ಅಂತ್ಯೇಷ್ಟಿಯ ಅವಾಂತರಗಳು

 ಅಂತ್ಯೇಷ್ಟಿಯ ಅವಾಂತರಗಳು

ಹಾಸ್ಯ ಲೇಖನ - ಅಣಕು ರಾಮನಾಥ್



ಆತ್ಮೀಯರೊಬ್ಬರು ನಿಧನರಾದ ಸುದ್ದಿ ಕೇಳಿದ ವೆಂಕಟ್ರಾಮ ಭಟ್ಟರು ಅಂತಿಮ ದರ್ಶನ ಪಡೆಯಲೆಂದು ಮೃತರ ಮನೆಯನ್ನು ತಲುಪಿದಾಗ ರಾತ್ರಿಯಾಗಿತ್ತು. ಮರುದಿನದ ಅಂತ್ಯಸಂಸ್ಕಾರದ ವರೆಗೆ ಮೃತರ ಮನೆಯಲ್ಲಿಯೇ ಉಳಿಯುವುದೆಂದು ತೀರ್ಮಾನಿಸಿದ ಭಟ್ಟರು ವೆರಾಂಡದಲ್ಲಿಯೇ ಚಾಪೆಯೊಂದನ್ನು ಹಾಸಿಕೊಂಡು, ಪಂಚೆಯೊಂದನ್ನು ಹೊದ್ದು ಮಲಗಿದರು. ಸರಿರಾತ್ರಿಯಲ್ಲಿ ಸೊಳ್ಳೆಕಾಟ ಹೆಚ್ಚಾದ್ದರಿಂದ ತಲೆ ಮುಚ್ಚುವವರೆಗೆ ಹೊದ್ದು ಮಲಗಿದರು.

ಬೆಳಗಿನ ಜಾವದಲ್ಲಿ ಮೃತರನ್ನು ಕಾಣಲು ಬಂದವರು ವೆರಾಂಡದಲ್ಲಿ ಅಲುಗದೆ ಮಲಗಿದ್ದ ಭಟ್ಟರಿಗೆ ಮಾಲಾರ್ಪಣೆ ಮಾಡಿ, ಊದಿನ ಕಡ್ಡಿಯನ್ನು ಹಚ್ಚಿ ಪಕ್ಕದಲ್ಲಿರಿಸುತ್ತಿದ್ದಾಗ ಭಟ್ಟರು ಕೊಂಚ ಅಲುಗಾಡಿದರು. ಭೀತಿಗೊಂಡ ಮೃತರ ಆಪ್ತರು ಕಿರುಚಿದ ಸದ್ದಿಗೆ ಮನೆಯವರು ಹೊರಗಿಣುಕಿ, “ಓಹ್! ಸತ್ತಿರುವವರು ಅವರಲ್ಲ, ಒಳಗಿದ್ದಾರೆ ಬನ್ನಿ” ಎಂದು ಕರೆದರು.

ವೆಂಕಟ್ರಾಮ ಭಟ್ಟರಿಗೆ ಇದ್ದಾಗಲೇ ಹೊಗೆ ಹಾಕಿಸಿಕೊಳ್ಳುವ ಯೋಗ!

ಸಾವಿನ ಮನೆಯಲ್ಲಿ ಹೀಗೆ ನಡೆದಿದ್ದರೆ ಮಸಣದಲ್ಲಿ ಕಾರ್ಯ ನಡೆಸುತ್ತಿದ್ದ ಸಮಯದಲ್ಲಿ ನಡೆದ ಪ್ರಸಂಗವೊಂದನ್ನು ಪರಾಂಬರಿಸಿ:

ಗೋತ್ರ ಯಾವುದು?”

ಕಾಶ್ಯಪ.” 

ಪ್ರವರ?”

ನನ್ನ ಸೋದರಮಾವನು ತನ್ನ ಅಕ್ಕನ ಅಂತ್ಯಸಂಸ್ಕಾರಕ್ಕೆಂದು ಶಾಸ್ತ್ರಿಗಳ ಮುಂದೆ ಕುಳಿತಿದ್ದ. ಶಾಸ್ತ್ರಿಗಳು ಮೇಲ್ಕಂಡ ಪ್ರಶ್ನೆಗಳನ್ನು ಅವನತ್ತ ಒಗೆಯುತ್ತಿದ್ದರು. ಎಲ್ಲಕ್ಕೂ ಉತ್ತರಿಸುತ್ತಿದ್ದ ಮಾವನು ಪ್ರವರವನ್ನೂ ಒಪ್ಪಿಸಿದ.

ಹೆಸರು?”

ಹೇಳಿದ. ಬುಲೆಟ್ ಟ್ರೈನ್ ವೇಗದಲ್ಲಿ ಮಂತ್ರಗಳನ್ನು ಮಣಮಣಿಸುತ್ತಾ ಶಾಸ್ತ್ರಿಗಳು ಅಂತ್ಯಕರ್ಮಗಳನ್ನು ಮುಗಿಸಿದರು. ಮಸಣದಿಂದ ಹೊರಡುವಾಗ “ಏಳನೆಯ ದಿನದಿಂದ ಕಾರ್ಯಗಳನ್ನು ಆರಂಭಿಸೋಣ. ನಿಮ್ಮ ಫೋನ್ ನಂಬರ್ ಕೊಡಿ” ಎಂದ ಶಾಸ್ತ್ರಿಗಳು ಇವನು ಹೇಳಿದ ಸಂಖ್ಯೆಗಳನ್ನು ತಮ್ಮ ಮೊಬೈಲಲ್ಲಿ ಫೀಡ್ ಮಾಡಿಕೊಂಡು, ಮತ್ತೆ “ಹೆಸರು?” ಎಂದರು.

ಕಿರಣ್.”

ತೀರಿಕೊಂಡವರ ಹೆಸರನ್ನೂ ಕಿರಣ್ ಅಂತ ಹೇಳಿದಿರಲ್ಲ!” ಶಾಸ್ತ್ರಿಗಳಿಗೆ ಏನೋ ಅನುಮಾನ.

ನೀವೆಲ್ಲಿ ಕೇಳಿದಿರಿ ಅವಳ ಹೆಸರನ್ನು?” ಮಾವ ಗೊಂದಲಕ್ಕೆ ಬಿದ್ದ.

ಅಷ್ಟು ಚೆನ್ನಾಗಿ ಹೆಸರು, ಗೋತ್ರ, ಪ್ರವರ ಎಲ್ಲಾ ಕೇಳಿದೆನಲ್ಲ ಸ್ವಾಮಿ!”

ಅವೆಲ್ಲ ನನ್ನವೇ. ನನ್ನಕ್ಕನ ಹೆಸರು ನಾಗವೇಣಿ.”

ಶಾಸ್ತ್ರಿಗಳು ತಲೆಯ ಮೇಲೆ ಕೈಹೊತ್ತರು. “ದೈವೇಚ್ಛೆ” ಎನ್ನುತ್ತಾ ಮುಂದೆ ಸಾಗಿದರು. ಅವಸರದ ಶಾಸ್ತ್ರಿಗಳು ನನ್ನ ದೊಡ್ಡಮ್ಮನ ಅಂತ್ಯಸಂಸ್ಕಾರದ ಬದಲು ಕಲ್ಲುಗುಂಡಿನಂತೆ ಕುಳಿತಿದ್ದ ನನ್ನ ಮಾವನ ಅಂತ್ಯಸಂಸ್ಕಾರವನ್ನು ಮುಗಿಸಿದ್ದರು!

ಹೀಗಾಗ್ಹೋಯ್ತಲ್ಲ ಶಾಸ್ತ್ರಿಗಳೆ! ಮಾವನಿಗೇನೂ ತೊಂದರೆ ಆಗುವುದಿಲ್ಲವೆ?” ಎಂದು ಕೇಳಿದೆ.

ಮಾವನ ವಿಷಯ ಮುಂಡಾಮೋಚ್ತು! ನನ್ನ ವಿಷಯ ಹೇಳಯ್ಯಾ! ‘ನನ್ನ ಗತಿ ಏನು ಶಾಸ್ತ್ರಿಗಳೇ?’ ಅಂತ ನಿನ್ನ ದೊಡ್ಡಮ್ಮನ ಆತ್ಮ ಈವತ್ತು ರಾತ್ರಿ ನನ್ನ ಕನಸಲ್ಲಿ ಬಂದು ಕಾಡಿದರೆ ಏನು ಉತ್ತರ ಹೇಳೋದಯ್ಯ!”

ಶಾಸ್ತ್ರಿಗಳದು ನಿಜಕ್ಕೂ ಒರಿಜಿನಲ್ ಟ್ರಬಲ್!

ಕಿರಣನ ಕಥೆ ಇಂತಾದರೆ ಕಿರಣನ ಸ್ನೇಹಿತ ಪರೋಪಕಾರಿ ಪಾಪಣ್ಣನದು ಮತ್ತೊಂದು ವಿಧದ ಕಥೆ. ಯಾರೇ ಸತ್ತರೂ ಹೆಗಲು ಕೊಡಲು ಮುಂದಾಗುತ್ತಿದ್ದ ಅವನು ಅಂದು ತನ್ನ ನೆರೆಮನೆಗೆ ಹೊಸದಾಗಿ ಬಂದಿದ್ದ ಹಿರಿಯರು ಕಂತೆ ಒಗೆದಾಗ ತಾನೇ ಮಸಣಕ್ಕೆ ಮುಂದಾಗಿ ಹೋಗಿ, ಹಣ ಕಟ್ಟಿ, ರಸೀದಿ ಪಡೆದುದಲ್ಲದೆ, ಕಾರ್ಪೊರೇಷನ್ನಿಗೆ ಓಡಾಡಿ ಡೆತ್ ಸರ್ಟಿಫಿಕೇಟನ್ನೂ ಪಡೆದೊಯ್ದು ನೆರೆಮನೆಯವರ ಕೈಗಿತ್ತ.

ಏನಿದು?”

ಡೆತ್ ಸರ್ಟಿಫಿಕೇಟು.”

ಯಾರದು?”

ನಿಮ್ಮ ತಂದೆಯವರದು.”

ಯಾವಾನ್ಹೇಳಿದ್ದು?”

ಅಂದರೆ...?”

ನನ್ನ ತಂದೆಯವರ ಹೆಸರು ಕೃಷ್ಣಾಚಾರ್. ಅವರ ತಂದೆಯ ಹೆಸರು ಭೀಮಾಚಾರ್.”

ಈಗ ಏನಾಗಿದೆ ಸಾರ್?” ಪಾಪಣ್ಣನಿಗೆ ಏನೋ ವ್ಯತ್ಯಾಸವಾಗಿರುವುದರ ವಾಸನೆ ಬಡಿಯಿತು.

ರಾಮಾಚಾರ್ ಸನ್ ಆಫ್ ಕೃಷ್ಣಾಚಾರ್ ಅಂತ ಸರ್ಟಿಫಿಕೇಟ್ ಮಾಡಿಸಿದ್ದೀರಿ.”

ತಪ್ಪಾ ಸಾರ್?”

ಮತ್ತೇನ್ರೀ! ರಾಮಾಚಾರ್ ನಾನೇ!”

ಮುಂದೆ ರಾಮಾಚಾರ್ ಆಡಿದ ಮಾತುಗಳು ಯಾವುದೇ ಪೀತಪತ್ರಿಕೆಯೂ ಪ್ರಿಂಟ್ ಮಾಡಲು ಆಗದಷ್ಟು ಹೊಲಸಾಗಿದ್ದವು.

ಕರ್ಮ ಮಾಡುವ ಸ್ಥಳಗಳಲ್ಲಿಯೂ ವಿಚಿತ್ರ ಸನ್ನಿವೇಳಗಳನ್ನು ಕಾಣಬಹುದು. ಚಾರ್ ಧಾಮ್ ಯಾತ್ರೆಯ ಅಂಗವಾಗಿ ಅಂದು ನಾವುಗಳು ಬದರಿನಾಥವನ್ನು ತಲುಪಿದ್ದೆವು. ನನ್ನೊಡನೆ ಬಂದಿದ್ದ ಹಿರಿಯರೊಬ್ಬರು ತಮ್ಮ ಪಿತೃಗಳಿಗಾಗಿ ಪಿಂಡಪ್ರದಾನ ಮಾಡಿಸಲೆಂದು ಅಲ್ಲಿನ ಪುರೋಹಿತರನ್ನು ನೇಮಿಸಿಕೊಂಡರು. ನದಿಯ ಬದಿಯ ಪಾವಟಿಗೆಗಳ ಮೇಲೆ ಕುಳಿತ ಹಿರಿಯರು ತಾವು ಕಟ್ಟಿದ್ದ ಪಿಂಡದುಂಡೆಗಳನ್ನು ಸಾಲಾಗಿ ಇರಿಸಿದ್ದರು. ಪುರೋಹಿತರಿಗೆ ಕೊಡಬೇಕಾದ ದಕ್ಷಿಣೆಯನ್ನು ಮರೆತಿದ್ದರಿಂದ, ಅದನ್ನು ತರಲೆಂದು ತಮ್ಮ ಬಟ್ಟೆಗಳಿದ್ದ ಸ್ಥಳಕ್ಕೆ ಹೋಗಿ ಬರುವಷ್ಟರಲ್ಲಿ ಪಕ್ಕದವನು ಇವರು ಕಟ್ಟಿದ್ದ ಪಿಂಡಗಳಲ್ಲಿ ಒಂದೆರಡನ್ನು ಹಾರಿಸಿಕೊಂಡಿದ್ದ.

ಎಲ್ಲಿ ನನ್ನ ಪಿಂಡ?” ಎಂದರು ಹಿರಿಯರು.

ಅದನ್ನು ನಿಮ್ಮ ಮಕ್ಕಳು ಆಮೇಲೆ ಇಡುತ್ತಾರೆ” ಎಂದ ಪಿಂಡಾಪಹಾರಿ.

ಅವರ ಕೈಯಲ್ಲೇ ನಿನ್ನದನ್ನೂ ಇಡಿಸುತ್ತೀನಿ. ಈಗ ನನ್ನ ಪಿಂಡವನ್ನು ವಾಪಸ್ ಕೊಡು” ಹಾರಿದರು ಹಿರಿಯರು.

ಇರೋ ಪಿಂಡಗಳದೇ ಸೈಜ್ ಕಡಿಮೆ ಮಾಡಿಕೊಂಡು ನಂಬರ್ ಜಾಸ್ತಿ ಮಾಡ್ಕೊಳಿ” ಎಂದು ಸಲಹೆ ನೀಡಿದ ಪಿಂಡಲೂಟಿಗ.

ಅವೆಲ್ಲ ಆಗಲ್ಲಯ್ಯ! ನನ್ನ ಪಿಂಡ ನನಗೆ ಕೊಡು ಅಷ್ಟೆ!”

ಹಾರಿಹೋಗುತ್ತಿದ್ದ ಕಾಗೆಯತ್ತ ಕೈತೋರುತ್ತಾ “ಬೇಕಾದ್ರೆ ಅವುಗಳಿಂದ ವಾಪಸ್ ಇಸ್ಕೊಳಿ” ಎನ್ನುತ್ತಾ ದೂರ ಸರಿದನವ. ಹಿರಿಯರು “ಅಯ್ಯೋ ನನ್ನ ಪಿಂಡ! ಅಯ್ಯೋ ನನ್ನ ಪಿಂಡ!” ಎಂದು ಹಲುಬುತ್ತಾ, ಅತ್ತಿತ್ತ ನೋಡಿ, ಎತ್ತಲೋ ನೋಡುತ್ತಿದ್ದ ಮತ್ತೊಬ್ಬ ಪಿಂಡಪ್ರದಾನಿಯ ಎರಡು ಉಂಡೆಗಳನ್ನು ಕಸಿದು ತಮ್ಮ ಕಾರ್ಯ ಮುಗಿಸಿಕೊಂಡರು.

ಹೋದ ತಿಂಗಳು. ಕೆಂಗೇರಿಯ ರುದ್ರಭೂಮಿ; ಗತಿಸಿದ ಗರತಿಯೊಬ್ಬರ ಅಂತ್ಯಸಂಸ್ಕಾರ ಜರುಗುತ್ತಿತ್ತು. ಕಾರ್ಯಗಳನ್ನು ಮಾಡಿಸುತ್ತಿದ್ದ ಭಟ್ಟರು ಪದೇ ಪದೇ ‘ಲಲಿತಾ ಎಂಬ ಹೆಸರಿನ ಪತ್ನಿಯ...’ ಎನ್ನುತ್ತಿದ್ದರು. ಸಂದೇಹಿತರಾದ ಹೆಣ್ಣಿನ ಪತಿಯು ‘ಲಲಿತಾ ಯಾರು?’ ಎಂದರು.

ಈಕೆಯೇ. ನಿಮ್ಮ ಪತ್ನಿ” ಎಂದು ಕಳೇಬರದತ್ತ ಕೈ ತೋರಿದರು.

ಅವಳ ಹೆಸರು ಲಲಿತಾ ಅಲ್ಲ, ವಿಮಲ!” ಕ್ರುದ್ಧರಾದರು ವೃದ್ಧರು.

ಪ್ರತಿ ದಿನ ಮಾಡ್ಸೀ ಮಾಡ್ಸೀ ಹೆಸರಿನ ಗೊಂದಲ ಆಗ್ಬಿಡತ್ತೆ ಸ್ವಾಮೀ. ಕ್ಷಮಿಸಿ. ನಿಮ್ಮಾಕೆಯ ಹೆಸರನ್ನೇ ಹೇಳ್ತೀನಿ. ಕಮಲಾ ಎಂಬ ಹೆಸರಿನ ಪತ್ನಿಯ...’ ಎಂದು ಮುಂದುವರಿಸಿದರು.

ವೃದ್ಧರು ‘ಭಟ್ಟರೇ, ನೀವು ನಿಮ್ಮ ಎಷ್ಟು ಜನ ಹೆಂಡತಿಯರ ತಿಥಿ ಮುಗಿಸಬೇಕೋ ಮೊದಲು ಮುಗಿಸಿ. ಆಮೇಲೆ ನನ್ನ ಹೆಂಡತಿಯಾದ ವಿಮಲಳ ತಿಥಿ ಮಾಡಿ. ಲಲಿತಾ, ಕಮಲ ಅಲ್ಲದೆ ಇನ್ನೂ ಹೆಂಡತಿಯರು ಇದ್ದರೇನು ನಿಮಗೆ?” ಎಂದು ಸಿಡುಕಿದ ನಂತರವೇ ಭಟ್ಟರ ಬಾಯಲ್ಲಿ ವಿಮಲೆ ಸರಿಯಾಗಿ ಮೂಡಿದ್ದು.

ಸಾವಿನ ಸಂದರ್ಭದಲ್ಲಿ ಇಂತಹ ಪ್ರಸಂಗಗಳು ಮೂಡಿದರೆ ಆನಂತರದ ದಿನಗಳಲ್ಲಿನ ಪಾಡೇ ಬೇರೆಯ ವಿಧದ್ದು. ನನ್ನ ತಾತನವರು ಅವರ ತಂದೆಯ ವಾರ್ಷಿಕ ಶ್ರಾದ್ಧವನ್ನು ಮಾಡಿಸಲೆಂದು ಪ್ರತಿವರ್ಷದಂತೆ ಆ ವರ್ಷವೂ ಸೋಮನಹಳ್ಳಿಯ ಸುಬ್ರಹ್ಮಣ್ಯಶಾಸ್ತ್ರಿಗಳಿಗೇ ಹೇಳಿದ್ದರು. ಅಪರಕರ್ಮವಾದ್ದರಿಂದ ಮಧ್ಯಾಹ್ನದ ಮೇಲೆಯೇ ಮಾಡುವುದು ಅವರ ಪದ್ಧತಿಯಾಗಿತ್ತು.

ತಾತನವರು ತಿಥಿಗೆ ಬೇಕಾದ ಎಲ್ಲವನ್ನೂ ಅಣಿಗೊಳಿಸಿ ಶಾಸ್ತ್ರಿಗಳಿಗಾಗಿ ಹೊರಬಾಗಿಲಲ್ಲಿ ಕಾಯುತ್ತಾ ನಿಂತರು. ಅಂದು ಸುಬ್ರಹ್ಮಣ್ಯಶಾಸ್ತ್ರಿಗಳಿಗೆ ಬೆಳ್ಳಂಬೆಳಗ್ಗೇ ಒಂದು ಚೌಲಕರ್ಮದ ಕೆಲಸವೂ ಸಿಕ್ಕಿದ್ದರಿಂದ ‘ಹೇಗೂ ತಿಥಿ ಮಧ್ಯಾಹ್ನಕ್ಕೆ. ಚೌಲ ಮುಗಿಸಿ ತುತ್ತಿನ ಚೀಲ ತುಂಬಿಸಿಕೊಳ್ಳಕ್ಕೆ ಹೋದರಾಯ್ತು’ ಎಂದೆಣಿಸಿ ಆ ಕಾರ್ಯಕ್ರಮದಲ್ಲಿ ತೊಡಗಿಕೊಂಡರು. ಆದರೆ ಚೌಲ ಮಾಡಿಸಿಕೊಳ್ಳಬೇಕಾದ ಮಗು ವಿಪರೀತ ಹಠ ಮಾಡಿದುದರ ಪರಿಣಾಮ ಬಹಳ ವಿಳಂಬವಾಯಿತು.

ತಾತನವರು ಹನ್ನೆರಡು ಒಂದಾಗಿ, ಒಂದು ಒಂದೂವರೆ ಆಗುವವರೆಗೆ ಕಾದರು. ‘ಏಮಾಯ ಈ ಶಾಸ್ತ್ರಿಕು?’ ಎಂದು ಚಡಪಡಿಸಿದರು. ಒಂದೂಮುಕ್ಕಾಲರ ಹೊತ್ತಿಗೆ ಪಕ್ಕದ ಬೀದಿಗೆ ಹೋಗಿ ಇಬ್ಬರು ಬ್ರಾಹ್ಮಣರನ್ನು ಬ್ರಾಹ್ಮಣಾರ್ಥಕ್ಕೆಂದು ಕರೆದು, ಮಂತ್ರಾರ್ಥಗಳನ್ನು ತಿಳಿದಿದ್ದ ತಾತನೇ ತಿಥಿಯ ಸಕಲ ವಿಧಿಗಳನ್ನು ಮುಗಿಸಿ, ಊಟವನ್ನೂ ಮಾಡಿಬಿಟ್ಟರು.

ಸುಬ್ರಹ್ಮಣ್ಯಶಾಸ್ತ್ರಿಗಳು ಮಧ್ಯಾಹ್ನ ಒಂದು ಗಂಟೆಗೆ ಸೋಮನಹಳ್ಳಿಯ ಬಸ್ ಸ್ಟ್ಯಾಂಡಿಗೆ ಬಂದು, ಎರಡು ಗಂಟೆಯ ಬಸ್ ಹಿಡಿದು, ಎರಡೂಮುಕ್ಕಾಲಿಗೆ ಜಯನಗರದಲ್ಲಿ ಬಸ್ ಇಳಿದು, ತಾತನವರ ಮನೆಯನ್ನು ತಲುಪಿದಾಗ ಗಂಟೆ ಮೂರೂಕಾಲು.

ಶಾಸ್ತ್ರಿಲು ಒಚ್ಚಿನ್ನಾರು(ಶಾಸ್ತ್ರಿಗಳು ಬಂದಿದ್ದಾರೆ)” ಎಂದು ಅಜ್ಜಿ ಘೋಷಿಸಿದರು.

ತಾತನವರು ತಮ್ಮ ಬೆಳ್ಳಿಯ ಕೋಲನ್ನು ಝಳಪಿಸುತ್ತಾ “ವಸ್ತ್ವೇಮ್ರಾ! ರಾ! ಇಪ್ಪಡು ತಾ ನಾ ತಂಡ್ರಿ ಪಿಂಡಮು ಪೆಟ್ಟಿನ್ನಾನು. ಇಪ್ಪಡು ನೀ ಪಿಂಡಮು ಪೆಟ್ತಾನು. (ಬಂದೆಯಾ, ಬಾ! ಈಗಷ್ಟೇ ನನ್ನಪ್ಪನಿಗೆ ಪಿಂಡ ಇಟ್ಟೆ. ಈಗ ನಿನ್ನ ಪಿಂಡ ಇಡ್ತೀನಿ)’  ಎನ್ನುತ್ತಾ ಶಾಸ್ತ್ರಿಗಳನ್ನು ಅಟ್ಟಿಸಿಕೊಂಡು ಹೋದರು. ಪಂಚೆಯ ಚುಂಗನ್ನು ಎತ್ತಿ ಹಿಡಿದು ಓಡುತ್ತಿದ್ದ ಶಾಸ್ತ್ರಿಗಳು, ಎತ್ತಿದ ಕೋಲಿನೊಡನೆ ಅವರ ಬೆನ್ನು ಹತ್ತಿದ ಎಪ್ಪತ್ತರ ಹರೆಯದ ಕಟ್ಟುಮಸ್ತಾದ ತಾತನವರ ದೃಶ್ಯವು ನನ್ನ ಸ್ಮೃತಿಪಟಲದಿಂದ ಎಂದಿಗೂ ಮರೆಯಾಗದು.

Comments

  1. ಅಂತ್ಯೇಷ್ಟಿಯ ಅವಾಂತರಗಳು. ಹಲವಾರು ಅವಕ್ಕೆ ಕಾರಣಗಳೂ ಹಲವಾರು. ಪುರೋಹಿತರು ಮಾಡುವ ತಪ್ಪುಗಳನ್ನು ಗಮನಿಸದಿರುವುದೇ ವಾಸಿ ಏನೋ, ಆದರೆ ಅ ಸಂದರ್ಭಗಳಲ್ಲಿನ ಹಾಸ್ಯವನ್ನು ಸವಿಯುವವರ ಬಗೆಯೂ ಗಮನಾರ್ಹ

    ReplyDelete

Post a Comment