ರತ್ನನ್ ಪರ್ಪಂಚ

 ರತ್ನನ್ ಪರ್ಪಂಚ

ಹಾಸ್ಯ ಲೇಖನ ಅಣುಕು ರಾಮನಾಥ್




ನಂಜಿ, ರತ್ನ ಇಬ್ಬರೂ ತೋಟಕ್ಕೆ ಹೋದರು. ಪರಸ್ಪರ ಪ್ರೀತಿಸುವವರಿಗೆ ಉದ್ಯಾನದ ವಾತಾವರಣವು ಮನದ ಮಾತಿನ ಬಿರಡೆಯನ್ನೇ ಕಿತ್ತುಹಾಕಿ ಪದಗಳ ಕಾರಂಜಿಯನ್ನೇ ಚಿಮ್ಮಿಸಬೇಕಿತ್ತು. ಆದರೆ ಇಬ್ಬರೂ ಮಾತನಾಡಲಿಲ್ಲ. ಕಾರಣ?


ನಂಜಿ ರತ್ನಂಗ್ ತೋರಿದ್ಲೊಂದು

ದುಂಬಿ ತಬ್ಬಿದ್ ಊವ !

ರತ್ನನ್ ಮನಸಿನ್ ಅಡಗ್ ಸೇರಿತ್ತು

ನಂಜಿ ಮನಸಿನ್ ರೇವ !




ಇಂದಿನ ವ್ಯಾಲೆಂಟೈನ್ ದಿನ ಚಿಮ್ಮಿ ಸರಿಯುವ ಸಾವಿರಾರು ಎಸ್ಸೆಮ್ಮೆಸ್‍ಗಳಿಗೂ ಈ ಪುಟ್ಟ ಕವನದ ಗತ್ತು, ಗೈರತ್ತು ಇಲ್ಲ.


              ರತ್ನನ್ ಪದಗೋಳ್ ಜೋಶಂತಂದ್ರೆ

ಎಂಡದ್ನಶೆಗೂ ಮ್ಯಾಗೇ;

ಬುಲ್ಡೇಲ್ತೂರ್ಕೊಂಡ್ ರುದಯಕ್ಕಿಳ್‍ದ್ರೆ

ಕಾಮನ್ಬಿಲ್ಲಿನ್ ರಂಗೇ


ಎಂದರೆ ರತ್ನನ ಪದಗಳ ಬಗ್ಗೆ ಏನೇನೂ ಹೇಳಿದಂತಾಗಲಿಲ್ಲ. ಅವನ ಮನಸ್ಸನ್ನು ಹಡಗಾಗಿಸಿ ಇವಳ ಮನಸ್ಸನ್ನು ಬಂದರಾಗಿಸಿ, ಅವಳ ಜೀವನದ ಕೊಂಬೆಯ ಮೇಲೆ ಇವನು ಬಂದರ್ ನಂತೆ ಆಡುವಂತಹದ್ದನ್ನು ಪದಕೃಪಣತೆಯಲ್ಲಿ ತೋರುವ ಪರಿಯೇ ಅನನ್ಯ. ರಾಜರತ್ನಂ ಮುಂದುವರಿಯುತ್ತಾ


ಮನಸಿನ್ ಜೋಡಿ ಯೀಣೆ ಮುಂದೆ

ಬಾಯಿನ್ ಬುಡಬುಡಕೇನ !

ಮಾತ್ ಇಲ್ದೇನೆ ಅರ್ತ್ ಆಗ್ತಿದ್ರೆ –

ಆಡೋನ್ ಮನಸ್ನ? ಕ್ವಾಣ !


ಎನ್ನುತ್ತಾರೆ. ವಿದ್ಯುಲ್ಲತೆಯಂತಹವಳ ಮುಂದೆ ನಿಂತವನು earth ಅಲ್ಲ, ground ಆಗುತ್ತಿರುತ್ತಾನೆ. ಆ ಪರಿಸ್ಥಿತಿಯಲ್ಲಿ ಮಾತು ಬೇಕೆ? ‘ಮಾತಿಗೊಂದು ಅರ್ಥವೇಕೆ ಅರ್ಥವಿದ್ದರಷ್ಟೆ ಸಾಕೆ; ಮೋಡಗಳನು ನೋಡಿ ಕಲಿ; ಅರ್ಥ ಅಲ್ಪವೆಂದು ತಿಳಿ’ ಎಂದರು ಕುವೆಂಪು. Speak only if you can improve upon silence ಎನ್ನುತ್ತದೊಂದು ನಾಣ್ನುಡಿ. ಮಾತು ಮೌನದ ಗರ್ಭದಿಂದ ಉದಯಿಸುವ ಶಿಶು. ವಿಷಯ, ವಿವೇಕಗಳು ತುಂಬಿ ಹೊರಬಂದ ಮಾತುಗಳು ನವಮಾಸ ತುಂಬಿದಾಗ ಪ್ರಸವಿಸಿದ ಶಿಶು; ಜೊಳ್ಳು ತುಂಬಿದ ಅವಿವೇಕದ ಮಾತುಗಳು ಪ್ರಿಮೆಚ್ಯೂರ್ ಬೇಬಿ!

ಹೆಣ್ಣನ್ನು ಅಂಗಾಂಗಗಳ ವರ್ಣನೆಯ ಮೂಲಕ ಪರಿಚಯಿಸುವುದನ್ನು ಎಲ್ಲರೂ ಮಾಡಿಯಾರು. ಆದರೆ ಜನಸಾಮಾನ್ಯರಿಗೆ ಅರ್ಥವಾಗುವ ಉಪಮೆಗಳ ಮೂಲಕ ವರ್ಣಿಸುವುದು ದೊಡ್ಡ ಸವಾಲು. ರತ್ನದು ಈ ಬಾಬ್ತಿನಲ್ಲಿ ಎತ್ತಿದ ಕೈ.


ಫಳ್ಳಂತ್ ಅಲ್ಲಿನ್ ಬೆಳಕ್ ಉಕ್ತೈತೆ

ನನ್ ಪುಟ್ನಂಜಿ ನಕ್ರೆ !

ರೆಕ್ಕೆ ಬಿಳುಪನ್ ತೆಗೆದ್ ಎರಚ್ದಂಗೆ

ಸಾನ ಮಾಡಿದ್ ಕೊಕ್ರೆ

ನನ್ ಪುಟ್ನಂಜಿ ನಕ್ರೆ |


ಎನ್ನುವುದು ಪ್ರತಿ ಹಳ್ಳಿಗನಿಗೂ ತಿಳಿಯುವ ಸಾದೃಶ್ಯ. ತೇವಗೊಂಡ ರೆಕ್ಕೆಗಳನ್ನು ಪಟಪಟನೆ ಬಡಿಯುವಾಗ ಹಾರುವ ನೀರಿನ ಬಿಂದುಗಳು ಕೊಕ್ಕರೆಯ ಬಿಳುಪನ್ನೇ ಎರಚಿದಂತೆ ಅನ್ನಿಸುವುದು, ಅದನ್ನು ಪುಟ್ನಂಜಿಯ ನಗೆಗೆ ಹೋಲಿಸುವುದು ರಾಜರತ್ನಂರ ಕಾವ್ಯವೈಶಿಷ್ಟ್ಯಕ್ಕೆ ಹಿಡಿದ ದರ್ಪಣವಾಗಿದೆ.  ಇಲ್ಲೊಂದೇ ಡೌಟು – ಕೊಕ್ಕರೆಯ ಬಿಳುಪೂ ತುಟ್ಟಿಯಾಗಿರುವ ಕಾಲದಲ್ಲಿ ಕಡಿಮೆ ಬೆಲೆಗೆ ಸಿಗುವ ಬಟಾಣಿಯ ಹಸಿರಿನಂತೆ ಇದ್ದಿತೇ? ಸಸ್ತಾ ಎಂದು ತಂದ ಬಟಾಣಿಯನ್ನು ತಂದು ನೀರಿಗೆ ಹಾಕಿದರೆ ಹಸಿರು ನೀರಿಗೆ, ಒಣಬಟಾಣಿ ತಟ್ಟೆಗೆ ಹರಡಿಕೊಳ್ಳುವಂತೆ ಕೊಕ್ಕರೆಯದೂ ಡೂಪ್ಲಿಕೇಟ್ ಬಿಳುಪಾಗಿರುವ ಸಾಧ್ಯತೆ ಇದ್ದೀತೇನು?

‘ರತ್ನನನ್ನು ಕಂಡರೆ ನನಗೆ ಅಯ್ಯೋ ಅನ್ಸತ್ತೆ. ತನ್ನದೇ ಪುಸ್ತಕಗಳನ್ನು ಮಾರಿ ಹಣ ಮಾಡಿಕೊಳ್ಳುವುದನ್ನು ಬಿಟ್ಟು ನನ್ನ ಪುಸ್ತಕಗಳನ್ನು ಮಾರಿ ನನಗೆ ಹಣ ಕಳುಹಿಸುತ್ತಾನೆ ಅವನು’ ಎಂದಿದ್ದ ಟಿ.ಪಿ. ಕೈಲಾಸಂಗೆ ರಾಜರತ್ನಂರ ಬರಹಗಳು ಪ್ರಿಯವಾಗಿದ್ದವು. ಅದರಲ್ಲೂ ‘ಸುತ್ತಾ ಸಾಯೋ ಬಿಸಿಲಿನ್ ಚಾಪೆ; ಅಲ್ಲಲ್ಲೇ ಒಸಿ ನೆರಳಿನ್ ತೇಪೆ’ ಎಂಬ ಸಾಲನ್ನಂತೂ ಕೈಲಾಸಂ ಆಗಾಗ್ಗೆ ಮೆಲುಕು ಹಾಕುತ್ತಿದ್ದರು. ಒಮ್ಮೆ ರಾಜರತ್ನಂ ಕೈಲಾಸಂಗೆ ತಮ್ಮ ‘ಪುಟ್ನಂಜೀ ರತ್ನ’ ಪದ್ಯಗಳನ್ನು ಓದಿ ಹೇಳಿದರು. ಕೂಡಲೆ ಕೈಲಾಸಂ ‘ಪುಟ್ನಂಜೀದೇನೋ ಹೇಳಿದೆ. ಅವಳಕ್ಕ ದೊಡ್ನಂಜಿ ಗೊತ್ತಾ ನಿನಗೆ?’ ಎಂದು ಕೇಳಿದರು. ಪುಟ್ನಂಜಿಯೇ ರಾಜರತ್ನಂರ ಮಾನಸಿಕ ಶೋಧ; ಇಂತಿರುವಾಗ ದೊಡ್ನಂಜಿಯ ಪರಿಚಯ ಹೇಗಿದ್ದೀತು! ಕೈಲಾಸಂ ಆಗಿಂದಾಗೆಯೇ


ನೋಡಿದ್ರಾ ನಂ ನಂಜೀನಾವ

ನಂ ಗಜನಿಂಬೆ ನಂಜೀನಾವ

ಅವ್ಳ್ ನಕ್ರೆ ಗುಂಡ್ಗೆ ಗುಡುಗ್ತೈತೆ ಜುಂ ಜುಂ ಜುಂ

ಅವ್ಳ್ ವಾರ್ಗಣ್ಣಿನ್ ನೋಟಕ್ಕೇವ

ಅವ್ಳ್ ಕೀಟ್ಲೆ ಆಟದ್ ಕಾಟಕ್ಕೇವ

ನಂ ಅಳ್ಳೀಲಿರೋ ಐದರೆಲ್ಲ ಗುಂ ಗುಂ ಗುಂ


ಎಂದು ಹಾಡಿಯೇಬಿಟ್ಟರು. ‘ನಿಮ್ದೊಡ್ನಂಜಿ ಹುಟ್ಟಿದ್ದು ಯಾವಾಗ?’ ಎಂದರೆ ಅದು ಆಶುಕವಿತ್ವವೆಂದು ಹೇಳದೆ ‘ಪುಟ್ನಂಜಿಗಿಂತ ದೊಡ್ಡವ್ಳೂಂದ್ಮೇಲೆ ಮುಂಚೇನೇ ಹುಟ್ಟಿದ್ಲು’ ಎಂದರಂತೆ.

ಕೈಲಾಸಂ ಮತ್ತು ಜಿ.ಪಿ.ಯವರ ಸಾಹಿತ್ಯಪ್ರಕಾಶ ಅನನ್ಯವಾದುದು. ಕೈಲಾಸಂ ತಮ್ಮ purpose ನಾಟಕದ ಆರಂಭದಲ್ಲಿ

These scenes and words you’ll see and hear

I’ve seen and heard before

As King or Priest, poltroon or peer

somewhere some when of yore


ಎಂದು ಬರೆದುದನ್ನು ರಾಜರತ್ನಂ ಕನ್ನಡಕ್ಕೆ ಅನುವಾದಿಸಿರುವ ಪರಿ ಇಂತಿದೆ:

ನೀವು ಕಾಣುವ ನೀವು ಕೇಳುವ ದೃಶ್ಯಗಳನಿದ ಮಾತುಗಳನಿದ

ಕಂಡಿಹೆನು ಕೇಳಿಹೆನು ನಾನೀ ಪೂರ್ವದಲಿ

ರಾಜನಾಗಿಯೊ ವಿಪ್ರನಾಗಿಯೊ ಭೀರುವಾಗಿಯೊ ಧೀರನಾಗಿಯೊ

ಎಲ್ಲಿಯೋ ಮೇಣ್ ಏಗಳೋ ಜನಿಸಿರ್ದ ಕಾಲದಲಿ.


ಅಂತೆಯೇ ಹುತ್ತದಲ್ಲಿ ಹುತ್ತ ನಾಟಕದ ಆರಂಭದಲ್ಲಿ ಕೈಲಾಸಂ

The barque of humour often veers

From shoals of smiles to seas of tears !


ಎಂದು ಬರೆದುದನ್ನು ಅದಕ್ಕಿಂತಲೂ ಸೊಗಸಾದಿ ಕನ್ನಡದಲ್ಲಿ

ಕಿರಿಯಾಳದ ನಗೆನೀರಿನ ಮೇಲೆ

ತೇಲುತ್ತ ಬಹುವೇಳೆ

ಕಣ್ಣೀರಿನ ಕಡಲಿನ ಪಾಲು

ಹಾಸ್ಯದ ಹರಿಗೋಲು !


ಎಂದು ಅನುವಾದಿಸಿದರು. ಇದೇ ಭಾವವೇ ಅಡಿಗರ ‘ಅಳುವ ಕಡಲೊಳು ತೇಲಿ ಬರುತಿದೆ ನಗೆಯ ಹಾಯಿ ದೋಣಿ’ ಕವನದಲ್ಲಿಯೂ ಬಿಂಬಿತವಾಗಿ great men think alike ಎನ್ನುವುದಕ್ಕೆ ಅಡಿಗೆರೆಯಾಗಿ ಪರಿಣಮಿಸಿದೆ.


          ಕರ್ನಾಟಕ ಕರ್ಣಾಟಕಗಳ ದ್ವಂದ್ವದಲ್ಲಿ ಮಾತಿನ ದ್ವಂದ್ವಯುದ್ಧವೇ ನಡೆದಾಗ ‘ಪುರುಷ ಸರಸ್ವತಿ’ ಎಂಬ ಅನನ್ಯ ಕೃತಿಯನ್ನು ರಚಿಸಿದ ರಾಜರತ್ನಂ ಹೊಸ ಚಿಗುರು ಹಳೆ ಬೇರುಗಳ ಸುಮಧುರ ಸಮನ್ವಯವೇ ಆಗಿದ್ದರು.




          ಭಾರತಮಂ ಮೇಣ್ ಸಾಗರಮಂ

                ಮೇಣ್ ಇಕ್ಷುವಂ ಪಾದವೊಂದರೊಳ್ ಬಣ್ಣಿಪೆಯಾ |

                ಪಾದವಲ್ತು, ಸಾಲಿನಲೇ ವರ್ಣಿಪೆಂ

                ರಸಮಿರ್ಪುದು ಪ್ರತಿ ಪರ್ವದೊಳ್ |


ಇದು ಮೂಲ ಸಂಸ್ಕೃತದ ರತ್ನಾನುವಾದ. ಇಲ್ಲಿ ‘ಭಾರತ’ ಎಂದರೆ ಮಹಾಭಾರತ; ಸಾಗರ ಸಾಗರವೇ; ಇಕ್ಷುವೆಂದರೆ ಕಬ್ಬು. ಇವಿಷ್ಟನ್ನೂ ಒಂದು ಪಾದದಲ್ಲಿ ವರ್ಣಿಸಲು ಶಕ್ಯವೇ ಎಂದು ಸವಾಲೆಸೆದರೆ ‘ಪಾದವೇಕೆ? ಸಾಲೇ ಸಾಕು. ಮೂರರಲ್ಲಿಯೂ ಪ್ರತಿ ಪರ್ವದಲ್ಲಿಯೂ ರಸವಿದೆ’ ಎಂಬ ಸುಭಾಷಿತವಿದೆ. ಮಹಾಭಾರದಲ್ಲಿ ಇರುವುದೆಲ್ಲ ಪರ್ವಗಳೇ – ಆದಿಪರ್ವ, ಸಭಾಪರ್ವ, ಇತ್ಯಾದಿ. ಅವೆಲ್ಲವೂ ನವರಸಭರಿತ; ಸಾಗರದ ಅಲೆಗಳನ್ನು ಪರ್ವವೆನ್ನುತ್ತಾರೆ. ಅಲೆಗಳಲ್ಲಿ ರಾಸಾಯನಿಕಗಳು (ರಸಗಳು) ಇದ್ದೇ ಇರುತ್ತವೆ; ಕಬ್ಬಿನ ಜಲ್ಲೆಯಲ್ಲಿ ಗೆಣ್ಣುಗಳ ಮಧ್ಯದ ಭಾಗವನ್ನು ಪರ್ವವೆನ್ನುತ್ತಾರೆ. ಕಬ್ಬಿನ ರಸ ಶೇಖರವಾಗುವುದೇ ಆ ಭಾಗದಲ್ಲಿ. ಇಂತಾಗಿ ‘ರಸಮಿರ್ಪುದು ಪ್ರತಿ ಪರ್ವದೊಳ್’ ಎನ್ನುವುದು ಮೂರಕ್ಕೂ ಅನ್ವಯವಾಯಿತು.

          ‘ಮಡಿ’ ಸಂಸ್ಕೃತದಿಂದ ‘ಮೈಲಿಗೆ’ ಆಂಗ್ಲಕ್ಕೆ ಬಂದರೂ ರಾಜರತ್ನಂರದು ಅದೇ ಹತೋಟಿ. ‘Each candidate muse have a light pole before his house to avoid certain expenses’ ಎಂಬ ವಾಕ್ಯವೊಂದು ಎಲೆಕ್ಷನ್‍ಗೆ ನಿಲ್ಲುವ ಅಭ್ಯರ್ಥಿಗಳ ಮನೆಯ ಮುಂದೆ ದೀಪದ ಕಂಬವಿರಲೇಬೇಕೆಂಬ ನಿಯಮವನ್ನು ಸಾರುವುದಾಗಿತ್ತು. ಇಲ್ಲಿ ‘ಸರ್ಟನ್’ ಪದಕ್ಕೆ ‘ಕೆಲವು’ ಎಂದೂ, ‘ನಿಶ್ಚಿತ’ ಎಂದೂ ಅರ್ಥೈಸಬಹುದಾಗಿದ್ದು, ‘ಗೆದ್ದವನ ಮನೆಯ ಮುಂದೆ ಜನ ಸೇರುವುದರಿಂದ ಕತ್ತಲಿರಬಾರದು. ಅಭ್ಯರ್ಥಿಯು ಗೆದ್ದ ತಕ್ಷಣ ಮನೆಯ ಮುಂದೆ ಕಂಬ ನೆಡಿಸುವ ಖರ್ಚು ನಿಶ್ಚಿತವಾದುದು. ಇಲ್ಲಿ ‘ಕೆಲವು’ ಎಂಬ ಅರ್ಥ ಅನ್ವಯವಾಗುವುದಿಲ್ಲ’ ಎಂದು ಸ್ಪಷ್ಟವಾಗಿ ವಿವರಿಸುತ್ತಿದ್ದರು.

ಗತಿಸಿ 45 ವರ್ಷಗಳಾದರೂ ಇನಿತೂ ಹೊಳಪನ್ನು ಕಳೆದುಕೊಳ್ಳದ ರತ್ನವೇ ಗುಂಡ್ಲು ಪಂಡಿತ ರಾಜಯ್ಯಂಗಾರ್ ಉರುಫ್ ಜಿ.ಪಿ. ರಾಜರತ್ನಂ  ಕಾಲನ ಗಾಲಿಯು ಎನಿತು ವರ್ಷಗಳುರುಳಿದರೂ ಪ್ರಸ್ತುತವಾಗಿಯೇ ಉಳಿಯಬಲ್ಲ ಧೀಮಂತ. ಅವರ ಸ್ಮರಣೆ ಮುದಕರ, ಶುಭಕರ.   

 

Comments