ಪರಿಚಯದ ಪರಿಪರಿಯ ಕಿರಿಕಿರಿಗಳು
ಹಾಸ್ಯ ಲೇಖನ - ಅಣಕು ರಾಮನಾಥ್
ಬಹಳ ವರ್ಷಗಳ ಹಿಂದಿನ ಮಾತು. ಜರಗನಹಳ್ಳಿ ಶಿವಶಂಕರರು ಪ್ರತಿ ತಿಂಗಳು ನಡೆಸುತ್ತಿದ್ದ ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಗಳಾಗಿ ಏಣಗಿ ಬಾಳಪ್ಪನವರು ಆಗಮಿಸಿದ್ದರು. ಪ್ರಾರ್ಥನೆ, ಸ್ವಾಗತಗಳ ನಂತರ ನಿರೂಪಕರು ‘ಈಗ ಅತಿಥಿಗಳ ಪರಿಚಯವನ್ನು ಪರಮೇಶಿಯವರು (ನಿಜ ಹೆಸರಲ್ಲ) ಮಾಡಿಕೊಡುತ್ತಾರೆ’ ಎಂದರು.
ಒರಳುಕಲ್ಲಿನಲ್ಲಿ ರುಬ್ಬುಗುಂಡು ಚಲಿಸುವ ರೀತಿಯಲ್ಲಿ ಉರುಟುನಡೆಯಲ್ಲಿ ವೇದಿಕೆಯನ್ನೇರಿದ ಪರಮೇಶಿಯವರು “ಇಂದಿನ ಮುಖ್ಯ ಅತಿಥಿಗಳು ಏಣಗಿ ಬಾಳಪ್ಪ ಉಕ್ಕೇರಿ” ಎನ್ನುತ್ತಾ ಪರಿಚಯಕ್ಕೆ ಉಪಕ್ರಮಿಸಿದರು. ಹೌಹಾರಿದ ನಾನು ಅವರ ಗಮನವನ್ನು ಸೆಳೆಯಲು ಸಕಲ ಪ್ರಯತ್ನಗಳನ್ನೂ ಮಾಡಲಾರಂಭಿಸಿದೆ. ಪರಿಣಾಮ ಶೂನ್ಯ.
“ಏಣಗಿ ಬಾಳಪ್ಪ ಉಕ್ಕೇರಿಯವರು ಒಳ್ಳೆಯ ಆಡುಗಾರರು” ಮುಂದುವರಿಸಿದರು ವೃತ್ತೋದರರು, “ಅವರು ಆಡಿದರೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.”
‘ಆಡುವುದನ್ನು ನೋಡುವುದು ತಿಳಿದಿದೆ. ಆಡುವುದನ್ನು ಕೇಳುವುದೆ?’ ಎಂಬ ಗೊಂದಲ ಯಾರಲ್ಲೂ ಮೂಡಲಿಲ್ಲ. ಆ ಹೊತ್ತಿಗೆ ಸಭೆಗೆ ಈ ಪರಿಚಯಕಾರನು ಹಕಾರ ಹಂತಕನೆಂದು ಅರಿವಾಗಿತ್ತು. ತತ್ಪರಿಣಾಮ ಮುಖ್ಯ ಅತಿಥಿಗಳು ಉಕ್ಕೇರಿಯಲ್ಲ, ಹುಕ್ಕೇರಿ ಎಂದೂ, ಪರಿಚಯ ಮಾಡಿಕೊಡುತ್ತಿರುವ ವ್ಯಕ್ತಿಗೆ ಗಾಯಕ ಬಾಳಪ್ಪ ಹುಕ್ಕೇರಿಯೂ ತಿಳಿದಿಲ್ಲ, ನಾಟಕಕಾರ ಏಣಗಿ ಬಾಳಪ್ಪನವರೂ ತಿಳಿದಿಲ್ಲವೆಂಬುದು ಸ್ಪಷ್ಟವಾಗಿತ್ತು. ಆದರೆ ಸ್ವಯಂ ಪರಿಚಯಕಾರನಿಗೆ ತಿಳಿದಿರಲಿಲ್ಲವಲ್ಲ, ಆತ ಮುಂದುವರಿಸಿದರು:
“ಏಣಗಿ ಬಾಳಪ್ಪ ಉಕ್ಕೇರಿಯವರಿಗೆ ಈಗ ತೊಂಬತ್ತೇಳು ವರ್ಷ ವಯಸ್ಸು” ಎಂದರವರು. ವಾಸ್ತವವಾಗಿ ಅಂದು ಏಣಗಿಯವರಿಗೆ ತೊಂಬತ್ತು ವರ್ಷಗಳು ತುಂಬಿದ್ದವು, ಇನ್ನು ಏಳು ವರ್ಷಗಳನ್ನು ಪರಿಚಯಕಾರರೇ ಬೋನಸ್ ಆಗಿ ನೀಡಿದ್ದರು. ಪರಿಚಯಕಾರರ ತಲೆಯನ್ನು ತುಂಬಿಕೊಂಡಿದ್ದ ಬಾಳಪ್ಪ ಹುಕ್ಕೇರಿ ಅಂದಿಗೆ ಗತಿಸಿ ಹಲವು ವರ್ಷಗಳಾಗಿದ್ದವು.
“ಇವರ ಎಸರಿನಲ್ಲಿ ಉಕ್ಕೇರಿ ಅಂತ ಇರೋದು ಯಾಕೆ ಅಂದರೆ ಈ ವಯಸ್ಸಿನಲ್ಲೂ ಅವರ ಉತ್ಸಾಹವು ಆಲಿನಂತೆ ಉಕ್ಕೇರುತ್ತಿದೆ. ಆದ್ದರಿಂದಲೇ ಅವರ ಎಸರು ಬಾಳಪ್ಪ ಉಕ್ಕೇರಿ!”
ಏಣಗಿಯವರಿಗೆ ಒದಗಿದ್ದ ವಯೋಸಹಜವಾದ ಕಿವುಡು ಈ ಪರಿಚಯವನ್ನು ಕೇಳಿಸಿಕೊಳ್ಳುವ ಸಂಕಷ್ಟದಿಂದ ಅವರನ್ನು ಪಾರು ಮಾಡಿತ್ತು.
ವೇದಿಕೆಯಲ್ಲದೆ ಹೊರಜಗತ್ತಿನಲ್ಲಿಯೂ ಒಬ್ಬರನ್ನು ಮತ್ತೊಬ್ಬರೆಂದು ಗ್ರಹಿಸುವ ಸನ್ನಿವೇಶಗಳು ಉದ್ಭವಿಸುತ್ತವೆ. “ನಿಮ್ಮ ‘ನಟಸಾರ್ವಭೌಮ’ ಕಾದಂಬರಿಯನ್ನು ಓದಿದ್ದೇನೆ ಸಾರ್, ತುಂಬಾ ಚೆನ್ನಾಗಿದೆ” ಎಂದು ಕಾಲೇಜು ಹುಡುಗನೊಬ್ಬನು ಶಿವರಾಮ ಕಾರಂತರಿಗೆ ನುಡಿದಿದ್ದ. ಕಾರಂತರು “ಗುಡ್. ಅದರಲ್ಲಿ ಯಾವ ಪಾತ್ರ ಇಷ್ಟವಾಯಿತು?” ಎನ್ನುತ್ತಾ ಮಾತು ಮುಂದುವರೆಸಿದ್ದರು. ಆನಂತರ “ಕಾರಂತರೆ, ಅನಕೃ ಬರೆದ ಕೃತಿಯನ್ನು ನಿಮ್ಮದೆಂದರೂ ಸಮ್ಮತಿಸಿ ಮಾತನಾಡಿದ್ದೇಕೆ?” ಎಂದು ಕೇಳಿದರೆ, “ಯಾರದೇ ಆಗಲಿ, ಕನ್ನಡದ ಪುಸ್ತಕ ಓದಿದನಲ್ಲ, ಅದೇ ಸಂತೋಷ” ಎಂದು ನುಡಿದಿದ್ದರು.
ಬಿ.ವಿ. ಕಾರಂತ ಮತ್ತು ಶಿವರಾಮ ಕಾರಂತರನ್ನು ಪರಸ್ಪರ ತಪ್ಪಾಗಿ ಗ್ರಹಿಸಿದ ಪ್ರಸಂಗಗಳಿವೆ. “ನಿಮ್ಮ ಕಾದಂಬರಿಗಳನ್ನು ಓದಿದೆ ಸಾರ್” ಎಂದು ಬಿ.ವಿ. ಕಾರಂತರಿಗೂ, “ನಿಮ್ಮ ‘ಹಯವದನ’ ತುಂಬಾ ಚೆನ್ನಾಗಿದೆ ಸಾರ್” ಎಂದು ಶಿವರಾಮ ಕಾರಂತರಿಗೂ ಜನರು ಹೇಳಿದುದುಂಟು. ಶಿವರಾಮ ಕಾರಂತರು ಮನದಲ್ಲಿಯೇ ‘ಹಯವದನನಂತೆ ಹಯವದನ. ನನ್ನ ಮುಖವೇನು ಕುದುರೆಯ ಮುಖದಂತೆ ಇದೆಯೆ?’ ಎಂದುಕೊಂಡಿದ್ದರೂ ಅಚ್ಚರಿಯಿಲ್ಲ.
ಇಂತಹ ಬದಲುಗ್ರಹಿಕೆ ವಿಶ್ವವ್ಯಾಪಿಯಾದ ಗುಣ. ಹಾಲಿವುಡ್ಡಿನ ಖ್ಯಾತ ನಟರಾದ ಪೀಟರ್ ಸೆಲ್ಲರ್ಸ್ ಮತ್ತು ವುಡಿ ಆಲನ್ ‘ಕೆಸಿನೋ ರಾಯೇಲ್’ ಎಂಬ ಚಿತ್ರದೊಂದರಲ್ಲಿ ಅಭಿನಯಿಸಿದ್ದರು. ಯಾವುದೋ ಸನ್ನಿವೇಶದ ಬಗ್ಗೆ ಚರ್ಚಿಸಲೆಂದು ಪೀಟರ್ ಸೆಲ್ಲರ್ಸ್ ಸ್ಟುಡಿಯೋವೊಂದಕ್ಕೆ ಹೋದಾಗ ಸ್ಟುಡಿಯೋದವನು ಸೆಲ್ಲರ್ಸ್‍ರನ್ನು ಆಲನ್ ಎಂದು ಭ್ರಮಿಸಿ, “ಮಿಸ್ಟರ್ ಆಲನ್, ನೀವು ಬಂದದ್ದು ಬಹಳ ಸಂತೋಷ. ನಿಮ್ಮೊಡನೆ ನಟಿಸಿದ ಪೀಟರ್ ಸೆಲ್ಲರ್ಸ್‍ನ ನಟನೆ ನನಗೆ ಏನೇನೂ ಹಿಡಿಸಲಿಲ್ಲ” ಎನ್ನುತ್ತಾ ಸೆಲ್ಲರ್ಸ್‍ರ ಅಭಿನಯದ ಬಗ್ಗೆ ಕಟುನುಡಿಗಳನ್ನು ಆಡತೊಡಗಿದನು. ಎಲ್ಲವನ್ನೂ ಕೇಳಿಸಿಕೊಂಡ ಸೆಲ್ಲರ್ಸ್, ಕಡೆಗೆ “ನಾನು ಆಲನ್ ಅಲ್ಲ, ಸೆಲ್ಲರ್ಸ್. ಗುಡ್ ಬೈ” ಎನ್ನುತ್ತಾ ಹೊರನಡೆದರು.
ಹಾಲಿವುಡ್ಡಿನದೇ ಮತ್ತೊಂದು ಪ್ರಸಂಗವು ಅಭಿಮಾನಿಗಳನ್ನು ಒಳಗೊಂಡಿದ್ದಾಗಿದೆ. ಚಹರೆಯಲ್ಲಿ ಒಂದಿಷ್ಟು ಹೋಲಿಕೆ ಇದ್ದ ಟಾಮ್ ಹ್ಯಾಂಕ್ಸ್ ಮತ್ತು ಬಿಲ್ ಮರ್ರೆ ಈರ್ವರನ್ನು ಅಭಿಮಾನಿಗಳು ತಪ್ಪಾಗಿ ಗ್ರಹಿಸುತ್ತಿದ್ದುದುಂಟು. ಟಾಮ್ ಹ್ಯಾಂಕ್ಸ್ “ನನ್ನನ್ನು ಮರ್ರೆ ಎಂದು ತಪ್ಪಾಗಿ ಗ್ರಹಿಸಿದ ಅಭಿಮಾನಿಗಳು ಮರ್ರೆಯ ಸ್ಮರಣಿಕೆಗಳ ಮೇಲೆ ನನ್ನ ಸಹಿಯನ್ನು ಕೋರಿದರು. ನಾನು ಅವುಗಳ ಮೇಲೆ ಬಿಲ್ ಮರ್ರೆ ಎಂದೇ ಸಹಿ ಹಾಕಿದೆ” ಎಂದು ನುಡಿದಿದ್ದರು.
ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಅತಿ ಹೆಚ್ಚು ಗೊಂದಲ ಮೂಡಿಸಿದವರೆಂದರೆ ಗುಂಡೂರಾವ್ ದ್ವಯರು. ವೈ.ವಿ. ಗುಂಡೂರಾವ್ ಅತ್ಯುತ್ತಮ ಮಾತುಗಾರರು. ಲೀಲಾಜಾಲವಾಗಿ ಮಾತನಾಡುವ ಅವರಿಗೆ ಸಿಗ್ನೇಚರ್ ಹಾಕಲೂ ಬರೆಹಾಲಸ್ಯ. ವೈ.ಎನ್. ಗುಂಡೂರಾವ್ ಉತ್ತಮ ಬರೆಹಗಾರರು. ‘ಮಾತನಾಡಿ ಬನ್ನಿ ಸಾರ್’ ಎಂದರೆ ನುಡಿವಿರಕ್ತಿ. ಇಂತಿರುವಾಗ ವೈ.ವಿ.ಗೆ “ನಿಮ್ಮ ಆರ್ಟಿಕಲ್ ಓದಿದೆ ಸಾರ್. ಸಖತ್ತಾಗಿ ಬರೀತೀರಿ ಸಾರ್” ಎಂಬ ಪ್ರಶಂಸೆಯೂ, ವೈ.ಎನ್.ಗೆ “ಯೂಟ್ಯೂಬಲ್ಲಿ ನಿಮ್ಮ ವಿಡಿಯೋ ನೋಡಿದೆ ಸಾರ್. ಏನ್ ಸೂಪರ್ರಾಗಿ ಮಾತಾಡ್ತೀರಾ ಸಾರ್! ಸಖತ್ ಹಾಸ್ಯ ನಿಮ್ಮದು” ಎಂಬ ಪ್ರಶಂಸೆಯೂ ಆಗಾಗ್ಗೆ ಸಂದಾಯ ಆಗುತ್ತಲೇ ಇರುತ್ತವೆ. “ನಾನವನಲ್ಲ” ಎಂದು ಹೇಳೀ ಹೇಳೀ ರೋಸಿರುವ ಇಬ್ಬರೂ ‘ಬಂದದ್ದೆಲ್ಲ ಬರಲಿ, ಅಭಿಮಾನದ ಹೊನಲಿರಲಿ’ ಎಂಬ ಭಾವದಿಂದ ಸ್ವೀಕರಿಸುತ್ತಾರೆ.
ಸಾರ್ವಜನಿಕರ ಮಧ್ಯೆ ಪದೇ ಪದೇ ಕಂಡುಬಂದರೂ ಜನಮನದಲ್ಲಿ ಚೆಹರೆಯು ಅಚ್ಚೊತ್ತದಿರುವುದು ಅಚ್ಚರಿಯ ಸಂಗತಿಯೇ. ವೈ.ವಿ. ಗುಂಡೂರಾವ್‍ರನ್ನು ‘ನೀವು ಡುಂಡಿರಾಜ್ ಅಲ್ವಾ?’ ಎಂದೂ, ಡುಂಡಿರಾಜರನ್ನು ‘ನೀವು ಎಮ್ಮೆಸ್ಸೆನ್ ಅಲ್ವಾ?’ ಎಂದೂ, ಕೇಳಿದವರಿದ್ದಾರೆ. ನಾನಂತೂ ಜನರ ಕಣ್ಣಿಗೆ ಗಂಗಾವತಿ ಪ್ರಾಣೇಶ್, ನರಸಿಂಹಮೂರ್ತಿ, ಡುಂಡಿರಾಜ್ ಆಗಿ ಕಾಣಿಸಿಕೊಂಡಿದ್ದೇನೆ. ಡುಂಡಿಗೂ ನನಗೂ ‘ಶಿರಸಾಮ್ಯ’ವಿದೆ. ಮಿಕ್ಕವರಿಗೂ ನನಗೂ ಯಾವುದೇ ಹೋಲಿಕೆ ಇಲ್ಲದಿದ್ದರೂ ಅದು ಹೇಗೆ ಅವರು ಹಾಗೆ ಗ್ರಹಿಸಿದರೆಂಬುದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.
ಚೆಹರೆಯನ್ನು ತಪ್ಪಾಗಿ ಗ್ರಹಿಸುವುದು ಒಂದು ವಿಧವಾದರೆ ಹೆಸರನ್ನು ತಪ್ಪಾಗಿ ಗ್ರಹಿಸುವುದು ಮತ್ತೊಂದು ಪರಿ. ಎಷ್ಟೋ ಸಭೆಗಳಲ್ಲಿ ನಾನು ‘ರಾಮಮೂರ್ತಿ’ ಎಂದು ಪರಿಚಯಗೊಂಡಿದ್ದೇನೆ, ‘ರಮಾನಾಥ’ನಾಗಿ ರಮೆಯೆಂಬ ಹೆಣ್ಣಿನ ಕೈ ಹಿಡಿದಿದ್ದೇನೆ, ‘ರಮಾನಂದ್’ ಆಗಿ ಯಾರಿಗೋ ಆನಂದ ನೀಡಿದ್ದೇನೆ. ನನ್ನ ಇನಿಷಿಯಲ್ ಆದ ಎನ್ ನನ್ನ ತಂದೆಯವರಾದ ಎಸ್. ನರಸಿಂಹಮೂರ್ತಿಯವರನ್ನು ಸೂಚಿಸಿದರೆ, ಪರಿಚಯಕಾರರ ಪ್ರಕಾರ ನಾನು ಎಮ್ಮೆಸ್ಸೆನ್‍ರ ಮಗನಾಗಿದ್ದೆ! ಇನಿಷಿಯಲ್ ಎನ್ ಅನ್ನೂ ಎಸ್ ಆಗಿಸಿ, ನಾನು ಎಷ್ಟೇ ಬಾರಿ ‘ನೋ’ ಎಂದರೂ, ಪರಿಚಯಕಾರರು ‘ಎಸ್’ ಎಂದೇ ಮುಂದುವರಿಸಿದ್ದಿದೆ.
ಸಭೆಯೊಂದರಲ್ಲಿ ನನ್ನನ್ನು ‘ಅಣಕುಕಲೆಯಲ್ಲಿ ಪರಿಣತರಾದವರು’ ಎಂದು ಪರಿಚಯಿಸಿದ್ದೇ ಅಲ್ಲದೆ, ‘ಈಗ ಅಣಕುರಾಮನಾಥರಿಂದ ಮಿಮಿಕ್ರಿ! ಸಾರ್, ಸಿದ್ರಾಮಣ್ಣಂದೂ ಮಿಮಿಕ್ರಿ ಮಾಡ್ತೀರಾ ಸಾರ್?’ ಎಂಬ ಉದ್ಘೋಷ!
“ನನ್ನದು ಮಿಮಿಕ್ರಿ ಅಲ್ಲ, ಅಣಕವಾಡು ಅಂದರೆ...”
ತಾಳ್ಮೆಗೂ, ಆ ಪರಿಚಯಕಾರನಿಗೂ ಬದ್ಧ ದ್ವೇಷ. ನನ್ನ ಮಾತನ್ನು ಅರ್ಧದಲ್ಲೇ ತುಂಡರಿಸಿದ ಅವನು, “ಗೊತ್ತಾಯ್ತು ಬಿಡಿ ಸಾರ್. ಮಾತಿನ ಬದಲು ಹಾಡ್ತೀರ. ಅಂಬರೀಷ್ ‘ನಾವಾಡುವ ನುಡಿಯೆ’ ಹಾಡಿದರೆ ಹೇಗಿರತ್ತೆ ಅಂತ ತೋರಿಸಿ ಸಾರ್” ಎಂದಿದ್ದ.
ಹಾಸ್ಯವಯಸ್ಯೆ ಭುವನೇಶ್ವರಿ ಹೆಗಡೆಯವರದು ಮತ್ತೊಂದು ವಿಧವಾದ ಪರಿಚಯಗ್ರಹಣ. ಅವರ ಪ್ರಬಂಧವೊಂದು ಬಿಬಿಎ ಮೊದಲ ಸೆಮಿಸ್ಟರ್‍ಗೆ ಪಠ್ಯವಾಗಿತ್ತು. ತತ್ಸಂಬಂಧವಾಗಿ ಪರೀಕ್ಷೆಯಲ್ಲಿ ‘ನಾಲ್ಕು ಸಾಲುಗಳಲ್ಲಿ ಲೇಖಕಿಯ ಪರಿಚಯ ಬರೆಯಿರಿ’ ಎಂಬ ನಾಲ್ಕು ಅಂಕಗಳ ಪ್ರಶ್ನೆಯಿದ್ದಿತು. ಅದಕ್ಕೆ ಬಂದ ಉತ್ತರಗಳು ಇಂತಿವೆ:
“ಲೇಖಕಿಯು ಸುಮಾರು 13 ಶತಮಾನಗಳ ಕಾಲ ಅರ್ಥಶಾಸ್ತ್ರ ಬೋಧನೆ ಮಾಡಿದ್ದಾರೆ.”
ಇನ್ನೊಬ್ಬರಿಗೆ ಹದಿಮೂರು ಶತಮಾನಗಳು ಮನುಷ್ಯರು ಇರಲಾರರೆಂಬ ಶಂಕೆ ಮೂಡಿದ್ದರಿಂದ, “ಲೇಖಕಿಯು 3 ಶತಮಾನಗಳ ಕಾಲ ಬೋಧನೆ ಮಾಡಿದ್ದಾರೆ” ಎಂದು ಬರೆದರೆ, ಮತ್ತೊಬ್ಬರಿಗೆ ಕೇವಲ ಶತಮಾನಗಳು ಚಿಲ್ಲರೆ ಸಮಯವೆನಿಸಿರಬೇಕು. ಅವರು “ಶ್ರೀಮತಿ ಭುವನೇಶ್ವರಿ ಹೆಗಡೆಯವರು 3 ದಶಕ ಶತಮಾನ ಸಾಹಿತ್ಯ ರಚಿಸಿದ್ದಾರೆ” ಎಂದಿದ್ದಾರೆ. ಅಲ್ಲದೆ ಭುವನೇಶ್ವರಿ ಹೆಗಡೆಯವರಿಗೆ ವಿದ್ಯಾರ್ಥಿಗಳ ಪ್ರಕಾರ ಕರ್ನಾಟಕ ರತ್ನ ಪ್ರಶಸ್ತಿ, ಜ್ಞಾನಪೀಠ ಹಾಗೂ ಪದ್ಮಭೂಷಣಗಳು ಲಭಿಸಿವೆ. ಲೇಖಕಿಯ ಜನನವು ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಆಗಿದೆ!
ಇಂದುಶ್ರೀಯೊಡನೆ ನಾನು ನೂರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಡಿಂಕು ಗೊಂಬೆಯೊಡನೆ ಇಂದು ಪ್ರದರ್ಶಿಸುವ ವೆಂಟ್ರಿಲಾಕ್ವಿಸಮ್ ಕಲೆಯನ್ನು ‘ವೆಂಟ್ರಾಲಿಸಮ್’, ‘ವೆಂಟ್ರಿಕುಲಿಸಮ್’, ‘ವೆಂಟಲಿಸಮ್’ ಎಂದವರಿದ್ದಾರೆ. ‘ಎಂಟರ್‍ಟೈನ್‍ಮೆಂಟ್ ಕೇ ಲಿಯೇ ಕುಛ್ ಭೀ ಕರೇಗಾ’ದ ಫರಾ ಖಾನ್ ಅದನ್ನು ‘ವೆಂಟ್ರಿಲೋಲೋಲೋಕ್ವಿಸಮ್’ ಎಂದು ನುಡಿದು ಅದನ್ನು ಬಹಳ ಲೋ ಲೆವೆಲ್‍ಗೆ ಇಳಿಸಿದ್ದರು. ಇಂದುವಿನೊಡನೆ ನನ್ನನ್ನು ಕಂಡಿದ್ದ ಒಬ್ಬರು ನನ್ನತ್ತಲೇ ಪರೀಕ್ಷಾದೃಷ್ಟಿಯಿಂದ ನೋಡುತ್ತಿದ್ದರು. ಕುತೂಹಲವು ಕುದಿಮಟ್ಟವನ್ನು ತಲುಪಿದಾಗ ಬಳಿಸಾರಿ,
“ನೀವು... ನೀವೂ...” ಎನ್ನಲಾರಂಭಿಸಿದರು.
ಬರೆವಣಿಗೆಯಿಂದಲೇ ಖ್ಯಾತನಾಗಿರಬಹುದೆಂದೆಣಿಸಿ ನಾನು ನನ್ನ ಪ್ರವರವನ್ನು ಬಿಚ್ಚುವುದುಕ್ಕೆ ಮುಂಚೆಯೇ ಅವರಿಗೆ ನನ್ನ ಗುರುತು ಹತ್ತಿಬಿಟ್ಟಿತು, ಕೇಳಿಯೇಬಿಟ್ಟರು,
“ನೀವು ಡಿಂಕು ಅಲ್ವಾ?”

Comments
Post a Comment