ಮೊತ್ತ ಮೊದಲ ದಸರಾ ಮೆರವಣಿಗೆ

ಮೊತ್ತ ಮೊದಲ ದಸರಾ ಮೆರವಣಿಗೆ

ಸಂಗ್ರಹ ಲೇಖನ - ಕೊಡುಗೆ - ಶ್ರೀಮತಿ ರಾಧಾ ರಾಮ್ 



 ಚಾಮುಂಡೇಶ್ವರಿಯ ಮೊತ್ತ ಮೊದಲ ದಸರಾ ಮೆರವಣಿಗೆ ನಡೆದದ್ದು ಎಂದು? ಏಕೆ? ಭಾಗ - ಒಂದು‍ ಮೈಸೂರಲ್ಲಿ ನಡೆಯಬೇಕಿರೋದು ಚಾಮುಂಡೇಶ್ವರಿಯ ದಸರಾ ಮೆರವಣಿಗೆಯಲ್ಲ. ಮಹಿಷಮಂಡಲದ ಅಧಿಪತಿ ಮಹಿಷಾಸುರನ ಮೆರವಣಿಗೆಯೇ ನಡೆಯಬೇಕು ಎಂಬ ಕೂಗೆದ್ದಿದೆ. ಇದು ಎಂಟೊಂಬತ್ತು ವರ್ಷಗಳಿಂದ ೨೦೧೬ ರಿಂದ ಶುರುವಾದ ತಕರಾರು. ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ . ಅವಳದೇ ಉತ್ಸವ ತಲೆ ತಲಾಂತರದಿಂದ ನಡೆದುಬಂದಿದೆ. ಅದಕ್ಕೆ ಬದಲಾಗಿ ಮಹಿಷ ದಸರಾವನ್ನು ಪೈಪೋಟಿಯ ಸವಾಲೆಂಬಂತೆ ನಡೆಸುವುದು ಲಕ್ಷಾಂತರ ಜನಸಾಮಾನ್ಯರ ಭಾವನೆಗಳಿಗೆ ಎಸಗುವ ಅಪಚಾರ ಎಂಬುದು ಮತ್ತೊಂದು ಕೂಗು. ಹೊರಗಿನ ಜನರು ಮೈಸೂರನ್ನು ಗುರುತಿಸುವುದೇ ಶ್ರೀ ಚಾಮುಂಡೇಶ್ವರಿಯ ಮೂಲಕ. ಅರಮನೆ , ಮೃಗಾಲಯ, ಮೈಸೂರುಪಾಕು ಇತ್ಯಾದಿಗಳೆಲ್ಲವೂ ಉಪ ಆಕರ್ಷಣೆಗಳು. ಹಾಗೆ ನೋಡಿದರೆ ಎರಡೂ ವಾದಗಳಿಗೂ ಪುರಾತನ ಇತಿಹಾಸವೇ ಇಲ್ಲ ಎಂಬುದು ಸತ್ಯ. 

ದಸರಾ ಜಂಬೂಸವಾರಿಯಲ್ಲಿ ಮೆರವಣಿಗೆಯ ಮುಖ್ಯರಾಗಿ ಕಂಗೊಳಿಸುತ್ತಿದ್ದವರೇ ಮಹಾರಾಜರು. ಮೆರವಣಿಗೆಯಲ್ಲಿ ಅವರ ಹೊರತಾಗಿ ಬೇರೆ ಯಾರಿಗೂ ಪ್ರಾಶಸ್ತ್ಯವಿರಲಿಲ್ಲ. ಮಹಿಷ ದಸರಾ ಮೆರವಣಿಗೆಯಂತೂ ಮೈಸೂರು ಸಂಸ್ಥಾನದಲ್ಲಿ ಎಂದೂ ಯಾವ ಕಾಲದಲ್ಲೂ ಪತ್ತೆಯೇ ಇರಲಿಲ್ಲ. 

ಹಾಗಿದ್ದರೆ ಈ ವಿವಾದವೇಕೆ? ಇದರ ನೈಜ ಇತಿಹಾಸವೇನು? 

ವಿಜಯನಗರ ಪತನದ ನಂತರ ರತ್ನಖಚಿತ ಸಿಂಹಾಸನವು ಶ್ರೀರಂಗ ಪಟ್ಟಣದ ಶ್ರೀರಂಗರಾಯನ ಸುಫರ್ದಿಗೆ ಬಂದಿತು. ಆತ ವಿಜಯನಗರ ಸಾಮ್ರಾಜ್ಯದ ಪ್ರತಿನಿಧಿಯಾಗಿದ್ದ. ಅವನೂ ಮುಪ್ಪಾದ. ಶತೃಗಳ ಉಪಟಳ ಹೆಚ್ಚಾಯಿತು. ತೀವ್ರ ಅನಾರೋಗ್ಯ ಮತ್ತು ವೃದ್ಧಾಪ್ಯದಿಂದಾಗಿ ಏನೂ ಮಾಡಲಾಗದ ವಿಷಣ್ಣ ಸ್ಥಿತಿ. ಶ್ರೀರಂಗಪಟ್ಟಣ ಮತ್ತು ರತ್ನಖಚಿತ ಸಿಂಹಾಸನವನ್ನು ಮೈಸೂರಿನ ರಾಜ ಒಡೆಯರಿಗೆ ವಹಿಸಿಕೊಟ್ಟು , ತನ್ನ ಇಬ್ಬರು ಪತ್ನಿಯರೊಂದಿಗೆ ತಲಕಾಡಿಗೆ ಹೋಗಿ ನೆಲಸಿದ. (೧೬೧೦) ಆವರೆಗೆ ಮೈಸೂರಿನಲ್ಲಿ ಯದುವಂಶದ ಒಡೆಯರ್‌ ರಾಜರುಗಳು ಆಳ್ವಿಕೆ ನಡೆಸುತ್ತಿದ್ದರು. 

( ೧೩೯೯ ರಿಂದ ೧೯೫೦ ರ ವರೆಗೆ ೫೪೯ ವರ್ಷಗಳ ಆಳ್ವಿಕೆ. )ರಾಜ್ಯಾಡಳಿತ ಮತ್ತು ಸಿಂಹಾಸನ ಕೈವಶವಾದ ಮೇಲೆ ರಾಜ ಒಡೆಯರ್‌ ಮೈಸೂರಿನಲ್ಲಿದ್ದ ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣಕ್ಕೆ ವರ್ಗಾಯಿಸಿದರು. ಸಿಂಹಾಸನವೆಂಬುದು ಕೇವಲ ರಾಜನ ಕುರ್ಚಿಯಲ್ಲ. ರಾಜ್ಯದ ಪವಿತ್ರ ಶಕ್ತಿ ಕೇಂದ್ರ. ಅದಕ್ಕೆ ಸಲ್ಲಬೇಕಿದ್ದ ಸಕಲ ಪೂಜಾದಿ ಆರಾಧನೆಗಳನ್ನು ಆಚರಿಸಲೇಬೇಕಿತ್ತು. ವಿಜಯನಗರ ಸಾಮ್ರಾಜ್ಯ ಅವನತಿ ಹೊಂದಿದ್ದರಿಂದ ಮತ್ತು ರತ್ನಖಚಿತ ಸಿಂಹಾಸನ ತಮ್ಮಲ್ಲಿದ್ದುದರಿಂದ ಅವರ ರೀತಿಯಲ್ಲೇ ನವರಾತ್ರಿಯ ದಸರಾ ಉತ್ಸವವನ್ನು ರಾಜ ಒಡೆಯರು ನೆರವೇರಿಸಬೇಕಿತ್ತು. ಅವರ ರೀತಿಯಲ್ಲೇ ನಡೆಸಬೇಕಿತ್ತು. ಸಿಂಹಾಸನಕ್ಕೆ ಅಪಚಾರವಾಗದಂತೆ ಅದೇ ವರ್ಷವೇ ಉತ್ಸವಕ್ಕೆ ಶ್ರೀರಂಗಪಟ್ಟಣದಲ್ಲಿ ಚಾಲನೆ ನೀಡಿದರು. ಆದರೆ ಒಂದು ಚಿಕ್ಕ ಬದಲಾವಣೆ ಮಾಡಿಕೊಂಡರು. ವಿಜಯನಗರದರಸರು ಉತ್ಸವದಲ್ಲಿ ಹಂಪೆಯ ವಿರೂಪಾಕ್ಷನನ್ನು ಆರಾಧಿಸುತ್ತಿದ್ದರು. ಸಿಂಹಾಸನವೀಗ ಶ್ರೀರಂಗಪಟ್ಟಣದಲ್ಲಿದೆ. 

ಶ್ರೀರಂಗನಾಥಸ್ವಾಮಿಯನ್ನು ಉತ್ಸವದಲ್ಲಿ ಆರಾಧಿಸಬೇಕಿತ್ತು. ನವರಾತ್ರಿಯ ಉತ್ಸವವೆಂದರೆ ಎಲ್ಲ ದೇವತೆಗಳನ್ನೂ ಆರಾಧಿಸುತ್ತ , ರಾಜ್ಯದ ಸುಭಿಕ್ಷಕ್ಕಾಗಿ ಪ್ರಾರ್ಥಿಸುವ ಸಿಂಹಾಸನ ಪೂಜೆ. ಆದರೆ ಒಡೆಯರ ಕುಲದೈವ ಶ್ರೀ ಚಾಮುಂಡೇಶ್ವರಿ. ನವರಾತ್ರಿಯ ಹಬ್ಬದ ದಿನಗಳಲ್ಲಿ ಶ್ರೀ ಚಾಮುಂಡೇಶ್ವರಿಗೇ ಅಗ್ರಪೂಜೆ ಸಲ್ಲಬೇಕು. ಪಟ್ಟದ ಕತ್ತಿಯನ್ನು ಸಿಂಹಾಸನದ ಮೇಲಿಟ್ಟು ಪೂಜಿಸ ತೊಡಗಿದರು. ಹತ್ತನೆಯ ದಿನ ವಿಜಯದಶಮಿಯಂದು ಮಹಾರಾಜ ಅಂಬಾರಿ ಆನೆಯ ಮೇಲೆ ಕುಳಿತು ಜಂಬೂಸವಾರಿ ಹೊರಡುತ್ತಿದ್ದ. ಮುಕ್ತಾಯದಲ್ಲಿ ಬನ್ನಿಯನ್ನು ಕಡಿದು ಎಲೆಗಳನ್ನು ವಿಜಯೋತ್ಸವದ ಸಂಕೇತವಾಗಿ ವಿತರಣೆ ಮಾಡುತ್ತಿದ್ದ. ಬನ್ನಿಯನ್ನು ಕಡಿಯುವುದು ಎಂಬ ಪದಪ್ರಯೋಗ ಇದೆಯಾದರೂ ಮರವನ್ನೇನು ಕಡಿಯುತ್ತಿರಲಿಲ್ಲ. ಬನ್ನಿ ಎಲೆಗಳ ವಿತರಣೆ ನಡೆಯುತ್ತಿತ್ತು. ಜಂಬೂಸವಾರಿ ಮೆರವಣಿಗೆ ಎಂದರೆ ಮಹಾರಾಜನದೇ ಉತ್ಸವ. ದೇವತೆಗಳಿಗೆ ಸಲ್ಲುವ ಪೂಜಾದಿಗಳು ಅರಮನೆಯೊಳಗೆ ನಡೆಯುತ್ತಿದ್ದವು. ಶ್ರೀ ಚಾಮುಂಡೇಶ್ವರಿಯನ್ನು ಯಾವ ರಾಜನ ಕಾಲದಲ್ಲಿಯೂ ಉತ್ಸವ ಮೂರ್ತಿಯನ್ನಾಗಿ ತರಲಿಲ್ಲ. 

ಟೀಪೂ ಪತನಾನಂತರ ಒಡೆಯರ ರಾಜಧಾನಿ ಶ್ರೀರಂಗ ಪಟ್ಟಣದಿಂದ ಮೈಸೂರಿಗೆ ಸ್ಥಳಾಂತರಗೊಂಡಿತು. ೧೮೦೪ ನೇ ಇಸವಿಯಿಂದ ರಾಜರ ದಸರಾ ಮೆರವಣಿಗೆ ಪುನಃ ಪ್ರಾರಂಭವಾಯಿತು. ದಿವಾನ್‌ ಪೂರ್ಣಯ್ಯನವರೇ ಖುದ್ದು ಪರಿಶೀಲಿಸಿ ಈಗಿನ ಬನ್ನಿಮಂಟಪ ಮೈದಾನವನ್ನು ಗುರುತು ಮಾಡಿ ಬನ್ನಿಮರ ನೆಟ್ಟರು. ಮೆರವಣಿಗೆಯ ಬೀದಿಗಳನ್ನು ನಿಗದಿ ಪಡಿಸಿದರು.‌ ಅಲ್ಲಿಂದ ಮುಂದಕ್ಕೆ ಮುಮ್ಮಡಿ ಕೃಷ್ಣರಾಜ ಒಡೆಯರ ಜಂಬೂಸವಾರಿ ಅರಮನೆಯಿಂದ ಹೊರಟು ಈಶಾನ್ಯ ದಿಕ್ಕಿನಲ್ಲಿದ್ದ ಬನ್ನಿಮಂಟಪವನ್ನು ಸೇರುತ್ತಿತ್ತು. 

ವಿಜಯದಶಮಿ ಮೆರವಣಿಗೆ ಮುಗಿದ ನಾಲ್ಕನೇ ದಿನಕ್ಕೆ ಚಾಮುಂಡಿಬೆಟ್ಟದಲ್ಲಿ ನಡೆಯುತ್ತಿದ್ದುದು ದೇವಿಯ ರಥೋತ್ಸವ. ಮಹಾರಾಜರೇ ಸ್ವತಃ ಪೂಜಿಸಿ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದರು. ಬೆಟ್ಟದ ದೇವಾಲಯವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿದ ನಂತರ ರಥೋತ್ಸವ ಮುಗಿಯುತ್ತಿತ್ತು. 

ರಥೋತ್ಸವ ಮುಗಿದ ಎರಡನೇ ದಿನಕ್ಕೆ ಬೆಟ್ಟದಲ್ಲಿರುವ ದೇವೀಕೊಳದಲ್ಲಿ ಸಪ್ತ ಮಾತೃಕೆಯರ ತೆಪ್ಪೋತ್ಸವ. ಇದಾದ ಎರಡು ದಿನಕ್ಕೆ ʼ ಜವಾಹಿರಿ ಉತ್ಸವʼ . ರಾಜರ ಖಾಸಗಿ ಒಡವೆಗಳಿಂದ ತಾಯಿ ಶ್ರೀ ಚಾಮುಂಡೇಶ್ವರಿಗೆ ಸರ್ವೋಲಂಕಾರ ಮಾಡುತ್ತಿದ್ದರು. ಈ ಜವಾಹಿರಿ ಉತ್ಸವವನ್ನು ನೋಡಲು ಸಾರ್ವಜನಿರಿಗೆ ಒಂದು ದಿನ ಅವಕಾಶವಿತ್ತು. ಇಲ್ಲಿಗೆ ನವರಾತ್ರಿ ದಸರಾ ಉತ್ಸವ ಮುಕ್ತಾಯವಾಗುತ್ತಿತ್ತು. 

ಮೈಸೂರು ಒಡೆಯರ ಇತಿಹಾಸ ೧೩೯೯ ರಿಂದ ಪ್ರಾರಂಭವಾಗಿದ್ದರೂ ೧೬೧೦ ರ ವರೆಗೆ ದಸರಾ ನಡೆಸುತ್ತಿದ್ದ ಬಗ್ಗೆ ಆಧಾರಗಳಿಲ್ಲ. ಆದರೆ ರಾಜ ಒಡೆಯರ್‌ ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣಕ್ಕೆ ವರ್ಗಾಯಿಸಿದ ನಂತರ ದಸರಾ ಜಂಬೂಸವಾರಿ ನಡೆಸುತ್ತಿದ್ದ ಬಗ್ಗೆ ದಾಖಲೆಗಳಿವೆ. 

ಮಹಾರಾಜರೇ ಖುದ್ದು ಕುಳಿತು ಬರುತ್ತಿದ್ದ ದಸರಾ ಮೆರವಣಿಗೆಯಲ್ಲಿ ಸರ್ವ ಧರ್ಮ, ಜಾತಿಯವರೂ ಪಾಲ್ಗೊಳ್ಳುವಂತೆ ವ್ಯವಸ್ಥೆ ಮಾಡಿದ್ದರಿಂದ ದೇವರ ಉತ್ಸವಕ್ಕೆ ಹೊರಗಡೆ ಅವಕಾಶವಿರಲಿಲ್ಲ. ಕ್ರೈಸ್ತ , ಮುಸ್ಲಿಂ ಎನ್ನದೆ ಎಲ್ಲ ಜಾತಿಯವರಿಗೂ ಒಂದೊಂದು ಕಾರ್ಯಗೌರವ ನೀಡಲಾಗಿತ್ತು. ಕುಲದೈವದ ಪೂಜಾರಾಧನೆ ಅರಮನೆಯೊಳಗೆ ಖಾಸಗಿಯಾಗಿ ನಡೆಯುತ್ತಿತ್ತು. ಹೊರಗಡೆಯ ರಾಜರ ಮೆರವಣಿಗೆ ಅಕ್ಷರಶಃ ನಾಡಹಬ್ಬವಾಗಿ ಸರ್ವಜನರ ಸರ್ವಕೋಮಿನ ಆಚರಣೆಯಾಗಿ ನಡೆಯುತ್ತಿತ್ತು.

 ಇದಿಷ್ಟು ದಸರಾ ಮೆರವಣಿಗೆಯ ಸಂಕ್ಷಿಪ್ತ ಇತಿಹಾಸ. ಸ್ವಾತಂತ್ರ್ಯಾನಂತರವೂ ೧೯೬೯ ರ ವರೆಗೆ ಶ್ರೀ ಜಯಚಾಮರಾಜ ಒಡೆಯರ್‌ ( ರಾಜೇಂದ್ರ ಅಲ್ಲ ) ಅವರ ನೇತೃತ್ವದಲ್ಲಿ ಅರಮನೆಯ ಸಕಲ ಗೌರವಗಳೊಂದಿಗೆ ದಸರಾ ಮಹೋತ್ಸವ ನಡೆದಿತ್ತು. ೧೯೭೦ ರಲ್ಲಿ ಇಂದಿರಾ ಅವರ ಶಿಫಾರಸ್ಸಿನಂತೆ ರಾಷ್ಟ್ರಾಧ್ಯಕ್ಷರು ರಾಜಧನ ರದ್ದು ಪಡಿಸಿದ ಆದೇಶ ಹೊರಡಿಸಿದರು. ಭಾರತದಲ್ಲಿ ರಾಜರ ಸ್ವಂತ ಖರ್ಚಿಗಾಗಿ ನೀಡುತ್ತಿದ್ದ ರಾಜಧನ ( ಪ್ರಿವಿ ಪರ್ಸ್‌ ) ಮುಂತಾದ ಸವಲತ್ತು ಸೌಲಭ್ಯಗಳು ಕೊನೆಗೊಂಡವು. ಇದರಿಂದಾಗಿ ೧೯೭೦ ರಿಂದ ಮಹಾರಾಜರ ದಸರಾ ಮೆರವಣಿಗೆಗೆ ತೆರೆಬಿದ್ದಿತು.ಮಹಾರಾಜರು ತಾವೀಗ ಸಾಮಾನ್ಯ ಪ್ರಜೆಯಾಗಿರುವುದರಿಂದ ಜಂಬೂಸವಾರಿ ಮೆರವಣಿಗೆಯಲ್ಲಿ ತೆರಳುವುದು ಸರಿಯಲ್ಲವೆಂದು ತಾವೇ ಹಿಂದೆ ಸರಿದರು. ಸಿಂಹಾಸನದ ಮೇಲೆಯೂ ಕೂರಲಿಲ್ಲ. ಅದರೆ ಸಿಂಹಾಸನಕ್ಕೆ ಸಲ್ಲಬೇಕಿದ್ದ ಪೂಜೆ ನಿಲ್ಲಿಸುವಂತಿರಲಿಲ್ಲ. ಅರಮನೆಯೊಳಗೆ ಸಿಂಹಾಸನದ ಮೇಲೆ ಪಟ್ಟದ ಕತ್ತಿಯನ್ನಿಟ್ಟು ನವರಾತ್ರಿಯ ಪೂಜಾಕ್ರಮಗಳನ್ನು ನೆರವೇರಿಸಿದರು. ೧೯೭೦ ರ ದಸರಾದಲ್ಲಿ ಅರಮನೆಗೆ ದೀಪಾಲಂಕಾರ ಮಾಡಿರಲಿಲ್ಲ ಮತ್ತು ಮಹಾರಾಜರ ಜಂಬೂಸವಾರಿಯೂ ನಡೆಯಲಿಲ್ಲ. ಆದರೆ ಸಾರ್ವಜನಿಕ ಕಟ್ಟಡಗಳು ಮತ್ತು ಉದ್ಯಾನವನಗಳಿಗೆ ದೀಪಾಲಂಕಾರ ಮಾಡಲಾಗಿತ್ತು.

Comments