ಚಾಂಗಿಯ ಕಾಡಿದರೇನು

ಚಾಂಗಿಯ ಕಾಡಿದರೇನು;

 ಹಾಸ್ಯ ಲೇಖನ - ಅಣಕು ರಾಮನಾಥ್  



ಚಾಂಗಿಯ ಕಾಡಿದರೇನು; ರುಚಿ ತಿಂಡಿಯ ನೀಡುವುದೇನು

ನೀರೇ ನೀರು ಎಲ್ಲೆಡೆಯೂ ಕುಡಿಯಲು ಹನಿಯಿಲ್ಲ

ಎಂದು ಚಪ್ಪಾಚೂರಾದ ಹಡಗಿನಿಂದ ದೋಣಿಯೊಂದರಲ್ಲಿ ಹೊರಹೊರಟವನು ಸುತ್ತಲಿನ ಸಮುದ್ರದ ಉಪ್ಪುನೀರನ್ನು ಕಂಡು ಹಲುಬಿದ.  ಸಿಂಗಪುರದ ವಿಮಾನ ನಿಲ್ದಾಣದಲ್ಲಿ ನನಗೆ ಆ ಬಾಯಾರಿದವನದೇ ನೆನಪು. 

“ಐದು ಗಂಟೆಗಳ ಲೇಓವರ್;‌ ಸಿಂಗಪುರ ವಿಮಾನನಿಲ್ದಾಣ ಬಹಳ ಸೊಗಸಾಗಿದೆ. ಸಮಯ ಕಳೆಯುವುದೇ ತಿಳಿಯುವುದಿಲ್ಲ”  ಎಂದು ಬಲ್ಲವರು ಹೇಳಿದ್ದರು. ತಲೆಯ ಮೇಲಿನ ಕೃತಕಗಗನದಲ್ಲಿ ಫ್ಯಾಂಟಮನಿಂದ ಹಿಡಿದು ಬ್ಯಾಟ್‌ಮಾನ್‌ವರೆಗೆ ವಿವಿಧ ರೂಪಿಗಳು ಮೀನು, ಮೊಸಳೆ, ತಿಮಿಂಗಲಿಗಳಲ್ಲದೆ ನಕ್ಷತ್ರ, ಗ್ರಹ, ಉಪಗ್ರಹಗಳೊಡನೆ ಹಾರಾಡಿದ್ದೂ ಹಾರಾಡಿದ್ದೇ. 

ಕೃ.ಬು.ವು ಅಣಿ ಮಾಡಿದನು; ಪಯಣಿಗನದ ನೋಡುತ ಪರವಶನಾದನು

ಕೃತಕದ ಆಗಸ ಬಿತ್ತರದಲ್ಲಿ ಸಪ್ತವರ್ಣಗಳ ಮೀರ್ದುದರಲ್ಲಿ

ಹಿಂದಿನ ಇಂದಿನ ಮುಂದಿನ ನೋಟಗಳೊಂದರಲೊಂದರಲೊಂದನು ಬೆರೆಸುತ

ಕೃ.ಬು.ವು ಅಣಿ ಮಾಡಿದನು 

ವಿಜ್ಞಾನದ ನವ ವಿಷಯಗಳಂದವ

ಪೌರಾಣಿಕ ನವೆಗಳ ಅವಶೇಷವ 

ಅಡುಗೂಲಜ್ಜಿಯ ಕಥೆಗಳ ಪಾತ್ರವ

ಮಿಕ್ಸಿಯೊಳಾಡಿಸಿ ಕೃ.ಗ.ಗೆ ಜೋಡಿಸಿ 

ಅಂದದ ಶೃಂಗದೊಳಂದವ ಹೊಂದಿಸಿ

ಕೃ.ಬು.ವು ಅಣಿ ಮಾಡಿದನು

ಎನ್ನುತ್ತಾ ಯಾವುದೇ ವ್ಯಕ್ತಿಯೂ ಇಂದಿನ ಕೃ.ಬು. ಉರುಫ್‌ ಕೃತಕ ಬುದ್ಧಿಮತ್ತೆ ಅರ್ಥಾತ್‌ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸನ್ನು ಕುವೆಂಪುವಿನ ʼದೇವನು ರುಜು ಮಾಡಿದನುʼ  ಧಾಟಿಯಲ್ಲಿಯೇ ಪ್ರಶಂಸಿಸಿದರೆ ಅಚ್ಚರಿಯೇನಿಲ್ಲ. 

ಇಂತಿಪ್ಪ ಆಧುನಿಕ ಕೌತುಕವು ಕೃ.ಗ. ಅರ್ಥಾತ್‌ ಕೃತಕಗಗನಕ್ಕಷ್ಟೇ ಸೀಮಿತವಾಗಿಲ್ಲ. ಕಾಲ ಕೆಳಗೆ ಗಾಜಿನ ನೆಲ; ನೆಲದ ಕೆಳಗೆ ತರಹೇವಾರಿ ಮೀನುಗಳು ತಮ್ಮ ಮೇಲ್ಜಗದಲ್ಲಿ ವಿಹರಿಸುವ ಮೀನ್‌ ಮೆಂಟಾಲಿಟಿಯ ಮಂದಿಯನ್ನು ಅನಿಮೇಷರಾಗಿ ನೋಡುವ ಪರಿಯೂ ಸೊಗಸಾಗಿದೆ. ಡಿವಿಜಿಯವರು ಇದನ್ನೇನಾದರೂ ಕಂಡಿದ್ದರೆ ʼಪದ ಕುಸಿಯೆ ನೆಲವಿಹುದು; ನೆಲ ಕುಸಿಯೆ ಮೀನಿಹುದು ಸಿಂಗಪೂರಿʼ ಎಂದು ಬರೆಯುತ್ತಿದ್ದರೇನೋ. 

ಇದೆಲ್ಲವೂ ಟರ್ಮಿನಲ್‌ ಒಂದರಲ್ಲಿ ಕಾಣುವ ಸೊಬಗು. ಟರ್ಮಿನಲ್‌ ಒಂದರಿಂದ ಟರ್ಮಿನಲ್‌ ಮೂರಕ್ಕೆ ಹೋದರೆ ಅಲ್ಲಿ ಝಗಮಗವೋ ಝಗಮಗ. ಇತ್ತಲಿನ ಜನರ ವಸ್ತ್ರಗಳ ವಿಶೇಷ ವಿನ್ಯಾಸಗಳನ್ನು ನೋಡುವುದರಲ್ಲಿ ಸಮಯ ಕಳೆಯುವುದೇ ತಿಳಿಯುವುದಿಲ್ಲ. ಚರ್ಮಕ್ಕಿಂತಲೂ ಬಿಗಿಯಾದ ಉಡುಪುಗಳು, ಹಳೆಯ ಕಾಲದ ಅಕ್ಕಿಯ ಜರಡಿಯಂತೆ ಕಾಣುವ ಮೇಲಂಗಿಗಳನ್ನು ಧರಿಸಿದ ಕಮಂಗಿಗಳು (ಕಮ್‌ ಅಂಗಿಗಳೂ ಹೌದು. ಟ್ರಾವಲ್‌ ಲೈಟ್‌ ಎನ್ನುವುದಕ್ಕೆ ಇವರ ಉಡುಪುಗಳು ಉತ್ತಮ ಉದಾಹರಣೆ.) ಪ್ರತಿ ವಿಮಾನನಿಲ್ದಾಣದಲ್ಲಿಯೂ ಕಂಡಾರು. ಅಂತಹವರು ಇಲ್ಲಿನ ನೆಲದ ಕೆಳಗಿನ ಮೀನುಗಳಂತೆ ನುಣುಚುನಡೆಯಲ್ಲಿ ಮಿಂಚಿಯಾರು. ಆದರೆ ಇಲ್ಲಿನಂತೆ ಕುಳಿತಾರೆ? ಮಲಗಿಯಾರೆ? 

ಮೂರ್ನಾಲ್ಕು ದಶಕಗಳ ಹಿಂದೆ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ರಸ್ತೆಯನ್ನು ದಾಟಲು ಸುರಂಗವೊಂದನ್ನು ಬಳಸುತ್ತಿದ್ದರು. ಆ ಮಾರ್ಗ ಈಗಲೂ ಇದೆ. ಅಂದಿನ ದಿನಗಳಲ್ಲಿ ಅದು ಭಿಕ್ಷುಕರ, ವಲಸೆ ಬಂದು ಹೊಟೇಲ್‌ ರೂಮ್‌ ಮಾಡಿಕೊಳ್ಳಲು ಹಣ ಇಲ್ಲದವರ ʼಮೇಕ್‌ಶಿಫ್ಟ್‌ ಶಯನಗೃಹʼ ಆಗಿತ್ತು. ಆ ಮಾರ್ಗದ ಇಕ್ಕೆಲಗಳಲ್ಲಿ ಅಪ್ಪಚ್ಚಿಯಾದ ಹಲ್ಲಿಯ, ಕೈಚಪ್ಪಾಳೆಯ ಹೊಡೆತಕ್ಕೆ ಸಿಕ್ಕ ಸೊಳ್ಳೆಯ, ಪೇಪರಿನ ಬೀಸಿಗೆ ಧರಾಶಾಯಿಯಾದ ನೊಣದ, ಚಳಿ ತಡೆಯಲಾರದೆ ಚಿಪ್ಪಿನೊಳಗೆ ಅಡಗಿದ ಆಮೆಯ ಹಾಗೂ ಗಣಿತದ ಲೆಕ್ಕವನ್ನು ಬಿಡಿಸಲು ತೋಚದೆ ತಲೆಯಮೇಲೆ ಕೈಹೊತ್ತು ಕುಳಿತ ದಡ್ಡನ ಭಂಗಿಗಳಲ್ಲಿ ಜನರು ಪವಡಿಸುತ್ತಿದ್ದರು. ಚಾಂಗಿ (ಅದು ಈ ವಿಮಾನನಿಲ್ದಾಣದ ಹೆಸರು) ಸಹ ಅದೇ ಭಂಗಿಗಳ ಪ್ರಯಾಣಿಕರಿಂದ ಅಲಂಕೃತವಾಗಿತ್ತು. ನೂರಾರು ಡಾಲರ್‌ ಬೆಲೆ ಬಾಳುವ ಜರ್ಕಿನನ್ನು ಹಾಸಿಕೊಂಡು, ಹಲವು ಡಾಲರ್‌ಗಳಷ್ಟು ಬೆಲೆಯ ಷೂಗಳನ್ನು ತಲೆದಿಂಬಾಗಿಸಿಕೊಂಡು, ಹೊದೆಯಲು ಏನೇನೂ ಇಲ್ಲದೆ ಚಳಿಗಾಲದ ಬೀದಿನಾಯಿಯಂತೆ ಮೂಗಿನತ್ತ ಮಂಡಿಯನ್ನು ಸೆಳೆದುಕೊಂಡು ಸುರುಳಿ ಸುತ್ತಿಕೊಂಡು ಮಲಗಿರುವವರು ಹಿಂಡುಹಿಂಡಾಗಿ ಇಲ್ಲಿನ ನೆಲಕ್ಕೆ ವಿಶೇಷ ಅಲಂಕಾರಿಕ ಮೆರಗನ್ನು ನೀಡಿದ್ದರು. ಇವರಲ್ಲಿ ಒಬ್ಬನಾದರೂ ʼಹಂಸತೂಲಿಕಾ ತಲ್ಪದಿಂದ ಹಿಂಸೆ ನೀಡುವ ಕಂಬಳಿಯತ್ತʼ  ಎಂಬ ಲೇಖನವನ್ನೋ, ಪುಸ್ತಕವನ್ನೋ ಇಂದೋ ಮುಂದೋ ಬರೆದಾರು. ʼಮರಳುಗಾಡಿನ ಹಸಿದ ಪಯಣಿಗನಿಗೆ ವಜ್ರವೂ ಕಲ್ಲಿಗೆ ಸಮ; ನೀರು ದ್ರವರೂಪದ ಚಿನ್ನಕ್ಕಿಂತ ಅಮೂಲ್ಯʼ  ಎಂದು ಗಿಬ್ರಾನ್‌ ಹೇಳಿದ ಮಾತುಗಳು ಈ ಸಿರಿಯೇ ಮೂರ್ತಿವೆತ್ತಂತಹ ಭಿಕ್ಷುಕಾವಸ್ಥೆಯ ಮಂದಿಯನ್ನು ಕಂಡಾಗ ನೆನಪಾಯಿತು. 

ಮಲಗಿರುವ ಮಂದಿಯಿಂದ ಕುಳಿತಿರುವ ಮಂದಿಯತ್ತ ಗಮನ ಹರಿಸಿದರೆ ಅಲ್ಲಿಯೂ ಅದೇ ಪಾಡು. ಅಮೃತಶಿಲೆಯ ಹಾಸಿನ ಮೇಲಿನ ಸಿರಿಗಂಧದ ಮೇಜಿನ ಸುತ್ತಲೂ ತೇಗದ ಕುರ್ಚಿಗಳಲ್ಲಿ ಕುಳಿತು ಚಿನ್ನದ ಚಮಚೆಯಿಂದ ತಿನಿಸುಗಳನ್ನು ಕೆದಕುತ್ತಾ ತೇಗುವ ಮಟ್ಟಕ್ಕೆ ಭುಜಿಸುವ ಮಂದಿ ಇಲ್ಲಿ ಯಾವುದೇ ಶಿಷ್ಟಾಚಾರವಿಲ್ಲದೆ ಎರಡೂ ಕೈಗಳನ್ನು ಬಳಸಿ ಮೂತಿ ಮುಖಕ್ಕೆಲ್ಲ ಮೆತ್ತಿಕೊಳ್ಳುತ್ತಾ ಗಬಗಬನೆ ತಿನ್ನುವುದನ್ನು ಕಂಡಾಗ ಬಸವನಗುಡಿಯ ಬಳಿಯ ಮಠವೊಂದರ ಹಿಂದಿನ ಕುಪ್ಪೆತೊಟ್ಟಿಯಲ್ಲಿ ಎಲೆಗಳು ಬಿದ್ದ ತಕ್ಷಣ ಮಿಂಚಿನಂತೆ ಎರಗಿ ಬಿರಿಹೊಟ್ಟೆಯವರು ಬಿಸುಟ ತಿನಿಸುಗಳನ್ನು ಮುಕ್ಕುತ್ತಿದ್ದ ದೃಶ್ಯವೇ ನೆನಪಾಯಿತು. ಐದು ಗಂಟೆಗಳ ಲೇಓವರಿನಲ್ಲಿ ʼಹಿಂದಿನ ಫ್ಲೈಟು ನೀಡಿದ ತಿಂಡಿ ರುಚಿಸದು ಎಂದು ಅಲ್ಲಿಯೆ ಬಿಸುಟು; ಹಸಿವೆಯು ಬೆಳೆದು ಬರುತಿರೆ ಬವಳಿ; ರುಚಿ ಕೇಳೆನೋ ಇನ್ನುʼ  ಎಂದು ʼಭಕ್ತಕುಂಬಾರʼನೋಪಾದಿಯಲ್ಲಿ ʼಹಳೆ ತಿಂಡಿಯೇ ಚೆಂದ. ಅದ ತಿಂದುಕೋ ಕಂದʼ ಎಂದು ಮನದಲ್ಲೇ ಹಾಡಿಕೊಳ್ಳುತ್ತಾ ತಿನ್ನುವ ಪರಿಯು ಇನ್ನಾರಿಗೂ ಇಷ್ಟವಾಗದಿದ್ದರೂ ಲೆನಿನ್ನನಿಗೋ, ಸ್ಟಾಲಿನ್ನನಿಗೋ, ಕಾರ್ಲ್‌ ಮಾರ್ಕ್ಸಿಗೋ ʼಇರುವವರು ಇಲ್ಲದವರು ಎಲ್ಲರೂ ಒಂದೇ ರೀತಿ ಜೀವನ ಮಾಡಲು ಪ್ರೇರೇಪಿಸುವ ನಿಲ್ದಾಣವೇ ಕಮ್ಯುನಿಸಮ್ಮಿನ ಪ್ರತೀಕʼ ಎಂದು ಅನಿಸೀತು. ಚಾಂಗಿಗೆ ಜೈ ಎನ್ನುವುದಲ್ಲದೆ ಬಾಲಿವುಡ್ಡಿನ ಯಾರಾದರೂ ನಕಲಿಕವಿಗಳನ್ನು ಹಿಡಿದು ʼಸಿಂಗಪುರ್‌ ಕಾ ಚಾಂಗಿ ಹೋ; ತೂ ಕಮ್ಯುನಿಸ್ಟು ಹೋ! ಧನವಾನ್‌ ಭೀಕ್‌ ಮಾಂಗ್ತಾ ಇಧರ್;‌ ಲಾಜವಾಬ್‌ ಹೋʼ ಎಂದು ʼ ಚೌದವೀ ಕಾ ಚಾಂದ್‌ʼ ರೀತಿಯ ಹಾಡೊಂದನ್ನು ಬರೆಸಿಯಾರು. 

ಇರಲಿರಲಿ. ಅತ್ತಿತ್ತ ನೋಡುತ್ತಾ ನನ್ನ ಹೊಟ್ಟೆಯನ್ನೇ ಮರೆತಿದ್ದೆ. ʼಪಾಪಿ ಪೇಟ್‌ ಕಾ ಸವಾಲ್‌ʼ ಅನ್ನು ಉತ್ತರಿಸಲೆಂದು ಏನನ್ನಾದರೂ ಕೊಂಡುಕೊಳ್ಳುವ ಇರಾದೆಯಿಂದ ಅತ್ತಿತ್ತ ದೃಷ್ಟಿ ಹಾಯಿಸಿದೆ. ಆಗಲೇ ʼನೀರೇ ನೀರು ಎಲ್ಲೆಡೆಯೂ…ʼ ವ್ಯಕ್ತಿ ನೆನಪಾದದ್ದು. 

ತಿನ್ನಲೇನನ್ನಾದರೂ ಕೊಳ್ಳಬೇಕೆಂದು ತೀರ್ಮಾನಿಸಿ ಮೂಗಿನ ಹೊಳ್ಳೆಗಳನ್ನು ಆಂಟೆನಾ ಆಗಿಸಿಕೊಂಡು ಸೂಕ್ತ ಪರಿಮಳದ ನೆಟ್ವರ್ಕನ್ನು ಅರಸುತ್ತಾ ಅಂಗಡಿಗಳ ಸಾಲಿನತ್ತ ಹೊರಟೆ. ಶುಂಠಿ, ಕೊತ್ತಂಬರಿಸೊಪ್ಪು, ಹಿಂಗು, ಮೆಂತ್ಯೆ ಮಸಾಲೆಗಳ ರುಚಿಗಂಧವನ್ನು ಅರಸುತ್ತಾ ಹೊರಟ ನನ್ನ ಹೊಳ್ಳೆಗಳಿಗೆ ಸಮುದ್ರಜೀವಿಗಳ ಶವಗಳ ಅವಶೇಷಗಳು ಮೃತ್ಯೋತ್ತರವಾಗಿ ಮಸಾಲೆಗಳೊಡನೆ ಹೊರಡಿಸಿದ ಹಿಂಸ್ರಗಂಧಗಳ ಪ್ರಹಾರ ಒದಗಿತು. ಮೂಗಿಗೆ ಬಡಿದ ವಾಸನೆ ನಾಳಗಳ ಮೂಲಕ ಉದರಕ್ಕಿಳಿದು, ಉದರದಲ್ಲಿ ʼಏಕರೂಪ ನಾಗರಿಕ ಸಂಹಿತೆʼಯನ್ನು ಮಂಡಿಸಿದಾಗ ವಿಧಾನಸಭೆಯಲ್ಲಿ ನಡೆದ ಅಲ್ಲೋಲಕಲ್ಲೋಲವು ಅತ್ಯಲ್ಪವೆನಿಸುವ ಮಟ್ಟದ ಕೋಲಾಹಲ ಸಂಭವಿಸಿತು. ಜಠರದಿಂದ ಹೊರಟ ಆಮ್ಲವೊಂದು ಅವಿನ್ಯೂ ರೋಡಿನಲ್ಲಿ ರಾಂಗ್‌ ಸೈಡಿನಲ್ಲಿ ಬರುವ ಚಾಲಕನಂತೆ ವೇಗವಾಗಿ ಬಾಯಿಯತ್ತ ಮುನ್ನುಗ್ಗಿತು. ಚಾಂಗಿಯ ಮಂದಿಗೆ ನನ್ನ ಜಠರಾಗ್ನಿಯ ಪರಿಚಯ ಮಾಡಿಸುವುದು ಬೇಡವೆಂದು ಕಷ್ಟ ಪಟ್ಟು ಕಂಠದ್ವಾರದಲ್ಲೇ ಆಮ್ಲವನ್ನು ತಡೆಹಿಡಿದು ಜಠರಮುಖಿಯಾಗಿಸುವಲ್ಲಿ ಯಶಸ್ವಿಯಾದೆ. ಆ ಕ್ಷಣದಲ್ಲಿ ನನ್ನ ಮನದಲ್ಲಾದ ತುಮುಲವನ್ನು ಎಂತು ವರ್ಣಿಪುದೋ!

ಉದರ ಕರೆಯಿತು ತಿನಿಸ ಬಯಸಿತು ಏಳು ಪಯಣಿಗ ಎಚ್ಚರ

ಮಡಿಯ ಊಟಕೆ ತೆರೆದ ಬಾಯಿಗೆ ನೀರು ಬಿಟ್ಟರೇನಿಲ್ಲವೋ 

ಎಂದು ಮನದಲ್ಲೇ ಗುನುಗುತ್ತಾ ಆ ಅಂಗಡಿಗಳ ಸಾಲಿನಿಂದ ದೂರ ಸರಿದು ʼವೆಜಿಟೇರಿಯನ್‌ ಚಿಪ್ಸ್‌ʼ ಎಂಬ ಫಲಕವಿದ್ದ ಅಂಗಡಿಗೆ ಹೋಗಿ ಮೀನಮೇಷ ಎಣಿಸಲಾರಂಭಿಸಿದೆ. ಚಿಪ್ಸು ತಿಂದರೆ ಹನುಮಂತನ ಅಪ್ಪನು ದೇಹದ ಮೂಲೆಮೂಲೆಯಲ್ಲೂ ಸರಿದಾಡುತ್ತಾ ದಾಂಧಲೆ ನಡೆಸುವುದು ಖಚಿತ. ಚಿಪ್ಸನ್ನೂ ತಿನ್ನದಿದ್ದರೆ ಆ ನಿದ್ರಾಲಿಂಗಿತ ಸಿರಿವಂತ ಬಡವರ ಮಧ್ಯೆ ಬವಳಿ ಬಿದ್ದು ಇನ್‌ಸ್ಟೆಂಟ್‌ ಶವಾಸನ ಹಾಕುವುದು ನಿಶ್ಚಿತ. 

ಅವನ ಕೈಯಲ್ಲಿ ಚಿಪ್ಸ್‌ ಇದೆ. ನನ್ನ ಕೈಯಲ್ಲಿ ಕ್ರೆಡಿಟ್‌ ಕಾರ್ಡ್.‌

ಮುಂದೇನು ಕಾದಿದೆಯೋ!

Comments

  1. ನಿಮ್ಮ ಚಾಂಗೀ ಅನುಭವವನ್ನು ಓದಿದಾಗ Coleridge ಕವಿಯು ಬರೆದ
    Water, water everywhere
    Not any drop to drink
    ಎಂಬ ಸಾಲುಗಳನ್ನು
    Food, food everywhere
    Not any morsel to eat
    ಎಂದು ಬದಲಾಯಿಸಬೇಕೇನೋ ಎನಿಸಿತು. ಇನ್ನು shoes ಅನ್ನು ದಿಂಬಾಗಿ ಬಳಸಿರುವುದನ್ನು ನೋಡಿ, ಗೊರೂರರ "ಆಚಾರ ಕೆಟ್ಟರೂ ಆಕಾರ ಕೆಡಬಾರದು" ಎಂಬ ಕಥೆ ನೆನಪಿಗೆ ಬರುತ್ತದೆ.

    ReplyDelete

Post a Comment