ಸಿಡ್ನಿಯಲ್ಲಿ ಶಂಕರ ಜಯಂತಿಯ ಸಂಭ್ರಮ
ವರದಿ - ಶ್ರೀಮತಿ ಅನು ಶಿವರಾಂ
ಶಿಶಿರಕಾಲದ ಎಳೆ ಬಿಸಿಲಿನಲ್ಲಿ ಶನಿವಾರ, ಮೇ 9 ರಂದು ಸಿಡ್ನಿಯ ಟೂನಗಬೀ ಶಾಲೆಯ
ಆವರಣದಲ್ಲಿ ರುದ್ರ, ನಮಕ, ಚಮಕಗಳ
ಗಂಭೀರ ಸ್ವರಘೋಷ ಕೇಳಿಬಂದಿತು.
ಶಂಕರ ಸೇವಾ ಸಮಿತಿಯ ಹಲವಾರು ಭಕ್ತಾದಿಗಳು ಸೇರಿ ಶಂಕರ ಜಯಂತಿಯನ್ನು ಆಚರಿಸುತ್ತಿದ್ದ ಸಂದರ್ಭ.
ಶಂಕರ
ಜಯಂತಿಯನ್ನು ಆದಿ ಗುರು ಶ್ರೀ
ಶಂಕರಚಾರ್ಯರ ಜನ್ಮದಿನದ ನೆನಪಿಗಾಗಿ
ಆಚರಿಸುತ್ತಾರೆ. ವೈಶಾಖ ಮಾಸದ ಶುಕ್ಲ ಪಕ್ಷ ಪಂಚಮಿಯಂದು ಶಂಕರ ಜಯಂತಿಯನ್ನು
ಆಚರಿಸುವ ಪದ್ದತಿ, ಆದರೆ ದೊಡ್ಡ ಪಟ್ಟಣಗಳಲ್ಲಿ ವಾಸಿಸುವ ಜನರ ಅನುಕೂಲಕ್ಕಾಗಿ
ಈ ಜಯಂತಿ
ಉತ್ಸವವನ್ನು ವಾರಾಂತ್ಯಕ್ಕೆ ಮುಂದೂಡಲಾಗಿತ್ತು. ಪ್ರತಿ ವರ್ಷದಂತೆ ಈ
ವರ್ಷವೂ ಶಂಕರ ಜಯಂತಿಯನ್ನು ಸಡಗರ, ಸಂಭ್ರಮಗಳಿಂದ ಆಚರಿಸಲಾಯಿತು.
ಸುಮಾರು ಎಂಟನೆಯ ಶತಮಾನದಲ್ಲಿ ಹಿಂದೂ ಧರ್ಮವು ಅಳಿವಿನ
ಹಾದಿಯಲ್ಲಿದ್ದಾಗ, ಶಂಕರಾಚಾರ್ಯರು
ಹಿಂದೂ ಧರ್ಮವನ್ನು ಎಲ್ಲರಲ್ಲಿಯೂ ಜಾಗೃತಗೊಳಿಸಲು ಇಡೀ
ಭರತವರ್ಷದಲ್ಲಿ ಪಾದಯಾತ್ರೆ ಕೈಗೊಂಡರು. ಅವರು ದೇಶದ
ನಾಲ್ಕು ದಿಕ್ಕುಗಳ್ಳಲ್ಲೂ ನಾಲ್ಕು
ಬೋಧನಾ ಕ್ಷೇತ್ರಗಳನ್ನು ಸ್ಥಾಪಿಸಿದರು – ದಕ್ಷಿಣದಲ್ಲಿ ಶೃಂಗೇರಿ, ಉತ್ತರದಲ್ಲಿ ಬದರಿನಾಥ್, ಪಶ್ಚಿಮದಲ್ಲಿ ದ್ವಾರಕಾ ಮತ್ತು ಪೂರ್ವದಲ್ಲಿ ಜಗನ್ನಾಥ ಪುರಿ.ಅವರು ತಮ್ಮ ಅದ್ವೈತ ವಿಚಾರಧಾರೆಯ ಮೂಲಕ ಜೀವಾತ್ಮ
ಹಾಗೂ ಪರಮಾತ್ಮರ ಅವಿನಾಭಾವ ಸಂಬಂಧವನ್ನು ಜನರಿಗೆ ತಿಳಿಸಿ ಕೊಟ್ಟರು.
ಶ್ರೀ ಸುಂದರೇಶ ರಾವ್, ಶ್ರೀ ಆನಂದ್ ಹಾಗೂ ಶ್ರೀ ಸೋಮಶೇಖರ್ ಅವರ ನೇತೃತ್ವದಲ್ಲಿ, ರುದ್ರ, ನಮಕ, ಚಮಕ ಪೂರ್ವಕ ಅಭಿಷೇಕವನ್ನು ಮಾಡಲಾಯಿತು. ಭಕ್ತಾದಿಗಳೂ ಅಭಿಷೇಕದಲ್ಲಿ ಪಾಲ್ಗೊಂಡು ಧನ್ಯರಾದರು . ಶ್ರೀ ಶಂಕರರು ತಮ್ಮ ಕೇವಲ 32 ವರ್ಷಗಳ ಆಯುಸ್ಸಿನಲ್ಲಿ 300 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದರೆನ್ನಲಾಗಿದೆ. ಅಂದು ಸಾಮೂಹಿಕವಾಗಿ ಶಂಕರ ವಿರಚಿತ ಶಿವ ಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರವನ್ನು ಪಠಿಸಲಾಯಿತು.
ಜೊತೆಗೆ
ಶ್ರೀ ಭಾರತೀ ತೀರ್ಥರಿಂದ ರಚಿತವಾದ ಮಹಾ
ವಿಷ್ಣು ಸ್ತೋತ್ರ ಹಾಗೂ ಶಂಕರರ ಶಿಷ್ಯ ಶ್ರೀ
ಗಿರಿಯವರಿಂದ ರಚಿಸಲಾದ ತೋಟಾಕಷ್ಟವನ್ನು
ಒಕ್ಕೊರಳಿನಿಂದ ಹಾಡಲಾಯಿತು.
‘ಶಾರದೆ
ಕರುಣಾನಿಧೆ’ ಹಾಡಿಗೆ ಕುಮಾರಿ ಸಿಮರನ್ ಯದುಗಿರಿ ಅತ್ಯಂತ ಭಾವಪೂರ್ಣವಾಗಿ ನರ್ತಿಸಿ, ನಾಟ್ಯ ಸೇವೆ ಸಮರ್ಪಿಸಿದರೆ,
ಕನ್ನಡ ಶಾಲೆಯ ಮತ್ತೊಂದು ಉತ್ತಮ ವಿದ್ಯಾರ್ಥಿಯಾದ
ಕುಮಾರಿ ದೇವಿಕಾ ಪ್ರಮೋದ್ ಶ್ರೀ
ಶಂಕರರ ಪ್ರಸಿದ್ಧ ನಿರ್ವಾಣ ಅಷ್ಟಕವನ್ನು ಬಹಳ
ಸುಂದರವಾಗಿ ಹಾಡಿ, ಸಂಗೀತ ಸೇವೆಯನ್ನು ಸಲ್ಲಿಸಿದಳು. ಶ್ರೀ ಕಾರ್ತಿಕ್ ಭಾರದ್ವಾಜ್ರವರು
ತಮ್ಮ ಕೊಳಲಿನಲ್ಲಿ ಬಹಳ ಮಧುರವಾಗಿ
‘ ಭೋ ಶಂಭೋ ‘ ನುಡಿಸಿ ಎಲ್ಲರ ಮನ
ತಣಿಸಿದರು.
ಸಿಡ್ನಿ
ಸಂಸ್ಕೃತ ಶಾಲೆಯ ನಿರ್ದೇಶಕಿ ಶ್ರೀಮತಿ ಡಾ ಮೀನಾಕ್ಷಿಯವರು ಬಹಳ ಸರಳ ಭಾಷೆಯಲ್ಲಿ ಅತ್ಯಂತ
ಆಪ್ತವಾಗಿ ಶಿವ ಪಂಚಾಕ್ಷರ ನಕ್ಷತ್ರಮಾಲಾ
ಸ್ತೋತ್ರವನ್ನು ವಿವರಿಸಿದರು.
ಇಂದಿನ ಕಾಲಘಟ್ಟದಲ್ಲಿ ಆಧ್ಯಾತ್ಮ ಹೇಗೆ
ನಮ್ಮ ಮಾನಸಿಕ ಆರೋಗ್ಯ ಹಾಗೂ
ಶಾಂತಿಗೆ ಪೂರಕವಾಗಬಲ್ಲದು ಎಂದು ತಿಳಿಸಿದರು.
ಮಹಾ ಮಂಗಳಾರತಿಯ ನಂತರ
ಕಾರ್ಯಕ್ರಮದ ಆಯೋಜಕರಾದ ಸಿಡ್ನಿ ಕನ್ನಡ ಶಾಲೆಯ ಮುಖ್ಯಸ್ಥರಾದ ಶ್ರೀ ನಾರಾಯಣ ಕನಕಾಪುರ ಅವರು ವಂದನಾರ್ಪಣೆ ಮಾಡಿದರು.
ಭಕ್ತಾದಿಗಳು ಪ್ರೀತಿಯಿಂದ ಮಾಡಿ
ಬಡಿಸಿದ ರುಚಿಕರ ಪ್ರಸಾದದೊಂದಿಗೆ
2026ರ ಶಂಕರ ಜಯಂತಿಯ ಚಿಕ್ಕ- ಚೊಕ್ಕ
ಕಾರ್ಯಕ್ರಮವು ಮುಕ್ತಾಯವಾಯಿತು.
Comments
Post a Comment