ಮಹಾನಟಿ...

ಮಹಾನಟಿ...

ಲೇಖನ - ಶ್ರೀಮತಿ ಮಂಜುಳಾ ಡಿ

    ತೆರೆದೆದೆೆಯ  ಮೇಲಿನ ಶರಟಿನ ಗುಂಡಿ ಸರಿಪಡಿಸಿಕೊಳ್ಳುತ್ತಾ, ಇನ್ನೂ ಆರದ ಮತ್ತಿನಲ್ಲಿ ರೂಮಿನ ಕದ ದಾಟಿ ಹೊರಗೆ ಹೆಜ್ಜೆ ಇಡುತ್ತಿದ್ದ, ತನ್ನ ಪ್ರೇಮದ ಸಕಾರ ಮೂರ್ತಿಯನ್ನು, ಅಶ್ರುಭರಿತ ಕಣ್ಣುಗಳಿಂದ ನೋಡಿದಳು.  ಸಮರ್ಪಣೆ, ಶ್ರದ್ದೆ, ಪಾವಿತ್ರ್ಯತೆ , ಎರಕ ಹೊಯ್ದದದ್ದೆಲ್ಲಾ ಒಮ್ಮೆಗೇ ಸಿಡಿಲಾಗಿ ಗರ್ಜಿಸಿದಳು. ಅದ್ಯಾವಾಗ ಅವನ ಕಾಲರು ಹಿಡಿದಿದ್ದಳೂ!  ಆತನನ್ನು ನೂಕಿ ರೂಮಿನ ಒಳ ಹೊಕ್ಕವಳೇ ಅರೆಬರೆ ಬಟ್ಟೆ ಸರಿಪಡಿಸಿಕೊಳ್ಳುತ್ತಿದ್ದವಳ ಕೆನ್ನೆಗೆ ಅದೆಷ್ಟು ಬಾರಿ ರಾಚಿದಳೂ? ತಡೆಯಲು ಬಂದ ಆತನನ್ನು ತಳ್ಳಿ ತನ್ನ ಪ್ರಹಾರ ಮುಂದುವರೆಸಿದಳು.

      ಆದರೆ ಆ ಗರ್ಜನೆ, ಆ ಹೊಡೆತಗಳು ಮುಂದೆ ತನ್ನ ಅಸ್ತಿತ್ವದಲ್ಲಿ ಇನ್ನು ಆತನಿರುವುದಿಲ್ಲ ಎಂಬ ಸಿಡಿಲಾಗಿತ್ತಾ? ಅಥವಾ ಇದುವರೆಗೂ ಸುತ್ತಲ ಜಗತ್ತು ಆತನ ಇಂತವೇ ಘಾತಗಳ ಬಗ್ಗೆ ವರ್ಣಿಸುತ್ತಲೇ ಇದ್ದರೂ ಮನಸ್ಸಿಗೆ ಕಟ್ಟಿಕೊಂಡ ಕಿವುಡುತನದ ಸುರಕ್ಷಿತ ಕೋಟೆ ಒಡೆದು ಹೊರ ಬಂದ ಪ್ರವಾಹವಾಗಿತ್ತಾ?? ಅವಳ ಮನಸ್ಸಿಗೆ ಸ್ಪಷ್ಟತೆ ಸಿಗಲಿಲ್ಲ.  ಕೋಣೆಯಿಂದ ಆತನನ್ನು ನೂಕಿಕೊಂಡು ಹೊರ ಬಂದವಳ ಕಣ್ಣು ಕೆಂಡದುಂಡೆಯಾಗಿದ್ದವು.

      ಅವಳ ಆತ್ಮಸಾಕ್ಷಿಗೆ ಪದೇ ಪದೇ ಪೆಟ್ಟು ಬೀಳುತ್ತಲೇ ಇದ್ದರೂ, ಈ ಬಾರಿ ಆಕೆಯ ಆತ್ಮ ಸಮ್ಮಾನಕ್ಕೆ ಬಿದ್ದ ಹೊಡೆತ ಎಷ್ಟು ತೀವ್ರವಾಗಿತ್ತೆಂದರೆ ಮತ್ತೆಂದೂ ಆಕೆ ಅವನನ್ನು ಎಂದಿನಂತೆಸ್ವೀಕರಿಸುವುದು ಸಾಧ್ಯವಿರಲಿಲ್ಲ. ಅಥವಾ ಆತ ಎಂದಿಗೂ ಪ್ರಮಾಣಿಕವಾಗಿ ಪ್ರಯತ್ನಿಸಲಿಲ್ಲ ಮತ್ತು ಪ್ರಾಮಾಣಿಕನಾಗಿರಲಿಲ್ಲ  ಎಂದರೆ ಹೆಚ್ಚು ಸರಿಯಾದಿತು! ಇಷ್ಟು ಬರೆದು ಮುಗಿಸುವ ಹೊತ್ತಿಗೆ ಕಣ್ಣು ಅರಿವಿಲ್ಲದೆ ತೇವಗೊಂಡಿದ್ದವು. ಕಾಂಪೌಂಡಿನ ಹೊರಗಿನ ಸಂಪಿಗೆ ಮರದ ತಂಪಿನ ಗಾಳಿ ನಡು ರಾತ್ರಿಯಲ್ಲೂ ಸುಡು ಬಿಸಿಲ ಬೇಗೆಯಂತನಿಸಿತು..

      ಅದೇಕೋ, ದಿಟ್ಟ ಕಣ್ಣುಗಳಿಂದ ಹೊರಗೆ ಹೆಜ್ಜೆ ಇಡುವ ಬಂಧನ ಸಿನಿಮಾದ ಸುಹಾಸಿನಿ ನೆನಪಾಗಿ! ಆಹ್! ವ್ಯಕ್ತಿತ್ವದ ಅಗಾಧತೆಯೇ..ಎನಿಸಿತು!!!



     ಈ ಘಟನೆ ತೆಲುಗು ಮತ್ತು ತಮಿಳು ಸಿನಮಾ ಲೋಕದ ಮಹಾನಟಿ ಸಾವಿತ್ರಿಯ ಜೀವನಗಾಥೆಯ ದೊಡ್ಡ ತಿರುವಿನದ್ದು. ಈಕೆಯ ಬಗ್ಗೆ ಸಾಕಷ್ಟು  ಬಾರಿ ಕೇಳಿದ್ದರೂ, ನಟನೆ ನೋಡಿದ್ದರೂ ಆಕೆಗೆ ‘ಮಹಾನಟಿ’ ಎಂಬ ಬಿರುದು ಕೊಟ್ಟ ಕಾರಣ ಹೀಗಿರಬಹುದು ಎಂಬ ಕಲ್ಪನೆ ಕೂಡ ಮೂಡಿರಲಿಲ್ಲ. ನಮ್ಮ ನೆಲದ ಸಿನಿಮಾ ರಂಗದ ಕಲ್ಪನಾ, ಮಂಜುಳ, ಆರತಿ... ಇವರ ಜೀವನ ಕಥೆಗಳಿಗಿಂತ ಇನ್ನೇನು ಹೆಚ್ಚಿರಲು ಸಾಧ್ಯ ಅನ್ನಿಸುತ್ತಿತ್ತು. ಆದರೆ ಇತ್ತೀಚೆಗೆ ತೆರೆಕಂಡ   ಕೀರ್ತಿ ಸುರೇಶ್-ದುಲ್ಕರ್ ಸಲ್ಮಾನ್ ನಟನೆಯ ಮಹಾನಟಿ ಸಿನಿಮಾದ  ಮೇಲಿನ ಒಂದು ಸೀನ್ ನೋಡಿದಾಗ ಆಕೆಯ ಜೀವನ ಕುರಿತು ಅರಿಯದೇ ಇರುವುದು ಅಸಾಧ್ಯವೆನಿಸಿತು. ಈ ಸಿನಿಮಾ ಕೆಲವು ತಿಂಗಳು ನನ್ನ ಆಲೋಚನೆಗಳನ್ನು ಆವರಿಸಿದ್ದು ಸುಳ್ಳಲ್ಲ. 

     ಒಬ್ಬ ವ್ಯಕ್ತಿಗಾಗಿಯೇ ತಪಿಸುವ ಆತ್ಮ ಒಂದು ಕಡೆ.. ಈ ತಪನ ಮತ್ತು  ಇದರ  ಹಿಂದಿರುವ ವ್ಯಕ್ತಿ  ತಾನೇ ಎಂಬುದು ತಿಳಿದೂ ಸಹ ಆದರ ಪರಿವೆಯೇ ಇಲ್ಲದಂತೆ ಆತ ಇನ್ನೂಬ್ಬರೊಂದಿಗೆ ಸಹಜವಾಗಿ ನಗುತ್ತಾ ಇರಬಲ್ಲ ಬಗ್ಗೆ ಮತ್ತು ಈ ರೀತಿ ವರ್ತಿಸಿ, ಸುಲಭವಾಗಿ ತಮ್ಮನ್ನು ತಾವು ಕ್ಷಮಿಸಿಕೊಳ್ಳಬಲ್ಲ ನಡೆಯ ಬಗ್ಗೆ ಬಹಳಷ್ಟು ಗಾಢವಾಗಿ ಆಲೋಚನೆ ಬರುತ್ತಲೇ ಇದ್ದವು..

    ಇವೇ ಆಲೋಚನೆಗಳು ಸಾವಿತ್ರಿಯ ಬದುಕಿನ ಬಗ್ಗೆ ಇರಬಹುದಾದ ಎಲ್ಲಾ ಲಿಖಿತ ಮೂಲಗಳನ್ನು ಅರಸುವಂತೆ ಮಾಡಿತು. ಬಡ ಕುಟುಂಬದಲ್ಲಿ ಜನಿಸಿದ ಸಾವಿತ್ರ‍್ರಿಯ ಚಹರೆ ಆರ್ಷಕವಾಗಿಸುವುದೇ ಆಕೆಯ ದೊಡ್ಡ ನಿಷ್ಕಲ್ಮಷ ಕಣ್ಣು. ಹುಟ್ಟಿನಿಂದಲೇ ನಟನೆ ಆಕೆಯ ನರನಾಡಿಗಳಲ್ಲಿ ಇಳಿದಿತ್ತು. ಆಕೆ ಆರು ತಿಂಗಳಿದ್ದಾಗಲೇ ತಂದೆಯನ್ನು  ಕಳೆದುಕೊಂಡಳು. ನಂತರ ಮಾಮ ಅಂದರೆ ತಾಯಿಯ ಅಣ್ಣನ ಮನೆಯಲ್ಲಿ  ಆಕೆ ಮತ್ತು ಆಕೆಯ ತಾಯಿ ಆಶ್ರಯ ಪಡೆದರು. ತೀರಾ ಚಿಕ್ಕ ವಯಸ್ಸಿನಲ್ಲಿ  ನಾಟ್ಯ ಕಲಿಯಲು ಭರತನಾಟ್ಯ ಕ್ಲಾಸಿಗೆ ಸೇರಿಸಿದರೆ ಮಾಸ್ಟರ್ ಏನೋ ಹೇಳಿದರೆಂದು ಶಾಲೆ ಬಿಡುವ ಸಾವಿತ್ರಿ ಸ್ವಂತ ಶ್ರಮದಿಂದ ನರ್ತನ ಕಲಿಯುವುದ ನೋಡಿ ಆ ಮಾಸ್ಟರ್ ಆಕೆಯನ್ನು ಶಿಷ್ಯಳನ್ನಾಗಿ ಸ್ವೀಕರಿಸಿದರು. ಈ ಘಟನೆಯೇ ಆಕೆಯ ಬದುಕಿನ ಸಮಸ್ತದ ಅಡಿಪಾಯ. ಏಕೆಂದರೆ ನರ್ತನವೇ ಮುಂದೆ ಆಕೆಯನ್ನು ‘ಮಹಾನಟಿ’ಯನ್ನಾಗಿಸುತ್ತದೆ.

      ಮೀನಾಕುಮಾರಿ, ಮಧುಬಾಲರಿಂದ  ಶ್ರೀದೇವಿಯವರೆಗೂ ನಟಿಯರ ಬದುಕುಗಳನ್ನು ಹೋಲಿಸಿ ನೋಡಿದರೆ ಹೆಚ್ಚು ಕಡಿಮೆ ಒಂದೇ ರೀತಿಯದ್ದು. ಆದರೆ ಇವರೆಲ್ಲರನ್ನೂ ದಾಟಿ ಸಾವಿತ್ರಿಯನ್ನು ಮಹಾನಟಿಯನ್ನಾಗಿಸಿದ್ದು ಏನಿರಬಹುದು ಎಂದು ನೋಡಿದರೆ ಪಟ್ಟಿ ತುಸು ಉದ್ದವಾಗುತ್ತದೆ.  ಕಷ್ಟದ ಬಾಲ್ಯ.  12ರ  ಬಾಲೆ ನೃತ್ಯ ಪಟು, 16ರ ಹೊತ್ತಿಗೆ ನಟಿ, 34ರ ವಯಸ್ಸಿಗೆ ನಿರ್ದೇಶಕಿ, ನಿರ್ಮಾಪಕಿ, ಗಾಯಕಿ. ಸತತ 2 ದಶಕಗಳ ಕಾಲ ಎರಡು ಭಾಷೆಗಳ ಚಿತ್ರರಂಗವನ್ನಾಳಿದಾಕೆ.   ವ್ಯಕ್ತಿತ್ವದಲ್ಲಿ ಧೀಮಂತೆ. ಆಕೆಯನ್ನು ಹೆಚ್ಚು ವಿಶಿಷ್ಟವಾಗಿಸುವುದೇ ಈಕೆ ಮಾಡಿದ ದಾನ, ಧರ್ಮಗಳು! ನಟನೆ, ನೃತ್ಯ, ನಿರ್ಮಾಣ ನಿರ್ದೇಶನ ಗಾಯನ ಮನೆ ಮಕ್ಕಳು  ಎಲ್ಲಾ ನಿಭಾಯಿಸಿದ ಇಂತಹ ಒಂದು ವ್ಯಕ್ತಿತ್ವ-ಕಲಾವಿದೆ ಕಂಗಾಲಾದದ್ದು, ಒಂದೇ ಒಂದು  ವಿಷಯದಲ್ಲಿ, ಅದು ಜೆಮಿನಿ ಗಣೇಶನ್! ಅದಾಗಲೇ ಆಲಮೇಲುನೊಂದಿಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದ ಮತ್ತು ಆತನಿಗಿಂತ ಹಿರಿಯಳಾದ ನಟಿ   ಪುಷ್ಪವಲ್ಲಿಯೊಂದಿಗೆ(ಹಿಂದಿ ಚಿತ್ರನಟಿ ರೇಖಾ ತಾಯಿ) ಇನ್ನೊಂದು ಸಂಬಂಧದಲ್ಲಿ 2 ಮಕ್ಕಳಿದ್ದ, ಜೆಮಿನಿ ಗಣೇಶನೊಂದಿಗೆ ಪ್ರೀತಿಯಲ್ಲಿ ಬಿದ್ದದ್ದು...

     35 ರಿಂದ 40ರ ವಯಸ್ಸಿಗೆ ನಿಲುಕುತ್ತಿದ್ದಂತೆ ಮಹಿಳೆಯರ ಚಹರೆಯ ಕಾಂತತ್ವ ಮನಸ್ಸಿಗೆ ಇಳಿಯುತ್ತದೆ.  ನಟಿಯರು 35 ದಾಟುತ್ತಿದ್ದಂತೆ ಪ್ರೌಢವಾಗಿ ಆಲೋಚಿಸಿ ಸಾಂಸಾರಿಕ ಬದುಕು ಮಕ್ಕಳು ಎಂದು ಪರ್ಯಾಯ ಜಗತ್ತಿಗೆ ಮರುಳುವ ಕಾಲ. ಆದರೆ ಸಾವಿತ್ರಿಯ ಬದುಕಿನ ಹರವು ಬೇರೆಯದ್ದೇ ಬಣ್ಣದ್ದು. 12ನೇ ವಯಸ್ಸಿಗೆ ನೃತ್ಯ ಕಲಾವಿದೆಯಾಗಿದ್ದ ಸಾವಿತ್ರಿ  ಬಣ್ಣದ ಲೋಕದ ಕದ ತಟ್ಟಿದಳು. ಅವಕಾಶಗಳು ಅಷ್ಟು ಸುಲಭವಾಗಿರಲಿಲ್ಲ. ಹೆಣ್ಣು ಇನ್ನೂ ಓದಿಗಾಗಿ ಹೊರಗೆ ಹೆಜ್ಜೆ ಇಡಲು ನೂರಾರು ಕಟ್ಟುಪಾಡುಗಳ ದಾಟಬೇಕಾದ ಸ್ಥಿತಿ. ಹೀಗಿರುವಾಗ ಪುರುಷ ಷಾಹಿ ಸಾಮಾಜ್ಯದ ಒಳಗೆ ಹೆಜ್ಜೆ ಇರಿಸುವುದು ದುಸ್ಸಾಧ್ಯವಾಗಿತ್ತು.  ಮೊದಲಿಗೆ ಚಿಕ್ಕ ಚಿಕ್ಕ ಪಾತ್ರಗಳಲ್ಲಿ ನಟಿಸಿದ ಸಾವಿತ್ರಿಯ ಚಿತ್ರರಂಗದ ಜೀವನ  ಆರಂಭವಾದದ್ದು 1950ರಲ್ಲಿ ಸಮರಂ ಚಿತ್ರದಿಂದ.



      ಸಾವಿತ್ರಿಯ ಎರಡನೇ ಮುಖ್ಯ ಭೂಮಿಕೆಯಲ್ಲಿ ತೆರೆಮೇಲೆ ಕಂಡ 1952ರ “ಪೆಳ್ಳಿ ಬೇಸಿ ಚೂಡು” ಚಿತ್ರದಿಂದ ಆಕೆಯಲ್ಲಿದ್ದ ನಟನಾ ಕೌಶಲ್ಯದ ಅಲೆ ಪ್ರಬಲವಾಯಿತು. ನಂತರ ದೇವದಾಸು, ಮಿಸ್ಸಮ್ಮ, ಮಾಯಾಬಾಜಾರ್... ಹೀಗೆ ಸತತ 252 ಚಿತ್ರಗಳಲ್ಲಿ ಆ ಕಾಲದ ಎಲ್ಲಾ ಮೇರು ನಟರೊಂದಿಗೆ ನಟಿಸಿರುವ ಈ ಮಹಾನ್ ಕಲಾವಿದೆಯ ಸಾಮರ್ಥ್ಯ ನಟನಾ ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ. 1968ರಲ್ಲಿ ಮಹಿಳೆಯರನ್ನೇ ಒಳಗೊಂಡ ತಂಡದಿಂದ ಮೊದಲ ಬಾರಿ ನಿರ್ದೇಶನಕ್ಕೆ ಇಳಿದ ಸಾವಿತ್ರಿ ನಿರ್ದೇಶಿಸಿದ “ಚಿನ್ನಾರಿಪಾಪುಲು ಚಿತ್ರ” ಅತೀ ದೊಡ್ಡ ಅಲೆ ಸೃಷ್ಟಿಸಿತು.

      ಚಿತ್ರರಂಗದಾಚೆ ಸಾವಿತ್ರಿ ಬೆಳಗುವುದೇ ಆಕೆಯ ಕುರುಣೆಯಿಂದ. ಅಗತ್ಯವಿದ್ದವರಿಗೆ ಧಾರಾಳತೆಯಿಂದ ಹಣ ಸಹಾಯ ನೀಡುತ್ತಿದ್ದಳು. ಒಮ್ಮೆ ಯಾರೋ ಧನ ಸಹಾಯ ಕೋರಿ,  ಆಕೆಯಲ್ಲಿ ಹಣವಿಲ್ಲದಿದ್ದಾಗ ಕೈಬಳೆಗಳನ್ನೆ ನೀಡಿದ್ದಳು.  ದಾನ ಮಾಡುವ ಸಂದರ್ಭ ಬಂದಾಗಲೆಲ್ಲಾ ಹಿಂದೆ ಮುಂದೆ ಯೋಚಿಸದೇ ದಾನ ಮಾಡುವ ಮಾನವೀಯ ಮಿಡಿತ ಆಕೆಗಿತ್ತು. ಒಮ್ಮೆ ಆರ್ಮಿ ರಿಲೀಫ್ ಫಂಡ್ಗೆ ದಾನ ಮಾಡಬೇಕಾದ ಸಂದರ್ಭದಲ್ಲಿ ಗಂಡ ಜಮಿನಿ ಗಣೇಶನ್ ಒಂದಷ್ಟು ಮೊತ್ತ ಇಬ್ಬರು ಸೇರಿ ದಾನ ಮಾಡುವುದಾಗಿ ನಿರ್ಧರಿಸಿದ್ದರೆ, ಈಕೆ ಮರು ಯೋಚಿಸದೇ ತನ್ನ ಎಲ್ಲಾ ಒಡವೆಗಳನ್ನು ದಾನವಾಗಿ ನೀಡುತ್ತಾಳೆ! ಈ ಘಟನೆ ಆಕೆಯ ಮಾನವೀಯತೆಯ ಒರತೆ ಬಗ್ಗೆ ಸದಾ ಉಲ್ಲೇಖವಾಗುತ್ತದೆ.

      ಇಷ್ಷೆಲ್ಲಾ ವಿಶೇಷಗಳಿದ್ದ ಆಕೆ ಅಂತ್ಯAತ ನೋವುಂಡದ್ದು ಪ್ರೇಮದ ಹಾದಿಯಲ್ಲಿ.  16ರ ಬಾಲೆ ಆಗಷ್ಟೇ ಬಣ್ಣದ ಲೋಕದಲ್ಲಿ ಕಣ್ಣು ಬಿಡುತ್ತಿದ್ದವಳು. ತನ್ನ ದುಪ್ಪಟ್ಟು ವಯಸ್ಸಿನ ಅದಾಗಲೇ ಒಂದು ಮದುವೆಯಿಮದ 04 ಮಕ್ಕಳಿದ್ದ  ಮತ್ತೊಂದು ಸಂಬಂಧದಿಂದಎರಡು ಮಕ್ಕಳಿದ್ದ ಜಮಿನಿ ಗಣೇಶನ್ ಮೋಹ ಪಾಶಕ್ಕೆ ಸಿಲುಕುತ್ತಾಳೆ.  ರಹಸ್ಯವಾಗಿ 1952ರಲ್ಲಿ ಮದುವೆ ಕೂಡ ಆಗಿ ಬಿಡುತ್ತದೆ. ಆಕೆಗೆ ಬೆನ್ನೆಲುಬಾಗಿ ನಿಂತಿದ್ದ ಸೋದರಮಾವ ಕೊಂಡರೆಡ್ಡಿ ವೆಂಕಟಚಾಲಯ್ಯ ಈ ಮದುವೆಯನ್ನು ತಡೆಯುವ ಪ್ರಯತ್ನದಲ್ಲಿ ಆಕೆಯನ್ನು ಬಿಟ್ಟುಹೊಗುತ್ತಾನೆ. ಸಾವಿತ್ರಿಯೊಂದಿಗೆ ಉಳಿಯುವುದು ಆಕೆಯ ತಾಯಿ ಮಾತ್ರ. ಜಮಿನಿ ಗಣೇಶನ್ ನೊಂದಿಗೆ ಸಾವಿತ್ರಿಗೆ ಎರಡು ಮಕ್ಕಳಾಗುತ್ತವೆ. ಇಬ್ಬರ ಜೋಡಿಯ ಬಹಳಷ್ಟು ಸಿನಿಮಾಗಳು ದಾಖಲೆ ಮಾಡುತ್ತವೆ. ಸಾವಿತ್ರಿ ಮನೆ ಮಕ್ಕಳು ಸಿನಿಮಾವನ್ನು ತೂಗಿಸಿಕೊಂಡು ದಾಪುಗಾಲಿಕ್ಕಿದ ಪರಿಗೆ  1960ರ ಹೊತ್ತಿಗೆ ಆಕೆಯ ನೆಟ್ ವರ್ತ್ 100 ಕೋಟಿ ದಾಟುತ್ತದೆ.  ಕಾರು ಕಲೆಕ್ಷನ್ ಹುಚ್ಚಿದ ಆಕೆಯ ಬಳಿ ಆ ಕಾಲಕ್ಕೇ ಮನೆಯ ಮುಂದೆ 10 ಮಾದರಿ ಕಾರುಗಳ ಸಾಲು! ಮತ್ತದೇನಾಯಿತು!! ಟೀ ನಗರದ ದೊಡ್ಡ ಐಷಾರಾಮಿ ಬಂಗಲೆಯಿಂದ ಅಣ್ಣಾನಗರದ ಅತೀ ಚಿಕ್ಕ ಮನೆಯಲ್ಲಿ 18 ತಿಂಗಳ ಕೋಮಾದಲ್ಲಿ ಕಳೆದು ಬದುಕಿನ ಕೊನೆ ಕಂಡದ್ದು!

     ಯಮನನ್ನು ಎದುರಿಸಿನಿಂತ ಸಾವಿತ್ರಿಯಷ್ಟೇ ಪವಿತ್ರವಾಗಿ ಪತಿ ಜಮಿನಿ ಗಣೇಶನ್ ಗೆ ಸಮರ್ಪಿತಳಾದದ್ದೇ?  ತನ್ನ ಅಸ್ತಿತ್ವ ಆತನಲ್ಲಿ  ಕಲೆತು ಹೋಗುವಷ್ಟು  ಆರಾಧಿಸಿದ್ದರಿಂದ  ಆದ ಪ್ರಮಾದ ಎನ್ನಬಹುದೇನೋ!?  ಸಾವಿತ್ರಿ ಬಣ್ಣದ ಲೋಕದ ತುತ್ತ ತುದಿಯಲ್ಲಿದ್ದ ವೇಳೆ ಜಮಿನಿ ಗಣೇಶನ್ ಸಿನೆಮಾ ಸಾಲಾಗಿ ನೆಲಕಚ್ಚುತ್ತಿದ್ದವು.  “ಕಿಂಗ್ ಆಫ್ ರೋಮಾನ್ಸ್”,  “ಕಾದಲ್ ಮನ್ನನ್” ಎನ್ನುವ ಬಿರದುಗಳಿದ್ದ ಜೆಮಿನಿ ಗಣೇಶನ್  ಆ ಪದಗಳಿಗೆ ಅನ್ವರ್ಥವಾಗಿದ್ದ! ಆತನ ಲಂಪಟತನದಿಂದ ಪದೇ ಪದೇ ಅವಳ ಆತ್ಮದ ಮೇಲೆ ಬಿದ್ದ ಆಳವಾದ ಹೊಡೆತಗಳು ಇನ್ನು ಹಿಂತಿರುಗಿ ಆತನನ್ನು  ನೋಡದಂತೆ  ಹೊರಬಂದರೂ ಅವನೊಂದಿಗೆ ಕಲಿತ ಕುಡಿತ ಮಾತ್ರ  ಅವಳನ್ನು ಬಿಡಲಿಲ್ಲ. ದೊಡ್ಡ ಪ್ರಮಾಣದ ಆಸ್ತಿ ನಿಭಾಯಿಸುವಲ್ಲಿ ವ್ಯವಹಾರಿಕವಾಗಿ ಆದ ಗಮನವಿರದ ನಡೆಗಳು ಆಕೆಯನ್ನು ಟಿ ನಗರದ ಐಷಾರಾಮಿ ಬಂಗಲೆಯಿಂದ ಅಣ್ಣಾನಗರದ ಚಿಕ್ಕ ಮನೆಗೆ ತಂದಿಟ್ಟವು. 

      ಇಷ್ಟಲ್ಲಾ ಸಾಧನೆ-ಏರಿಳಿತದ ಬದುಕಿನ ನಂತರ ಬಹುಶಃ ಕೊನೆಗೆ ಆಕೆಯೊಂದಿಗೆ ಉಳಿದಿದ್ದು ಕುಡಿತ ಮತ್ತು ಆಗಾಗ ಗುಂಪುಗಳಲ್ಲಿ ಬಂದು ಕಿಟಕಿಯಿಂದ ಆಕೆಯನ್ನು ನೋಡಿಹೋಗುತ್ತಿದ್ದ ಅಭಿಮಾನಿಗಳು ಮಾತ್ರವೇನೋ! ಶಿವಶಂಕರಿ ಎನ್ನುವ ಆಕೆಯ ಅಭಿಮಾನಿ 1981ರಲ್ಲಿ ಕೋಮಾದಲ್ಲಿದ್ದ ಸಾವಿತ್ರಿಯನ್ನು ಭೇಟಿ ಮಾಡಿದ ನಂತರ ಬರೆದ ಲೇಖನದಲ್ಲಿ   ಅದ್ಬುತವಾಗಿ ನವರಸಗಳನ್ನು ಚಹರೆಯಲ್ಲಿ ಅರಳಿಸಿದಾಕೆ ನೈಜವಾಗಿ ಪೇಲವ ವರ್ಣದಲ್ಲಿ ಹಾಸಿಗೆಯ ಮೇಲಿರುವುದನ್ನು ಶಬ್ದಗಳಲ್ಲಿ ತೆರೆದಿಟ್ಟಿರುವ ರೀತಿ ಓದಿ ಬಹಳಷ್ಟು ಹೊತ್ತು ಕದಲದೇ ಕೂರುವಂತಾಯಿತು.  ಕೇವಲ 45 ವರ್ಷಕ್ಕೆ 18 ತಿಂಗಳ ಕೋಮಾವಸ್ಥೆಯ ನಂತರ ಕೊನೆಗೊಂಡ ಬದುಕು! 



    ಈಕೆಯ  ಜೀವನಗಾಥೆ ಓದಿ ಮುಗಿಸುವ ಹೊತ್ತಿಗೆ ಸತತವಾಗಿ ಮನಸ್ಸನ್ನು ಹಿಂಡಿ ಹಾಕುವುದು ಒಂದೇ ಆಲೋಚನೆ! ಜಮಿನಿ ಗಣೇಶನ್ ಆಕೆಗೆ ಮಾಡಿದ ಅನ್ಯಾಯಗಳಿಗೆ ಪ್ರತಿಯಾಗಿ ಆತನ ಮುಖಮುರಿಯುವಂತೆ ಬದುಕಬಾರದಿತ್ತೇ ಎನ್ನುವುದು..

    ಮಾಮೂಲಿ “ಫ್ರಂಡ್ ಶಿಪ್” ಹೆಸರಿನ ಅಥವಾ  ಚಿತ್ರರಂಗದವರ ನಿತ್ಯದ ಕಥೆಗಳಂತಹ ವ್ಯವಹಾರಿಕ ಪ್ರೀತಿಯಾಗಿದ್ದರೆ ಆತನಂತೆ ಈಕೆಯೂ ಇನ್ಯಾರದೋ ತೆಕ್ಕೆಯಲ್ಲಿ ಆರಾಮವಾಗಿ ನಿದ್ರಿಸಿ ಬದುಕಿಬಿಡುತ್ತಿದ್ದಳೆನೂ. ಆದರೆ! ಬದುಕಾಗಿರುವ, ಅಂತರಂಗದಾಳಕ್ಕಿಳಿದು ಕಣಕಣದಿ ಬೆಸೆದವರ ವಿರುದ್ಧದ ಒಂದು ಚಿಕ್ಕ ಆಲೋಚನೆಗೂ ದೇಹದ ಯಾವ ಕೋಶವೂ  ಸ್ಪಂದಿಸಲಾರದೇನೋ! ನೃತ್ಯ, ನಟನೆ, ನಿರ್ಮಾಣ ನಿರ್ದೇಶನ, ಗಾಯಕಿಯಾಗಿ ಎಲ್ಲದಕ್ಕಿಂತ ಹೆಚ್ಚಾಗಿ ಮಾನವೀಯತೆಯಲ್ಲಿ ಅಸಾಧಾರಣಳಾಗಿದ್ದು ಎರಡು ದಶಕಗಳ ಕಾಲ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ, ಎರಡು ಭಾಷೆಗಳ ತೆರೆಗಳನ್ನಾಳಿದ ಸಾವಿತ್ರಿಗೆ “ಮೂನ್ ಅಮಾಂಗ್ ಸ್ಟರ‍್ಸ್” ಎಂದು ಅಕ್ಕರೆಯಿಂದ ಕರೆಯಲಾಗುತ್ತದೆ. ತೆಲುಗು ನಾಡು ಆಕೆಯನ್ನು “ಮಹಾನಟಿ” ಎಂದು ಕೊಂಡಾಡಿದರೆ, ತಮಿಳಿನ ನೆಲ ಆಕೆಯನ್ನು “ನಾಡಿಗೈರ್ ತಿಲಗಮ್” ಎಂದು ಮಮತೆಯಿಂದ ಕಾಣುವ ಈ ಎಲ್ಲಾ ಪಟ್ಟಗಳಿಗೆ  ಆಕೆ ಅನ್ವರ್ಥವಾಗಿದ್ದಾಳೆ... ಇದೆಲ್ಲದಕ್ಕಿಂತ ಹೆಚ್ಚಾಗಿ ಆಕೆಯ ಬಂಗಲೆಯ ಮೇಲೆ ಟ್ಯಾಕ್ಸ್ ರೈಡ್ ಆದಂತಹ ಘಟನೆ, ಆಕೆಯ ತೀವ್ರ ಅನಾರೋಗ್ಯದ ಸ್ಥಿತಿ ಇಂತಹ ಯಾವುದೇ ಪರಿಸ್ಥಿತಿಯಲ್ಲಿ ಆಕೆ ಮತ್ತೆ ತಿರುಗಿ ಜೆಮಿನಿ ಗಣೇಶನ್ ಸಹಾಯಕ್ಕಾಗಿ ಕೋರದೇ, ಬಂದಂತಹ ಚಿಕ್ಕ-ಪುಟ್ಟ ಪಾತ್ರಗಳನ್ನು ನಿಭಾಯಿಸಿ ಬದುಕು ಸಾಗಿಸುವುದು! ಆಕೆಯ ಅಂತ್ಯ ಕ್ರಿಯೆಯನ್ನು ಮುಂದಿದ್ದು ನಿಭಾಯಿಸಿದ ಅಕ್ಕಿನೇನಿ ನಾಗೇಶ್ವರ್ ರಾವ್, ಆಕೆಯ ಕಷ್ಟ ಸಮಯದಲ್ಲಿ ಆಕೆಗಾಗಿಯೇ ನಿರ್ದೇಶಿಸಿದ ದಾಸರಿ ನಾರಾಯಣ್ ಇವರು ಆಕೆಯ ಜೀವನದ ಹಾದಿಯಲ್ಲಿ ಸ್ಮರಣೀಯರೆನ್ನಿಸಿಬಿಡುತ್ತಾರೆ. 

    ಇದನ್ನರಿತ ನಂತರ ಆಕೆಯ ಬದುಕು ಟ್ರಾಜಿಕ್-ದುರಂತವೇ-ದುಃಖಮಯವೇ ಎಂದು ಏಳುವ ಪ್ರಶ್ನೆಗಳಿಗೆ ಅತ್ಯಂತ ಸಹಜವಾಗಿ ಏಳುವ ಉತ್ತರವೇ; ಖಂಡಿತಾ ಇಲ್ಲ!! ಅಗಾಧ ವ್ಯಕ್ತಿತ್ವದ ಆಕೆ “ಮಹಾನಟಿ”! ಎನ್ನುವುದು.

ನಟಿ ಕೀರ್ತಿ ಸುರೇಶ್-ದುಲ್ಕರ್ ಸಲ್ಮಾನ್ ಪತ್ರಗಳನ್ನು ಉಸಿರಾಡಿದಂತೆ ನಟಿಸಿದ್ದಾರೆ. ಸತತ ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡ ಈ ಚಿತ್ರ, ಆಕೆಯ ಬದುಕು ಕೊನೆಗೊಂಡ 40 ವರ್ಷಗಳ ನಂತರವೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾಳೆ ಎನ್ನುವುದರ ದ್ಯೋತಕವೇ ಸರಿ.


Comments

  1. ಕುತೂಹಲಕರ ಲೇಖನ. ಸಾವಿತ್ರಿ ಅತ್ಯುತ್ತಮ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. ದೇವದಾಸು ಚಿತ್ರದಲ್ಲಿ ಆಕೆಯ ಅಭಿನಯ ಅಮೋಘವಾದುದು. ಆಕೆಯ ಬದುಕು ದುರಂತದಲ್ಲಿ ಕೊನೆಯಾದದ್ದು ಶೋಚನೀಯ.ಅವರ ಜೀವನವನ್ನು ಮಧುಬಾಲಾ ಅಥವಾ ಶ್ರೀದೇವಿಯರೊಡನೆ ಹೋಲಿಸಲಾಗದಿದ್ದರೂ, ಮೀನಾಕುಮಾರಿ ಅವರ ಬಾಳಿಗೆ ಸ್ವಲ್ಪ ಸಾಮ್ಯವಿದೆ. ಲೇಖನದಲ್ಲಿ ಕೆಲವು ಮುದ್ರಣ ಮತ್ತು ಇತರ ದೋಷಗಳಿವೆ.

    ReplyDelete

Post a Comment