ಇಂದಿನ ಪಾಡಿಗೆ ಅಂದಿನ ಹಾಡು

 ಇಂದಿನ ಪಾಡಿಗೆ ಅಂದಿನ ಹಾಡು

ಹಾಸ್ಯ ಲೇಖನ - ಅಣುಕು ರಾಮನಾಥ್ 

“ಐವತ್ತು ವರ್ಷಗಳಷ್ಟು ಹಿಂದೆಯೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸಿಗುತ್ತೆ ಅಂತ ಗೊತ್ತಿತ್ತು” ನುಡಿದ ಸೀನು. ನನ್ನ ಹುಬ್ಬು ನೆತ್ತಿಯತ್ತ ಮುಖ ಮಾಡಿತು. 

“ಬಾಬಿ ಚಿತ್ರದಲ್ಲಿ ‘ಮೈ ಮಾಯ್ಕೇ ಚಲೀ ಜಾವೂಂಗೀ ತುಮ್ ದೇಖತೇ ರಯ್ಯೋ’ ಎಂಬ ಹಾಡಿನ ಸಾಲು ಇದೆಯಲ್ಲ, ‘ನೀನೇನೂ ಬಸ್ ಚಾರ್ಜ್ ಕೊಡೋ ಅಗತ್ಯ ಇಲ್ಲ. ಸರ್ಕಾರಣ್ಣ ಕೊಡ್ತಾನೆ, ನಾನ್ಹೋಗ್ತೀನಿ, ನೀನು ಪೆಂಗನ ತರಹ ನಿಂತು ನೋಡ್ತಿರು’ ಅನ್ನೋದೇ ಆ ಹಾಡಿನ ಫ್ಯೂಚರಿಸ್ಟಿಕ್ ಇನ್ನರ್ ಮೀನಿಂಗು” ವಿವರಿಸಿದ ಸೀನು. ‘ಎಲ್ಲಿಯದನೋ ಅದೆಲ್ಲಿಯದಕೋ ಹೆಣೆಯುವನು ವಿಧಿ’ ಎಂದಿದ್ದರು ಡಿವಿಜಿ. ಆ ಬಾಬ್ತಿನಲ್ಲಿ ಸೀನು ವಿಧಿಯ ದೂರದ ಕಸಿನ್.  


‘ಎಲ್ಲಿಯ ಹಾಡು, ಎಲ್ಲಿಯ ಪಾಡು; ಅತ್ತಣಿಂದಿತ್ತ ಸಂಬಂಧ! why yar?’ ಎಂದೆ. 

‘ಎಂದೋ ಆಗುವುದನ್ನು ಇಂದೇ ನುಡಿಯುವವರೇ ಕವಿಗಳು. ‘ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು’ ಜನಪದರೂ ಭವಿಷ್ಯ ನುಡಿಯುತ್ತಿದ್ದರು ಎಂಬುದಕ್ಕೆ ಸಾಕ್ಷಿ.’

‘ಅದೆಂತಹ ಭವಿಷ್ಯವೋ?’

‘ಎಷ್ಟೇ ಹುಡುಕಿದರೂ ಕಾಣದಿರುವುದೇ ಭಗವಂತನ ಪ್ರೈಮರಿ ಕ್ವಾಲಿಟಿ. ಇಂದು ಸತ್ಯವೂ ಎಷ್ಟೇ ಹುಡುಕಿದರೂ ಸಿಗುವುದಿಲ್ಲ. ದೇರ್ಫೋರ್, ಸತ್ಯ=ಭಗವಂತ. ಇದನ್ನೇ ಪುಣ್ಯಕೋಟಿ ಹೇಳಿದ್ದೂಂತ ಜನಪದಕವಿ ಹೇಳಿದ್ದು’ ಭುಜ ಕುಣಿಸಿದ ಸೀನು. 

‘ನಿನ್ನ ಪ್ರಕಾರ ಬೆಂಗಳೂರಿನ ಪಾಟ್‍ಹೋಲ್‍ಗಳ ಬಗ್ಗೆ ಸಂತ ಶಿಶುನಾಳ ಶರೀಫರು ನುಡಿದಿದ್ದರೇನು?’ ಕಿಚಾಯಿಸುವುದು ನನ್ನ ಆಜನ್ಮವಷ್ಟೇ ಅಲ್ಲದೆ ಈಜನ್ಮಕ್ಕೂ ಸಿದ್ಧವಾಗಿರುವ ಹಕ್ಕು. 

‘ಯಾವ ಬಾಬ್ತು ನೀನು ಹೇಳ್ತಿರೋದು?’

‘ಮುಂದೆ ಹೋಗಿ ಬಿದ್ದರೆ ನೀನು ಮತ್ತ ಹ್ಯಾಂಗ ಹಿಂದಕ ಬರತಿ... ಬುದ್ಧಿಗೇಡಿ ಮುದುಕಿ ನೀನೂ....’ 

‘ಓಹ್! ಅದು ಪಾಟ್‍ಹೋಲ್ ಬಗ್ಗೆ ಅಲ್ಲ. ಮ್ಯಾನ್‍ಹೋಲ್ ಬಗ್ಗೆ. ಒಮ್ಮೆ ಒಳಸೇರಿದರೆ ಮತ್ತೆ ಮೇಲಕ್ಕೇ ಪಯಣ. ‘ಕೋಡಗನ ಕೋಳಿ ನುಂಗಿತ್ತಾ’ ಹಾಡಿನಲ್ಲಿ ಬರುವ ‘ಒಳ್ಳು ಒನಕೆಯಾ ನುಂಗಿ’ ಅನ್ನೋ ಸಾಲಿಗೆ ಅನ್ವಯಿಸುವುದು ಪಾಟ್‍ಹೋಲ್ ಕಥೆ. ಒನಕೆಯಂತೆ ನೇರವಾಗಿ ಕುಳಿತು ರೈಡ್ ಮಾಡುವವನನ್ನು ಒರಳಿನಂತೆ ಕಾಣಿಸುವ ಹಳ್ಳ ಒಳಸೆಳೆದುಕೊಂಡು ಚೆನ್ನಾಗಿ ಪುಡಿಗುಟ್ಟಿಸುತ್ತದೆ ಎನ್ನುವುದು ಅದರ ಅರ್ಥ’ ನವಾರ್ಥಕೋಶವನ್ನು ತೆರೆದಿಟ್ಟನವ. 

‘ಭಾಗ್ಯವಂತರು ಎಂಬ ಚಿತ್ರದ ಗೀತೆಯೂ...’ ಎನ್ನುತ್ತಲೇ ‘ಕರೆಕ್ಟ್. ಶಾಕ್ ಭಾಗ್ಯ... ಕ್ಷಮಿಸು... ವಿದ್ಯುತ್ ಭಾಗ್ಯ, ಪ್ರವಾಸಭಾಗ್ಯ ಮುಂತಾದವೆಲ್ಲ ಸಿಗುತ್ತವೆಂದು ಅಂದೇ ತಿಳಿದಿದ್ದರಿಂದಲೇ ಭಾಗ್ಯವಂತರು ನಾವು ಭಾಗ್ಯವಂತರು ಎಂದು ಹಾಡಿದ್ದು. ‘ಮನೆಯನು ಬೆಳಗಿದೆ ಇಂದು; ನೀ ಬಂದು...’ ಎನ್ನುವ ಹಾಡೂ ಈಗಿನ ಸರ್ಕಾರದ 200 ಯೂನಿಟ್ ಬಿಟ್ಟಿಯ ಬಗ್ಗೆ ಅಂದೇ ಬರೆದ ಹಾಡು.’

‘ಸಿಕ್ಕಾಪಟ್ಟೆ ಸೀರಿಯಸ್ಸಾದ ಸೀರಿಯಲ್‍ಗಳ ಬಗ್ಗೆ ಯಾವ ಹಾಡಿದೆ?’

‘ಅಳುವ ಕಡಲೊಳು ತೇಲಿ ಬರುತಿದೆ ನಗೆಯ ಹಾಯಿ ದೋಣಿ ಎಂದು ಅಡಿಗರು ಅಂದೇ ಬರೆದಿದ್ದರಲ್ಲ...’

‘ಸೀರಿಯಲ್ಲಲ್ಲಿ ನಗೆ ಇರುವುದಿಲ್ಲವಲ್ಲ?’

‘ಸ್ವಿಚ್ ಆಫ್ ಮಾಡಿದಾಗ ನೆಮ್ಮದಿಯ ನಗೆ ಮೂಡುವುದಲ್ಲ, ಅದೇ ನಗೆಯ ಹಾಯಿದೋಣಿ.’

‘ಜಾಹಿರಾತುಗಳ ಬಗ್ಗೆ ಯಾವ ಹಾಡಿದೆ?’

‘ನಗುನಗುತಾ ನೀ ಬರುವೆ; ನಗುವಿನಲೆ ಮನ ಸೆಳೆವೆ; ನಗಿಸಲು ನೀನು ನಗುವೆನು ನಾನು ಕೊಳ್ಳುವೆ ಕಸವನ್ನೇ...’

‘ಕೊನೆಯಲ್ಲಿ ವ್ಯತ್ಯಾಸ ಮಾಡಿದೆಯಾ?’

‘ಜಾಹಿರಾತಿನ ವಸ್ತುಗಳು ಮಾಡುವುದೂ ಅದನ್ನೇ ಆದ್ದರಿಂದ ಈ ಸಾಹಿತ್ಯವೇ ಸರಿ.’

‘ಮತದಾರರ ಬಗ್ಗೆ ಯಾವ ಹಾಡಿದೆ?’

‘ಮೊದಲ ಸಾಲು ನಾಯಕರ ಭರವಸೆಯನ್ನು ತೋರುವಂತಹದ್ದು – ನಾನಿರುವುದೆ ನಿಮಗಾಗಿ...’

‘ನಂತರದ್ದು?’

‘ನಾಯಕರ ವ್ಯಾಪಾರಕ್ಕೆ ಸಂಬಂಧಿಸಿದ್ದು – ನಾಡಿರುವುದು ನಮಗಾಗಿ!’ 

‘ಒಂದು ವಿಷಯದ ಬಗ್ಗೆ ನಿನ್ನಲ್ಲಿ ಹಾಡುಗಳಿಲ್ಲ’ ಅತೀವ ವಿಶ್ವಾಸದಿಂದ ನುಡಿದೆ, ‘ಟೊಮೇಟೋ ಬೆಲೆ ಏರಿಕೆಯ ಬಗ್ಗೆ!’

‘ಈಗ ಟೊಮೆಟೋ ಸಸಿಗಳಿಗೆ ಬೇಡಿಕೆ ಹೆಚ್ಚಿದೆ. ಇದನ್ನು ಬಿಂಬಿಸಲು ಹಳೆಯ ಹಾಡೊಂದಿದೆ. ಮೊದಲ ಅಕ್ಷರವಷ್ಟೇ ವ್ಯತ್ಯಾಸ’ ಕುತೂಹಲ ಕೆರಳಿಸಿದ ಸೀನು. 

‘ಯಾವುದು?’

‘ಹೊಲವೆ ಜೀವನ ಸಾಕ್ಷಾತ್ಕಾರ; ಹೊಲವೇ ಮರೆಯದ ಮಮಕಾರ! ಟೊಮೇಟೋದ ಚೆಲುವಿನ ಬಗ್ಗೆಯೂ ಒಂದು ರೀಮಿಕ್ಸ್ ಹಾಡು ಇದೆ.’

‘ಯಾವುದು?’

‘ನಿನ್ನ ರೂಪು ಎದೆಯ ಕಲಕಿ ತನು ಮಿಂದಾಗ; ನಿನ್ನ ರೇಟು ಕೇಳಿದಾಗ ಠಂಡಾ ನಾನಾಗ!’

‘ಈಗಿನ ವಿಧಾನಸೌಧದ ಸೆಷನ್‍ ಬಗ್ಗೆ ಯಾವುದಾದರೂ ಹಾಡನ್ನು ಹೇಳಬಲ್ಲೆಯೇನು?’ 

‘ಖಂಡಿತ. ‘ರೋಟಿ ಕಪಡಾ ಔರ್ ಮಕಾನ್’ ಚಿತ್ರದ ಗೀತರಚನಕಾರನೇ ಇಂದಿನ ಸೆಷನ್ನನ್ನು ‘ಮೇ ನಾ ಭೂಲೂಂಗಾ; ಮೈ ನಾ ಭೂಲೂಂಗೀ; ಇನ್ ರಸಮೋಂಕೋ ಇನ್ ಕಸಮೋಂಕೋ ಇನ್ ರಿಷ್ತೇ ನಾತೋಂಕೋ....’ ಎಂದು ವರ್ಣಿಸಿದ್ದಾನೆ.’

‘ಕೊಂಚ ವಿವರಿಸು.’

‘ರೀ... ನೀವು ಕೂತಿದ್ದಾಗ ಏನ್ಕಿಸಿದ್ರೀಂತ ಮೈ ನಾ ಭೂಲೂಂಗಾ’ ಎಂದು ಆಡಳಿತವೂ, ‘ನಿಮ್ಮ ಯಾವುದೇ ಭ್ರಷ್ಟತೆಯನ್ನೂ ಮೈ ನಾ ಭೂಲೂಂಗಾ’ ಎಂದು ವಿರೋಧಪಕ್ಷವೂ ಹಾಡುತ್ತಿವೆ. ‘ನಿಮ್ಮ ರೀತಿನೀತಿಗಳು, ನಿಮ್ಮ ಮಾತುಗಳು ಯಾವುದನ್ನೂ ನಾವು ಮರೆಯಲ್ಲ’ ಎನ್ನುವುದೇ ‘ಇನ್ ರಸ್ಮೋಂಕೋ ಇನ್ ಕಸಮೋಂಕೋ’ದ ಅರ್ಥ. ಪರಸ್ಪರ ಗೂಬೆಕೂರಿಸುವಿಕೆಯನ್ನೇ ನಮ್ಮಲ್ಲಿ ಸೆಷನ್ ಎಂದು ಕರೆಯುವುದು. ರಿಷ್ತಾಗಳನ್ನು in ಮಾಡಿಕೊಳ್ಳುವುದೇ ಪಾಲಿಟಿಕ್ಸ್ ಆದ್ದರಿಂದ ಇನ್ ರಿಷ್ತೇ; ಸ್ವಜನಪಕ್ಷಪಾತ ದುರ್ನಾತವನ್ನು ಹರಡುತ್ತದೆ ಎನ್ನುವುದೇ ‘ನಾತೋಂಕೋ’ದ ಡಿರೈವ್ಡ್ ಮೀನಿಂಗು’ ಸುದೀರ್ಘ ವಿವರಣೆಯಿತ್ತ ಸೀನು. 

‘ಬೆಂಗಳೂರಿನಲ್ಲಿ ಮಳೆ ಬೀಳುತ್ತಿದ್ದಂತೆಯೇ ಕೆಳಮಟ್ಟದಲ್ಲಿರುವ ಮನೆಗಳು ಮುಳುಗುವುದನ್ನು ಯಾವ ಕವಿ ಯಾವ ಹಾಡಿನಲ್ಲಿ ಕಂಡಿದ್ದ?”

‘1960ರ ‘ಬರಸಾರ್ ಕೀ ರಾತ್’ ಚಿತ್ರದ ‘ಜಿಂದಗೀ ಭರ್ ನಹೀ ಭೂಲೇಗಿ ಓ ಬರಸಾತ್ ಕಿ ರಾತ್’ ಎಂಬ ಹಾಡಿನ ಸಾಲು. ಇದನ್ನು ಅಂದೇ ಕಂಡ ಕವಿ ಸಾಹಿರ್ ಲೂಧ್ಯಾನ್ವೀ. ಮಳೆಯ ನೀರು ಮನೆಯಲ್ಲಿ ನುಗ್ಗಿ ಕಷ್ಟಕ್ಕೆ ಸಿಲುಕಿದವರು ನೆರವಿಗಾಗಿ ಕರೆಯುವುದನ್ನು ಅದಕ್ಕೂ ಒಂದು ವರ್ಷ ಮುಂಚೆ ಭರತ್ ವ್ಯಾಸ್ ಎಂಬ ಕವಿ ಕಂಡುಕೊಂಡಿದ್ದರು.’

‘ಯಾವ ಹಾಡಿನ ಯಾವ ಸಾಲು?’

‘ರಾಣಿ ರೂಪಮತಿ ಚಿತ್ರದ ‘ಆ ಲೌಟ್ ಕೆ ಆಜಾ ಮೇರೇ ಮೀತ್’ ಹಾಡಿನ ‘ಬರಸೇ ಗಗನ್ ಮೇರೇ ಬರಸೇ ನಯನ್ ದೇಖೋ ತರಸೇ ಹೈ ಮನ್ ಅಬ್ ತೂ ಆಜಾ’ ಎಂಬ ಸಾಲು. ಅಷ್ಟರಲ್ಲೂ ಟಿವಿಯವರು ಅವರ ಕಷ್ಟಗಳನ್ನೂ ಲೆಕ್ಕಿಸದೆ ಅವರ ಮೂತಿಯ ಮುಂದೆ ಮೈಕ್ ಹಿಡಿದು ‘ಇದಕ್ಕೆ ಮೋದಿಯೇ ಕಾರಣವೆ? ನಿಮ್ಮ ಅಭಿಪ್ರಾಯವೇನು?’ ಎಂದು ಕೇಳುತ್ತಿರುತ್ತಾರೆ. ಅವರಿಗೂ ಒಂದು ಹಾಡಿನ ಸಾಲಿದೆ.’

‘ಯಾವುದು?’

‘ಎಲ್ಲ ಹಳ್ಳಕೊಳ್ಳಗಳೂ ತುಂಬಿ, ಇಡೀ ಬಡಾವಣೆಯೇ ಸಮುದ್ರದಂತಿರುವಾಗ ಬಂದ ವರದಿಕೋರರಿಗೆ ಪುರಂದರದಾಸರ ಕೀರ್ತನೆಯ ಮೊದಲ ಸಾಲೇ ಸೂಕ್ತ; ‘ಏಳೇಳು ಶರಧಿಯು ಏಕವಾಗಿದೆ ಕಂಡ್ಯಾ; ಹೇಗೆ ಬಂದೆಯೋ ಹೇಳೋ ಕೋತಿ!’

‘ಈಗಿನ ಮಂದಿಗೆ ಯಾವುದಕ್ಕೂ ಸಮಯವಿಲ್ಲ. ಅದಕ್ಕೂ ಹಿಂದಿನ ಕವಿಯ ಯಾವುದಾದರೂ ಸಾಲು ಇದೆಯೇನು?’

‘ದಾಸರ ಪದವೇ ಇದೆ. ಕೊಂಚವೇ ಬದಲಾವಣೆ; Hurry ಸ್ಮರಣೆ ಮಾಡೋ ನಿರಂತರ...!’



‘ಇಂದಿನ ಮೊಬೈಲ್ ಗೀಳು ಮತ್ತು ಮುಂದಿನ ಪೀಳಿಗೆಯ ಮೇಲೆ ಅದರ ಪರಿಣಾಮವನ್ನು ಕುರಿತು ಯಾವುದಾದರೂ...’ ಎನ್ನುತ್ತಿದ್ದಂತೆಯೇ ಸೀನುವು ಮಧ್ಯೆ ತಲೆಹಾಕಿ ‘ಗೀಳಿನ ಬಗ್ಗೆ ‘ಪ್ರೇಮದ ಕಾಣಿಕೆ’ ಚಿತ್ರದ ‘ನಾ ಬಿಡಲಾರೆ ಎಂದೂ ನಿನ್ನ. ನೀನಾದೆ ನನ್ನೀ ಪ್ರಾಣ. ದೂರಾಗಿ ಹೋದರೆ ನೀನು ನಾನೆಂದೂ ಬಾಳೆನು.’ ಗೀಳಿನ ಬಗ್ಗೆ ಅರಿವು ಮೂಡಿಸುವ ಹಾಡನ್ನು ಬರೆದಿರುವ ಕವಿ ಶೈಲೇಂದ್ರ. ಚಿತ್ರ ಬೂಟ್ ಪಾಲಿಷ್. ಹಾಡಿನ ಎರಡು ಸಾಲುಗಳು ಇಡೀ ಚಿತ್ರಣವನ್ನು ಕಟ್ಟಿಕೊಡುತ್ತವೆ’ ಎಂದ. 

‘ಯಾವ ಸಾಲುಗಳು?’

‘ನನ್ಹೆ ಮುನ್ನೆ ಬಚ್ಚೆ ತೇರಿ ಮುಟ್ಠೀ ಮೇ ಕ್ಯಾಹೈ?’ ಎಂಬುದು ಪ್ರಶ್ನಸಾಲು. ಅದಕ್ಕೆ ಉತ್ತರವೇ ಇಂದಿನ ಪೀಳಿಗೆಯವರು ತಿಳಿಯಬೇಕಾದ ಸಾಲು: ‘ಮುಟ್ಠೀ ಮೆ ಹೈ ತಕದೀರ್ ಹಮಾರೀ!’

‘ನಿನ್ನನ್ನು ವರ್ಣಿಸುವ ಹಾಡೂ ಇದೆಯೇನೋ?’ ಎಂದೆ. 

‘ಸಬ್ ಕುಚ್ ಸೀಖಾ ಹಮನೇ ನಾ ಸೀಖೀ ಹೋಷಿಯಾರಿ; ಸಚ್ ಹೈ ದುನಿಯಾವಾಲೋ ಕೇ ಹಮ್ ಹೈ ಅನಾಡೀ’ ಎಂದು ಹಾಡುತ್ತಾ ಸೀನು ಹೊರನಡೆದ. 


Comments

  1. Using old songs & relating to recent trends is amazing work.one of your best articles with less humor but excellent comparison.

    ReplyDelete

Post a Comment