ ಹೇಗಿದೆ?"

ಕೃಷ್ಣ ರಾವ್: "ಶಾನುಭೋಗರೇ, ಈ ಕೃಷ್ಣ ರಾಯರ ಅಡುಗೆ ಅಂದ್ರೆ ಸೀಬಿ ನರಸಿಂಹನಿಗೇ ಪ್ರೀತಿ! ಹಲಸಿನಕಾಯಿ ಹುಳಿ ಘಮ ನೋಡಿ... ಇಡೀ ಹೈವೇಗೇ ವಾಸನೆ ಹರಡಬೇಕು! ಇಲ್ಲಿ ಯಾವ ಕೊರತೆಯೂ ಇಲ್ಲ. ಹನ್ನೊಂದು ಗಂಟೆ ಒಳಗೆ ಅನ್ನ-ಹಲಸಿನಕಾಯಿ ಹುಳಿ ಎಲ್ಲ ಸಿದ್ಧ ಆಗುತ್ತೆ. ತೇರು ಎಳೆದು ಬಂದವರಿಗೆ ಬಿಸಿಬಿಸಿ ಊಟ ಹಾಕೋಣ"

ರಂಗಯ್ಯ: "ಏನಪ್ಪಾ ಕುಮಾರ್, ಬೆಳ್ಳಂಬೆಳಿಗ್ಗೆ ಆ ಪಲಗೆ ಹಿಡ್ಕೊಂಡು ಅದನ್ನೇ ನೋಡ್ತಾ ನಿಂತಿದ್ದೀಯಲ್ಲಪ್ಪ? ಹೀಗಿದೆ ಕೆಲಸ?"

ಕುಮಾರ್: (ಟ್ಯಾಬ್ಲೆಟ್ ಹಿಡಿದು) "ಆಲ್ ಗುಡ್ ರಂಗಯ್ಯ. ನೀ ಹೇಗಿದಿಯ? ಇದು ಬರಿ ಪಲಗೆ ಅಲ್ಲ. ಟ್ಯಾಬ್ಲೆಟ್ ಅಂತ."

ರಂಗಯ್ಯ: (ಆಶ್ಚರ್ಯದಿಂದ) "ಟ್ಯಾಬ್ಲೆಟ!!.. ದೊಡ್ಡ ಫೋನ್ ಇದ್ದಂಗಿದ್ಯಲ್ಲೋ??"

ಕುಮಾರ್: (ನಗುತ್ತಾ ಅಪ್ಪ ಮತ್ತು ಮಾವನ ಕಡೆ ತಿರುಗಿ) "ಅಪ್ಪ, ಕೃಷ್ಣ ಮಾವ, ಒಂದು ನಿಮಿಷ! ನನ್ನ 'ಪ್ರೆಡಿಕ್ಟಿವ್ ಅನಾಲಿಟಿಕ್ಸ್' (Productive Analytics) ಪ್ರಕಾರ ೧೨ ಗಂಟೆ ಬಿಸಿಲಿಗೆ ಜನಕ್ಕೆ ಹಸಿವು ಕಡಿಮೆ ಇರುತ್ತೆ. ನೀವು ಸಾಂಬಾರ್ ಪ್ರಮಾಣನ ಸ್ವಲ್ಪ 'ಕಡಿಮೆ' ಮಾಡಿ, ಇಲ್ಲದಿದ್ರೆ 'ವೇಸ್ಟೇಜ್' (wastage) ಜಾಸ್ತಿ ಆಗುತ್ತೆ!"

ಮೋಹನ್: (ಫೋನ್‌ನಲ್ಲಿ ವಿಡಿಯೋ ಮಾಡುತ್ತಾ) "ಸೈಲೆಂಟ್ ಪ್ಲೀಸ್! (Silent Please) ಕುಮಾರ, ಒಂದು ನಿಮಿಷ. ಒಂದು "ರೀಲ್ಸ್" (Insta Reel) ಮಾಡ್ಬೇಕು. "ಹಳ್ಳಿಗೆ ಬಂದ ಐಟಿ ಹೀರೋ" ಅಂತ ಟೈಟಲ್ ಕೊಡ್ತೀನಿ ಅಥವಾ ಕ್ಲೌಡ್ ಕುಮಾರ್ ಇನ್ ಸೀಬಿ ರಥೋತ್ಸವ!. ಹೇಗಿದೆ??"

"ಹಲೋ ಫ್ರೆಂಡ್ಸ್! ವೆಲ್ಕಮ್ ಟು ಸೀಬಿ ಲೈವ್… (Hello Friends! Welcome to Seebi Live)"

ಕಪಿನಿಪತಿ ರಾಯರು: (ಸಿಟ್ಟಿನಿಂದ) "ಮೋಹನ್ ಈ ಕಡೆ ಬಾ ನೀನು...  ಲೋ ಕುಮಾರ, ಸೀಬಿ ಸಮಾರಾಧನೆಯಲ್ಲಿ ಲೆಕ್ಕಾಚಾರ ನಡೆಯಲ್ಲಪ್ಪಾ. ಇಲ್ಲಿ ಅಕ್ಷಯವಾಗಿ ಬಡಿಸೋದು ನಮ್ಮ ಮನೆತನದ ಸಂಪ್ರದಾಯ. ನಿನ್ನ ಈ ಲೆಕ್ಕಾಚಾರ ಇಲ್ಲಿ ಹೊಗೆ ಹಾಕುತ್ತೆ! ಸೂರ್ಯನಿಗೆ ಟೋರ್ಚಾ ಹಿಡಿಯೋ ಕೆಲಸ ನಿಲ್ಲಿಸು."

ಕೆಂಚೇಗೌಡ: (ನಗುತ್ತಾ) "ರಾಯರೇ, ನಿಮ್ಮ ಮಗ ಸಿಟಿಗೆ ಹೋಗಿ ತೋತಪ್ಪ ನಾಯಕ ಆಗಿದ್ದಾನೆ ಅನ್ಸುತ್ತೆ. ಇವನು ಬಂದು ಈಗ ನರಸಿಂಹ ಸ್ವಾಮಿ ಊಟಕ್ಕೆ ಅಳತೆ ಹೇಳ್ತಿದ್ದಾನಲ್ಲ!"

ಮೋಹನ್: (ಫೋನ್ ಹಿಡಿದು ಬರುತ್ತಾ) "ಅಣ್ಣಾ, ಅದ್ಭುತ ಐಡಿಯಾ! "ಡಿಜಿಟಲ್ ಚಟ್ನಿ" ಅಂತ ಒಂದು ವಿಡಿಯೋ ಮಾಡಿದರೆ ಹೇಗಿರತ್ತೆ? ಕುಮಾರ ಅಣ್ಣಾ, ಟ್ರೆಂಡಿಗ್ ಆಗಿ ತುಂಬಾ ಲೈಕ್ಸ್ ಬರತ್ತೆ ಅಲ್ವ?

ಕಪಿನಿಪತಿ ರಾಯರು: "ತಮಾಷೆ ಬಿಟ್ಟು, ಎಲ್ಲಾರೂ ಕೆಲಸ ನೋಡಿ ನಡಿರಿ"


ದೃಶ್ಯ ೨: ಮಧ್ಯಾಹ್ನ ೧೨:೦೦ - ತೇರು ಎಳೆಯುವ ಸಂಭ್ರಮ

(ದೇವಸ್ಥಾನದ ಮುಂದೆ ತೇರು ಸಿದ್ಧವಾಗಿದೆ. ಬಿಸಿಲು ನೆತ್ತಿಯ ಮೇಲಿದೆ. ಅರ್ಚಕ ಗಣೇಶ್ ಮತ್ತು ಗೋಪಾಲಯ್ಯ ಪೂಜೆ ಮುಗಿಸಿ ಘಂಟೆ ಬಾರಿಸುತ್ತಿದ್ದಾರೆ.)

ಅರ್ಚಕ ಗಣೇಶ್: "ರಾಯರೇ, ೧೨ ಗಂಟೆ ಮುಹೂರ್ತ ಬಂದಿದೆ. ಸೀಬಿ ನರಸಿಂಹ ಸ್ವಾಮಿ ತೇರು ಎಳೆಯೋ ಸಮಯ! ನರಸಿಂಹ!..  ಅಂತ ಕೂಗಿ!"

ಮೋಹನ್: (ಜೋರಾಗಿ) "ಹಲೋ ಫ್ರೆಂಡ್ಸ್! ವೆಲ್ಕಮ್ ಟು ಸೀಬಿ ಲೈವ್! (Hello Friends!. Welcome to Seebi Live again) ನೋಡಿ, ನಮ್ಮ ಪಕ್ಕದಲ್ಲಿ ಬೆಂಗಳೂರಿನಿಂದ ಸಾಫ್ಟ್‌ವೇರ್ ಇಂಜಿನಿಯರ್ ಕುಮಾರ್ ಅಣ್ಣ ಬಂದಿದ್ದಾರೆ. ಅಣ್ಣಾ, ತೇರು ಎಳೆಯೋಕೆ ಏನಾದ್ರೂ "ಶಾರ್ಟ್‌ಕಟ್ ಕೀ" (Shortcut Key) ಇದೀಯಾ ಅಂತ ಸ್ವಲ್ಪ ನಮ್ಮ ವ್ಯೂವರ್ಸ್‌ಗೆ (viewers) ಹೇಳಿ!"

ಕುಮಾರ್: (ಗಾಬರಿಯಿಂದ) "ಮೋಹನ್, ಫೋನ್ ಕೆಳಗಿಳಿಸು! ನೋಡು, ಇಲ್ಲಿ ಜನದಟ್ಟಣೆ (Traffic)  ಜಾಸ್ತಿ ಆಗಿದೆ. ನಾನು ನನ್ನ ಆಪ್‌ನಲ್ಲಿ "ಲೋಡ್ ಬ್ಯಾಲೆನ್ಸಿಂಗ್" (Load Balancing) ಚೆಕ್ ಮಾಡ್ತಾ ಇದ್ದೀನಿ. ಎಲ್ಲರೂ ಒಂದೇ ಕಡೆ ಹಗ್ಗ ಎಳೆದ್ರೆ ತೇರು "ಕ್ರ್ಯಾಶ್" (crash) ಆಗಬಹುದು!"

ಕಪಿನಿಪತಿ ರಾಯರು: "ಲೇ ಕುಮಾರ್, ತೇರು ಕ್ರ್ಯಾಶ್ ಆಗಲ್ಲೋ, ನಿನ್ನ ತಲೆ ಕ್ರ್ಯಾಶ್ ಆಗುತ್ತೆ ಅಷ್ಟೇ! ಮೋಹನ್, ನೀನಾದ್ರೂ ಬುದ್ಧಿ ಹೇಳಪ್ಪ ಇವನಿಗೆ. ಹಗ್ಗ ಹಿಡಿಯೋದು ಬಿಟ್ಟು ಫೋನಿನಲ್ಲಿ ಏನೋ "ಕ್ಯಾಲ್ಕುಲೇಷನ್" ಮಾಡ್ತಿದ್ದಾನೆ."

ಮೋಹನ್: "ಅಣ್ಣಾ, ಕ್ಯಾಲ್ಕುಲೇಷನ್ ಆಮೇಲೆ ಮಾಡೋಣ. ಈಗ ಈ ತೇರು ಎಳೆಯೋ ವಿಡಿಯೋಗೆ ಬ್ಯಾಕ್‌ಗ್ರೌಂಡ್‌ನಲ್ಲಿ ಯಾವ ಹಾಡು ಹಾಕ್ಲಿ? "ಹುಕುಂ" ಹಾಕ್ಲಾ ಅಥವಾ ನಮ್ಮ ತುಮಕೂರು ಶೈಲಿಯ "ಜಾನಪದ" ಹಾಕ್ಲಾ?"

ಕುಮಾರ್: "ಮೋಹನ್, ಸೀರಿಯಸ್ ಆಗಿ ಕೇಳು. ಈ ತೇರು ಎಳೆಯೋ ವೇಗ (velocity) ಮತ್ತು ಜನರ ಸಂಖ್ಯೆ ಸರಿಯಾಗಿ ಮ್ಯಾಚ್ ಆಗದಿದ್ರೆ "ಸಿಸ್ಟಮ್ ಎರರ್" (System Error) ಬರುತ್ತೆ. ನಾನು ಒಂದು "ಅಲ್ಗಾರಿದಮ್" (Algorithm) ರೆಡಿ ಮಾಡಿದ್ದೀನಿ..."

ಕಪಿನಿಪತಿ ರಾಯರು: "ಕುಮಾರ್, ಮೋಹನ್... ಇಬ್ಬರೂ ನಿಲ್ಲಿಸಿ ನಿಮ್ಮ ಫೋನ್ ಆಟನ. ಸೀಬಿ ತೇರು ಅಂದ್ರೆ ಅದು ನಮ್ಮ ಮಣ್ಣಿನ ಶಕ್ತಿ. ಇಲ್ಲಿ ಸಾಫ್ಟ್‌ವೇರ್ ಕೆಲಸ ಮಾಡಲ್ಲ, ಬರಿ ಮನುಷ್ಯರ ಸಹಕಾರ ಕೆಲಸ ಮಾಡುತ್ತೆ. ಹಗ್ಗ ಹಿಡಿದು ಎಳೆಯಿರಿ, ಆಗ ನರಸಿಂಹ ಸ್ವಾಮಿ ನಿಮ್ಮನ್ನ ಚೆನ್ನಾಗಿ ಇಡ್ತಾನೆ."

ಕುಮಾರ್: (ನಿಧಾನವಾಗಿ ಫೋನ್ ಜೇಬಿಗೆ ಇಳಿಸಿ) "ಸರಿ ಅಪ್ಪ. ಮೋಹನ್, ಫೋನ್ ಆಫ್ ಮಾಡು. ಇವತ್ತು ವಿಡಿಯೋ ಮಾಡೋದು ಬೇಡ, ನಾವೇ ಈ ಸಂಭ್ರಮದ ಭಾಗ ಆಗೋಣ."

ಮೋಹನ್: "ಓಕೆ ಅಣ್ಣಾ! ಲೈವ್ ಎಂಡ್ (Live End) ಮಾಡ್ತಾ ಇದ್ದೀನಿ. ಫ್ರೆಂಡ್ಸ್, ನಮ್ಮ ಐಟಿ ಅಣ್ಣ ಈಗ "ರಿಯಲ್ ವರ್ಲ್ಡ್" ಗೆ (real world) ಲಾಗಿನ್ (login) ಆಗ್ತಾ ಇದ್ದಾರೆ! ಜೈ ನರಸಿಂಹ!"


ದೃಶ್ಯ ೩: ಮಧ್ಯಾಹ್ನ ೧:೩೦ - ಹಲಸಿನಕಾಯಿ ಹುಳಿ ಸಮಾರಾಧನೆ

(ದೇವಸ್ಥಾನದ ಸಮಾರಾಧನೆ ಭವನದಲ್ಲಿ ಎಲ್ಲರೂ ಬರುತ್ತಿದ್ದಾರೆ)

ಮೋಹನ್ ಮತ್ತೆ ಫೋನ್ ಆನ್ ಮಾಡಿ ತೇರು ಎಳೆದ ನಂತರ ಆನ್ ಲೈನ್ ಆದ.

ಮೋಹನ್: (ಫೋನ್‌ನಲ್ಲಿ ವಿಡಿಯೋ ಮಾಡುತ್ತಾ) "ನೋಡಿ ಗೈಸ್! ಸೀಬಿ ನರಸಿಂಹ ಸ್ವಾಮಿ ತೇರು ಮುಗಿದಿದೆ. ಈಗ ನಮ್ಮ ಐಟಿ ಅಣ್ಣ "ಡಿಜಿಟಲ್ ದರ್ಶನ" ಮಾಡಿಸ್ತಾರೆ. ಅಣ್ಣಾ, ಆ ಕಲ್ಯಾಣಿ ನೀರನ್ನ ಸ್ಕ್ಯಾನ್ (scan) ಮಾಡಿದ್ರೆ ಪುಣ್ಯ ಡೈರೆಕ್ಟ್ ಆಗಿ ಅಕೌಂಟಿಗೆ (account) ಬರುತ್ತಾ?"

ಕುಮಾರ್: "ಮೋಹನ್, ಜೋಕ್ ಮಾಡಬೇಡ. ನಾನು ಊಟದ ವ್ಯವಸ್ಥೆಯನ್ನ "ಆಟೋಮೇಟ್" (automate) ಮಾಡ್ತಾ ಇದ್ದೀನಿ. ಪ್ರತಿಯೊಬ್ಬರಿಗೂ ಒಂದು "ಯುನಿಕ್ ಐಡಿ" (unique ID) ಕೊಟ್ಟು ಊಟಕ್ಕೆ ಕಳಿಸಬೇಕು. ಆಗ ಯಾರೂ ಎರಡು ಸತಿ ಊಟ ಮಾಡೋಕೆ ಆಗಲ್ಲ!"

ಕುಮಾರ್: "ಅಪ್ಪ, ಮಾವ ನಾನು ಒಂದು "ಆಪ್" (app) ರೆಡಿ ಮಾಡಿದ್ದೀನಿ. ಅದರ ಹೆಸರು "ಪ್ರಸಾದ ಪ್ರೊ" (Prasad Pro). ಇದರಲ್ಲಿ ಪ್ರತಿಯೊಬ್ಬರಿಗೂ ಒಂದು "ಡಿಜಿಟಲ್ ಟೋಕನ್" (digital token) ಸಿಗುತ್ತೆ. ಆಗ ಯಾರು ಒಬ್ಬರಿಗೊಬ್ಬರು ತಳ್ಳಾಡೋ ಹಾಗಿಲ್ಲ. ಎಲ್ಲವೂ "ಸಿಸ್ಟಮ್ಯಾಟಿಕ್" (systematic) ಆಗಿ ನಡೆಯುತ್ತೆ. ಕಲ್ಯಾಣಿಯಿಂದ ಊಟದ ಪಂಕ್ತಿಗೆ ಬರೋ ಭಕ್ತರಿಗೆ "ಪುಶ್ ನೋಟಿಫಿಕೇಶನ್" (fresh notification) ಕಳಿಸಬೇಕು. ಅಂದ್ರೆ ಅವರ ಫೋನಿಗೆ "ನಿಮ್ಮ ಊಟದ ಎಲೆ ರೆಡಿ ಇದೆ" ಅಂತ ಮೆಸೇಜ್ ಹೋಗುತ್ತೆ."

ಕಪಿನಿಪತಿ ರಾಯರು: "ಲೋ ಕುಮಾರ್, ಇಲ್ಲಿ ದೇವಸ್ಥಾನದ ಗಂಟೆ ಹೊಡೆದ್ರೆ ಸಾಕು, ಜನಕ್ಕೆ ಹಸಿವು ಜಾಸ್ತಿ ಆಗುತ್ತೆ. ನಿನ್ನ ಫೋನಿನಲ್ಲಿ ಟೋಕನ್ ತಗೊಂಡು ಕಾಯೋ ಅಷ್ಟು ತಾಳ್ಮೆ ಯಾರಿಗಿದೆ? ಹೊಟ್ಟೆ ಹಸಿದವನಿಗೆ ನಿನ್ನ "ಆಪು-ಗೀಪು" ಬೇಡ, ಬಿಸಿಬಿಸಿ ಊಟ ಬೇಕು ಅಷ್ಟೇ!"

ಮೋಹನ್: (ಮಜ್ಜಿಗೆ ಬಕೆಟ್ ಹಿಡಿದು ಬರುತ್ತಾ) "ಕುಮಾರ್ ಅಣ್ಣಾ, ನಿನ್ನ ಆಪಿನಲ್ಲಿ "ಮಜ್ಜಿಗೆ ಸರ್ವರ್" ಏನಾದ್ರೂ ಇದೀಯಾ? ಈ ಬಿಸಿಲಿಗೆ ಜನಕ್ಕೆ ನಿನ್ನ "ಟೋಕನ್" ಗಿಂತ ಹೆಚ್ಚಾಗಿ ಈ ತಂಪು ಮಜ್ಜಿಗೆ ಮುಖ್ಯ. ಜನರಿಗೆ ಏನು ಬೇಕು ಅಂತ ನಿನ್ನ ಫೋನ್ ಹೇಳಲ್ಲ, ಈ ಬಿಸಿಲು ಹೇಳುತ್ತೆ!"

ಕುಮಾರ್: "ಮೋಹನ, ನೀನು ಕೂಡ ಅಪ್ಪನ ತರಾನೇ ಮಾತಾಡ್ಬೇಡ. ಇದು "ಇನ್ನೋವೇಶನ್" (innovation). ನಾನು ಇದನ್ನ "ಕ್ಲೌಡ್ ಸರ್ವರ್" (cloud server) ಗೆ ಕನೆಕ್ಟ್ ಮಾಡಿದ್ದೀನಿ. ಊಟ ಎಷ್ಟು ಬಾಕಿ ಇದೆ ಅಂತ ನನಗೆ ಇಲ್ಲೇ ಗೊತ್ತಾಗುತ್ತೆ.

ಕೃಷ್ಣ ರಾವ್: (ನಗುತ್ತಾ) "ನಿನ್ನ "ಸರ್ವರ್" ಗೆ ಏನಾದ್ರೂ ಹೊಟ್ಟೆ ಹಸಿವಾಗುತ್ತಾ ಕುಮಾರ್? ಹೋಗ್ಲಿ ಬಿಡು, ಆ ಕಡೆ ನೋಡು... ನಿನ್ನ ಫೋನಿನಲ್ಲಿ ಇನ್ನೂ ಊಟ ಶುರುವಾಗಿಲ್ಲ ಅಂತ ತೋರಿಸ್ತಾ ಇರಬಹುದು, ಆದ್ರೆ ಅಲ್ಲಿ ಜನ ಅರ್ಧ ಊಟ ಮುಗಿಸಿದ್ದಾರೆ! ನಿನ್ನ ಫೋನಿಗಿಂತ ನಮ್ಮ ಹಳ್ಳಿ ಜನರ ಸ್ಪೀಡ್ ಜಾಸ್ತಿ ಇದೆ ಕಣೋ."

ಕುಮಾರ್: (ಹತಾಶೆಯಿಂದ) "ಅಯ್ಯೋ ಮಾವ, ಇಲ್ಲಿ "ನೆಟ್‌ವರ್ಕ್" (network) ಸಿಗ್ತಾ ಇಲ್ಲ. ನನ್ನ ಆಪ್ "ಹ್ಯಾಂಗ್"  (hang) ಆಗ್ತಿದೆ. ಅದಕ್ಕೆ ಡೇಟಾ ಅಪ್‌ಡೇಟ್ (data update) ಆಗ್ತಾ ಇಲ್ಲ."

ಕೃಷ್ಣ ರಾವ್: "ಅದನ್ನೇ ಹೇಳಿದ್ದು ಕಣೋ! ಇಲ್ಲಿ ಫೋನ್ ಹ್ಯಾಂಗ್ ಆದ್ರೆ ಪರವಾಗಿಲ್ಲ, ಊಟ ಹ್ಯಾಂಗ್ ಆಗಬಾರದು. ಮೊದಲು ಆ ಫೋನ್ ಜೇಬಿಗೆ ಇಟ್ಟು, ಕೈಗೆ ಒಂದು ಸೌಟು ತಗೋ. ಜನಕ್ಕೆ ಊಟ ಬಡಿಸು. ಅದೇ ನಿಜವಾದ "ಸರ್ವಿಸ್", ನಿನ್ನ "ಸರ್ವರ್" ಅಲ್ಲ!"

ಮೋಹನ್: "ಕುಮಾರ್, ಒಂದು "ಸ್ಯಾಡ್ ಬಿಜಿಎಂ" (sad bgm - sad background music) ಹಾಕಿ ವಿಡಿಯೋ ಮುಗಿಸ್ತೀನಿ. "ಐಟಿ ಅಣ್ಣನ ಬ್ಯಾಟರಿ ಡೌನ್" ಅಂತ ಹಾಕಲಾ?"

ಕುಮಾರ್: (ಟ್ಯಾಬ್ಲೆಟ್ ಮತ್ತು ಫೋನ್ ಮುಚ್ಚಿ) "ಸಾಕು ಮಾಡು ಮೋಹನ್! ಮಾವ, ನೀವು ಹೇಳಿದ್ದು ನಿಜ. ಸಿಸ್ಟಮ್ ಕೆಲಸ ಮಾಡೋದು ಆಫೀಸಲ್ಲಷ್ಟೇ, ಹಳ್ಳಿಯ ಸಿಸ್ಟಮ್ ಪ್ರೀತಿ ಮತ್ತು ಕಾಯಕದ ಮೇಲೆ ನಡೆಯುತ್ತೆ. ನಾನೇನೋ ಸ್ಮಾರ್ಟ್ ಹಳ್ಳಿ ಮಾಡೋಕೆ ಬಂದೆ, ಆದ್ರೆ ನೀವೆಲ್ಲಾ ನನಗಿಂತ ಸ್ಮಾರ್ಟ್ ಆಗಿದ್ದೀರಾ.  ಬನ್ನಿ, ನಾನು ಊಟ ಬಡಿಸೋಕೆ ಬರ್ತೀನಿ!"


ದೃಶ್ಯ ೪: ಮಧ್ಯಾಹ್ನ ೩:೦೦ ಮನೆಯವರು ಮತ್ತು ವ್ಯವಸ್ಥಾಪರ ಊಟ

ಮಣಿ: "ಏ ಕುಮಾರ್, ಎಲೆ ಮುಂದೆ ಕೂತ ಏನು ಯೋಚನೆ ಮಾಡ್ತಾ ಇದ್ಯಪ್ಪ. ಇಲ್ಲಿ ನೋಡು, ಬಿಸಿ ಬಿಸಿ ಅನ್ನ ಬರ್ತಾ ಇದೆ!"

ಕುಮಾರ್: "ಅತ್ತೆ, ನಾನು ಸುಮ್ಮನೆ ಕೂತಿಲ್ಲ. ಈ ಇಡೀ ಊಟದ ವ್ಯವಸ್ಥೆ ಹೇಗೆ ನಡೀತಿದೆ ಅಂತ ಅಬ್ಸರ್ವ್ ಮಾಡ್ತಾ ಇದ್ದೀನಿ. ಇದು ಮ್ಯಾಕ್ಸಿಮಮ್ "ಕ್ಲೌಡ್ ಕಂಪ್ಯೂಟಿಂಗ್" (cloud computing) ತರಾನೇ ಇದೆ!"

ಗೋದಾವರಿ: (ಪಕ್ಕದಲ್ಲಿ ಕುಳಿತವರು ನಗುತ್ತಾ) "ಅದೇನಪ್ಪಾ ಅದು? ನಮ್ಮ ಸೀಬಿ ನರಸಿಂಹ ಸ್ವಾಮಿ ಊಟಕ್ಕೂ, ನಿನ್ನ ಮೋಡಕ್ಕೂ (ಕ್ಲೌಡ್ - cloud) ಏನು ಸಂಬಂಧ?"

ಕುಮಾರ್: "ಅಮ್ಮ, ಸಿಂಪಲ್ ಆಗಿ ಹೇಳ್ತೀನಿ ಕೇಳಿ. ಈಗ ಆ ಮೂಲೆಯಲ್ಲಿ ದೊಡ್ಡ ಪಾತ್ರೆಯಲ್ಲಿ ಹಲಸಿನ ಹುಳಿ ಇದೆಯಲ್ಲ, ಅದು "ಮೇನ್ ಸರ್ವರ್" (main server). ಅಲ್ಲಿಂದ ಬಕೆಟ್‌ನಲ್ಲಿ ಹಲಸಿನ ಹುಳಿ ತಗೊಂಡು ಬರ್ತಾರಲ್ಲ, ಅದು "ಡೇಟಾ ಪ್ಯಾಕೆಟ್ಸ್"(data packets). "

ಶಾನುಬೋಗರು: (ಗಾಬರಿಯಿಂದ) "ಲೇ ಕುಮಾರ್, ಬಕೆಟ್‌ನಲ್ಲಿ ಇರೋದು ಘಮ್ ಅಂತಾ ಇರೋ ಹಲಸಿನ ಹುಳಿ ಕಣೋ, ಪ್ಯಾಕೆಟ್ ಅಲ್ಲ! ಹುಳಿನಲ್ಲಿ ಹಲಸಿನ ಕಾಯಿ ಇದೆ. ನಿನ್ನ ಪ್ಯಾಕೆಟ್‌ನಲ್ಲಿ ಏನಿರುತ್ತೆ?"

ಕುಮಾರ್: "ಶಾನುಬೋಗರೆ, ಅರ್ಥ ಮಾಡ್ಕೊಳ್ಳಿ. ಈ ಸಾಲಿನಲ್ಲಿ ಕೂತಿರೋ ನಾವೆಲ್ಲಾ "ಯೂಸರ್ಸ್" (users). ನಮಗೆ ಹಲಸಿನ ಹುಳಿ ಬೇಕು ಅಂತ ನಾವು ಕೈ ಎತ್ತಿದ್ರೆ ಅದು "ರಿಕ್ವೆಸ್ಟ್" (request) ಕಳಿಸಿದ ಹಾಗೆ. ಆ ಬಡಿಸೋನು ಬಂದು ಹಲಸಿನ ಹುಳಿ ಹಾಕಿದ್ರೆ ಅದು "ರೆಸ್ಪಾನ್ಸ್" (response) ಸಿಕ್ಕ ಹಾಗೆ!"

ಮೋಹನ್: (ಫೋನ್‌ನಲ್ಲಿ ರೆಕಾರ್ಡ್ ಮಾಡುತ್ತಾ) "ವಾವ್! "ಸಂಬಾರ್ ಸರ್ವರ್" (sambar server) ಅಂಡ್ "ಬಕೆಟ್ ಬ್ಯಾಂಡ್‌ವಿಡ್ತ್"!(bucket bandwidth) ಕುಮಾರ್ ಅಣ್ಣಾ, ಒಂದು ವೇಳೆ ಹಲಸಿನ ಹುಳಿ ಖಾಲಿಯಾದ್ರೆ ಅದನ್ನ ಏನಂತೀವಿ?"

ಕುಮಾರ್: "ಅದನ್ನೇ "ಸರ್ವರ್ ಡೌನ್" (server down) ಅಂತೀವಿ! ಆಗ ಅಡುಗೆ ಮನೆಯಿಂದ ಮತ್ತೆ ಹಲಸಿನ ಹುಳಿ ಬರೋವರೆಗೂ ನಾವು "ಬಫರಿಂಗ್" (buffering) ಮಾಡ್ತಾ ಕೂತಿರಬೇಕು."

ಕುಮುದ: (ಗಟ್ಟಿಯಾಗಿ ನಗುತ್ತಾ) "ಲೇ ಕುಮಾರ್, ನಿನ್ನ ಸರ್ವರ್ ಡೌನ್ ಆದ್ರೆ ಜನ ಸುಮ್ಮನೆ ಕೂರಲ್ಲಪ್ಪಾ, ಎದ್ದು ಹೋಗಿ ಅಡುಗೆ ಮನೆಗೇ ನುಗ್ತಾರೆ! ಇಲ್ಲಿ ಯಾವ ಬಫರಿಂಗ್ ಇಲ್ಲ, ಬರಿ "ಸಫರಿಂಗ್"  ಮಾತ್ರ... ಅಂದ್ರೆ ಊಟ ಸಿಗದೆ ಇರೋ ಸಿಟ್ಟು!"

ಮಣಿ: "ಅಷ್ಟಕ್ಕೂ ಕುಮಾರ್, ಈ ಪಲ್ಯದ ಕಥೆ ಏನು? ಇದನ್ನೂ ನಿನ್ನ ಕಂಪ್ಯೂಟರ್ ಭಾಷೆಯಲ್ಲಿ ಹೇಳ್ತೀಯಾ?"

ಕುಮಾರ್: "ಅತ್ತೆ, ಪಲ್ಯ ಅಂದ್ರೆ "ಕ್ಯಾಶ್ ಮೆಮೊರಿ" (cache memory) ಇದ್ದ ಹಾಗೆ. ಅದು ಸ್ವಲ್ಪ ಇರುತ್ತೆ, ಆದ್ರೆ ಊಟಕ್ಕೆ ಟೇಸ್ಟ್ ಕೊಡುತ್ತೆ. ಚಟ್ನಿ ಅಂದ್ರೆ "ಫೈರ್ ವಾಲ್" (firewall) ... ತುಂಬಾ ಖಾರ ಇದ್ರೆ ಹೊಟ್ಟೆ ಸುಡುತ್ತೆ!"

ಕೃಷ್ಣ ರಾವ್: (ಅನ್ನ ಬಡಿಸುವವನು ಬಂದಾಗ) "ಲೇ ಕುಮಾರ್, ಈಗ ಅನ್ನ ಬರ್ತಾ ಇದೆ ನೋಡು. ಇದನ್ನ ಏನಂತೀಯಾ?"

ಕುಮಾರ್: "ಅನ್ನ ಅಂದ್ರೆ "ಹಾರ್ಡ್ ಡಿಸ್ಕ್" (hard disk) ಮಾವ. ಅದು ಇಡೀ ಊಟದ ಬೇಸ್ (base). ಅನ್ನ ಇಲ್ಲದಿದ್ರೆ ನಮ್ಮ "ಸಿಸ್ಟಮ್"  (system) ರನ್ ಆಗಲ್ಲ!"

ಕೃಷ್ಣ ರಾವ್: (ಬಡಿಸುವವನಿಗೆ) "ಏ ಮಗನೇ, ಈ ಕುಮಾರ್ ಎಲೆಗೆ ಸ್ವಲ್ಪ ಜಾಸ್ತಿ ಸಾಂಬಾರ್ ಹಾಕಪ್ಪಾ. ಅವನ ಸರ್ವರ್ ತುಂಬಾ ಬಿಸಿಯಾಗಿದೆ, ಸ್ವಲ್ಪ ತಣ್ಣಗಾಗಲಿ!"

ಕುಮಾರ್: (ಸೊಪ್ಪಿನ ಪಲ್ಯ ತಿನ್ನುತ್ತಾ) "ಉಮ್... ಮಾವ, ಈ ಪಲ್ಯದ "ಇಂಟರ್ಫೇಸ್" (interface)  ತುಂಬಾ ಚೆನ್ನಾಗಿದೆ! ಅಂದ್ರೆ ಟೇಸ್ಟ್ ಅದ್ಭುತವಾಗಿದೆ."

ಕಪಿನಿಪತಿ ರಾಯರು: "ಸಾಕು ನಿಲ್ಲಿಸೋ ನಿನ್ನ ಇಂಗ್ಲಿಷ್ ಪುರಾಣ! ಈಗ ಈ ಸೀಬಿ ನರಸಿಂಹ ಸ್ವಾಮಿ ಪ್ರಸಾದ ಒಳಗೆ ಹೋದ್ರೆ, ನಿನ್ನ ತಲೆಯಲ್ಲಿರೋ ಎಲ್ಲಾ "ವೈರಸ್" ಹೊರಟು ಹೋಗುತ್ತೆ. ಸುಮ್ಮನೆ ಕೈಯಿಂದ ಊಟ ಮಾಡು, ಮೌಸ್ ಇಂದ ಅಲ್ಲ!"

ಕುಮಾರ್: (ನಗುತ್ತಾ ಉಣ್ಣುತ್ತಾ) "ನಿಜ ಅಪ್ಪ. ಈ ಊಟದ ಮುಂದೆ ಯಾವ ಸಾಫ್ಟ್‌ವೇರ್ ಇಲ್ಲ, ಯಾವ ಲಾಗಿನ್ ಇಲ್ಲ. ಇದು ಬರಿ "ಹ್ಯೂಮನ್ ಕನೆಕ್ಷನ್" ಅಷ್ಟೇ! ಮುಂದಿನ ಸರಿ ನಾನು ಬರೋದು "ಲಾಗಿನ್" ಆಗೋಕೆ ಅಲ್ಲ, ನಿಮ್ಮೆಲ್ಲರ ಜೊತೆ "ಕನೆಕ್ಟ್" ಆಗೋಕೆ!"




Comments