ಯೋಗ ದಿನ

ಯೋಗ ದಿನ 

ಲೇಖನ - ಡಾ ಆನಂದ ಬುಕ್ಕಾಂಬುಧಿ 

 ಯೋಗ ಎನ್ನುವ ಪದಕ್ಕೆ ಸಂಸ್ಕೃತದಲ್ಲಿ ಯುಜ್ ಎಂಬುದು ಧಾತು. ಯುಜ್ ಎಂದರೆ ಸೇರುವುದು, ಒಂದಾಗುವುದು, ಒಟ್ಟಾಗುವುದು ಎಂದೆಲ್ಲ ಅರ್ಥ ಉಂಟು. ಹಾಗಾಗಿ ಯೋಗಾಭ್ಯಾಸದಿಂದ ಜೀವಾತ್ಮ ಪರಮಾತ್ಮನೊಡನೆ ಒಂದಾಗುವುದು ಎಂದರ್ಥ. ಅಂದರೆ ಸಾಮಾನ್ಯ ಮನುಷ್ಯನೊಬ್ಬ ನಿರಂತರವಾಗಿ  ಶಾಸ್ತ್ರೀಯವಾಗಿ ಗುರುಗಳು ಹೇಳಿದಂತೆ ಯೋಗ ಮಾಡುತ್ತಾ ಹೋದಾಗ ಕಡೆಯಲ್ಲಿ ಅತ್ಯಂತ ಹೆಚ್ಚಿನ ಜ್ಞಾನ ಸಂಪಾದನೆ ಮಾಡಿ ದೇವರೇ ಆಗುವುದು ಎಂದರ್ಥ. ಇದನ್ನೇ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವುದು. ಅಲ್ಲಿನ ಹದಿನೆಂಟು ಅಧ್ಯಾಯಗಳನ್ನು ಕರ್ಮಯೋಗ, ಭಕ್ತಿಯೋಗ ಮತ್ತು ಜ್ಞಾನಯೋಗ ಎಂದು ವಿಂಗಡಿಸಿದರೂ ಅವು ಯಾವೂ ಸ್ವತಂತ್ರವಲ್ಲ. ಕರ್ಮ ಮಾಡಲೇಬೇಕು, ಭಕ್ತಿ ಇರಲೇಬೇಕು. ಆಗಲೇ ಜ್ಞಾನಪ್ರಾಪ್ತಿ. ಅಂತೆಯೇ ಆಸನಪ್ರಾಣಾಯಾಮಗಳು ಧ್ಯಾನ ಸಮಾಧಿಯಲ್ಲಿ ಕೊನೆಗೊಳ್ಳುತ್ತವೆ. ಆದ್ದರಿಂದ ಯೋಗ ಮಾಡುವ ಯೋಗ ನಮಗೆಲ್ಲರಿಗೂ ಬರಲಿ.  

ಯೋಗ ಅಂದರೇನು?

"ಯೋಗಃ ಕರ್ಮಸು ಕೌಶಲಂ" ಎಂದು ಗೀತೆಯಲ್ಲಿ (೨-೫೦) ಗೀತಾಚಾರ್ಯನೇ ಹೇಳಿದ್ದಾನೆ. ಅಂದರೆ ತಾನು ಮಾಡುವ ಯಾವುದೇ ಕೆಲಸವನ್ನು ತನ್ಮಯತೆ ಮತ್ತು ಶ್ರದ್ಧೆಯಿಂದ ಮಾಡಿದರೆ ಅದೇ ಯೋಗ. ಆ ರೀತಿ ಮಾಡಿದವನೇ ಯೋಗಿ. ಉದಾಹರಣೆ: ಡಾಕ್ಟರ್, ಸಮಾಜಸೇವಕ, ಬೀದಿ ಕಸ ಗುಡಿಸುವವ ಹೀಗೆ ಸಮಾಜದ ಯಾವುದೇ ವರ್ಗದ ಕಾರ್ಮಿಕನಿರಬಹುದು. ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸವನ್ನು ಶ್ರದ್ಧೆಯಿಂದ, ಏಕಾಗ್ರತೆಯಿಂದ ಮಾಡಿದರೆ ಆತ ಯೋಗಿ ಎನಿಸುತ್ತಾನೆ. 

"ಸಮತ್ವಮ್ ಯೋಗ ಉಚ್ಯತೇ" (೨-೪೮) ಎಂದೂ ಗೀತೆಯಲ್ಲಿ ಹೇಳಿದೆ. ಸಮಭಾವವೇ ಯೋಗ ಎಂದು ಇದರ ಅರ್ಥ. ಕಷ್ಟದಲ್ಲೂ, ಸುಖದಲ್ಲೂ ದುಃಖದಲ್ಲೂ, ಸಂತೋಷದಲ್ಲೂ ಒಂದೇ ರೀತಿಯ ವರ್ತನೆ ಮತ್ತು ಭಾವದಿಂದ ಇರುವುದೇ ಯೋಗ. 


"ದುಃಖ ಸಂಯೋಗ ವಿಯೋಗಮ್ ಯೋಗ ಸಂಙಿತಮ್" (೬-೨೩) ಎಂದಿದೆ ಗೀತೆ. ಅಂದರೆ ದುಃಖದ ಮೂಲದಿಂದ ದೂರವಿರುವುದೇ ಯೋಗ. 

"ಯೋಗಃ ಚಿತ್ತ ವೃತ್ತಿ ನಿರೋಧಃ" ಎಂದು ಪತಂಜಲಿ ಯೋಗ ಸೂತ್ರದಲ್ಲಿ ಹೇಳಿದೆ. ನಮ್ಮ ಮನಸ್ಸಿನಲ್ಲಿ ಬರುವ ಅನೇಕ ಯೋಚನೆಗಳು, ನೂರಾರು ಕಲ್ಪನೆಗಳು ಇವುಗಳೆಲ್ಲಾ ಸಂಪೂರ್ಣವಾಗಿ ನಾಶವಾಗಿ ಮನಸ್ಸನ್ನು ಶಾಂತಸ್ತಾತಿಗೆ ತರುವುದೇ ಯೋಗ. 

"ಮನಃ ಪ್ರಶಮನೋ ಪಾಯಃ ಯೋಗಃ ಇತ್ಯಭಿಧೀಯತೇ" ಎಂದು ಯೋಗವಾಸಿಷ್ಠದಲ್ಲಿ ಹೇಳಿದೆ. ಅಂದರೆ ಮನಸ್ಸಿನ ತರಂಗಗಳನ್ನು ಶಾಂತಗೊಳಿಸುವ ಉಪಾಯವೇ ಯೋಗ ಎಂದು ವಸಿಷ್ಠ ಮಹರ್ಷಿಗಳು ಶ್ರೀರಾಮಚಂದ್ರನಿಗೆ ಹೇಳಿರುತ್ತಾರೆ. 

ತಮ್ಮ ಮೇರುಕೃತಿ ಮಂಕುತಿಮ್ಮನ ಕಗ್ಗದ ೨೪೧ನೇ ಮುಕ್ತಕದಲ್ಲಿ ಸನ್ಮಾನ್ಯ ಡಿವಿಜಿಯವರು ಜೀವನದಲ್ಲಿ ವಿಧಿ ನೀಡುವ ಘೋರ ಸಂಸಾರದ ಅಸಮತೆಯ ಪರೀಕ್ಷೆಯಲ್ಲಿ ಸಮತೆ ಮತ್ತು ವಿನೋದವನ್ನು ಕಾಣುವ ರಸಿಕತೆಯೇ ಯೋಗ ಎಂದಿದ್ದಾರೆ. 

ಯೋಗಕ್ಕೆ ಪಾತ್ರರು ಯಾರು?

       ಯುವಾ ವೃದ್ಧೋತಿ ವೃದ್ಧೋವಾ । ವ್ಯಾಧಿತೋ  ದುರ್ಬಲೋಪಿವಾ ॥ ಅಭ್ಯಾಸಾತ್ ಸಿದ್ಧಿಮಾಪಿಣೋತಿ । ಸರ್ವ ಯೋಗೇಷು ತಂದ್ರಿತಃ ॥ ಎಂದು ಹಠಯೋಗ ದೀಪಿಕೆಯಲ್ಲಿ ಹೇಳಿದೆ. ಪ್ರಾಯದವರಾಗಲಿ, ಮುದುಕರಾಗಲಿ, ಹಣ್ಣುಹಣ್ಣು ಮುದುಕರಾಗಲಿ ರೋಗಿಗಳಿರಲಿ ದುರ್ಬಲ (ಅಂಗವಿಕಲರು) ರಿರಲಿ ಸೋಮಾರಿತನವಿಲ್ಲದೆ ಸರಿಯಾದ ಹಾದಿಯಲ್ಲಿ ಯೋಗಾಭ್ಯಾಸ ಮಾಡಿದರೆ ಪರಿಪೂರ್ಣತೆಯನ್ನು ಪಡೆದು ಅಪೇಕ್ಷಿಸಿದ ಫಲಸಿದ್ಧಿಯನ್ನು ಪಡೆಯಬಹುದು. ಶರೀರ ಮತ್ತು ಮನಸ್ಸು ಇರುವವರೆಲ್ಲರೂ ಯೋಗಾಭ್ಯಾಸಕ್ಕೆ ಯೋಗ್ಯರು. 

ಯೋಗ ಅನ್ನುವುದು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಇದ್ದ ಪತಂಜಲಿ ಮಹರ್ಷಿಗಳಿಂದ ನಮಗೆ ಬಂದಿದ್ದು ಎಂಬುದು ಸಾಮಾನ್ಯ ನಂಬಿಕೆಯಾದರೂ ಯೋಗ, ಯೋಗಾಭ್ಯಾಸ ಎನ್ನುವುದು ಮಹರ್ಷಿಗಳಿಗಿಂತ ಮುಂಚೆಯೇ ಅಸ್ತಿತ್ವದಲ್ಲಿದ್ದವು. ಮಹರ್ಷಿ ವೇದವ್ಯಾಸರು ಮೊದಲೇ ಇದ್ದ ವೇದಗಳನ್ನು ವಿಂಗಡಿಸಿದರು ಅಷ್ಟೇ. ಅದೇ ರೀತಿಯಲ್ಲಿ ಪತಂಜಲಿ ಮಹರ್ಷಿಗಳು ಆಗ ಪ್ರಚಲಿತವಾಗಿದ್ದ ಬರವಣಿಗೆಯಲ್ಲಿಲ್ಲದ ಯೋಗಾಭ್ಯಾಸದ ಪದ್ಧತಿಗಳನ್ನು ಸಂಗ್ರಹ ಮಾಡಿದರು. ಆಗಿನ ಜನರು ಸಂತೋಷವಾಗಿದ್ದಂತೆ ಮುಂದೆ ಜನರು ಇರುವುದಿಲ್ಲ ಎಂಬುದರ ಅರಿವಾದೊಡನೆ ಲೋಕಕ್ಕೆ ಅದು ಯಾವ ರೀತಿಯಲ್ಲಿಯೂ ವಂಚನೆಯಾಗಬಾರದೆಂದು ಸಂಗ್ರಹವನ್ನು ಬರವಣಿಗೆಯ ರೂಪದಲ್ಲಿ ಇರಿಸಲು ಮುಂದಾದರು. ಆದರೆ ಅದು ಅತ್ಯಂತ ದೊಡ್ಡದು ಎನಿಸಿ ಅದರ ಸಾರಾಂಶವನ್ನೆಲ್ಲ ೧೯೬ ಸೂತ್ರಗಳಲ್ಲಿ ಕರುಣಿಸಿದರು. ಸೂತ್ರ ಅಂದರೆ ಅತ್ಯಂತ ಕನಿಷ್ಠ ಪದಗಳಲ್ಲಿ ಅಷ್ಟನ್ನೂ ಹೇಳುವುದು. 

ಆ ೧೯೬ ಸೂತ್ರಗಳನ್ನು ನಾಲ್ಕು ಅಧ್ಯಾಯಗಳಾಗಿ ವಿಂಗಡಿಸಿದ್ದಾರೆ. ಅವುಗಳನ್ನು ಪದಗಳು ಎಂದು ಕರೆಯುತ್ತಾರೆ. ಮೊದಲನೆಯದು ಸಮಾಧಿ ಪದಗಳು. ಇದರಲ್ಲಿ ೫೧ ಸೂತ್ರಗಳಿವೆ. ಹೇಗೆ ಒಬ್ಬ ಯೋಗಿ ಧ್ಯಾನ ಮತ್ತು ಏಕಾಗ್ರತೆಯಿಂದ ಜ್ಞಾನ ಸಂಪಾದಿಸಬಹುದು ಎಂಬುದೇ ಇಲ್ಲಿರುವ ಮುಖ್ಯ ಅಂಶ. ಅದೇ ಅವರ ಮೊದಲ ಸೂತ್ರಗಳು ಎಂದರೆ ನಮಗೆ ಆಶ್ಚರ್ಯವಾದರೂ ಅದು ಆಗಿನ ಜನರ ಮನೋಸ್ಥಿತಿಗಳನ್ನು ತಿಳಿಸುತ್ತದೆ. ಎರಡನೆಯದು ಸಾಧನಾ ಪದಗಳು. ೫೫ ಸೂತ್ರಗಳಿಂದಾ ಕೂಡಿರುವ ಈ ಭಾಗದಲ್ಲಿಯೇ ನಮ್ಮ ಚಿರ ಪರಿಚಿತ ಅಷ್ಟಾಂಗ ಯೋಗದ ಬಗ್ಗೆ ಹೇಳಿರುವುದು. ಅಷ್ಟಾಂಗ ಎಂದರೆ ಎಂಟು ಅಂಗಗಳು. ಅವು ಕ್ರಮವಾಗಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ,ಧ್ಯಾನ ಮತ್ತು ಸಮಾಧಿ. ಮೂರನೆಯದಾದ ವಿಭೂತಿ ಪದಗಳಲ್ಲಿ ೫೬ ಸೂತ್ರಗಳಿವೆ. ಈ ಸೂತ್ರಗಳಲ್ಲಿ ಧ್ಯಾನ ಮತ್ತು ಸಮಾಧಿ ಅಂಗಗಳ ಬಗ್ಗೆ ವಿಶೇಷ ಒತ್ತು ನೀಡಲಾಗಿದೆ. ಕಡೆಯದು ಕೈವಲ್ಯ ಪದಗಳು. ಇದರಲ್ಲಿರುವ ೩೪ ಸೂತ್ರಗಳು ಎಲ್ಲ ಯೋಗಿಗಳೂ ಹಾತೊರೆಯುವ ಕಟ್ಟಕಡೆಯ ಅನಂತ ಶಾಶ್ವತ ಸುಖವಾದ ಕೈವಲ್ಯ ಸಂಪಾದನೆಯ ಕುರಿತು ಹೇಳಲಾಗಿದೆ. ಆದ್ದರಿಂದ ಯೋಗ ಎನ್ನುವುದು ಕೇವಲ ದೇಹಕ್ಕೆ ಸಂಬಂಧ ಪಟ್ಟ ಆಸನಗಳಷ್ಟೇ ಎಲ್ಲ, ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯಗಳನ್ನು ಕಾಪಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯೋಗಾಭ್ಯಾಸ ಮಾಡಬೇಕಾದರೆ ಆ ಸೂತ್ರಗಳನ್ನು ಅಭ್ಯಾಸ ಮಾಡಬೇಕೆ ಮೊದಲು ಎಂಬ ಸಂಶಯ/ಅನುಮಾನ ಬೇಡ. ಯೋಗಪಟುತ್ವ ಸೂತ್ರಗಳ ಜ್ಞಾನವನ್ನು ಅವಲಂಬಿಸಿಲ್ಲ. ಅದಿಲ್ಲದೆಯೂ ನುರಿತ ಗುರುಗಳಿಂದ ಯೋಗಾಭ್ಯಾಸ ಮಾಡಿ ಆರೋಗ್ಯ ಕಾಪಾಡಿಕೊಳ್ಳಬಹುದು. 

ನಮ್ಮ ಸದ್ಯದ ಜೀವನಶೈಲಿಗೆ ಅಷ್ಟಾಂಗ ಯೋಗ ಸಾಕು. ಅದರಲ್ಲಿಯೂ ೩ ಮತ್ತು ೪ನೇ ಹಂತಗಳಾದ ಆಸನ ಮತ್ತು ಪ್ರಾಣಾಯಾಮಗಳು. ಅದರಲ್ಲಿ ಸಾಕಷ್ಟು ಪರಿಣಿತಿ ಬಂದಮೇಲೆ ಗುರುಗಳೇ ಮುಂದಿನ ದಾರಿ ತೋರಿಸುತ್ತಾರೆ. ಮೊದಲೆರಡು ಹಂತಗಳಾದ ಯಮನಿಯಮಗಳ ಅಭ್ಯಾಸ ನಮಗೆ ತುಂಬಾ ಮುಖ್ಯ. ಕೆಲವನ್ನು ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಳವಡಿಸಿಕೊಂಡಿರುತ್ತೇವೆ. ಯಮ ಅಂದರೆ ಮಾಡಲೇಬೇಕಾದವುಗಳು. ನಿಯಮ ಅಂದರೆ ಮಾಡಲೇಬಾರದಿರುಗಳು. ಈ ಎರಡರಲ್ಲಿ ಮುಖ್ಯವಾದ ಆಹಾರ ಸೇವನೆ ಅಂದರೆ ಯಾವ ರೀತಿಯ ಆಹಾರ, ಅದರ ತಯಾರಿಕೆ, ಯಾವಾಗ ಸೇವಿಸಬೇಕು, ಎಷ್ಟು ಸೇವಿಸಬೇಕು, ಯಾವ ಜಾಗದಲ್ಲಿ, ಯಾವ ಭಂಗಿಯಲ್ಲಿ, ಯಾರ ಜೊತೆಯಲ್ಲಿ, ಎಂಥ ಮನಸ್ಸಿನಿಂದ ಸೇವಿಸಬೇಕು ಎಂಬುದೆಲ್ಲವೂ ಸೇರಿರುತ್ತದೆ. ನಾವು ಸೇವಿಸುವ ಆಹಾರವೇ ರಕ್ತಕ್ಕೆ ಪರಿವರ್ತನೆಯಾಗಿ ಶರೀರದ ಮತ್ತು ಬುದ್ಧಿಯ ಬೆಳವಣಿಗೆಗೆ ಕಾರಣವಾಗುತ್ತದೆ. 

ಯೋಗ ಮಾಡುವುದರಿಂದ ಕೈಕಾಲುಗಳ ಜಡತೆ ಬಿಟ್ಟುಹೋಗುತ್ತದೆ ಎಂಬುದು ನಮ್ಮ ಸಾಮಾನ್ಯ ಅನುಭವ. ಆದರೆ ಅದರ ಹಿಂದೆ ಶರೀರದಲ್ಲಿ ನಮಗೆ ಕಾಣದಂತೆ ನಡೆಯುವ ಪ್ರಕ್ರಿಯೆಗಳಲ್ಲಿ ಪರೀಕ್ಷೆ ಮಾಡುವುದು ನಮ್ಮ ಪೂರ್ವಿಕರ ಅಗಾಧ ಜ್ಞಾನದ ಬಗ್ಗೆ ವಿಸ್ಮಯ ಮೂಡಿಸುತ್ತದೆ. ಮಾನವ ದೇಹದಲ್ಲಿ ಒಟ್ಟು ಸಪ್ತ ಧಾತುಗಳಿವೆ ಎಂದು ಯೋಗವೂ ಆಯುರ್ವೇದವೂ ಹೇಳುತ್ತವೆ. ಮೊದಲ ಧಾತು ರಸ (ಪ್ಲಾಸ್ಮ). ಇದು ದೇಹದ ಪೋಷಣೆಗೆ ಸಂಬಂಧ ಪಟ್ಟಿದ್ದು. ಎರಡನೆಯದು ರಕ್ತ. ಇದರ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ರಕ್ತ ಚಾಲನೆ ಸರಿಯಾಗಿದ್ದರೆ ಹೃದ್ರೋಗ ಮತ್ತು ತಟಸಂಬಂಧಿತ ಅನೇಕ ರೋಗಗಳು ದೂರವಿರುತ್ತವೆ. ಮೂರನೆಯದು ಮಾಂಸ. ಇದು ದೇಹದ ಚಲನೆಗೆ ಮುಖ್ಯ. ಮಾಂಸ ಕ್ಷೀಣವಾದರೆ ದೇಹದಲ್ಲಿ ಶಕ್ತಿಯಿರುವುದಿಲ್ಲ. ಇದರಿಂದಾಗಿಯೇ ಶರೀರಕ್ಕೆ ಆಕಾರ ಮೂಡುವುದು. ನಾಲ್ಕನೇ ಧಾತು ಮೇಧಾ. (ಫ್ಯಾಟ್) ದೇಹದಲ್ಲಿ ಮೇಧಾ ಅಂಶ ಎಷ್ಟು ಇರಬೇಕೋ ಅಷ್ಟು ಇರಲೇಬೇಕು. ಇದು ಜಾಸ್ತಿಯಾದರೂ ಕಷ್ಟ, ಕಡಿಮೆಯಾದರೂ ಕಷ್ಟ. ಅಲ್ಲದೆ ಮೇಧಾಶಕ್ತಿ ಮೂಳೆಗಳ ಚಲನೆಯನ್ನು ನಯಗೊಳಿಸುತ್ತದೆ (ಲ್ಯೂಬ್ರಿಕ್ಯಾಂಟ್). ಐದನೆಯದು ಅಸ್ತಿ. ಅಸ್ತಿ ಅಂದರೆ ಮೂಳೆಗಳು. ಇವೆ ಶರೀರದ ಚಲನೆಗೆ ಮುಖ್ಯ ಆಧಾರ.ಆರನೆಯ ಧಾತು ಮಜ್ಜಾ ಅಂದರೆ ಬೋನ್ ಮ್ಯಾರೋ. ಇದರಲ್ಲಿಯೇ ರಕ್ತಕಣಗಳ ಉತ್ಪಾದನೆ ಆಗುವುದು. ಕಡೆಯ ಧಾತು ಶುಕ್ರ - ಉತ್ತಮ ಸಂತಾನೋತ್ಪತ್ತಿಗೆ ಬೇಕಾದ ಲೈಂಗಿಕ ಹಾರ್ಮೋನುಗಳು. ಈ ಏಳೂ ಧಾತುಗಳು ಪರಸ್ಪರಾವಲಂಬಿಗಳಾಗಿದ್ದು ಒಂದರಿಂದ ಮತ್ತೊಂದು ಶಕ್ತಿ ಪಡೆಯುತ್ತದೆ.ಯಾವುದೇ ಒಂದು ಧಾತು ಮಿಕ್ಕ ಧಾತುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ದೇಹ ಅನಾರೋಗ್ಯದಿಂದ ಬಳಲುತ್ತಿದೆ ಎಂದರೆ ವಾತ, ಪಿತ್ತ, ಕಫಗಳ ದೋಷದಿಂದ ಆಗಿದೆ ಎಂಬುದು ಈಗ ಸಾಮಾನ್ಯ ಜ್ಞಾನ. ಆದ್ದರಿಂದ ನಿರಂತರ ಯೋಗಾಭ್ಯಾಸದಿಂದ ಇವುಗಳೆಲ್ಲವನ್ನೂ ಸಮತೋಲನದಲ್ಲಿತ್ತು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. 

(ಅಂತರರಾಷ್ಟ್ರೀಯ ಯೋಗ ದಿನದಂದು ಖ್ಯಾತ ದಂತವೈದ್ಯೆ ಡಾಕ್ಟರ್ ಹೆಚ್ ಎನ್ ಶೈಲಾ, ವೈದ್ಯಕೀಯ ನಿರ್ವಹಣಾಧಿಕಾರಿ, ರಾಷ್ಟ್ರೋತ್ಥಾನ ಆಸ್ಪತ್ರೆ, ರಾಜರಾಜೇಶ್ವರಿ ನಗರ ಮಾಡಿದ ಭಾಷಣದ ಸಾರಾಂಶ)


Comments