ಕುಪುತ್ರೋ ಜಾಯೇತಾ..

 ಕುಪುತ್ರೋ ಜಾಯೇತಾ  ಕ್ವಚಿದಪಿ ಕುಮಾತಾ  ನ ಭವತಿ

                                                      ಲೇಖಕರು : ಎಂ ಆರ್ ವೆಂಕಟರಾಮಯ್ಯ



      “ಮಾತೃ ದೇವೋ ಭವ, ಪಿತೃ ದೇವೋ ಭವ, ಆಚಾರ್ಯ ದೇವೋ ಭವ” ಎಂಬ ವೇದೋಕ್ತಿ,  “ಮಾತಾ ಪೂರ್ವ ರೂಪಂ, ಪಿತಾ ಉತ್ತರ ರೂಪಂ,” ಎಂದಿರುವ ಉನಿಷತ್ ವಾಕ್ಯ ಭಾರತೀಯರಿಗೆ ಚಿರ ಪರಿಚಿತವಾದದ್ದೇ ಆಗಿವೆ. ಕಣ್ಣಿಗೆ ಕಾಣುವ ತಾಯಿ  ದೇವರು, ದೇವರ ಸಮಾನ, ಈಕೆಗೆ ಪ್ರಥಮ ಪೂಜ್ಯ ಸ್ಥಾನ, ನಂತರದ ಕ್ರಮ, ಸರದಿ, ತಂದೆ ಮತ್ತು ಗುರುವಿನದು. ಸೃಷ್ಟಿಯಲ್ಲಿನ ಎಲ್ಲಾ ಜೀವಿಗಳ ಜನನಕ್ಕೆ  ಕಾರಣ ಹೆಣ್ಣು, ಆದ್ದರಿಂದಲೇ ಈಕೆ  ಜನನಿ, ಮಾತೆ, ತಾಯಿ. “ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಜನನಿ ಮತ್ತು  ಜನ್ಮ ಭೂಮಿ ಇವರಡೂ ಸ್ವರ್ಗಕ್ಕಿಂತಾ ಹೆಚ್ಚು ಪ್ರಿಯ ಎಂದಿದ್ದಾರೆ ಶ್ರೀರಾಮಚಂದ್ರ ದೇವರು.” ಕುಪುತ್ರೋ ಜಾಯೇತಾ ಕ್ವಚಿದಪಿ  ಕುಮಾತಾ ನ ಭವತಿ” ಪ್ರಪಂಚದಲ್ಲಿ  ಕೆಟ್ಟ ಪುತ್ರ  ಜನಿಸಬಹುದೇನೋ ಆದರೆ ಕೆಟ್ಟ ತಾಯಿ, ಮಕ್ಕಳಿಗೆ ಕೇಡು ಬಯಸುವ ಮಾತೆ ಇರಲಾರಳು ಎಂದಿದ್ದಾರೆ ಜ್ಞಾನಿಗಳು.

   ಪ್ರತಿಯೊಂದು ಸಮಾಜ, ಸ್ಥಳ, ರಾಜ್ಯ, ದೇಶ, ರಾಷ್ಟçಗಳ ಜನ ಜೀವನ, ಅಲ್ಲಿನ ಪದ್ಧತಿ, ಆಚಾರ, ಸಂಪ್ರದಾಯ, ಹಿಂದಿನಿಂದ ಪಾಲಿಸಿಕೊಂಡು ಬಂದ ನೀತಿ, ನಿಯಮಗಳು ವಿಭಿನ್ನ ವಾಗಿರುವುದು ಸಹಜ. ಆದರೆ ಕಾಲ ಸರಿದಂತೆ ಕೆಲವು ಕಡೆ ಈ ಅಚಾರ, ಪದ್ಧತಿಗಳ ಪೈಕಿ ಕೆಲವು  ಸೂಕ್ತವಾಗಿ ಬದಲಾದರೆ,  ಮತ್ತೆ ಕೆಲವು ಕಡೆ ಜನ ಅದೆಷ್ಟೇ ವಿದ್ಯಾವಂತರು, ನಾಗ ರಿಕರು ಎನಿಸಿಕೊಂಡಿದ್ದರೂ ‘ಅಪ್ಪನು ನೆಟ್ಟ ಆಲದ ಮರ’ ಎಂದು ಅದಕ್ಕೇ ನೇಣು ಹಾಕಿ ಕೊಳ್ಳುವ, ‘ಬೆಕ್ಕನ್ನು ಕಟ್ಟಿಹಾಕಿ ಶ್ರಾದ್ಧ ಮಾಡುವ’ ಪದ್ದತಿಗಳನ್ನು ಇವು ನಮಗೆ ಪಿತ್ರಾರ್ಜಿತ ಆಸ್ತಿ ಎಂಬಂತೆ ಯಥಾವತ್ತಾಗಿ ಪಾಲಿಸಿ ನಮ್ಮ ಪೂರ್ವಜರ ಪಾಠ ನಾ ಪಾಲಿಸಿದೆ ಎಂಬ ಒಣ ತೃಪ್ತಿ ಪಡೆದು ಮುಂದುವರಿಯುತ್ತಿರುವುದು ದುರದೃಷ್ಟಕರ ಬೆಳವಣಿಗೆಯಾಗಿದೆ. ಈ ಹಿನ್ನೆಲೆಯಲ್ಲಿ, ಜನನ ಕೊಟ್ಟ ತಾಯಿಗೇ ಕೇಡು ಬಯಸಿದ ಯುವ ಮಗನ ಬಗ್ಗೆ  ವೃದ್ಧಾಪ್ಯ ತಲುಪಿದ ಮಾತೆಯೊಬ್ವಳ ಅಂತಃಕರಣ ಹೇಗಿತ್ತು ? ಇಲ್ಲಿದೆ ಇದರ ಕಿರು ಚಿತ್ರಣ :  

ಹಿಂದಿನ ಜಪಾನ್ ದೇಶದಲ್ಲಿ ಹಿರಿಯರ ಬಗ್ಗೆ ಅದರಲ್ಲೂ ವೃದ್ಧಾಪ್ಯ ತಲುಪಿ ತಮ್ಮ ದೈನಂದಿನ ಚಟುವಟಿಕೆಗಳಿಗೂ ಕಿರಿಯರನ್ನೇ ಅವಲಂಭಿಸುವ ದುಸ್ಥಿತಿಯನ್ನು ತಲುಪಿದರನ್ನು ಕಿರಿಯರು ತಮ್ಮ ವಾಸ ಸ್ಥಾನದಿಂದ ಬಹು ದೂರದ ಒಂಟಿ ಸ್ಥಳಗಳಲ್ಲಿ ಬಿಟ್ಟು ಊರಿಗೆ ಹಿಂತಿರುಗುವುದು, ಹೀಗೆ ಒಂಟಿಯಾದ ಆ ಹಿರಿಯರು ತಿನ್ನಲು ಆಹಾರ, ದಣಿವಾರಿಸಿಕೊಳ್ಳಲು ನೀರು ಸಿಗದೆ ಹಸಿವೆಯಿಂದ ನರಳುತ್ತಳೋ ಕ್ರೂರ ಮೃಗಗಳ ಬಾಯಿಗೆ ಆಹಾರವಾಗಿಯೋ ಪ್ರಾಣ ಕಳೆದುಕೊಳ್ಳುವ ವ್ಯವಸ್ಥೆಯಿತ್ತಂತೆ, ಇಂತಹುದೇ ಪದ್ಧತಿಯನ್ನು ಪಾಲಿಸಿ ತನ್ನ ಹೆತ್ತವಳ ಕಾಟ ತಪ್ಪಿಸಿಕೊಳ್ಳುವ ಉದ್ದೇಶ್ಯದಿಂದ ಮಗನೊಬ್ಬ ತನ್ನ ತಾಯಿಯನ್ನು ಹೆಗಲ ಮೇಲೆ ಹೊತ್ತು ಕಾಡಿನ ದಾರಿಯಲ್ಲಿ ನಡೆಯುತ್ತಿದ್ದನು. ಈ ಹಂತದಲ್ಲಿ ಹೆಗಲ ಮೇಲಿದ್ದ  ತಾಯಿಯು ಮಾರ್ಗದುದ್ದಕ್ಕೂ ತನ್ನ ಕೈಗೆ  ಸಿಕ್ಕಿದ ಮರಗಳ ಕೊಂಬೆಗಳನ್ನು ಕಿತ್ತು ತಾನು ಪಯಣಿಸುತ್ತಿದ್ದ ಹಾದಿಯುದ್ದಕ್ಕೂ ಹಾಕುತ್ತಿದ್ದಳಂತೆ. ಸುಮ್ಮನೆ ಮಲಗದೆ ಈ ಮುದುಕಿ ಹೀಗೇಕೆ ಮಾಡ್ತಿದೆ ಎಂಬ ಕಸಿವಿಸಿ ಮಗನಿಗಾದರೂ ಇನ್ನೊಂದಿಷ್ಟು ನಿಮಿಷಗಳು ಇವಳ ಚೇಷ್ಟೆ, ಕಾಟನಾ ತಡೆದುಕೊಂಡು ಕಾಡಿನಲ್ಲಿ ಇವಳನ್ನ ಎಸೆದು ಬಂದರೆ ಆಯಿತು. ಇನ್ನು ಜೀವಾವಧಿ ಇವಳ ಕಾಟವಿಲ್ಲದೆ ಹಾಯಾಗಿರಬಹುದು ಎಂ¨ ಸಮಾಧಾನ ತಳೆದು ಪಯಣ ಮುಂದುವರಿಸಿದನು. ಕೊನೆಗೆ ಕಾಡು ಸೇರಿದ ಅವನು ಅಮ್ಮನನ್ನು ಹೆಗಲಿನಿಂದ ಕೆಳಗಿಳಿಸಿ, ಅದ್ಯಾಕೆ ನೀ ದಾರಿಯುದ್ದಕ್ಕೂ ಸಿಕ್ಕಿದ ಮರಗಳ ಕೊಂಬೆಗಳನ್ನು  ಕಿತ್ತು ದಾರಿಗೆ ಹಾಕುತ್ತಿದೆ ಎಂದು ಮಗ ಪ್ರಶ್ನಿಸಿದಾಗ, ತಕ್ಷಣ ಆ ತಾಯಿ ಅಂದಳು  “ಮಗನೇ, ನೀನು ನನ್ನ ಇಲ್ಲಿ ಬಿಟ್ಟು ಊರಿಗೆ ಹೋಗೋ ದಾರೀಲಿ ಒಬ್ನೆ ಹಾದಿ ಸವೆಸಬೇಕಾಗುತ್ತೆ, ಆಗ ನೀ ಬಂದ ದಾರಿ ನಿನಗೆ ತಟ್ಟನೆ ತಿಳಿಯದಾದರೆ ಕ್ರೂರ ಪ್ರಾಣಿಗಳ ಕೈಗೆ ಸಿಕ್ಕಿ ಪ್ರಾಣ ಕಳೆದುಕೊಳ್ಳಬೇಕಾಗಬಹುದು .ಹಾಗಾಗದೆ ನೀ ಇಲ್ಲಿಗೆ ಬಂದ ದಾರಿ ನಿನಗೆ ಸರಿಯಾಗಿ ಗುರ್ತು ಸಿಗಲಿ ಎಂದು ನಾ ದಾರಿಯುದ್ದಕ್ಕೂ ಮರದ ಕಡ್ಡಿಗಳನ್ನು ಮುರಿದು ಎಸೆದೆ. ಈಗ ನೀನು ಆ ಕಡ್ಡಿಗಳಿರುವ  ದಾರಿಯಲ್ಲೇ ಜೋಪಾನವಾಗಿ ನಡೆದು ಊರು ಸರ‍್ಕೊಪ್ಪಾ, ನೂರು ವರ್ಷ ಹಾಯಾಗಿ ಬಾಳಪ್ಪಾ ಎಂದು ಮಗನ ತಲೆಯ ಮೇಲೆ ಕೈಯಿಟ್ಟು ಹರಿಸಿದಳಂತೆ ಮಗನನ್ನು ಹೆತ್ತ ಆ ದುರದೃಷ್ಟ ಮಾತೆ. 

   ಹೆತ್ತ ತಾಯಿಗೇ ಕೇಡು ಬಯಸಿದ ಆ ಮಗನ ಬಗ್ಗೆಯೇ ಅಮ್ಮನಿಗೆ ಇಷ್ಟು ಕರುಣೆಯೇ ! ನಾನೆಂತಹಾ ಪಾಪಿ !  ಎಂದು ತನ್ನನ್ನು ತಾನೇ ಶಪಿಸಿಕೊಂಡ ಆ ಮಗನ ಕಣ್ಣಲ್ಲಿ  ನೀರು ತುಂಬಿತು. ಅಮ್ಮ ನಾ ತಪ್ಪು ಮಾಡಿದೆ, ನನ್ನ  ಕ್ಷಮಿಸು, ಎಂದು  ಆ ಮಗ ಅಮ್ಮನ ಕಾಲು ಹಿಡಿದು  ಕ್ಷಮೆ ಬೇಡಿದ ಎಂಬುದರೊಂದಿಗೆ ಈ ಪ್ರಸಂಗ ಮುಕ್ತಾಯವಾಗಿದೆ.   

       ತನ್ನ ಕರುಳ ಬಳ್ಳಿಗೇೆ ಕೇಡು ಬಯಸದ ತಾಯಿಯ ಮತ್ತೊಂದು ಪ್ರಸಂಗ ಹೀಗಿದೆ :    

   ಕಳ್ಳತನದ ಆರೋಪ ಎದುರಿಸುತ್ತಿದ್ದ ಆ ಯುವಕನ ವಿಚಾರಣೆ ನ್ಯಾಯಾಲಯದಲ್ಲಿ ಅಂದು  ಬಾಕಿ ಇತ್ತು. ಈ ಪ್ರಕರಣವನ್ನು ವೀಕ್ಷಿಸಲು ನ್ಯಾಯಾಲಯದ ತುಂಬಾ ಜನ ಸೇರಿದ್ದರು. ನ್ಯಾಯಾಧೀಶರು ಕೋರ್ಟಿಗೆ ಹಾಜರಾಗಿ ತಮ್ಮ ಸ್ಥಾನದಲ್ಲಿ ಆಸೀನರಾದರು. ಆರೋಪಿಯ ಹೆಸರು ಕೂಗಿದ ತಕ್ಷಣ ಈತನನ್ನು ಕಟ ಕಟೆಯಲ್ಲಿ ನಿಲ್ಲಿಸಲಾಯಿತು. ಇವನ ಬಗ್ಗೆ ಇದ್ದ ಆರೋಪ ಓದಲಾಯಿತು. ಇದನ್ನು ಆರೋಪಿ ಆಲಿಸಿದ. ನಿನ್ನ ವಿರುದ್ದ ಮಾಡಿರುವ ಕಳ್ಳತನದ ಆರೋಪಕ್ಕೆ  ನಿನ್ನ ಉತ್ತರವೇನು ? ಎಂದು ನ್ಯಾಯಾಧೀಶರು ಪ್ರಶ್ನಿಸಿದಾಗ, ಹೌದು ಮಹಾಸ್ವಾಮಿ. ನಾ ಕಳ್ಳತನ ಮಾಡಿದ್ದು ನಿಜ, ನನಗೆ ಗಲ್ಲು ಶಿಕೆ ವಿಧಿಸಿ ಸ್ವಾಮಿ, ಆದರೆ ಇದಕ್ಕೆ ಮುಂದೆ ನನ್ನ ತಾಯಿಯನ್ನು ನಾ ನೋಡಲು ಅವಕಾಶ ಕೊಡಿ ಎಂದು ಪ್ರಾರ್ಥಿಸಿದ. ಆಗಬಹುದು ಎಂದ ನ್ಯಾಯಾಧೀಶರು ಈತನ ತಾಯಿಯನ್ನು ಕರೆಸಿ ಎಂದರು. ಆರೋಪಿ ತಾಯಿಯ ಬಳಿಗೆ ಬರುತ್ತಿದ್ದಂತೇನೇ ಆಕೆಯನ್ನು ಕಚ್ಚಿ ಗಾಯಗೊಳಿಸಿದ. ಗಾಭರಿಗೊಂಡ ನ್ಯಾಯಾಧೀಶರು ಆರೋಪಿಯತ್ತ ತಿರುಗಿ ನಿನಗೆ ಕಳ್ಳತನದ ಅಪರಾಧಕ್ಕೆ ಶಿಕ್ಷೆ ವಿಧಿಸಬೇಕಾಗಿದೆ, ಇದರ ಜೊತೆಗೇ ನೀ ಈಗ ತಾಯಿಯನ್ನು ಗಾಯಗೊಳಿಸಿದ ಅಪರಾಧ ಸಹಾ ಮಾಡಿರುವೆ ಇದಕ್ಕೂ ನಿನಗೆ ಶಿಕ್ಷೆ ಸಿಗುತ್ತದೆ. ನೀ ಯಾಕೆ ಆಕೆಯ ಮೇಲೆ ಹಲ್ಲೇ ಮಾಡಿದೆ ಎಂದು ಪ್ರಶ್ನಿಸಿದಾಗ  “ನನಗೇನೂ ಬದುಕಬೇಕೆಂಬ ಆಸೆಯಿಲ್ಲ, ಈಗಲೇ ನನಗೆ ಮರಣ ದಂಡನೆ ಶಿಕ್ಷೆ ವಿಧಿಸಿ, ನಾ ಸಾಯುವೆ. ಆದರೆ ಇದಕ್ಕೆ ಮುಂಚೆ ನನ್ನೀ ತಾಯಿಗೂ ಶಿಕ್ಷೆ ವಿಧಿಸಿ ಏಕೆಂದರೆ ನಾ ಚಿಕ್ಕಂದಿನಲ್ಲಿ ಸಣ್ಣ ಪುಟ್ಟ ಕಳ್ಳತನ ಮಾಡಿ ಆ ಮಾಲನ್ನು ಈಕೆಯ ಕೈಗೆ  ಕೊಟ್ಟಾಗ ಈಕೆ ನನಗೆ ಹೀಗೆ ಮಾಡಬಾರದು ಇದು ತಪ್ಪು ಎಂದು ನನಗೆ ಬುದ್ದಿ ಕಲಿಸಿದ್ದರೆ ನಾ ಕಳ್ಳನಾಗ್ತಿರಲಿಲ್ಲ ಆದರೆ ಈಕೆ ಅಂದು ಹೀಗೆ ಮಾಡದೆ ನನ್ನ ಕಳ್ಳತನಕ್ಕೆ ಪ್ರೋತ್ಸಾಹ ಕೊಟ್ಟಳು ಅದರ ಪರಿಣಾಮವೇ ಇಂದು ನಾ ದೊಡ್ಡ ಕಳ್ಳನಾದೆ ಎಂದ. ಇಷ್ಟರಲ್ಲೇ ಆ ತಾಯಿ ನ್ಯಾಯಾಧೀಶರತ್ತ ತಿರುಗಿ ಮಹಾಸ್ವಾಮಿ ಈ ನನ್ ಮಗ ನಿರಪರಾದಿ ಯಾರೋ ಕಳ್ಳತನ ಮಾಡಿ ಇವನ ಮೇಲೆ ಆರೋಪ ಹೊರಿಸಿದ್ದಾರೆ. ಇವನದೇನೂ ತಪ್ಪಿಲ್ಲ, ಇವನನ್ನು ಬಿಟ್ಟುಬಿಡಿ, ಇವನಿಗೆ ಕೊಡಬೇಕಾದ ಶಿಕ್ಷೆ ನನಗೆ ವಿಧಿಸಿ ನಾ ಸಾಯುವೆ ಎಂದು ಕಣ್ಣೀರಿಟ್ಟಳು. ಆಗ ನ್ಯಾಯಾಧೀಶರು, ನಿನ್ನೀ ಮಗ ನಿನ್ನ ಮೇಲೇ ಹಲ್ಲೆ ಮಾಡಿದರೂ ಇವನದೇನೂ ತಪ್ಪಿಲ್ಲಾ ಅಂತ ಯಾಕೆ ಅಂತಿಯಾ ಎಂದು ಪ್ರಶ್ನಿಸಿದಾಗ ಸ್ವಾಮಿ, ಇವನೊಬ್ಬನೇ ನನಗೆ ಮಗ, ಇವನು ಸತ್ತರೆ ನನ್ನ ವಂಶವೇ ನಾಶವಾದ ಹಾಗೆ ಆಗುತ್ತೆ. ಅದಕ್ಕೇ ಇವನು ಸಾಯುವುದು ನನಗೆ ಇಷ್ಟವಿಲ್ಲ ಇವನ ಬದಲಿಗೆ ನಾ ಸಾಯ್ತೇನೆ ಎಂದು ಅಂಗಲಾಚಿದಳಂತೆ. 

   ಈ ಪ್ರಸಂಗದಲ್ಲೂ ಮಗ ಕೆಟ್ಟವನಾಗಿದ್ದರೂ, ತನಗೇ ಕೇಡು ಬಯಸಿದರೂ ತಾಯಿ ಅವನಿಗೆ ಕೇಡು ಬಯಸದೆ ಅವನ ಒಳಿತು ಕೋರಿದಳು. ಈ ಹಿನ್ನೆಲೆಯಲ್ಲಿ, “ಕುಪುತ್ರೋ ಜಾಯೇತಾ  ಕ್ವಚಿದಪಿ ಕುಮಾತಾ  ನ ಭವತಿ” ಎಂದು ಶೀರ್ಷಿಕೆಯಲ್ಲಿರುವ ಈ ಹೇಳಿಕೆ  ನಿಜ, ಸರಿ ಎನಿಸುವುದಿಲ್ಲವೇ ? 

Comments