ಮಧ್ಯಪಾನ​​

ಮಧ್ಯಪಾನ​​

ಲೇಖನ  - ಸಿಡ್ನಿ ಸುಧೀರ್



'ಇವತ್ತು ಸಾಯಂಕಾಲ ಎಂ.ಜಿ. ರೋಡನಲ್ಲಿರೊ 'ಮಾರುತಿ ಬಾರ್ ಅಂಡ್ ರೆಸ್ಟೋರೆಂಟ್' ಗೆ ಹೋಗಣ, ರೆಡಿಯಾಗು​. ನಾಗರಾಜುದು ಟ್ರೀಟ್ ಗೊತ್ತಲ್ಲ​!!. ನಿನಗೆ ಫಸ್ಟ ಟೈಮ್' 

ಎಂದು ಸಚ್ಚಿ ಗಗನ್ ಗೆ ಕಾಲೇಜ್ ಮುಗಿಸಿಕೊಂಡು ತಮ್ಮ ಕೋಣೆಗೆ ಬರುವಾಗ ಮೆಲು ನಗುವಿನಿಂದ ಆದೇಶಿಸಿ ರಸ್ತೆಗೆ ಸೇರಿದಂತಿದ್ದ ತನ್ನ ಕೋಣೆಯ ಹತ್ತಿರ ಹೋಗಿ ಬೀಗ ತೆಗೆದು ಒಳ ನಡೆದ​.  ಗಗನ್ ಆಯ್ತು ಎಂಬಂತೆ ತಲೆಯಾಡಿಸಿ ಮಣ್ಣಿನ ರಸ್ತೆಯ ಆ ಬದಿಯಲ್ಲಿದ್ದ ತನ್ನ ಕೋಣೆಯ ಬೀಗ ತೆಗೆದು ಒಳಗೆ ಸೇರಿದ​.

ಸಚ್ಚಿ, ಗಗನ್, ನಾಗರಾಜು, ವಿಠಲ್, ಸಂಜಯ್ ಹಾಗು ರಾಜಶೇಖರ್ ಉನ್ನತ ವ್ಯಾಸಂಗಕ್ಕಾಗಿ ತುಮಕೂರಿಗೆ ಬಂದವರು. ತಮ್ಮ ತಮ್ಮ ಹಳ್ಳಿಗಳ್ಳಲ್ಲಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಇಂಜಿನಿಯರಿಂಗ್ ಮಾಡಲು ತುಮಕೂರಿಗೆ ಬಂದವರು. ಮೊದಲ ಮತ್ತು ಎರಡನೆಯ ಸೆಮಿಸ್ಟರ್ ನಲ್ಲಿ ಅಲ್ಲಿ-ಇಲ್ಲಿ ಬೇರೆಯವರ ಜೊತೆ ತುಮಕೂರಿನ ನಗರದಲ್ಲಿ ಇದ್ದು, ಈಗ ಊರಾಚೆ ಇರುವ ಇಂಜಿನಿಯರಿಂಗ್ ಕಾಲೇಜ್ ನ  ಆಸು-ಪಾಸಿನ ರೂಂಗಳಲ್ಲಿ ಬಾಡಿಗೆಗೆ ಇದ್ದವರು. ಕಾಲೇಜ್ ಹತ್ತಿರ ಇದ್ದರೆ ಓಡಾಟ ಕಮ್ಮಿ, ಲೈಬ್ರರಿ ಅಥವಾ ಪ್ರಾಕ್ಟಿಕಲ್ಸ್ ಮುಗಿಸಿ ಲೇಟಾಗಾದರು ರೂಂಗೆ ಹೋಗಬಹುದು. ಗಣಕಯಂತ್ರ ಅಥವಾ ಮೊಬೈಲ್ ದೂರವಾಣಿಗಳಿಲ್ಲದ ಕಾಲ, ಎಸ್.ಟಿ.ಡಿ/ಐ.ಎಸ್.ಡಿ ಬೂತ್ ಗಳು, ಕಾಲೇಜಿನಲ್ಲಿ ಮಾತ್ರ ಟಿ.ವಿ ಗಾತ್ರದ ಗಣಕ ಯಂತ್ರಗಳು. ಅದಕ್ಕಾಗಿ ಕಾಲೇಜ್ ಹತ್ತಿರ ಇರುವುದು ಸೂಕ್ತ. ಮನುಷ್ಯನಿಗೆ ಪ್ರಾಮುಖ್ಯತೆ ನಂತರ ಯಂತ್ರಗಳಿಗೆ ಎಂದ ಕಾಲ.  ಕಾಲೇಜ್ ಹತ್ತಿರ ಊಟಕ್ಕು ತೊಂದರೆ ಇಲ್ಲ​. ತಾತ ಮೆಸ್, ಆಂಟಿ ಮೆಸ್, ಕಿಟ್ಟಿ ಡಾಬಾ - ಹೀಗೆ ಹತ್ತಾರು ಬಗೆಯ ಆಹಾರಗಳು ಸಿಗುತ್ತಿದ್ದವು. ತುಮಕೂರು ಹತ್ತಿರವಿದ್ದವರು ವಾರಕ್ಕೊಮ್ಮೆ ತಮ್ಮ ಊರಿಗೆ ಹೋಗುತ್ತಿದ್ದರು. ದೂರವಿದ್ದವರು ತಿಂಗಳಿಗೊಮ್ಮೆ ಅಥವಾ ಹಬ್ಬಗಳ ರಜೆಯಲ್ಲಿ ಅಥವಾ ಪರೀಕ್ಷೆ ಮುಗಿದ ನಂತರ ಹೋಗುವುದು. ತುಮಕೂರು ನಗರದ ಎಲ್ಲೆಯಿಂದ ಕುಣಿಗಲ್ ರಸ್ತೆಯಲ್ಲಿ ಒಂದು ಕಿಲೋಮೀಟರ್ ದೂರದಲ್ಲಿತ್ತು ಈ ಇಂಜಿನಿಯರಿಂಗ್ ಕಾಲೇಜು. ನಗರದ ವ್ಯಾಪ್ತಿಯಲ್ಲಿ ಬೀದಿ ದೀಪಗಳಿದ್ದವು. ನಂತರದ ಜಾಗದಲ್ಲಿ ಬೀದಿ ದೀಪಗಳಿರಲಿಲ್ಲ​. ಅಲ್ಲೊಂದು-ಇಲ್ಲೊಂದು ಎಂಬಂತಿದ್ದವು. ಈ ಕಾಲೇಜಿನಿಂದ ಆಟೋದೋರಿಗೆ, ಅಲ್ಲಿ ಮನೆ ಮಾಡಿಕೊಂಡೋರಿಗೆ ಒಂದು ಒಳ್ಳೆಯ ವಾಣಿಜ್ಯ​.

ಸೆಮಿಸ್ಟರ್ ಫಲಿತಾಂಶ ಬಂದಾಗ ಎಲ್ಲರಿಗೂ ಕುತೂಹಲ​. ಮೊದಲ ಮತ್ತು ಎರಡನೆಯ ಸೆಮಿಸ್ಟರ್ ನ ಎಲ್ಲಾ ವಿಶಯಗಳಲ್ಲಿ ತೇರ್ಗಡೆಯಾಗಿದ್ದರೆ ಮಾತ್ರ ಐದನೆ ಸೆಮಿಸ್ಟರ್ ನಲ್ಲಿ ಕೂರಬಹುದು. ನಾಗರಾಜುದು ಎರಡನೆಯ ಸೆಮಿಸ್ಟರ್ ನಲ್ಲಿ ಇದ್ದ ಒಂದು ಸಬ್ಜಕ್ಟ ಪಾಸಾದ ಎಂದಾಗ ಇನ್ನಿಲ್ಲದ ಸಂತೋಷ​. ಎಲ್ಲರೂ ಅವನಿಗೆ ಪಾರ್ಟಿ ಕೇಳಿ ಬಾರ್ ಗೆ ಹೋಗುವುದಾಗಿ ನಿರ್ಧಾರವಾಗಿತ್ತು. ಕುಡಿಯುವುದರಲ್ಲಿ ಗಗನ್ ಗಿಳಿಯು ಕಚ್ಚದ ಸೀಬೆ. ಹಳ್ಳಿಯಲ್ಲಿದ್ದರೂ ಅಲ್ಲಿಯ ಜನರಿಗೆ ಚುನಾವಣಾ ಸಮಯದಲ್ಲಿ ಹಂಚುವ ರಾಜಾ ವಿಸ್ಕಿ, ಪಾಕಿಟು ಬಗೆ ಬಗೆಯ ಮಧ್ಯಪಾನಗಳ ಪರಿಚಯವಿರುತ್ತದೆ ಅಥವಾ ಕೇಳಿರುತ್ತಾರೆ. ಇನ್ನು ಮೀಸೆ ಬರುತ್ತಿರುವ ಹುಡುಗರಿಗೆ ಇದರ ಬಗ್ಗೆ ಕುತೂಹಲ. ಕುತೂಹಲದಿಂದ ಬಹಳ ಜ್ಞಾನ ಸಂಪಾದನೆ. ಆದರೆ ಗಗನ್ ಈ ಜ್ಞಾನ ಸಂಪಾದನೆಗೆ ಇಳಿದಿರಲ್ಲಿಲ್ಲ​. ಕುಡಿತ ಎಂಬುದು ನಿಶಿದ್ಧ​. ಅದೊಂದು ತಾಮಸಿಕ ವಸ್ತು. ಕುಡಿದವರೆಲ್ಲಾರೂ ತೂರಾಡಿಕೊಂಡು ನಡೆಯುತ್ತಾರೆ ಇಲ್ಲ ಬಚ್ಚಲ್ಲಲ್ಲಿ ಬಿದ್ದಿರುತ್ತಾರೆ ಅಥವಾ ಸಂಸಾರಾ ಹಾಳು ಮಾಡುತ್ತಾರೆ ಎಂಬ ಅತಿರೇಕದ ಜ್ಞಾನ. ಇದರಲ್ಲಿ ಮಿತಿಯ ಜೀವನವಿರುವಿದಿಲ್ಲ ಎಂದು ತಿಳಿದಿದ್ದವನು. ತನ್ನ ಪ್ರೌಢಶಾಲೆ ಸ್ನೇಹಿತರು ಧೂಮಪಾನ​, ಮಧ್ಯಪಾನ ಮಾಡುವುದು ನೋಡಿದ್ದ ಆದರೆ ತಾನು ಮಾಡಬೇಕೆಂಬುದು ಎಂದೂ ಮನಸ್ಸಿಗೆ ಬಂದಿರಲಿಲ್ಲ​. ಹೀಗಾಗಿ ಇವನು ಇನ್ನು ಕಿರಿಯ ವಿದ್ಯಾರ್ಥಿ!. ಹೀಗಿರುವಾಗ ತನ್ನ ಸ್ನೇಹಿತನ ಒಂದು ಮುಖ್ಯವಾದ ಸಂದರ್ಭದಲ್ಲಿ ಜತೆಗಿದ್ದು ಸಂತೋಷವನ್ನು ಆಚರಿಸಬೇಕು. ಕುಡಿಬೇಕಾ ಬೇಡವ ಎಂಬ ದ್ವಂದ್ವ​. ಸ್ನೇಹಿತರೆಲ್ಲಾ ಸ್ವಲ್ಪ 'ಟೇಸ್ಟ ಮಾಡು' ಎಂದಿದ್ದರು. ಸರಿ ನೋಡೋಣ ಎಂದು ಕೊಂಡಿದ್ದ​.

ಕುಡಿತವನ್ನ ಸಮರ್ಥಿಸಿಕೊಳ್ಳುವುದಕ್ಕೆ, ವಿಠಲ್ 'ದೇವತೆಗಳೇ ಸೋಮಪಾನ ಸುರಪಾನ ಮಾಡುತ್ತಿದ್ದರು, ಇನ್ನು ಸ್ವಲ್ಪ ನೀನು ನೋಡು' ಅಂತ. ಇನ್ನು ರಾಜಶೇಖರ್ 'ದ್ರಾಕ್ಷಾರಸ ಅಂತ ನಮ್ಮ ತಾತಾ ಮುತ್ತಾತ ಕುಡಿಯೋರು. ಅದು ಆರೋಗ್ಯಕ್ಕೆ. ಅದನ್ನ ದ್ರಾಕ್ಷಿಯಿಂದ ಮಾಡ್ತಿದ್ರಂತೆ' ಅಂತ ಸಮರ್ಥನೆ. ಸಂಜಯ್ ಅದರೊಟ್ಟಿಗೆ ಸೇರಿಸಿ 'ಔಷಧಿಗಳಲ್ಲೂ ಆಲ್ಕೋಹಾಲ್ ಇರತ್ತೆ. ಅದನ್ನ ಎಲ್ಲರೂ ಕುಡಿದೇ ಕುಡಿಯುತ್ತಾರೆ. ಹೋಮಿಯೋಪಥಿ ಔಷಧಿ ತಯ್ಯಾರು ಮಾಡೋದೆ ಆಬ್ಸಲ್ಯೂಟ್ ಆಲ್ಕೋಹಾಲ್ ನಿಂದ​. ಸ್ವಲ್ಪ ಟ್ರೈ ಮಾಡು ಇವತ್ತು' ಅಂತ​

ಎಲ್ಲರೂ ಸೇರಿ ಸಂಜೆ ಆರೂವರೆ-ಏಳಕ್ಕೆ ರೂಂ ಬಿಟ್ಟು ತುಮಕೂರು ನಗರದಲ್ಲಿರುವ ಎಂ.ಜಿ. ರಸ್ತೆಯ ಮಾರುತಿ ಬಾರ್ ಅಂಡ್ ರೆಸ್ಟೋರೆಂಟ್ ಗೆ ಹೋಗಿ ಕುಡಿದು ಊಟ ಮಾಡಿ ಬರುವುದಾಗಿ ನಿರ್ಧರಿಸಿದ್ದರು. ಗಗನ್ ಗೆ ಒಂದು ಬಗೆಯ ಭಯ ಮತ್ತು ರೋಮಾಂಚನ​. ಆಟೋ ನಿಲ್ದಾಣದ ತನಕ ನಡೆದುಕೊಂಡು ಹೋಗುವಾಗ​, ಎಲ್ಲರೂ ಅವರವರ ಅನುಭವದ ಮಾತು. ಬೇರೆ ಬೇರೆ ಬ್ರಾಂಡ್ ಗಳ ಸಮೀಕ್ಷೆ. ಸಾಧಾರಣವಾಗಿ ಹುಡುಗರು ಒಟ್ಟುಗೂಡಿದರೆ ಮೊದಲನೆಯದಾಗಿ ಮಾತಾಡುವುದು ಕುಡಿತದ ವಿಷಯ​. ಹೀಗೆ ಮಾತಾಡುತ್ತಾ ಎರಡು ಆಟೋಗಳಲ್ಲಿ ಹೊರಟರು. ಬಾರ್ ಅಂಡ್ ರೆಸ್ಟೋರೆಂಟ್ ಬಾಗಿಲಲ್ಲಿ ನಿಂತು ಮಾಣಿ ಕೂರಿಸುವುದಕ್ಕೆ ಕಾಯುತ್ತಿರಬೇಕಾದರೆ, ಗಗನ್ ಕಣ್ಣಿಗೆ ಬಿದ್ದುದ್ದು ತನ್ನ ತಂದೆಯ ಸ್ನೇಹಿತರು 'ಸಂಜೀವ್ ಕುಮಾರ್'.

ಅವರನ್ನ ನೋಡಿ ಗಗನ್ ಮೆಲ್ಲಗೆ ಬಚ್ಚಿಟ್ಟುಕೊಳ್ಳುವಂತೆ ಸಚ್ಚಿಯ ಹಿಂದೆ ಬಂದು, ಸಚ್ಚಿಯ ಕಿವಿಯಲ್ಲಿ ಗುನುಗಿದ 'ನಮ್ಮ ತಂದೆ ಫ್ರೆಂಡ್ ಬಂದಿದ್ದಾರೆ ಕಣೊ'.

ಸಚ್ಚಿ 'ಎಲ್ಲಿ' ಅಂತ ಆಶ್ಚರ್ಯವಾಗಿ ಕೇಳಿದ​.

'ಅಲ್ಲಿ ವೈಟ್ ಶರ್ಟ್ ಪ್ಯಾಂಟ್ ಹಾಕಿದ್ದಾರಲ್ಲ​!' ಅಂತ ತೋರಿಸಿದ​.

' ಏನಾಗಲ್ಲ ಬಾ!!.. ನನ್ನ ಹಿಂದೆ ಇರು' ಅಂತ ಸಂತೈಸಿದ​.

ಗಗನ್ ಊರಿಂದ ತುಮಕೂರಿಗೆ ಒಂದು ಘಂಟೆಯ ಅಂತರ​. ತುಮಕೂರಿಗೆ ಬಂದು ಕೆಲಸಗಳನ್ನ ಮುಗಿಸಿ ಕಡೆಯ ಬಸ್ ಎಂಟು ಘಂಟೆಗೆ ಹತ್ತಿ ಹೊರಡುತ್ತಿದ್ದರು. ಜೊತೆಗೆ ಎಂ.ಜೆ. ರಸ್ತೆ ಮತ್ತು ಬಸ್ ನಿಲ್ದಾಣ ಹತ್ತಿರವೇ ಇದ್ದುದ್ದರಿಂದ ಅಲ್ಲಿನ ಹೋಟೆಲ್ ಅಥವಾ ಬಾರ್ ಅಥವಾ ಅಂಗಡಿಗಳಲ್ಲಿ ಗಗನ್ ಊರಿನವರು ಕಾಣುವುದು ಸಹಜವೇ.

ಎಲ್ಲರನ್ನು ಮಾಣಿ ಒಂದು ಕಡೆ ಕೂಡಿಸಿ ಹೊರಟ​.

'ಯಾಕೆ ಗಗನ್ ಸುಮ್ಮನಿದ್ದೀಯ​. ಏನು ಆಗಲ್ಲ. ಇವತ್ತು ಕುಡಿ' ಎಂದು ಜೋರಾಗೆ ಹೇಳಿದ ವಿಠಲ್.

'ಗಗನ್ ತಂದೆ ಫ್ರೆಂಡ್ ಇದ್ದಾರೆ. ಮೆಲ್ಲಗೆ ಹೇಳೋ' ಅಂತ ಸಚ್ಚಿ ಪಿಸುಗುಟ್ಟಿದ​.

'ಹೌದಾ!!.. ಎಲ್ಲಿ ಫಸ್ಟ್ ಟೈಮ್ ಬಂದಾಗಲೇ ಹಿಂಗಾಗಬಾರದಿತ್ತು' ಅಂತ ವಿಠಲ್ ನುಡಿತಿದ್ದಂತೆ, ಸಚ್ಚಿ ಅವರತ್ತ ಕೈ ತೋರಿಸಿದ​. ಎಲ್ಲರೂ ಅತ್ತ ನೋಡಿದರು.

'ಏನಾಗಲ್ಲ ಬಿಡೊ.. ಅವರೇನಾದರು ನಿಮ್ಮ ಅಪ್ಪನಿಗೆ ಹೇಳಿದರೆ, ಅವರು ಕುಡಿತಾರೆ ಅಂತ ಗೊತ್ತಾಗತ್ತೆ. ಅದಕ್ಕೆ ಬಾರ್ ನಲ್ಲಿ ನಡೆಯೋದು ಬಾರ್ ನಲ್ಲೆ ಇರತ್ತೆ. ಯೋಚನೆ ಮಾಡಬೇಡ' ಅಂತ ಧೈರ್ಯವಾಗಿ ನಾಗರಾಜು ಹೇಳಿದ​. ಅದಕ್ಕೆ ಎಲ್ಲರೂ ನಕ್ಕರು.

ಈ ಕುಸು-ಪಿಸು ನಡೆಯುತ್ತಿದ್ದಂತೆ ಸಂಜೀವ್ ಕುಮಾರ್ ಅತ್ತ ನಡೆದರು. ಕಿರುಗಣ್ಣಿನಿಂದ ಯಾರನ್ನೋ ನೋಡುವಂತೆ ಇವರೆಲ್ಲರತ್ತ ನೋಡಿ,  ಆಶ್ಚರ್ಯವಾಗಿ ನೇರವಾಗಿ ಗಗನ್ ನೋಡಿ ಮೆಲು ನಕ್ಕರು. ಅದಕ್ಕ ಗಗನ್ ಸಹ ತಪ್ಪು ಮಾಡಿದ ಬೆಕ್ಕಿನಂತೆ ಅವರತ್ತಾ ಓರೆಗಣ್ಣಿನಿಂದ ನೋಡುತ್ತಲೇ ಹುಸಿ ನಗು ನಕ್ಕ​. ಬೇರೇನೂ ಇಲ್ಲದೆ ಅವರು ಹೊರಟು ಹೋದರು. ಅಷ್ಟು ಹೊತ್ತಿಗೆ ಮಾಣಿ ಎಲ್ಲರಿಗೂ ಒಂದೊಂದು ಗ್ಲಾಸ್ ಮತ್ತು ನಾಕ್ ಔಟ್ ಬಿಯರ್ ತಂದಿಟ್ಟ​. ಎಲ್ಲರ ಗಮನ ಇತ್ತ ಹರಿಯಿತು. ಬಾಟಲ್ ನನ್ನು ನಾಗರಾಜುವಿಗೆ ತೋರಿಸಿ, ಮುಚ್ಚಳ ತೆಗೆದು ಸುರಿಯ ತೊಡಗಿದ​.

ಗಗನ್ ಹತ್ತಿರ ಬಂದಾಗ ' ಈ ಗ್ಲಾಸ್ ಗೆ ಒಂದು ಚೂರು ಹಾಕಿ' ಅಂತ ಸಚ್ಚಿ ಹೇಳಿದ​.

ಎಲ್ಲರೂ ನಾಗರಾಜುವನ್ನು ಹೊಗಳಿ, ಚೀಯರ್ಸ್ ಅಂತ ಹೇಳಿ ಮೊದಲ ಸಿಪ್ ಕುಡಿದರು. ನಂತರ ಗಗನ್ ಕುಡಿಯುವುದನ್ನೇ ನೋಡಿ 'ಹೇಗಿದೆ' ಎಂದರು.

'ಕಹಿಯಾಗಿದೆ.. ಒಗರಾಗಿದೆ. ಇದನ್ನೇನು ಅಷ್ಟು ಆಸೆ ಪಟ್ಟು ಕುಡೀತೀರಾ. ನಾಲಗೆ ಮೇಲೆಲ್ಲಾ ಬೇವಿನ ರಸ ಬಿದ್ದಂಗಿದೆ. ನನಗೆ ಸಾಕಪ್ಪ ಅಂತ ಗ್ಲಾಸನ್ನು ಟೇಬಲ್ ಮೇಲಿಟ್ಟ​..' ಎಂದ ಗಗನ್.

ಎಲ್ಲರೂ ಬಿದ್ದು ಬಿದ್ದು ನಕ್ಕರು. ಗಗನ್ ಕಡ್ಲೆಕಾಯಿ ಮಸಾಲ​, ಚಿಪ್ಸ್, ಬೊಂಡ ಎಲ್ಲಾ ತಿಂದು ಟೊರೀನೊ ಕುಡಿದ​. ಯಾರೂ ಬಲವಂತ ಮಾಡಲಿಲ್ಲ​. ಎಲ್ಲರೂ ಅವರವರ ಮೊದಲ ಕುಡಿತದ ಅನುಭವ ಹೇಳಿಕೊಳ್ಳುತ ಕುಡಿದರು. ನಂತರ ರೋಟಿ ಸಬ್ಜಿ ತಿಂದರು. ಅಲ್ಲಿಂದ ಹೊರಡುವ ಹೊತ್ತಿಗೆ ಹತ್ತಾಗಿತ್ತು.

ಯಾವ ಆಟೋ ಬರಲಿಲ್ಲ​. ಸರಿ ನಡೆದುಕೊಂಡು ಹೋಗೋಣವೆಂದು ನಿರ್ಧರಿಸಿದರು. ಕುಣಿಗಲ್ ರಸ್ತೆಯಲ್ಲಿ ವಾಹನ ಸಂಚಾರ ಅಷ್ಟಾಗಿ ಇಲ್ಲದ ಕಾರಣ ಮತ್ತು ದೂರಕ್ಕೊಂದು ಬೀದಿ ದೀಪಗಳಿದುದ್ದರಿಂದ ರಸ್ತೆಯ ಮಧ್ಯದಲ್ಲಿ ಜೋರಾಗಿ ಮಾತಾಡಿಕೊಂದು ಹೋಗುತ್ತಿದ್ದರು.

ಸಚ್ಚಿಗೆ ಸ್ವಲ್ಪ ಮತ್ತೇರಿದಂತೆ ಇತ್ತು. ಸ್ವಲ್ಪ ತೂರಾಡುತ್ತಿದ್ದ​.

'ಆಟೋ ಬರ್ತಿದೆ ಈ ಕಡೆ ಬಾ..' ಅಂತ ಸಚ್ಚಿಯ ಎಡಗೈ ಹಿಡಿದು ನಾಗರಾಜು ಎಳೆದ​.

ಅದಕ್ಕೆ ಸಚ್ಚಿ

'ಐಯಾಮ್ ಆಲ್ ರೈಟ್... ಐಯಾಮ್ ಸ್ಟೇಬಲ್ (I am alright… i am stable)' ಅಂತ ಇಂಗ್ಲೀಷ್ ನಲ್ಲಿ ಹೇಳಿದ​.

ಇದ್ದಕ್ಕಿದ್ದಂತೆ ನಾಗರಾಜು ಜೋರಾಗಿ ನಗುತ್ತಾ ' ಹಾ ಈ ಕಡೆ ಬಾ' ಎಂದು.

 ಸಚ್ಚಿಯಿಂದ ಕನ್ನಡವೇ ಇಲ್ಲ​. ಇಂಗ್ಲೀಷ್ ಮಾತಾಡಿದವನೇ ಅಲ್ಲ​.  ಕುಡಿದಾಗ ಇಂಗ್ಲೀಷ್, ಇದ್ದಕ್ಕಿದ್ದಂತೆ ನಗು.  ವಿಠಲ್ ರೋಡ್ ಮಧ್ಯದಲ್ಲಿ ಕೂತು ಬುಜ ಆಡಿಸುತ್ತಾ 'ಕೋಲುಮಂಡೆ ಜಂಗಮ​' ಹಾಡು. ಆಗ ತಾನೆ ಶಿವರಾಜ್ ಕುಮಾರರ 'ಜನುಮದ ಜೋಡಿ' ಚಿತ್ರದ ಹಾಡು. ರಾಜ್ ಶೇಖರ್ 'ಅಲ್ಲಿ ಮೊಲ ಓಡ್ತಿದೆ ನೋಡ್ರೋ' ಅಂತ​. ಗಗನ್ ಗೆ ಎಲ್ಲಾ ವಿಚಿತ್ರವಾಗಿತ್ತು. ಆದ್ರೇ ಮೋಜಾಗಿತ್ತು. ರೂಂ ಹತ್ರ ಬರುತ್ತಿದ್ದಂತೆ ಸಂಜಯದು ವಾಂತಿ.

ಬೆಳಗ್ಗೆದ್ದು ತಲೆ ನೋವಲ್ಲೇ, ಎಲ್ಲಾ ನೆನೆಸಿಕೊಂಡು ಹೊಟ್ಟೆ ಹುಣ್ಣಾಗೋ ಅಷ್ಟು ನಗುತ್ತಿದ್ದರು...

ಗಗನ್ ಗೆ ಅನ್ನಿಸಿದ್ದು. ಕುಡಿಯಕ್ಕಿಂತ ಕುಡಿಯೋರ ಜೊತೆ ಇದ್ದರೆ 'ಒಳ್ಳೇ ಎಂಟರ್ ಟೇನಮೆಂಟ್' !!..... ಮೊದಲ ಕೆಲಸ​, ಮೊದಲ ಕುಡಿತ​, ಮೊದಲ ವಿದೇಶ ಪ್ರವಾಸ ಮರೆಯಕ್ಕಾಗಲ್ಲ!!...

Comments