ತುಮ್ಹಾರೇ ಭೀ ಜೈ ಜೈ ಹಮಾರೇ ಭೀ ಜೈ ಜೈ
ಹಾಸ್ಯ ಲೇಖನ - ಅಣಕು ರಾಮನಾಥ್
ಭಾಷೆಗಳ ಪೈಕಿ ನನಗೆ ಅತಿ ಹೆಚ್ಚು ಗೊಂದಲ ಉಂಟುಮಾಡಿದ ಭಾಷೆ ಎಂದರೆ ಹಿಂದಿಯೇ. “ಆ” ಎಂದರೆ ಬಾ ಎಂದೂ, “ಜಾ” ಎಂದರೆ ಹೋಗು ಎಂದೂ ಅರ್ಥವಿದ್ದರೂ ಆಜಾ ಎಂದರೆ “ಬಂದು ಹೋಗು” ಎಂದು ಅರ್ಥವಲ್ಲವಂತೆ, ಬಾ ಎಂದೇ ಅರ್ಥವಂತೆ. ಹಾಗಾದರೆ ಆಜಾ ಎಂಬ ಶಬ್ದದಲ್ಲಿ ಎಂದರೆ ಬಾ, ಜಾ ಎಂದರೆ ಏನೇನೂ ಅರ್ಥವಿಲ್ಲವೆಂದಾಯಿತಲ್ಲವೆ? ಜಾ ಎನ್ನುವುದಕ್ಕೆ ಅರ್ಥವಿಲ್ಲವೆಂದಾದರೆ ಜೀಜಾಜೀ ಎಂಬ ಪದವನ್ನು ಜೀಜೀ ಎಂದು ಹೇಳಿದರೂ ಸರಿಯೇ ಅಲ್ಲವೆ? ಆದರೆ ಜೀಜೀ ಎಂದು ಕರೆದರೆ ಭಾವನವರು ಓಗುಟ್ಟುವುದಿಲ್ಲವಂತೆ.
ಹಿಂದಿಯ ಮಂದಿ ದೊಡ್ಡ ಜನ. ನಾವು ಎಲ್ಲಿಗಾದರೂ ಪ್ರಯಾಣ ಹೊರಡಬೇಕಾದರೆ ಕಾರನ್ನೋ, ಟೆಂಪೋ ಟ್ರಾವಲರನ್ನೋ ಮಾಡಿಕೊಂಡು ಹೋಗುತ್ತೇವೆ. ಆದರೆ ನನ್ನ ಗೆಳೆಯನ ಹಿಂದಿ ಜನಾಂಗದ ಸತಿಯ ಕಥೆಯೇ ಬೇರೆ. ನನ್ನ ಗೆಳೆಯನ ಮದುವೆಯಾದ ಹೊಸತು. ಸತಿಯನ್ನು ಕುರಿತು, “ಡಾರ್ಲಿಂಗ್, ನೈನಿತಾಲ್ಗೆ ಹೋಗೋಣವೇ?” ಎಂದ.
“ನಹೀ” ಎಂದಳಾಕೆ.
“ಕೊಡೈಕೆನಾಲ್ಗೆ?”
“ಬಿಲ್ಕುಲ್ ನಹೀ.”
“ಡಾರ್ಜಿಲಿಂಗಿಗೆ?”
“ಬಸ್ ಕರೋ ಜೀ” ಎಂದಳವಳು.
ಸತಿಯೊಡನೆ ಇದ್ದಲ್ಲೇ ಹನಿಮೂನ್ ಆಚರಣೆಯೆಂದುಕೊಂಡು ಸುಮ್ಮನಾದನವ. ಡಾರ್ಲಿಂಗು “ಕ್ಯೂ ಚುಪ್ ಹುವಾ?” ಎಂದಳು.
“ನೀನೇ ಮಾತು ನಿಲ್ಲಿಸು ಎಂದೆಯಲ್ಲ! ಬಸ್ ಕರೋ ಜೀ ಎನ್ನಲಿಲ್ಲವೆ ನೀನು?”
“ಡಾರ್ಜಿಲಿಂಗಿಗಾದರೆ ನನ್ನ ತವರಿನ ಹದಿನೈದು ಮಂದಿ, ನಾವಿಬ್ಬರು, ನನ್ನ ಫ್ರೆಂಡ್ಸ್ ಐದಾರು ಜನ ಸಬ್ ಆತೇ ಹೈ. ಇಸ್ಲಿಯೇ ಏಕ್ ಬಸ್... ಟ್ವೆಂಟಿಫೈವ್ ಸೀಟರ್ ಬಸ್... ಕರೋ ಜೀ ಅಂತ ನಾನು ಹೇಳಿದ್ದು!” ಎಂದು ಧುಮುಗುಟ್ಟಿದಳು ಮಡದಿ.
“I will make you eat your words” ಎಂಬ ನುಡಿಗಟ್ಟೊಂದು ಇಂಗ್ಲಿಷಿನಲ್ಲಿದೆ. “ನೀನು ಹೇಳಿದ ಮಾತುಗಳನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಮಾಡುವೆ ಅಥವಾ ನೀನು ಹೇಳಿದ್ದು ತಪ್ಪೆಂದು ಸಾಬೀತು ಮಾಡುವೆ” ಎನ್ನುವುದು ಅದರ ಅರ್ಥ. ಕೆಲವರು ತಮ್ಮ ಮಾತುಗಳನ್ನು ತಾವೇ ತಿನ್ನುವುದರಲ್ಲಿ ಪ್ರವೀಣರು. ಖ್ಯಾತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರರ ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟನೊಬ್ಬನು, ತನ್ನ ಧ್ವನಿಯನ್ನು ಏರಿಸಿದರೆ ‘ಬೇಸ್ ವಾಯ್ಸ್’ಗೆ ಧಕ್ಕೆ ಬರುತ್ತದೆಂದು, ನಿರ್ದೇಶಕರು ಎಷ್ಟೇ ಹೇಳಿದರೂ ಧ್ವನಿ ಏರಿಸುತ್ತಿರಲಿಲ್ಲ. ಹೀಗಾಗಿ ವಾಕ್ಯದ ಕಡೆಕಡೆಯ ಅಕ್ಷರಗಳು ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ. ನಾಗತಿಹಳ್ಳಿಯವರು, “ಮಾರಾಯ, ನಿನಗೆಷ್ಟು ಬೇಕೋ ಊಟ, ತಿಂಡಿ, ಸ್ನ್ಯಾಕ್ಸ್ ಎಲ್ಲಾ ಕೊಡ್ತೀನಿ. ಮನಸೋಯಿಚ್ಛೆ ತಿನ್ನು. ಆದರೆ ಅಕ್ಷರಗಳನ್ನು ತಿನ್ನಬೇಡ ಮಾರಾಯ” ಎನ್ನುತ್ತಿದ್ದರು. ಇದು ತಮ್ಮ ಪದಗಳನ್ನು ತಾವೇ ತಿನ್ನುವ ‘ಸೆಲ್ಫ್ ಸರ್ವೀಸ್’ ಪದ್ಧತಿ. ಹಿಂದಿಯವರು ಅಕ್ಷರಗಳನ್ನು ತಿನ್ನುವುದಿಲ್ಲ, ಶಪಥಗಳನ್ನೇ ತಿಂದುಬಿಡುತ್ತಾರೆ ಎನ್ನಲು ಅನೇಕ ಚಲನಚಿತ್ರಗಳಲ್ಲಿ ಪುರಾವೆ ದೊರಕುತ್ತದೆ. “ಮೈ ಕಸಮ್ ಖಾಕೇ ಯಹ್ ಕೆಹತಾ ಹೂ” ಎಂದೇ ಆರಂಭಿಸುವ ಅವರ ಈ ವಾಕ್ಯವನ್ನು ಕೇಳಿದಾಗಲೆಲ್ಲ “ಕಸಮ್ ಎನ್ನುವುದು ವಿಕ್ಸ್ ಮಾತ್ರೆಯೇ? ಅದನ್ನು ತಿಂದ ನಂತರ ಧ್ವನಿ ಸ್ಪಷ್ಟವಾಗಿ ಹೊರಡುವುದೆ?” ಎಂಬ ಪ್ರಶ್ನೆ ನನ್ನಲ್ಲಿ ಏಳುತ್ತಿತ್ತು.
ಹಿಂದಿ ಹಾಡುಗಳ ಸಾಹಿತ್ಯವೂ ಕೆಲವೊಮ್ಮೆ ವಿಚಿತ್ರವೆನಿಸಿದೆ. “ಮುಹಬ್ಬತ್ ಜಿಂದ ರೆಹತೀ ಹೈ; ಮುಹಬ್ಬತ್ ಮರ್ ನಹೀ ಸಕತೀ” ಎಂದರೆ ಅರ್ಥವೇನು? ಬದುಕಿರುತ್ತದೆ ಎಂದಮೇಲೆ ಸತ್ತಿರುವುದಿಲ್ಲ ಎಂದೇ ಅರ್ಥವಲ್ಲವೆ? ಅಥವಾ ಮರ್ ನಹೀ ಸಕತೀ ಎಂದಮೇಲೆ ಜಿಂದಾ ಇರಲೇಬೇಕಲ್ಲವೆ? ಅಥವಾ ಆ ಹಾಡನ್ನು ಬರೆದ ಕಾಲದಲ್ಲೇ ಮುಂದೊಂದು ದಿನ ನರ್ಸಿಂಗ್ ಹೋಂಗಳಲ್ಲಿ ವೆಂಟಿಲೇಟರ್ ಮೇಲೆ ದಿನಗಟ್ಟಳೆ ಬದುಕುವ ಪೇಷೆಂಟಿನ ಪರಿಸ್ಥಿತಿಯನ್ನು ಸೂಚ್ಯವಾಗಿ ಹೇಳಲಾಗಿತ್ತೇನು? ವೆಂಟಿಲೇಟರಿನಲ್ಲಿರುವ ರೋಗಿ ಜಿಂದಾ ರೆಹತಾ ಹೈ; ಅದನ್ನು ತೆಗೆಯುವವರೆಗೆ ಮರ್ ನಹೀ ಸಕತಾ. Therefore love is like a body on ventilator ಎಂದು ಹೇಳಬಹುದೆ? ಬದುಕಿರುತ್ತದೆ, ಸಾಯುವುದಿಲ್ಲ ಎಂಬ ಸಾಲುಗಳು ಕಂಡಾಗ ಖ್ಯಾತ ಖಳನಟ ಅಜಿತ್ ನುಡಿದ ಸಾಲುಗಳು ನೆನಪಾಗುತ್ತವೆ. ತನ್ನ ಡೆನ್ಗೆ ಕರೆದುತಂದ ವ್ಯಕ್ತಿಯೊಬ್ಬನಿಗೆ ಏನು ಶಿಕ್ಷೆ ವಿಧಿಸಬೇಕೆಂದು ವಿಲನ್ನಿನ ಚೇಲಾ ಕೇಳಿದಾಗ “ಇಸೇ ಲಿಕ್ವಿಡ್ ಆಕ್ಸಿಜನ್ ಮೇ ಡಾಲೋ. ಉಸ್ಮೇ ಜೋ ಲಿಕ್ವಿಡ್ ಹೈ ವೋ ಇಸೇ ಜೀನೇ ನಹೀ ದೇಗಾ, ಜೋ ಆಕ್ಸಿಜನ್ ಹೈ ಇಸೇ ಮರನೇ ನಹೀ ದೇಗಾ” ಎಂದಿದ್ದ.
ಹಿಂದಿಯ ಉಚ್ಚಾರವಂತೂ ಒಂದೊಂದು ನಾಲಿಗೆಯಲ್ಲಿ ಒಂದೊಂದು ರೀತಿ ಹೊಮ್ಮುತ್ತದೆ. ‘ಸಾರೇ ಜಹಾ ಸೆ ಅಚ್ಛಾ ಹಿಂದೂಸ್ತಾನ್ ಹಮಾರಾ” ಹಾಡು ಅನೇಕರಿಂದ “ಹಿಂದೂ ಸಿತಾ” ಎಂದೇ ಉಚ್ಚರಿಸಲ್ಪಡುತ್ತದೆ. ಸಿತಾ ಎಂದರೆ ಬೆಳದಿಂಗಳು. ‘ಹಿಂದೂ ಸಿತಾ’ ಎಂದರೇನು? ಬೆಳದಿಂಗಳಿನಲ್ಲಿಯೂ ಹಿಂದೂ ಬೆಳದಿಂಗಳು, ಮುಸ್ಲಿಮ್ ಬೆಳದಿಂಗಳು, ಕ್ರಿಶ್ಚಿಯನ್ ಬೆಳದಿಂಗಳು ಎಂದೆಲ್ಲ ಇವೆಯೆ?
ಇನ್ನು ಕೆಲವರ ನಾಲಿಗೆಯಲ್ಲಿ ಅದು ‘ಹಿಂದೂ ಸುತಾ ಹಮಾರಾ’ ಎಂದಾಗುತ್ತದೆ. ಸುತ ಎಂದರೆ ಪುತ್ರ; ಸುತಾ ಎಂದರೆ ಆಕಾರಾಂತೋ ಸ್ತ್ರೀಲಿಂಗಃ ಎಂಬ ಸಂಸ್ಕೃತ ಕ್ರಮದಂತೆ ‘ಪುತ್ರಿ’ ಎಂದಾಗುತ್ತದೆ. ಪದಗಳ ಅರ್ಥವು ಇಂತಿರುವಾಗ ‘ಸಾರೇ ಜಹಾ ಸೇ ಅಚ್ಛಾ’ ಆಗಿದ್ದು ಹಿಂದೂ ಪುತ್ರನೋ, ಹಿಂದೂ ಪುತ್ರಿಯೋ ಅಥವಾ ಹಿಂದೂಸ್ತಾನವೋ?
ಹಿಂದಿಯ ದೋ ಮತ್ತು ದೇ ಗಳೂ ಕಂಫ್ಯೂಸಿಂಗೇ. ‘ಇಸೇ ದೇ ದೋ’ ಎಂದರೆ ‘ಇವನಿಗೆ ಕೊಟ್ಟುಬಿಡು’ ಎಂದರ್ಥವಾದರೆ ‘ಇಸೆ ದೋ ದೇ’ ಎಂದರೆ ಇವನಿಗೆ ಎರಡು ಕೊಡು ಎಂದರ್ಥ. ‘ದೋ ದೋ’ ಎಂದಾಗ ಮೊದಲನೆಯ ದೋ ‘ಎರಡು’ ಅರ್ಥವನ್ನು ಕೊಡುವುದೋ ಎರಡನೆಯದೋ?
ಹಿಂದಿಯ ಮಂದಿಗೆ ಆಂಗ್ಲದ ಹುಚ್ಚು ಹಿಡಿದರಂತೂ ಅವರನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. “ಮೇರೀ ಜಾನ್ ಕುಛ್ ಭೀ ಕೀಜಿಯೇ” ಎಂದೊಂದು ಹಾಡಿದೆ. ಆಂಗ್ಲವ್ಯಾಮೋಹಿಯು ಇದನ್ನು ಹಾಡಿದರೆ “ಮೇರಿ ಮತ್ತು ಜಾನ್; ನೀವಿಬ್ಬರೂ ಏನು ಬೇಕಾದರೂ ಮಾಡಿರಿ” ಎಂದು ಅರ್ಥವೋ, “ನನ್ನ ಜಾನ್, ನೀವೇನು ಬೇಕೋ ಮಾಡಿರಿ” ಎಂದು ಮೇರಿಯು ಕೊಟ್ಟ ಪರ್ಮಿಶನ್ನೋ ಅಥವಾ “ನನ್ನ ಪ್ರಿಯರೇ, ಏನು ಬೇಕಾದರೂ ಮಾಡಿ” ಎಂದರ್ಥವೋ ಎಂಬ ಗೊಂದಲ ಉಂಟಾಗುವುದು ಸಹಜವಲ್ಲವೆ? ಆಂಗ್ಲದ ಗುಂಗಿನಲ್ಲಿರುವಾಗಲೇ “ಆಂಖೋ ಹೀ ಆಂಖೋ ಮೇ ಇಷಾರಾ ಹೋಗಯಾ; ಬೈಠೆ ಬೈಠೆ ಜೀನೇ ಕಾ ಸಹಾರಾ ಹೋಗಯಾ” ಎಂಬ ಹಾಡನ್ನು “ಬೈಟು ಬೈಟು” ಎಂದು ಬದಲಿಸಿ “ಹೊಟೇಲ್ಗೆ ಎಂಟರ್ ಆಗಕ್ಕೆ ಮುಂಚೇನೇ ಬೈ ಟೂ ಟೀನೋ, ಕಾಫೀನೋ, ಜ್ಯೂಸೋ ಅನ್ನೋದು ಕಣ್ಸನ್ನೇಲೇ ಮಾಡ್ಕೊಂಡ್ಬಿಡ್ತೀವಿ ಗುರೂ. ಇದನ್ನೇ ಆ ಕಾಲದಲ್ಲಿ ಅವರು ಬರ್ದಿರೋದು” ಎಂದೇ ವಾದಿಸುವ ಗೆಳೆಯನೂ ನನಗುಂಟು.
“ಮೈನೆ ಉಸೇ ಖೂಬ್ ಖಿಲಾಯಾ” ಎಂದರೆ ಅವನಿಗೆ ಚೆನ್ನಾಗಿ ತಿನ್ನಿಸಿದೆ ಎಂದು ಅರ್ಥವೋ ಅಥವಾ ಅವನನ್ನು ಚೆನ್ನಾಗಿ ಆಟವಾಡಿಸಿದೆ ಎಂದೋ? “ದಿಲ್ ನೆ ಫಿರ್ ಯಾದ್ ಕಿಯಾ” ಎಂದಾಗ “ಮನವು ಮತ್ತೆ ಜ್ಞಾಪಿಸಿಕೊಂಡಿತು” ಎಂದೋ ಅಥವಾ “ಮನವು ದಾವೆ(ಫಿರ್ಯಾದ್) ಹೂಡಿತು” ಎಂದು ಅರ್ಥವೋ?
ಹಿಂದಿಗರ ಆಂಗ್ಲಮಾಲಿನ್ಯದಿಂದಾದ ಪ್ರಸಂಗವೊಂದಿಂತಿದೆ:
ಬಾಸ್: ವೈ ಆರ್ ಯೂ ಲೇಟ್?
ನೌಕರ: ಲೇಟ್ ಗಯಾ ಥಾ ಸಾಬ್ (ಮಲಗಿಬಿಟ್ಟಿದ್ದೆ ಸರ್.)
ಬಾಸ್: ಕ್ಯೋ ಲೇಟ್ ಗಯಾ ಥಾ? (ಏಕೆ ಮಲಗಿದ್ದೆ.)
ನೌಕರ: ಕಲ್ ಕಾಮ್ ಸೇ ವಾಪಸ್ ಲೇಟ್ ಗಯಾ ಥಾ ಸಾಬ್ (ನೆನ್ನೆ ಕೆಲಸದಿಂದ ಬಹಳ ತಡವಾಗಿ ಮನೆಗೆ ಹೋದೆ ಸಾರ್).
ಬಾಸ್: ಮಗರ್ ತೇರೇ ಸಾತ್ ಗಯೇ ಲೋಗ್ ಜಲ್ದೀ ಆಯೇ ಹೈ ನ?
ನೌಕರ: ಮಗರ್ ವೇ ಇಧರ್ ಡೆಸ್ಕ್ ಪೇ ಹೀ ಲೇಟ್ ಗಯೇ ಹೈ ಸಾಬ್. (ಆದರೆ ಅವರು ಇಲ್ಲಿ ಡೆಸ್ಕ್ ಮೇಲೆಯೇ ಮಲಗಿದ್ದಾರೆ ಸಾರ್.)
ಇಂಗ್ಲಿಷ್ನಲ್ಲಿ ವಿವಿಧ ಕಾರಣಗಳಿಗೆ dayಗಳು ಇರುವಂತೆ ಹಿಂದಿಯಲ್ಲಿ ದಿವಸಗಳಿವೆ. ಸ್ವತಂತ್ರತಾ ದಿವಸ್, ಗಣತಂತ್ರ ದಿವಸ್ ಮೊದಲಾದ ದಿನಗಳಿರುವಂತೆಯೇ ಬಾಲ್ ದಿವಸ್ ಎಂದೊಂದಿದೆ. ಅದು childrens day ಎಂದು ತಿಳಿಯಬೇಕೋ ಅಥವಾ Hair day ಎಂದರಿಯಬೇಕೋ ತಿಳಿಯದಾಗಿದೆ. ಕನ್ನಡ-ಹಿಂದಿ ಹೇರಿಕೆ/ಪ್ರೀತಿಯ ಚರ್ಚೆಯಾಗುತ್ತಿರುವ ಈ ದಿನಗಳಲ್ಲಿ, ವಿಶ್ವ ಹಿಂದಿ ದಿನವಾದ ಜನವರಿ ಹತ್ತರಂದು ನನ್ನ ಮಂತ್ರವಿಷ್ಟೆ:
ತುಮ್ಹಾರೇ ಭೀ ಜೈ ಜೈ ಹಮಾರೇ ಭೀ ಜೈ ಜೈ
ನ ತುಮ್ ಹಾರೇ ನ ಹಮ್ ಹಾರೇ ||


🤣🤣🤣
ReplyDelete