ಸಿಗಬೇಕಾದ್ದು ಸಿಗದು; ಸಿಗಬಾರದ್ದು ಸಿಕ್ಕೇ ಸಿಗುತ್ತದೆ!

 ಸಿಗಬೇಕಾದ್ದು ಸಿಗದು; ಸಿಗಬಾರದ್ದು ಸಿಕ್ಕೇ ಸಿಗುತ್ತದೆ!

ಹಾಸ್ಯ ಲೇಖನ - ಅಣಕು ರಾಮನಾಥ್


 

ನನಗಲ್ಲದೆ ಇನ್ನು ಯಾರಿಗೂ ಸಿಗಕೂಡದು!

          ಇದಕ್ಕೆ ದಾರಿ ಇದ್ದದ್ದು ಅದೊಂದೇ!

ಅಪ್ಪ ತಂದಿದ್ದ ಬಾದಾಮಿ ಹಲ್ವದಲ್ಲಿ ಕಾಲು ಭಾಗದಷ್ಟನ್ನು ತೆಗೆದು, ಬಟ್ಟಲಿಗೆ ಹಾಕಿ, ಬಟ್ಟಲನ್ನೊಂದು ಪುಟ್ಟ ಬಾಕ್ಸಿನಲ್ಲಿ ಹಾಕಿ, ಅಟ್ಟವನ್ನೇರಿ ಹಳೆಯ ರಗ್ಗುಗಳ ಮಧ್ಯೆ ಅಡಗಿಸಿಟ್ಟೆ. ರಾತ್ರಿ ಎಲ್ಲರೂ ಮಲಗಿದಾಗ ಅಟ್ಟವೇರಿ ಹಲ್ವಾ ಮೆಲ್ಲುವ ತವಕದಲ್ಲೇ ದಿನವನ್ನು ಕಳೆದೆ.

          ರಾತ್ರಿ ಅತಿಥಿಯೊಬ್ಬರು ಬಂದ ಕಾರಣ ಅಟ್ಟವೇರಲಿದ್ದ ಸ್ಥಳದಲ್ಲಿಯೇ ಅವರಿಗೆ ಹಾಸಿಗೆಯನ್ನು ಹಾಸಿದ್ದಾಯಿತು. ಹಲ್ವ ಆಸ್ವಾದಿಸಿಂಗ್ ಪೋಸ್ಟ್‍ಪೋನ್ಡ್ ಬೈ ಎ ಡೇ.

          ಮರುದಿನ ಬೆಳಗ್ಗೆ ಅತಿಥಿಗಳು ‘ಕಣ್ಣೇ ಬಿಡಕ್ಕಾಗ್ತಿಲ್ಲ’ ಎಂದು ಚೀರಿದರು. ನೋಡಿದರೆ ಇರುವೆಗಳು ಕಚ್ಚಿ ಅವರ ಕಣ್ಣು ಬಾತಿತ್ತು. ಅತಿಥಿಯ ಕಣ್ಣು ಕಚ್ಚಿದ ಇರುವೆಗಳು ಗಣರಾಜ್ಯೋತ್ಸವದಂದು ಪೆರೇಡ್ ಹೋಗುವ ಸೈನ್ಯದಂತೆ ಸಾಲುಗಟ್ಟಿ ಊರ್ಧ್ವಮುಖವಾಗಿ ಸಾಗುತ್ತಾ ಅಟ್ಟವನ್ನೇರಿದ್ದವು. ಅಪ್ಪ ಇರುವೆಯ ಸಾಲಿನ ಜಾಡು ಹಿಡಿದು ಅಟ್ಟವೇರಿ, ರಗ್ಗು ಬಿಡಿಸಿ, ಬಾಕ್ಸು ತೆರೆದು, ಇಟ್ಟಾಗ ಹಳಹಳದಿ ಬಣ್ಣವಿದ್ದು, ಈಗ ಕೆಂಪುಕೆಂಪಾಗಿ ಕಾಣುತ್ತಿದ್ದ ಹಲ್ವಾವನ್ನು ಕಂಡು ಮುತ್ತಿದ ಕೆಂಪಿರುವೆಗಳಿಗಿಂತ ಕೆಂಗಣ್ಣು ಮಾಡಿಕೊಂಡು, “ನಿನ್ನದೇ ಕೆಲಸ! ನನಗೂ ಇಲ್ಲದೆ ಇರುವೆಗೆ ಕೊಟ್ಟಿದ್ದೀಯಾ! ನಿನ್ನ ಮೈಮೇಲೆ ಇರುವೆಯ ಬಣ್ಣದ್ದೇ ಬಾಸುಂಡೆ ಬರಿಸುತ್ತೇನೆ” ಎಂಬ ಆಶ್ವಾಸನೆಯೊಂದಿಗೆ ಕೆಳಗಿಳಿದರು. ‘ನನ್ನದೂ ಒಂದೆರಡು ಸೇರಿಸಿ ಬಾರಿಸು’ ಎಂದರು ಈ ವಿಷಯದಲ್ಲಿ ಧಾರಾಳಬುದ್ಧಿಯವರಾದ ಅತಿಥಿಗಳು.

ಅಪ್ಪ ರಾಜಕಾರಣಿಯಲ್ಲವಾದ್ದರಿಂದ ಕೊಟ್ಟ ಆಶ್ವಾಸನೆಯನ್ನು ಈಡೇರಿಸುವುದು ನಿಶ್ಚಿತ. ನನಗೆ ಜಗದ ಏನೇನೋ ತಿನಿಸುಗಳನ್ನು ತಿನ್ನಬೇಕೆಂಬ ಮಹದಾಸೆ ಇದ್ದರೂ ಪೆಟ್ಟು ಆ ಲಿಸ್ಟಿನಲ್ಲಿಲ್ಲವಾದ್ದರಿಂದ ಅಪ್ಪನಿಗೆ ಬೆನ್ನು ಮಾಡಿ ಬೆನ್ ಜಾನ್ಸನ್ನಿನ ರೀತಿ ಓಡಿ ಅಜ್ಜನ ಬೆನ್ನ ಹಿಂದೆ ಸೇರಿದೆ. ಅಪ್ಪನ ರಣಕಹಳೆಗೆ ಅಜ್ಜನೇ ಕದನವಿರಾಮದ ತುತ್ತೂರಿ.

ಬಾಲ್ಯದಿಂದಲೂ ನಾನು ಹೀಗೆ ಬಚ್ಚಿಟ್ಟ ವಸ್ತುಗಳು ಸಿಗಬಾರದವರ ಕೈಗೆ ಸಿಗುವುದು, ‘ತುಂಬಾ ಇಂಪಾರ್ಟೆಂಟು’ ಎಂದು ಎತ್ತಿಟ್ಟ ವಸ್ತುಗಳು ಸಿಗದಿರುವುದು ಅನೂಚಾನವಾಗಿ ನಡೆದಿದೆ ಎನ್ನುವುದಕ್ಕೆ ಇದೋ ಕೆಲವು ಉದಾಹರಣೆಗಳು.

ನಾನು ಆರನೆಯ ತರಗತಿಯಲ್ಲಿ ಓದುತ್ತಿದ್ದ ಕಾಲ. ಆ ಎಳೆವಯಸ್ಸಿನಲ್ಲಿಯೂ (ಹಿರಿಯರು ಕಿವಿ ಎಳೆಯುವುದು, ಅವರತ್ತ ಎಳೆದುಕೊಂಡು ಬೆನ್ನನ್ನು ತಬಲಾ ಮಾಡಿಕೊಳ್ಳುವುದು, ಮೊದಲಾದ ‘ಎಳೆತ’ಕ್ಕೆ ಅನುಕೂಲಕರವಾದ ವಯಸ್ಸಾದುದರಿಂದಲೇ ಅದನ್ನು ‘ಎಳೆ ವಯಸ್ಸು’ ಎನ್ನುವರೇನೋ!) ಕಲಾವಿಮರ್ಶಕನಾಗಿದ್ದ ನನಗೆ ತೀರ್ಥರೂಪರಿಗೆ ಯಕ್ಷಗಾನ, ಕಥಕ್ಕಳಿ, ಕಥಕ್, ಭರತನಾಟ್ಯಗಳ ಪರಿಚಯವಿಲ್ಲವೆಂದು ತಿಳಿದಿತ್ತು. ನನ್ನ ಮಾರ್ಕ್ಸ್ ಕಾರ್ಡಿನ ದರ್ಶನಮಾತ್ರದಿಂದಲೇ  ಪಿತಾಶ್ರೀಗೆ ಈ ಎಲ್ಲ ನರ್ತನಪ್ರಕಾರಗಳಲ್ಲಿಯೂ ಕುಣಿಯುವುದಕ್ಕೆ ಸ್ಫೂರ್ತಿ ಮೂಡಿಬಿಡುತ್ತಿತ್ತು. ಕಲಾರಾಧಕನಾದ ನನಗೆ ಆ ಕೆಟ್ಟ ನರ್ತನವು ಇಷ್ಟವಾಗುತ್ತಿರಲಿಲ್ಲವಾದ್ದರಿಂದ ನನ್ನ ಮಾರ್ಕ್ಸ್ ಕಾರ್ಡನ್ನು ಅವರ ಕೈಗೆ ಸಿಗದಂತೆ ಇಟ್ಟಿರುತ್ತಿದ್ದೆ. ನನಗೆ ಕೇವಲ ಒಂದೇ ಒಂದು ಮಾರ್ಕ್ ಕಡಿಮೆ ಬಂದಿದ್ದು – 35ಕ್ಕೆ – ಅಂತಹ ಮಹತ್ತರ ವಿಷಯವೇನಲ್ಲ ಅಲ್ಲವೆ?

ತೀರ್ಥರೂಪರು ಗಣೇಶನ ಹಬ್ಬ ಮತ್ತು ಅನಂತ ಚತುರ್ದಶಿಯಂದು ಮಾತ್ರ ಓದಲು ತೆರೆಯುತ್ತಿದ್ದ ‘ಸಟೀಕಾ ವ್ರತರತ್ನಮಾಲಾ’  ನನ್ನ ಮಾರ್ಕ್ಸ್ ಕಾರ್ಡಿನ ಅಡಗುದಾಣವೂ, ತನ್ಮೂಲಕ ನನ್ನ ಬೆನ್ನಿನ ಹಿತವನ್ನು ಕಾಯುವ ತಾಣವೂ ಆಗಿದ್ದಿತು. ಅಂದೂ ‘ಎಲೈ ನದಿಯೆ, ನೀನೇನಾದರೂ ಅನಂತಪದ್ಮನಾಭನನ್ನು ಕಂಡೆಯಾ’ ಮತ್ತು ‘ಎಲೈ ಗಿಳಿಕೋಗಿಲೆಗಳೆ, ನೀವೇನಾದರೂ ಸ್ವಾಮಿಯನ್ನು ಕಂಡಿರಾ’ ಎಂಬ ಪ್ಯಾರಾಗಳಿದ್ದ ಪುಟಗಳ ನಡುವೆ ಕಾರ್ಡನ್ನು ಇರಿಸಿ, ಅವರಿಗೆ ಕಾಣದ ಅನಂತನಂತೆಯೇ ಅಪ್ಪನಿಗೂ ಈ ಕಾರ್ಡು ಕಾಣದಿರಲೆಂದು ಪ್ರಾರ್ಥನೆಯನ್ನು ಸಲ್ಲಿಸಿದೆ. ಗಟ್ಟಿ ಪದಾರ್ಥವನ್ನು ತಿನ್ನಲಾಗದ ಅನಂತನಿಗೆ ‘ನೆನೆಸಿದ ಚಕ್ಕುಲಿ, ಪುಡಿ ಮಾಡಿದ ಕೋಡುಬಳೆ’ಗಳನ್ನು ನೈವೇದ್ಯ ಮಾಡುವೆನೆಂದೂ ಹರಕೆ ಹೊತ್ತೆ.

ಆದೊಡೇಂ! Man propses and woman disposes! ನನ್ನಕ್ಕನಿಗೆ ಶಾಲೆಯಲ್ಲಿ ‘ಗಣೇಶನ ಬಗ್ಗೆ ಪ್ರಬಂಧ ಬರೆಯಿರಿ’ ಎಂಬ ಅಸೈನ್‍ಮೆಂಟ್ ವಕ್ಕರಿಸಿತು. ಅಮ್ಮನು ‘ಸಟೀಕಾ’ ಕೈಗೆತ್ತಿಕೊಂಡಳು; ಮಾರ್ಕ್ಸ್ ಕಾರ್ಡ್ ವಿಧಾನಸೌಧದಿಂದ ಹೊರಬೀಳುವ ಭಿನ್ನಮತೀಯನಂತೆ ಪುಸ್ತಕದ ಪುಟಗಳಿಂದ ಹೊರಬಿದ್ದಿತು. ‘ಅಂಕದ ಪಟ್ಟಿ ಜಾರಿದ ಮೇಲೆ’ ಎಂದಿನಂತೆ ಅಕ್ಕನಿಂದ ‘ಕಣರ್ಣಪಿಶಾಚಿ’ಯ ಪಾತ್ರನಿರ್ವಹಣೆ, ಪಿತೃವಿಗೆ ಅಂಕದರ್ಶನ, ನಂತರ ತಕಿಟತೋಂ, ಧೀಂ ಧೀಂ ತಕ; ಬೆನ್ನ ಮೇಲೆ ಠಂ ಟರ ಠಂ ಟರ ಠಂ ಟರ. ನನಗೆ ಅದಕ್ಕಿಂತ ಬೇಸರವಾದುದೆಂದರೆ, ಪಾಪ! ಅನಂತಪದ್ಮನಾಭನಿಗೆ ಚಕ್ಕುಲಿ, ಕೋಡುಬಳೆಗಳು ತಪ್ಪಿದುದು!

ಸಿಗಬಾರದಾದ್ದು ಸಿಕ್ಕಿದ್ದು ಹೀಗಾದರೆ ಸಿಕ್ಕಲೆಂದು ಇಟ್ಟಿದ್ದು ಮಾಯವಾಗುವುದು ಜಗದ ವಿಸ್ಮಯಗಳಲ್ಲೊಂದು. ಅಂದು ಮನೆಗೆ ಹಿಂತಿರುಗಿದಾಗ ರೈಲ್ವೆಯವರ ಪ್ರಕಾರ ದಿನಬದಲಾವಣೆ ಆಗಿತ್ತು. ಇನ್ನು ಕೆಲವೇ ಗಂಟೆಗಳಲ್ಲಿ ಹೊರಡಬೇಕಿದ್ದ ಕಾರಣ ಕಾರಿನ ಕೀ ಸಿಗುವಂತೆ ಇಡಬೇಕೆಂದು ನಿರ್ಧರಿಸುತ್ತಲೇ ಕಾರಿನಿಂದಿಳಿದು, ಗೇಟಿನ ಬೀಗ ಹಾಕಿ, ಮುಂಬಾಗಿಲಿನ ಚಿಲಕ ಹಾಕಿ, ವೆರಾಂಡಾದ ಟೇಬಲ್ಲಿನ ಮೇಲೆ ಕೀ ಇಟ್ಟು ಮಲಗಿದೆ.

ಬೆಳಗ್ಗೆ ಎದ್ದು ನೋಡಿದರೆ ಕಾರಿನ ಕೀ ಟೇಬಲ್ಲಿನ ಮೇಲೆ ಇಲ್ಲ. ಶುರುವಾಯ್ತು ‘ನೀನೇನಾದರೂ ವಿಠ್ಠಲನನ್ನು ಕಂಡೆಯಾ?’ ಎಂದು ಭಕ್ತ ಕುಂಬಾರನು ಸಿಕ್ಕವರನ್ನೆಲ್ಲಾ ವಿಚಾರಿಸುವಂತಹ ಪರ್ವ. ಭಕ್ತ ಕುಂಬಾರನಿಗೆ ಸಿಕ್ಕಂತೆಯೇ ನನಗೂ ನಕಾರದ ಉತ್ತರಗಳ ಸರಮಾಲೆಯೇ ದೊರಕಿತು. A man marries because he cannot blame everything on the government ಅಲ್ಲವೇ! ಕೀ ಇಟ್ಟಲ್ಲಿ ಇಲ್ಲದಿರುವುದಕ್ಕೆ ಕಾರಣ ಮಡದಿಯೇ; ಬೆಳಗ್ಗೆ ನನಗಿಂತ ಮೊದಲು ಎದ್ದಿದ್ದದ್ದು ಅವಳೊಬ್ಬಳೇ ಎಂದು ತೀರ್ಮಾನಿಸಿ ಹಾರಾಡಿದೆ, ಚೀರಾಡಿದೆ.

“ಜೋಬ್ನೋಡ್ಕೊಳಿ” ಎಂದಳು ಮಗಳು. ತಡಕಾಡಿದೆ. ಜೇಬು ಗ್ಯಾರಂಟಿ ಭಾಗ್ಯಕ್ಕೆ ಸಿಲುಕಿದ ಸರ್ಕಾರಿ ಖಜಾನೆಯಂತೆ ಸಂಪೂರ್ಣ ಖಾಲಿಯಿತ್ತು.

“ಕಾರಲ್ಲೇ ಇರಬೇಕು ನೋಡಿ” ಎಂದ ಮಗ. ಹೋದೆ, ನೋಡಿದೆ. ಕಾರಿನ ಬಾಗಿಲನ್ನೂ ಸರಿಯಾಗಿ ಮುಚ್ಚಿಲ್ಲದಿರುವುದು ಗಮನಕ್ಕೆ ಬಂತು. ಈ ವಿಷಯ ನನಗಿಂತಲೂ ಮೊದಲೇ ಹಲವಾರು ಸೊಳ್ಳೆಗಳಿಗೂ ಗಮನಕ್ಕೆ ಬಂದಿದ್ದರಿಂದ,

ಬನ್ನೀ ಗೆಳೆಯರೆ... ಬನ್ನೀ ಗೆಳತಿಯರೆ

ಗೆಳೆಯರೆ, ನನ್ನ ಗೆಳತಿಯರೆ

ನಡೆಯಿರಿ ಕಾರ್ ಸೈಡಿಗೆ

ಹಾರಿರೀ ಇನ್‍ಸೈಡಿಗೆ

ಹೋಗೋಣ ಕಾರ್ ರೈಡಿಗೆ

ಥ್ಯಾಂಕ್ಸ್ ಹೇಳಿ ಓನರಿಗೆ

ಎಂದು ಸಂತೋಷದಿಂದ ಹಾರಿ ಹಾರಿ, ಕಾರಿನಲ್ಲಿ ಪ್ರಯಾಣಿಸುವವರ ರಕ್ತವನ್ನು ಹೀರುವುದಕ್ಕೆ ಮುಂಚೆ ಅಪೆಟೈಸರ್ ಆಗಿ ಸೀಟಿನ ಮೇಲೆ ಶೇಖರವಾದ ತಲೆಯೆಣ್ಣೆ, ಬೆವರುಗಳನ್ನು ಸವಿಯುತ್ತಾ ಗುಂಯ್‍ಗುಡುತ್ತಿದ್ದವು.

ಕಾರಿನ ಇಂಗ್ನಿಷನ್ ರಂಧ್ರವು ಸುಪ್ಪಂದಿಯ ತಲೆಯಷ್ಟೇ ಖಾಲಿ ಇದ್ದಿತು.

          ‘ಎಲ್ಲಿ ಮರೆಯಾದೆ; ಚಾವೀ ಏಕೆ ದೂರಾದೆ’ ಎಂದು ಮನದಲ್ಲಿ ಕೊರಗುತ್ತಲೇ ಕಾರ್ಪೆಟ್ಟಿನ ಕೆಳಗೆ, ಚಪ್ಪಲಿಗೂಡಿನಲ್ಲಿ, ಕರ್ಣಕುಂಡಲದ ಕುಂಡದಲ್ಲಿ, ನೆನ್ನೆಯಷ್ಟೇ ಒಗೆದು ಒಣಗಿಸಿ ಒಳತಂದು ಮೇಜಿನ ಮೇಲಿರಿಸಿದ್ದ ಬಟ್ಟೆರಾಶಿಯ ಅಡಿಯಲ್ಲಿ ಹುಡುಕಿದೆ. ಎಂದೋ ಕಳೆದುಹೋಗಿದ್ದ ಇಯರ್ ಫೋನ್ ಕಾರ್ಪೆಟ್ಟಿನ ಕೆಳಗೆ ಸಿಕ್ಕಿತು, ಚಪ್ಪಲಿಗೂಡಿನಲ್ಲಿ ಆರು ತಿಂಗಳ ಹಿಂದೆ ಕಳೆದುಹೋಗಿದ್ದ ಪೆನ್ ಡ್ರೈವ್ ಸಿಕ್ಕಿತು. ಬಟ್ಟೆಗಳ ರಾಶಿಯ ಅಡಿಯಲ್ಲಿ ಗೇಟ್ ಕೀ ಸಿಕ್ಕಿತು.

          ತನಿಖೆ ಆರಂಭಿಸಿದೆ. ಗೇಟ್ ಕೀ ಇರಬೇಕಾದದ್ದು ಕೀ ಸ್ಟ್ಯಾಂಡಿನಲ್ಲಿ. ಅದು ಟೇಬಲ್ಲಿಗೆ ಬರಬೇಕಾದರೆ ‘ಮೂರನೆಯ ಕೈ’ ಇರಲೇಬೇಕೆಂದು ತರ್ಕಿಸಿದೆ. ವಿಚಾರಣೆಯ ಸಮಯದಲ್ಲಿ ಗಿಡಮರಗಳನ್ನು ನೋಡಿಕೊಳ್ಳುವ ಮಾಲಿಯೂ ಹಾಜರಾದ.

          ‘ಯಜಮಾನರೆ, ನಿಮ್ಮ ಗೇಟಿನ ಕೀ ಕಾರಿನ ಟಾಪ್‍ನಲ್ಲಿತ್ತು. ಒಳಗೆ ತಂದಿರಿಸಿದೆ’ ಎಂದ. ಹಾಗಾದರೆ ಕಾರ್ ಕೀ?

          ತರಾತುರಿಯಿಂದ ಗೇಟಿನತ್ತ ಧಾವಿಸಿದೆ. ನನ್ನ ಅನಿಸಿಕೆ ಸರಿಯಿತ್ತು. ಬ್ರಹ್ಮನು ಜೋಡಿಸುವ ಅನೇಕ ಜೋಡಿಗಳಂತೆ ಏನೇನೂ ಹೊಂದಾಣಿಕೆಯಾಗದ ಕಾರಿನ ಕೀ ಗೇಟಿನ ಬೀಗಕ್ಕೆ ತಳುಕು ಹಾಕಿಕೊಂಡಿತ್ತು. ಒಳಬಂದ ಮಾಲಿ ಅದನ್ನು ಅಂತೆಯೇ ಕಾಂಪೌಂಡಿನ ಮೇಲಿರಿಸಿದ್ದ.

          ನಂತರ ಎಂದಿನಂತೆ ಅಮ್ಮನಿಂದ ಅಷ್ಟೋತ್ತರ, ಮಗಳಿಂದ ಮಂಗಳಾರತಿ, ಮಡದಿಯಿಂದ ಸಹಸ್ರನಾಮಗಳು ಸಂದಾಯವಾದವು. ಅವೆಲ್ಲ ಇಲ್ಲದಿದ್ದರೆ ಏನನ್ನೋ ಕಳೆದುಕೊಂಡ ಭಾವ ಉಂಟಾಗುತ್ತಿದ್ದುದರಿಂದ ಗೊಣಗುತ್ತಲೇ ಸಕಲವನ್ನೂ ಶಿರಸಾವಹಿಸಿದೆ.


          ಆ ವಿಷಯಗಳೆಲ್ಲ ಹಾಗಿರಲಿ. ಈಗೊಂದು ಪ್ರಮಾದ ಒದಗಿದೆ. ನನ್ನ ಬೀರುವಿನ ಕೆಳಖಾನೆಯಲ್ಲೊಂದು ಗುಪ್ತ ಸಂದೂಕವಿದೆ. ಅದರಲ್ಲಿ ಹಳೆಯ ಕಾಲದಲ್ಲಿ ‘ನನ್ನವಳು’ ಆಗಿದ್ದವಳೊಬ್ಬಳು ಬರೆದ ಪತ್ರಗಳಿವೆ. ಸ್ಪ್ಯಾನರ್, ಕಟಿಂಗ್ ಪ್ಲೈಯರ್‍ಗಳ ಬಾಕ್ಸಿನ ಅಡಿಯಲ್ಲಿದ್ದ ಅದನ್ನು ಮಡದಿ ಎಂದೆಂದೂ ನೋಡುವುದಿಲ್ಲವೆಂದು ನನಗೆ ಖಾತ್ರಿ ಇದ್ದಿತು. ಆದರೆ...

          “ಯಾಕೋ ಇಲ್ಲಿ ಗೆದ್ದಲು ಹಿಡಿದಂತೆ ಕಾಣ್ತಿದೆ ಬಾರೋ” ಎಂದಳು ಮಡದಿ. ಮಗ ಬಂದ. ಭಾರದ ಪೆಟ್ಟಿಗೆಯನ್ನು ಸರಿಸಿದ. ಗೆದ್ದಲು “ವಿವಾಹಭೋಜನವಿದು ವಿಶಿಷ್ಟ ವುಡ್ಡುಗಳಿವು; ಬಡಗಿಗೆ ಉದ್ಯೋಗವಿದು; ಇವೆಲ್ಲ ಎನಗೆ ತಿನಿಸು” ಎನ್ನುತ್ತಾ ಭಾಗವೊಂದನ್ನು ತಿಂದುಬಿಟ್ಟಿತ್ತು; ಪತ್ರವನ್ನು ತಿನ್ನದೆ ಹಾಗೆಯೇ ಬಿಟ್ಟಿತ್ತು.

          ಗೆದ್ದಲಿಗೆ ರುಚಿಸದ ಪ್ರೇಮಪತ್ರವು ಹೆಂಡತಿಗೆ ರುಚಿಸಿದೆ!

          ಇನ್ನು ಎಷ್ಟು ಅಕ್ಷೋಹಿಣಿ ಸೇನೆಯನ್ನು ಜೊತೆಗೂಡಿಸುವಳೋ! ಎಂತೆಂತಹ ಅತಿರಥ ಮಹಾರಥರನ್ನು ಎದುರಿಸಬೇಕೋ!

Comments