ಸೋಂದೆ ಪ್ರವಾಸ
ಲೇಖನ - ಪಲ್ಲವಿ ಕಟ್ಟಿ, ಸಿಡ್ನಿ
ಡಿಸೆಂಬರ್ 2023 . 5 ವರ್ಷಗಳ ನಂತರ ಭಾರತಕ್ಕೆ ಹೊರಟಿದ್ದೇನೆ ಎಂಬ ಸಂಭ್ರಮ ಸಡಗರ. ದಿನಗಳು ಸಮೀಪಿಸಿದಂತೆ ನನ್ನ ಹಾತೊರೆತವೂ ಹೆಚ್ಚಾಗಿಯೇ ಹೊರಟಿತ್ತು. ಈ ಬಾರಿ ಬೆಂಗಳೂರಿಗೆ ಹೋದಾಗ ಎಲ್ಲೆಲ್ಲಿ ಹೋಗಬೇಕು, ಎಲ್ಲೆಲ್ಲಿ ತಿನ್ನಬೇಕು ಎಂಬುದರ ಬಗ್ಗೆ ದೊಡ್ಡ ಪಟ್ಟಿಯೇ ತಯಾರಾಗಿತ್ತು. ನಿನ್ನ ಪಟ್ಟಿ ನೋಡಿದರೆ 5 ವಾರಗಳ ಭೇಟಿ 5 ತಿಂಗಳಾಗಬಹುದು ಎಂದು ಟೀಕಿಸಿದ್ದ ನನ್ನ ಗಂಡ.
ನಾನು ಮಾಡಿದ್ದ ಪಟ್ಟಿಯಲ್ಲಿ ಬಹಳ ಜಾಗಗಳಿಗೆ ಹೋಗಬೇಕು ಎಂದು ವಿಚಾರವಿದ್ದರೂ ಅದರಲ್ಲಿ ಒಂದು ಜಾಗಕ್ಕೆ ಮಾತ್ರ ಹೋಗಲೇ ಬೇಕು ಎಂದು ನಿರ್ಧರಿಸಿ ಅಲ್ಲಿ ಹೋಗಲು ಬಸ್ ಕೂಡ ಬುಕ್ ಮಾಡಿ ಆಗಿತ್ತು. ಆ ಜಾಗದ ಹೆಸರೇ ಶಿರಸಿಯ ಬಳಿ ಇರುವ ಶ್ರೀ ವಾದಿರಾಜರ ತಪೋಭೂಮಿಯಾದ ಸೋಂದೆ ಮಠ.
ಸೋಂದೆಯ ಬಗ್ಗೆ ನೆನೆದಾಗಲೆಲ್ಲ ನನ್ನ ನೆನಪಿನ ಅಂಗಳದಲ್ಲಿ ಒಂದು ಸುಂದರವಾದ ಹೂವು ಅರಳಿದಂತೆ ಭಾಸವಾಗುತ್ತದೆ. ನನ್ನ ಹೃದಯಕ್ಕೆ ಬಹಳಷ್ಟು ಹತ್ತಿರವಾದ ಸ್ಥಳ ಸೋಂದೆ.
ಚಿಕ್ಕಂದಿನಿಂದ ಹಿಡಿದು ಬಹುಷಃ 3 - 4 ಬಾರಿ ಹೋಗಿರಬಹುದು ಸೋಂದೆಗೆ. ಅಲ್ಲಿಗೆ ಹೋದಾಗಲೆಲ್ಲಾ ಒಂದು ಬಗೆಯ ಶಾಂತಿ , ಸಮಾಧಾನ, ಸಂತೋಷ ಸಿಗುತ್ತದೆ ಮನಸ್ಸಿಗೆ. ಅದು ಅಲ್ಲಿಯ ನಿಷ್ಕಲ್ಮಶವಾದ ವಾತಾವರಣದ ಕಾರಣವೋ ಅಥವಾ ಆ ಪುಣ್ಯಭೂಮಿಯ ಮಹಿಮೆಯೋ ತಿಳಿಯದು.
ಸೋದೆ, ಸೋಂದಾ, ಸ್ವಾದಿ ಎಂಬ ಅನೇಕ ಹೆಸರುಗಳಿಂದ ಕರೆಯಲ್ಪಡುವ ಈ ಪುಣ್ಯಭೂಮಿ ಶಾಲ್ಮಲಾ ನದಿಯಿಂದ ಸುತ್ತುವರೆದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಿಂದ ಸುಮಾರು 25 ಕಿ ಮೀ ದೂರದಲ್ಲಿದೆ. ಈ ಸ್ಥಳಕ್ಕೆ ಹೋಗುವ ರಸ್ತೆಯು ಸುಂದರವಾದ ದಟ್ಟ ಅರಣ್ಯ ಪ್ರದೇಶದಿಂದ ತುಂಬಿದ್ದು ಅಲ್ಲಲ್ಲಿ ಸಣ್ಣ ಪುಟ್ಟ ನದಿ ಕೆರೆ ನೋಡ ಸಿಗುತ್ತವೆ. ವಿಜಯ ನಗರ ಸಾಮ್ರಾಜ್ಯದ ಸಾಮಂತ ರಾಜನಾದ ಅರಸಪ್ಪ ನಾಯಕನ ಆಳ್ವಿಕೆಗೆ ಸೇರಿದ್ದ ಈ ಪ್ರದೇಶ ಭಾವೀ ಸಮೀರಾ ಎಂದು ಕರೆಯಲ್ಪಡುವ ಶ್ರೀ ವಾದಿರಾಜರು ತಪಸ್ಸುಮಾಡಿ ಈ ಸ್ಥಳವನ್ನು ಪುಣ್ಯಭೂಮಿಯಾಗಿ , ತಪೋಭೂಮಿಯಾಗಿ ಮಾಡಿದರು.
ಮಠದ ಹೊರಗೆ ಹಯಗ್ರೀವ ಸಮುದ್ರ ಎಂಬ ಕೆರೆ ಇದೆ. ಅರಸಪ್ಪ ನಾಯಕನ ಸೈನ್ಯವನ್ನು ಸೋಲಿಸಿದ ನಂತರ ಸಾವಿರಾರು ಕುದುರೆಗಳು ಇದೇ ಕೆರೆಯಲ್ಲಿ ಮರೆಯಾದವು ಎಂಬ ನಂಬಿಕೆ. ಈ ಸುಂದರವಾದ ಕೆರೆಯಲ್ಲಿ ಯಾವಾಗಲೂ ಕಮಲದ ಹೂವುಗಳು ತುಂಬಿರುತ್ತಿದ್ದವು. ನಾನು, ನನ್ನ ಅಕ್ಕ ಈ ಕೆರೆಯ ದಂಡೆಗೆ ಇದ್ದ ಮರದಲ್ಲಿ ಆಡಿದ್ದ ನೆನಪು.
ಇಲ್ಲಿಂದ ಮುನ್ನೆಡೆ ಸಾಗುತ್ತಿದ್ದಂತೆಯೇ ಸಿಗುವುದು ತ್ರಿವಿಕ್ರಮ ಸ್ವಾಮಿಯ ದೇವಸ್ಥಾನ. ತ್ರಿವಿಕ್ರಮನ ದೇವಸ್ಥಾನದ ಮುಂದೆ ಕಲ್ಲಿನ ಧ್ವಜ ಸ್ಥಂಭ ಇದೆ. ಗರ್ಭಗುಡಿಯಲ್ಲಿ ತ್ರಿವಿಕ್ರಮನ ಮೂರ್ತಿ, ಕಲ್ಲಿನ ರಥ ಮತ್ತು ಶ್ರೀಲಕ್ಷ್ಮೀದೇವಿಯ ಮೂರ್ತಿ ಇವೆಲ್ಲ ಈ ದೇವಸ್ಥಾನದ ವಿಶೇಷತೆ.
ಮಠದ ಪ್ರಾಂಗಣದಲ್ಲಿ ಧವಳಗಂಗೆ ಎಂಬ ಪುಷ್ಕರಿಣಿಯಿದ್ದು ಇದರ ಸುತ್ತಲೂ ಸಣ್ಣ ಸಣ್ಣ ದೇವಸ್ಥಾನಗಳಿವೆ. ದಕ್ಷಿಣಕ್ಕೆ ಚಂದ್ರಮೌಳೇಶ್ವರ , ಪಶ್ಚಿಮಕ್ಕೆ ವೀರ ಆಂಜನೇಯ, ಉತ್ತರಕ್ಕೆ ವೇಣುಗೋಪಾಲಸ್ವಾಮಿ ಹೀಗೆ ದೇವಸ್ಥಾನಗಳಿಂದ ಸುತ್ತುವರೆದಿದೆ.
ಧವಳಗಂಗೆ ಪುಷ್ಕರಿಣಿಯ ಪೂರ್ವ ದಿಕ್ಕಿಗೆ ಪಂಚ ವೃಂದಾವನವಿದೆ. ಈ ಪಂಚ ವೃಂದಾವನಗಳಲ್ಲಿ ಒಂದಾದ ಮಧ್ಯ ವೃಂದಾವನವೇ ಭಾವೀ ಸಮೀರರಾದ ಶ್ರೀ ವಾದಿರಾಜರ ಮೂಲ ವೃಂದಾವನ. ಶಾರ್ವರಿ ಫಾಲ್ಗುಣ ಕೃಷ್ಣ ಪಕ್ಷ ತ್ರಿತೀಯ ಶಾಲೀವಾಹನ ಶಕೆ 1522ನೇ ಬುಧವಾರ ಸ್ವಾತಿ ನಕ್ಷತ್ರದಲ್ಲಿ ಶ್ರೀ ವಾದಿರಾಜರು ತಮ್ಮ ಆರಾಧ್ಯ ದೇವರಾದ ಶ್ರೀ ಹಯಗ್ರೀವ ದೇವರನ್ನು ಧ್ಯಾನಿಸುತ್ತಾ ವೃಂದಾವನ ಪ್ರವೇಶ ಮಾಡಿದರಂತೆ.
ಶ್ರೀ ವಾದಿರಾಜರ ದರ್ಶನಕ್ಕಿಂತ ಮೊದಲು ಅಲ್ಲಿಯೇ ಇರುವ ಶ್ರೀ ಭೂತರಾಜರ ದರ್ಶನ ಮಾಡಿ ತೆಂಗಿನಕಾಯಿ ಉರುಳಿಸುವ ರೂಢಿ. ಬಂದ ಪ್ರತಿಯೊಬ್ಬ ಭಕ್ತನೂ ತಲಾ ಒಂದು ತೆಂಗಿನಕಾಯನ್ನು ಭೂತರಾಜರಿಗೆ ಉರುಳಿಸಬೇಕು ಎಂಬ ರೂಢಿ. ಇಲ್ಲಿನ ವಿಶೇಷ ಪೂಜೆ ಎಂದರೆ ಭೂತರಾಜರ ಅನ್ನದ ಬಲಿ ಪೂಜೆ. ಅನ್ನದ ರಾಶಿಗೆ ಕೆಂಪು ಕುಂಕುಮದ ನೀರನ್ನು ಹಾಕಿ ಒಡೆದ ತೆಂಗಿನ ಕಾಯಿಯ ಎರೆಡು ಅರ್ಧದಿಂದ ಕಣ್ಣುಗಳನ್ನು ಮಾಡಿ ಅನ್ನದ ರಾಶಿಗೆ ಒಂದು ರೂಪ ಕೊಡುತ್ತಾರೆ. ಈ ಅನ್ನದ ರಾಶಿಗೆ ಪಂಜಿನಿಂದ ಪೂಜೆ ಸಲ್ಲಿಸುತ್ತಾರೆ. ನಂತರ ಉಳಿದ ಕುಂಕುಮದ ನೀರನ್ನು ಅಲ್ಲಿ ನೆರೆದ ಭಕ್ತಾದಿಗಳ ಮೇಲೆ ಪ್ರೋಕ್ಷಣೆ ಮಾಡುತ್ತಾರೆ. ಪ್ರತಿದಿನ ಸಂಜೆ 6 ರಿಂದ 7 ರ ವರೆಗೂ ನಡೆಯುವ ಈ ವಿಶೇಷ ಪೂಜೆ ನೋಡಲು ಬಹಳ ಸುಂದರವಾಗಿರುತ್ತದೆ .
ಸೋಂದೆ ಕ್ಷೇತ್ರದಲ್ಲಿ ಭೂತರಾಜರಿಗೆ ವಿಶೇಷ ಸ್ಥಾನವಿದೆ. ಅದು ಏಕೆ ಎಂದು ತಿಳಿಯಲು ಇದರ ಹಿಂದಿನ ಕಥೆ ತಿಳಿಯಲೇಬೇಕು.
ಒಮ್ಮೆ ವ್ಯಾಸರಾಜರು ವಾದಿರಾಜರ ಮಠಕ್ಕೆ ಭೇಟಿನೀಡುತ್ತಾರೆ. ಅಂದು ದ್ವಾದಶಿ ಪಾರಣೆಗೆ ಕುಳಿತ ವ್ಯಾಸರಾಜರು ತಮ್ಮ ಶಿಷ್ಯರಾದ ವಾದಿರಾಜರು ಬರುವತನಕ ಆಹಾರ ಸ್ವೀಕರಿಸುವುದಿಲ್ಲ ಎಂದು ಹೇಳುತ್ತಾರೆ. ತಮ್ಮ ಗುರುಗಳನ್ನು ಊಟಕ್ಕೆ ಕಾಯಿಸುವುದು ಸೂಕ್ತವಲ್ಲ ಎಂದು ವಾದಿರಾಜರು ತಮ್ಮ ಪೂಜೆಗೆ ಮುನ್ನವೇ ವ್ಯಾಸರಾಜರ ಜೊತೆ ಪಾರಣೆ ಮಾಡುತ್ತಾರೆ. ನಂತರ ಕೂಡಲೇ ಶಿಷ್ಯರು ಯಾರು ತಮ್ಮ ಜೊತೆಗೆ ಬರಬಾರದು ಎಂದು ಆಜ್ಞೆ ಕೊಟ್ಟು ತಾವೊಬ್ಬರೇ ತಪೋವನದಕಡೆ ಹೊರಡುತ್ತಾರೆ, ಶಾಲ್ಮಲಾ ನದಿಯ ತೀರದಲ್ಲಿ ಕೂತು ತಾವು ಉಂಡ ಆಹಾರ ಹೊಟ್ಟೆಯ ತನಕ ಹೋಗಲು ಬಿಡದೆ ತಮ್ಮ ಯೋಗಶಕ್ತಿಯಿಂದ ಬಾಳೆಎಲೆಯ ಮೇಲೆ ಆಗತಾನೆ ಬಡಿಸಿದ್ದ ರೂಪಕ್ಕೆ ತರುತ್ತಾರೆ. ನಂತರ ತಮ್ಮ ಪೂಜೆ ಮಿಗಿಸಿ ಭೋಜನ ಸ್ವೀಕರಿಸುತ್ತಾರೆ.
ವಾದಿರಾಜರ ಆತ್ಮೀಯ ಶಿಷ್ಯನಾದ ನಾರಾಯಣ ಶರ್ಮ ಇದನ್ನೆಲ್ಲಾ ಮರೆಯಲ್ಲಿ ನಿಂತು ನೋಡುತ್ತಾನೆ. ತಮ್ಮ ಕಾರ್ಯ ಮುಗಿಸಿ ಹಿಂದಿರುಗುತ್ತಿದ್ದ ವಾದಿರಾಜರನ್ನು ನಾರಾಯಣ ಶರ್ಮ ಅಡ್ಡ ಹಾಕಿ ಗುರುಗಳೇ ನೀವು ಮಾಡಿದ್ದನ್ನೆಲ್ಲ ನಾನು ನೋಡಿದೆ ಎಂದು ಹೇಳುತ್ತಾನೆ. ಇದರಿಂದ ಕುಪಿತಗೊಂಡ ವಾದಿರಾಜರು ನಾರಾಯಣ ನೀನು ರಾಕ್ಷಸ ರೂಪ ತಾಳು ಎಂದು ಶಪಿಸುತ್ತಾರೆ.
ನಾರಾಯಣ ಶರ್ಮನಿಗೆ ತನ್ನ ತಪ್ಪಿನ ಅರಿವಾಗಿ ವಾದಿರಾಜರಲ್ಲಿ ಕ್ಷಮೆಯಾಚಿಸುತ್ತಾನೆ. ಇದಕ್ಕೆ ಪರಿಹಾರ ಹೇಳಿ ಗುರುಗಳೇ ಎಂದು ಗೋಗರೆಯುತ್ತಾನೆ. ಅದಕ್ಕೆ ವಾದಿರಾಜರು ಈ ಕಾಡಿನಲ್ಲಿ ಸದಾ ತಿರುಗಾಡುತ್ತ ಇಲ್ಲಿಗೆ ಬರುವವರಿಗೆ " ಆ ಕಾ ಮಾ ವೈ ..ಕೊ ನ ಸ್ನಾಹಿತಃ ?" ಎಂಬ ಪ್ರಶ್ನೆ ಕೇಳುತ್ತಿರು . ಯಾರಾದರೂ ಸರಿಯಾದ ಉತ್ತರ ಕೊಟ್ಟರೆ ಆ ಕ್ಷಣವೇ ನಿನ್ನ ಶಾಪ ವಿಮೋಚನೆ ಎಂದು ಹೇಳುತ್ತಾರೆ.
ಅಂದಿನಿಂದ ನಾರಾಯಣ ಶರ್ಮನು ಕಾಡಿನಲ್ಲಿ ಹೋಗುವ ಬರುವ ಯಾತ್ರಿಗಳನ್ನು ನಿಲ್ಲಿಸಿ ಅವರಿಗೆ ಪ್ರಶ್ನೆ ಕೇಳುತ್ತಿದ್ದ. ಸರಿಯಾದ ಉತ್ತರ ಸಿಗದೇ ಹೋದಲ್ಲಿ ಅವರನ್ನು ಕೊಂದು ತಿನ್ನುತ್ತಿದ್ದ. ತಮ್ಮ ಭಕ್ತರ ಹಾಗೂ ಶಿಷ್ಯನ ಈ ಗತಿ ನೋಡಲಾಗದೆ ವಾದಿರಾಜರು ತಾವೇ ಆತನ ಮುಂದೆ ಬಂದು ನಿಲ್ಲುತ್ತಾರೆ. ಆಗ ರಾಕ್ಷಸ ರೂಪದಲ್ಲಿದ್ದ ನಾರಾಯಣ ಶರ್ಮ ತನ್ನ ಗುರುಗಳನ್ನು ಗುರುತಿಸದೆ ಅವರಿಗೂ ಅದೇ ಪ್ರಶ್ನೆ ಕೇಳುತ್ತಾನೆ. ಆಗ ವಾದಿರಾಜರು " ರಂಡ ಪುತ್ರ ತ್ವಮ ನ ಸ್ನಾತಹ " ಎಂದು ಉತ್ತರಿಸುತ್ತಾರೆ. ಇದರ ಅರ್ಥ: ವೇಶ್ಯಾ ಪುತ್ರ ಅಥವಾ ನಿನ್ನಂತಹ ಬ್ರಹ್ಮರಾಕ್ಷಸ (ಆ ಅಂದರೆ ಆಶ್ವಯುಜ ಮಾಸ, ಕಾ ಅಂದರೆ ಕಾರ್ತಿಕ ಮಾಸ, ಮಾ ಅಂದರೆ ಮಾಘ ಮಾಸ, ವೈ ಅಂದರೆ ವೈಶಾಖ ಮಾಸ ) ಈ ನಾಲ್ಕು ಮಾಸಗಳಲ್ಲಿ ಸ್ನಾನ ಮಾಡುವುದಿಲ್ಲ.
ನಾರಾಯಣ ಶರ್ಮನಿಗೆ ತಕ್ಷಣ ಶಾಪ ವಿಮೋಚನೆಯಾಗಿ ತನ್ನ ಮೂಲ ರೂಪ ಪತ್ರತಾಪ ರುದ್ರನ ಸ್ವರೂಪ ತಾಳುತ್ತಾನೆ. ಆಗ ಅವನ ದೇಹ ಮುಳುಗುತ್ತಿರುವ ಕೆಂಪು ಸೂರ್ಯನಂತೆ ಪ್ರಜ್ವಲಿಸುತ್ತಿತ್ತು. ವಾದಿರಾಜರಿಗೆ ಸಾಷ್ಟಾಂಗ ನಮಸ್ಕಾರ ಹಾಕಿದಾಗ ನೀನು ಭಾವೀ ರುದ್ರನಾಗುವೆ ಮತ್ತು ಸೋಂದೆ ಕ್ಷೇತ್ರದ ಕ್ಷೇತ್ರ ಪಾಲಕನಾಗಿ ಭೂತರಾಜರು ಎಂದು ಪ್ರಸಿದ್ಧಿ ತಾಳುವೆ ಎಂದು ಆಶೀರ್ವದಿಸುತ್ತಾರೆ. ಅಂದಿನಿಂದ ಇಂದಿನ ವರೆಗೂ ಭೂತರಾಜರು ವಾದಿರಾಜರ ಸೇವೆ ಸಲ್ಲಿಸುತ್ತಲೇ ಇದ್ದಾರೆ. ಈ ತರಹದ ಎಷ್ಟೋ ಕಥೆಗಳು ಕೇಳ ಸಿಗುತ್ತವೆ.
ಸೋಂದೆ ಇಂದ ೩-೪ ಕಿ ಮೀ ದೂರದಲ್ಲಿ ಶಾಲ್ಮಲಾ ನದಿಯ ತೀರದಲ್ಲಿ ವಾದಿರಾಜರು ತಪಸ್ಸು ಮಾಡಿದ ಜಾಗವಿದೆ. ಈ ಜಾಗಕ್ಕೆ ತಪೋವನ ಎಂದು ಹೆಸರು. ಭಕ್ತಾದಿಗಳನ್ನು ಮಾತ್ರವಲ್ಲ ಪ್ರಕೃತಿ ಪ್ರಿಯರನ್ನೂ ತನ್ನೆಡೆ ಸೆಳೆಯುವಂಥ ಸ್ಥಳವಿದು.
ಸಣ್ಣವರಿದ್ದಾಗ ನಮ್ಮ ಅಜ್ಜಿಯ ಅನಂತನ ವ್ರತದ ಉದ್ಯಾಪನೆಗೆ ಹೋಗಿದ್ದ ನೆನಪು. ಆಗ ಅಲ್ಲಿ ಯಾವುದೇ ಬಗೆಯ ಹೆಚ್ಚಿನ ವ್ಯವಸ್ಥೆ ಇರಲಿಲ್ಲ. ಭಕ್ತಾದಿಗಳಿಗೆ ಇಳಿದುಕೊಳ್ಳಲು ಪ್ರತ್ಯೇಕ ಕೋಣೆ, ಸ್ನಾನಗೃಹ ಏನೂ ಇರಲಿಲ್ಲ. ಆದರೆ ಈಗ ಭಕ್ತಾದಿಗಳಿಗೆ ಇಳಿದು ಕೊಳ್ಳಲು ಹಲವಾರು ಕೋಣೆಗಳು, ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಎಲ್ಲವೂ ಇದೆ. ಸಣ್ಣವರಿದ್ದಾಗ 4 ಕಿ ಮೀ ಕಾಡಿನಲ್ಲಿ ನಡೆದುಕೊಂಡು ತಪೋವನಕ್ಕೆ ಹೋಗಿದ್ದ ನೆನಪು. ಆಗ ಕಾಡಿನಲ್ಲಿ ದಾರಿಯುದ್ದಕ್ಕೂ ಕರಿಬೇವಿನ ಗಿಡಗಳು ಸಿಕ್ಕಿದ್ದವು. ಈಗ ರಸ್ತೆಗಳಾಗಿ ತಪೋವನಕ್ಕೆ ಹೋಗುವುದು ಇನ್ನೂ ಸುಲಭವಾಗಿದೆ. ಮುಕ್ಕಾಲು ಪಾಲು ದಾರಿ ವಾಹನದಲ್ಲಿ ಹೋಗಿ ಉಳಿದದ್ದು ಕಾಲ್ನಡಿಗೆಯಲ್ಲಿ ಮುಗಿಸ ಬಹುದು.
ಸೋಂದೆಯ ಸುತ್ತಮುತ್ತಲೂ ಇನ್ನೂ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಸಹಸ್ರಲಿಂಗ
,ಸ್ವರ್ಣವಲ್ಲೀ ಮಠ, ವೆಂಕಟರಮಣ ದೇವಸ್ಥಾನ ಇನ್ನೂ ಮುಂತಾದವು.
ಸೋಂದೆಗೆ ಹೋಗುವುದು ಅಲ್ಲಿ ವಾದಿರಾಜರ ದಶ೯ನ, ಭೂತರಾಜರ ಅನ್ನದ ಬಲಿ ಪೂಜೆ, ತಪೋವನದ ಮನೋಹರ ದೃಶ್ಯ ಇವೆಲ್ಲಾ ಮನಸ್ಸಿಗೆ ಶಾಂತಿ ಹಾಗೂ ಮುದ ನೀಡುತ್ತವೆ.
ಈ ವರೆಗೂ ಕಾಪಾಡಿಕೊಂಡು ಬಂದ ಈ ಪುಣ್ಯಕ್ಷೇತ್ರದ ಶುದ್ಧತೆ, ಪವಿತ್ರತೆ, ಇನ್ನು ಮುಂದೆಯೂ ಹೀಗೆ ಉಳಿದಿರಲಿ ಎಂದು ಆಶಿಸುತ್ತೇನೆ.
ತಪೋ ವಿದ್ಯಾ ವಿರಾಕ್ತ್ಯಾದಿ ಸದ್ಗುಣೋ ಘಾಕರಾನಹಮ್|
ವಾದಿರಾಜ ಗುರುಂ ವಂದೇ ಹಯಗ್ರೀವ ಪದಾಶ್ರಯಾನ್ ||
ಭೂತರಾಜ ನಮಸ್ತುಭ್ಯಮ್ ವಾದಿರಾಜ ಗುರೋಃಪ್ರಿಯಾಹಾ|
ವಿದ್ರಾವ್ಯ ಸರ್ವ ಬಾದಮ್ನಹ ಸದಾತ್ವಮ್ ರಕ್ಷಣಂ ಕುರು ||
Comments
Post a Comment