ಇನ್ನೆಷ್ಟು ಪ್ರೀತಿಸಲಿ ನಿನ್ನ...

ಇನ್ನೆಷ್ಟು ಪ್ರೀತಿಸಲಿ ನಿನ್ನ...


- ಶ್ರೀಮತಿ ಮಂಜುಳಾ ಡಿ 



(tujhe kithana chahe aur  hum…)

 ಮೊದಲ ಬಾರಿ ಜೀವನಗಾಥೆಗಳನ್ನು ಓದಿ ಮುಗಿಸುವ ಹೊತ್ತಿಗೆ ಲೇಖನಕ್ಕೆ  ತತ್ ಕ್ಷಣ ಹೊಳೆದ ಶೀರ್ಷಿಕೆ ಇದೆ ಮತ್ತು ಇದು  ಅನ್ವರ್ಥವೆನಿಸಿತು.

     ಮೊಘಲ್ ದೊರೆಯು ತನ್ನ ಒಪ್ಪಿಗೆ ಇಲ್ಲದಿದ್ದರೂ ಬೆದರಿಸಿ ವರಿಸುವಂತೆ ಸೇನೆ ಕಳುಹಿಸಿದ್ದನ್ನು ದಿಟ್ಟತನದಿಂದ ವಿರೋಧಿಸಿ, ಇತಿಹಾಸ ದಾಖಲಿಸಿದ ರಾಜಕುಮಾರಿ. ತನ್ನ ಪ್ರೀತಿ ನಿರೂಪಿಸಬೇಕಾಸದ ಸಮಯ, ಅರೆಗಳಿಗೆ ಯೋಚಿಸದೇ ಇರಿದ ಕತ್ತಿಯಿಂದ ತನ್ನ ತಲೆ ತುಂಡರಿಸಿ ಎದುರಿಗಿದ್ದ ಸೇವಕಿಯ ಕೈಗಿತ್ತುಹೋಗು  ದೊರೆಗೆ ನನ್ನ ಉಡುಗೊರೆ ಎಂದು ನೀಡು..’ ಎಂದು ರಕ್ತದ ಮಡುವಿನಲ್ಲಿ ಬೆರೆತ ದೇಹದೊಂದಿಗೆ ಕುಸಿದು ಬೀಳುವ ರಾಣಿಯ ದೇಹ...! ಇಂತಹ ಘಟನೆಗಳ ರೌದ್ರ-ರಮಣೀಯತೆಯ ಊಹೆಯಿಂದಲೇ ಚಿಕ್ಕದಾಗಿ ಬೆವೆತುಹೋದಂತೆನಿಸಿತು. ಇದನ್ನು ಓದಿದ ಕೆಲವು ದಿನ ಅದೇ ಗುಂಗು ಎಷ್ಟರಮಟ್ಟಿಗೆ ಆವರಿಸಿತು ಎಂದರೆ ಲೇಖನ ಬರೆಯದೇ ಇರಲಾಗಲಿಲ್ಲ. ಇಂತಹ ಸಮರ್ಪಣಾ ಭಾವ ಭಾರತದ ಭೂಮಿಯ ಹೆಣ್ಣಿಗೆ ಮಾತ್ರ ಸಾಧ್ಯವೇನೋ ಅನಿಸಿದ್ದು ಸುಳ್ಳಲ್ಲ. ವಾಸ್ತವ ಪ್ರೇಮಕಥನಗಳೂ  ಒಂದಕ್ಕಿಂತ ಒಂದು ವಿಭಿನ್ನ, ಹೆಜ್ಜೆ ಹೆಜ್ಜಗೂ ಎದುರಿಸಿದ ಹಲವು ಮಜಲುಗಳು ಅತ್ಯಂತ ವಿಶಿಷ್ಠವೆನಿಸಿತು.  ಅಸಲಿಗೆ ರಜಪೂತ ಇತಿಹಾಸದ ಭಾಗವಾದ ವಿಶಿಷ್ಟ ಪ್ರೇಮಗಾಥೆಗಳು ಮುನ್ನೆಲೆಗೆ ಬರದೇ ಹೋದ ಬಗ್ಗೆ ಬಹಳ ಖೇದ ಮತ್ತು ಚಕಿತವೆನಿಸಿತು. ಕುರಿತು ಬರೆಯದೇ ಇರುವದು ಸಾಧ್ಯವೇ ಇಲ್ಲ ಎನಿಸಿತು.            

ಇತಿಹಾಸದ ಇಂತಹ ಘಟನೆ ಇಷ್ಟೊಂದು ಆಳವಾಗಿ ತಾಕಲು ಮುಖ್ಯ ಕಾರಣ ಬಂಗಾಳಿಯ ಪ್ರಸಿದ್ಧ ಲೇಖಕರಾದ ಬಂಕಿಮಚಂದ್ರ ಚಟ್ಟೋಪಾಧ್ಯಾಯರ ರಾಜಾಸಿಂಗ್ ಎಂಬ ಪುಸ್ತಕ. ಇದರ ಒಂದು ಚಿಕ್ಕ ಅನುವಾದಿತ ಭಾಗ ಓದಿ ಆದ ಪ್ರಭಾವ ಎಷ್ಟಿತ್ತೆಂದರೆ ಸತತ ಹದಿನೈದು-ಇಪ್ಪತ್ತು ದಿನ ಇದರ ಸಂಬಂಧಪಟ್ಟ ಓದಿಗಾಗಿ ತವಕಿಸಿದೆ. ಆಗ ದೊರತದ್ದೇ ಶ್ಯಾಮಲಾ ದಾಸ್ ರವರ ವೀರ್ ವಿನೋದ್ ವಾಲ್ಯೂಮ್- . ಇದರಲ್ಲಿ ಇತಿಹಾಸದ ಮಹತ್ತರ ಪತ್ರ ವ್ಯವಹಾರಗಳ ಸಂಗ್ರಹವಿದೆ. ಇದಲ್ಲದೇಗೌರವ್ ಗಾಥಾ ಮಹಾರಾಣಾ ರಾಜ್ ಸಿಂಗ್ ಕಿ ಎಂಬ ನಾಟಕವನ್ನು ಪ್ರಖ್ಯಾತ ನಾಟಕಕಾರಾದ ಶ್ರೀ ವಿಲಾಸ್ ಜಾನ್ವೆರವರು ರಚಿಸಿ ನಿರ್ದೇಶಿಸಿದ್ದಾರೆ. ದೇಬರಾನಿ ಮಿತ್ರ ರವರು ರಾಜ ಸಿಂಗ್ ಎಂಬ ಚಿತ್ರ ಸಹಿತ ಕಥೆಯ ಪುಸ್ತಕ ರಚಿಸಿದ್ದಾರೆ. 

ಇದೆಲ್ಲಕ್ಕಿಂತ ಮುಖ್ಯವಾಗಿ ಸಾಹಸಗಾಥೆಗಳು ರಾಜಸ್ತಾನದ ಜನಮಾಸದಲ್ಲಿ ಎಷ್ಟರಮಟ್ಟಿಗೆ ಆಳಕ್ಕಿಳಿದಿವೆ ಅಂದರೆ, ಜನಪದ ಹಾಡುಗಳ ರೂಪದಲ್ಲಿ ಇಂದಿಗೂ ರಾಜಕುಮಾರಿಯರ ಸಮರ್ಪಣಾ ಭಾವ ಮತ್ತು  ದಿಟ್ಟತನದ ಹರಿವು ಸದಾ ಹಸಿರಾಗಿದೆ.

*********

ತುಂಬಿದ ಸಭಾಂಗಣ. ನೆರೆದ ಮಂತ್ರಿವರ್ಯರು. ಅನುಮತಿಯೊಂದಿಗೆ ಸಭಾಂಗಣ ಪ್ರವೇಶಿಸಿದ ದೂತನೊಬ್ಬ ಓಲೆಯೊಂದನ್ನು ಮಂತ್ರಿಯೊಬ್ಬರ ಕೈಗಿಡುತ್ತಾನೆ. ರಾಜನ ಅನುಮತಿಯೊಂದಿಗೆ ಮಂತ್ರಿ ಓಲೆಯನ್ನು ಓದುತ್ತಾನೆ.

ಪತ್ರ ಓದುವುದು ಮುಗಿಯುವಷ್ಟರಲ್ಲಿ ಇಡೀ ಸಭಾಂಗಣವನ್ನು ಪ್ರವಾಹದ ನಂತರದ ನೀರವತೆ ಆವರಿಸುತ್ತದೆ. ಅಷ್ಟರವರೆಗೂ ಉತ್ಸಾಹದಿಂದ ಇದ್ದ ರಾಜನ ಚಹರೆಯಲ್ಲಿ ಅವಿಶ್ರಾಂತತೆಯ ಕಳೆ ಮೂಡುತ್ತದೆ. ಕೆಲವು ಸಮಯದ ಚಿಂತನೆಯ ನಂತರ ರಾಜ ನಿರ್ಣಯವನ್ನು ಸಭೆಗೆ ಬಿಡುತ್ತಾನೆ. ರಾಜನ ಮೌನವನ್ನೂ, ಚಿಂತಿತನಂತೆ ಕಂಡ ಕಳೆಯನ್ನೂ ಗಮನಿಸಿದ ಮಂತ್ರ‍್ರಿವರ್ಯರು ಎಲ್ಲಾ ಕೋನಗಳಿಂದ ಯೋಚಿಸಿ ನಿರ್ಣಯಕ್ಕೆ ಬರುವ ಅನಿವಾರ್ಯತೆ ಮನಗಾಣುತ್ತಾರೆ.

ಇಷ್ಟಕ್ಕೂ ಮಹಾರಾಜನನ್ನು ದಿಗಿಲುಗೊಳಿಸಿದ ಓಲೆಯಲ್ಲಿ ಇದ್ದುದದಾರೂ ಏನು? ಸಹಜವಾಗಿ ಯುದ್ಧದ ಘೊಷಣೆ, ಹತ್ತಿಕ್ಕಲು ಶ್ರಮಿಸಬೇಕಾಗಬಹುದಾದ ಇನ್ಯಾವುದೋ ದಂಗೆ..ಇದ್ಯಾವೂದೂ ಅಲ್ಲ! ಆದರೆ ಇವೆಲ್ಲವನ್ನೂ ಮೇಳೈಸಿದ ಓಲೆ ಬಂದ್ದದ್ದು ಒಬ್ಬ ರಾಜಕುಮಾರಿಯಿಂದ!

ಪತ್ರದ ಒಕ್ಕಣೆ ಹೀಗಿದೆ.

 ರಜಪೂತ ಮಹಾನ್ ಸಾಮಾಟ್ರ, ಏಕಲಿಂಗನಾಥನ ಭಕ್ತ ಮಹಾರಾಣಾ ರಾಜ್ ಸಿಂಗ್ ಗೆ ಪ್ರಣಾಮಗಳು. ಮೊಘಲ್ ಸಾಮ್ರಾಟ ಔರಂಗeಜ಼ೇಬ್ ನನ್ನನ್ನು ವರಿಸುವುದಾಗಿ ಹಠತೊಟ್ಟಿದ್ದಾನೆ. ಆತನನ್ನು ವರಿಸಲು ಒಪ್ಪದಿದ್ದಲ್ಲಿ ನಮ್ಮ ರಾಜ್ಯವನ್ನು ಆಕ್ರಮಣ ಮಾಡುವುದಾಗಿ ತಿಳಿಸಿದ್ದಾನೆ. ನನ್ನ ಧರ್ಮ ನನ್ನ ಮನಸಾಕ್ಷಿಗೆ ಎದುರಾಗಿ ಆತನನ್ನು ವರಿಸುವುದು ನನಗೆ ಸಾವಿಗೆ ಸಮಾನರಜಪೂತ ರಾಜಕುಮಾರಿಯಾದ ನಾನು ನನ್ನ ಮತ್ತು ನನ್ನ ರಾಜ್ಯದ ಗೌರವವನ್ನು ನಿಮ್ಮ ಕೈಗಿಡುತ್ತಿದ್ದೇನೆ. ನನ್ನನ್ನು ವಿವಾಹವಾಗಿ ನನ್ನ ಗೌರವ ರಾಜ್ಯದ ಗೌರವ ಕಾಪಾಡುತ್ತೀರೆಂದು ನಂಬಿದ್ದೇನೆ.”

ರಾಜಕುಮಾರಿ ತನ್ನ ಧರ್ಮ ಮತ್ತು ತನ್ನನ್ನು ವರಿಸುವ ಮೂಲಕ ತನ್ನನ್ನು ರಕ್ಷಿಸುವಂತೆ  ಕೋರಿ ಪತ್ರ ಕಳುಹಿಸಿದ್ದು ಊಹಿಸಿ ಕಲ್ಪಿಸಿ ಬರೆದ ಕಥೆಯಲ್ಲ. ಕಟು ವಾಸ್ತವ!

ಮಹಾರಾಣಾ ಇಡೀ ದರ್ಬಾರಿನ ಮುಂದೆ ಮೌನಿಯಾಗಿ ಹೋದ. ಕೆಲ ಸಮಯ ಕಲ್ಲಿನಂತಹ ಮೌನ ಆವರಿಸಿತು. ಒಂದು ಸಂಸ್ಥಾನದ ಅಧಿಪತಿಯಾಗಿ, ರಜಪೂತ ಯೋಧನಾಗಿ ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬ ಮನುಷ್ಯನಾಗಿ-ಗಂಡಸಾಗಿ ನಂಬಿ ಅರಸಿ ಬಂದ ಹೆಣ್ಣಿನ ರಕ್ಷಣೆಯ ಬಾಧ್ಯತೆ ಬಗ್ಗೆ ಯೋಚಿಸುತ್ತಿದ್ದ. ಒಂದೆಡೆ ಔರಂಗಜ಼ೇಬನ ಬೃಹತ್ ಶಕ್ತಿಯುತ ಸೇನೆ! ಮೇವಾಡದಂತಹ ಸಣ್ಣ ಸಂಸ್ಥಾನ ಮೊಘಲ್ ಸಾಮ್ರಾಟನನ್ನು ಎದುರಿಸುವದು ಸಾಧ್ಯವಿತ್ತಾ! ಇನ್ನೊಂದಡೆ ಸಹಾಯಕ್ಕಾಗಿ ಕೋರಿ ಬಂದ ತನ್ನದೇ ಧರ್ಮದ ಚಿಕ್ಕ ಸಂಸ್ಥಾನವೊಂದರ ರಕ್ಷಣೆ ಮಗದೊಂದೆಡೆ ತನ್ನನ್ನು ವರಿಸಿ ತನ್ನ ಧರ್ಮ ರಕ್ಷಿಸುವಂತೆ ಕೋರುತ್ತಿರುವ ಹೆಣ್ಣಿನ ಗೌರವದ ಪ್ರಶ್ನೆ. ಧರ್ಮಸಂಕಟದ ಸಮುದ್ರದಲ್ಲಿ ಮುಳುಗಿದ ರಾಜನ ಬುದ್ಧಿಮತ್ತೆ-ರಾಜತಾಂತ್ರಿಕತೆ ಮೆಚ್ಚುವಂಥದ್ದು, ಏಕೆಂದರೆ  ನಿರ್ಣಯವನ್ನು ಸಭೆಗೆ ಬಿಡುತ್ತಾನೆ. ಮಂತ್ರ‍್ರಿವರ್ಯರು, ಸಾಮಂತ ರಾಜರು ಒಕ್ಕೊರಲಿನಿಂದ ರಜಪೂತ ರಾಜಕುಮಾರಿಯ ಮತ್ತು ರಜಪೂತ ಸಂಸ್ಥಾನದ ಗೌರವ ಉಳಿಸುವುದೆಂದು ಕೂಗಿ ನಿರ್ಣಯ ಪ್ರಕಟಿಸುತ್ತಾರೆ.

ಹೀಗೆ ಪತ್ರ ಬರೆದ  ರಾಜಕುಮಾರಿಯೇ ಕಿಸನ್ಗಡದ ರಜಪೂತ ರಾಜಕುಮಾರಿ ಚಂಚಲಕುಮಾರಿ(ಚಾರುಮತಿ).  ಮೇವಾಡದ ಮಹಾರಾಣಾ ರಾಜ್ ಸಿಂಗ್ಗೆ ಆಕೆ ಪತ್ರ ಕಳುಹಿಸಿದ್ದು. ಕಿಸನ್ ಗಡದ ರಾಜಾ ರೂಪ್ ಸಿಂಗ್(1644-1658) ಅತ್ಯಂತ ಸಮರ್ಥ ಆಡಳಿತಗಾರರಲ್ಲಿ ಒಬ್ಬ. ರೂಪ್ ಗಡದ ಬಲಿಷ್ಠ ಸುಂದರ ಕೋಟೆಯ ನಿರ್ಮಿಸಿದ.  ರೂಪ್ ಸಿಂಗ್ ಗೆ ಮಾನ್ ಸಿಂಗ್ ಮತ್ತು ಚಂಚಲಕುಮಾರಿ  ಎಂಬ ಮಕ್ಕಳು. ಷಹಜಾನನ ಅತ್ಯಂತ ಪ್ರೀತಿಯ ರಾಜನಾಗಿದ್ದ ರೂಪ್ ಸಿಂಗ್, ಷಹಜಹಾನನ ಪರವಾಗಿ ಹಲವಾರು ಯುದ್ಧಗಳಲ್ಲಿ ಭಾಗಿಯಾಗಿ ವಿಶೇಷ ಗೆಲವು ಸಾಧಿಸಿದ್ದ. ಷಹಜಹಾನ ಮರಣ ಹೊಂದುವ ಸ್ಥಿತಿಯಲ್ಲಿದ್ದಾಗ ಮೊಘಲ್ ಪಟ್ಟಕ್ಕಾಗಿ ಏಳುವ  ಕೌಟುಂಬಿಕ  ಅಂತಃಕಲಹ. ಔರಂಗಜೇಬನನ್ನು ಎದುರಿದುವಂತೆ ಷಹಜಹಾನ ನೀಡಿದ ಅಣತಿ ಮೇರೆಗೆ, ಕಿಸನ್ಗಡದ ಸೇನೆ ರಾಜಾ ರೂಪ್ ಸಿಂಗ್ ಸಾರಥ್ಯದಲ್ಲಿ ಔರಂಗಜೇಬನ ಸೇನೆಯನ್ನು ಎದುರಿಸುತ್ತದೆ. ಸಮರ್ಥ ಯೋಜನೆಯೊಂದಿಗೆ ಕಣಕ್ಕಿಳಿಯುವ ರೂಪ್ ಸಿಂಗ್ ಕತ್ತಿ ಔರಂಗಜೇಬನ ಕತ್ತು ಸೀಳುವುದರಲ್ಲಿ ಸ್ವಲದರಲ್ಲಿ ಔರಂಗಜೇಬ ಪಾರಾಗುತ್ತಾನೆ. ಯುದ್ಧದಲ್ಲಿ ಹೋರಾಡಿ ವೀರಗತಿ ಪ್ರಾಪ್ತಿಯಾಗುತ್ತದೆ.

ಇದರ ನಂತರ ಅನಿವಾರ್ಯವಾಗಿ ಕಿಸನ್ ಗಡದ ರಾಜಪೀಠಕ್ಕೆ ಅತೀ ಚಿಕ್ಕ ವಯಸ್ಸಿನ ಮಾನ್ ಸಿಂಗ್ ಪದಾರೋಹಣವಾಗುತ್ತದೆ. ಇದೇ ವೇಳೆ ರಾಜಾ ರೂಪ್ ಸಿಂಗ್ ಮಗಳು ಚಂಚಲಕುಮಾರಿಯ ಬಗ್ಗೆ ಮತ್ತು ಆಕೆಯ ಹಲವು ಕಲೆಗಳು ಮತ್ತು ಯುದ್ಧಶಾಸ್ತ್ರದಲ್ಲಿನ ಪ್ರಾವೀಣ್ಯತೆಯ ಬಗ್ಗೆ ತಿಳಿದ ಔರಂಗಜೇಬ್ ಆಕೆಯನ್ನು ವಿವಾಹವಾಗುವ ಉದ್ದೇಶ ವ್ಯಕ್ತಪಡಿಸಿ ಒಪ್ಪದಿದ್ದಲ್ಲಿ ಕಿಸನ್ ಗಡವನ್ನು ಆಕ್ರಮಿಸಿಕೊಳ್ಳುವುದಾಗಿ ಘೋಷಿಸುತ್ತಾನೆ. ಕಿಸನ್ ಗಡದ ರಾಜ ಮಾನ್ ಸಿಂಗ್ ಅತೀ ಚಿಕ್ಕವಯಸ್ಸಿನವನಾದ್ದರಿಂದ, ರಾಜಮಾತೆಯರು ರಾಜ್ಯದ ಸಂರಕ್ಷಣೆಯ ದೃಷ್ಟಿಯಿಂದ ಚಾರುಮತಿಯನ್ನು ಔರಂಗಜೇಬನಿಗೆ ವಿವಾಹ ಮಾಡಿಕೊಡುವುದಾಗಿ ಅನಿವಾರ್ಯವಾಗಿ ಒಪ್ಪುತ್ತಾರೆ. ಔರಂಗಜೇಬ್ ರಾಜಕುಮಾರಿ ಚಂಚಲಕುಮಾರಿಯನ್ನು ಕರೆತರಲು ಸೇನಾಧಿಪತಿ ಮುಬಾರಕ್ ನೇತೃತ್ವದಲ್ಲಿ ಸೇನಾ ತುಕಡಿಯೊಂದನ್ನು ಕಳಿಸುತ್ತಾನೆ.



ವಿಷಯ ತಿಳಿದ ರಾಜಕುಮಾರಿ ಚಂಚಲಕುಮಾರಿ ಔರಂಗಜೇಬನ ಪ್ರತಿಕೃತಿಯನ್ನು ಎಡಗಾಲಿನಿಂದ ತುಳಿದು,  ಚಿಕ್ಕಂದಿನಿಂದ ಆತನ ಆರಾಧನೆಯಲ್ಲೇ ಬೆಳದ ಮಹಾರಾಣಾ ರೂಪ್ ಸಿಂಗ್ ಗೆ ಪತ್ರ ಕಳುಹಿಸುತ್ತಾಳೆ. ಮಹಾರಾಣಾ ರಾಜ್ ಸಿಂಗ್ ತನ್ನ ಸಮಸ್ತ ಸಾಮಂತ ರಾಜರು ಮಂತ್ರಿಗಳೊಂದಿಗೆ ಚರ್ಚಿಸಿ ತನ್ನೀಡಿ ಸೇನೆಯನ್ನು ಎರಡು ಭಾಗಗಳಾಗಿ ವಿಂಗಡಿಸುತ್ತಾನೆ. ದೊಡ್ಡ ಸೇನೆಯನ್ನು ಸಲುಂಬರ್ ಸಾಮಂತ ರಾಜ ರತನ್ ಸಿಂಗ್ ಚುಡಾವತ್ ನೇತೃತ್ವದಲ್ಲಿ ಔರಂಗಜೇಬನ ಸೇನೆಯನ್ನು ಉಳಿದ ಸಾಮಂತ ರಾಜರೊಂದಿಗೆ ಆಲಮ್ಗಡದಲ್ಲಿ ಎದರುರಿಸಲು ಕಳುಹಿಸಳಾಗುತ್ತದೆ. . ಚಿಕ್ಕ ಸೇನೆಯೊಂದಿಗೆ ಮಹಾರಾಣಾ ರಾಜ್ ಸಿಂಗ್ ಕಿಸನ್ ಗಡಕ್ಕೆ  ರಾಜಕುಮಾರಿ ಚಾರುಮತಿಯೊಂದಿಗೆ ವಿವಾಹವಾಗಲು ತೆರಳುತ್ತಾನೆ. 

 ರಾಜಕುಮಾರಿ ಚಾರುಮತಿಯ ಕೋರಿಕೆಯಂತೆ ಆಕೆಯನ್ನು ವಿವಾಹವಾಗಲು ಬಂದಿರುವುದಾಗಿ ಮತ್ತು  ಔರಂಗಜೇಬನಿಂದ ಕಿಸನ್ ಗಡವನ್ನು ರಕ್ಷಿಸುವುದಾಗಿ ಮಹಾರಾಣಾ ರಾಜ್ ಸಿಂಗ್  ಕಿಸನ್ ಗಡ ಸಂಸ್ಥಾನಕ್ಕೆ ಭರವಸೆ ನೀಡುತ್ತನೆ. ಭರವಸೆಯ ಆಸರೆಗೆ ಕಿಸನ್ ಗಡ ಸಂಸ್ಥಾನದಲ್ಲಿ ಮತ್ತೆ ರಜಪೂತ ಕಳೆ ಅರಳುತ್ತದೆ. ವಿವಾಹ ಸಂಪನ್ನಗೊಂಡು ರಾಣಿ ಚಂಚಲಕುಮಾರಿಯನ್ನು ಉದಯ್ ಪುರಕ್ಕೆ ಕರೆತುವಷ್ಟರಲ್ಲಿ ಹತ್ತು ದಿನ ಕಳೆಯುತ್ತದೆ.

ಮಹಾರಾಣಾ ರಾಜ್  ಸಿಂಗ್-ಚಾರುಮತಿ ವಿವಾಹ ಕಿಸನ್ ಗಡದಲ್ಲಿ  ಸಂಪನ್ನವಾಗುವವರೆಗೂ,  ಔರಂಗಜೇಬನ ಸೇನೆಯನ್ನು ಆಲಮ್ ಗಡದಲ್ಲಿ ತಡೆದು  ನಿಲ್ಲಿಸಲು ರತನ್ ಸಿಂಗ್ ಚೂಡಾವತ್  ವೀರಾವೇಶದಿಂದ ಕಾದಾಡುತ್ತಾನೆ. ಹೀಗೆ ಶಕ್ತಿಯುತ ಮೊಘಲ್ ಸೇನೆಯನ್ನು ಸತತ ಹತ್ತು ದಿನ ತತ್ತರಿಸಿ ನಿಲ್ಲುವಂತೆ ರತನ್ ಸಿಂಗ್ ಒಂದೇ ಉಸಿರಿನಲ್ಲಿ ಹೋರಾಡುವಂತೆ ಮಾಡಿದ್ದಾದರೂ ಏನು...!?  ಚಿಕ್ಮ ಸೇನೆಯ ಸಹಕಾರದೊಂದಿಗೆ    ಬಲಿಷ್ಠ ಮೊಘಲ್ ಸೇನೆಯನ್ನು ಹತ್ತುದಿನ ತಡೆದು ನಿಲ್ಲಿಸುವಷ್ಟು ಧೀಶಕ್ತಿ ರತನ್ ಸಿಂಗ್ ಚೂಡಾವತ್ ಗೆ ಬಂದಿದ್ದಾದರೂ ಹೇಗೆ!?

(ಮುಂದುವರೆಯುವುದು...)

Comments