ಅಳಸಿಂಗಾಚಾರ್ಯರ ಅಭ್ಯಂಜನ - ವ್ಯಕ್ತಿ ಚಿತ್ರ
ಲೇಖನ - ಸರಸ್ವತಿ, ಸಿಡ್ನಿ
ಉಂಡದ್ದೇ ಉಗಾದಿ, ಮಿಂದದ್ದೇ ದೀವಳಿಗೆ ಎಂಬ ನಾಣ್ಣುಡಿ ನಿಮಗೆಲ್ಲಾ ಗೊತ್ತಿದೆ ಅಲ್ಲವೆ? ಉಗಾದಿಯಲ್ಲಿ ಬೇವು-ಬೆಲ್ಲ, ಹೋಳಿಗೆ, ಮಾವಿನಕಾಯಿ ಚಿತ್ರಾನ್ನ ಇದರೇನೆ ಅದು ಉಗಾದಿ ಎನಿಸಿಕೊಳ್ಳುತ್ತದೆ. ಹಾಗೆಯೇ ದೀಪಾವಳಿಯಲ್ಲಿ ಅಭ್ಯಂಜನಕ್ಕೆ ಪ್ರಾಶಸ್ತ್ಯ. ನರಕ ಚತುರ್ದಶಿಯ ದಿನ ಬೆಳಗಿನ ಜಾವ ಎದ್ದು ತಲೆಗೆ ಎಣ್ಣೆ ಹಚ್ಚಿ, ಸೀಗೇ ಪುಡಿಯಲ್ಲಿ ಉಜ್ಜಿ ಸ್ನಾನ ಮಾಡಿ ನರಕಾಸುರನ ವಧೆಯ ಮೈಲಿಗೆ ಕಳೆದು ಕೊಳ್ಳುವುದು ಪದ್ಧತಿ. ಸಾವಿರಾರು ವರ್ಷಗಳಾದರೂ ಇನ್ನೂ ನರಕಾಸುರ ಸತ್ತ ಸೂತಕ ಹೋಗಿಲ್ಲ. ಆ ದಿನ ಎಣ್ಣೆ-ಸೀಗೇ ಪುಡಿಯನ್ನು ಒಂದು ಘಳಿಗೆ ದೇವರ ಮುಂದಿಟ್ಟು ತಂದು, ಮಕ್ಕಳನ್ನು ಸಾಲಾಗಿ ಕೂರಿಸಿ ಹಣೆಗೆ ಕುಂಕುಮವಿಟ್ಟು ಎಣ್ಣೆ ಹಚ್ಚುತ್ತಿದ್ದರು ನಮ್ಮ ಹಿರಿಯರು. ದೇವರಿಗೂ ಎಣ್ಣೆ-ಸೀಗೇಪುಡಿ!. ಇರಲಿ, ಆ ಕಾಲವೇ ಹಾಗೇ. 'ಹೀಗೊಂದು ಕಾಲವಿತ್ತು. ಏಸೊಂದು ಮದವಿತ್ತು' ಎಂಬ ಕವಿವಾಣಿಯಂತೆ ಅದು ಮುದ ತಂದ ಕಾಲವೇ!!..
ಈಗ ವಿಷಯಕ್ಕೆ ಬರೋಣ. ಇಂಥ ಅಭ್ಯಂಜನವನ್ನು ನಮ್ಮ ಅಳಸಿಂಗಾಚಾರ್ಯರು ಮಾಡಿಕೊಳ್ಳುತ್ತಿದ್ದ ವಿಷಯ ಹೇಳ್ತೀನಿ. ಬಹಳ ಸ್ವಾರಸ್ಯವಾಗಿದೆ. ಆತ ಬಹಳ ಶಿಸ್ತಿನ ಮನುಷ್ಯ. ಅಷ್ಟೇ ದರ್ಪದ ಮನುಷ್ಯ ಮತ್ತು ಹಠವಾದಿಯೂ ಹೌದು. ಹೆಂಡತಿ ಮಕ್ಕಳು, ಆತ ಮನೆಯಲ್ಲಿದ್ದರೆ ಜೋರಾಗಿ ಉಸಿರಾಡಲು ಹೆದರುತ್ತಿದ್ದರು. ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಕಾಂಪೌಂಡರ್ ಆಗಿದ್ದರು. ಕೆಲಸಕ್ಕೆ ಹೋಗುವಾಗ ಶಿಸ್ತಾಗಿ ಪ್ಯಾಂಟು, ಶರ್ಟ್, ಪ್ಯಾಂಟಿಗೆ ಬೆಲ್ಟು ಧರಿಸಿ ಒಪ್ಪವಾಗಿ ಕೂದಲು ಬಾಚಿ ಹಣೆಗೆ ಉದ್ದಕ್ಕೂ ಕೆಂಪು ನಾಮ, ಒಂದು ಚಿಕ್ಕ ಕೂದಲ ಗಂಟು ತಲೆಯ ಹಿಂಬದಿಯಲ್ಲಿ, ಶುಭ್ರವಾದ ಚಪ್ಪಲಿ ಹಾಕಿ, ಬಾಗಿಲ ಬಳಿ ನಿಂತು
'ಡೀ, ನಾ ಪೋಯಿಟ್ ವರೇ'
ಎಂದು ಕೂಗಿ ಹೇಳಿ ಹೊರಟರೆ, ಅಕ್ಕ-ಪಕ್ಕದ ಮನೆಯವರೆಲ್ಲಾ ಕಿಟಕಿ-ಬಾಗಿಲಿಂದ ಇಣುಕಿ ನೋಡಿ
'ಅಬ್ಬಾ, ಇನ್ನು ಸಂಜೆತನಕ ಅಲಮೇಲಮ್ಮನಿಗೆ ನಿರಾಳ' ಎಂದುಕೊಳ್ಳುತ್ತಿದ್ದರು.
ಅಳಸಿಂಗಾಚಾರ್ಯರ ಹೆಂಡತಿ ಅಲಮೇಲಮ್ಮ ಹಸುಗೂಸಿನಂಥ ಹೆಂಗಸು. ಸಹನೆ, ತಾಳ್ಮೆಗಳಲ್ಲಿ ಭೂಮಿಯನ್ನೂ ಮೀರಿಸುವಂಥ ಸ್ವಭಾವ. ಅಳಸಿಂಗಾಚಾರ್ಯರಿಗೆ ಸದಾ ಕೋಪ, ಹಠ. ಇವುಗಳಿಂದ ಆಸ್ಪತ್ರೆಯಲ್ಲಿ ವೈದ್ಯರೊಂದಿಗೂ ವಾದ, ಜಗಳ - ತಾನು ಮಾಡಿದ್ದೇ ಸರಿ ಎಂದು. ಹೀಗಾಗಿ ಬೇಗ ಬೇಗ ಊರಿಂದೂರಿಗೆ ವರ್ಗಾವಣೆ. ಅಲಮೇಲಮ್ಮ ಇಂಥ ಗಂಡನನ್ನು ಸಹಿಸಿಕೊಂಡು ಐದು ಮಕ್ಕಳನ್ನು ಸಾಕಿ ಬೆಳೆಸುತ್ತಿದ್ದರು.
ಇಂಥ ಅಳಸಿಂಗಾಚಾರ್ಯರು ತಿಂಗಳಿಗೆ ಎರಡು ಬಾರಿ ಅಭ್ಯಂಜನ ಸ್ನಾನ ಮಾಡಿಕೊಳ್ಳುತ್ತಿದ್ದುದೇ ಒಂದು ವಿಶೇಷ ಪ್ರಸಂಗ. ದೇವರ ತಲೆ ಮೇಲೆ ಹೂ ತಪ್ಪಿದರೂ ಅವರ ಈ ಕಾರ್ಯಕ್ರಮ ತಪ್ಪುತ್ತಿರಲಿಲ್ಲ. ಈಗಿನ ಹುಡುಗಿಯರೂ ಹೀಗೆ ಎಣ್ಣೆ ನೀರು ಹಾಕಿಕೊಳ್ಳುವುದಿಲ್ಲ. ಕೂದಲು ಇದ್ದರಲ್ಲವೇ!. ಈ ಕಾಲದ ಶ್ಯಾಂಪೂನಿಂದ ಎಣ್ಣೆಯಿಲ್ಲದೆ ತಲೆಕೂದಲನ್ನು ವಾರಕ್ಕೆ ಮೂರು-ನಾಲ್ಕು ಬಾರಿ ತೊಳೆಯುವುದಷ್ಟೆ ಅವಕ್ಕೆ ಗೊತ್ತು.
ಅಳಸಿಂಗಾಚಾರ್ಯರ್ ಅಭ್ಯಂಜನಕ್ಕೆ ಹಿಂದಿನ ದಿನದಿಂದಲೇ ತಯಾರಿ. ಎಲ್ಲಾ ಮಕ್ಕಳೂ ಮನೆಯಲ್ಲೇ ಇರಬೇಕು. ಒಬ್ಬೊಬ್ಬರು ಒಂದೊಂದು ಕೆಲಸವನ್ನು ವಹಿಸಿಕೊಳ್ಳಬೇಕು.
'ನರಸಿಂಹಾ ಕಡಕ್ಕೆ ಪೋಯಿ ಸೀಗೇಪುಡಿ ಕೊಂಡು ವಾ'
ಎಂದು ಮಗನನ್ನು ಎತ್ತರದ ದನಿಯಲ್ಲಿ ಕರೆದರೆ, ಮೇಲಿರುವ ಆ ಸಾಕ್ಷಾತ್ ನರಸಿಂಹನೇ ಹೆದರಿ ಓಡಿ ಬರಬೇಕು. ಹೆಂಡತಿಗೆ ದರ್ಪದಿಂದ
'ಡೀ, ನಾ ಕಾಲಿಲ್ಲೆ ಕುಳಿರ್ಕೆ (ನಾನು ನಾಳೆ ಅಭ್ಯಂಜನ ಮಾಡುವೆ)'
ಎಂದರೆ ಅಡಿಗೆ ಮನೆಯ ಬಾಗಿಲ್ ಹಿಂದಿನಿಂದ ಅಲಮೇಲಮ್ಮ ಹೂ ಗುಟ್ಟಬೇಕು. ಅದು ಅವರಿಗೇ ಕೇಳಿಸಿರುತ್ತಿತ್ತೋ ಇಲ್ಲವೋ. ಅವರು ಹೂ ಗುಟ್ಟುವುದು ಇವರಿಗೆ ಬೇಕೂ ಇಲ್ಲ. ಹೇಳಿದ ಮೇಲೆ ಕೆಲಸ ಆಗಲೇಬೇಕು. ಮಕ್ಕಳು ಬೀದಿಯಲ್ಲೆ ಆಡುತ್ತಿದ್ದರೆ, ಸೂರಿನಲ್ಲಿ ಸಿಕ್ಕಿಸಿರುವ ಬಿದಿರು ಕಡ್ಡಿಯನ್ನು ಹಿಡಿದು
'ಏಯ್ ಆಂಡಾಳ್, ಮೈಥಿಲೆ, ರಾಮ ಬನ್ನಿ' ಎಂದು ಕರೆದರೆ ಮಕ್ಕಳಿಗೆ ಛಳಿ ಬಂದಂತಾಗುತ್ತಿತ್ತು. ಆದರೆ ಅವರು ಒಂದು ದಿನವೂ ಹೊಡೆಯುತ್ತಿರಲಿಲ್ಲ. ಸೊಂಟದ ಬೆಲ್ಟ್ ಝಳಪಿಸಿ ಹೆದರಿಸುತ್ತಿದ್ದುದಷ್ಟೇ.
ಸರಿ ಮಕ್ಕಳು ಎರಡು ಹಳೆಯ ಬಿಳಿಯ ಪಂಚೆಯನ್ನು ಶುಭ್ರವಾಗಿ ಒಗೆದು ಇಡಬೇಕು. ನಾಲ್ಕು ಕಂಬಳಿ, ರಗ್ಗು ಇತ್ಯಾದಿಗಳನ್ನು ಹೊಂದಿಸಿ ಇಡಬೇಕು. ಒಂದು ಚಾಪೆ ಸಿದ್ಧವಾಗಿರಬೇಕು, ಎರಡು ಹಾಸಿಗೆ ಸುರುಳಿಗಳನ್ನು ಬೆಡ್ ಶೀಟ್ ಆಚೆ-ಈಚೆ ಬಾರದಂತೆ ಹಾಕಿ ಸುತ್ತಿ ರೆಡಿ ಇಡಬೇಕು. ಇದಿಷ್ಟು ಹಿಂದಿನ ದಿನದ ಕೆಲಸ.
ಮಾರನೆಯ ದಿನ ಬೆಳಗ್ಗೆ ಅಲಮೇಲಮ್ಮ ಒಂದು ದೊಡ್ಡ ಬಟ್ಟಲು ಹರಳೆಣ್ಣೆಯನ್ನು ಉಗುರು ಬೆಚ್ಚಗೆ ಕಾಯಿಸಿ, ಗಂಡನ ಹತ್ತಿರ ಭಯ ಭಕ್ತಿಯಿಂದ ಇಟ್ಟು ಹೋಗುತ್ತಿದ್ದರು. ಅಯ್ಯಂಗಾರು ಸೊಂಟ್ಟಕ್ಕೆ ಒಂದು ತುಂಡು ವಸ್ತ್ರ ಧರಿಸಿ, ಎಣ್ಣೆ ಹಚ್ಚಿಕೊಳ್ಳೂವುದಕ್ಕೆ ಶುರು. ತಟ್ಟಿ-ತಟ್ಟಿ ಅರ್ಧ ಬಟ್ಟಲು ಎಣ್ಣೆ ಯನ್ನು ತಲೆಗೆ ಕುಡಿಸಿ, ಮೈಗೆಲ್ಲಾ ನೀವಿ-ನೀವಿ ಉಪಚಾರ ಮಾಡಿಕೊಳ್ಳುತ್ತಿದ್ದರು. ನಂತರ ಕೊಟ್ಟಿಗೆಗೆ ಹೋಗಿ ಹಸುಗಳಿಗೆ ಕುಚ್ಚು ಮಟ್ಟೆಯಿಂದ ಮೈಯಲ್ಲಾ ತಿಕ್ಕಿ, ಉಣ್ಣೆ ಉದುರಿಸಿ, ಅದರ ಮೈ-ತಲೆ ಸವರಿ, ಬಾಲ ಕಣ್ಣಿಗೊತ್ತಿಕೊಂಡು ಬರುತ್ತಿದ್ದರು. ಇಷ್ಟು ಹೊತ್ತಿಗೆ ಒಂದು ಮೂವತ್ತು ನಿಮಿಷ ಆಗಿರುತ್ತಿತ್ತು. ಬರುವಾಗಲೇ
'ಏ ಮೈಥಿಲಿ, ನಿಂಗ್ ಅಮ್ಮಾಕೆ ಚ್ಚೊಲ್ಲು, ನಾವಂದೆ'
ಎಂದು ಮಗಳಿಗೆ ಧ್ವನಿ ಏರಿಸಿ ಹೇಳುತ್ತಿದ್ದರು. ಅಷ್ಟೊತ್ತಿಗಾಗಲೇ ಅಲಮೇಲಮ್ಮ, ನೀರೊಲೆಗೆ ಉರಿ ಹಾಕಿ, ಒಂದು ಹಂಡೆ ನೀರು ಕೊತ-ಕೊತ ಕಾಯಿಸಿ ಇಟ್ಟಿರುತ್ತಿದ್ದರು. ಇನ್ನೊಂದು ಕೊಳದಪ್ಪಲೆಯಲ್ಲಿ ತಣ್ಣೀರು, ಮತ್ತೊಂದು ಕೊಳದಪ್ಪಲೆಯಲ್ಲಿ ಎರಡನ್ನು ಸೇರಿಸಿ ಇಡುತ್ತಿದ್ದರು. ಸರಿ ಅಭ್ಯಂಜನ ಶುರುವಾಯಿತು. ಅಲಮೇಲಮ್ಮ ತಾಮ್ರದ ಬೋಸಿಯಲ್ಲಿ (ಈಗಿನವರ ಪ್ಲಾಸ್ಟಿಕ್ ಮಗ್) ತಲೆಗೆ ರಪ್ ರಪ್ ಎಂದು ಹಾಕಬೇಕು. ಸ್ವಲ್ಪ ಬಿಸಿ ಕಡಿಮೆಯಾದರೆ
'ನನ್ನನ್ನೇನು ಮರಗಟ್ಟಿಸಿ ಬಿಡುತ್ತೀಯಾ' ಎಂದು ಗದರಿಕೆ.
ಸ್ವಲ್ಪ ಬಿಸಿ ಜಾಸ್ತಿಯಾದರೆ,
'ನನ್ನ ಮೈ ಸುಡಬೇಕೆಂದು ಮಾಡಿದ್ದೀಯ' ಎಂದು ಇನ್ನೊಂದು ವರಸೆ.
ಅಂತೂ ಇಂತೂ ಹೆಂಡತಿ ಕೈಲಿ ಬೆನ್ನು ತಿಕ್ಕಿಸಿಕೊಂಡು ಅಭ್ಯಂಜನ ಮುಗಿಸುತ್ತಿದ್ದರು. ಅಲ್ಲಿಗೆ ಅಲಮೇಲಮ್ಮನಿಗೆ ಅಷ್ಟೋತ್ತರ, ಮಂಗಳಾರತಿ ಎಲ್ಲಾ ಮಾಡಿ ಆಗಿರುತ್ತಿತ್ತು.
ಈಗ ಇನ್ನೊಂದು ಅಧ್ಯಾಯ ಶುರು. ಅವರು ಬರುವ ವೇಳೆಗೆ ಮಕ್ಕಳು, ಗೋಡೆಗೆ ಹಾಸಿಗೆ ಸುರುಳಿಗಳನ್ನು ಒರಗಿಸಿಟ್ಟು ಅದರ ಮೇಲೆ ಒಂದು ಶಾಲು ಹೊದ್ದಿಸಬೇಕು. ಏಕೆಂದರೆ ಹಾಸಿಗೆ ಮೈಲಿಗೆ, ಶಾಲು ಒರೆಗಿಕೊಂಡರೆ ಪರವಾಗಿಲ್ಲ. ಹಾಸಿಗೆ ಸುರುಳಿಯ ಮುಂದೆ ಉದ್ದವಾಗಿ ಚಾಪೆ ಹಾಕಿ, ಅದರ ಮೇಲೆ ಒಂದು ಬಿಳಿ ಪಂಚೆ ಹಾಸಬೇಕು. ಮತ್ತೊಂದು ಪಂಚೆಯನ್ನು ಅವರು ಉಟ್ಟು, ಹಾಸಿಗೆ ಸುರುಳಿಗೆ ಒರೆಗಿಕೂತು ಕಾಲು ಚಾಚುತ್ತಿದ್ದರು. ಮಕ್ಕಳು ಅವರಿಗೆ ಕಂಬಳಿ, ರಗ್ಗುಗಳನ್ನು ಮುಸುಕು ಹಾಕುವಷ್ಟು ಪೂರ್ತಿ ಹೊದ್ದಿಸಬೇಕು. ನಂತರ ಇನ್ನೊಂದಾಟ ಶುರು. ಒಬ್ಬ ಮಗ ಎರಡೂ ಕಾಲುಗಳನ್ನು ಒತ್ತಬೇಕು. ಇನ್ನೊಬ್ಬ ಮಂಡಿ ಒತ್ತಬೇಕು. ಮಗಳು ಭುಜ ಒತ್ತಬೇಕು. ಇನ್ನೊಬ್ಬಳು ತಲೆ ಒತ್ತುತ್ತಾ ಇರಬೇಕು. ಹೀಗೆ ಒಂದಿಪ್ಪತ್ತು ನಿಮಿಷ ಕಳೆದ ಮೇಲೆ ಮುಸುಕನ್ನು ಸ್ವಲ್ಪ ಸರಿಸಿ
'ಕಾಫಿ ಕೊಂಡು ವಾ' ಎನ್ನುತ್ತಿದ್ದರು.
ಆ ವೇಳೆಗಾಗಲೆ ಅಲಮೇಲಮ್ಮ ನೀರೊಲೆಯಿಂದ ಕೆಂಡತಂದು ಇಜ್ಜಿಲು ಒಲೆಯ ಮೇಲೆ ಡಿಕಾಕ್ಷನ್ ತಯಾರಿಸಿ ಇಟ್ಟಿರುತ್ತಿದ್ದರು. ಇವರು ಆರ್ಡರ್ ಬಂದ ತಕ್ಷಣ ಬಿಸಿ ಹಾಲು ಬೆರೆಸಿ, ಬೆಲ್ಲ ಹಾಕಿ ಒಂದು ಪಾವಿನ್ ಲೋಟದಲ್ಲಿ ತಂದು ಕೊಡುತ್ತಿದ್ದರು. ಮುಸುಕಿನಿಂದಲೇ ಕಫಿಯನ್ನು ಸೊರ್-ಸೊರ್ ಎಂದು ಹೀರಿ ಲೋಟ ವಾಪಸ್ ಕೊಡುತ್ತಿದ್ದರು. ಮಧ್ಯೆ-ಮಧ್ಯೆ ಮಕ್ಕಳು ಮಸಾಜ್ ಮಾಡುವುದು, ಒತ್ತುವುದು ಸ್ವಲ್ಪ ಹೆಚ್ಚು ಕಡಿಮೆಯಾದರೆ, ಮುಸುಕಿನೊಳಗಿಂದಲೇ ಹೂಂಕಾರಕ್ಕೆ ಮಕ್ಕಳು ಬೆಚ್ಚಿ ಕೆಲಸ ಮುಂದುವರೆಸುತ್ತಿದ್ದರು.
ಹೀಗೆ ಇನ್ನೊಂದು ಹತ್ತು ನಿಮಿಷ ಕಳೆದ ಮೇಲೆ ಮುಸುಕು ತೆಗೆದು ಎದ್ದು ಕೈ-ಕಾಲು ಝಾಡಿಸಿ ನಿಂತು ಕೊಳ್ಳುವುದು. ಆನಂತರ ಉಟ್ಟ ಪಂಚೆಯನ್ನು ಬಿಚ್ಚಿ ಬೇರೆ ಪಂಚೆ ಉಟ್ಟು ಈಚೆ ಬಂದ ಮೇಲೆ ಮಕ್ಕಳು ಆಹಾಸಿದ ಪಂಚೆಯನ್ನು, ಉಟ್ಟ ಪಂಚೆಯನ್ನೂ ಹಿಂಡಿದರೆ ಏನಿಲ್ಲಾ ಅಂದರೂ ಅರ್ಧ ಬಕೆಟ್ ನೀರು ಬರುತ್ತಿತ್ತು. ನಂತರ ಮಕ್ಕಳು ಎಲ್ಲವನ್ನು ಸರಿಮಾಡಿ ಮುಂದಿನ ಹದಿನೈದು ದಿನಕ್ಕೆ ಜೋಪಾನವಾಗಿ ಇಟ್ಟಿರುತ್ತಿದ್ದರು.
ಅಲ್ಲಿಗೆ ಆ ದಿನದ ಅಳಸಿಂಗಾಚಾರ್ಯರ ಅಭ್ಯಂಜನ ಮುಗಿಯುತ್ತದೆ. ಇಂಥ ವಿವಿಧ ಅಭ್ಯಂಜನ ಕಾರ್ಯಕ್ರಮ ನೀವೂ ನೋಡಿ ಕೇಳಿದ್ದರೆ ನಮಗೂ ತಿಳಿಸುತ್ತೀರಲ್ಲವೇ?

Comments
Post a Comment