ಸ್ಯಾರಿ? ನೋ... ಸ್ಸಾರಿ...
ಹಾಸ್ಯ ಲೇಖನ - ಅಣಕು ರಾಮನಾಥ್
“ಕಂಕುಳ ಕೆಳಗೆ ಸ್ವಲ್ಪ ಹಿಡಿಯತ್ತೆ. ಲೂಸ್ ಮಾಡಿಕೊಡಿ” ಎಂದಳು ಪಿಂಕಿ. ಸಮ್ಮತಿಸಿದ ದರ್ಜಿ.
ಮರುದಿನ ಬ್ಲೌಸ್ ತೊಟ್ಟ ಪಿಂಕಿಗೆ ತನ್ನ ಮುತ್ತಜ್ಜಿಯ ಫೋಟೋ ನೆನಪಾಯ್ತು. ಆ ಫೋಟೋದಲ್ಲಿ ಮುತ್ತಜ್ಜಿ ತೊಟ್ಟಿದ್ದ ರವಿಕೆಯ ಕಂಕುಳ ಸಂದಿಯಲ್ಲಿ ಕಡಿಮೆಯೆಂದರೆ ಒಂದು ಇಟ್ಟಿಗೆಯನ್ನು ತೂರಿಸುವಷ್ಟು ಸಡಿಲತೆ ಇತ್ತು.
“ಇಷ್ಟೊಂದು ಲೂಸ್ ಇದೆಯಲ್ರೀ!” ಹೌಹಾರಿದಳು ಪಿಂಕಿ.
“ಸಮ್ಮರ್ ಅಲ್ವಾ ಮೇಡಮ್! ಕೊಂಚ ಗಾಳಿ ಆಡಲಿ ಅಂತ ಲೂಸ್ ಮಾಡಿದೆ.” ಮಾಡಿದ ತಪ್ಪಿಗೆ ಜಗವೇ ಒಪ್ಪಬಹುದಾದ ಕಾರಣವನ್ನು ನೀಡುವುದರಲ್ಲಿ ಎಕ್ಸ್‍ಪರ್ಟ್ ಆತ.
“ಈ ಗ್ಯಾಪಲ್ಲಿ ಗಾಳಿ ತೂರಿ ಬ್ಲೌಸ್ ಉಬ್ಬಿದರೆ ನೋಡಿದವರು ಪ್ಯಾರಾಚೂಟ್ ಕಟ್ಟಿಕೊಂಡಿದ್ದೀನಿ ಅಂದ್ಕೋತಾರಷ್ಟೆ. ಸರಿ ಮಾಡಿಕೊಡಿ” ಎಂದು ಬ್ಲೌಸನ್ನು ಅಲ್ಲೇ ಬಿಟ್ಟು ನಡೆದಳವಳು.
ಪಿಂಕಿಗೆ ಇದು ಹೊಸದೇನಲ್ಲ. ಮೊದಲು ಬಡಾವಣೆಯ ಸುಪ್ರಸಿದ್ಧ ಫ್ಯಾಷನ್ ಡಿಸೈನರ್ ಬಳಿ ಟಾಪ್ ಹೊಲೆಸಿಕೊಳ್ಳುವುದು, ಅವನು ಯಥಾ ಪ್ರಕಾರ ಎಲ್ಲಿಯೋ ಅಥವಾ ಎಲ್ಲೆಡೆಯೂ ಕೆಡಿಸುವುದು; ಆ ಡಿಸೈನರ್‍ಗೆ ಡಿಸೈನ್ ಡಿಸೈನಾದ ಶಾಪಗಳನ್ನು ಹಾಕುತ್ತಾ ಪಿಂಕಿ ಆಲ್ಟ್ರೇಶನ್ ಟೈಲರ್ ಬಳಿ ಎಡತಾಕುವುದು ಅನೂಚಾನವಾಗಿ ನಡೆದುಬಂದಿರುವ ಸಂಪ್ರದಾಯ.
“ಮೊದಲೇ ಆಲ್ಟ್ರೇಶನ್ ಟೈಲರ್ ಹತ್ತಿರವೇ ಹೊಲಿಸಬಹುದಲ್ವೇ?” ಎಂದು ಕೇಳಿದ್ದೆ ಒಮ್ಮೆ.
“ಬ್ಲೌಸ್‍ಪೀಸ್ ಕೊಟ್ಟರೆ ಇವನಿಗೆ ಹೊಲಿಯಕ್ಕೆ ಬರಲ್ಲ. ಪೀಸ್ ಪೀಸ್ ಆಗಿರೋ ಬ್ಲೌಸ್ ಹೊಲಿಯೋದೇ ಇವನ ಸ್ಪೆಷಾಲಿಟಿ” ಎಂದು ವಿವರಿಸಿದ್ದಳು ಪಿಂಕಿ.
ಹಬ್ಬಗಳಿಗೂ ಬ್ಲೌಸು ಹೊಲಿಸುವಿಕೆಗೂ ಯುಗಗಳ ಸಂಬಂಧ. ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ ಎಂಬುದನ್ನು ಸುಳ್ಳಾಗಿಸಲೆಂದೇ ದರ್ಜಿಗಳಿದ್ದಾರೆ. ನನ್ನ ಮುತ್ತಾತನ ಕಾಲದಲ್ಲಿಯೂ ದರ್ಜಿಯು ಟೈಮಿಗೆ ಸರಿಯಾಗಿ ಕೊಡದೆ ಸತಾಯಿಸುತ್ತಿದ್ದನಂತೆ. ಈಗಿನವರೂ ಡಿಟೋ. ಪ್ಲಂಬರ್, ಟೈಲರ್, ಫ್ಲೋರ್ ಪಾಲಿಶರ್‍ಗಳು ಎಂದೆಂದೂ ಹೇಳಿದ ಸಮಯಕ್ಕೆ ಸರಿಯಾಗಿ ಕೊಡದಿರುವುದನ್ನು ಶಾಶ್ವತವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಇದನ್ನು ಅನುಭವದಿಂದಲೇ ತಿಳಿದ ಪಿಂಕಿಯು ಸೆಪ್ಟೆಂಬರ್‍ನ ಗೌರಿ ಹಬ್ಬಕ್ಕೆ ಬ್ಲೌಸ್ ಬೇಕಾದರೆ ವರ್ಷದ ತೊಡಕಿನ ದಿವಸವೇ ಟೈಲರ್‍ಗೆ ಬಟ್ಟೆ ಕೊಟ್ಟು, ವೈಶಾಖದಲ್ಲಿ ಕೆಡಿಸಿದ ಬ್ಲೌಸನ್ನು ಪಡೆದು, ಜ್ಯೇಷ್ಠ ಆಷಾಢಗಳಲ್ಲಿ ಆಲ್ಟರ್ ಮಾಡಿಸಿಕೊಂಡು, ಶ್ರಾವಣದಲ್ಲಿ ಬ್ಲೌಸಿಗೆ ಮ್ಯಾಚ್ ಆಗುವ ವಾಚ್, ಹೇರ್‍ಕ್ಲಿಪ್, ಲಿಪ್‍ಸ್ಟಿಕ್‍ಗಳನ್ನು ಕೊಂಡು, ಭಾದ್ರಪದದ ತದಿಗೆಯಂದು ತೊಡುತ್ತಿದ್ದಳು. ಈಗಿನ ಬಾಬ್ತು ಯುಗಾದಿ. ವರ್ಷಾವಧಿ ಹಬ್ಬಕ್ಕೆಂದು ಕಾರ್ತಿಕ ಮಾಸದಲ್ಲಿ ಡಿಸೈನರ್ ಬ್ಲೌಸ್ ಹೊಲಿಸಿ, ಮಾರ್ಗಶಿರದಲ್ಲಿ ಮಾರ್ಗ ತಪ್ಪಿದ ಬ್ಲೌಸನ್ನು ಆಲ್ಟ್ರೇಷನ್ ದರ್ಜಿಗೆ ಪುಷ್ಯದಲ್ಲಿ ಪುಷ್ ಮಾಡಿ, ಮಾಘವೆಲ್ಲಾ ಅಲೆದಾಟದಲ್ಲಿ ಮಾಗಿ, ಫಾಲ್ಗುಣದಲ್ಲಿ ತನ್ನ ಪಾಲಿನದನ್ನು ಪಡೆಯಲು ಬಂದಿದ್ದಳು.
“ಟೈಟ್ ಮಾಡಿದ್ದೀನಿ ಮೇಡಮ್” ಎಂದ ಆಲ್ಟ್ರೇಷನ್ ಎಕ್ಸ್‍ಪರ್ಟ್. ನಿಜಕ್ಕೂ ಅವನು ಬ್ಲೌಸನ್ನು ಬಿಗಿಯಾಗಿಸಿದ್ದ. ಅವನಿಗೆ ಕೊಡುವುದಕ್ಕೆ ಮೊದಲು ಕಂಕುಳ ಕೆಳಗೆ ಹಿಡಿಯುತ್ತಿತ್ತಷ್ಟೆ. ಈಗ ಕಂಕುಳ ಸುತ್ತಲೂ ರಕ್ತಸಂಚಲನವೇ ನಿಲ್ಲುವಷ್ಟು ಬಿಗಿಯಾಗಿತ್ತು.
“ಲೂಸ್ ಮಾಡಿ ಅಂದ್ರೆ ಟಾರ್ಪಾಲ್ ಮಾಡ್ತೀರಿ, ಟೈಟ್ ಮಾಡಿ ಅಂದ್ರೆ ಬ್ಯಾಂಡೇಜ್ ತರಹ ಮಾಡಿದೀರಿ. ನಿಮಗೆ ಕೊಡ್ತೀನಲ್ಲಾ, ನನಗೆ ಬುದ್ಧಿ ಇಲ್ಲ!” ಪಿಂಕಿಯ ಕಣ್ಣಿನ ಮುಂದೆ ಐಸ್ ಕ್ಯೂಬ್ ಇಟ್ಟಿದ್ದಿದ್ದರೆ ಅದು ಕೂಡಲೆ ಬಿಸಿನೀರಾಗಿರುತ್ತಿತ್ತು.
ದರ್ಜಿಗೆ ಈ ಬೈಗುಳವೆಲ್ಲ ಜೋಗುಳದಂತೆ. ತಲೆ ಕೆರೆದು, ಹಲ್ಲು ಕಿರಿದು, ಮತ್ತೆ ಬ್ಲೌಸಿನತ್ತ ಕೈ ಚಾಚಿದ.
“ನಿಮಗೆ ಇನ್ನು ಕೊಡಲ್ಲ. ಆ ಮೂಲೆಯಲ್ಲಿರೋ ಸೆಲ್ವಂಗೆ ಕೊಡ್ತೀನಿ” ಎನ್ನುತ್ತಾ ಎರಡು ಹೆಜ್ಜೆ ಮುಂದಿಟ್ಟಳು.
ಐದು ವರ್ಷಗಳ ಹಿಂದಿನ ನೆನಪೊಂದು ಮನದಲ್ಲಿ ಮೂಡಿತು.
ಸುಮಾರು ಮಹಿಳಾಮಣಿಗಳಂತೆಯೇ ಪಿಂಕಿಯೂ ಏಕದರ್ಜೀವ್ರತಸ್ಥಳೇನಲ್ಲ. ಐದು ವರ್ಷಗಳ ಹಿಂದೆ ಫ್ಯಾಶನ್ ಮಹಲ್‍ನ ಗ್ರೆಗರಿ ಪಾಂಡ್ಯನ್ ಅವಳ ದರ್ಜಿಯಾಗಿದ್ದ. ‘ಗ್ರೆಗರಿ’ ಸಂಪ್ರದಾಯಕ್ಕೆ ತಕ್ಕಂತೆ ಪುಟ್ಟ ಟಾಪ್‍ಗಳನ್ನೂ, ‘ಪಾಂಡ್ಯನ್’ ಸಂಪ್ರದಾಯಕ್ಕೆ ತಕ್ಕಂತೆ ‘ಗಾಡಿ ಕಲರ್’ (ಗಾಢ ಎಂಬುದು ಅದು ಹೇಗೆ ವಸ್ತ್ರಭಾಷೆಯಲ್ಲಿ ಗಾಡಿ ಆಯಿತೋ ಭಾಷಜ್ಞರಿಗೂ ತಿಳಿಯದಂತೆ) ಇದ್ದ ರೆಡಿಮೇಡ್ ಬ್ಲೌಸ್‍ಗಳಿಗೆ ಅದು ಪ್ರಸಿದ್ಧವಾಗಿತ್ತು. ಪಿಂಕಿ ಆಗ ಅಲ್ಲಿ ‘ಬ್ಯಾಕ್ ಸ್ವಲ್ಪ ಡೀಪ್ ಇರಲಿ, ಲೇಸ್ ಇರಲಿ’ ಎಂದು ಇನ್‍ಸ್ಟ್ರಕ್ಟಿಸಿದ್ದಳು. ಹೊಲಿದ ಬ್ಲೌಸನ್ನು ಕೈಗೆ ತೆಗೆದುಕೊಂಡಾಗ ಮುಂದೆಯೂ, ಹಿಂದೆಯೂ ಲೇಸ್ ಇಟ್ಟಂತೆ ತೋರಿತ್ತು.
“ಫ್ರಂಟ್‍ಗಿಂತ ಬ್ಯಾಕಲ್ಲೇ ಹೆಚ್ಚು ಬಟ್ಟೆ ಇದೆಯಲ್ರೀ!” ಹೌಹಾರಿದ್ದಳು ಪಿಂಕಿ.
“ನಮ್ಮ ಅಸಿಸ್ಟೆಂಟ್‍ಗೆ ನೀವು ಕೊಟ್ಟ ಅಳತೆಯ ಪ್ರಕಾರ ಹೊಲಿದಿದ್ದೀವಿ ಮೇಡಂ!”
“ಫ್ರಂಟಲ್ಲಿ ಇಷ್ಟು ಡೀಪ್ ಇಡಕ್ಕೆ ಹೇಳಿಲ್ಲವಲ್ಲ! ಮೆಷರ್‍ಮೆಂಟ್ ಬುಕ್ ಕೊಡಿ, ಚೆಕ್ ಮಾಡೋಣ” ಎಂದಿದ್ದಳು ಪಿಂಕಿ.
“ಎಲ್ಲಾ ಡಿಜಿಟಲೈಸ್ಡ್ ಮೇಡಂ. ಬರೆಹದಲ್ಲಿ ಏನೂ ಇರಲ್ಲ.”
“ಸರಿ. ಕಂಪ್ಯೂಟರಲ್ಲೇ ತೋರಿಸಿ!”
“ಕರಪ್ಟ್ ಆಗ್ಹೋಗಿದೆ ಮೇಡಂ.”
ಪಿಂಕಿ ಬ್ಲೌಸಿನ ತೋಳಿನಲ್ಲಿ ಕೈ ತೂರಿಸಿದ್ದಳು. ಬ್ಲೌಸ್ “ಆರಂಕುಸವಿಟ್ಟೊಡಂ ಏರದೀ ವಸ್ತ್ರಂ ಮೊಣಕೈಯ ಮೇಲ್ಗಡೆಂ’ ಎಂದು ಹಠ ತೊಟ್ಟಿತ್ತು.
“ಹಾಕ್ಕೊಳಕ್ಕೇ ಆಗಲ್ವಲ್ರೀ!”
“ಅಸಿಸ್ಟೆಂಟ್ ಊರಿಗೆ ಹೋಗಿದ್ದಾಳೆ ಮೇಡಂ. ಬಂದ ತಕ್ಷಣ ಆಲ್ಟರ್ ಮಾಡಿಸ್ತೀನಿ.”
“ಎಷ್ಟು ದಿನ ಆಗಬಹುದು?”
“ಈಗ ಅವಳಿಗೆ ಮೂರು ತಿಂಗಳು. ಮಗುವಿಗೆ ಮೂರು ತಿಂಗಳಾದಾಗ ಬಂದುಬಿಡ್ತಾಳೆ!”
“ಆಹಾ! ನಿಮ್ಮ ಬ್ಲೌಸ್ ಡೆಲಿವರಿ ಮಗುವಿನ ಡೆಲಿವರಿಗಿಂತ ಲೇಟು” ಎಂದು ಸಿಡುಕುತ್ತಾ, ಆಲ್ಟ್ರೇಷನ್ ಟೈಲರನ್ನು ಹುಡುಕುತ್ತಾ, ಗೆಳತಿ ಜೆಳುವರಸಿಯ ಸಲಹೆಯ ಮೇರೆಗೆ ದರ್ಜಿ ಸೆಲ್ವಂನ ಮುಂದೆ ಆ ಬ್ಲೌಸನ್ನು ತಂದಿದ್ದಳು.
ಸೆಲ್ವಂ ಸೈಡಿನ ಹೊಲಿಗೆಗಳನ್ನು ಬಿಡಿಸಿ, ಬ್ಲೌಸ್ ಪಿಂಕಿಯ ತೋಳೇರುವಂತೆ ಮಾಡಿಕೊಟ್ಟ. ಆವರೆಗೆ ಪಿಂಕಿ ಬೆನ್ನಿನ ಲೇಸಿನ ಬಗ್ಗೆ ಗಮನ ಕೊಟ್ಟಿರಲಿಲ್ಲ.
“ಲೇಸ್ ಇಷ್ಟು ದಪ್ಪ ಇದೆಯಲ್ರೀ! ನೇಣಿನ ಹಗ್ಗವೇ ಇದಕ್ಕಿಂತ ಸಣ್ಣಗಿರತ್ತೆ!” ಪಿಂಕಿಯ ಕಣ್ಣಲ್ಲಿ ಅಸಹಾಯಕತೆಯ ಕಣ್ಣೀರು.
“ವೇರೆ ಪೋಡ್ರೆ ಮೇಡಂ. ವ್ಯಾರೆ ಹಾಕ್ತೀನಿ. ನೋ ಬ್ರಾಬ್ಳಂ” ಎಂದಿದ್ದ ಸೆಲ್ವಂ.
ಮೂರು ದಿನಗಳ ನಂತರ ಪಿಂಕಿಗೆ ಒಪ್ಪಿಗೆಯಾಗುವ ಅಳತೆಯ ಲೇಸ್ ಹಾಕಿದ್ದ ಸೆಲ್ವಂ. ಆದರೆ ಉದ್ದ? ದುಶ್ಶಾಸನನು ಎಳೆದು ಗುಡ್ಡೆ ಹಾಕಿದ ಸ್ಯಾರಿಹಿಲ್‍ಗೆ ಒಂದು ಪ್ರದಕ್ಷಿಣೆ ಬರಬಹುದಿತ್ತು ಆ ಲೇಸು.
“ಇಷ್ಟುದ್ದ ಯಾರಾದ್ರೂ ಇಡ್ತಾರೇನ್ರೀ! ಇದನ್ನ ಕಟ್ಕೊಳೋ ಹೊತ್ತಿಗೆ ನಾವು ಹೋಗಬೇಕಾದ ಫಂಕ್ಷನ್ನೇ ಮುಗಿದುಹೋಗಿರತ್ತೆ!” ಗುಡುಗಿದ್ದಳು ಪಿಂಕಿ.
“ಕಟ್ ಪಣ್ಣಿ ತರ್ರೆ. ಇನ್ನೂ ಫಿನಿಷ್ ಪಣ್ಣಲೇ” ಎಂದು ಕಟ್ ಮಾಡಿಕೊಡುವುದಕ್ಕೆ ಮತ್ತೊಂದು ವಾರ ಕಳೆದಿದ್ದನವ.
ಮರುವಾರ ಲೇಸ್ ಸರಿಯಿತ್ತು. ತೋಳೂ ಸರಿಯಿತ್ತು. ಆದರೆ ಬ್ಲೌಸ್ ಹುಕ್ಸನ್ನುಒಂದು ಕಡೆಯಿಂದ ಭೀಮನೂ, ಇನ್ನೊಂದು ಕಡೆಯಿಂದ ಹಿಡಿಂಬೆಯೂ ಹಿಡಿದೆಳೆದರೆ ಹಾಕಬಹುದಾಗಿತ್ತಷ್ಟೆ. ಪಿಂಕಿಯು ತನ್ನ ಸ್ನೇಹಿತೆಯರ ಪೈಕಿ ಹಿಡಿಂಬೆಗೆ ಹತ್ತಿರದವಳನ್ನು ಕರೆದು ಹುಕ್ಸ್ ಹಾಕಲು ಹೇಳಿದಳು. ಮಾಡ್ರನ್ ಹಿಡಿಂಬೆ ಬ್ಲೌಸಿನ ಎರಡೂ ಮುಂತುದಿಗಳನ್ನು ಎಳೆದು ಹುಕ್ಸ್ ಹಾಕಿದಳು.
ಬ್ಲೌಸಿನ ಎಡ-ಬಲಗಳ ಹೊಲಿಗೆಗಳು ಈ ಪ್ರಯತ್ನವನ್ನು ಕಂಡು ಬಾಯಿ ಅಗಲಿಸಿ ನಕ್ಕಿದ್ದವು!
“ವಾಟ್ ಟು ಡೂ ನೌ?” ಹತಾಶಳಾಗಿದ್ದಳು ಪಿಂಕಿ.
“ಕೊಂಜ ಕೊಂಜ ಕಟ್ ಪಣ್ಣಿಬಿಡ್ಲಾಂ. ತೂತು ತೂತು ಇಪ್ಪು ಫ್ಯಾಷನ್” ಎಂದಿದ್ದನವ.
ಇವೆಲ್ಲ ಸ್ಮೃತಿಪಟಲದ ಮೇಲೆ ಓಡಿದ ಕಾರಣ ಪಿಂಕಿ ರೈಟ್ ಅಬೌಟ್ ಟರ್ನ್ ಮಾಡಿ, “ಲಾಸ್ಟ್ ಚಾನ್ಸ್. ಸರಿಯಾಗಿ ಮಾಡಿಕೊಡಿ” ಎಂದು ಖಾರಧ್ವನಿಯನ್ನು ಹೊರಡಿಸಿ ಅಲ್ಲಿಂದ ಧುಮುನಡೆದಳು.
ಹೋದ ವಾರ ಅಂಗನವಾಡಿಯ ಸದಸ್ಯೆಯರಿಗೆ ಸರ್ಕಾರವು ‘ವರ್ಷಕ್ಕೆ ಎರಡು ಸೀರೆ ಕೊಡುತ್ತೇವೆ’ ಎಂದಾಗ ‘ಸ್ಯಾರಿ? ನೋ... ಸ್ಸಾರಿ...’ ಎಂದುದಕ್ಕೆ ಯಾವುದೋ ಹಿನ್ನೆಲೆ ಇರಬೇಕೆಂದು ಸ್ತ್ರೀವಸ್ತ್ರತಜ್ಞರು ತಲೆ ಕೆಡಿಸಿಕೊಂಡರಂತೆ.
“ಸೀರೇನ ಯಾವಾನ್ಬೇಕಾದ್ರೂ ಕೊಡ್ತಾನೆ. ಅದಕ್ಕೆ ಬ್ಲೌಸ್ ಪೀಸ್ ತೊಗೊಂಡು ಹೊಲ್ಸೋ ಹೊತ್ಗೆ ಹೊಲ್ಸೆದ್ಹೋಗತ್ತೆ ಜೀವನ” ಎಂಬುದೇ ನಿಜವಾದ ಕಾರಣವೆಂದು ಪಿಂಕಿ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿದ್ದಾಳೆ.
ನಿಜ ಇರಬಹುದೆ?


Comments
Post a Comment