ನೆನೆದವರ ಮನದಲ್ಲಿ...
ಹಾಸ್ಯ ಲೇಖನ - ಅಣಕು ರಾಮನಾಥ್
ಬಾಲ್ಕನಿಯಲ್ಲಿ ಇರಿಸಿದ್ದ ಕುಂಡವೊಂದರಲ್ಲಿ ತುಂಬಿದ್ದ ಹಿಂದಿನ ರಾತ್ರಿಯ ಮಳೆಯ ನೀರನ್ನು ಸಾಮಾನ್ಯವಾಗಿ ನಿರ್ಜನವಾಗಿರುತ್ತಿದ್ದ ಪಕ್ಕದ ಗಲ್ಲಿಯತ್ತ ಸುರಿದೆ. ಆ ಸಮಯದಲ್ಲಿ ಆ ಗಲ್ಲಿಯು ನಿರ್ಜನವಾಗಿರಲಿಲ್ಲ ಎನ್ನುವುದು ಅಲ್ಲಿಂದ ಹೊರಟ ಚೀತ್ಕಾರ ಮತ್ತು ಜಗತ್ತಿನ ಅತ್ಯಂತ ಕೊಳಕು ಬೈಗುಳಗಳ ಸರಮಾಲೆಯಿಂದ ವೇದ್ಯವಾಯಿತು. ಬಾಲ್ಕನಿಯ ಅಂಚಿಗೆ ನನ್ನ ದೇಹದ ಮೇಲ್ಭಾಗವನ್ನು ಛಜ್ಜಾದಂತಾಗಿಸಿ ಗಲ್ಲಿಯತ್ತ ಇಣುಕಿದೆ. ಕುಂಡದಲ್ಲಿದ್ದ ಮಣ್ಣಿನ ಮಗನ ಅಮ್ಮನನ್ನು ಕೂಡಿಕೊಂಡಿದ್ದಂತಹ ಭೀಷ್ಮನ ತಾಯಿಯು ಗಲ್ಲಿಯಲ್ಲಿ ಧಾವಿಸುತ್ತಿದ್ದ ಮಹಿಳೆಯ ಹಿಮಾಲಯದ ಹಿಮಾಚ್ಛಾದಿತ ಬಿಳುಪಿನ ವಸ್ತ್ರವನ್ನು ತುಂಬಿದ ಪೀಕದಾನಿಯ ಬಣ್ಣಕ್ಕೆ ತಿರುಗಿಸಿದ್ದಳು. ತತ್ಪರಿಣಾಮವೇ ಮಹಿಳೆಯ ಜಿಹ್ವೆಗೆ ಸಾನಿಯಾ ಮಿರ್ಜಾಳ ರಾಕೆಟ್‍ನಿಂದ ಹೊರಟ ಚೆಂಡಿನ ವೇಗವು ದೊರಕಿತ್ತು ಮತ್ತು ಆಕೆಯ ಚಿತ್ತದಲ್ಲಿ ಅಡಗಿದ್ದ ವಿಶೇಷ ಬೈಗುಳಗಳ ಸುರಿಮಳೆಯ ಮೂಲಕ ನನ್ನ ಪೂರ್ವಿಕರೆಲ್ಲರೂ ಪಾವನರಾಗುತ್ತಿದ್ದರು.
ನೆನೆಯುವುದು ಉರುಫ್ ಒದ್ದೆಯಾಗುವುದು ಹುಟ್ಟಿಗಿಂತ ಮುಂಚಿನಿಂದಲೂ ಆರಂಭವಾಗುವ ಕ್ರಿಯೆ. ಗರ್ಭದಲ್ಲಿ ಇರುವಷ್ಟು ಸಮಯವೂ ದ್ರವದಲ್ಲಿಯೇ ಈಜಾಡುವ ಶಿಶುವು ‘ಈಸಬೇಕು, ಈಸಿ ಜನಿಸಬೇಕು’ ಎಂಬ ಕ್ರಮವನ್ನು easyಯಾಗಿ ಪಾಲಿಸುತ್ತದೆ. ನೆನೆದೇ ಹುಟ್ಟಿ, ನೆನೆಯುತ್ತಲೇ ಬೆಳೆಯುವ ಮನುಜ ಕಂತೆ ಒಗೆದು ಕಟ್ಟಿಗೆಯನ್ನು ಏರುವಾಗಲೂ ಒದ್ದೆಯಾಗಿಯೇ ತೆರಳುವುದು. ನೆನೆದಾಗ ಗರ್ಭಸ್ಥ ಮಗುವಿನ ಮನದಲ್ಲಿ, ಚಟ್ಟವೇರುವ ಮುನ್ನ ಶವದ ಮನದಲ್ಲಿ ಏನಾಗುವುದೆಂದು ತಿಳಿಯದಿದ್ದರೂ ಬದುಕಿನ ವಿವಿಧ ಮಜಲುಗಳಲ್ಲಿ ನೆನೆದವರ ಮನದಲ್ಲಿ ಏನಾಗಬಹುದು? ಯಾವ ಭಾವಗಳು ಏಳಬಹುದು? ಇದನ್ನು ತಿಳಿಯಲೆಂದೇ ಆ ಮಳೆಗಾಲದಂದು ಕ್ಯಾಮರಾವನ್ನು ಹೆಗಲಿಗೇರಿಸಿ ಬೀದಿಗೆ ಬಿದ್ದೆ.
ಅನತಿ ದೂರದಲ್ಲಿಯೇ ಒಂದು ಚಲನಚಿತ್ರದ ಮಳೆ ಸೀನಿನ ಶೂಟಿಂಗ್ ನಡೆಯುತ್ತಿತ್ತು. ಭರ್ರನೆ ಷವರ್‍ನಿಂದ ತುಂತುರುತ್ತಿದ್ದ ನೀರಿನ ಕೆಳಗೆ ನಿಂತಿದ್ದ ಹೀರೋಯಿನ್ನನ್ನು “ನೆನೆದವರ ಮನದಲ್ಲಿ ಕಾರ್ಯಕ್ರಮದ ವತಿಯಿಂದ ನಿಮಗೆ ಈ ಪ್ರಶ್ನೆ. ನೆನೆಯುತ್ತಿರುವ ನಿಮ್ಮ ಮನದಲ್ಲಿ ಯಾವ ಭಾವನೆಗಳಿವೆ?” ಎಂದು ಪ್ರಶ್ನಿಸಿದೆ.
“ಸೀನ್ ಮುಗಿಯುವವರೆಗೆ ಸೀನುವುದನ್ನು ತಡೆದುಕೊಳ್ಳುವುದು ಹೇಗೆ ಎನ್ನುವುದೇ ನನ್ನ ಮನದಲ್ಲಿ ಮೂಡಿರುವ ಚಿಂತೆ. ಚಿತ್ರದ ಡೈರೆಕ್ಟರ್ ಮೊದಲು ದೋಸೆ ಹೋಟೆಲ್ ಇಟ್ಟಿದ್ದನಂತೆ. ಬೇಳೆಯನ್ನು ನೆನೆಹಾಕಿ ತನ್ನ ಬೇಳೆ ಬೇಯಿಸಿಕೊಂಡವನಿಗೆ ಎಲ್ಲವನ್ನೂ ನೆನೆಸುವುದರಲ್ಲಿಯೇ ಖುಷಿ” ಎಂದಳು ಲಲನೆ. ಧ್ವನಿಯಲ್ಲಿ ಆಗಲೇ ಥಂಡಿಯ ಗೊರಗೊರ ಸೇರಿತ್ತು.
ಶೀತಲನಾಸಿಕೆಯಿಂದ ಬೀಳ್ಕೊಂಡು ಮುನ್ನಡೆದೆ. ಅಲ್ಲೊಂದು ಪಾಟ್‍ಹೋಲ್; ಇತ್ತಣಿಂದೊಂದು ವಾಹನ ಧಾವಿಸಿ ಪಾಟ್‍ಹೋಲಲ್ಲಿ ‘ಧಢ್ಢಿಸಿ’ ಮುಂದೋಡಿತು. ಹಳ್ಳದಲ್ಲಿ ತುಂಬಿದ್ದ ವರ್ಷಶೇಷವು ಪಕ್ಕದಲ್ಲಿ ನಿಂತಿದ್ದವನು ವಾಷಿಂಗ್ ಪೌಡರ್ ನಿರ್ಮಾ ಬಳಸಿ ಒಗೆದು ತೊಟ್ಟಿದ್ದ ಹಾಲಿನಂಥ ಬಿಳುಪು ಅಂಗಿಯನ್ನು ಕಮಂಗಿಯಾಗಿಸಿತು.
“ನಮಸ್ಕಾರ. ‘ನೆನೆದವರ ಮನದಲ್ಲಿ’ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ. ಛಿಳ್ಳನೆ ಹಾರಿದ ನೀರು ಫಳ್ಳನೆ ಹೊಳೆಯುತ್ತಿದ್ದ ಶರ್ಟನ್ನು ತೋಯಿಸಿರುವ ಈ ಸಂದರ್ಭದಲ್ಲಿ ನೆನೆದವರ ಮನದ ಮಾತುಗಳೇನು?” ಎಂದೆ.
ಕಮಂಗಿಯವನು ಗಲ್ಲಿಯವಳು ಓದಿದ ಸ್ಕೂಲಿನಲ್ಲೇ ಓದಿದವನೋ ಏನೋ; ಅವಳು ಬಳಸಿದ ಭಾಷೆಯನ್ನೇ ಒಂದಷ್ಟು ‘ಇಂಪ್ರೂವ್’ ಮಾಡಿ ಪ್ರಶ್ನಿಸಿದ ನನ್ನನ್ನು, ಕೊಚ್ಚೆ ಹಾರಿಸಿದ ಡ್ರೈವರನ್ನು, ಗುಂಡಿ ಮುಚ್ಚದ ನಗರ ಪಾಲಿಕೆಯನ್ನು, ರಾಜ್ಯ ಸರ್ಕಾರವನ್ನು, ಕಡೆಗೆ ದೇಶದ ಪ್ರಧಾನಿಯನ್ನು ತನ್ನ ಪೊಲೀಸ್ ಸಂಸ್ಕೃತದಲ್ಲಿ ನಿವಾಳಿಸಿ ಎಸೆದ. ಅಷ್ಟರ ಮಧ್ಯೆಯೂ ನಾನು “ನಿಮಗೆ ಹಿಂದಿ ಫಿಲ್ಮ್ ಇಷ್ಟವೇ?” ಎಂದು ಕೇಳಿದೆ.
“ಹೂಂ. ಏಕೆ?”
“ಹಿಂದಿ ಚಿತ್ರಗಳ ಹೀರೋಗಳು ಗುಂಡಿ ಮುಚ್ಚಕೂಡದು ಎಂದು ತೋರಿಸಿಕೊಟ್ಟಿದ್ದಾರೆ. ಅವರ ಶರ್ಟಿನ ಗುಂಡಿಗಳೆಲ್ಲ ತೆರೆದೇ ಇರುತ್ತವೆ. ಇದೂ ಡಿಟೋ. ಆದ್ದರಿಂದ ಈ ಗುಂಡಿಗಳನ್ನು ಮುಚ್ಚದ ಕಾಂಟ್ರಾಕ್ಟರ್ ಸಹ ಹಿಂದಿ ಚಿತ್ರಗಳ ಅಭಿಮಾನಿ ಎಂದಾಯಿತು. ಅಲ್ಲಿಗೆ ನೀವಿಬ್ಬರೂ ಒಂದೇ ಬಳ್ಳಿಯ ಹೂಗಳು. ನೀವೇನಂತೀರಿ?” ಎಂದೆ.
ಅವನು ತನ್ನ ಹೊಲಸುಭಾಷಾ ಪದಕೋಶದಿಂದ ಮತ್ತಷ್ಟು ಪದಗಳನ್ನು ಹೆಕ್ಕಿ ನನ್ನತ್ತ ಒಗೆದ. “ಮೆತ್ತಗೆ ಮಾತನಾಡಿದ್ದು ನಿನಗೇ; ಜೋರಾಗಿ ಮಾತನಾಡಿದ್ದು ಗಾಳಿಗೆ” ಎಂಬ ಧೋರಣೆಯನ್ನು ಅನುಸರಿಸುವ ನಾನು ನೆನೆದ ಮತ್ತೊಬ್ಬರನ್ನು ಅರಸುತ್ತಾ ಹೊರಟೆ. ಇದ್ದಕ್ಕಿದ್ದಂತೆ ಕಾರ್ಮೋಡಗಳು ದಟ್ಟೈಸಿದವು. ಕುಂಭದ್ರೋಣ ಮಳೆಗೆ ಹಳ್ಳಕೊಳ್ಳಗಳಲ್ಲದೆ ಕೆಳಪ್ರದೇಶದಲ್ಲಿರುವ ಗುಡಿಸಲು, ವಸತಿಗಳು ಸಹ ತುಂಬಿಕೊಂಡವು.
“ನಿಮ್ಮ ಮನೆಯೆಲ್ಲ ನೆನೆದಿದೆ. ನೀವೂ ನೆನೆದಿದ್ದೀರಿ. ‘ನೆನೆದವರ ಮನದಲ್ಲಿ’ ಕಾರ್ಯಕ್ರಮದಲ್ಲಿ ನಿಮ್ಮ ಅಭಿಪ್ರಾಯವು ಅಮೂಲ್ಯವೆನಿಸುತ್ತದೆ. ಈಗ ನಿಮ್ಮ ಮನಸ್ಸಿನಲ್ಲಿರುವ ಭಾವನೆಗಳೇನು?” ಎಂದೆ.
“ಸರ್ಕಾರವು ಘೋಷಿಸದೆ ಕೊಟ್ಟಿರುವ ಬಿಟ್ಟಿಭಾಗ್ಯಗಳಲ್ಲಿ ಇದೂ ಒಂದು. ರಾಜಕಾಲುವೆಯನ್ನು ಮುಚ್ಚಿ ಬಹುಮಹಡಿ ಕಟ್ಟಡವನ್ನು ಕಟ್ಟಿದಾಗಿನಿಂದ ನಮಗೆ ‘ಇರುವಲ್ಲೇ ಸ್ನಾನ’ ಭಾಗ್ಯ ಒದಗಿದೆ. ಇದರಲ್ಲಿ ಒಂದು ಸಂತಸದ ಸಂಗತಿ, ಒಂದು ಬೇಸರದ ಸಂಗತಿಗಳೂ ಇವೆ. ನಮ್ಮೊಡನೆಯೇ ನಮ್ಮ ಮನೆಯ ಪೀಠೋಪಕರಣಗಳು, ಹಾಸಿಗೆ ದಿಂಬುಗಳಿಗೂ ಸ್ನಾನವಾಗುವುದು ಬೇಸರದ ಸಂಗತಿ. ನಮ್ಮ ಮನೆಯ ನಾಯಿಗೆ ಸ್ನಾನ ಮಾಡಿಸುವುದೆಂದರೆ ಹರಸಾಹಸ. ಹೀಗೆ ಮಳೆನೀರು ನುಗ್ಗಿದಾಗ ಅದು ಶ‍್ರಮವಿಲ್ಲದೆಯೇ ನೆರವೇರುವುದು ಸಂತಸದ ಸಂಗತಿ” ಎಂದನೊಬ್ಬ ಮುಳುಗುಮನೆಯವ.
“ಇಲ್ಲಿಂದ ಒಂದು ಕಿಲೋಮೀಟರ್ ದೂರದಲ್ಲಿ ಕೆರೆಯೊಂದಿದೆ. ಅದರ ತೂಬನ್ನು ಆಗಾಗ್ಗೆ ಸ್ವಲ್ಪ ಸಮಯ ತೆಗೆದು ನಮ್ಮ ಬಡಾವಣೆಗೆ ನೀರನ್ನು ಹರಿಸಿದರೆ ವರ್ಷವಿಡೀ ನಾವು ನೆನೆಯಲು ಅನುಕೂಲವಾಗುತ್ತದೆ. ಅದರಿಂದ ಮಳೆಯಿಲ್ಲದ ತಿಂಗಳುಗಳಲ್ಲಿ ನಾವು ಬಳಸಬೇಕಾದ ಸೆಂಟಿನ ಖರ್ಚು ಉಳಿತಾಯವಾಗುತ್ತದೆ, ನೆನೆದವರ ಮನದಲ್ಲಿ ಉಳಿತಾಯದ ಸಂತೋಷ ಮೂಡುತ್ತದೆ” ಎಂದ ಮತ್ತೊಬ್ಬ ಮುಳುಗುಗೃಹಸ್ಥ.
“ಸೆಲ್ಫಿ ಏಕೆ ತೆಗೆದುಕೊಳ್ಳಲಿಲ್ಲವಯ್ಯಾ? ಬೇರೆಯವರ ಅವಸ್ಥೆಯನ್ನು ಸೆಲ್ಫಿಯಲ್ಲಿ ಸೆರೆಹಿಡಿದು ರೀಲ್ಸ್ ಮಾಡುವ ನಿಮಗೆ ನಾವು ನೆನೆದಷ್ಟೂ ಖುಷಿಯೇ. ಹಿಡ್ಕೋ ಈ ಬಕೆಟ್ಟನ್ನ, ತುಂಬಿದ ನೀರನ್ನು ಆಚೆ ಸುರಿ ಬಾ” ಎಂದನೊಬ್ಬ ಹಿರೀಕ.
ಆತನಿಂದ ತಪ್ಪಿಸಿಕೊಂಡು ಕೊಳಕು ನೀರಿನಲ್ಲಿಯೇ ಈಜುತ್ತಿದ್ದ ಪೋರನನ್ನು ‘ನೆನೆದವನ ಮನದಲ್ಲಿ ಏನೇನು ನಡೆಯುತ್ತಿದೆ?” ಎಂದು ಕೇಳಿದೆ.
“ನಾನು ತುಂಬಾ ಸಾಹುಕಾರ ಅನ್ನಿಸ್ತಿದೆ” ಎಂದನಾ ಪೋರ.
“ಏಕೆ?”
“ಎಲ್ಲರೂ ಮನೆಯಿಂದ ಸ್ವಿಮಿಂಗ್ ಪೂಲ್‍ಗೆ ಹೋಗುತ್ತಾರೆ. ನನ್ನ ವಿಷಯದಲ್ಲಿ ನಾನಿರುವ ಮನೆಗೇ ಸ್ವಿಮಿಂಗ್ ಪೂಲ್ ಬರುತ್ತದೆ! ಫೀಸಿನ ಕೋಟಲೆ ಇಲ್ಲ, ಟೈಮಿಂಗಿನ ಹಂಗಿಲ್ಲ. ದಿಸ್ ಈಸ್ ಲೈಫ್” ಎನ್ನುತ್ತಾ ಈಜಿ ದೂರ ಸರಿದನವ.
ಏರಿಯಾದ ಬುದ್ಧಿಜೀವಿಗೂ ಇದೇ ಪ್ರಶ್ನೆಯನ್ನು ಒಗೆದೆ. “ಇದನ್ನು ಪುಲಕೇಶಿ ನಗರ ಎಂದು ಕರೆಯುತ್ತಿದ್ದಾರೆ. ಕೂಡಲೆ ಇದರ ಹೆಸರನ್ನು ಬದಲಿಸಬೇಕು” ಎಂದನವ.
“ನೆನೆದಾಗ ನಿಮ್ಮ ಮನದಲ್ಲಿ ಬರುವ ಆಲೋಚನೆ ಇದೇ ಏನು?”
“ಹೌದು. ಮನೆಗೆ ನೀರು ನುಗ್ಗಿದರೂ ಪ್ರತಿಭಟಿಸದ ಜನರಿರುವ ಬಡಾವಣೆಗೆ ಪುಲಕೇಶಿಯಂತಹ ವೀರನ ಹೆಸರು ಸರಿಯಲ್ಲ, ಪುಕ್ಕಲೇಶಿ ನಗರ ಎಂದೋ, ಮಳೆಗಾಲದ ಬಂದೊಡನೆ ಎಲ್ಲರೂ ಈಜಲೇಬೇಕಾದ್ದರಿಂದ ಈಜೀಪುರ ಎಂದೋ ಹೆಸರಿಸುವುದು ಸೂಕ್ತ” ಎಂದನವ.
ಮನೆಗೆ ಬಂದೆ. “ನೆನೆದವರ ಮನದಲ್ಲಿ ಏನಿರುತ್ತದೆಂದು ನಿನ್ನ ಅಭಿಪ್ರಾಯ?” ಎಂದು ಮಡದಿಯನ್ನು ಕೇಳಿದೆ.
“ಮತ್ತೆ ನೆನೆಯಬೇಕೆಂಬ ಕಾತುರ ಇರುತ್ತದೆ. ಮೂರು ದಿನದಿಂದ ಕಾರ್ಪೊರೇಷನ್ ನೀರು ಬಂದಿಲ್ಲ, ಸಂಪ್ ಖಾಲಿ ಇದೆ. ವಾಟರ್ ಸಪ್ಲೈ ಡಿಪಾರ್ಟ್‍ಮೆಂಟಿಗೆ ಹೋಗಿ ಟ್ಯಾಂಕರನ್ನು ಹಿಡಿದುಕೊಂಡು ಬನ್ನಿ, ಮಿಂದ ನಂತರ ನಿಮ್ಮ ಪ್ರಶ್ನೆಗೆ ಉತ್ತರಿಸುತ್ತೇನೆ” ಎಂದಳು ಮಡದಿ.
ಜಲಮಂಡಳಿಗೆ ಬಂದೆ. ಎಲ್ಲೋ ಹೋಗಿರುವ ಟ್ಯಾಂಕರ್ ಇನ್ನೂ ಬಂದಿಲ್ಲ. ಮೂರು ಗಂಟೆಗಳಿಂದ ಬಿರುಬಿಸಿಲಿನಲ್ಲಿ ಬೆವೆತು ನೆನೆದಿದ್ದೇನೆ. ಬೆವರಿನಿಂದ ನೆನೆದವನ ಮನದಲ್ಲಿ ಮೂಡುತ್ತಿರುವ ಪದಗಳನ್ನು ಶಿಷ್ಟಾಚಾರದ ಕಾರಣ ಬರೆಯಲಾರೆ, ಬರೆಯಲಾರೆ, ಬರೆಯಲಾರೆ.

Comments
Post a Comment