ವ್ಯಂಗ್ಯ - ಆದರೆ ವಾಸ್ತವ

 ವ್ಯಂಗ್ಯ - ಆದರೆ ವಾಸ್ತವ

- ಸರಸ್ವತಿ, ಸಿಡ್ನಿ


"ಎಲ್ಲೆಲ್ಲೂ ನಾನೆ, ಎಲ್ಲೆಲ್ಲೂ ನಾನೆ... ಆಹಾ ಎಲ್ಲೆಲ್ಲೂ ನಾನೆ" - ಡಾ. ರಾಜಕುಮಾರ್ ರವರ "ಕವಿರತ್ನ ಕಾಳಿದಾಸ" ಸಿನಿಮಾದ ಈ ಹಾಡು ಕೇಳಿದ್ದೀರಲ್ಲವೇ? ಹಾಗೇ ನಾನೂ ಕೂಡ - ಎಲ್ಲೆಲ್ಲೂ ನಾನೇ ನಾನು. ರಸ್ತೆ ಪಕ್ಕದಲ್ಲಿ, ಖಾಲಿ ನಿವೇಶನಗಳಲ್ಲಿ, ಚರಂಡಿಗಳಲ್ಲಿ ರಾರಾಜಿಸುತ್ತಿರುವೆ. ಅಂಗಡಿ-ಮಾರುಕಟ್ಟೆಗಳಲ್ಲಿ, ಮಾಲ್ ಗಳಲ್ಲಿ ಬಟ್ಟೆ-ಕಾಗದದ ಚೀಲಗಳಿಗೆ ಬದಲು ನಾನೇ!. ಮನೆಯಿಂದ ಕೈ ಬೀಸಿ ಬಂದು ಅಂಗಡಿಗಳಿಂದ ನನ್ನಲ್ಲಿ ಸಾಮಾನು ತುಂಬಿಸಿ ತಂದು ಅದನ್ನು ಮನೆಯ ನನ್ನದೇ ಜಾತಿಯ ಡಬ್ಬಿಗಳಿಗೆ ತುಂಬಿ ನನ್ನನ್ನು ಕಸದ ಡಬ್ಬಿಗೆ ಎಸೆಯುವರು. ಕಸದ ಡಬ್ಬಿ ತುಂಬಿದಾಗ ಗಾಡಿಗಳಲ್ಲಿ ತುಂಬಿಸಿಕೊಂಡು ಹೋಗಿ ಎಲ್ಲಿ ಸ್ವಲ್ಪ ಖಾಲಿ ಜಾಗವಿದ್ದರೂ ಸಾಕು, ಅಲ್ಲೇ ಹಾಕುವರು. ನಾನೇನು ಸಾಮಾನ್ಯನೇ? ನೀರಲ್ಲಿ ಕರಗುವುದಿಲ್ಲ, ಮಣ್ಣಲ್ಲಿ ಬೆರೆತು ಗೊಬ್ಬರವಾಗುವುದಿಲ್ಲ, ನಾನು ಚಿರಂಜೀವಿ. ದೊಡ್ಡ ದೊಡ್ಡ ಗಾಡಿಗಳಲ್ಲಿ ತುಂಬಿಸಿ ಸಣ್ಣ-ಸಣ್ಣ ಹಳ್ಳಿಗಳಿಗೆ ತಂದು ಸುರಿಯುವರು. ಹಳ್ಳಿಗರು ನನ್ನಿಂದ ತಮ್ಮ ಹಳ್ಳಿ ಕೊಳಕಾಗುತ್ತಿದೆಯೆಂದು ಸರ್ಕಾರದೊಡನೆ ಜಗಳ ಮಾಡುವರು. 

ಸಿಲಿಕಾನ್ ಸಿಟಿಯನ್ನು ಗಾರ್ಬೇಜ್ ಸಿಟಿ ಮಾಡಿರುವ ಹಗ್ಗಳಿಕೆ ನನ್ನದು. ನೀವೆಲ್ಲಾ ತಿಂದುಳಿದ ಹಣ್ಣುಗಳು, ತಿಂಡಿ-ತಿನಿಸುಗಳು, ಸಿಪ್ಪೆ-ತರಕಾರಿ, ಒಣಗಿದ ಹೂವು, ತಿಂದುಳಿದ ಮಾಂಸ-ಮಡ್ಡಿ - ಇವುಗಳನ್ನು ನನ್ನಲ್ಲಿ ತುಂಬಿಸಿ ಎಸೆದಾಗ ಅದನ್ನು ತಿನ್ನಲ್ಲು ಬರುವ ನಾಯಿ, ಹಂದಿಗಳು ನನ್ನ ಜಾಗವನ್ನು ಇನ್ನೂ ವಿಸ್ತಾರ ಮಾಡಿದಾಗ ನನಗೆಂಥ ಆನಂದ!!..  ಆ ಜಾಗದಲ್ಲಿ ಮೂಗು ಮುಚ್ಚಿ ಜನ ಓಡಾಡುವಾಗ, ಸರ್ಕಾರವನ್ನು ಬೈಯ್ಯುವಾಗ, ನನ್ನ ಪ್ರಾಮುಖ್ಯತೆ ನನಗೆ ಸಿಗುವ ಮರ್ಯಾದೆ ಎಂತಹದು!!..

ಹರೆಯದ ಹೆಣ್ಣು ಮಕ್ಕಳ ಒಂದು ಬಗೆಯ ತ್ಯಾಜ್ಯ (ಬೇಡ ಬಿಡಿ. ಪಾಪ ಅವರೇನು ಮಾಡುವರು. ಅವರಿಗೆ ಬೇರೆ ದಾರಿಯಿಲ್ಲ). ನಾನು ಅತಿ ತೆಳ್ಳಗಿದ್ದೇನೆ, ದಪ್ಪಗೂ ಇದ್ದೇನೆ. ಬಣ್ಣ ಬಣ್ಣವಾಗಿ ಇದ್ದೇನೆ. ನನ್ನದು ತರಹೇವಾರಿ ಜಾತಿ. ಸಣ್ಣಗಿರುವ ನನ್ನ ಒಂದು ವರ್ಗವನ್ನು ಸಾಯಿಸಿ ಬೇರೆ ರೂಪವಾಗಿ ಸೃಷ್ಟಿಸಿ ಜಾಸ್ತಿ ಹಾನಿಯಾಗದಂತೆ ಮಾಡಬೇಕೆಂದು ಕೊಂಡರು. ಊಹೂಂ.. ಅದೆಲ್ಲಾ ಜಾಸ್ತಿ ದಿನ ನಡೆಯಲಿಲ್ಲ. ಹೆಣ್ಣು ಮಕ್ಕಳ ಹಿತ್ತಾಳೆ ಬಿಂದಿಗೆ, ಕಬ್ಬಿಣ್ಣದ ಬಕೆಟ್ ಜಾಗವನ್ನೂ ನಾನು ಆಕ್ರಮಿಸಿ ಕೊಂಡಿದ್ದೇನೆ. ಪಾಪ! ಅವರೇಕೆ ಭಾರ ಹೊರಬೇಕು? ಅದೂ ಅಲ್ಲದೆ ಬೀದಿ ನಲ್ಲಿಯ ಬಳಿ ಜಗಳವಾಡುವಾಗ ಹೊಡೆದಾಡುವುದಕ್ಕೆ ನಾನು ಹಗುರವಲ್ಲವೇ? ನನ್ನನ್ನು ಹುಟ್ಟಿಸಿದ ವಿಜ್ಞಾನಿಗಳು, ಬೆಳೆಸಿದ ವ್ಯಾಪಾರಿಗಳು ಶ್ರೀಮಂತರಾಗುವುದಕ್ಕೆ ನಾನೇ ಕಾರಣವಲ್ಲವೆ? ಸರ್ಕಾರವೇನೋ ನನ್ನನ್ನು ಉತ್ಪತ್ತಿ ಮಾಡಬೇಡಿರೆಂದು ತಾಕೀತು ಮಾಡುತ್ತಾರೆ. ಆದರೆ ಕಾರ್ಖಾನೆ ಮಾಲೇಕರು, ಕಾರ್ಖಾನೆಯ ಮುಂದಿನ ಬಾಗಿಲು ಹಾಕಿ, ಹಿಂದಿನ ಬಾಗಿಲಿನಿಂದ ಒಳಗೆ ತಯಾರಿಸಿದ ನನ್ನನ್ನು ಹೊರಗೆ ಕಳುಹಿಸುತ್ತಾರೆ. ನನ್ನನ್ನು ಕಂಡರೆ ಎಲ್ಲರಿಗೂ ಅಷ್ಟು ಪ್ರೀತಿ. ಅಂಗಡಿಗಳ ತುಂಬಾ ನಾನೇ. ಮದುವೆ ಮುಂತಾದ ಸಮಾರಂಭಗಳಂತು ನಾನಿಲ್ಲದೆ ನಡೆಯಲು ಸಾಧ್ಯವೆ ಇಲ್ಲ. ಬಿಸಿ ಕಾಫಿಯಿಂದ ಹಿಡಿದು ಪಾನಕದವರೆಗೂ, ನೀರಿನ ಕ್ಯಾನ್, ಸಿಹಿ ತಿಂಡಿ ಹಾಕಿಕೊಡುವುದಕ್ಕೆ ನಾನಿಲ್ಲದೆ ಆಗುತ್ತದೆಯೇ? ಇಂಥ ನನ್ನನ್ನು ತಡೆಯಲು ಕೆಲವು ಬುದ್ಧಿ ಜೀವಿಗಳೆನಿಸಿಕೊಂಡ ಮೂರ್ಖರು ವ್ಯರ್ಥವಾಗಿ ಹೋರಾಡುತ್ತಾರೆ ಪಾಪ. ನಾನು ಪ್ರಪಂಚವನ್ನೇ ಹೀಗೆ ಆವರಿಸಿಕೊಂಡಿದ್ದೇನೆ. ನಾನಿಲ್ಲ್ದೆ ಬದುಕಲು ಸಾಧ್ಯವೇ ಇಲ್ಲ ಎಂದು ಗೊತ್ತಿದ್ದೂ ವ್ಯರ್ಥಾಲಾಪ ಮಾಡುತ್ತಾರೆ. 

ಇನ್ನು ಸ್ವಲ್ಪವೇ ದಿನದಲ್ಲಿ, ಮಕ್ಕಳ ಬಟ್ಟೆ, ದೊಡ್ಡವರ ಬಟ್ಟೆಗಳು, ಜೀನ್ಸ್, ಹತ್ತಿ ಬದಲಿಗೆ ನನ್ನಿಂದಲೇ ತಯಾರಾದ ಉಡುವು ಬರುವುದು ನೋಡುತ್ತೀರಿ. ಹೆಣ್ಣು ಮಕ್ಕಳ ಸೀರೆ, ಛೆ.., ಛೆ.. ಈಗ ಸೀರೆ ಎಲ್ಲಿದೆ? ಅಂಗಡಿಗಳ ಕಪಾಟುಗಳಲ್ಲಿ!., ಮನೆಗಳ ವಾರ್ಡರೋಬ್ ಗಳಲ್ಲಿ ಜೋಡಿಸಿ, ಬಂದವರಿಗೆ ತೋರಿಸುವುದಕ್ಕಾದರೂ, ಸೀರೆ, ಪಂಚೆ ಬೇಕಲ್ಲ. ಅದಕ್ಕಾಗಿ ಅದನ್ನು ನನ್ನಿಂದಲೇ ತಯಾರಿಸಲು ಸಂಶೋಧನೆ ನಡೆಸುತ್ತಿದ್ದಾರೆ. 

ನನ್ನನ್ನು ರಸ್ತೆ ಮಾಡಲು ಬಳಸುತ್ತಿದ್ದಾರೆ ಗೊತ್ತಾ? ಭೂಮಿಯ ಒಳ ಭಾಗಕ್ಕೂ ಆವರಿಸಿ ಬೆಳೆ ಬೆಳೆಯದಂತೆ ಮಾಡುತ್ತಿದ್ದೇನೆ. ಮಣ್ಣು ಕೊಟ್ಟು ಆಹಾರ ಬೆಳೆ ಇಲ್ಲದಿದ್ದರೇನಂತೆ, ನನ್ನಿಂದಲೇ ತಯಾರಾದ ಅಕ್ಕಿ ಮುಂತಾದವು ಈಗಾಗಲೇ ಅಲ್ಲಿ ಇಲ್ಲಿ ಬರುತ್ತಾ ಇದೆ. ಹಾಲು, ಮೊಸರು, ಎಣ್ಣೆ ಮುಂತಾದವನ್ನು ನಾನಿಲ್ಲದಿದ್ದರೆ ಹೇಗೆ ಎಲ್ಲಾ ಕಡೆಗೂ ಸಾಗಿಸುವುದು? ನೋಡಿದಿರಾ ನನ್ನ ಪ್ರತಾಪ, 'ನೀನಾರಿಗಾದೆಯೋ ಎಲೆ ಮಾನವ'. ನನ್ನಿಂದ ಎಷ್ಟು ಉಪಯೋಗ (ಸರ್ವನಾಶ) ಆಗುತ್ತಿದೆ.

ಇನ್ನು ಮುಂದೆ ನೋಟುಗಳು (ಕರೆನ್ಸಿ), ಪುಸ್ತಕಗಳು, ಪೇಪರ್ ಎಲ್ಲವನ್ನೂ ನನ್ನಿಂದಲೇ ತಯಾರಿಸುತ್ತಾರೆ. ಇಲ್ಲದಿದ್ದರೆ ಕಾಗದ ತಯಾರಿಸುವುದಕ್ಕೆ ಮರ ಕಡಿದು ಪರಿಸರ ವಾದಿಗಳ ಕೈಲಿ ಬೈಸಿಕೊಳ್ಳ ಬೇಕಾಗುತ್ತದೆ. ಈಗಾಗಲೇ ಗೆಟ್-ಟುಗೆದರ್, ಕಿಟಿ ಪಾರ್ಟಿ, ರೋಡ್ ಬದಿಯ ತಿಂಡಿ-ಊಟ, ಎಲ್ಲಕ್ಕೂ ನಾನೆ. ಯೂಸ್ ಅಂಡ್ ಥ್ರೋ ಎಂಥಾ ಸದ್ವಿನಿಯೋಗ. ಚರ್ಮದ ಚಪ್ಪಲಿ ಕಡಿಮೆಯಾಗಿ ನನ್ನಿಂದಾದ ಪಾದರಕ್ಷೆಗಳು ಬರುತ್ತಿವೆ. ಬಿದಿರಿನ ಬುಟ್ಟಿಗಳ ಬದಲು ನನ್ನದೇ ತರಹೇವಾರಿ ಡಬ್ಬಿಗಳು, ನಮ್ಮ ಸೀನಿಯರ್ ಗಳಿಂದ ತಯಾರಾದ ಟಪ್ಪರ್ ವೇರ್ ಡಬ್ಬಿಗಳು ಮನೆಗೆ ಎಷ್ಟು ಅಂದ ಅಲ್ಲವೆ? ಇದೆಲ್ಲಾ ಈಗಿನ ಬುದ್ಧಿವಂತರಿಗೆ ಗೊತ್ತು. ಹಿಂದಿನ ಕಾಲದ ಗೊಡ್ಡೂ ಮುದುಕರಿಗೇನು ಗೊತ್ತು? ಬಿಸಿಲು ಮಳೆಗೆ ಹಾಳಾಗದ ಚಂದ ಚಂದದ ಛತ್ರಿ ನನ್ನಿಂದಲೇ ಆಗುತ್ತಿಲ್ಲವೇ? ಹಣ್ಣು ಮಕ್ಕಳ ತಲೆ ಹೂವು, ಸನ್ಮಾನ ಮಾಡುವಾಗ ಹಾಕುವ ಹಾರ ಎಲ್ಲವೂ ನನ್ನದೇ.

ಮಳೆ ಬಂದಾಗ ಎಲ್ಲೆಲ್ಲೂ ಇದ್ದ ನನ್ನನ್ನು ಮಳೆ ನೀರು ಕೊಚ್ಚಿಕೊಂಡು ಹೋಗಿ ಚರಂಡಿ ಕಟ್ಟಿಕೊಳ್ಳುತ್ತದೆ. ಅದರೊಡನೆ ಬೇರೆ ತ್ಯಾಜ್ಯವೂ ಸೇರಿ ಕೊಳೆತ ನೋಟ, ಸೊಳ್ಳೆಗಳಿಗೆ ಹಬ್ಬದೂಟವಾಗುತ್ತದೆ. ಅವುಗಳಿಂದ ಡೆಂಗ್ಯೂ, ಮಲೇರಿಯಾ ಬಂದು ಜನ ಸಾಯ್ತಾ ಇದ್ದಾರೆ ಅಂತ ಕೆಲವರು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೇನು? ಜನ ಸಂಖ್ಯೆ ಕಡಿಮೆಯಾಗುವುದಿಲ್ಲವಲ್ಲ!. ಇಷ್ಟೊಂದು ಜನರನ್ನು ಸಾಕುವ ದೇಶದ ನಾಯಕನಿಗೆ ಕಷ್ಟ ಕಡಿಮೆಯಾಗುವುದಿಲ್ಲವೇ? ನನ್ನಿಂದ ಪ್ರಪಂಚಕ್ಕೆ ಎಷ್ಟು ಸಹಾಯವಲ್ಲವೇ? 'ನೀನಾರಿಗಾದೆಯೋ ಎಲೆ ಮಾನವ?'

ಹೇಗೆ ನಾನು ಭೂಮಿಯನ್ನು ಆವರಿಸಿಕೊಂಡಿದ್ದೇನೆ ನೋಡಿದಿರಾ? ಹೀಗಾದರೆ ಮುಂದೊಂದು ದಿನ ಭೂಮಿ, ಜೀವಿಗಳಿಗೆ ಬದುಕಲು ನಿರುಪಯುಕ್ತವಾಗುತ್ತದೆ ಎಂದು ಕೆಲಸವಿಲ್ಲದ 'ಬುದ್ಧಿವಂತರು?' ಬೊಬ್ಬೆ ಹೊಡೆಯುತ್ತಿದ್ದಾರೆ. ಅಲ್ಲಾ ಅವರಿಗೇನು ಗೊತ್ತು ಭೂಮಿ ಇಲ್ಲದಿದ್ದರೇನಂತೆ, ಬೇರೆ ಗ್ರಹಗಳಿಲ್ಲವೇ? ಅಲ್ಲಿಗೆ ಹೋದರಾಯಿತು. ನನ್ನ ಸಾಮ್ರಾಜ್ಯ ಸ್ಥಾಪಿಸಲು ಇನ್ನೊಂದು ಜಾಗ ಸಿಕ್ಕರೆ ನನಗೆ ಪರಮಾನಂದ.

ನನಗೊಬ್ಬ ದಾಯಾದಿ ಇದ್ದಾನೆ. ಅವನಿಗೆ ಈ ಮಾನವರು 'ಕಾಂಗ್ರೆಸ್ ಹುಲ್ಲು' ಎಂದು ಕರೆಯುತ್ತಾರೆ. ಅದೇಕೆ ಹಾಗೆ ಕರೆಯುತ್ತಾರೋ!!..  ಅವನಿಂದಲೂ ತೊಂದರೆ ಅಂತ ಈ ಅರ್ಧಂಬರ್ಧ ಬುದ್ಧಿ ಇರುವ ಮನುಷ್ಯರು ಅವನನ್ನೂ ನಾಶ ಮಾಡತೊಡಗಿದರು. ಪಾಪ ಅವನು ಅವರ ಕೈಗೆ ಸಿಕ್ಕಿ ನಾಶವಾಗಿ ಹೋದ. ಏನೋ ಅಲ್ಲೊಂದು ಇಲ್ಲೊಂದು ಅವನ ಸಂತಾನ ಉಳಿದಿದೆ. ನಾನು ಹಾಗಲ್ಲಪ್ಪ. ನನ್ನನ್ನು ನಾಶ ಮಾಡಲು ಅವರ ಕೈಲಿ ಸಾಧ್ಯವೇ ಇಲ್ಲ. ನಾನು ರಕ್ತಬೀಜಾಸುರನಂತೆ ಹುಟ್ಟುತ್ತಲೇ ಇರುತ್ತೇನೆ. ನನ್ನನ್ನು ಮುಗಿಸಲು ಮನುಷ್ಯರಿಗೆ ಇಷ್ಟವೂ ಇಲ್ಲ ಅನ್ನಿ. ಯಾರೋ ಒಬ್ಬ ಮಂತ್ರಿ ವಾಹನ ನಿಲ್ದಾಣಗಳಲ್ಲಿ ಕಾಫಿ, ಚಹಾ, ಮೊಸರುಗಳನ್ನು ಕುಡಿಯಲು ಮಣ್ಣಿನ ಕುಡಿಕೆಗಳನ್ನು ತಯಾರಿಸಿ ಎಂದ. ಕುಂಬಾರರು ಬದುಕಲಿ ಎಂದ. ಅದು ಹೆಚ್ಚು ದಿನ ನಡೆಯಲಿಲ್ಲ. ಅದು ಕೈ ತಪ್ಪಿ ಬಿದ್ದು ಒಡೆದು ಹೋಗುತ್ತದೆ ಎಂದು ಅದನ್ನು ನಿಲ್ಲಿಸಿದರು ನನ್ನ ಪ್ರೇಮಿಗಳು. 

ಗೋದ್ರೇಜ್ ಕಂಪೆನಿಯ ಕುರ್ಚಿಗಳ ಬದಲು ಈಗ ನನ್ನಿಂದಲೇ ತಯಾರಾದ ಕುರ್ಚಿ, ಟೇಬಲ್ ಗಳು ಬಂದಿವೆ. ಆ ಕಂಪೆನಿ ದಿವಾಳಿಯಾಗಲಿ ಬಿಡಿ, ನಾನಿಲ್ಲವೆ. ನನ್ನನ್ನು ಸುಟ್ಟರೂ, ಒಂದು ಬಗೆಯ ವಿಷಾನಿಲ ಉತ್ಪತ್ತಿಯಾಯಿತು. ಯಥಾ ಪ್ರಕಾರ ಬುದ್ಧಿ (ದುರ್ಬುದ್ಧಿ) ಜೀವಿಗಳು ಬೊಬ್ಬೆ ಹೊಡೆದರು. ಆದರೆ ಆ ಅನಿಲವನ್ನು ಹೀರಿಯೂ ನೀವೆಲ್ಲ ವಿಷ ಕಂಠರಾಗಿಲ್ಲವೇ? ಇಂಥ ನನ್ನನ್ನು ಈ ಪ್ರಪಂಚದಿಂದ ಹೊರದೂಡಲು ಹೊರಟ ಕೆಲ ಮೂರ್ಖ ಮಾನವರೇ, ತಿಳಿದುಕೊಳ್ಳಿ, ನಾನು ಚಿರಂಜೀವಿ, ಚಿರಂಜೀವಿ, ಚಿರಂಜೀವಿ


ಈಗ ನಾನಾರೆಂದು ನಿಮಗೆ ಗೊತ್ತಾಗಿರ ಬಹುದಲ್ಲವೆ?

ಈಗ ನೀವು ನನ್ನ ಪಕ್ಷವೋ, ವಿರೋಧ ಪಕ್ಷವೋ?

Comments