ಬೇಡವಾದ ಬಹುಮಾನಗಳು

 ಬೇಡವಾದ ಬಹುಮಾನಗಳು

ಲೇಖನ  : ಚಕ್ರವರ್ತಿ ಮಧುಸೂದನ 



ಈ ಬರಹಕ್ಕೆ “ಬೇಡವಾದ” ಬಹುಮಾನಗಳು ಎಂದು ಏಕೆ ಹೆಸರಿಟ್ಟೆ, “ಬೇಕಾಗದ” ಎಂದು ಏಕಿಲ್ಲ ಎಂಬ ಪ್ರಶ್ನೆ ಉದಿಸಿದರೆ ಅದಕ್ಕೆ ಉತ್ತರ ನೀವು ಇಲ್ಲಿರುವ ಕತೆಗಳನ್ನು ಓದಿದ ಕೂಡಲೇ ವೇದ್ಯವಾಗುತ್ತದೆ!

ಈ ಕೆಳಗೆ ಮಂಡಿಸಿರುವ ಘಟನೆಗಳು ನಡೆದಿದ್ದು ನಾನು ಮಿಡಲ್ ಸ್ಕೂಲಿನಲ್ಲಿದ್ದಾಗ (5ರಿಂದ 8ನೆಯ ತರಗತಿ) ಮತ್ತು ಹೈಸ್ಕೂಲ fourth form (9ನೆಯ ತರಗತಿ) ನಲ್ಲಿದ್ದಾಗ. ವರ್ಷಾಂತ್ಯದ ಬಹುಮಾನ ವಿತರಣೆಯ ಸಮಾರಂಭದಲ್ಲಿ ಓದು ಬರಹಗಳಲ್ಲಿ ಮತ್ತು ಕ್ರೀಡಾರಂಗದಲ್ಲಿ ಮೊದಲು ಬಂದವರಿಗೆ ಏನಾದರೂ ಒಂದು ಪುಟ್ಟ ಉಡುಗೊರೆಯನ್ನು ಕೊಡುತ್ತಿದ್ದರು. ಐದನೆಯ ಮತ್ತು ಆರನೆಯ ತರಗತಿಗಳ ಹುಡುಗರಿಗೆ ಇವು mirror and comb, notebook and pencil ಇತ್ಯಾದಿ “ಉಪಯುಕ್ತ ಸಲಕರಣೆಗಳು”; ಏಳನೆಯ ಮತ್ತು ಎಂಟನೆಯ ತರಗತಿಯವರಿಗೆ ಒಂದು ಪುಟ್ಟ ಪುಸ್ತಕ.

ನಾನು ಆರನೆಯ ತರಗತಿಯಲ್ಲಿದ್ದಾಗ ರಮೇಶ ಎಂಬ ನನ್ನ ಗೆಳೆಯನಿಗೆ ಓಡುವುದರಲ್ಲಿ ಮೊದಲ ಬಹುಮಾನ, mirror and comb, ಸಿಕ್ಕಿತು. ಅವನಿಗಾದ ಆನಂದ ಹೇಳತೀರದು. ಮಾರನೆಯ ದಿನ ಕ್ಲಾಸಿಗೆ ಬಂದಾಗ ತನ್ನ ಪ್ರೈಜ಼ನ್ನು ಬ್ಯಾಗಿನಲ್ಲಿ ಇಟ್ಟುಕೊಂಡು ಬಂದ. ಅದನ್ನು ಆಗಾಗ ತೆಗೆದು ನೋಡದೆ ಇರಲಾರ. ಆ ದಿನ ಮೂರನೆಯ ಪೀರಿಯಡ್ಡಿನಲ್ಲಿ ಚರಿತ್ರೆಯ ಪಾಠ. ಆಗ ಪ್ರೈಜ಼ನ್ನು ತೆಗೆದು ನೋಡಿದ್ದು ಮಾತ್ರವಲ್ಲ, ತನ್ನ ಕೂದಲನ್ನು ಬಾಚಲೂ ತೊಡಗಿದ. ನಮ್ಮ ಮಾಸ್ತರಿಗೆ ವಿಪರೀತ ಕೋಪ ಬಂದು “ಏ ರಮೇಶ, ನಿನ್ನ ಪ್ರೈಜ಼ನ್ನು ಒಳಗಿಡೋ! ಯಾರೋ ನಿನಗೆ manners ಹೇಳಿಕೊಟ್ಟವರು?” ಎಂದು ಗರ್ಜಿಸಿದರು. ರಮೇಶ ಮರುಮಾತನಾಡದೆ ತನ್ನ precious gift ಅನ್ನು ಬ್ಯಾಗಿನಲ್ಲಿ ಇಟ್ಟುಬಿಟ್ಟ, ತಿರುಗಿ ಆ ಕಡೆ ನೋಡಲಿಲ್ಲ.

ಆ ದಿನ ಸಂಜೆ ಆಟದ ಮೈದಾನದಲ್ಲಿ ಸಿಕ್ಕಾಗ “ನೋಡು, ನನಗೆ ಆ ಪ್ರೈಜ಼್ ಸಿಕ್ಕದಿದ್ದರೇನೇ ಚೆನ್ನಾಗಿತ್ತು. ಈಗ ಅನ್ಯಾಯವಾಗಿ ಮೇಸ್ಟರ ಕೈಯಲ್ಲಿ ಬೈಸಿಕೊಳ್ಳ ಬೇಕಾಗಿ ಬಂತು” ಎಂದು ನನಗೆ ಹೇಳಿದ.

ಮುಂದೆ ಏಳನೆಯ ತರಗತಿಯಲ್ಲಿದ್ದಾಗ ನನಗೆ ಒಂದು ಪುಸ್ತಕದ ಬಹುಮಾನ ದೊರಕಿತು. ಪುಸ್ತಕದ ಹೆಸರು ನೆನಪಿಲ್ಲ, ಶರಚ್ಚಂದ್ರರ ಯಾವುದೋ ನೀಳ್ಗತೆಯ ಕನ್ನಡ ಅನುವಾದ.

ನನ್ನ ಕ್ಲಾಸಿನಲ್ಲಿದ್ದ ಇನ್ನೊಬ್ಬ ಗೆಳೆಯನ ಹೆಸರು ಚಂದ್ರಮೌಳಿ. ಇವನ ತಾಯಿತಂದೆಯವರಿಗೆ ಇವನೊಬ್ಬನೇ ಗಂಡುಮಗ. ಅದಕ್ಕೇ ಇರಬಹುದು,  ಪ್ರತಿ ಸಂಜೆ ಇವನ ತಾಯಿ ಇವನು ಸ್ಕೂಲಿನಿಂದ ಬರುವುದನ್ನೇ ಎದುರು ನೋಡುತ್ತ ಮನೆಯ ಮುಂದಿನ ಜಗುಲಿಯ ಮೇಲೆ ಕುಳಿತಿರುತಿದ್ದರು. ಅಂದು ನನ್ನನ್ನು ನೋಡಿದಕೂಡಲೇ “ಮಧು, ನಿನಗೆ ಯಾವುದೋ ಪುಸ್ತಕ ಪ್ರೈಜ಼್ ಸಿಕ್ಕಿದೆಯಂತೆ. ನನಗೆ ತಂದುಕೊಡು. ಓದಿ ವಾಪಸ್ ಕೊಡುತ್ತೇನೆ” ಎಂದರು. ನಾನು "ಸರಿ” ಎಂದೆ.

ಮಾರನೇ ದಿನ ಶನಿವಾರ. ಸ್ಕೂಲು ಬೆಳಗ್ಗೆ ಮಾತ್ರ. ಭಾನುವಾರ ಮಧ್ಯಾಹ್ನ ಯಾವುದೋ ಕಾರಣದಿಂದ ನಾವು ನಾಲ್ಕೈದು ಮಂದಿ ಸ್ನೇಹಿತರು ಚಂದ್ರಮೌಳಿಯ ಮನೆಗೆ ಹೋದೆವು. ನನ್ನನ್ನು ನೋಡಿದ ತಕ್ಷಣ ಅವನ ತಾಯಿ ದೊಡ್ಡ ದನಿಯಲ್ಲಿ “ಈ ಮಧುವಿಗೆ ತಾನೇ ಯಾವಾಗಲೂ ಫರ್ಸ್ಟ್ ಬರ್ತೀನಿ ಅಂತ ಮಹಾ ಜಂಭ, ಪುಸ್ತಕ ತಂದು ಕೊಡೋ ಎಂದರೆ ಇನ್ನೂ ತಂದುಕೊಟ್ಟಿಲ್ಲ” ಎಂದು ಗದರಿಸಿದರು. ಮಿಕ್ಕೆಲ್ಲ ಹುಡುಗರು ನಕ್ಕರು. ಒಬ್ಬ ಹುಡುಗ ಮಾತ್ರ ಅವಹೇಳನ ಮಿಶ್ರಿತವಾದ ನಕಲಿ ಅನುಕಂಪದಿಂದ “ಅಯ್ಯೋ ಯಾಕ್ ಮಧೂ” ಎಂದ. ಮಿಕ್ಕ ಹುಡುಗರೆಲ್ಲರೂ ಇನ್ನೂ ಜೋರಾಗಿ ನಗತೊಡಗಿದರು. ನಾನು ಅಲ್ಲಿರಲಾರದೆ ನಮ್ಮ ಮನೆಗೆ ಹೊರಟುಬಿಟ್ಟೆ. ಹೋಗುತ್ತ ನನಗೆ ಚಂದ್ರಮೌಳಿಯ ತಾಯಿ ಹಾಗೆ ಬೈದದ್ದು ಸರಿಯಲ್ಲ ಎಂದನಿಸಿತು. ಅವರು ಪುಸ್ತಕ ತಂದುಕೊಡು ಎಂದು ಹೇಳಿದ್ದು ಶುಕ್ರವಾರ ಸಂಜೆ, ಈಗಿನ್ನೂ ಭಾನುವಾರ ಮಧ್ಯಾಹ್ನ- ಎರಡು ದಿನ ಕೂಡ ಆಗಿಲ್ಲ. ಆದರೂ ಅವರು ಬೈದದ್ದರಿಂದ ನನಗೇನೂ ಕೆಡುಕೆನಿಸಲಿಲ್ಲ, ಏಕೆಂದರೆ ದೊಡ್ಡವರು ಬೈದರೂ ನಿನ್ನ ಒಳ್ಳೆಯದಕ್ಕೇ ಬಯ್ಯುತ್ತಾರೆ ಎಂದು ನಮ್ಮ ಮನೆಯಲ್ಲಿ ಮಂದಟ್ಟು ಮಾಡಿದ್ದರು! ಆದರೆ ನನಗೆ ಹೆಚ್ಚು ಅವಮಾನವಾಗಿ, ಕೋಪ ಬಂದದ್ದು ಇತರ ಹುಡುಗರ ಅವಹೇಳನ ಮಿಶ್ರಿತ ಅನುಕಂಪದಿಂದ.

ನಾನು ಮನೆಗೆ ಹೋಗಿ ಐದು ನಿಮಿಷವೂ ಆಗಿರಲಿಲ್ಲ, ಚಂದ್ರಮೌಳಿಯೇ ಮನೆಗೆ ಬಂದನು. “ಮಧು, ನಮ್ಮ ತಾಯಿ ಹೇಳಿ ಕಳಿಸಿದ್ದಾರೆ, ಅವರಿಗೆ ಪುಸ್ತಕವೇನೂ ಅರ್ಜೆಂಟಾಗಿ ಬೇಕಾಗಿಲ್ಲ, ನಿಮ್ಮ ಮನೆಯವರೆಲ್ಲರೂ ಓದಿದ ಮೇಲೆ ಕೊಟ್ಟರೆ ಸಾಕು” ಎಂದ. ನನಗೆ “ಈ ಬಹುಮಾನ ಬಂದಿದ್ದಾದರೂ ಏಕೆ?” ಎಂದನಿಸಿಬಿಟ್ಟಿತ್ತು. ಎಂತಲೇ “ಇಲ್ಲಪ್ಪ, ಪುಸ್ತಕ ಈಗಲೇ ತೆಗೆದುಕೊಂಡು ಹೋಗು, ನಾವು ಆಮೇಲೆ ಓದಿಕೊಳ್ಳುತ್ತೇವೆ” ಎಂದು ಪುಸ್ತಕ ಅವನಿಗೆ ಕೊಟ್ಟುಬಿಟ್ಟೆ.

ಮುಂದೆ ಎಂಟನೆಯ ಕ್ಲಾಸಿಗೆ ಬಂದಾಗ ನಮ್ಮ ಕನ್ನಡ ಪಠ್ಯ ಪುಸ್ತಕದ ಗದ್ಯಭಾಗದಲ್ಲಿ ಮುಖ್ಯವಾಗಿ ಪೂಜ್ಯ ಎ. ಆರ್. ಕೃಷ್ಣ ಶಾಸ್ತ್ರಿಗಳ ವಚನ ಭಾರತದ ಅರಣ್ಯ ಪರ್ವ ಮತ್ತು ಪದ್ಯ ಭಾಗದಲ್ಲಿ ಕೋಳೂರು ಕೊಡಗೂಸು, ವನಮಹೋತ್ಸವ ಇತ್ಯಾದಿ ಕವನಗಳು ಇದ್ದವು. ಒಟ್ಟಿನಲ್ಲಿ ಒಳ್ಳೆಯ ಸಂಕಲನ. ಇದರ ಜೊತೆಗೆ ನಾವು ಓದಬೇಕಾಗಿದ್ದ non-detailed text, ಆದರ್ಶ ಮಹಿಳಾ ರತ್ನಗಳು ಎಂಬ ಪುಸ್ತಕ. ಈ ಪುಸ್ತಕದಲ್ಲಿ ವೀರಮಾತೆ ವಿದುಲಾ, ಪುಣ್ಯ ಮಾತೆ ಪುತಲೀಬಾಯಿ, ದಿವ್ಯ ಮಾತೆ ಸ್ವರೂಪ್ ರಾಣಿ, ಮೇಡಂ ಲೆಟಿಷಿಯಾ ರಾಮೊಲೀನಿ (ನೆಪೋಲಿಯನ್ನನ ತಾಯಿ), ಜೀಜಾಬಾಯಿ ಮುಂತಾದ ಹಲವು ಪ್ರಾತಃಸ್ಮರಣೀಯ ಉದಾತ್ತ ಮಹಿಳೆಯರ ಜೀವನ ಚಿತ್ರಣಗಳಿದ್ದವು. ಎಲ್ಲರೂ ಅಗತ್ಯ ವಾಗಿ ಓದಬೇಕಾದ ಪುಸ್ತಕ ಎಂಬಲ್ಲಿ ಸಂದೇಹವಿಲ್ಲ. ಆದರೆ ನನಗೆ ಈ ಪುಸ್ತಕ ಇಷ್ಟವಾಗಲಿಲ್ಲ ,ಏಕೆಂದರೆ ನನ್ನ ಅಣ್ಣಂದಿರು ಓದುತ್ತಿರುವಾಗ ಅವರಿಗೆ non-detailed text ಆಗಿದ್ದವು ಗಲಿವರನ ಪ್ರವಾಸಗಳು,  ಹವಳದ ದ್ವೀಪ ಮುಂತಾದ ರೋಚಕ ಕಿರು ಕಾದಂಬರಿಗಳು. ನನಗೂ ಅದೇ ತರಹದ ಪುಸ್ತಕ non-detailed text ಆಗಿ  ಸಿಗಬಹುದು ಎಂದು ನಂಬಿದ್ದೆ. ಈ ಪುಸ್ತಕ ನನಗೆ ಭ್ರಮನಿರಸನೆ ಮಾಡಿತು.


ಅಂತೂ ಮಿಡಲ್ ಸ್ಕೂಲನ್ನು ಮುಗಿಸಿ ಹೈಸ್ಕೂಲು  ಸೇರಿದ್ದಾಯಿತು. ಅಲ್ಲೂ ವರ್ಷಾಂತ್ಯದ ಸಮಾರಂಭದಲ್ಲಿ ಬಹುಮಾನ ವಿತರಣೆಯ ಆಗುತ್ತಿತ್ತು. ನನಗೂ ಯಾವುದೋ ಕಾರಣದಿಂದ ಸಿಕ್ಕ prize, ಕೈಲಾಸಂ ಅವರು ರಚಿಸಿದ “ಬಂಡ್ವಾಳ್ವಿಲ್ಲದ ಬಡಾಯಿ” ಎಂಬ ಪುಸ್ತಕ. ನಾನು prize ಅನ್ನು ಸ್ವೀಕರಿಸಿ ವೇದಿಕೆಯಿಂದ ಇಳಿದು ಹಿಂತಿರುಗ ಬೇಕೆಂದಿದ್ದಾಗ ಅಲ್ಲೇ ಇದ್ದ ನಮ್ಮ ಮಾಸ್ತರ್ ಒಬ್ಬರು “ನೀನು ಈಗಲೇ ವಾಪಸ್ ಹೋಗಬೇಡ, ಮುಂದಿನ ಕಾರ್ಯಕ್ರಮ ನಿನ್ನದೇ ಕಿರು ನಾಟಕ, ಅದಾದ ನಂತರ ಹೋಗು” ಎಂದು ಅಂತ ಹೇಳಿದರು. ನಾನು “ಆಗಲಿ” ಎಂದು ಹೇಳಿ ಪರದೆಯ ಹಿಂದಿನ “ಗ್ರೀನ್ ರೂಂ”ನಲ್ಲಿ ಕುಳಿತೆ. ಸ್ವಲ್ಪ ಹೊತ್ತಿನಲ್ಲಿ ನಮ್ಮ ನಾಟಕಕ್ಕೆ ಕರೆಯೂ ಬಂದಿತು. ಅದು ಮುಗಿದು ನಾನು “ಗ್ರೀನ್ ರೂಂ”ಗೆ ಹಿಂದಿರುಗಿದಾಗ, ಎಷ್ಟು ಹುಡುಕಿದರೂ ನನ್ನ prize ಪುಸ್ತಕ ಕಾಣಸಿಗಲಿಲ್ಲ. ಸುಮ್ಮನೆ ಮನೆಗೆ ಹೋದೆ.

ಮಾರನೆಯ ದಿನ ಭಾನುವಾರ, ಬೆಳಗ್ಗೆ ಎದ್ದು ನಮ್ಮ class teacher ಮನೆಗೆ ಹೋದೆ. ಅವರೇ prize ಪುಸ್ತಕಗಳನ್ನು ಬೆಂಗಳೂರಿನಿಂದ ತಂದವರು ಎಂದು ನನಗೆ ತಿಳಿದಿತ್ತು. “ಏನು ಸಮಾಚಾರ? ಬೆಳಗಾಗೆದ್ದು ಬಂದಿದ್ದೀಯಲ್ಲ?” ಎಂದು ಕೇಳಿದರು. ನಾನು ಪುಸ್ತಕದ ಕಳವನ್ನು ವಿವರಿಸಿದೆ. ಅವರು “ಅಯ್ಯೋ, ನಿನಗೆ ಇಷ್ಟವಾಗುತ್ತದೆ ಎಂದು ಕೈಲಾಸಂ ಪುಸ್ತಕ ಕೊಟ್ಟಿದ್ದೆನಲ್ಲಪ್ಪ! ಈಗ ಬೇರೆ ಯಾವುದೂ ಪುಸ್ತಕ ಇಲ್ಲವಲ್ಲ?” ಎಂದು ಹೇಳಿದವರು ಕೊಠಡಿಯ ಸುತ್ತಲೂ ಒಮ್ಮೆ ನೋಡಿ “ಹ್ಞಾಂ, ಇದೊಂದು ಪುಸ್ತಕ ಉಳಿದಿದೆ ನೋಡು, ಇದೂ ಒಳ್ಳೆಯ ಪುಸ್ತಕವೇ” ಎಂದು ಒಂದು ಪುಸ್ತಕವನ್ನು ತೆಗೆದುಕೊಟ್ಟರು. ಅದನ್ನು ನೋಡಿದ ಕೂಡಲೇ ನನ್ನ ಮುಖ ಇಳಿದು ಹೋಯಿತು. ಆದರೆ ಏನು ಮಾಡುವುದು? ಎಷ್ಟಾದರೂ Gift Horse ಅಲ್ಲವೇ? (ಆ ಪುಸ್ತಕ ಯಾವುದೆಂದು ನೀವು ಊಹಿಸಿರಬೇಕು!)

Comments