ಸೂರ್ಯ – ಪ್ರಾಣಶಕ್ತಿಯ ಮೂಲ

 ಸೂರ್ಯ – ಪ್ರಾಣಶಕ್ತಿಯ ಮೂಲ

ಕಥೆ  - ಸಿಡ್ನಿ ಸುಧೀರ್


ಉಜ್ಜಯಿನಿಯಿಂದ ದೂರದಲ್ಲಿ ಕ್ಷಿಪ್ರಾ ನದಿಯ ತಟದಲ್ಲಿ ದಟ್ಟ ಮರಗಳಿಂದ ಆವೃತವಾದ ಜಾಗದಲ್ಲಿ 'ವನ್ಯಪ್ರಸ್ಥ'ವೆಂಬ ಗುರುಕುಲವಿತ್ತು. ವನ್ಯಪ್ರಸ್ಥದಲ್ಲಿ ಕೇವಲ ಗ್ರಹಗಳ ಲೆಕ್ಕಾಚಾರವಲ್ಲದೆ, ಪ್ರಕೃತಿಯ ಪ್ರತಿಯೊಂದು ಅಣುವನ್ನು ಅರಿಯುವ ಶಿಕ್ಷಣ, ಶಸ್ತ್ರವಿದ್ಯೆ ಮತ್ತು ಆತ್ಮರಕ್ಷಣೆ, ತರ್ಕ ಮತ್ತು ಮೀಮಾಂಸ, ಆಯುರ್ವೇದ ಮತ್ತು ಸಸ್ಯಶಾಸ್ತ್ರದ ಶಿಕ್ಷಣ ನೀಡಲಾಗುತ್ತಿತ್ತು. ಆಕಾಶದ ನಕ್ಷತ್ರಗಳಿಂದ ಹಿಡಿದು ಭೂಮಿಯ ಮೂಲಿಕೆಗಳವರೆಗೆ ಎಲ್ಲವೂ ಒಂದಕ್ಕೊಂದು ಹೇಗೆ ಬೆಸೆದಿದೆ ಎಂಬುದೇ ಅಲ್ಲಿನ ಮುಖ್ಯ ಪಾಠವಾಗಿತ್ತು. ಗುರುಗಳಾದ ಬ್ರಹ್ಮಪ್ರಕಾಶರು ತಮ್ಮ ಶಿಷ್ಯರಿಗೆ ಎಲ್ಲ ವಿಷಯಗಳನ್ನು ಶಿಸ್ತಿನಿಂದ ಪಾಠಗಳನ್ನು ಹೇಳಿ ಕೊಡುತ್ತಿದ್ದರು. 

ದಕ್ಷಿಣದ ಅಗಸ್ತ್ಯ ಆಶ್ರಮದ ಪರಂಪರೆಯ ದೇವಸ್ಥಾನಗಳಲ್ಲಿ ಅತಿ ಪ್ರಾಚೀನವಾದ ಜ್ಯೋತಿಷ್ಯದ ತಾಳೆಗರಿಗಳಿವೆಯೆಂದು ಗುರುಗಳಿಗೆ ತಿಳಿಯಿತು. ಹೀಗಾಗಿ ಕೆಲ ಶಿಷ್ಯರನ್ನು ಕರೆದುಕೊಂಡು ದಕ್ಷಿಣಪಥದಲ್ಲಿ ಸಾಗಿ, ವಿಂದ್ಯಾ ಪರ್ವತವನ್ನು ದಾಟಿ ದಕ್ಷಿಣದ ಸಮುದ್ರದ ಹತ್ತಿರದ ದೇವಸ್ಥಾನಕ್ಕೆ ಹೋಗುವುದಾಗಿ ಯೋಜನೆ ಮಾಡಿದರು. ಅವರು ಯಾತ್ರೆಯ ಕಾಲದಲ್ಲಿ ತಮ್ಮ ಶಿಷ್ಯ ಭದ್ರಬಾಹುವಿಗೆ ಗುರುಕುಲದ ದಿನನಿತ್ಯದ ಕಾರ್ಯಗಳು ಮತ್ತು ಉಳಿದ ಶಿಷ್ಯರನ್ನು ನೋಡಿಕೊಳ್ಳುವ ಹೊಣೆಯನ್ನು ವಹಿಸಿದರು.

ವಿಶ್ವಧರ, ದೇವವ್ರತ, ಅಮೃತಾಂಶು, ತೇಜೋಮಯ ಮತ್ತು ಕಾಲಗುಪ್ತನನ್ನು ಕರೆದು ಆಚಾರ್ಯರು ಹೀಗೆ ಹೇಳಿದರು

"ನನ್ನ ಪ್ರಿಯ ಶಿಷ್ಯರೇ, ಇಂದು ನಾನು ನಿಮಗೊಂದು ಪ್ರಮುಖ ವಿಷಯವನ್ನು ತಿಳಿಸಬೇಕಿದೆ. ಇನ್ನು ಎರಡು ದಿನಗಳಲ್ಲಿ ನಾವು ಈ ವನ್ಯಪ್ರಸ್ಥದ ಶಾಂತಿಯನ್ನು ಬಿಟ್ಟು ದಕ್ಷಿಣಾಪಥದತ್ತ (ಸೌತ್ ಇಂಡಿಯ) ಸುದೀರ್ಘ ಪಯಣವನ್ನು ಆರಂಭಿಸಲಿದ್ದೇವೆ."

ಅದಕ್ಕೆ ವಿಶ್ವಧರನು 

"ಗುರುದೇವ, ಇಷ್ಟು ದೂರದ ಪ್ರಯಾಣದ ಉದ್ದೇಶವೇನು? ನಾವು ಇಲ್ಲಿಯೇ ಎಲ್ಲವನ್ನೂ ಕಲಿಯುತ್ತಿದ್ದೇವಲ್ಲವೇ?" ಎಂದು ಅಚ್ಚರಿಯಿಂದ ಕೇಳಿದನು.

"ವಿಶ್ವಧರ, ತಾಳೆಗರಿಯ ಜ್ಞಾನವು ಕೇವಲ ನಕ್ಷೆಯಂತೆ. ಆದರೆ ಅನುಭವವೇ ನಿಜವಾದ ದಾರಿ. ನಾವು ದಕ್ಷಿಣಕ್ಕೆ ಸಾಗಿದಂತೆ ಆಕಾಶದ ನಕ್ಷತ್ರಗಳು ತಮ್ಮ ಸ್ಥಾನವನ್ನು ಬದಲಿಸುತ್ತವೆ. ಭೂಮಿಯ ಅಕ್ಷಾಂಶ ಬದಲಾದಂತೆ ಲೆಕ್ಕಾಚಾರಗಳು ಹೇಗೆ ಬದಲಾಗುತ್ತವೆ ಎಂಬುದನ್ನು ನೀವು ಕಣ್ಣಾರೆ ನೋಡಬೇಕು." ಎಂದು ಆಚಾರ್ಯರು ಸಮಾಧಾನದಿಂದ ಉತ್ತರಿಸಿದರು.

"ಅಂದರೆ ಸೂರ್ಯನ ಕಿರಣಗಳ ಪ್ರಖರತೆಯೂ ಬದಲಾಗುತ್ತದೆಯೇ ಆಚಾರ್ಯರೇ?" ಎಂದು ತೇಜೋಮಯನು ಪ್ರಶ್ನಿಸಿದನು.

ಅದಕ್ಕೆ ಆಚಾರ್ಯರು "ಖಂಡಿತ ತೇಜೋಮಯ! ಉತ್ತರದಲ್ಲಿ ಸೂರ್ಯನು ವಾಲಿದಂತೆ ಕಂಡರೆ, ದಕ್ಷಿಣದಲ್ಲಿ ಅವನು ನೆತ್ತಿಯ ಮೇಲೆ ಬರುತ್ತಾನೆ. ದೇವವ್ರತ, ನೀನು ನಿನ್ನ ಶಂಕುವಿನ (ಶಾಡೋ ಸ್ಟಿಕ್) ಸಹಾಯದಿಂದ ಪ್ರತಿ ಮಧ್ಯಾಹ್ನ ನೆರಳಿನ ಉದ್ದವನ್ನು ಅಳೆಯಬೇಕು. ಅದು ನಮಗೆ ಭೂಮಿಯ ವಕ್ರತೆಯನ್ನು ತಿಳಿಸುತ್ತದೆ." ತೇಜೋಮಯನಿಗೆ ಉತ್ತರಿಸುತ್ತಾ, ದೇವವ್ರತನಿಗೆ ಶಂಕುವಿನೊಂದಿಗೆ ತಯಾರಾಗಲು ಆದೇಶಿಸಿದರು.

"ಗುರುಗಳೇ, ದಕ್ಷಿಣದ ಸಮುದ್ರ ತೀರದಲ್ಲಿ ಚಂದ್ರನ ಪ್ರಭಾವವನ್ನು ನೋಡಲು ನಾನು ಕಾತರನಾಗಿದ್ದೇನೆ." ಎಂದು ಅಮೃತಾಂಶು ಉತ್ಸುಕದಿಂದ ನುಡಿದನು.

"ಹೌದು ಅಮೃತಾಂಶು. ಸಮುದ್ರದ ಅಗಾಧ ಜಲರಾಶಿಯನ್ನು ಚಂದ್ರನು ಹೇಗೆ ನಿಯಂತ್ರಿಸುತ್ತಾನೆ ಎಂಬುದು ಜ್ಯೋತಿಷ್ಯದ ಅತಿ ದೊಡ್ಡ ರಹಸ್ಯ. ದೇವವ್ರತ, ನೀನು ದಕ್ಷಿಣದ ಆಕಾಶದಲ್ಲಿ ಮಾತ್ರ ಕಾಣುವ ಹೊಸ ನಕ್ಷತ್ರ ಪುಂಜಗಳನ್ನು ಗುರುತಿಸಬೇಕು. ಕಾಲಗುಪ್ತ, ನೀನು ಪ್ರತಿ ಹಂತದಲ್ಲೂ ಪ್ರಯಾಣದ ಶುಭ ಮುಹೂರ್ತಗಳನ್ನು ಲೆಕ್ಕ ಹಾಕಬೇಕು." ಎಂದು ಆಚಾರ್ಯರು ಪ್ರತಿ ಶಿಷ್ಯರಿಗೂ ಕಾರ್ಯ ಹೊಂದಿಸಿದರು.

"ಆಚಾರ್ಯರೇ, ದಾರಿಯಲ್ಲಿ ದಟ್ಟಾರಣ್ಯ ಮತ್ತು ವಿಂಧ್ಯ ಪರ್ವತಗಳಿವೆಯಲ್ಲವೇ? ನಮಗೆ ರಕ್ಷಣೆ ಹೇಗೆ?" ಎಂದು ಕಾಲಗುಪ್ತ ಕೊಂಚ ಕಳವಳದಿಂದ ಕೇಳಿದನು.

"ಹೆದರಬೇಡ ಮಗು. ನಾವು ಉಜ್ಜಯಿನಿಯ ವರ್ತಕರ ತಂಡದ (ಸಾರ್ಥವಾಹ) ಜೊತೆ ಸಾಗಲಿದ್ದೇವೆ. ಅವರ ಸೈನಿಕರು ನಮ್ಮನ್ನು ಕಾಯುತ್ತಾರೆ. ಈ ಎರಡು ದಿನಗಳಲ್ಲಿ ನಿಮ್ಮ ತಾಳೆಗರಿಗಳನ್ನು ಸಿದ್ಧಪಡಿಸಿಕೊಳ್ಳಿ. ನೆನಪಿರಲಿ, ಇದು ಕೇವಲ ಪ್ರಯಾಣವಲ್ಲ; ಇದು ಬ್ರಹ್ಮಾಂಡದ ಸತ್ಯವನ್ನು ಕಲಿಯುವ ದೈವಿಕ ಯಾನ." ಎಂದು ಆಚಾರ್ಯರು ಉತ್ತರಿಸಿ ಮುನ್ನಡೆದರು. 

ಐವರು ಶಿಷ್ಯರಲ್ಲೂ ಉತ್ಸುಕದ ಭಾವನೆ. ಇನ್ನೆರಡು ದಿನಗಳಲ್ಲಿ ಪ್ರಯಾಣ ಶುರುವಾಗುತ್ತದೆ. ಅದಕ್ಕೆ ಬೇಕಾದ ಎಲ್ಲಾ ತಯ್ಯಾರಿ ಮತ್ತು ಗುರುಗಳು ಹೇಳಿದ ತಯ್ಯಾರಿ ನಡೆಯಿತು.

ಎರಡು ದಿನಗಳ ನಂತರ ದಕ್ಷಿಣಪಥದಲ್ಲಿ ಪ್ರಯಾಣ ಸಾಗಿತ್ತು. ಉತ್ತರ ಭಾರತದ ಶೀತಲ ಗಾಳಿಯನ್ನು ದಾಟಿ, ವಿಂಧ್ಯ ಪರ್ವತಗಳ ಕಡಿದಾದ ಹಾದಿಯಲ್ಲಿ ವರ್ತಕರೊಂದಿಗೆ ಗುರು-ಶಿಷ್ಯರ ಪಯಣ ಸಾಗಿತ್ತು. ವಿಂಧ್ಯ ಪರ್ವತದ ತಪ್ಪಲಿನಲ್ಲಿ ನರ್ಮದಾ ನದಿಯ ತೀರ, ಮುಂಜಾನೆಯ ಸಮಯ. ಆಚಾರ್ಯರು ತಮ್ಮ ಐವರು ಶಿಷ್ಯರೊಂದಿಗೆ ಸ್ನಾನ ಮುಗಿಸಿ ನದಿಯ ದಂಡೆಯ ಮೇಲೆ ನಿಂತು, ಸೂರ್ಯನು ಕೆಂಪು ಬಣ್ಣದ ಉಂಡೆಯಂತೆ ಉದಯಿಸುತಿರುವುದನ್ನು ವೀಕ್ಷಿಸುತ್ತಿದ್ದರು. 

ಅಲ್ಲಿನ ಸಣ್ಣ ಕೊಳವೊಂದರಲ್ಲಿ ಮುಚ್ಚಿಕೊಂಡಿದ್ದ ಕಮಲದ ಮೊಗ್ಗುಗಳು ಮೆಲ್ಲನೆ ಅರಳತೊಡಗಿದವು. ಇದನ್ನು ಗಮನಿಸುತ್ತಿದ್ದ ತೇಜೋಮಯ, ಕುತೂಹಲದಿಂದ ಗುರುಗಳನ್ನು ಕೇಳಿದನು.

"ಗುರುದೇವ, ಈ ಕಮಲಕ್ಕೆ ಸೂರ್ಯ ಬರುವ ಸಮಯ ಹೇಗೆ ತಿಳಿಯುತ್ತದೆ? ಯಾವ ಮಂತ್ರವಿಲ್ಲದೆ, ಯಾವ ಸ್ಪರ್ಶವಿಲ್ಲದೆ ಸೂರ್ಯನ ಕಿರಣ ತಗುಲಿದ ಕೂಡಲೇ ಇವು ಹೇಗೆ ಅರಳುತ್ತವೆ?"

ಆಚಾರ್ಯರು ನಗುವಿನೊಂದಿಗೆ 

"ವತ್ಸ ತೇಜೋಮಯ, ಇದು ಬ್ರಹ್ಮಾಂಡದ 'ಆತ್ಮಶಕ್ತಿ'. ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯನನ್ನು 'ಆತ್ಮಕಾರಕ' ಎನ್ನುತ್ತೇವೆ. ಅಂದರೆ ಸಕಲ ಜೀವಿಗಳ ಆತ್ಮವು ಸೂರ್ಯನ ಪ್ರತಿಬಿಂಬ."

ಗುರುಗಳು ಅರ್ಘ್ಯವನ್ನು ಸಮರ್ಪಿಸುತ್ತಾ 

'ನಮಃ ಸವಿತ್ರೇ ಜಗದೇಕ ಚಕ್ಷುಷೇ

ಜಗತ್ಪ್ರಸೂತಿ ಸ್ಥಿತಿ ನಾಶಹೇತವೇ 

ತ್ರಯೀಮಯಾಯ ತ್ರಿಗುಣಾತ್ಮಧಾರಿಣೇ

ವಿರಿಂಚಿ ನಾರಾಯಣ ಶಂಕರಾತ್ಮನೇ' 

(ಜಗತ್ತಿನ ಏಕೈಕ ಕಣ್ಣಾದ, ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣನಾದ, ತ್ರಿಗುಣಗಳನ್ನು ಧರಿಸಿದ ಸೂರ್ಯದೇವನಿಗೆ ನಮಸ್ಕಾರ)

ಎಂದು ಹೇಳುತ್ತಾ ಸೂರ್ಯ ದೇವನಿಗೆ ನಮಸ್ಕರಿಸುತ್ತಾ ತಮ್ಮ ಮಾತನ್ನು ಮುಂದುವರೆಸಿದರು,

"ನೋಡು ತೇಜೋಮಯ, ಸೂರ್ಯನು ಉದಯಿಸಿದಾಗ ಕೇವಲ ಕಮಲವಲ್ಲ, ಮನುಷ್ಯನ ಒಳಗಿರುವ ಬುದ್ಧಿಯೂ ಜಾಗೃತವಾಗುತ್ತದೆ. ಸೂರ್ಯನ ಕಿರಣಗಳು ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯಲ್ಲಿ 'ಪ್ರಾಣ ಶಕ್ತಿ'ಯನ್ನು ತುಂಬುತ್ತವೆ. ಈ ಕಮಲವು ಸೂರ್ಯನನ್ನೇ ನಂಬಿ ಬದುಕುವ ಜೀವ. ಸೂರ್ಯನ ಶಾಖವು ಕಮಲದ ದಳಗಳಲ್ಲಿರುವ ಜೀವಕೋಶಗಳನ್ನು ಎಚ್ಚರಿಸುತ್ತದೆ.

ಜನ್ಮಕುಂಡಲಿಯಲ್ಲಿ ಸೂರ್ಯನು ಬಲಿಷ್ಠನಾಗಿದ್ದರೆ, ಆ ಮನುಷ್ಯನು ಈ ಕಮಲದಂತೆ ಸಮಾಜದಲ್ಲಿ ಅರಳಿ ನಿಲ್ಲುತ್ತಾನೆ. ಅವನ ಮುಖದಲ್ಲಿ ತೇಜಸ್ಸು, ಮಾತಿನಲ್ಲಿ ಅಧಿಕಾರ ಮತ್ತು ಹೃದಯದಲ್ಲಿ ಧೈರ್ಯವಿರುತ್ತದೆ. ಸೂರ್ಯನು ತಂದೆಯಂತೆ ನಮ್ಮನ್ನು ಕಾಪಾಡುವ ಶಕ್ತಿ." ಎಂದರು.

ಇದನ್ನು ಕೇಳಿದ ಶಿಷ್ಯರು ಸೂರ್ಯನ ಪ್ರಖರತೆಗೆ ತಲೆಬಾಗಿ ವಂದಿಸಿದರು. ಸೂರ್ಯನ ಶಾಖವು ಅವರ ದೇಹದ ಆಲಸ್ಯವನ್ನು ದೂರ ಮಾಡಿ, ಜ್ಞಾನದ ಹಸಿವನ್ನು ಹೆಚ್ಚಿಸಿತು.

ಅಮೃತಾಂಶುವಿಗೆ ಮತ್ತೊಂದು ಪ್ರಶ್ನೆ ಮೂಡಿತು,

"ಗುರುದೇವ, ಸೂರ್ಯನ ಶಕ್ತಿ ಕೇವಲ ಬೆಳಕಲ್ಲದೆ ನಮ್ಮ ದೇಹದ ಅಂಗಾಂಗಗಳನ್ನು ಹೇಗೆ ಸೇರುತ್ತದೆ?"

ಅದಕ್ಕೆ ಆಚಾರ್ಯರು,

"ವತ್ಸ, ಈ ಸೃಷ್ಟಿ ಪಂಚಭೂತಗಳಿಂದಾಗಿದೆ. ಸೂರ್ಯನ ತೇಜಸ್ಸು ಈ ಐದು ತತ್ವಗಳ ಮೂಲಕ ನಮ್ಮ 'ಪಂಚೇಂದ್ರಿಯ'ಗಳಿಗೆ ಪ್ರಾಣ ತುಂಬುತ್ತದೆ.

ಆಕಾಶ (ಕಿವಿ) - ಸೂರ್ಯನ ಕಿರಣಗಳು ಆಕಾಶದ ಮೂಲಕ ಸಂಚರಿಸುವಾಗ ಒಂದು ಅದೃಶ್ಯ ಕಂಪನವನ್ನು ಸೃಷ್ಟಿಸುತ್ತವೆ. ಇದು ನಮ್ಮ ಕರ್ಣೇಂದ್ರಿಯಗಳಿಗೆ ಬ್ರಹ್ಮಾಂಡದ ಲಯವನ್ನು ಅರಿಯುವ ಶಕ್ತಿ ನೀಡುತ್ತದೆ.

ವಾಯು (ಚರ್ಮ) - ಸೂರ್ಯನ ಶಾಖವು ಗಾಳಿಯನ್ನು ಚಲಿಸುವಂತೆ ಮಾಡುತ್ತದೆ. ಸೂರ್ಯನ ಕಿರಣಗಳು ಚರ್ಮದ ಮೇಲೆ ಬಿದ್ದಾಗ ನಮಗೆ ಸ್ಪರ್ಶ ಜ್ಞಾನ ಮತ್ತು ಶರೀರದ ಉಷ್ಣತೆಯ ಅರಿವಾಗುತ್ತದೆ. ಇದು ನಮ್ಮನ್ನು ಚಟುವಟಿಕೆಯಿಂದ ಇಡುತ್ತದೆ.

ಅಗ್ನಿ (ಕಣ್ಣು) - ಸೂರ್ಯನೇ ಅಗ್ನಿಯ ಮೂಲ. ನಮ್ಮ ಕಣ್ಣುಗಳಲ್ಲಿ ಸೂರ್ಯನು 'ದೃಷ್ಟಿ'ಯಾಗಿ ನೆಲೆಸಿದ್ದಾನೆ. ಅವನು ಹೊರಗೆ ಪ್ರಕಾಶಿಸಿದರೆ ಮಾತ್ರ ನಮ್ಮ ಒಳಗಣ್ಣು ಮತ್ತು ಹೊರಗಣ್ಣುಗಳಿಗೆ ರೂಪಗಳನ್ನು ಗುರುತಿಸುವ ಸಾಮರ್ಥ್ಯ ಸಿಗುತ್ತದೆ.

ಜಲ (ನಾಲಿಗೆ) - ಸೂರ್ಯನ ಶಾಖದಿಂದ ಮೋಡವಾಗಿ ಮಳೆ ಸುರಿಯುತ್ತದೆ. ಆ ನೀರು ಭೂಮಿಯ ಮೇಲಿನ ರಸವತ್ತಾದ ಹಣ್ಣು-ಹಂಪಲುಗಳಿಗೆ 'ರುಚಿ'ಯನ್ನು ನೀಡುತ್ತದೆ. ನಮ್ಮ ನಾಲಿಗೆಯ ಮೇಲಿರುವ ಲಾಲಾರಸ ಮತ್ತು ಜೀರ್ಣಶಕ್ತಿಯಲ್ಲಿ ಸೂರ್ಯನ ಅಂಶವಿದೆ.

ಪೃಥ್ವಿ (ಮೂಗು) - ಸೂರ್ಯನ ಕಿರಣಗಳು ಮಣ್ಣನ್ನು ಕಾಯಿಸಿದಾಗ ಭೂಮಿಯಿಂದ ಸುಗಂಧ ಹೊರಹೊಮ್ಮುತ್ತದೆ. ಸೂರ್ಯನ ಶಕ್ತಿಯಿಂದ ಬೆಳೆಯುವ ಗಿಡಮೂಲಿಕೆಗಳು ನಮ್ಮ ಪ್ರಾಣಶಕ್ತಿಯನ್ನು ಹೆಚ್ಚಿಸುತ್ತವೆ.

'ಪೃಥ್ವಿ ತೇಜೋ ಜಲಂ ವಾಯುರಾಕಾಶಂ ಪಂಚಭೂತಕಂ 

ಸೂರ್ಯಶಕ್ತ್ಯಾ ಪ್ರಭಾವೇನ ಸರ್ವೇಂದ್ರಿಯ ಪ್ರವರ್ತಕಮ್'

ಹೀಗೆ ಸೂರ್ಯನು ಪಂಚಭೂತಗಳ ಮುಖಾಂತರ ನಮ್ಮ ಐದು ಇಂದ್ರಿಯಗಳನ್ನು ನಿಯಂತ್ರಿಸುತ್ತಾನೆ. ಸೂರ್ಯನಿಲ್ಲದೆ ಮನುಷ್ಯನಿಗೆ ಅರಿವಿಲ್ಲ, ಅನುಭವವಿಲ್ಲ" ಎಂದು ಹೀಳಿದರು.

ದೇವವ್ರತ ಹಿಂದಿನ ದಿನ ಒಂದು ಹಳೆಯ ಮಂಟಪದಲ್ಲಿ ಮಲಗಿದ್ದಾಗ ಆಕಾಶದಲ್ಲಿ ಬೇಕಾದಷ್ಟು ನಕ್ಷತ್ರಗಳನ್ನು ಕಂಡಿದ್ದ. ಅದರಿಂದ ಅವನಿಗು ಒಂದು ಪ್ರಶ್ನೆ ಮೂಡಿತು.

"ಗುರುಗಳೆ, ಸೂರ್ಯನ ವಿಶಿಷ್ಟ ಶಕ್ತಿಯನ್ನು ಇತರ  ನಕ್ಷತ್ರಗಳಿಗಿಂತ ಹೇಗೆ ಭಿನ್ನ? ಆಕಾಶದಲ್ಲಿ ಬೇಕಾದಷ್ಟು ನಕ್ಷತ್ರಗಳಿದ್ದರೂ, ಹೂವುಗಳೂ ಸೂರ್ಯನ ಶಕ್ತಿಯನ್ನೇ ಪಡೆದು ಅರಳುತ್ತವೆ. ಅದು ಹೇಗೆ?" ಎಂದು ಕೇಳಿದ.

ಅದಕ್ಕೆ ಗುರುಗಳು,

"ವತ್ಸ ದೇವವ್ರತ, ಆಕಾಶದಲ್ಲಿ ಕೋಟಿ ನಕ್ಷತ್ರಗಳಿದ್ದರೂ, ಚಂದ್ರನು ತಂಪಾದ ಬೆಳಕನ್ನು ನೀಡಿದರೂ, ಕಮಲವು ಸೂರ್ಯನಿಗಾಗಿಯೇ ಏಕೆ ಕಾಯುತ್ತದೆ ಎಂಬುದು ಪ್ರಕೃತಿಯ ರಹಸ್ಯ. ಅದಕ್ಕೆ ಕಾರಣ ಸೂರ್ಯನಲ್ಲಿರುವ 'ಪ್ರಾಣಾಗ್ನಿ'. ನಕ್ಷತ್ರಗಳು ಬಹಳ ದೂರದಲ್ಲಿವೆ, ಅವುಗಳ ಬೆಳಕು ಕೇವಲ ದರ್ಶನಕ್ಕೆ ಮಾತ್ರ ಸೀಮಿತ. ಆದರೆ ಸೂರ್ಯನು ಭೂಮಿಗೆ ಸಮೀಪವಿರುವ ಏಕೈಕ 'ಜೀವಂತ ನಕ್ಷತ್ರ'. ಸೂರ್ಯನ ಕಿರಣಗಳಲ್ಲಿ ಕೇವಲ ಬೆಳಕಿಲ್ಲ, ಬದಲಾಗಿ 'ಉಷ್ಣತೆ' ಇದೆ. ಹೂವಿನ ದಳಗಳು ಅರಳಲು ಆ ದಳಗಳ ಒಳಗಿರುವ ಜೀವಕೋಶಗಳಲ್ಲಿ ರಸದ ಹರಿವು ಉಂಟಾಗಬೇಕು. ಈ ಹರಿವಿಗೆ ಸೂರ್ಯನ ಶಾಖವೇ ಪ್ರಚೋದನೆ ನೀಡುತ್ತದೆ. ಆದ್ದರಿಂದಲೇ ಶಿಷ್ಯರೇ, ಜ್ಯೋತಿಷ್ಯದಲ್ಲಿ ಸೂರ್ಯನನ್ನು 'ಪ್ರತ್ಯಕ್ಷ ದೈವ' ಎನ್ನುತ್ತೇವೆ. ಕಣ್ಣಿಗೆ ಕಾಣುವ, ಅನುಭವಕ್ಕೆ ಬರುವ ಶಕ್ತಿ ಸೂರ್ಯನದು" ಎಂದು ಎಲ್ಲರಿಗೆ ಅರಿವಾಗುವಂತೆ ನುಡಿದು ತಮ್ಮ ಪ್ರಯಾಣವನ್ನು ಮುಂದುವರೆಸಿದರು. 


Comments