ಕಚ-ದೇವಯಾನಿ - ೧

 ಕಚ-ದೇವಯಾನಿ - ೧

- ಸರಸ್ವತಿ, ಸಿಡ್ನಿ


ದೇವೇಂದ್ರನ ಒಡ್ಡೋಲಗ ನಡೆಯುತ್ತಿದೆ. ದೇವತೆಗಳೆಲ್ಲಾ ಚಿಂತಾಕ್ರಾಂತರಾಗಿದ್ದಾರೆ. ಬಾರಿ ಬಾರಿ ರಾಕ್ಷಸರಿಗೂ ಅವರಿಗೂ ಯುದ್ಧ ನಡೆಯುತ್ತಿರುತ್ತದೆ. ಸಮುದ್ರ ಮಥನ ಸಂದರ್ಭದಲ್ಲಿ ದೇವತೆಗಳು ರಾಕ್ಷಸರಿಗೆ ಮೋಸ ಮಾಡಿ ಅಮೃತವನ್ನು ತಾವೇ ಹಂಚಿಕೊಂಡರೆಂದು ರಾಕ್ಷಸರಿಗೆ, ದೇವತೆಗಳ ಮೇಲೆ ಕೋಪ. ಹಾಗಾಗಿ ಶಿವನನ್ನೂ, ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಅನೇಕ ವರಗಳನ್ನು ಪಡೆದು ದೇವತೆಗಳ ಮೇಲೆ ಆಗ್ಗಾಗೆ ದಾಳಿ ಮಾಡಿ ಇಂದ್ರ ಪದವಿಗಾಗಿ ಹೋರಾಡುವುದು. ಇದೆಲ್ಲವೂ ನಡೆಯುತ್ತಿರುತ್ತದೆ. ಅಮೃತ ಕುಡಿದುದರಿಂದ ದೇವತೆಗಳಿಗೆ ಸಾವು ಬರುತ್ತಿರಲಿಲ್ಲ. ಆದರೆ ಹಿಂಸೆ, ಅವಮಾನ, ಇಂದ್ರ ಸಿಂಹಾಸನ ಬಿಟ್ಟು ಓಡಿ ಹೋಗುವುದು, ಇವೆಲ್ಲವೂ ನಡೆಯುತ್ತಿರುತ್ತದೆ. ಅದಕ್ಕಾಗಿ ಏನು ಮಾಡಬೇಕೆಂದು ಎಲ್ಲರೂ ಸಭೆ ಸೇರಿ ಯೋಚಿಸುತ್ತಿರುತ್ತಾರೆ. ಈ ಸಭೆಯಲ್ಲಿ ಆಂಗೀರಸ ಮಹರ್ಷಿಗಳ ಮಗ ಬೃಹಸ್ಪತಿ ಮತ್ತು ಋಷಿಗಳಾದ ಶುಕ್ರಾಚಾರ್ಯರೂ ಇರುತ್ತಾರೆ. ಆಗೆಲ್ಲಾ ಶುಕ್ರಾಚಾರ್ಯರ ಸಲಹೆಗಳಿಗೆ ಮನ್ನಣೆ ಸಿಗುತ್ತಿರಲಿಲ್ಲ. ಒಂಥರಾ ಉದಾಸೀನ. ಈ ಬಾರಿಯು ಹೀಗೆ ಆಗಿ, ಅವರಿಗೆ ಅವಮಾನವೆನಿಸಿ ಆ ದಿನ ಸಭೆ ಬಿಟ್ಟು ಎದ್ದು ಹೊರಟು ಬಿಡುತ್ತಾರೆ. ಶುಕ್ರಾಚಾರ್ಯರೂ, ಬೃಹಸ್ಪತಿಗಳಿಬ್ಬರೂ ಆಂಗೀರಸರ ಬಳಿ ಒಟ್ಟಿಗೆ ವಿದ್ಯೆ ಕಲಿತಿರುತ್ತಾರೆ. 

ಹೀಗೆ ಸಭೆ ಬಿಟ್ಟು ಬಂದ ಬೃಹಸ್ಪತಿಗಳಿಗಿಂತ ಹೆಚ್ಚಿನ ವಿದ್ಯೆ ಕಲಿತು ದೇವತೆಗಳಿಗೆ ಬುದ್ಧಿ ಕಲಿಸ ಬೇಕೆಂದು, ಶಿವನನ್ನು ಕುರಿತು ತಪಸ್ಸು ಮಾಡುತ್ತಾರೆ. ಅದೂ ಎಂಥಾ ತಪಸ್ಸು - ಕುಳಿತು ಕೊಂಡೂ ಅಲ್ಲ, ಒಂಟಿ ಕಾಲಲ್ಲಿ ನಿಂತೂ ಅಲ್ಲ. ಒಂದು ಮರದ ರೆಂಬೆಗೆ ಬಾವಲಿಯಂತೆ ತಲೆ ಕೆಳಗಾಗಿ ನೇತು ಹಾಕಿಕೊಂಡು ದೀರ್ಘಕಾಲ ತಪಸ್ಸು ಮಾಡುತ್ತಾರೆ. ಶಿವ ಮೆಚ್ಚಿ ಪ್ರತ್ಯಕ್ಷನಾಗಿ, 'ಏನು ಬೇಕೆಂದು' ಕೇಳಿದಾಗ 'ತನಗೆ "ಸಂಜೇವಿನಿ ವಿದ್ಯೆ" ಕರುಣಿಸು' ಎನ್ನುತ್ತಾರೆ. ಶಂಕರ 'ತಥಾಸ್ತು' ಎಂದು ವರ ಕೊಟ್ಟು ಹೊರಟು ಹೋಗುತ್ತಾನೆ.

ಈಗ ಶುಕ್ರಾಚಾರ್ಯರು ರಾಕ್ಷಸರ ಪಂಗಡ ಸೇರಿಕೊಳ್ಳುತ್ತಾರೆ. ದಾನವರು ಇವರನ್ನು ಗುರುವಾಗಿ ಸ್ವೀಕರಿಸುತ್ತಾರೆ. ಇತ್ತ ಬೃಹಸ್ಪತಿಗಳು ದೇವತೆಗಳ ಗುರುವಾಗುತ್ತಾರೆ. ಮೃತ ಸಂಜೀವಿನಿ ವಿದ್ಯೆ ಕಲಿತ ಶುಕ್ರಾಚಾರ್ಯರು ತಮಗೆ ಗುರುವಾಗಿ ದೊರೆತ ಮೇಲೆ ದಾನವಾರ ಅಟ್ಟಹಾಸ ಹೆಚ್ಚಾಗುತ್ತದೆ. ದೇವತೆಗಳ ಮೇಲೆ ಪದೇ-ಪದೇ ದಾಳಿ ಶುರುವಾಗುತ್ತದೆ. ಈ ಯುದ್ಧಗಳಲ್ಲಿ ಸತ್ತ ರಾಕ್ಷಸರನ್ನು ಶುಕ್ರಾಚಾರ್ಯರು ಮೃತ ಸಂಜೀವಿನಿ ಮಂತ್ರದಿಂದ ಅವರನ್ನು ಬದುಕಿಸುವುದು ಶುರುವಾಗುತ್ತದೆ. ಹೀಗಾಗಿ ರಾಕ್ಷಸರ ಸಂಖ್ಯಾಬಲ ಹೆಚ್ಚಾಗ ತೊಡಗುತ್ತದೆ. 

ಇದರಿಂದ ಚಿಂತಿತರಾದ ದೇವತೆಗಳು ಸಭೆ ಸೇರಿ ಏನು ಮಾಡುವುದೆಂದು ಚರ್ಚಿಸ ತೊಡಗುತ್ತಾರೆ. ಕಡೆಗೊಂದು ತೀರ್ಮಾನವಾಗುತ್ತದೆ. ನಮ್ಮವರಲ್ಲೊಬ್ಬ ಬುದ್ಧಿವಂತ ಶುಕ್ರಾಚಾರ್ಯರ ಬಳಿ ಹೋಗಿ ಸಂಜೀವಿನಿ ವಿದ್ಯೆ ಕಲಿತು ಬರಬೇಕೆಂದು. ಆದರೆ 'ಯಾರು ಈ ಧೈರ್ಯ ಮಾಡುವವರು?' ಎಂದು ಕೊಳ್ಳುತ್ತಿರುವಾಗ, ಸಭೆಯ ಮಧ್ಯದಿಂದ ಒಬ್ಬ ತರುಣ ಎದ್ದು ನಿಂತು 'ನಾನು ಇದಕ್ಕೆ ಸಿದ್ಧನೆಂದು' ನುಡಿಯುತ್ತಾನೆ. ಕಟ್ಟು ಮಸ್ತಾದ ದೇಹ, ತೇಜಸ್ವಿ ವದನ, ವಿನಯವಂತ, ಧೈರ್ಯಸ್ತ ತರುಣ. ಎಲ್ಲರೂ ಅವನತ್ತ ನೋಡುತ್ತಾರೆ. ಅವನೇ ಬೃಹಸ್ಪತಿಗಳ ಮಗ 'ಕಚದೇವ', ಆಂಗೀರಸರ ಮೊಮ್ಮಗ. ಎಲ್ಲರಿಗೂ ಸಂತೋಷವಾಗುತ್ತದೆ. ಎಲ್ಲರೂ ಅವನಿಗೆ ಆಶೀರ್ವಧಿಸಿ 'ಬೇರೇನೂ ಯೋಚನೆ ಮಾಡದೆ, ವಿದ್ಯೆ ಕಲಿಯುವುದಷ್ಟೇ ಗುರಿಯಾಗಲಿ, ಯಶಸ್ವಿಯಾಗಿ ಬಾ' ಎಂದು ಎಲ್ಲರೂ ಆಶೀರ್ವಧಿಸುತ್ತಾರೆ. ಬೃಹಸ್ಪತಿಗಳಿಗೂ ಸಂತೋಷವಾಗುತ್ತದೆ. 

ಸರಿ, ಕಚ ಭೂಲೋಕಕ್ಕೆ ಬಂದು ಶುಕ್ರಾಚಾರ್ಯರ ಆಶ್ರಮ ತಲುಪುತ್ತಾನೆ. ಕೈಯ್ಯಲ್ಲೊಂದಿಷ್ಟು ಸಮಿತ್ತು ಮತ್ತು ಕಾಡಿನ ಹಣ್ಣುಗಳನ್ನು ಹಿಡಿದು ಆಚಾರ್ಯರಿಗೆ ಅರ್ಪಿಸಿ ನಮಸ್ಕರಿಸುತ್ತಾನೆ. ತಾನು ಬಂದ ಕಾರಣ ತಿಳಿಸುತ್ತಾನೆ. ಶುಕ್ರಾಚಾರ್ಯರಿಗೆ ದಿವ್ಯ ಜ್ಞಾನದಿಂದ ಎಲ್ಲವೂ ಅರ್ಥವಾಗುತ್ತದೆ. ಆದರೆ ಯಾರೇ ಗುರುವಾದರೂ ವಿದ್ಯೆ ಯಾಚಿಸಿ ಬಂದವರಿಗೆ 'ಇಲ್ಲ'ವೆನ್ನುವುದು ಗುರು ಧರ್ಮವಲ್ಲ. ಅವರು ಒಪ್ಪುತ್ತಾರೆ. ನೀನು ಸಾವಿರ ವರ್ಷ ಇಲ್ಲಿದ್ದು ವಿದ್ಯೆ ಕಲಿಯಬೇಕು ಎನ್ನುತ್ತಾರೆ. ಕಚ ಇದಕ್ಕೆ ಒಪ್ಪುತ್ತಾನೆ. ಸರಿ ಅವನ ವಿದ್ಯಾಭ್ಯಾಸ ಪ್ರಾರಂಭವಾಗುತ್ತದೆ. ಪ್ರತಿ ನಿತ್ಯ ಎದ್ದ ಕೂಡಲೆ ಆಶ್ರಮ ಸ್ವಚ್ಛ ಮಾಡುವುದು, ಗುರುಗಳಿಗೆ ಅವರ ಪೂಜಾನುಷ್ಠಾನಗಳಿಗೆ ಬೇಕಾದ ವ್ಯವಸ್ಥೆ ಮಾಡುವುದು, ಕಾಡಿಗೆ ಹೋಗಿ ದನ-ಕರುಗಳನ್ನು ಮೇಯಿಸಿಕೊಂಡು ಬರುವುದು ಮುಂತಾದ ಎಲ್ಲಾ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಿರುತ್ತಾನೆ. ಶುಕ್ರಾಚಾರ್ಯರಿಗೆ 'ದೇವಯಾನಿ' ಎಂಬ ಮಗಳಿರುತ್ತಾಳೆ. ಅವಳು ಅಪ್ರತಿಮ ಸುಂದರಿ, ವಿದ್ಯಾವಂತೆ. ಆಚಾರ್ಯರಿಗೆ ಮಗಳ ಮೇಲೆ ಅತಿಯಾದ ಪ್ರೀತಿ. ಅವಳನ್ನೂ ಅತಿ ಮುದ್ದಿನಿಂದ ಬೆಳೆಸಿರುತ್ತಾರೆ. ಹಾಗಾಗಿ ಅವಳು ಹಠಮಾರಿ ಮತ್ತು ಅಹಂಕಾರಿಯಾಗಿರುತ್ತಾಳೆ. ಅವಳು ಕಚ ಬಂದಾಗಿನಿಂದ ಅವನನ್ನು ಗಮನಿಸುತ್ತಾ ಇರುತ್ತಾಳೆ. ಅವನು ಕಾಡಿನಿಂದ ಅವಳಿಗೆ ಬಗೆ ಬಗೆಯ ಹೂ ತಂದು ಕೊಡುವುದು, ಮಧುರವಾಗಿ ಹಾಡುವುದು, ಅವಳು ಹೇಳಿದ ಎಲ್ಲಾ ಕೆಲಸ ಮಾಡುವುದು, ಅವಳೊಡನೆ ಎಂದೂ ಅಸಭ್ಯವಾಗಿ ನಡೆದುಕೊಳ್ಳದಿರುವುದು - ಇದೆಲ್ಲಾ ನೋಡಿ ಅವಳಿಗೆ ಅವನ ಮೇಲೆ ಒಂದು ಬಗೆಯ ಆಸ್ಥೆ ಬೆಳೆಯುತ್ತದೆ. ಕ್ರಮೇಣ ಅದು ಪ್ರೀತಿಯಾಗಲು ಶುರುವಾಗುತ್ತದೆ. ಆದರೆ ಕಚ ಇದನ್ನು ಗಮನಿಸವದವನಂತೆ 'ತಾನಾಯಿತು, ತನ್ನ ವಿದ್ಯಾಭ್ಯಾಸವಾಯಿತು' ಎಂದು ಇದ್ದು ಬಿಡುತ್ತಾನೆ. 

ಇತ್ತ ರಾಕ್ಷಸ ಯುವಕರು ಇದನ್ನೆಲ್ಲಾ ಗಮನಿಸಿ, ದೇವಲೋಕದಿಂದ ಬಂದ ಯುವಕನೊಬ್ಬ, ತಮ್ಮ ಗುರುಗಳಿಗೆ ಮತ್ತು ಅವರ ಮಗಳಿಗೆ ಇಷ್ಟು ಹತ್ತಿರವಾದರೆ ತಮ್ಮ ಗತಿಯೇನು ಎಂದು ಅಸೂಯೆ ಪಟ್ಟು, ಅವನ್ನನ್ನು ಹೇಗಾದರೂ ಮುಗಿಸಬೇಕೆಂದು ಕಾಯುತ್ತಿರುತ್ತಾರೆ. ಒಂದು ದಿನ್ ಅವನು ದನ ಮೇಯಿಸುವುದಕ್ಕೆ ಕಾಡಿಗೆ ಹೋದಾಗ ಅವನನ್ನು ಕೊಂದು ಬಿಸಾಕುತ್ತಾರೆ. ಇತ್ತ ಆಶ್ರಮದಲ್ಲಿ ಸಂಜೆಯಾದರೂ ಕಚ ಬರಲಿಲ್ಲ, ದನಗಳು ಮಾತ್ರ ಬಂದಿವೆ ಎಂದು ದೇವಯಾನಿ ಕಳವಳಗೊಂಡು ತಂದೆಗೆ ತಿಳಿಸುತ್ತಾಳೆ. ಇಬ್ಬರೂ ಕಾಡಿಗೆ ಹೋಗಿ ಹುಡುಕುತ್ತಾರೆ. ಒಂದು ಕಡೆ ಕಚ ಸತ್ತು ಬಿದ್ದಿರುವುದನ್ನು ನೋಡಿ ದೇವಯಾನಿ ಅವನನ್ನು ಬದುಕಿಸಬೇಕೆಂದು ತಂದೆಗೆ ಒತ್ತಾಯಿಸುತ್ತಾಳೆ. ಶುಕ್ರಾಚಾರ್ಯರು ತಮ್ಮ ಮೃತ ಸಂಜೀವಿನಿ ಮಂತ್ರ ಪಠಿಸಿ 'ಕಚ ಎದ್ದು ಬಾ' ಎನ್ನುತ್ತಾರೆ. ಕಚ ಬದುಕುತ್ತಾನೆ. ದೇವಯಾನಿಗೆ ತುಂಬಾ ಸಂತೋಷವಾಗುತ್ತದೆ. ಆದರೆ ರಾಕ್ಷಸರು ಮತ್ತೊಂದು ದಿನ ಪುನ: ಅವನನ್ನು ಕೊಲ್ಲುತ್ತಾರೆ. ದೇವಯಾನಿ ತಂದೆಗೆ ಹೇಳಿ ಪುನ: ಬದುಕಿಸುತ್ತಾಳೆ. ಕಡೆಗೆ ರಾಕ್ಷಸರು ಇನ್ನೊಂದು ಉಪಾಯ ಮಾಡುತ್ತಾರೆ. ಕಚನನ್ನು ಕೊಂದು ಅವನ ದೇಹವನ್ನು ಸುಟ್ಟು ಬೂದಿ ಮಾಡಿ, ಆ ಬೂದಿಯನ್ನು ಸೆರೆಯಲ್ಲಿ ಕದಡಿ ಶುಕ್ರಾಚಾರ್ಯರಿಗೆ ಕುಡಿಯಲು ಕೊಡುತ್ತಾರೆ. ಶುಕ್ರಾಚಾರ್ಯರಿಗೆ ಸುರಪಾನ ಮಾಡುವ ದೌರ್ಬಲ್ಯವಿರುತ್ತದೆ. ಅವರು ಅದನ್ನು ಕುಡಿದು ನಿದ್ದೆಗೆ ಜಾರುತ್ತಾರೆ. ಎಂದಿನಂತೆ ಕಚ ಬರದಿರುವುದನ್ನು ಕಂಡು, ದೇವಯಾನಿ ಆತಂಕದಿಂದ ತಂದೆಯ ಬಳಿ ಬರುತ್ತಾಳೆ. ಅವರು ಗಾಢ ನಿದ್ರೆಯಲ್ಲಿರುತ್ತಾರೆ. ದೇವಯಾನಿಗೆ ಹೆಚ್ಚು ಹೊತ್ತು ಕಾಯುವುದಕ್ಕಾಗುವುದಿಲ್ಲ. ತಂದೆಯನ್ನು ಎಚ್ಚರಿಸಿ ವಿಷಯ ತಿಳಿಸುತ್ತಾಳೆ. ಆಚಾರ್ಯರು ದಿವ್ಯ ದೃಷ್ಟಿಯಿಂದ ವಿಷಯ ತಿಳಿದು ಕೊಳ್ಳುತ್ತಾರೆ. ಮಗಳಿಗೆ ಹೇಳುತ್ತಾರೆ

'ಕಚ ನನ್ನ ಹೊಟ್ಟೆಯಲ್ಲಿದ್ದಾನೆ. ನಾನು ಅವನನ್ನು ಬದುಕಿಸಿದರೆ, ಅವನು ನನ್ನ ಹೊಟ್ಟೆಯೊಡೆದು ಹೊರಗೆ ಬರುತ್ತಾನೆ. ಆಗ ನಾನು ಸಾಯುತ್ತೇನೆ'.

ದೇವಯಾನಿಗೆ ಇಬ್ಬಂದಿಯಾಗುತ್ತದೆ. ತಂದೆಯ ಮೇಲೆ ಪ್ರೀತಿ, ಕಚನ ಮೇಲೆ ಮೋಹ. ಕಡೆಗೆ ಅವಳು ಹೇಳುತ್ತಾಳೆ. ನೀವು ಸಂಜೀವಿನಿ ವಿದ್ಯೆಯನ್ನು ಅಲ್ಲೇ ಅವನಿಗೆ ಕಲಿಸಿ. ಅವನು ಈಚೆ ಬಂದು ಆ ವಿದ್ಯೆಯಿಂದ ನಿಮ್ಮನ್ನು ಬದುಕಿಸುತ್ತಾನೆ. ಶುಕ್ರಾಚಾರ್ಯರಿಗೆ ಮಗಳ ಬುದ್ಧಿವಂತಿಕೆ ಕಂಡು ಸಂತೋಷವಾಗುತ್ತದೆ. 

ಶುಕ್ರಾಚಾರ್ಯರು ಶಿವನನ್ನು ಧ್ಯಾನಿಸಿ 'ಮಗು ಕಚ' ಎನ್ನುತ್ತಾರೆ. ಕಚ ಅವರ ಹೊಟ್ಟೆಯೊಳಗಿಂದ ಓಗೊಡುತ್ತಾನೆ. ಅವನಿಗೆ ವಿಷಯ ತಿಳಿಸಿ ಸಂಜೀವಿನಿ ಮಂತ್ರ ಪ್ರಯೋಗಿಸಿ ಅವನನ್ನು ಬದುಕಿಸುತ್ತಾರೆ. ನಂತರ ಅವನಿಗೆ ಸಂಜೀವಿನಿ ಮಂತ್ರ ಉಪದೇಶಿಸುತ್ತಾರೆ. ಈಗ ಹೊರಗೆ ಬಾ ಎನ್ನುತ್ತಾರೆ. ಕಚ ಅವರ ಹೊಟ್ಟೆಯೊಡೆದು ಹೊರಗೆ ಬರುತ್ತಾನೆ. ಶುಕ್ರಾಚಾರ್ಯರು ಸಾಯುತ್ತಾರೆ. ಪುನ: ಕಚ ತಾನು ಕಲಿತ ಮೃತ ಸಂಜೀವಿನಿ ಮಂತ್ರ ಪ್ರಯೋಗಿಸಿ ಶುಕ್ರಾಚಾರ್ಯರನ್ನು ಬದುಕಿಸುತ್ತಾನೆ.  ದೇವಯಾನಿಯ ಸಂತೋಷಕ್ಕೆ ಪಾರವೇ ಇಲ್ಲ. ಆಸೆ ತುಂಬಿದ ಕಣ್ಣುಗಳಿಂದ ಕಚನನ್ನು ನೋಡುತ್ತಾಳೆ. ಅವನಿಂದ ಯಾವ ಸ್ಪಂದನವೂ ಇಲ್ಲ. ಸರಿ ಆ ವೇಳೆಗೆ ಸಾವಿರ ವರ್ಷ ಕಳೆಯುತ್ತದೆ. ಕಚನ ಉದ್ದೇಶವೂ ಪೂರ್ತಿಯಗಿರುತ್ತದೆ. ಕಚ ಗುರುಗಳ ಬಳಿ ಬಂದು ನನಗೆ ಹೊರಡಲು ಅಪ್ಪಣೆ ಕೊಡಿ ಎನ್ನುತ್ತಾನೆ. ಗುರುಗಳು 'ತಥಾಸ್ತು' ಎನ್ನುತ್ತಾರೆ. ಈ ವಿಷಯ ತಿಳಿದು ದೇವಯಾನಿ ಗಾಬರಿಯಾಗುತ್ತಾಳೆ. 

ಅವಳು ಕಚನ ಬಳಿ ಬಂದು 

'ಇದೇನು ಕಚ ನನ್ನನ್ನು ಮದುವೆಯಾಗದೆ ಹೋಗುತ್ತಿಯಾ? ಇಷ್ಟು ದಿನ ಇದ್ದರೂ ನಿನಗೆ ನನ್ನ ಮನಸ್ಸು ಅರ್ಥವಾಗಲಿಲ್ಲವೇ? ನಾನು ನಿನ್ನನ್ನು ಮನಸಾರೆ ಪ್ರೀತಿಸುತ್ತೇನೆ. ನನ್ನಿಂದಲೇ ನಿನಗೆ ಸಂಜೀವಿನಿ ವಿದ್ಯೆ ಪ್ರಾಪ್ತಿಯಾದದ್ದು. ಆ ಕೃತಜ್ಞತೆ ಇಟ್ಟುಕೊಂಡಾದರೂ ನನ್ನನ್ನು ಮದುವೆಯಾಗು. ನಿನ್ನ ಬಿಟ್ಟು ನಾನು ಬಾಳಲಾರೆ' ಎನ್ನುತ್ತಾಳೆ. 

ಕಚ ಅದೇ ನಿರ್ಲಿಪ್ತತೆಯಿಂದ ಹೇಳುತ್ತಾನೆ,

'ಕೇಳು ದೇವಯಾನಿ, ನಾನು ಎಂದೂ ನಿನ್ನನ್ನು ಪ್ರೀತಿಸಲಿಲ್ಲ. ಅದೂ ಅಲ್ಲದೆನನ್ನು ನಿನ್ನ ಮನೆಯಲ್ಲಿ ನಿನ್ನ ಅನ್ನ ತಿಂದ್ದಿದ್ದೇನೆ. ನೀನು ತಾಯಿಯಂತೆ. ಇನ್ನೊಂದು ಕಡೆ ಸಹೋದರಿ, ಹೇಗೆಂದರೆ ನಿಮ್ಮ ತಂದೆಯ ಹೊಟ್ಟೆಯಿಂದಲೇ ನಾನು ಬಂದಿದ್ದೇನೆ. ಹಾಗಾಗಿ ಅವರು ನನಗೆ ತಂದೆಯಂತೆ. ನಾವಿಬ್ಬರೂ ಸಹೋದರ-ಸಹೋದರಿಯರು. ಅಂದ ಮೇಲೆ ಈ ಮದುವೆ ಧರ್ಮಸಮ್ಮತವಲ್ಲ" ಎನ್ನುತ್ತಾನೆ.

ದೇವಯಾನಿ ಪರಿಪರಿಯಾಗಿ ಅವನನ್ನು ಒಪ್ಪಿಸಲು ನೋಡುತ್ತಾಳೆ. ಅವನು ಒಪ್ಪುವುದಿಲ್ಲ. 

ಕಡೆಗೆ ಕೋಪದಿಂದ ಕಚನಿಗೆ ಶಾಪ ಕೊಡುತ್ತಾಳೆ 'ನೀನು ಕಲಿತ ಮೃತ ಸಂಜೀವಿನಿ ವಿದ್ಯೆ ನಿನಗೆ ಫಲಿಸದಿರಲಿ' ಎಂದು. 

ಕಚನೂ ಪ್ರತಿಯಾಗಿ ಶಾಪ ಕೊಡುತ್ತಾನೆ 'ಎಲೈ ಗರ್ವಿಷ್ಟ ಹೆಣ್ಣೆ, ಬ್ರಾಹ್ಮಣನ ಮಗಳಾದ ನಿನಗೆ ಕ್ಷತ್ರಿಯನೂ, ಅತಿ ಕಾಮಿಯೂ ಆದವನು ಗಂಡನಾಗಿ ಸಿಗಲಿ'. ಶಪಿಸಿ ಹೊರಟು ಹೋಗುತ್ತಾನೆ. 

ದೇವಯಾನಿ ಶಾಪದಿಂದ ಕಚನಿಗೆ ಮೃತ ಸಂಜೀವಿನಿ ವಿದ್ಯೆ ಇನ್ನೊಬ್ಬ ಸತ್ತ ವ್ಯಕ್ತಿಯ ಮೇಲೆ ಪ್ರಯೋಗ ಮಾಡಿ ಬದುಕಿಸಲು ಸಾಧ್ಯವಾಗಲಿಲ್ಲ. ಆದರೆ ಆ ವಿದ್ಯೆಯನ್ನು ಮತ್ತೊಬ್ಬರಿಗೆ ಕಲಿಸಬಹುದಿತ್ತು. ಹಾಗಾಗಿ ಅವನು ಆ ವಿದ್ಯೆಯನ್ನು ದೇವತೆಗಳಲ್ಲಿ ಕೆಲವರಿಗೆ ಕಲಿಸುತ್ತಾನೆ. ಅಲ್ಲಿಗೆ ಅವನ ಕೆಲಸ ಮುಗಿಯಿತು.

ಮುಂದಿನ ಭಾಗದಲ್ಲಿ ದೇವಯಾನಿ ಯಯಾತಿ ಶರ್ಮಿಷ್ಟೆಯ ವಿಷಯ ತಿಳಿಯೋಣ………

Comments